ರೇಷ್ಮೇಯ ಗುಣ, ನುಣುಪು, ನವಿರು. ಅದರ ಎಲ್ಲ ವ್ಯವಹಾರಗಳೂ ಹಾಗೆಯೇ. ಈಗ ರೇಷ್ಮೇ ರಂಗದ ಎಲ್ಲ ವರ್ಗಗಳ ಜನರ ತುಮುಲ ಏನಿದೆಯೋ, ಅದು ತಪ್ಪುವ ಲಕ್ಷಣಗಳೇ ಕಾಣುತ್ತಿಲ್ಲ. ಭಾರತದಲ್ಲಿ ರೇಷ್ಮೇ ರಾಜ್ಯವಾದ ಕರ್ನಾಟಕದಲ್ಲಿ, ಇನ್ನು ಮುಂದೆ ರೇಷ್ಮೆ ಕೃಷಿಗೆ ಹಾಗೂ ಉದ್ಯಮಕ್ಕೆ ಭವಿಷ್ಯವೇ ಇಲ್ಲವೇನೋ ಎಂಬ ಅನುಮಾನ ಬಂದಿದೆ.

ರೇಷ್ಮೆ ವಿಷಯ ಬಂದಾಗ ವಿಶ್ವದಲ್ಲಿ ಚೀನಾಕ್ಕೆ ಅಗ್ರಮಾನ್ಯತೆ. ಜಪಾನ್ ಸಹಾ ಅತ್ಯುತ್ತಮ ರೇಷ್ಮೆಯನ್ನು ತಯಾರು ಮಾಡುತ್ತಿತ್ತು. ರೇಷ್ಮೆ ಕೃಷಿ ಹಾಗೂ ಉದ್ಯಮ ನಡೆಯುವ ದೇಶದಲ್ಲಿ ಜನಕ್ಕೆ ಉದ್ಯೋಗಾವಕಾಶ ವಿಫುಲವಾಗಿರುತ್ತದೆ. ಅದೇ ಅದರ ಸೊಗಸು. ಜೊತೆಗೆ ಈ ಕೃಷಿ ಉದ್ಯಮ ಬಹಳವಾಗಿ ಜಾಗ ಬೇಡುತ್ತದೆ. ಜಪಾನಿಗೆ ಕಷ್ಟವಾಗಿದ್ದು ಈ ಬಾಬಿನಲ್ಲೆ. ಜಪಾನಿಯರಿಗೆ ಇತರ ಉದ್ಯಮಗಳಲ್ಲಿ ಆಸಕ್ತಿ ಬಹಳವಾಯಿತು. ಈ ಕಾರಣಗಳಿಂದ ರೇಷ್ಮೆ ಉತ್ಪಾದನೆಯನ್ನು ಕೈಬಿಡತೊಡಗಿದರು. ಆ ವೇಳೆ ಜಪಾನೀಯರು ತಮ್ಮ ರೇಷ್ಮೆ ಕೌಶಲ ಏನಿದೆಯೊ ಅದನ್ನೆಲ್ಲ ಭಾರತೀಯರಿಗೆ ಧಾರೆ ಎರೆಯಲು ಮುಂದಾದರು. ನೆರವಾದರು ಕೂಡಾ. ಆಗಲೇ ೮೦ರ ದಶಕದಲ್ಲಿ ಭಾರತ ವಿಶ್ವಬ್ಯಾಂಕ ನೆರವನ್ನು ಸಹಾ ಪಡೆದು ರೇಷ್ಮೆ ರಂಗವನ್ನು ಬೆಳೆಸಲು ಮುಂದಾಯಿತು. ಅದೇ ಕರ್ನಾಟಕದ ಪಾಲಿಗೂ ಉಚ್ಛ್ರಾಯ ಕಾಲ. ಏಕೆಂದರೆ ಬಂಗಾಳ, ಈಶಾನ್ಯ ರಾಜ್ಯಗಳು ಮುಂತಾದ ಕಡೆ ರೇಷ್ಮೆ ಕೃಷಿ ಚೆನ್ನಾಗಿ ಬೆಳೆದಿದ್ದರೂ ಹಿಪ್ಪನೇರಳೆ (ಮಲ್ಬೆರಿ) ರೇಷ್ಮೆಯನ್ನು ಅತಿ ಹೆಚ್ಚು ಉತ್ಪಾದಿಸುತ್ತಿದ್ದುದು ಕರ್ನಾಟಕವೇ. ಈಗಲೂ ಇತರ ರಾಜ್ಯಗಳು ಸಹಾ ಮುಂದುವರೆದಿದ್ದರೂ, ಕರ್ನಾಟಕಕ್ಕೆ ಅಗ್ರಪಂಕ್ತಿ. ಉದ್ಯಮಕ್ಕೆ ಹಿನ್ನಡೆ ಆಗತೊಡಗಿದಂತೆ ಭಾರೀ ಪೆಟ್ಟು ಬಿದ್ದಿದ್ದು ಸಹಾ ಕರ್ನಾಟಕಕ್ಕೆ ಸರಿ. ವಿ. ಬಾಲಸುಬ್ರಮಣಿಯನ್ನಂಥ ಮೇಧಾವಿ ಐಎಎಸ್ ಅಧಿಕಾರಿಯು ತನ್ನ ಜೀವನಾದರ್ಶ ಎನ್ನುವಂತೆ ಕರ್ನಾಟಕದ ಸ್ತರದಲ್ಲಿ ಹಾಗೂ ಕೇಂದ್ರ ರೇಷ್ಮೆ ಮಂಡಳಿ ಕಾರ್ಯದರ್ಶಿಯಾಗಿ ರಾಷ್ಟ್ರೀಯ ಸ್ತರದಲ್ಲಿ ರೇಷ್ಮೆ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತರು. ಮುಂದೆ ಬಾಂಗ್ಲಾ ದೇಶಕ್ಕೂ ನೆರವಾಗಿದ್ದು ಬೇರೆ ಮಾತು. ಆತ ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲಿ ವಿಶ್ವಬ್ಯಾಂಕ್ ಸಾಲ ಪಡೆದ ಯೋಜನೆ ಜಾರಿಯಾಯಿತು. ಆಗಲೇ ರೇಷ್ಮೆ ವಿಷಯದಲ್ಲಿ ಕರ್ನಾಟಕ ಉತ್ತುಂಗ ಸ್ಥಾನಕ್ಕೇರಿದ್ದು.

ಆದರೆ ಮುಂದೆ ಸುಮಾರು ೧೫ ವರ್ಷ ಕಳೆದಂತೆ ೧೯೯೦ರ ದಶಕದ ಮಧ್ಯಭಾಗದಲ್ಲಿ ಅದರ ಅವನತಿ ಸಹಾ ಪ್ರಾರಂಭವಾಯಿತು. ಅದಕ್ಕೆ ಖಾರಣಗಳು ಹಲವಾರು. ವಿಶ್ವಬ್ಯಾಂಕ್ ಯೋಜನೆಯಡಿ ರೇಷ್ಮೆ ಗ್ರೈನೇಜುಗಳ ನಿಲ್ದಾಣ ಬೃಹತ್ತಾಗಿ ನಡೆಯಿತು. ಖಾಸಗಿಯವರ ಕೈ ತಪ್ಪಿಸಿ ರೇಷ್ಮೆ ಮೊಟ್ಟೆ ಉತ್ಪಾದನೆಯನ್ನು, ಅಂದರೆ ರೇಷ್ಮೆಯ ಗೂಡಿನಿಂದ ಹೊರಬರುವ ಚಿಟ್ಟೆಯು ಮೊಟ್ಟೆ ಇಡುವ ಕಾರ್ಯ ಆರೋಗ್ಯಕರವಾಗಿ ಆಗುವಂತೆ ಮಾಡಲಾಯಿತು. ದುರಂತವೆಂದರೆ ಜಾಗತೀಕರಣ ಆರಂಭವಾಗಿ ಖಾಸಗಿಯವರಿಗೆ ಮನ್ನಣೆ ಆರಂಭವಾದಾಗ ಸರಕಾರಿ ಗ್ರೈನೇಜುಗಳಿಗೆ ಇದ್ದ ಪ್ರಾಶಸ್ತ್ಯ ತಪ್ಪಿತು.

ವಿಶ್ವಬ್ಯಾಂಕ್ ಯೋಜನೆಯ ಅತಿ ದೊಡ್ಡ ವೈಫಲ್ಯ ಎಂದರೆ ಬೈವೋಲ್ಟೈನ್ ರೇಷ್ಮೆ ಅಭಿವೃದ್ಧಿ ಸಾಧ್ಯವಾಗದೇ ಇದ್ದುದು. ಕರ್ನಾಟಕದ ಇನ್ನೊಬ್ಬ ಐಎಎಸ್ ಅಧಿಕಾರಿ ಎಸ್.ಆರ್‌. ವಿಜಯ್ ಅವರು ಬೈವೋಲ್ಟೈನ್ ವೈಫಲ್ಯ ಅಪಾಯಕಾರಿ ಎಂದು ಪದೇ ಪದೇ ಹೇಳುತ್ತಿದ್ದರು. ಬಿಳಿಗೂಡು ಉತ್ಪಾದನೆಗೆ ವಿಶ್ವ ಮನ್ನಣೆ ಇದ್ದರೂ, ಅಧಿಕ ಲಾಭ ತರುತ್ತಿದ್ದರೂ, ಬೆಳೆಗಾರರು ಅದರ ಉತ್ಪಾದನೆ ಕಷ್ಟ ಎಂದೇ ಭಾವಿಸಿ ಕೈ ಬಿಟ್ಟರು.

ವಿಶ್ವಬ್ಯಾಂಕ್ ನೆರವಿನ ಯೋಜನೆಯು ರೇಷ್ಮೆ ಗೂಡು ಉತ್ಪಾದನೆ ಮಟ್ಟಕ್ಕೆ ಮಾತ್ರ ನಿಂತು ಹೋಯಿತು. ಗೂಡಿನಿಂದ ನೂಲು ಬಿಚ್ಚುವ ರೀಲರುಗಳಿಗಾಗಲೀ, ನೂಲನ್ನು ಹುರಿ ಮಾಡುವ ಹುರಿಕಾರರಿಗಾಗಲಿ, ಹುರಿಗೆ ಬಣ್ಣ ಹಾಕುವವರಿಗಾಗಲೀ ಅನಂತರ ಅದನ್ನು ಜವಳಿಯನ್ನಾಗಿ ಮಾಡುವ ನೇಕಾರರಿಗಾಗಲೀ, ಬಟ್ಟೆಯ ಮೇಲೆ ಪ್ರಿಂಟ್ ಮಾಡಿ ನೀರೆ ತಯಾರಿಸುವವರಿಗಾಗಲೀ ಏನೊಂದು ಪ್ರಯೋಜನವಾಗಲಿಲ್ಲ. ರೇಷ್ಮೆರಂಗವೆಂದರೆ ಈ ಎಲ್ಲ ವರ್ಗಗಳ ನಡುವೆ ಸಾಮರಸ್ಯ ಸಾಧಿಸಬೇಕು. ಅದು ಸಾಧ್ಯವಾಗುವಂಥ ಪ್ರಗತಿಯನ್ನು ಕಾಣಲು ಅವಕಾಶವಾಗಲಿಲ್ಲ.

ಈಚಿನ ಬಿಕ್ಕಟ್ಟನ್ನೇ ತೆಗೆದುಕೊಂಡರೂ ಬೆಳೆಗಾರರು ಬೆಲೆ ಬಿದ್ದುಹೋಗಿ ಸತ್ತು ಸುಣ್ಣವಾದರು. ರೇಷ್ಮೆ ಹುಳುಗಳಿಗೆ ತಿನ್ನಿಸುವ ಹಿಪ್ಪ ನೇರಳೆ ಸೊಪ್ಪಿನ ಗಿಡಗಳನ್ನು ರೈತರು ಬುಡ ಸಮೇತ ಕಿತ್ತು ಹಾಕಿ ಅನ್ಯ ಕೃಷಿಗೆ ಸನ್ನದ್ಧರಾದರು. ಕೌಶಲ ತಮ್ಮ ಕೈಗಳಲ್ಲಿರುವ ಕಾರಣ ಹುಳ ಸಾಕಿ ಗೂಡು ತಯಾರಿಸುವುದು ತಮ್ಮ ಜೀವನದ ಒಂದು ಭಾಗ ಆಗಿರುವ ಕಾರಣ ಅವರು ರೇಷ್ಮೆ ಕೃಷಿಗೆ ಅನಿವಾರ್ಯವಾಗಿ ಅಂಟಿಕೊಂಡಿದ್ದಾರೆ. ಗೂಡನ್ನು ಕುದಿಯುವ ನೀರಲ್ಲಿ ಹಾಕಿ ಬೇಯಿಸಿ ನೂಲು ತೆಗೆಯುವವರು ಬಹುಪಾಲು ಮುಸ್ಲಿಂರು. ಕಚ್ಚಾ ನೂಲನ್ನು ಗೂಡಿನಿಂದ ತೆಗೆದ ಮೇಲೆ ರೇಷ್ಮೆಯ ಚಟುವಟಿಕೆ ಮತ್ತೇ ಹಿಂದುಗಳ ಕೈ ಸೇರುತ್ತದೆ. ರೀಲರುಗಳ, ಅಂದರೆ ಬಿಚ್ಚಣಿಕೆದಾರರ, ಹಂತದಲ್ಲಿ ರೇಷ್ಮೆ ಚಟುವಟಿಕೆಗೆ ಮಹತ್ವ ಬಹಳ. ಚಟುವಟಿಕೆಯ ಈ ಹಂತದಲ್ಲಿ ಮುಸ್ಲಿಂರು ಪ್ರಧಾನವಾಗಿರುತ್ತಾರೆ ಎಂಬುದು ಇದಕ್ಕೆ ಕಾರಣವಲ್ಲ. ನೂಲು ಬಿಚ್ಚುವುದು ನಿಂತು ಹೋದರೆ ಗೂಡಿನಲ್ಲಿ ನಿದ್ರಾವಸ್ತೆಯಲ್ಲಿರುವ ರೇಷ್ಮೆ ಹುಳುವಿನ ರೂಪ ಪರಿವರ್ತನೆ ಪೂರ್ಣಗೊಳ್ಳುತ್ತದೆ. ಹುಳುವು ಚಿಟ್ಟೆಯಾಗಿ ಬೆಳೆಯುತ್ತದೆ. ಗೂಡನ್ನು ಛೇದಿಸಿಕೊಂಡು ಹೊರಬರುತ್ತದೆ. ಗೂಡಿನ ಹೊರಪದರದ ಎರಡು ಕಿ.ಮೀ ಉದ್ದದ ರೇಷ್ಮೆ ತಂತು ತುಂಡರಿಸಿ ಹೋಗುತ್ತದೆ. ಗೂಡು ನಿಷ್ಕಲಗೊಲ್ಳುತ್ತದೆ. ಈ ಕಾರಣದಿಂದ ಗೂಡನ್ನು ರೈತರು ಮಾರಾಟಕ್ಕೆ ತಂದ ಕೂಡಲೇ ಚಿಟ್ಟು ಮೂಡುವ ಮೊದಲು ರೀಲರುಗಳ ನೂಲು ಬಿಚ್ಚಾಣಿಕೆ ಮುಗಿಯಬೇಕು. ಅದಕ್ಕೆ ಧಕ್ಕೆಯುಂಟಾದಾಗ ತುಮುಲ ತಾರಕಕ್ಕೆ ಏರುತ್ತದೆ.

ಇಡೀ ರೇಷ್ಮೆ ರಂಗವು ಬಿಕ್ಕಟ್ಟಿಗೆ ಗುರಿ ಆಗಿದ್ದು, ಚೀನಾ ಮೂಲದ ಅತ್ಯುತ್ತಮ ರೇಷ್ಮೆಯು ಭಾರತದೊಳಕ್ಕೆ ಟನ್‌ಗಟ್ಟಲೆ ಬಂದು ಬೀಳತೊಡಗಿದಾಗಲೇ ಸರಿ. ಚೀನಾದ್ದು ತಂದು ಸುರಿಯುವ ನೀತಿ. ಯಾವುದೇ ಕಡೆಯವರ ಸುರಿ ನೀತಿಯು ಸ್ಥಳೀಯ ಉದ್ಯಮದ ಮೇಲೆ ದುಷ್ಪರಿಣಾಮ ಬೀಳುತ್ತದೆ. ಭಾರತದಲ್ಲಿ ಆಗಿದ್ದು ಹಾಗೆಯೇ. ಗೂಡು ಉತ್ಪಾದನೆವರೆಗೆ ಮಾತ್ರ ಭಾರತದಲ್ಲಿ ಜಾರಿ ಆಗುತ್ತಿದ್ದ ರೇಷ್ಮೆ ಅಭಿವೃದ್ಧಿ ಯೋಜನೆ ವಿಫಲ ಆಗುತ್ತಿದೆ ಎನ್ನುವಾಗ ಸರಿಯಾಗಿ ಚೀನಾ ಮೂಲದ ರೇಷ್ಮೆ ನೂಲಿನ ದಾಳಿ ಮೊದಲಾಯಿತು. ಭಾರತದಲ್ಲೇ ನಡೆಯುವ ನೂಲು ಬಿಚ್ಚುವ ಕಾರ್ಯಕ್ಕೆ ತಂತ್ರಜ್ಞಾನದ ಯಾವ ನೆರವೂ ಸಿಗಲಿಲ್ಲ.

ರೀಲರುಗಳ ಹಳೆಯ ಪದ್ಧತಿಯಲ್ಲೇ ನವಿರು ಕಡಿಮೆ ಇರುವ ರೇಷ್ಮೆ ತಯಾರಿಸುತ್ತಾ ಮುಂದುವರೆದಿದ್ದಾರೆ. ಅತ್ಯುತ್ತಮವಾದ ರೇಷ್ಮೆ ಚೀನಾ ಮೂಲದಿಂದ ಬರತೊಡಗಿದಾಗ ಅದನ್ನು ಬಳಸುವಲ್ಲಿ ಆಸಕ್ತಿ ವಹಿಸಿದ ನೇಕಾರರು ಮತ್ತು ಜವಳಿ ವರ್ತಕರು ಸ್ವತಃ ಸೌಖ್ಯವನ್ನೇನೂ ಕಾಣಲಿಲ್ಲ. ಏಕೆಂದರೆ ವಿದೇಶಿ ರೇಷ್ಮೆಗಾಗಲಿ ಭಾರತ ಮೂಲದ ರೇಷ್ಮೆಗಾಗಲೀ ಮೂಂಚೆ ಇದ್ದ ಬೆಲೆ ಸಿಗದಂತಾಯಿತು. ಏಕೆಂದರೆ ಹಳೆಯ ನಮೂನೆಯ ಪೀತಾಂಬರಗಳು ಹೊಸ ನಮೂನೆಯ ಯುವ ಬಳಕೆದಾರರನ್ನು ಆಕರ್ಷಿಸುವಲ್ಲಿ ವಿಫಲವಾದವು. ಈ ಹಿನ್ನೆಲೆಯಲ್ಲಿ ಜನರ ಕಷ್ಟವನ್ನು ಅರ್ಥ ಮಾಡಿಕೊಳ್ಳುವಲ್ಲಿ ರಾಜ್ಯ ಸರಕಾರ ಹೇಗೋ ಹಾಗೆ ಕೇಂದ್ರ ಸರಕಾರ ಕೂಡಾ ವಿಫಲವಾಯಿತು. ಚೀನಾದ ಸುರಿ ನೀತಿಯ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳಲಿಲ್ಲ. ಚೀನಾ ರೇಷ್ಮೆ ಬಳಕೆಗೆ ಬರುವುದನ್ನು ತಡೆಯಲು ಅಥವಾ ಕಡಿಮೆ ಮಾಡಲು ಮುಂದಾಗಲಿಲ್ಲ. ಅದಕ್ಕೂ ಕಾರಣವಿಲ್ಲದೆ ಇಲ್ಲ. ಹಿಪ್ಪನೇರಳೆ ಬೆಳೆಯುವ ರೈತ, ಹುಳು, ಸಾಕಿ ಅವು ಗೂಡು ಕಟ್ಟುವಂತೆ ಮಾಡುವ ರೇಷ್ಮೆ ಕೃಷಿಕ, ನೂಲು ಬಿಚ್ಚುವ ರೀಲರು, ಟ್ವಿಸ್ಟರ್‌, ಡೈಯರ್‌, ನೇಕಾರ, ಜವಳಿ ತಯಾರಕ, ಜವಳಿ ವಿತರಕ, ಹಾಗೂ ರಫ್ತುದಾರ ಹೀಗೆ ಎಲ್ಲ ವರ್ಗಗಳವರ ಹಿತವು ಪರಸ್ಪರ ಅವಲಂಬಿಯಾಗಿದ್ದರೂ, ಈ ಎಲ್ಲ ವರ್ಗಗಳ ಸಾಮರಸ್ಯದ ಅಭಿವೃದ್ಧಿ ಕುರಿತಂತೆ ಸಮಗ್ರವಾದ ನೀತಿ ರೂಪಿಸಿ ಅಭಿವೃದ್ಧಿ ಸಾಧಿಸುವ ಯೋಜನೆ ತಯಾರಿಸುತ್ತ ಯಾವ ಸರಕಾರವು ಗಮನ ಕೊಡಲಿಲ್ಲ. ಕೇಂದ್ರ ಮತ್ತು ರಾಜ್ಯಗಳ ಆಶ್ರಯದಲ್ಲಿ ನಡೆಯುತ್ತಿರುವ ಸಂಶೋಧನಾ ಕಾರ್ಯ ಸಹಾ ಭಾರೀ ಫಲಪ್ರದವಾಗಲಿಲ್ಲ.

ಚೀನಾ ರೇಷ್ಮೆ ಬರತೊಡಗಿದಂತೆ ನೂಲಿನ ಮಟ್ಟದಿಂದ ಮುಂದಿನ ವರ್ಗಗಳು ಅದಕ್ಕೆ ಪ್ರತಿಭಟಿಸಲಿಲ್ಲ. ಅದಕ್ಕೂ ಮುಂಚಿನ ಎಲ್ಲ ವರ್ಗಗಳು ಪ್ರತಿಭಟಿಸಿದರು. ಪ್ರಯೋಜನವಾಗಲಿಲ್ಲ. ಬೇರೆ ಬೇರೆ ವರ್ಗಗಳು ವಿಭಿನ್ನ ಲಾಬಿಗಳನ್ನು ಸೃಷ್ಟಿಸಿದ್ದರಿಂದ ಅವು ಬೇರೆ ಬೇರೆ ದಿಕ್ಕಿನಲ್ಲಿ ಸ್ವಾರ್ಥ ಸಾಧನೆಗೆ ತೊಡಗಿದ್ದರಿಂದ ಗೊಂದಲಕ್ಕೆ ಒಳಗಾಗಿದೆ. ಕೇಂದ್ರ ಸರಕಾರ. ನಿಷ್ಕ್ರೀಯವಾಗಿ ಉಳಿಯುವ ಪಾಪ ಮಾಡಿದ್ದು ಕರ್ನಾಟಕ. ರೇಷ್ಮೆ ರಂಗದ ಮುಂಚೂಣಿ ರಾಜ್ಯವೂ ಕರ್ನಾಟಕ ಆಗಿದ್ದರಿಂದಲೇ ಅದರ ಹೊಣೆಯೇ ಹೆಚ್ಚು. ಅದರ ವೈಫಲ್ಯವೇ ರೇಷ್ಮೆ ರಂಗಕ್ಕೆ ಮಾರಕವಾಗಿ ಪರಿಣಮಿಸಿದ್ದು, ಕೇಂದ್ರದ ಮೇಲೆ ಒತ್ತಡ ತರುವಲ್ಲಿ ವಿಫಲವಾಗಿರುವುದೂ ಕರ್ನಾಟಕವೇ.

ದುರದೃಷ್ಟವಶಾತ್ ರಾಜ್ಯದಲ್ಲಿ ಯಾವ ಪಕ್ಷ ಸರಕಾರ ರಚಿಸುವುದೋ ಅದಕ್ಕೆ ವ್ಯತಿರಿಕ್ತವಾದಂಥ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತಿದೆ.

ಇಂಥ ವಿದ್ಯಮಾನವು ರಾಜ್ಯದ ಪಾಲಿಗೆ ಎಷ್ಟೊಂದು ಅನಾನುಕೂಲ ತರುತ್ತದೆ ಎಂಬುದಕ್ಕೆ ಕರ್ನಾಟಕದ ರೇಷ್ಮೆ ರಂಗ ಕಂಡ ಅವನತಿಯೇ ಒಂದು ಸಾಕ್ಷಿ.

೧೨-೩-೨೦೦೬