‘ಸಕ್ಕರೆಯ ಬೆಲೆಗೆ ಮೈಸೂರು ಪಾಕ್’, ‘ಹತ್ತಿಯ ಬೆಲೆಗೆ ರೇಷ್ಮೆ’ ಎಂಬ ಒಕ್ಕಣೆಗಳು ಜಾಹೀರಾತಿನಲ್ಲಿ ರಾರಾಜಿಸಿವೆ. ಸರ್ವ ಸರಕಿನ ಮಳಿಗೆಯ ಪಾಲಿಗೆ ಇವು ಆಪ್ಯಾಯಮಾನಕರ ಎನಿಸಿದರೂ ರೇಷ್ಮೆಯನ್ನು ಹತ್ತಿಯ ಮೌಲ್ಯಕ್ಕೆ ಇಳಿಸಿರುವುದು ವಿಶೇಷ. ಕರ್ನಾಟಕದ ಪಾಲಿಗೆ ಹತ್ತಿ ಎಷ್ಟು ಮುಖ್ಯವೋ ರೇಷ್ಮೆಯದು ಒಂದು ತೂಕ ಹೆಚ್ಚು. ಏಕೆಂದರೆ ಕರ್ನಾಟಕವೇ ಭಾರತದ ಅಗ್ರಮಾನ್ಯ ರೇಷ್ಮೆ ರಾಜ್ಯ. ಹೂವಿನ ಚಿಯ ಬಂದಾಗ ‘ಗುಲಾಬಿ ಎಂದರೆ, ಗುಲಾಬಿ ಗುಲಾಬಿ ಗುಲಾಬಿಯೇ ಸರಿ’ ಎನ್ನುವುದು ಒಂದು ಆಂಗ್ಲೋಕ್ತಿ. ಹಾಗೆಯೇ ರೇಷ್ಮೆ ಎಂದರೆ ರೇಷ್ಮೆಯೇ; ಅದಕ್ಕೆ ಅದೇ ಸರಿಸಾಟಿ.

ಬ್ರಿಟಿಷರ ವಿರುದ್ಧ ಸೆಣಸತೊಡಗಿದ ಟಿಪ್ಪು ಸುಲ್ತಾನ್ ಹಣ ಹೊಂಚಿಕೊಳ್ಳಲು ಮಾರ್ಗೋಪಾಯಗಳನ್ನು ಹುಡುಕಿದನಂತೆ. ಮಂಗಳೂರಿನ ಕಡಲತಡಿಯಲ್ಲಿ ಮುತ್ತನ್ನು ಬೆಳೆಸುವುದು, ಕುಣಿಗಲ್‌ನಲ್ಲಿ ಅತ್ಯುತ್ತಮ ಕುದುರೆ ತಳಿಗಳನ್ನು ಅಭಿವೃದ್ಧಿ ಪಡಿಸುವುದು, ಜೊತೆಗೆ ಹಿಪ್ಪುನೇರಳೆ ಬೆಳೆಸಿ, ರೇಷ್ಮೆಹುಳು ಸಾಕಿ, ಅವು ನೇಯ್ದ ರೇಷ್ಮೆಗೂಡಿನಿಂದ ರೇಷ್ಮೆ ನೂಲು ಬಿಚ್ಚುವುದು. ಇವು ಮೂರೂ ಅಧಿಕ ಮೌಲ್ಯದ ಉತ್ಪನ್ನ ನೀಡುವ ಚಟುವಟಿಕೆಗಳು. ಮುತ್ತು ಕೃಷಿ ಫಲಿಸಲಿಲ್ಲ. ಇನ್ನೆರಡು ಕೈಗೂಡಿದವು.

ಫಲಿತವೆಂದರೆ ಮೈಸೂರಿನಿಂದ ಬೆಂಗಳೂರಿನ ತನಕ ೧೫೦ ಕಿ.ಮೀ. ಉದ್ದದ ರಸ್ತೆಯ ಆಚೀಚಿನ ಪ್ರದೇಶಗಳಲ್ಲದೆ ಬಿಸಿಲಿನ ಬಿಸಿಗೆ ಹೆಸರಾದ ಕೋಲಾರ ಜಿಲ್ಲೆಯಲ್ಲೂ ರೇಷ್ಮೆ ಕೃಷಿ ನೆಲೆಗೊಂಡಿತು. ಈಚೆಗಂತೂ ಉತ್ತರ ಕರ್ನಾಟಕದ ಕೆಲವು ಕಡೆ ಸಹಾ ರೇಷ್ಮೆ ಕೃಷಿ ಕೈಗೆ ಹತ್ತಿದೆ.

ರೇಷ್ಮೆ ಕೃಷಿಯಲ್ಲಿ ಇಂದಿಗೂ ಕರ್ನಾಟಕ ಅಗ್ರಮಾನ್ಯವೇ ಆಗಿದ್ದರೂ ತಮಿಳುನಾಡು ಮತ್ತು ಆಂಧ್ರಗಳೂ ದಾಪುಗಾಲು ಇಟ್ಟಿವೆ. ಬಂಗಾಲ ಮತ್ತಿತರ ರಾಜ್ಯಗಳೂ, ಹಿಪ್ಪು ನೇರಳೆ ಬೆಳೆಗೆ ಹೊರತಾದ ಅನ್ಯ ಬಗೆಯ ರೇಷ್ಮೆ ಕೃಷಿಗೆ ಹೆಸರಾದ ಈಶಾನ್ಯ ಭಾರತದ ಕೆಲವು ಪ್ರದೇಶಗಳೂ ತಮ್ಮ ನೆಲೆ ಕಳೆದುಕೊಂಡಿಲ್ಲ. ಅದೆಲ್ಲ ವ್ಯಾಪ್ತಿಯನ್ನು ವಿಸ್ತಾರವನ್ನು ಬಿಂಬಿಸುತ್ತದೆ. ನಿಜ. ಆದರೆ, ರೇಷ್ಮೆ ಉದ್ಯಮಕ್ಕೆ ಇಂದಿನ ದುರ್ಗತಿ ಹಿಂದೆ ಎಂದೂ ಬಂದುದಿಲ್ಲ. ಜಪಾನು ತನ್ನ ವಶದಲ್ಲಿದ್ದ ರೇಷ್ಮೆ ಕೃಷಿ ಮತ್ತು ಉದ್ಯಮವನ್ನು ಕ್ರಮೇಣ ನಿಲ್ಲಿಸಿತು. ಭೂಪ್ರದೇಶದ ಮೇಲೆ ಒತ್ತಡ; ರೇಷ್ಮೆ ಕೆಲಸಕ್ಕೆ ಜನರು ಬಹಳವಾಗಿ ಬೇಕಾಗುವುದಾದರೂ ಪ್ರತಿಫಲ ಕಡಿಮೆ ಎಂಬ ಎರಡು ಕಾರಣಗಳಿಂದ ಆ ದೇಶದಲ್ಲಿ ರೇಷ್ಮೆ ಕೃಷಿಗೆ ಮನ್ನಣೆ ನೀಡುವುದು ಕಡಿಮೆ ಆಯಿತು. ಆದರೆ ಭಾರತಕ್ಕೆ ಜಪಾನು ಒತ್ತಾಸೆ ನೀಡಿದ್ದುಂಟು. ಅತಿ ದೊಡ್ಡ ರೇಷ್ಮೆ ರಾಷ್ಟ್ರವಾದ ಚೀನಾ ತಾನು ತಯಾರಿಸಿದ ರೇಷ್ಮೆ ನೀಲನ್ನು ಧಂಡಿಯಾಗಿ ಭಾರತದೊಳಕ್ಕೆ ನುಗ್ಗಿಸುವ ನೀತಿ ಅನುಸರಿಸಿತು. ಪರಿಣಾಮವೆಂದರೆ ಬೇಡ ಬೇಡವೆಂದರೂ ಚೀನಾ ರೇಷ್ಮೆ ಎಲ್ಲ ಕಡೆ ಹಂಚಿ ಹರಡಿ ಹೋಗಿದೆ.

ವಿಶ್ವಬ್ಯಾಂಕ್ ಸಾಲ ತೆಗೆದು ರೇಷ್ಮೆ ಕೃಷಿಯನ್ನು ಅಭಿವೃದ್ಧಿಪಡಿಸಲು ಕೈಗೊಂಡ ಯೋಜನೆಯು ಭಾಗಶಃ ಮಾತ್ರ ಸಫಲವಾಗಿದೆ. ದೇಶೀಯ ಬಳಕೆಗೆ ಬೇಕಾಗುವ ಒರಟಾದ ರೇಷ್ಮೆ ನೂಲನ್ನು ತಯಾರಿಸಲು ಇದರಿಂದ ಉತ್ಸಾಹ ಮೂಡಿತೇ ಹೊರತು ರಫ್ತಿಗಾಗಿ ಬೇಕಾಗುವ ಬೈವೋಲ್ಟೈನ್‌ ರೇಷ್ಮೆ ತಯಾರಿಸಲು ಸಾಧ್ಯವಾಗಲಿಲ್ಲ. ನಮ್ಮಲ್ಲೇ ಸಾಕು ಬೇಕಾದಷ್ಟು ರೇಷ್ಮೆ ನೂಲು ತಯಾರಾಗುತ್ತಿರಬೇಕಾದರೆ ಚೀನಾ ರೇಷ್ಮೆ ಒಳನುಗ್ಗಲು ಇದೇ ಕಾರಣ. ಚೀನಾ ಮೂಲಕ ಸರಕು ವಿಶ್ವ ಗುಣಮಟ್ಟದ್ದು. ಭಾರತದ್ದು ಆ ದೃಷ್ಟಿಯಿಂದ ಕಳಪೆ. ವಿಶ್ವಬ್ಯಾಂಕ್ ಯೋಜನೆಯಿಂದಾಗಿ ರೇಷ್ಮೆ ಮೊಟ್ಟೆ ತಯಾರಿಸುವ ಗ್ರೈನೇಜುಗಳು ಈಗ ಮೂಲೆಗುಂಪಾಗಿವೆ. ರಫ್ತು ಹೆಚ್ಚಿಸುವ ಮಾತಿರಲಿ; ದೇಶೀ ಬಳಕೆಗೂ ಆಮದು ರೇಷ್ಮೆ ಸಿಗುವಂತಾಗಿದೆ.

ಬಳಕೆದಾರನ ದೃಷ್ಟಿಯಿಂದ ನೋಡಿದಾಗಲೂ ನಿರಾಶೆಯೇ. ಶುದ್ಧ ರೇಷ್ಮೆಯ ಸೀರೆಗಳು ಮತ್ತು ಜವಳಿ ಉತ್ಪನ್ನಗಳಿಗೆ ಬೇಡಿಕೆ ಕಡಿಮೆಯಾಗಿದೆ. ಹೊಸ ವಿನ್ಯಾಸದ, ನಾನಾ ಬಗೆಗಳಲ್ಲಿ ಇತರ ನೂಲಿನ ಜೊತೆ ಸಂಯೋಜಿಸಿದ ಆಕರ್ಷಕ ಜವಳಿ ಈಗಷ್ಟೇ ಬಳಕೆಗೆ ಬರುತ್ತಿವೆ. ಆದರೆ ಜವಳಿಯಲ್ಲಿ ಹೊಸ ಆವಿಷ್ಕಾರಗಳು ತುಂಬಾ ನಿಧಾನವಾಗುತ್ತವೆ ಎನಿಸುತ್ತಿದೆ. ಸಂಶೋಧನೆ ಸಾಕಷ್ಟು ಫಲಿಸಿಲ್ಲ.

ಕರ್ನಾಟಕವು ಅತಿ ಹೆಚ್ಚು ರೇಷ್ಮೆ ಉತ್ಪಾದಿಸುವ ರಾಜ್ಯವೇನೋ ಸರಿ. ಇಲ್ಲಿನ ಕಚ್ಚಾ ರೇಷ್ಮೆಗೆ ಅನ್ಯ ರಾಜ್ಯಗಳಲ್ಲಿ ಬೇಡಿಕೆ ಇರುವುದೂ ಸಹಜ. ಆದರೆ ಬಹುಪಾಲು ನೂಲು ಅನ್ಯ ರಾಜ್ಯಗಳಿಗೆ ಮುಖ್ಯವಾಗಿ ತಮಿಳುನಾಡಿಗೆ ರವಾನೆ ಆಗುತ್ತದೆ. ಅಲ್ಲಿನ ನೇಕಾರರು ನೂಲುವ ಶುದ್ಧ ರೇಷ್ಮೆ ಸೀರೆಗಳು ಒಳ್ಳೆಯ ಬೆಲೆ ಪಡೆಯುತ್ತವೆ.

ಕರ್ನಾಟಕದ ನೇಕಾರರು ಸಾದಾ ಬಟ್ಟೆ ರೂಪದ ರೇಷ್ಮೆ ಉತ್ಪನ್ನ ತಯಾರಿಸಿ ಮಾರುತ್ತಾರೆ. ಅದರ ಮೇಲೆ ಬಣ್ಣ ಬಣ್ಣದ ವಿನ್ಯಾಸಗಳನ್ನು ಅಚ್ಚೊತ್ತಿ ಬಿಡುಗಡೆ ಮಾಡುವ ಪ್ರಿಂಟೆಡ್ ಸಿಲ್ಕ್ ತಯಾರಿಸುವ ಘಟಕಗಳು ಒಂದಿಷ್ಟು ಸಂಖ್ಯೆಯಲ್ಲಿ ತಲೆ ಎತ್ತಿರುವುದು ನಿಜ. ಆದರೆ ಯಾವುದೇ ಸೀರೆಗೆ ಬಳಕೆದಾರ ತೆರುವ ಹಣದಲ್ಲಿ ಸ್ವಲ್ಪ ಭಾಗ ಮಾತ್ರ ಬೆಳೆಗಾರ ಮತ್ತು ನೇಕಾರರಿಗೆ ತಲುಪುತ್ತದೆ. ಮಿಕ್ಕದ್ದು ಮಾರುಕಟ್ಟೆ ವೆಚ್ಚವಾಗಿ ಕರಗಿ ಹೋಗುತ್ತದೆ. ಬೆಳೆಗಾರನಿಗಾಗಲೀ ನೇಕಾರನಿಗಾಗಲೀ ಇದರಿಂದ ಪ್ರಯೋಜನವಾಗುತ್ತಿಲ್ಲ. ಅದಕ್ಕಿರುವ ಕಾರಣಗಳು ಮಾತ್ರ ವಿಚಿತ್ರ ಸ್ವರೂಪದವು.

ಚೀನಾ ರೇಷ್ಮೆ ಆಮದು ಮತ್ತು ಕಳ್ಳ ಸಾಗಾಣಿಕೆಯನ್ನು ತಡೆಯಲು ಸಾಧ್ಯವಾಗದೇ ಹೋದುದರಿಂದ ದೇಶಿ ರೇಷ್ಮೆಗೆ ಬೇಡಿಕೆ ಕಡಿಮೆಯಾಯಿತು. ಆದ್ದರಿಂದ ಬೆಳಗಾರನಿಗೆ ಮತ್ತು ನೇಕಾರನಿಗೆ ಸಿಗುವ ಪ್ರತಿಫಲ ಕಡಿಮೆಯಾಯಿತು. ಅದೇ ವೇಳೆ ಆರ್ಥಿಕ ಹಿಂಜರಿತದ ಕಾರಣ ಜವಳಿಗೆ ಬರುವ ಒಟ್ಟಾರೆ ಬೇಡಿಕೆಯೇ ಕಡಿಮೆಯಾಯಿತು. ನೂಲು ಉತ್ಪಾದನೆಯಾದರೂ, ನೇಕಾರ ನೇದರೂ, ಅದನ್ನು ಖರೀದಿಸಲು ವರ್ತಕ ಸಿದ್ಧನಿಲ್ಲ. ರೇಷ್ಮೆಯನ್ನು ಇತರ ನೂಲಿನ ಜೊತೆ ಸಂಯೋಜಿಸುವುದರಿಂದ ಜವಳಿಯ ವೈವಿಧ್ಯ ಹೆಚ್ಚಿದೆ. ಅದೇ ವೇಳೆ ರೇಷ್ಮೆಗೆ ಸರಿಸಾಟಿ ಅಲ್ಲದಿದ್ದರೂ ಅದರ ಸಮೀಪಕ್ಕೆ ಬರುವಷ್ಟ ನವಿರು ಮತ್ತು ಹೊಳಪಿನ ಕೃತಕ ನೂಲು ಅಭಿವೃದ್ಧಿಗೊಂಡಿರುವುದರಿಂದ ಅವು ಅಗ್ಗವೂ ಇರುವುದರಿಂದ ಶುದ್ಧ ರೇಷ್ಮೆಗೆ ಬೇಡಿಕೆ ಕಡಿಮೆಯಾಗಿದೆ. ರೇಷ್ಮೆ ಜವಳಿಯ ಮಟ್ಟಿಗೆ ಹೇಳುವುದಾದರೆ ಬೇಡಿಕೆ ಕುದುರಿಸುವುದು ವರ್ತಕನ ಕೈಲಿ ಇರುವುದಿಲ್ಲ.

ಕೊನೆಗೂ ಉಳಿಯುವ ಒಂದು ಪ್ರಶ್ನೆ ಎಂದರೆ ಬೇಡಿಕೆ ಕಡಿಮೆ ಆದರೂ ಜವಳಿಯ ಬೆಲೆ ಏಕೆ ಗಮನಾರ್ಹವಾಗಿ ಇಳಿಯುವುದಿಲ್ಲ ಎನ್ನುವುದು. ರೇಷ್ಮೆ ಜವಳಿಯ ಮುಖ್ಯ ಗುಣಲಕ್ಷಣವೆಂದರೆ, ಕಪಾಟಿನಲ್ಲಿ ಉಳಿದಷ್ಟೂ ಜವಳಿಯ ಅಸಲು ಬೆಲೆ ಏರುತ್ತಾ ಹೋಗುತ್ತದೆ. ಕಾರಣವೆಂದರೆ ಬಂಡವಾಳದ ಮೇಲೆ ಬೆಳೆಯುವ ಬಡ್ಡಿ. ಬೇಡಿಕೆ ಕುದುರಿಸುವುದು ಹೇಗೆಂದು ಹಾರಿಗೂ ಹೊಳೆಯುತ್ತಿಲ್ಲ. ಎಲ್ಲರೂ ಒಳ್ಳೆಯ ದಿನಗಳಿಗಾಗಿ ಕಾಯುತ್ತಿದ್ದಾರೆ.

ರೇಷ್ಮೆ ಒಂದು ರೀತಿಯಲ್ಲಿ ವೈಭೋಗ. ಆ ಬಗೆಯ ಎಲ್ಲ ಉತ್ಪನ್ನಗಳು ಹಣ ಬಿಕ್ಕಟ್ಟಿನ ದಿನಗಳಲ್ಲಿ ಬೇಡಿಕೆ ಕಳೆದುಕೊಳ್ಳುತ್ತವೆ. ಕರ್ನಾಟಕವು ರೇಷ್ಮೆ ರಾಜ್ಯವಾದ್ದರಿಂದ ತಟ್ಟುವ ಬಿಸಿ ಅಧಿಕ.

೧೯.೧೨.೨೦೦೧