ಖಾತಾರ್‌ನ ದೋಹಾದಲ್ಲಿ ಸಮಾವೇಶಗೊಂಡಿರುವ ವಿಶ್ವವಾಣಿಜ್ಯ ಸಂಸ್ಥೆ (ಡಬ್ಲ್ಯೂಟಿಓ) ಮಹಾಧಿವೇಶನ ಆರಂಭಗೊಂಡಾಗ ಸಿಯಾಟ್‌ಲ್‌ ಸಮಾವೇಶಕ್ಕೆ ಒದಗಿದ ವೈಫಲ್ಯದ ಗತಿ ಬಂದೊದಗಬಹುದು ಎಂಬ ಭೀತಿ ಇಲ್ಲದಿರಲಿಲ್ಲ. ಭಾರತ ಮತ್ತಿತರ ಅಭಿವೃದ್ಧಿಶೀಲ ರಾಷ್ಟ್ರಗಳು ಮಹಾ ಅಧೀವೇಶನವನ್ನು ಎದುರಿಸಲು ನಡೆಸಿದ್ದ ತಯಾರಿ ಅದಕ್ಕೆ ಕಾರಣ. ಅಂತಿಮ ಘೋಷಣೆ ಹೊರಡಿಸಲು ಅಧೀವೇಶನವನ್ನು ಒಂದು ದಿನದ ಮಟ್ಟಿಗೆ ವಿಸ್ತರಿಸಬೇಕಾಯಿತು ಕೂಡಾ. ಭಾರತದ ಪ್ರತಿನಿಧಿ ಸಚಿವ ಮುರಸೋಳಿ ಮಾರನ್‌ ಅವರ ಹಠಮಾರಿ ನಿಲುವು ಅಮೆರಿಕ ಪ್ರತಿನಿಧಿಯ ಕಂಗೆಣ್ಣಿಗೆ ಕಾರಣವಾಯಿತು. ಆತ ತನ್ನ ಅಸಹನೆಯನ್ನು ಮಾರನ್ ವಿರುದ್ಧ ಬಹಿರಂಘವಾಗಿ ಪ್ರಕಟಪಡಿಸಿದ ಅಂಶ ವಿದೇಶಿ ಮಾಧ್ಯಮಗಳಲ್ಲಿ ವರದಿಯಾಯಿತು ಕೂಡಾ. ಭಾರತಕ್ಕೆ ವಾಪಸಾದ ಮೇಲೆ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಆ ಬಗೆಗೆ ಪ್ರಶ್ನಿಸಿದಾಗ ಮಾರನ್‌ ವಿಷಯ ತೇಲಿಬಿಟ್ಟರು.

ಹಳೆಯ ತಕರಾರುಗಳನ್ನು ಬಿಡಿಸುವ ವ್ಯವಸ್ಥೆ ಆಗುವ ತನಕ ಹೊಸ ವಿಷಯಗಳ ಬಗೆಗೆ ಸಚಿವ ಮಟ್ಟದ ಚರ್ಚೆ ಆರಂಭ ಆಗಕೂಡದು ಎಂಬ ಅಭಿವೃದ್ಧಿಶೀಲರ ಹಠಕ್ಕೆ ಮನ್ನಣೆ ದೊರಕಲಿಲ್ಲ. ಮುಖ್ಯವಾಗಿ ಭಾರತ ಗಳಿಸಿದ್ದೇನೂ ಇಲ್ಲ. ಕಡೆಗೂ ಅಮೆರಿಕ, ಐರೋಪ್ಯ ಒಕ್ಕೂಟ ಮತ್ತು ಜಪಾನ್ ಇವುಗಳ ಕೂಟ ಮೇಲುಗೈ ಸಾಧಿಸಿತು.

ಚೀನಾ ಮತ್ತು ತೈವಾನ್‌ಗಳನ್ನು ಸರ್ವಾನುಮತದಿಂದ ಈಗ ಸೇರಿಸಿಕೊಂಡಿದ್ದರಿಂದ ಡಬ್ಲ್ಯೂಟಿಓ ಸದಸ್ಯ ಬಲ ೧೪೪ಕ್ಕೆ ಏರಿದೆ. ಚೀನಾ ಸೇರ್ಪಡೆ ಭಾರತದ ಪಾಲಿಗೆ ಒಂದು ಸವಾಲಾಗಿ ಪರಿಣಮಿಸಿದರೂ ಪಾಶ್ಚಿಮಾತ್ಯ ರಾಷ್ಟ್ರಗಳ ಮುಷ್ಠಿಯನ್ನು ಸಡಿಲಿಸಲು ನೆರವಾಗುತ್ತದೆ.

ಕಾರ್ಮಿಕರ ಹಿತಾಸಕ್ತಿ ಮತ್ತು ಪರಿಸರ ಸಂರಕ್ಷಣೆ ಮುಂತಾದ ಅಂಶಗಳನ್ನೆತ್ತಿ ಭಾರತದಂಥ ರಾಷ್ಟ್ರಗಳ ರಫ್ತಿಗೆ ಅಡ್ಡಿ ಮಾಡಬಾರದೆಂಬ ಆಕ್ಷೇಪ ದೋಹಾದಲ್ಲಿ ಶಕ್ತಿ ರಾಷ್ಟ್ರಗಳನ್ನು ಸ್ವಲ್ಪಮಟ್ಟಿಗೆ ಮಣಿಸಿತು. ಎರಡು ವರ್ಷಗಳ ನಂತರ ಮತ್ತೆ ಸಚಿವ ಮಟ್ಟದ ಮಾತುಕತೆ ಆರಂಭವಾಗುವ ತನಕ ಆ ವಿಷಯಗಳನ್ನು ಎತ್ತುವುದಿಲ್ಲ ಎಂದು ಒಪ್ಪಿಕೊಳ್ಳಲಾಗಿದೆ. ದೋಹಾದಲ್ಲಿ ಪ್ರಭಾವಶಾಲಿ ರಾಷ್ಟ್ರಗಳ ವಿರುದ್ಧ ಎಂಥ ಅಪನಂಬಿಕೆ ವ್ಯಕ್ತವಾಯಿತೆಂದರೆ, ಡಬ್ಲ್ಯೂಟಿಓ ನಿರ್ಧಾರ ಕ್ರಮಗಳು ಪಾರದರ್ಶಕವಾಗಿರುತ್ತವೆ ಎಂಬ ನುಡಿಗಟ್ಟನ್ನು ಅಂತಿಮ ಘೋಷಣೆಯಲ್ಲಿ ಸೇರಿಸುವುದು ಅನಿವಾರ್ಯವಾಯಿತು.

ಕೃಷಿಯೇ ಮುಂತಾದ ವಿಷಯಗಳು ಬಂದಾಗ ಸದಸ್ಯ ರಾಷ್ಟ್ರಗಳ ವಾಣಿಜ್ಯೇತರ ಕಾಳಜಿಯನ್ನು ಗಮನಕ್ಕೆ ತೆಗೆದುಕೊಳ್ಳಲಾಗಿದೆ? ಇದರ ಪರಿಣಾಮವಾಗಿ ಕೃಷಿ ಉತ್ಪನ್ನ ರಫ್ತು ಸಾಧಿಸಬೇಕಾದರೆ ಸಬ್ಸಿಡಿಗಳನ್ನೆಲ್ಲ ಸದಸ್ಯ ರಾಷ್ಟ್ರಗಳು ನಿಲ್ಲಿಸಬೇಕೆಂಬ ಒತ್ತಾಯ ಮಾಯವಾಯಿತು. ಅಭಿವೃದ್ಧಿಶೀಲ ರಾಷ್ಟ್ರಗಳು ಶೇ.೧೦ರಷ್ಟು, ಅಭಿವೃದ್ಧಿ ಹೊಂದಿದರಾಷ್ಟ್ರಗಳು ಶೇ.೫ರಷ್ಟು ಸಬ್ಸಿಡಿ ಖೋತಾಕ್ಕೆ ಸಮ್ಮತಿಸಿದರೆ ಸಾಕೆಂದು ಒಪ್ಪಲಾಗಿದೆ.

ಭಾರೀ ಚೌಕಾಸಿ ಮಾಡಿದ್ದರಿಂದ ದೋಹಾದಲ್ಲಿ ಗಮನಾರ್ಹ ಸಾಧನೆ ಸಾಧ್ಯವಾಯಿತು ಎಂದು ಕೇಂದ್ರ ವಾಣಿಜ್ಯ ಖಾತೆ ಪ್ರಕಟಣೆ ವಿವರಿಸುತ್ತದೆ. ಆದರೆ ಡಬ್ಲ್ಯೂಟಿಓ ಕಾಗದಪತ್ರಗಳ ಪ್ರಕಾರ ಭಾರತಕ್ಕೆ ದಕ್ಕಿರುವುದು ಏನೂ ಇಲ್ಲ. ಉದಾಹರಣೆಗೆ ಜವಳಿ ರಫ್ತಿಗೆ ಅಧಿಕ ಅವಕಾಶ ಬೇಕೆಂದು ಭಾರತ ಬೇಡಿಕೆ ಇಟ್ಟಿತ್ತು. ಈಗಿನ ಖೋಟಾ ಪದ್ಧತಿಯನ್ನು ೨೦೦೫ಕ್ಕೆ ಅಂತ್ಯಗೊಳಿಸಬೇಕೆಂದು ಈ ಹಿಂದೆ ಏನು ನಿರ್ಧಾರವಾಗಿದೆಯೋ, ಅದು ಇನ್ನೂ ಮುಂಚೆಯೇ ಆಗಬೇಕೆಂದೂ, ಕನಿಷ್ಠ ಪಕ್ಷ ಖೋಟಾ ನಿಗಧಿ ಮಾಡುವುದನ್ನು ಅಭಿವೃದ್ಧಿಶೀಲರಿಗೆ ಅನುಕೂಲವಾಗುವಂತೆ ಹೆಚ್ಚಿಸಬೇಕೆಂದೂ ಭಾರತ ಹಠ ಹಿಡಿಯಿತು. ಆದರೆ ಅಮೆರಿಕ ಮತ್ತು ಕೆನಡಾಗಳು ಸುತಾರಾಂ ಒಪ್ಪಲಿಲ್ಲ. ಆದ್ದರಿಂದ ಹಠ ಫಲಿಸಲಿಲ್ಲ.

ಕಂಪೆನಿಗಳ ರ್ಬ್ರಾಂಡ್ ಇಲ್ಲದ, ಸಾಮಾನ್ಯೀಕರಿಸಿದ ಹೆಸರಿನ ಔಷಧಗಳನ್ನು ಏಡ್ಸ್‌ಪೀಡಿತ ಆಫ್ರಿಕಾ ರಾಷ್ಟ್ರಗಳಿಗಾದರೂ ರಫ್ತು ಮಾಡಲು ಅವಕಾಶ ಕೊಡಬೇಕೆಂದ ಭಾರತದ ಒತ್ತಾಯ ಕೂಡಾ ಫಲಿಸಲಿಲ್ಲ. ಬೌದ್ಧಿಕ ಆಸ್ತಿ ಮತ್ತು ಪೇಟೆಂಟ್‌ಗಳನ್ನು ಲೆಕ್ಕಿಸದೆ ಔಷಧಗಳನ್ನು ತಯಾರಿಸಿಕೊಳ್ಳುವ ಅವಕಾಶ ಏನಿದ್ದರೂ ಆಂತರಿಕ ಮಾರುಕಟ್ಟೆಗೆ ಮಾತ್ರ ಸೀಮಿತ ಎಂದು ನಿರ್ಧರಿಸಲಾಗಿದೆ.

ಇದರ ಪರಿಣಾಮವಾಗಿ ಭಾರತದ ಔಷಧಿ ಕಂಪೆನಿಗಳಿಗೆ ರಫ್ತು ಅವಕಾಶಗಳು ಹೆಚ್ಚಿಸಲಿಲ್ಲ. ಆದರೆ ಆಂತರಿಕ ಮಾರುಕಟ್ಟೆಯಲ್ಲಿ ಯಥಾಸ್ಥಿತಿ ಮುಂದುವರೆಯುತ್ತಿದೆ.

ಹಣ ಹೂಡಿಕೆ ಮತ್ತು ವ್ಯಾಪಾರ ಪೈಪೋಟಿ ಕುರಿತಂತೆ ನೀತಿ ನಿರೂಪಿಸುವ ಸಂಬಂಧ (ಹೊಸ ವಿಷಯಗಳ) ಚರ್ಚೆ ಸಧ್ಯಕ್ಕೆ ಕೂಡದು ಎಂದು ಭಾರತ ಕೊನೆಗಳಿಗೆ ವರೆಗೆ ಹಠ ಹಿಡಿಯಿತು. ಇನ್ನೆರಡು ವರ್ಷ ಆ ವಿಷಯಗಳನ್ನು ಎತ್ತುವುದಿಲ್ಲ ಎಂಬ ಭರವಸೆ ಮಾತ್ರ ಬಂದಿತು.

ಸಾಲ ಮತ್ತು ಹಣಕಾಸು, ತಂತ್ರಜ್ಞಾನ ವರ್ಗಾವಣೆ ಈ ಎರಡು ವಿಷಯಗಳು ಸಹಾ ಡಬ್ಲ್ಯೂಟಿಓ ಪರಿಧಿಗೆ ಬರಬೇಕು. ನೀತಿ ನಿರ್ಧಾರವಾಗಬೇಕು ಎಂಬುದು ಭಾರತದ ಕಡೆಯಿಂದ ಬಂದ ಇನ್ನೊಂದು ಒತ್ತಾಯ. ನಾಲ್ಕು ವರ್ಷಗಳ ನಂತರ ಅವುಗಳ ಬಗೆಗೆ ಪ್ರತ್ಯೇಕ ಚರ್ಚೆ ಆರಂಭವಾಗಬಹುದು ಎಂಬುದಕ್ಕೆ ಒಪ್ಪಲಾಗಿದೆ.

ಹೊಸ ವಿಷಯಗಳ ಚರ್ಚೆ ಆರಂಭ ಬೇಡವೆಂದು ಹೇಲಿದ್ದಕ್ಕೆ; ಅದನ್ನು ಎರಡು ವರ್ಷ ಮುಂದಕ್ಕೆ ಹಾಕಿದ್ದರೂ ಹಣ ಹೂಡಿಕೆ, ವ್ಯಾಪಾರ ಪೈಪೋಟಿ, ಸರಕಾರ ಮೂಲಗಳಿಂದ ಸರಕು ಖರೀದಿ ಮತ್ತು ರಾಷ್ಟ್ರಗಳು ಪರಸ್ಪರ ವ್ಯಾಪಾರ ಸೌಲಭ್ಯಗಳನ್ನು ಸ್ವಂತ ಮರ್ಜಿಯಿಂದ ಸೃಷ್ಟಿಸಿಕೊಡುವುದು ಈ ನಾಲ್ಕು ವಿಷಯಗಳ ಬಗೆಗೆ ಪೂರ್ವಭಾವಿ ಅಧ್ಯಯನಕ್ಕೆ ಕಾರ್ಯತಂಡಗಳನ್ನು ರಚಿಸಿ ಆಗಿದೆ. (ಈ ನಾಲ್ಕು ವಿಷಯ ಸಿಂಗಪುರ ವಿವಾದಗಳು ಎಂದೇ ಹೆಸರು ಪಡೆದಿವೆ. ಸಿಂಗಪುರ ಸಮಾವೇಶದಲ್ಲಿ ಇದಕ್ಕೆ ಒಪ್ಪಿರಲಿಲ್ಲ).

ಒಟ್ಟಾರೆ ವಿಮರ್ಶೆ ಮಾಡುವುದಾದರೆ ಭಾರತದ ಪಾಲಿಗೆ ವಿಶೇಷ ಅನುಕೂಲವೇನೂ ಆಗಲಿಲ್ಲ. ಆದರೆ ಒಂದು ರೀತಿಯಲ್ಲಿ ಗದ್ದಲ ಎಬ್ಬಿಸಿದ್ದರಿಂದ ಸ್ವಲ್ಪವೂ ವಿಚಲಿತವಾಗದೇ ಉಳಿದಿದ್ದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಕಣ್ಣು ಬಿಟ್ಟು ನೋಡುವಂತಾಯಿತು. ನಿಜವಾಗಿ ಏನೂ ದಕ್ಕದೆ ಹೋಗಿದ್ದರೂ ಧಾರಾಳವಾಗಿ ಭರವಸೆಗಳು ದೊರೆತಿವೆ. ಸಧ್ಯಕ್ಕೇನು ರಿಯಾಯ್ತಿಗಳಿರಲಿಲ್ಲ. ದೀರ್ಘಕಾಲೀನ ಪರಿಣಾಮ ಇಲ್ಲದಿರುವುದಿಲ್ಲ.

ಆ ದೀರ್ಘಾವಧಿ ಪರಿಣಾಮಗಳ ಬಗೆಗೆ ವಿಶ್ಲೇಷಿಸಿದಾಗ ಕೂಡಾ ಭಾರತ ಕಳೆದುಕೊಂಡಿರುವುದುಂಟು. ಪರಿಸರ ಸಂರಕ್ಷಣೆ ಹೆಸರಿನಲ್ಲಿ ರಫ್ತಿಗೆ ಅಡ್ಡಬರಬಾರದು ಎಂಬುದನ್ನು ಅನ್ಯ ರಾಷ್ಟ್ರಗಳು ಪೂರ್ತಿ ಒಪ್ಪಿಯೇ ಇಲ್ಲ. ಕೆಲವೊಂದು ಅಂಶಗಳಿಗೆ ಭಾರತ ಸಮ್ಮತಿಸಬೇಕಾಗುತ್ತದೆ. ಹಾಗೆ ಆಗಿರುವ ‘ಅಪಾಯ ಸೀಮಿತವಾದುದು. ಕೃಷಿಗೆ ಸಂಬಂಧಿಸಿದಂತೆ ಆಗುವ ಲಾಭಕ್ಕೆ ಆ ರೀತಿ ಬೆಲೆ ತೆರಬೇಕಾಗುತ್ತದೆ’ ಎಂದು ಮುರಸೋಳಿ ಮಾರನ್ ಸಮಜಾಯಿಷಿ ನೀಡಿದ್ದಾರೆ.

ಮಿಕ್ಕೆಲ್ಲ ವಿಷಯಗಳಿಗಿಂತ ಭಾರತದ ಮಟ್ಟಿಗೆ ಕೃಷಿ ರಫ್ತು ಮತ್ತು ಸೇವಾ ಸೌಲಭ್ಯ ರಫ್ತು ಮುಖ್ಯವೆಂದು ಸಹಜವಾಗಿ ಭಾವಿಸಬೇಕಾಗುತ್ತದೆ.

ಡಬ್ಲ್ಯೂಟಿಓ ಧೋರಣೆಯಿಂದಾಗಿ ಆರ್ಥಿಕ ಉದಾರೀಕರಣಕ್ಕೆ ಧಕ್ಕೆ ಉಂಟಾಗುವುದಿಲ್ಲವೇ ಎಂಬ ಪ್ರಶ್ನೆಗೆ ಸಚಿವರು ಹೊರಗಿನವರ ಯಾವುದೇ ಒತ್ತಾಯಕ್ಕಲ್ಲದೆ ಸ್ವತಃ ಉದಾರಿಕರಣವನ್ನು ಬಲಪಡಿಸಿಕೊಳ್ಳಬೇಕಾಗುತ್ತದೆ ಎನ್ನುವ ಪಾಠವನ್ನು ಭಾರತ ಕಲಿಯಬೇಕಾಗಿದೆ’ ಎಂದು ಹೇಳಿದ್ದು ಗಮನಾರ್ಹವೆನಿಸುತ್ತದೆ.

ಬರಿದೇ ಗದ್ದಲವೆಬ್ಬಿಸಿದ್ದೇ ಬಂತೆಂದು ಕಾಂಗ್ರೆಸ್ ಟೀಕಿಸಿದೆ. ವಿರೋಧ ಪಕ್ಷವಾಗಿ ಇಂಥ ಪ್ರತಿಕ್ರಿಯೆ ನೀಡುವುದು ಸಹಜ.

೨೧-೧೧-೨೦೦೧