ಚೀನಾ ರೇಷ್ಮೆ ಎಂಬ ಭೂತ ನಮ್ಮ ರೇಷ್ಮೆ ಬೆಳೆಗಾರರನ್ನು ಕಾಡಲು ಆರಂಭವಾಗಿ ಒಂದೂವರೆ ದಶಕ ಕಾಲವೇ ಆಗಿದೆ. ಆಗಿನಿಂದ ಈ ತನಕ ಈ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.

ಆ ರೇಷ್ಮೆ ಗುಣಮಟ್ಟದಲ್ಲಿ ಅತ್ಯುತ್ತಮ. ದೇಶೀಯ ರೇಷ್ಮೆ ಏನಿದ್ದರೂ ಒರಟು ಬಟ್ಟೆಗೆ ಬೇಕಾಗುವ ಕಾಂಚಿಪುರ, ಧರ್ಮಾವರ ಮುಂತಾದ ನಮೂನೆಯ ಸೀರೆಗಳಿಗೆ ಲಾಯಕ್ಕು. ನವಿರು ಜವಳಿಗೆ ಚೀನಾ ರೇಷ್ಮೆಯೇ ಬೇಕು. ಹತ್ತಿ ಅಥವಾ ಕೃತಕ ನೂಲಿನ ರೀಲುಗಳನ್ನು ಬಳಸಿದಷ್ಟೇ ಸುಲಭವಾಗಿ ಚೀನಾ ರೇಷ್ಮೆಯನ್ನು ನೇರವಾಗಿ ಬಳಸಬಹುದು. ನೂಲಿನ ಉದ್ದಕ್ಕೂ ಒಂದೇ ದಪ್ಪದ, ಅಲ್ಲಲ್ಲಿ ಯಾವುದೇ ಗಂಟಿಲ್ಲದ, ಮುಟ್ಟಿದರೆ ಬೆಣ್ಣೆಯಷ್ಟು ನವಿರಾದ ನೂಲು ಚೀನಾ ಮೂಲದ್ದು. ಆದ್ದರಿಂದಲೇ ಅದಕ್ಕೆ ಬೇಡಿಕೆ. ಚೀನಾ ರೇಷ್ಮೆ ಅಧಿಕೃತವಾಗಿ ಆಮದಾಗುತ್ತದೆ. ಜೊತೆಗೆ ಕಳ್ಳಸಾಗಣೆ ಮೂಲಕ ಸಹಾ ಧಂಡಿಯಾಗಿ ಬರುತ್ತದೆ. ಎರಡೂ ಮಾರ್ಗದಿಂದ ಬರುವುದನ್ನು ತಡೆಯಲು ಸಾಧ್ಯವೇ ಆಗುತ್ತಿಲ್ಲ.

ವಿಶ್ವ ಗುಣಮಟ್ಟದ ಅನ್ವಯ ‘ಎ’ ಅಥವಾ ‘ಬಿ’ ವರ್ಗದ ನೂಲು ಚೀನಾದಿಂದ ಬರುವುದು. ಭಾರತದ ರೇಷ್ಮೆ ಕಳಪೆ ಎಂದರೆ ‘ಇ’ ವರ್ಗಕ್ಕೆ ಸೇರಿದ್ದು. ಎಷ್ಟೋ ಸರಕುಗಳ ತರಹ ರೇಷ್ಮೆಗೂ ಭಾರತವೇ ಒಳ್ಳೆಯ ಮಾರುಕಟ್ಟೆ. ಅದನ್ನು ಅರಿತೇ ಚೀನಾ ತನ್ನ ಸರಕು ತಂದು ಇಲ್ಲಿ ಸುರಿಯುತ್ತಿದೆ. ಜಪಾನು ರೇಷ್ಮೆ ತಯಾರಿಕೆಯನ್ನು ಕೈ ಬಿಟ್ಟು ಯಾವುದೋ ಕಾಲವಾಯಿತು. ರೇಷ್ಮೆ ಕೃಷಿಗೆ ಮತ್ತು ನಂತರದ ಕೈಗಾರಿಕೆಗೆ ಜಮೀನು ಮತ್ತು ಸ್ಥಳಾವಕಾಶ ಬಹಳ ಬೇಕಾಗುತ್ತದೆ. ಅದು ಜಪಾನಿನಲ್ಲಿ ಲಭ್ಯವಿಲ್ಲ. ರೇಷ್ಮೆ ಉದ್ಯಮವು ಉದ್ಯೋಗಗಳಿಗೆ ಕೈತುಂಬಾ ಕೆಲಸ ಕಲ್ಪಿಸುತ್ತದೆ. ಜಪಾನಿನಲ್ಲಿ ಹೆಚ್ಚು ಲಾಭಕಾರಿ ಉದ್ಯೋಗಗಳು ಲಭ್ಯವಿರುವುದರಿಂದ ರೇಷ್ಮೆ ವಿಷಯದಲ್ಲಿ ಆಕರ್ಷಣೆ ಉಳಿದಿಲ್ಲ. ಈ ಹಿನ್ನೆಲೆಯಲ್ಲಿ ಭಾರತಕ್ಕೆ ತಂತ್ರಜ್ಞಾನ ರವಾನೆ ಮಾಡಲು ಜಪಾನು ಉತ್ಸಾಹ ತೋರಿತ್ತು. ಅದನ್ನು ಬಳಸಿಕೊಳ್ಳುವತ್ತ ನಾವು ಮುಂದಾಗಲಿಲ್ಲ. ಹಿಂದೆಯೇ ಉಳಿದೆವು. ಆದರೆ ಚೀನಾ ಮೇಲುಗೈ ಸಾಧಿಸಿತು. ಭಾರತದ ಮಟ್ಟಿಗೆ ‘ಸುರಿ ನೀತಿ’ ಅನುಸರಿಸಿತು. ಏಟು ಬಿದ್ದಿದ್ದು ಮಾತ್ರ ಮುಖ್ಯವಾಗಿ ಕರ್ನಾಟಕದ ಮೇಲೆ. ಏಕೆಂದರೆ ಅತಿ ಹೆಚ್ಚು ರೇಷ್ಮೆ ಉತ್ಪಾದಿಸುವ ರಾಜ್ಯವೆಂದರೆ ಕರ್ನಾಟಕವೇ.

ಸುಮಾರು ಎರಡು ದಶಕದಿಂದ ಚೀನಾ ರೇಷ್ಮೆ ಬಂದು ಬೀಳುತ್ತಿದೆ. ಕೇಂದ್ರ ಜವಳಿ ಖಾತೆ ಸಚಿವ ಖಾತೆಯು ಮುಖ್ಯವಾಗಿ ಮುಂಬೈ ಮೂಲದ ಜವಳಿ ಉದ್ಯಮಿಗಳ ಪ್ರಭಾವದ ಮುಷ್ಟಿಗೆ ಸಿಲುಕಿದ್ದು, ಕರ್ನಾಟಕದ ಅಹವಾಲು ದೆಹಲಿ ತನಕ ಮುಟ್ಟುವುದೇ ಇಲ್ಲ. ಹತ್ತಿ ಮತ್ತು ಕೃತಕ ನೂಲಿನ ಜವಳಿಯ ಬೃಹತ್ ಉತ್ಪಾದನಾ ಕೇಂದ್ರಗಳಲ್ಲಿ ತಯಾರಿಕಾ ಸಾಮರ್ಥ್ಯ ಪೂರ್ಣವಾಗಿ ಬಳಕೆಯಾಗುತ್ತಿಲ್ಲ. ಅಂಥ ಕಡೆ ನೇಕಾರರಿಗೆ ಮತ್ತಿತರರಿಗೆ ಚೀನಾ ರೇಷ್ಮೆ ಬಹಳ ಪರಮಾಯಿಷಿ. ಆದ್ದರಿಂದ ಪ್ರಭಾವಶಾಲಿ ಲಾಭಿಯು ಚೀನಾ ರೇಷ್ಮೆ ಸದಾ ಸಿಗುತ್ತಿರುವಂತೆ ನೋಡಿಕೊಳ್ಳುತ್ತದೆ. ಕರ್ನಾಟಕ ಮೂಲದಿಂದ ಏನೇ ಪ್ರತಿಭಟನೆ ಬಂದರೂ ಲೆಕ್ಕಿಸುವವರಿಲ್ಲ.

ಕರ್ನಾಟಕದಲ್ಲಿ ರೇಷ್ಮೆಯನ್ನು ಬಳಸುವ ಬಹಳ ದೊಡ್ಡ ಗಿರಣಿಗಳೇನಿಲ್ಲ. ಅವೆಲ್ಲ ಹೊರಗಡೆಯೇ ಇವೆ. ಅವೆಲ್ಲ ಅತ್ಯಾಧುನಿಕ ಜವಳಿಯನ್ನು ತಯಾರಿಸುವಂಥವು. ಚೀನಾ ರೇಷ್ಮೆಯೇ ಅವರ ಪಾಳಿಗೆ ಸುಲಭ ಹಾಗೂ ಅಗ್ಗ. ದೇಶಿ ರೇಷ್ಮೆ ದುಬಾರಿ ಹಾಗೂ ಅಧಿಕ ಬಳಕೆಯ ಜವಳಿಗೆ ತಕ್ಕುದಲ್ಲ. ಬೇಡಿಕೆ ಚೆನ್ನಾಗಿದ್ದಾಗ ದೇಶಿ ರೇಷ್ಮೆ ಹಾಗೂ ಪರದೇಶಿ ರೇಷ್ಮೆ ಎರಡೂ ಸೇರಿ ಒಟ್ಟಾರೆ ಅಗತ್ಯ ಪೂರೈಸಿದ್ದುವು. ಆರ್ಥಿಕ ಹಿಂಜರಿತ ಕಾಡತೊಡಗಿ ಬಳಕೆದಾರ ರೇಷ್ಮೆ ಬಗೆಗೆ ಮಮತೆ ಕಡಿಮೆ ಮಾಡಿಕೊಂಡಾಗ ನಿಜವಾದ ಬಿಕ್ಕಟ್ಟು ತಲೆದೋರಿತು. ಕರ್ನಾಟಕ, ಆಂಧ್ರ, ತಮಿಳುನಾಡು ಮುಂತಾದೆಡೆ ಉತ್ಪಾದನೆ ಆಗುವ ಮಲ್‌ಬೆರಿ (ಹಿಪ್ಪನೇರಳೆ) ರೇಷ್ಮೆಯ ಬೆಲೆ ಪುನಃ ಕುದುರುವ ಸೂಚನೆಗಳೇ ಕಾಣುತ್ತಿಲ್ಲ. ಆದ್ದರಿಂದಲೇ ಬೆಳೆಗಾರರು ಜಮೀನಿನಿಂದ ಹಿಪ್ಪುನೇರಳೆ ಗಿಡಗಳನ್ನು ಬುಡ ಸಹಿತ ಕಿತ್ತು ಹಾಕಿ ಬೇರೆ ಬೆಳೆ ಇಡಲು ಅಣಿಯಾಗುತ್ತಿದ್ದಾರೆ.

ಕರ್ನಾಟಕದಲ್ಲಿ ಹೀಗೇಕೆ ಆಯಿತು? ಟಿಪ್ಪುಸುಲ್ತಾನನ ಕಾಲದಿಂದ ರೇಷ್ಮೆ ಕೃಷಿಗೆ ಹೆಸರಾದ ಭೂಭಾಗದಲ್ಲಿ ಇಂಥ ದುರ್ಗತಿಯೇ? ನಿಜ. ರೇಷ್ಮೆ ಕೃಷಿ ಮತ್ತು ರೇಷ್ಮೆ ಉದ್ಯಮಗಳಲ್ಲಿ ನಿರತರಾದವರಿಗೆ ಸರಕಾರಗಳ ಕಡೆಯಿಂದ ಯಾವ ಬಗೆಯ ಒತ್ತಾಸೆಯೂ ಲಭ್ಯವಿಲ್ಲ. ಬೆಂಗಳೂರು ಮತ್ತು ಮೈಸೂರು ನಡುವೆಯೇ ಕೃಷಿಯು ಹೆಚ್ಚು ದಟ್ಟವಾಗಿ ಅಭಿವೃದ್ಶಿಗೊಂಡಿದ್ದರಿಂದ ರಾಮನಗರದಲ್ಲಿ ರೇಷ್ಮೆ ಗೂಡು ಮಾರುಕಟ್ಟೆ ಅಭಿವೃದ್ಧಿಗೊಂಡಿತು. ಇವತ್ತಿಗೂ ವಿಶ್ವದ ಅತಿದೊಡ್ಡ ಗೂಡು ಮಾರುಕಟ್ಟೆ ಇದು. ಇಲ್ಲಿನ ಹಾಗೂ ಮಿಕ್ಕ ಅರ್ಧ ಡಜನ್‌ ಕೇಂದ್ರಗಳ ಗೂಡು ಮಾರುಕಟ್ಟೆಗಳನ್ನು ಸುವ್ಯವಸ್ಥಿತ ನಿಯಂತ್ರಣಕ್ಕೆ ಒಳಪಡಿಸಲಾಗಿದೆ. ಬೆಂಗಳೂರಿನ ಕಚ್ಚಾರೇಷ್ಮೆ ನಿಯಂತ್ರಿತ ಮಾರುಕಟ್ಟೆಯಾದ ಸಿಲ್ಕ್‌ಎಕ್ಸ್‌ಚೆಂಜ್‌ಈಗ ಪ್ರಭಾವಕಾರಿ ಆಗಿ ಉಳಿದಿಲ್ಲ. ತಾಂತ್ರಿಕವಾಗಿ ಇದು ಸಹ ಸುವ್ಯವಸ್ಥೆಗೆ ಹೆಸರಾದುದು. ಕಾನೂನು ಬೆಂಬಲದೊಂದಿಗೆ ಹೀಗೆ ಮಾರಾಟ ವ್ಯವಸ್ಥೆಯನ್ನು ರಾಜ್ಯ ಸರಕಾರ ತನ್ನ ಮುಷ್ಠಿಯಲ್ಲಿ ಇರಿಸಿಕೊಂಡಿದೆ.

ವಿಶ್ವ ಬ್ಯಾಂಕ್ ನೆರವಿನ ಕಾರಣ ರಾಜ್ಯಾದ್ಯಂತ ರೇಷ್ಮೆ ಹುಳುಗಳಿಂದ ಮೊಟ್ಟೆ ಇರಿಸಿ ಸಂರಕ್ಷಿಸಿ ಇಡುವ, ಆ ಮೂಲಕ ರೈತನಿಗೆ ಆರೋಗ್ಯಕರ ತಳಿಗಳ ಹುಳು ಸಾಕಲು ನೆರವಾಗುವ ಸಾಲು ಸಾಲು ಗ್ರೈನೇಜುಗಳು ನಿರ್ಮಾಣವಾದವು. ಖಾಸಗಿಯವರ ಹಾವಳಿ ತಪ್ಪಿಸುವಲ್ಲಿ ಇವು ಆರಂಭದಲ್ಲಿ ನೆರವಾದವು. ಜಾಗತೀಕರಣ ಮತ್ತು ಜಾಗತೀಕರಣಕ್ಕೆ ಒತ್ತಾಸೆ ಎಂಬುದೆಲ್ಲ ವಿಜೃಂಭಿಸತೊಡಗಿದ ಮೇಲೆ ಇತ್ತೀಚಿನ ವರ್ಷಗಳಲ್ಲಿ ಈ ಗ್ರೈನೇಜುಗಳ ಉಪಯುಕ್ತತೆ ಕಡಿಮೆ ಆಗಿದೆ. ಅವುಗಳ ಮೇಲೆ ತೊಡಗಿಸಿದ ಹಣ ಮತ್ತು ಶ್ರಮ ನಿರುಪಯುಕ್ತ ಆಗತೊಡಗಿದೆ.

ದುಃಖದ ಸಂಗತಿ ಎಂದರೆ ಸರಕಾರದ ಕಡೆಯಿಂದ ಅಭಿವೃದ್ಧಿ ಕಾರ್ಯಗಳೆಲ್ಲ ಕಚ್ಚಾ ರೇಷ್ಮೆ ಉತ್ಪಾದನೆ ಮಟ್ಟಕ್ಕೆ ನಿಂತುಹೋಗಿವೆ. ರೇಷ್ಮೆ ಕೃಷಿಕನಿಗೆ ವಿಸ್ತರಣಾ ಕಾರ್ಯದ ಒತ್ತಾಸೆ; ರೀಲರುಗಳಿಗೆ ಅಂದರೆ ರೈತನು ಹಿಪ್ಪುನೇರಳೆ ತಿನ್ನಿಸಿ ಬೆಳೆದ ಹುಳುಗಳು ಉಗುಳಿದ ಲೋಳೆಯಿಂದ ರೂಪುಗೊಂಡ ರೇಷ್ಮೆ ಗೂಡುಗಳಿಂದ ನೂಲನ್ನು ಬಿಚ್ಚುವವರಿಗೆ; ಮಾರುಕಟ್ಟೆ ಸೌಲಭ್ಯ ಬಿಟ್ಟರೆ ಬೇರೇನೂ ಉಪಯೋಗವಾಗಿಲ್ಲ. ಈಗ ಮಾರುಕಟ್ಟೆಗಳಾಗಲಿ, ಕಾನೂನು ಜಾರಿ ವಿಭಾಗಗಳಾಗಲಿ ಯಾವುದೇ ಬಿಗಿ ನಿಯಂತ್ರಣದಲ್ಲಿ ಇಲ್ಲ. ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಮಾತ್ರ ಫಲವತ್ತಾದ ಕ್ಷೇತ್ರಗಳಾಗಿ ಪರಿಣಮಿಸಿದೆ.

ನೇಕಾರನಿಗಾಗಲಿ, ರಂಗು ಹಾಕುವವನಿಗಾಗಲಿ, ಅದಕ್ಕೆ ಮುನ್ನ ಕಚ್ಚಾ ರೇಷ್ಮೆಯ ನೂಲಿನಿಂದ ಹುರಿ ತಯಾರಿಸುವವರಿಗಾಗಲಿ, ಅಂತಿಮ ಉತ್ಪನ್ನವಾದ ಜವಳಿಯನ್ನು ಖರೀದಿಸಿ ಸಂಗ್ರಹಿಸಿಟ್ಟು ಮಾರುವವನಿಗಾಗಲೀ ಸರಕಾರ ಏನನ್ನೂ ಮಾಡಲಿಲ್ಲ. ಅಧಿಕಾರಿಗಳನ್ನು ಹದ್ದುಬಸ್ತಿನಲ್ಲಿ ಇಟ್ಟು ಸಂಕೀರ್ಣವೆನಿಸಿದ ರೇಷ್ಮೆ ರಂಗದ ವಿವಿಧ ಹಂತದ ಕಾರ್ಯಾಚರಣೆಗಳನ್ನು ಹುರುಪಿನಿಂದ ಮುಂದೆ ನಡೆಸುವ ರಾಜಕೀಯ ಮುಖಂಡತ್ವ ನಶಿಸಿ ಹೋಗಿದೆ. ಹೀಗಿರುವಾಗ ರೈತನಾದವನು ಹೊಲದಿಂದ ಹಿಪ್ಪುನೇರಳೆ ಗಿಡಗಳನ್ನು ಬುಡ ಸಮೇತ ಕಿತ್ತುಹಾಕದೆ ಏನು ಮಾಡಿಯಾನು?

ಎಪ್ಪತ್ತರ ದಶಕಗಳಿಂದ ಈಚೆಗೆ ರೇಷ್ಮೆ ರಂಗ ಕರ್ನಾಟಕದಲ್ಲಿ ಏನು ದಾಪುಗಾಲು ಇಟ್ಟಿತೋ ಅದಕ್ಕೆ ಕಾರಣೀಭೂತರಾದ ಒಬ್ಬ ಐಪಿಎಸ್ ಅಧಿಕಾರಿ ಇದ್ದರು. ಅವರು ವಿ. ಬಾಲಸುಬ್ರಮಣಿಯನ್ (ನಾವೆಲ್ಲ ‘ಬಾಲು’ ಎಂದೇ ಅವರನ್ನು ಕರೆಯುವುದು). ಅವರ ಹೆರಸೇ ರೈತ ಸಮುದಾಯದಲ್ಲಿ ಸಂಚಲನ ಉಂಟುಮಾಡುತ್ತಿತ್ತು. ರೇಷ್ಮೆ ಇಲಾಖೆ ಕಮೀಷನರ್‌ ಆಗಿ ವಿಶ್ವ ಬ್ಯಾಂಕ್‌ಯೋಜನೆ ಜಾರಿ ಮತ್ತು ಸಿಲ್ಕ್‌ ಎಕ್ಸ್‌ಚೆಂಜ್‌ ಸ್ಥಾಪನೆಗೆ ಇವರ ಶ್ರಮವೇ ಕಾರಣ. ಆಗೆಲ್ಲ ಅಧಿಕಾರಿ ಮಟ್ಟದ ಭ್ರಷ್ಟಾಚಾರ ವಿಜೃಂಭಿಸಲಿಲ್ಲ. ಅಭಿವೃದ್ಧಿ ಕಾರ್ಯ ಎನ್ನುವುದು ಚೊಕ್ಕವಾಗಿ ನಡೆದಿತ್ತು. ಮುಂದೆ ಅವರು ಕೆಲಕಾಲ ಕೇಂದ್ರ ರೇಷ್ಮೆ ಮಂಡಲಿ ಸದಸ್ಯ ಕಾರ್ಯದರ್ಶಿ ಸಹಾ ಆಗಿದ್ದರು. ಮಡಿವಾಳ ರಸ್ತೆ ಬೃಹತ್ ಕಟ್ಟಡವು ಕೇಂದ್ರದಿಂದ ಇವರು ಕಿತ್ತುತಂದ ಹಣದ ಕೊಡುಗೆ. ಸ್ವಲ್ಪ ಸಮಯ ಇವರು ಕೇಂದ್ರ ಸರಕಾರದ ಜವಳಿ ಖಾತೆಯ ವರಿಷ್ಠ ಅಧಿಕಾರಿ ಸಹಾ ಆಗಿದ್ದರು. ರಾಜ್ಯದ ರೇಷ್ಮೆ ರಂಗದ ಆಗಿನ ಎಲ್ಲ ಪ್ರಗತಿಗೆ ಇವರು ಬುನಾದಿ ಹಾಕಿದವರು. ಬಾಂಗ್ಲಾ ದೇಶಕ್ಕೂ ಇವರು ಒಂದು ರೇಷ್ಮೆ ಯೋಜನೆ ರೂಪಿಸಿಕೊಟ್ಟಿದ್ದರು.

ಎಡಪಂಥೀಯ ಧೋರಣೆಯ ಈ ಅಧಿಕಾರಿ ಒಂದು ಮಾತು ಹೇಳುತ್ತಿದ್ದುದುಂಟು. ರೇಷ್ಮೆ ಚಟುವಟಿಕೆ ಅಚ್ಚುಕಟ್ಟಾಗಿ ನಡೆದಂತೆಲ್ಲ ಸಂಪತ್ತು ಮೇಲ್ವರ್ಗದ ಬಳಕೆದಾರರಿಂದ ಆರ್ಥಿಕವಾಗಿ ಕೆಳವರ್ಗದವರೆನಿಸಿದ ರೈತರು, ನೇಕಾರರು ಮುಂತಾದವರ ಕಡೆಗೆ ಹರಿಯುತ್ತದೆ. ಈ ಅದ್ಭುತ ವಿಚಾರದೊಡನೆ ಕೆಲಸ ಮಾಡಿದ ಅವರಂಥ ಅಧಿಕಾರಿಗಳು ಈಗ ಸಿಕ್ಕಾರೆಯೇ? ಬಹುಶಃ ಇಲ್ಲ.

ಇಂಥ ಪರಿಸ್ಥಿತಿಯಲ್ಲಿ ಚೀನಾ ರೇಷ್ಮೆಯನ್ನು ದೂರಿ ಪ್ರಯೋಜನವೇನು? ರೈತ ಪ್ರತಿನಿಧಿಗಳು ಕಾನೂನು ಜಾರಿ ಬಿಗಿ ಮಾಡಬೇಕೆಂದು ಒತ್ತಡ ತರುತ್ತಾರೆ. ಅದು ಬರಿದೆ ಬರಡು ಹಸುವಿನ ಕೆಚ್ಚಲು ಹಿಗ್ಗುವ ಕೆಲಸ ಮಾತ್ರ. ಬಹುಶಃ ಈ ಬೇಡಿಕೆಗೆ ಅಧಿಕಾರಿಗಳ ಪ್ರಚೋದನೆಯೇ ಇರಲಿಕ್ಕೆ ಕಾರಣ. ಕಾನೂನು ಜಾರಿಯಿಂದ ಸಧ್ಯ ಇನ್ನೇನು ಅಲ್ಲವಾದರೂ ಅವರ ಜೇಬು ತುಂಬುತ್ತದೆ.

೧೨-೬-೨೦೦೨