ಕರ್ನಾಟಕದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಪರಿಹಾರ ಹಣದ ಮೊತ್ತ ಏನೇ ಇದ್ದರೂ ಅದು ರೈತನ ಕುಟುಂಬದವರಿಗೆ ದಕ್ಕಬೇಕಾದರೆ, ಆತ ‘ಪ್ರಾಣ ತೆಗೆದುಕೊಂಡಿದ್ದು ಬೆಳೆ ನಷ್ಟದ ಕಾರಣದಿಂದ’ ಎಂಬುದು ರುಜುವಾತು ಆಗಬೇಕು! ಮದುವೆಗೆ, ಹಬ್ಬಕ್ಕೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಅಥವಾ ಖಾಸಗಿಯವರಿಂದ ತೆಗೆದ ಸಾಲವು ಬಡ್ಡಿರೂಪದಲ್ಲಿ ರೈತನನ್ನು ನುಂಗಿ ಹಾಕಿದ್ದರೆ ಅದಕ್ಕೆ ಪರಿಹಾರದ ಹಣ ಸಿಗುವದಿಲ್ಲ. ವರ್ಷಗಳ ಪರ್ಯಂತ ಕೃಷಿ ಕಾರ್ಯ ಮಾಡಿದ್ದರೂ ಆತ ಯಾವುದಕ್ಕೂ ಸಾಲ ಎತ್ತುವ ಅನಿವಾರ್ಯತೆ ಇದೆ ಎನ್ನುವುದು ಸಕಾರಣ ಆಗುವುದೇ ಇಲ್ಲ.

ಇನ್ನು ಬೆಳೆ ನಷ್ಟ. ಅದಕ್ಕೆ ಕಳಪೆ ಬೀಜವೋ, ಕೆಟ್ಟ ಕ್ರಿಮಿನಾಶಕವೋ?, ಸಮಯಕ್ಕೆ ಸರಿಯಾಗಿ ಸಾಕಷ್ಟು ಪ್ರಮಾಣದಲ್ಲಿ ಕೊಳ್ಳಲಾಗದ ಗೊಬ್ಬರವೋ ಕಾರಣವಾಗಿದ್ದರೆ ಆ ಸಂಬಂಧ ರಾಜ್ಯ ಸರಕಾರ ಅಥವಾ ಕೇಂದ್ರ ಸರಕಾರ ನಿಸ್ಸಹಾಯಕ. ಈ ಕಾರಣಗಳ ವಿರುದ್ಧ ದೂರಿದರೂ ಏನೂ ಪ್ರಯೋಜನವಾಗುವುದಿಲ್ಲ.

ವಿಶ್ವ ವಾಣಿಜ್ಯ ಸಂಸ್ಥೆ (ಡಬ್ಲ್ಯೂಟಿಓ/ವಿವಾಸಂ) ಹೇಳುತ್ತದೆ. ನಿಲ್ಲಿಸಬೇಕೆಂದು. ಅದನ್ನು ಸ್ಥಾಪನೆ ಮಾಡುವಾಗ ಕೈ ಜೋಡಿಸಲು ಭಾರತಕ್ಕಿದ್ದ ಒಂದೇ ಕಾರಣವೆಂದರೆ ಕೃಷಿ ಪ್ರಧಾನ ರಾಷ್ಟ್ರವಾದ ಭಾರತದ ಪಾಲಿಗೆ ಕೃಷಿ ಉತ್ಪನ್ನಗಳನ್ನು ರಫ್ತುಮಾಡಲು ವಿಫುಲ ಅವಕಾಶಗಳು ಸಿಗುತ್ತವೆ ಎನ್ನುವದು ಆಗಿತ್ತು. ರಫ್ತು ಮಾಡಬೇಕೆಂದರೆ ಕೊಳ್ಳುವ ರಾಷ್ಟ್ರದ ಪಾಲಿಗೆ ಸರಕು ಅಗ್ಗವಾಗಿ ಪರಿಣಮಿಸಬೇಕು. ಆದರೆ ವಿಶ್ವ ವ್ಯಾಪಾರಕ್ಕೆ ಸಜ್ಜಾಗಿ ನಿಂತಾಗ ನಮಗೆ ಗೋಚರವಾಗುತ್ತದೆ. ಭಾರತದಲ್ಲಿ ಕೃಷಿ ಉತ್ಪಾದನಾ ವೆಚ್ಚ ತುಂಬಾ ಹೆಚ್ಚಾಗಿದೆ ಎಂದು. ಸಬ್ಸಿಡಿಗಳನ್ನು ನಿಲ್ಲಿಸಿದರೆ ಇಲ್ಲವೇ ಕಡಿಮೆ ಮಾಡಿದರೆ ರಫ್ತಿನ ಮಾತಿರಲಿ, ದೇಶೀಯ ಮಾರುಕಟ್ಟೆಯಲ್ಲೇ ಸರಕು ಖರ್ಚಾಗುವುದಿಲ್ಲ. ಸಬ್ಸಿಡಿ ಮಾತು ಹಾಗಿರಲಿ ಕೃಷಿ ಕಾರ್ಯಕ್ಕಾಗಿ ಬಳಸಿಕೊಳ್ಳುವ ವಿದ್ಯುತ್ತಿನ ಪೂರ್ಣದರ ವಿಧಿಸಿದರೂ ಉತ್ಪನ್ನ ವಿಪರೀತ ದುಬಾರಿ ಆಗುತ್ತದೆ. ಈ ಪರಿಸ್ಥಿತಿಯಲ್ಲಿ ಸಬ್ಸಿಡಿಗಳನ್ನು ತೊಡೆದು ಹಾಕಲು ಸಾದ್ಯವಿಲ್ಲವೆಂದರೆ, ವಿಶ್ವವಾಣಿಜ್ಯ ಸಂಸ್ಥೆಯವರು ಪ್ರತಿಕ್ರಿಯಿಸುವುದು ಹೇಗೆ ಗೊತ್ತೆ? ‘ಸಬ್ಸಿಡಿ’ಗಳನ್ನು ಕೊನೆಗೊಳಿಸದೆ ಇರುವುದಕ್ಕೆ ರಾಜಕೀಯ ಕಾರಣಗಳಿವೆ ಎಂದು. ಕೃಷಿ ಉತ್ಪನ್ನ ರಫ್ತಿಗೆ ಹೇಗೋ ಹಾಗೆ ಇತರ ಸರಕನ್ನು ಮಾರಲು ಯತ್ನಿಸಿದರೂ ಇದೇ ಬಗೆಯ ಅಡ್ಡಗಾಲು. ಚಿಕ್ಕ ಹುಡುಗರನ್ನು ತೊಡಗಿಸಿಕೊಂಡು ತಯಾರಿಕೆ ನಡೆಸುತ್ತಿರಿ; ಆ ಬಗೆಯ ಉತ್ಪನ್ನ ರಫ್ತು ಮಾಡುವಂತಿಲ್ಲ. ಪರಿಸರಕ್ಕೆ ಧಕ್ಕೆ ಮಾಡುವಂಥ ವಿಧಾನಗಳು ಜಾರಿಯಲ್ಲಿವೆ; ಹಾಗೆ ತಯಾರಿಸಿದ್ದನ್ನು ಬೇರೆ ದೇಶಗಳಿಗೆ ಮಾರುವ ಹಾಗಿಲ್ಲ. ಬೇರೆಯವರು ಕಷ್ಟಪಟ್ಟು ಸಂಶೋಧಿಸಿದ್ದನ್ನು, ಇತರರ ಬೌದ್ಧಿಕ ಆಸ್ತಿಯನ್ನು ಲಪಟಾಯಿಸಿ ಸರಕನ್ನು ತಯಾರಿಸುವಿರಿ, ಅದನ್ನು ಕೊನೆಗೊಳಿಸಿರಿ. ಅದರಿಂದ ನಿಮ್ಮ ದೇಶದಲ್ಲಿ ಔಷಧಿಗಳು ತುಟ್ಟಿಯಾದರೆ ನಮ್ಮನ್ನು ಬಾಧ್ಯರನ್ನಾಗಿ ಮಾಡಬೇಡಿ. ಇದು ವಾಣಿಜ್ಯ ಸಂಸ್ಥೆಯಲ್ಲಿ ಬಲಾಢ್ಯರಾಗಿ ಮೆರೆಯುತ್ತಿರುವ ಅಮೆರಿಕ, ಐರೋಪ್ಯ ಒಕ್ಕೂಟ, ಜಪಾನ್ ಮುಂತಾದ ರಾಷ್ಟ್ರಗಳ ನಿಲುವು. ಈ ವೇದಿಕೆಗೆ ಬಂದು ಕೂಡಾ ಇನ್ನಷ್ಟು ಮತ್ತಷ್ಟು ಶೋಷಣೆಗೆ ಒಳಗಾಗಿರುವುದು ಭಾರತ ಮತ್ತಿತರ ಅಭಿವೃದ್ಧಿ ಶೀಲ ರಾಷ್ಟ್ರಗಳು. ಜಾಂಜಿಬಾರ್‌‌ನಂಥ ಅತಿ ಹಿಂದುಳಿದ ರಾಷ್ಟ್ರಗಳು ಕಣ್‌ಕಣ್ಣು ಬಿಟ್ಟುತ್ತಿವೆ.

ಸಿಯಾಟ್ಲ್‌ನಲ್ಲಿ ಸಚಿವ ಮಟ್ಟದ ಮಾತುಕತೆ ನಡೆದಾಗ ಯಾವ ತೀರ್ಮಾನಗಳನ್ನೂ ಕೈಗೊಳ್ಳಲಾಗಲಿಲ್ಲ. ದೋಹಾದಲ್ಲಿ ಪರಿಸ್ಥಿತಿ ಸುಧಾರಿಸಲಿಲ್ಲ. ಇದಕ್ಕೆಲ್ಲ ಮುಂದುವರೆದ ರಾಷ್ಟ್ರಗಳೇ ಕಾರಣ.

ಅವುಗಳ ಹಠಮಾರಿ ಧೋರಣೆ, ಕಪಿಮುಷ್ಠಿ ಹಾಗೂ ವಿಶ್ವ ವಾಣಿಜ್ಯ ಸಂಸ್ಥೆ ಮೂಲಕ ಎಲ್ಲ ರಾಷ್ಟ್ರಗಳ ವಹಿವಾಟನ್ನು ತಮ್ಮ ಹದ್ದುಬಸ್ತಿನಲ್ಲಿ ತಮಗೆ ಮಾತ್ರ ಲಾಭವಾಗುವಂತೆ ಇರಿಸಿಕೊಳ್ಳಬೇಕು ಎಂಬ ದುರಾಸೆ ಇವೆಲ್ಲ ಸದ್ಯದ ಪರಿಸ್ಥಿತಿಗೆ ಕಾರಣ.

ಇದೇ ಡಬ್ಲ್ಯೂಟಿಓ ರೂಢೀಸಿಕೊಂಡ ಹಾಗೂ ರೂಪಿಸಿಕೊಂಡ ನಿಯಮಾವಳಿ ಪ್ರಕಾರವೇ ತಕರಾರುಗಳನ್ನು ಇತ್ಯರ್ಥಪಡಿಸಿಕೊಳ್ಳಲು ಸಾಧ್ಯವಿದೆ. ಭಾರತದಂಥ ರಾಷ್ಟ್ರಗಳು ಆ ಮಾರ್ಗವನ್ನು ಹಿಡಿದು ತಮ್ಮದೇನಿದೆಯೋ ಅದನ್ನು ಸಾಧಿಸಿಕೊಳ್ಳಲಾಗಿದೆ? ಅದೆಲ್ಲ ಅಷಚಟು ಸುಲಭವಲ್ಲ. ಕೋರ್ಟುಗಳ ಮೆಟ್ಟಿಲು ಹತ್ತಿ ಅಂತರಾಷ್ಟ್ರೀಯ ವಿವಾದಗಳನ್ನು ಒಯ್ದಷ್ಟೇ ಕಠಿಣ. ಬಹುತೇಕ ಸಣ್ಣ ರಾಷ್ಟ್ರಗಳ ಪಾಲಿಗೆ ವಿವಾಸಂ ಎಂಬುದು ಕಬ್ಬಿಣದ ಕಡಲೆ ಆಗಿರುವುದಕ್ಕೆ ಇದೇ ಕಾರಣ. ಈಚೆಗೆ ಸಮಾವೇಶವೊಂದರಲ್ಲಿ ಮುರಸೋಳಿ ಮಾರನ್ ಅವರು ಹೊರಗೆಡಹಿದ ಪ್ರಕಾರ ಕೆಲವು ರಾಷ್ಟ್ರಗಳು ಏನೂ ಗೊತ್ತಿಲ್ಲದೆ ನಿರ್ಬಂಧಗಳಿಗೆ ಎಲ್ಲ ಒಪ್ಪಿ ಸಹಿ ಹಾಕಿದ ಪರಿಣಾಮವಾಗಿ ಮುಳುಗಿ ಹೋಗುತ್ತಿವೆ; ಈಗ ಕೈ ಕೈ ಹಿಸುಕುತ್ತಿವೆ.

ಡಬ್ಲ್ಯೂಟಿಓ ಪ್ರವೇಶಿಸಿ ಒಂದು ರೀತಿಯಲ್ಲಿ ಭಂಗಪಟ್ಟಿರುವ ರಾಷ್ಟ್ರಗಳ ಪೈಕಿ ದಿಟ್ಟ ಹೋರಾಟ ನೀಡುತ್ತಿರುವುದಕ್ಕೆ ಹೆಸರಾಗಿದೆ ಭಾರತ. ಏಷ್ಯಾ, ಆಫ್ರಿಕಾ ರಾಷ್ಟ್ರಗಳ ಅನೇಕವು. ಇದೀಗ ಭಾರತವನ್ನು ಅನುಸರಿಸಲು ಮುಂದಾಗಿವೆ. ಸಿಯಾಟ್ಲ್, ದೋಹಾ ಹಾಗೂ ಮುಂದಿನ ಸಚಿವ ಮಟ್ಟ ಸಮಾವೇಶಗಳಲ್ಲಿ ಭಾರತವನ್ನು ತಮ್ಮ ನಾಯಕನನ್ನಾಗಿ ಮುಂದಿಟ್ಟುಕೊಳ್ಳಲು ತವಕವಿದೆ. ಏಕೆಂದರೆ ತಾವೆಲ್ಲವೂ ವಿವಾಸಂ ಪ್ರವೇಶಿಸಿ ಭಂಗಪಟ್ಟಿರುವುದೇ ಆಗಿದೆ. ಭಾರತದ ಅನೇಕ ಕಡೆ ಕರ್ನಾಟಕದಲ್ಲಿ ಆದಂತೆ ಪ್ರದರ್ಶನಗಳು ಮತ್ತು ಪ್ರತಿಭಟನೆಗಳು ಆದುವಷ್ಟೇ. ಅದೇ ರೀತಿ ಥಾಯ್ಲೆಂಡಿನ ರೈತರು ಬ್ಯಾಂಕಾಕ್‌ನಲ್ಲಿ ಮೆಣಸಿನಕಾಯಿ ಸುಟ್ಟು ಪ್ರದರ್ಶನ ನಡೆಸಿದರು. ಸಿಯೋಲ್‌ನಲ್ಲಿ ಸಹಾ ಪ್ರತಿಭಟನೆ ನಡೆಯಿತು. ಇನ್ನಿತರ ಕಡೆ ಇದೇ ಪುನರಾವರ್ತನೆ. ಇಷ್ಟೆಲ್ಲಾ ಆದರೂ ಇಲ್ಲೆಲ್ಲ ಆಡಳಿತ ನಡೆಸುತ್ತಿರುವ ಸರಕಾರಗಳಿಗೆ ಭಾರತದಂಥ ಒಂದು ರಾಷ್ಟ್ರವನ್ನು ಮುಂದಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ಮುಂದುವರೆದ ರಾಷ್ಟ್ರಗಳ ಜೊತೆ ತುಂಬ ನಿರ್ಣಾಯಕವಾದ ಸಂಬಂಧಗಳನ್ನು ಇವುಗಳಲ್ಲಿ ಪ್ರತಿಯೊಂದು ರಾಷ್ಟ್ರವೂ ಬೆಳೆಸಿಕೊಂಡಿದೆ. ಪ್ರತಿಕೂಲ ಪರಿಣಾಮಗಳು ಬಹಳ ತೀಕ್ಷ್ಣವಾಗಬಲ್ಲದು. ರಾಜಕೀಯ ಸಂಬಂಧಗಳೂ ಈ ರೀತಿ ಒಗ್ಗಟ್ಟಾಗಿರಲು ಬಿಡುವುದಿಲ್ಲ. ಉದಾಹರಣೆಗೆ ಪಾಕಿಸ್ತಾನ ಕೆಲವೊಂದು ವಿವಾದಗಳಿಗೆ ಸಂಬಂಧಿಸಿದಂತೆ ಭಾರತದ ನಿಲುವಿಗೆ ಅದು ಒಪ್ಪಿಕೊಂಡರೂ ಅಮೆರಿಕದ ಹಿತಾಸಕ್ತಿಗಳಿಂದ ದೂರ ಸರಿಯಲು ಅದಕ್ಕೆ ಸಾಧ್ಯವಾಗುವುದಿಲ್ಲ. ಏಕೆಂದರೆ ಬಲಾಢ್ಯ ರಾಷ್ಟ್ರಗಳು ಬಲವಾಗಿ ತೋಳು ತಿರುಚಬಲ್ಲವು.

ಕೆಲವೊಂದು ಕ್ಷೇತ್ರಗಳಲ್ಲಿ ವ್ಯಾಪಾರ ಒಪ್ಪಂದಕ್ಕೆ (ಉದಾಹರಣೆಗೆ ಕೃಷಿ ಉತ್ಪನ್ನ) ಸಹಿ ಹಾಕಿ ಎಷ್ಟು ಅಂಶಗಳು ವಿವಾದಕ್ಕೆ ಒಳಗಾಗಿವೆ. ವಿವಾಸಂ ವಿವಿಧ ಸಮಿತಿಗಳ ಮುಂದೆ ತಕರಾರು ಇತ್ಯರ್ಥ ಇನ್ನೂ ಸಾಧ್ಯವೇ ಆಗಿಲ್ಲ. ಆದರೆ ಇನ್ನು ಹಲವು ಕ್ಷೇತ್ರಗಳ ಸಂಬಂಧ ಮಾತುಕತೆ ಮತ್ತು ಒಪ್ಪಂದಗಳಿಗೆ ಸಹಿ ಹಾಕಿರೆಂಬುದು ಮುಂದುವರೆದ ರಾಷ್ಟ್ರಗಳ ಒತ್ತಡ. ಕೈಗೆತ್ತಿಕೊಂಡ ಕೆಲವೇ ಕ್ಷೇತ್ರಗಳ ವಿಚಾರ ಮೊದಲು ಇತ್ಯರ್ಥವಾಗಬೇಕಿದೆ. ಈ ಮಾತನ್ನು ಮುಂದುವರೆದ ರಾಷ್ಟ್ರಗಳು ಒಪ್ಪಬೇಕು.

ಮುಂದುವರೆದ ರಾಷ್ಟ್ರಗಳು ಎರಡು ಅಂಶ ಒತ್ತಿ ಹೇಳುತ್ತವೆ. ಡಬ್ಲ್ಯೂಟಿಓ ವೇದಿಕೆಯಡಿ ಒಪ್ಪಂದಗಳು ಸಾಧ್ಯವಾಗಿ ಜಾರಿಯಾದರೆ ಭಯೋತ್ಪಾದನೆಯಂಥ ಜಾಗತಿಕ ಸಮಸ್ಯೆ ಬಿಡಿಸುವುದು ಸುಲಭವಾಗುತ್ತದೆ. ವಿಶ್ವವನ್ನೆಲ್ಲ ಮುಸುಕಿರುವ ಆರ್ಥಿಕ ಹಿಂಜರಿತ ಇನ್ನಷ್ಟು ದಟ್ಟವಾದರೆ ಕಷ್ಟವಾಗುವುದರಿಂದ ವಿವಾಸಂ ಒಪ್ಪಂದಗಳಿಗೆ ಹಾಗೂ ಜಾರಿಗೆ ಸುಲಭವಾಗಿ ಒಪ್ಪಬೇಕು. ಇವೆರಡೂ ಅವು ತಮ್ಮ ಮೂಗಿನ ನೇರಕ್ಕೆ ಆಡಿರುವ ಮಾತುಗಳು ಮಾತ್ರ.

೧೪-೧೧-೨೦೦೧