ತತ್ವ ಆದರ್ಶ ಏನೇ ಇದ್ದರೂ ಹೊಟ್ಟೆಪಾಡು ಮುಖ್ಯ.

ಇದೊಂದು ಪರಮ ಸತ್ಯ – ರಾಜಕೀಯದಲ್ಲಿ ಇರುವ ಜನ ಕೂಡಾ ಇದಕ್ಕೆ ಹೊರತಾದವರಲ್ಲ. ಆದ್ದರಿಂದಲೇ ರಾಜಕೀಯ ಏನೇ ಇದ್ದರೂ ಆರ್ಥಿಕ ಅಂಶಗಳು ನಿರ್ಣಾಯಕ ಆಗುತ್ತವೆ.

ಆಡಳಿತಾರೂಢ ಕೂಟದ ಮುಖ್ಯ ಪಕ್ಷವಾದ ಬಿಜೆಪಿ ಎದುರಿಸುತ್ತಿರುವ ಸಂದಿಗ್ಧ ಮತ್ತು ಅದು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಈ ಮಾತಿಗೆ ನಿದರ್ಶನ.

ಈಗಾಗಲೇ ಹಲವು ಪ್ರಸಂಗಗಳಲ್ಲಿ ಬಹಿರಂಗ ಆಗಿರುವಂತೆ ಬಿಜೆಪಿ ಹಾಗೂ ಸಂಘ ಪರಿವಾರದ ಇತರ ಅಂಗಗಳ ನಡುವಣ ಸಂಬಂಧ ಹಳಸಿಹೋಗುತ್ತಿದೆ. ಈಗಂತೂ ಬಿಜೆಪಿ ದಿನೇ ದಿನೇ ಸಂಗ ಪರಿವಾರದ ನಡುವೆಯೇ ಏಕಾಂಗಿಯಾಗುತ್ತಿದೆ. ಆರೆಸ್ಸೆಸ್‌, ವಿಎಚ್‌ಪಿ ಹಾಗೂ ಬಿಎಂಎಸ್ ಮುಖ್ಯಸ್ಥರು ಭಾರಿ ಮುನಿಸುಕೊಂಡು ‘ನಮ್ಮ ದಾರಿ ನಮಗೆ, ನಿಮ್ಮ ದಾರಿ ನಿಮಗೆ’ ನೀವು ನಮ್ಮ ಮಾತು ಕೇಳದಿದ್ದರೆ’ ಎಂದು ಹೇಳುತ್ತಿರುವಂತೆ ಕಾಣುತ್ತಿದೆ. ಬಿಜೆಪಿ ನಾಯಕರು ಪರಿವಾರದವರನ್ನು ಎದುರು ಹಾಕಿಕೊಳ್ಳುವುದಕ್ಕೆ ಸಿದ್ಧವಿಲ್ಲ ಎಂದು ತೋರಿಸಿಕೊಂಡರೂ ‘ನಮಗೆ ನಮ್ಮದೇ ಆದ ಅನಿವಾರ್ಯತೆ ಇದೆ’ ಎಂದು ತೋರಿಸಿಕೊಳ್ಳುತ್ತಿದ್ದಾರೆ.

ವಾಸ್ತವಾಗಿ ಬಿಜೆಪಿ ಮಾತ್ರವೇ ಮನ ಬಂದ ನಿರ್ಧಾರಗಳನ್ನು ಕೈಗೊಳ್ಳುವಂತಿಲ್ಲ. ಆಡಳಿತಾರೂಢ ಎನ್‌ಡಿಎನಲ್ಲಿರುವ ಇತರ ಪಕ್ಷಗಳ ಮಾತು ಕೇಳಬೇಕಾಗುತ್ತದೆ.

ಈ ಮಾತನ್ನು ಹೇಳಿದರೆ ಪರಿವಾರದವರು ಕೇಳುವುದಿಲ್ಲ. ಮಂದಿರ ವಿವಾದ ಬಂದಾಗ ಹಿಂದುತ್ವ ನೆರವಿಗೆ ಬರಲಿಲ್ಲವೇ ಎಂದು ಕೇಳುತ್ತಾರೆ?

ಪರಿವಾರದವರಿಗೆ ಪಾಶ್ಚಿಮಾತ್ಯ ಎಂದು ಹೆಸರಿಸಬಹುದಾದ ನೀತಿ ಹಿಡಿಸುವುದಿಲ್ಲ. ಅಭಿವೃದ್ಧಿ, ಕಾರ್ಮಿಕ ವ್ಯವಹಾರಗಳು ಮುಂತಾದ ವ್ಯವಹಾರಗಳ ವಿಷಯ ಬಂದಾಗ ಮಾರುಕಟ್ಟೆ ಪ್ರಧಾನ ವ್ಯವಸ್ಥೆ ಸಾಧ್ಯವಾಗದು. ಆರ್ಥಿಕ ವಿಷಯಗಳಲ್ಲಿ ಸ್ವದೇಶಿ ಎಂದರೆ ಹೇಗಿರಬೇಕೆಂದು ಬಿಡಿಸಿ ಹೇಳುವ ಶಕ್ತಿ ಪರಿವಾರದವರಿಗೆ ಇಲ್ಲ.

ಬಿಜೆಪಿಗೂ ಏನೂ ನಿಚ್ಚಳವಾಗುತ್ತಿಲ್ಲ. ಅದೇನಿದ್ದರೂ ವಿಶ್ವ ವಾಣಿಜ್ಯ ಸಂಸ್ಥೆ (ಡಬ್ಲ್ಯೂಟಿಓ) ಹಾಗೂ ಅಂತರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಅಂದರೆ ವಿಶ್ವಬ್ಯಾಂಕ್ ಒಂದು ಅಂಗ. ಹೇಳಿದಂತೆ ಕೇಳುತ್ತಿದೆ ಎಂದು ಪರಿವಾರದ ಮುಖಂಡರು ದೂರುತ್ತಿದ್ದಾರೆ.

ಬಿಜೆಪಿ ನಾಯಕರು ಮತ್ತು ಪರಿವಾರದ ಇತರ ಮುಖಂಡರ ನಡುವಣ ತಿಕ್ಕಾಟ ಈಚಿನ ದಿನಗಳಲ್ಲಿ ವಿಪರೀತಕ್ಕೆ ಹೋಗಲು ಎರಡು ವಿವಾದಗಳು ಕಾರಣವಾದವು. ಷೇರು ವಿಕ್ರಯ ಹಾಗೂ ವಿದೇಶಿ ನೇರ ಬಂಡವಾಳಕ್ಕೆ ಅಧಿಕ ಅವಕಾಶ.

ಅಧಿಕಾರಕ್ಕೆ ಬಂದ ೧೯೮೯ರಿಂದಲೇ ಸಂಘ ಪರಿವಾರ ತನ್ನ ಮೇಲೆ ಬಿದ್ದ ಯಾವುದೇ ಪ್ರಸಂಗ ವಿಪರೀತಕ್ಕೆ ಹೋಗದಂತೆ ಬಿಜೆಪಿ ನೋಡಿಕೊಂಡಿತು. ಆದರೆ ಈಗ ಮೊತ್ತ ಮೊದಲ ಬಾರಿಗೆ ಆರ್ಥಿಕ ನೀತಿ ಕುರಿತ ವಿವಾದ ಎದ್ದಾಗ ಬಿಜೆಪಿ ನಾಯಕತ್ವವು ಬಲವಾಗಿ ಎದುರುತ್ತರ ಕೊಡತೊಡಗಿದೆ. ಆಳುವ ವರ್ಗಕ್ಕೆ ಸೇರಿದ ತಾವು ಅಧಿಕಾರದಲ್ಲಿ ಉಳಿಯಲು ಏನು ಮಾರ್ಗ ಅನುಸರಿಸಬೇಕೋ ಅದು ಮುಖ್ಯವೇ ಹೊರತು ತತ್ವಾದರ್ಶಗಳಲ್ಲವೆಂದು ಬಿಜೆಪಿಯವರು ಹೇಳತೊಡಗಿದ್ದಾರೆ.

ಹತ್ತನೇ ಯೋಜನೆ ಕರಡನ್ನು ಮುಂದಿನ ಕ್ರಮಕ್ಕಾಗಿ ಅಂಗೀಕರಿಸುತ್ತಾ ಯೋಜನೆ ಆಯೋಗದ ಪೂರ್ಣ ಪ್ರಮಾಣದ ಸಮಾವೇಶದಲ್ಲಿ ಈಚೆಗೆ ಮಾತನಾಡಿದ ಪ್ರಧಾನಿ ಎ.ಬಿ. ವಾಜಪೇಯಿ ಅವರು ನೆನಗುದಿಗೆ ಬಿದ್ದಿರುವ ಎರಡೂ ವಿವಾದ ಕುರಿತಂತೆ ಸ್ಪಷ್ಟವಾಗಿ ಹೇಳಿದರು.

‘ಸರಕಾರಿ ವಲಯ ಉದ್ಯಮಗಳ ಖಾಸಗೀಕರಣ ಮಾರ್ಗದಲ್ಲಿ ತುಂಬು ಉತ್ಸಾಹದಿಂದ ಕ್ರಮಿಸುತ್ತೇವೆ’.

‘ಭಾರತೀಯ ಉದ್ಯ ರಂಗಕ್ಕೂ ರಾಷ್ಟ್ರೀಯ ಹಿತಾಸಕ್ತಿಗೂ ಧಕ್ಕೆ ಬರದಂಥ ರಿತಿಯಲ್ಲಿ ವಿದೇಶ ನೇರ ಬಂಡವಾಳ ನೀತಿಯನ್ನು ಅನುಸರಿಸುತ್ತೇವೆ’.

ಅಂದರೆ ಎರಡೂ ವಿಚಾರಗಳಲ್ಲಿ ಇದುವರೆಗಿನ ಅಧಿಕೃತ ನೀತಿಯೆನಿದೆಯೋ ಅದರಿಂದ ಹಿಂದೆ ಸರಿಯುವ ಪ್ರಶ್ನೇಯೇ ಇಲ್ಲ.

ಹತ್ತನೇ ಯೋಜನೆಯಲ್ಲಿ ಶೇಕಡಾ ೮ರ ವೃದ್ಧಿದರ ಸಾಧಿಸಬೇಕೆನ್ನುವ ಗುರಿ ಇದೆ. ಈಗ ಸಾಧ್ಯವಾಗಿರುವುದು ಶೇ.೫.೩ರ ವೃದ್ಧಿ ದರ. ಐದು ವರ್ಷದಲ್ಲಿ ಈ ಎತ್ತರದ ಗುರಿ ಸಾಧಿಸುವುದು ಸಾಧ್ಯವೇ? ಅದು ಸಾಧ್ಯವಾಗಬೇಕೆನ್ನುತ್ತಾರೆ ವಾಜಪೇಯಿ.

ತೆರಿಗೆ ಸಂಗ್ರಹ ಸಹಾ ಹೆಚ್ಚಾಗಬೇಕಿದೆ. ರಾಷ್ಟ್ರೀಯ ಒಟ್ಟಾರೆ ಉತ್ಪನ್ನದ ಅಂದರೆ ಜಿಡಿಪಿಯ, ಶೇ ೧೦.೩ರಷ್ಟು ತೆರಿಗೆ ಸಂಗ್ರಹ ಸಾಧ್ಯವಾಗಬೇಕು. ಈಗ ಸಂಗ್ರಹವಾಗುತ್ತಿರುವುದು ಶೇ.೮.೩ ಮಾತ್ರ. ಜನರಿಗೆ ಭಾರ ಕಡಿಮೆಯಾಗಬಾರದೆಂದರೆ ದುಡಿಮೆ ಹೆಚ್ಚಾಗಬೇಕು. ಅಂದರೆ ಜಿಡಿಪಿಯೇ ಬೆಳೆಯಬೇಕು. ಅದು ಸಾದ್ಯವಾಗಬೇಕಾದರೆ ಉದ್ಯಮವೃದ್ಧಿ ಸಾಧ್ಯವಾಗಬೇಕು. ಅದಕ್ಕಾಗಿ ವಿದೇಶಿ ನೇರ ಬಂಡವಾಳ ಹೆಚ್ಚು ಹರಿದು ಬರಲು ಸಾಧ್ಯವಾಗಬೇಕು.

ಪ್ರತಿವರ್ಷ ೭೫೦ ಕೋಟಿ ಡಾಲರ್‌ ವಿದೇಶಿ ಬಂಡವಾಳ ಲಬ್ಯವಾಗಬೇಕು. ಸಧ್ಯ ೩೫೦ ಕೋಟಿ ಡಾಲರ್‌ನಷ್ಟು ಮಾತ್ರ ವಿದೇಶಿ ನೇರ ಬಂಡವಾಳ ಸಿಗುತ್ತಿದೆ. ಖಾಸಗೀಕರಣದಿಂದ, ಅಂದರೆ ಷೇರು ವಿಕ್ರಯ ಕಾರ್ಯಾಚರಣೆಯಿಂದ ೭೮ ಸಹಸ್ರ ಕೋಟಿ ರೂಪಾಯಿ ಸಂಗ್ರಹಿಸಲು ಸಾಧ್ಯವಾಗಭೇಕಿದೆ. ಅದು ಅನಿವಾರ್ಯ.

ಕೃಷಿ ಕ್ಷೇತ್ರದಲ್ಲಿ ಐದು ಕೋಟಿ ಜನರಿಗೆ ಹೊಸದಾಗಿ ಉದ್ಯೋಗಾವಕಾಶ ಒದಗಿಸಬೇಕಿದೆ. ಎಲ್ಲದಕ್ಕೂ ಬಂಡವಾಳ ಬೇಕು. ಈಗ ವಿದೇಶಿ ಗ್ರಾಂಟ್ ಸಿಗುವದಿಲ್ಲ. ವಿದೇಶಿ ಸಾಲವು ರಿಯಾಯ್ತಿ ದರದಲ್ಲಿ ಸಿಗುವುದಿಲ್ಲ. ದುಬಾರಿ ಬಡ್ಡಿ ಸಾಲ ಎತ್ತಿದರೆ ಮುಳುಗಿ ಹೋಗುತ್ತೇವೆ.

ವಿದೇಶಿ ಬಂಡವಾಳ ತರಬಲ್ಲ ಹಣಕಾಸು ಸಂಸ್ಥೆಗಳು ಭಾರತದ ಕಂಪೆನಿಗಳ ಷೇರು ಖರೀದಿಸುವ ಮೂಲಕ ಹಣ ತೊಡಗಿಸಬಲ್ಲವು. ಆದರೆ ಅವು ದಿಢೀರನೆ ಷೇರು ಮಾರಿ ಹಣ ಸಂಗ್ರಹಿಸಿ ವಾಪಸಾಗುತ್ತವೆ. ಅದು ಎಂಥ ಅಪಾಯ ಎಂಬುದು ಇತರ ಏಷ್ಯಾ ರಾಷ್ಟ್ರಗಳ ವಿಷಯದಲ್ಲಿ ಈಗಾಗಲೇ ಸಾಬೀತಾಗಿದೆ.

ಇನ್ನು ಉಳಿದಿರುವ ವಿದೇಶಿ ನೇರ ಬಂಡವಾಳ ಮಾರ್ಗಾನುಸರಣೆ ಮಾತ್ರವೇ. ಈ ಬಂಡವಾಳವಾದರೋ ಭಾರತದ ನೆಲದ ಮೇಲೆ ಜಾರಿ ಆಗುವ ಉದ್ಯಮ ಯೋಜನೆಗಳಲ್ಲಿ ಹೂಡಿಕೆಯಾಗುತ್ತದೆ. ಬೇಕೆಂದಾಗ ವಾಪಸು ಎತ್ತಿಕೊಂಡು ಹೋಗಲಾಗದು. ಲಾಭ ಗಳಿಸಲೇಬೇಕೆಂಬ ಒತ್ತಾಯ ಇರುತ್ತದೆ. ಆದ್ದರಿಮದಲೇ ವಿದೇಶಿ ನೇರ ಬಂಡವಾಳ ಅನಿವಾರ್ಯ. ಭಾರತೀಯ ಉದ್ಯಮಗಳವರು ಈ ಬಂಡವಾಳದ ಜೊತೆಗೆ ಪಾಲುದಾರರಾಗಿರುವುದರಿಂದ ಅಧಿಕ ಕ್ಷೇಮ.

ಪ್ರಧಾನಿ ಮೊನ್ನೆಯಷ್ಟೇ ಐರೋಪ್ಯ ಪ್ರವಾಸದ ವೇಳೆ ಡೆನ್ಮಾರ್ಕ್‌ನಲ್ಲಿ ಭಾರತ ಐರೋಪ್ಯ ಒಕ್ಕೂಟ ವಾಣಿಜ್ಯ ಶೃಂಗ ಸಭೆಯಲ್ಲಿ ‘ಆರ್ಥಿಕ ಸುಧಾರಣಾ ಕ್ರಮ ಜಾರಿಗೆ ತರಲು ಒಂದು ಬಗೆಯ ಘಾತ ಚಿಕಿತ್ಸೆ ನಡೆಯಬೇಕೆಂದರೆ; ಅದೆಲ್ಲ ಭಾರತದಲ್ಲಿ ನಡೆಯುವುದಿಲ್ಲ. ನಮ್ಮಲ್ಲಿರುವುದು ಪ್ರಜಾಸತ್ತಾತ್ಮಕ ಸರಕಾರ. ಆದಾಯದಲ್ಲಿ ಜೀವನ ಸ್ಥಿತಿಗತಿಯಲ್ಲಿ ಅನ್ಯದೇಶಗಳಿಗಿಂತ ಭಿನ್ನ’ ಎಂದರು.

ಆರ್ಥಿಕ ಸುಧಾರಣಾ ಕ್ರಮಗಳು ನೇರವಾಗಿ ನಡೆಯಬೇಕು ಎನ್ನುವ ಪಾಶ್ಚಿಮಾತ್ಯರಿಗೆ ಭಾರತದ ಮಾರುಕಟ್ಟೆ ಮೇಲೆಯೇ ಕಣ್ಣು. ಕ್ರಮಗಳ ಜಾರಿ ನಿಧಾನ ಎಂದವರು ಟೀಕಿಸುತ್ತಾರೆ. ಅದಕ್ಕೆ ಉತ್ತರಿಸಿದ ಪ್ರಧಾನಿ ಅಗತ್ಯಗಳು, ಹಿತಾಸಕ್ತಿಗಳು ಮಾತ್ರವಲ್ಲದೆ ದೃಷ್ಟಿಕೋನಗಳು ಕೂಡಾ ನಮ್ಮಲ್ಲಿ ವೈವಿಧ್ಯಮಯ’ ಎಂದು ನುಡಿದರು.

ವಿವಿಧ ದೇಶಗಳ ಆರ್ಥಿಕತೆಗಳನ್ನು ಆನೆ, ಹುಲಿ, ಡ್ರೇಗನ್ ಎಂಬ ಪ್ರಾಣಿಗಳ ಹೆಸರಿನಲ್ಲಿ ಹೋಲಿಸುವುದುಂಟು. ಈ ಉಪಮೆಯಿಂದ ನನಗೇನೂ ಬಾಧೆಯಿಲ್ಲ. ಮೈನ ಭಾರದ ಎಲ್ಲ ಭಾಗಗಳನ್ನೂ ಒಗ್ಗೂಡಿಸಿದಂತೆ ಮುಂದೆ ಮುಂದೆ ಸಾಗಲು ಆನೆಗೆ ಸಮಯ ಹಿಡಿಯಬಹುದು. ಒಮ್ಮೆ ನಡೆಯತೊಡಗಿದರೆ ಆ ಸಾಂಧ್ರ ಜೀವಿಯ ಗಮನ ಬೇರೆಡೆ ಸೆಳೆಯುವುದು, ಅದನ್ನು ನಿಧಾನಗೊಳಿಸುವುದು ಅಥವಾ ನಿಲ್ಲಿಸುವುದು ಇಲ್ಲವೇ ಹಿಂದಕ್ಕೆ ಮರಳಿಸುವುದು ಸುಲಭವಲ್ಲ! ಅದು ನಡೆಯತೊಡಗಿದರೆ ಅರಣ್ಯವೇ ನಡುಗುತ್ತದೆ? ಎಂದು ಉತ್ತರ ಕೊಟ್ಟರು.

ಜಾಗತಿಕ ಆರ್ಥಿಕತೆಯ ಅಸಮತೋಲವನ್ನು ತರಾಟೆಗೆ ತೆಗೆದುಕೊಳ್ಳದೆ ಬಿಡಲಿಲ್ಲ. ಇದೆಲ್ಲ ಏನೇ ಇದ್ದರೂ ಭಾರತದಲ್ಲಿ ನೀತಿ ನಿರ್ಧಾರ ಮತ್ತು ಆರ್ಥಿಕ ಕಾರ್ಯಕ್ರಮಗಳೆಲ್ಲ ವಿಶ್ವಬ್ಯಾಂಕ್ ಅಂಕೆಯಲ್ಲಿದೆ ಎಂಬ ಆರೋಪ ಮಾತ್ರ ನಿಜ ಎನಿಸುತ್ತದೆ.

ಹಣದುಬ್ಬರ ನಿಯಂತ್ರಣ ಸಾಧಿಸಬೇಕೆಂಬ ಮದ್ದನ್ನು ಭಾರತ ಸೇರಿಸುತ್ತಿದೆ. ಅದು ವಿಶ್ವಬ್ಯಾಂಕ್ ಸಲಹೆಗಾರರು ನೀಡಿದ ಮದ್ದು. ಪರಿಣಾಮವಾಗಿ ರೋಗ ನಿವಾರಣೆ ಆಗಿದೆ. ಅಂದರೆ ಹಣದುಬ್ಬರ ಹತೋಟಿಗೆ ಬಂದಿದೆ. ಈ ಸಾಧನೆ ಮತ್ತು ಸಾಮರ್ಥ್ಯವು ಯಾವುದೇ ಸಂದರ್ಭದಲ್ಲಿ ಆರ್ಥಿಕತೆಯು ಕುಸಿಯದಂತೆ ನೋಡಿಕೊಳ್ಳಬಹುದು. ಹಲವು ದೇಶಗಳು ಇದನ್ನು ಸಾಧಿಸಲಾಗದೆ ಕುಸಿತ ಕಂಡುಕೊಂಡಿವೆ; ನಿಜ. ಆದರೆ ಮುಂದೇನು?

ಹಣದುಬ್ಬರ ಕೀಂಚಿತ್ ಜಾಗೃತವಾಗಿದ್ದರೇನೇ ವಾಣಿಜ್ಯೋದ್ಯಮ ಉಲ್ಲಸಿತವಾಗಿರಲು ಸಾಕು. ತಪ್ಪಿದರೆ? ಈಗ ಏನಾಗಿದೆ ಎಂಬುದನ್ನೇ ನೋಡಬಹುದು. ಎಲ್ಲೆಡೆ ಸರಕು ಮತ್ತು ಸೇವಾ ಸೌಲಭ್ಯಗಳು ಧಂಡಿಯಾಗಿವೆ. ಸಮೃದ್ಧಿ ಸರ್ವತ್ರವಾಗಿದೆ. ಆದರೆ ಅದನ್ನು ಅನುಭವಿಸಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಜನರ ಖರೀದಿ ಸಾಮರ್ಥ್ಯವೇ ಉಡುಗಿ ಹೋಗಿದೆ. ಆ ಸಾಮರ್ಥ್ಯವನ್ನು ವೃದ್ಧಿಗೊಳಿಸದೆ ಜನರಿಗೆ ನೆಮ್ಮದಿಯಿಲ್ಲ.

ಅಂದರೆ ನಮಗೆ ಸುಧಾರಣಾ ಕ್ರಮಗಳನ್ನು ನಮಗೆ ಬೇಕಾದಂತೆ ನೇರ್ಪಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಯಾವಾಗ ಆರಂಭಿಸಿದ್ದನ್ನು ಯಾವಾಗ ಎಲ್ಲಿ ನಿಧಾನಗೊಳಿಸಬೇಕು; ನಿಲ್ಲಿಸಬೇಕು ಎಂಬುದು ಗೊತ್ತಾಗುತ್ತಿಲ್ಲ; ಇಲ್ಲವೇ ಅದು ಸಾಧ್ಯವಾಗುತ್ತಿಲ್ಲ.

ಈಗ ವಿದೇಶಿ ಬಂಡವಾಳ ಹರಿದು ಬರಲು ಕಾದು ಕುಳಿತಿರುವುದಾಗಿದೆ. ಕಷ್ಟದ ದಿನಗಳಲ್ಲೂ ಕಂಪೆನಿ ವಲಯ ಚೇತರಿಸಿಕೊಳ್ಳುತ್ತಿರುವುದನ್ನು ಗಮನಿಸಲು ಸಾಧ್ಯವಾಗುತ್ತಿಲ್ಲ. ಕಾರ್ಮಿಕ ವಿಷಯಗಳ ಸುಧಾರಣಾ ಕ್ರಮಕ್ಕೆ ಕಾಯಬೇಕಾಗಿದೆ.

ಉಸಿರು ಕಟ್ಟಿಸುವ ಸಧ್ಯದ ಆರ್ಥಿಕ ಪರಿಸ್ಥಿತಿಯಿಂದ ಬಿಡುಗಡೆ ಯಾವಾಗ? ಉತ್ತರ ಸುಲಭವಲ್ಲ. ಒಂದು ಮಾತು ನಿಜ; ವಿದೇಶಿ ಬಂಡವಾಳದ ಜೊತೆ ವಿದೇಶಿ ವ್ಯಾಪಾರ ಶಕ್ತಿಗಳು ಭಾರತದೊಳಗೆ ಪ್ರವೇಶಿಸಿ ಅವುಗಳಿಗಾಗಿ ಮಾರುಕಟ್ಟೆಗಳನ್ನು ತೆರೆದಿಟ್ಟ ಮೇಲೆ ಖರೀದಿ ಸಾಮರ್ಥ್ಯ ಏರುತ್ತದೆ!

ಪರಿವಾರ-ಬಿಜೆಪಿ ಜನ ಮಾತ್ರವಲ್ಲ; ಕಾಂಗ್ರೇಸಿನವರೂ ಒಂದು ಮಾತು ಅರ್ಥ ಮಾಡಿಕೊಳ್ಳಬೇಕು. ಆರ್ಥಿಕ ಮಾತ್ರವಲ್ಲ; ರಾಜಕೀಯ ಸ್ಥಿರತೆ ಕೂಡಾ ಸಾಧ್ಯವಾಗದೆ ನಿರ್ವಾಹವಿಲ್ಲ.

೧೬-೧೦-೨೦೦೨