ಸೈನ್ಯ ನುಗ್ಗಿಸಿ ಆಕ್ರಮಣ ನಡೆಸುವುದು ಒಂದು ರೀತಿ. ಹೊರಗಿನಿಂದಲೇ ಕೈವಾಡ ನಡೆಸಿ ದೇಶದೊಳಗಿನ ಆರ್ಥಿಕತೆ ಹಾಳು ಮಾಡುವುದು ಇನ್ನೊಂದು ರೀತಿ.

ರೇಷ್ಮೆ ವಿಷಯದಲ್ಲಿ ಭಾರತಕ್ಕೆ, ಮುಖ್ಯವಾಗಿ ಕರ್ನಾಟಕ ರಾಜ್ಯದ ಅನುಭವಕ್ಕೆ ಬಂದಿರುವ ವಿದ್ಯಮಾನ ಇದು.

ಜಪಾನ್ ಪಾಲಿಗೆ ರೇಷ್ಮೆ ಕೃಷಿಗೆ ಅಗತ್ಯವಾಗುವ ಭೂಪ್ರದೇಶ ಹೆಚ್ಚು ಲಭ್ಯವಿಲ್ಲ. ಉದ್ಯಮೀಕರಣವು ಸಾಕು ಬೇಕಾದಷ್ಟು ಉದ್ಯೋಗಾವಕಾಶ ಸೃಷ್ಟಿಸಿದೆ. ಆದ್ದರಿಂದ ಹಿಪ್ಪು ನೇರಳೆ ಸೊಪ್ಪು ಬೆಳೆಸಿ, ರೇಷ್ಮೆ ಹುಳು ಬೆಳೆಸುವ ಕೃಷಿ ಪರಾವಲಂಬನೆಯಾಗಿ ಉಳಿಯಲಿಲ್ಲ. ಹಂತ-ಹಂತವಾಗಿ ರೇಷ್ಮೆ ಉತ್ಪಾದನೆಯನ್ನು ಕಥಬಿಡಬೇಕಾಯಿತು.

ಆದರೆ ತನ್ನ ಪರಿಣಿತಿಯನ್ನು ಭಾರತಕ್ಕೆ ಧಾರೆ ಎರೆಯಲು ಜಪಾನು ಮುಂದಾಯಿತು. ರೇಷ್ಮೆ ಮೊಟ್ಟೆ ಉತ್ಪಾದಿಸುವ, ಅತ್ಯುತ್ತಮ ಗೂಡು ಬೆಳೆಯುವ ಆಧುನಿಕ ತಂತ್ರಜ್ಞಾನ ಭಾರತದ ರೈತನಿಗೆ ಜಪಾನಿನಿಂದ ದಕ್ಕಿತು.

ಅದೇ ವೇಳೆ ನೆರೆ ರಾಷ್ಟ್ರ ಚೀನಾ, ರೇಷ್ಮೆ ನೂಲನ್ನೇ ತಾನು ಉತ್ಪಾದಿಸಿ ಇದೇ ಭಾರತದೊಳಕ್ಕೆ ನುಗ್ಗಿಸಲು ಮುಂದಾಯಿತು. ಯಶಸ್ವಿಯಾಯಿತು. ಚೀನಾ ಸಹ ಜಪಾನ್‌ನಂತೆ ಪೌರ್ವಾತ್ಯ ಸಂಸ್ಕೃತಿಗೆ ಸೇರಿದ ರಾಷ್ಟ್ರ. ಆದರೆ ಅದೇ ಸಂಸ್ಕೃತಿಗೆ ಸೇರಿದ ಭಾರತದ ಮೇಲೆ ತನ್ನ ಸುರಿ ನೀತಿ ಪ್ರಯೋಗಿಸಿತು. ಲಕ್ಷಾಂತರ ಟನ್‌ಗಟ್ಟಲೆ ರೇಷ್ಮೆ ನೂಲು ನುಗ್ಗಿಸಿತು. ರೇಷ್ಮೆ ವಲಯದ ಆರ್ಥಿಕತೆಯನ್ನೇ ಹಾಳು ಮಾಡಿತು.

ಆರ್ಥಿಕ ವಿಚಾರ ಬಂದಾಗ ಸಂಸ್ಕೃತಿಯ ಪ್ರಶ್ನೆ ಲೆಕ್ಕಕ್ಕೆ ಬರುವುದಿಲ್ಲ. ದಂಡಿಯಲ್ಲಿ ಸೋದರಮಾವನೆ? ಮಹಾಭಾರತ ಯುದ್ಧ ನಡೆದಿದ್ದೇ ಪರಸ್ಪರ ದಾಯಾದಿಗಳಾದವರ ನಡುವೆ. ಗೀತೋಪದೇಶ ನೆರವಾಗಿದ್ದೇ ಯುದ್ಧ ನಡೆಯುವುದುಕ್ಕೆ. ಒಂದು ಮಾತು ನಿಜ; ಸಮಾನರ ನಡುವೆ ಯುದ್ಧ ನಡೆಯುತ್ತಿದೆ. ಜಯ ಅಪಜಯ ನಿರ್ಣಾಯಕ ಎನಿಸುತ್ತದೆ. ಅಸಮಾನರ ನಡುವೆ ಸೆಣಸಾಟದ ಮಾತು ಬೇರೆ. ದುರ್ಬಲರ ಮೇಲೆ ನಡೆದ ದಾಳಿ ಎನಿಸಿಕೊಳ್ಳುತ್ತದೆ.

ಆರ್ಥಿಕವಾಗಿ ದಾಳಿ ನಡೆಸಬಹುದು ಎನ್ನುವುದಕ್ಕೆ ಚೀನಾ ದೇಶವು ರೇಷ್ಮೆ ನೂಲನ್ನು ತಂದು ಸುರಿಯುತ್ತಿರುವದನ್ನು ನಿದರ್ಶನವಾಗಿ ನೀಡಬಹುದು. ವಿಶ್ವದ ಅತ್ಯುತ್ತಮ ನೂಲನ್ನು ಅಗ್ಗದಲ್ಲಿ ಅಧಿಕೃತವಾಗಿ ರಫ್ತು ಮಾಡಿತು. ಕಳ್ಳಸಾಗಣೆ ಸಹಾ ನಡೆಯಿತು. ಭಾರತದ ಕೃಷಿಕ ತಯಾರಿಸುವ ನೂಲಿಗೆ ಬೆಲೆಯೇ ಬರದಂತೆ ಆಯಿತು ಮಾತ್ರವಲ್ಲ; ಅತ್ಯುತ್ತಮ ನೂಲನ್ನು ತಯಾರಿಸಲೇ ಇಲ್ಲ. ಈಗಮತೂ ಅಗ್ಗದಲ್ಲಿ ಆಮದು ಸರಕು ಸಿಗುವಂತಿದ್ದರೆ ಅತ್ಯುತ್ತಮ ರೇಷ್ಮೆ ನೂಲನ್ನು ಸ್ವತಃ ತಯಾರಿಸಿಕೊಳ್ಳಬೇಕು ತಾನೇ ಏಕೆ? ನಿಜ. ಅಂತಿಮವಾಗಿ ಗ್ರಾಹಕನಿಗೆ ಪೈಪೋಟಿ ದರದಲ್ಲಿ ಸರಕು ಸಿಗುವಂತಾಗಬೇಕು ಎಂಬುದೇ ಪ್ರಧಾನವಾಗುತ್ತದೆ.

ಇದು ಜಾಗತೀಕರಣದ ಯುಗ. ಕೃತಕವಾಗಿ ಗೋಡೆ ನಿರ್ಮಿಸಿ, ಗಡಿ ಭದ್ರ ಮಾಡಿ ಜನರ ಹಿತ ಕಾಪಾಡುವುದಕ್ಕೆ ಆಗುವುದಿಲ್ಲ. ಸರಕು ಯಾವುದೇ ಆದರೂ ಧಂಡಿಯಾಗಿ ಲಭಿಸುವಂತೆ ಆದಾಗ ನೀರಿನಂತೆ ನುಗ್ಗಿ ನುಸುಳಿ ಹೊಸಲಿನ ಸಂದುಗೊಂದುಗಳಿಂದ ಒಳ ಬರುತ್ತದೆ. ಚೀನಾದ ರೇಷ್ಮೆಯ ದಾಳಿ ಇದಕ್ಕೆ ಒಲ್ಳೆಯ ಉದಾಹರಣೆ.

ಚೀನಾ ರೇಷ್ಮೆಯನ್ನು ಒಳಕ್ಕೆ ಬಿಟ್ಟುಕೊಳ್ಳುವುದಿಲ್ಲ ಎನ್ನುವ ನೀತಿ ನಿರ್ಧಾರ ಕೈಗೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಕೇಂದ್ರ ಸರಕಾರಕ್ಕೆ. ಇದು ದಕ್ಷಿಣ ರಾಜ್ಯಗಳ ಆರ್ಥಿಕ ಸಮಸ್ಯೆ; ಉತ್ತರದ್ದಲ್ಲ ಎಂಬ ಧೋರಣೆ ದೆಹಲಿಯಲ್ಲಿ ವಿಜೃಂಬಿಸಿದ್ದೇ ಕಾರಣ ಎಂದು ಹೇಳುವುದೂ ಉಂಟು. ಆದರೆ ಇದನ್ನು ಭಾಗಶಃ ಒಪ್ಪಲು ಸಾಧ್ಯ. ಬ್ರೆಜಿಲ್ ಮುಂತಾದ ದೇಶಗಳು ವಿಪರೀತ ಪ್ರಮಾಣದಲ್ಲಿ ಕಾಫಿ ಬೆಳೆಯದೇ ಇಲ್ಲದಿದ್ದರೆ ಭಾರತದ ಕಾಫಿಗೆ ಬೇಡಿಕೆ ಕಡಿಮೆ ಆಗುತ್ತಿರಲಿಲ್ಲ ಎಂಬುದೇ ನಿಜ.

ಅಷ್ಟೇಕೆ; ಖಾದ್ಯ ತೈಲವನ್ನು ಮಲೇಷ್ಯದಿಂದ ತರಿಸಿಕೊಳ್ಳುವುದೇ ಅಗ್ಗ ಎನಿಸಿಕೊಳ್ಳುವಾಗ ಕೇಂದ್ರ ಸರಕಾರವಾದರೂ ಭಾರತದ ಬೆಳೆಗಾರರ ಪರವಾಗಿ ನಿಲ್ಲುವುದಿಲ್ಲ. ನಿಲ್ಲಲಾಗದು. ಜಾಗತೀಕರಣ ಯುಗದಲ್ಲಿ ಇದು ಕಟು ಸತ್ಯ. ಇದರ ವಿಷಯ ಬಂದಾಗ ದಕ್ಷಿಣ ವಿರೋಧಿ ಧೋರಣೆ ಎಂಬ ಪ್ರಶ್ನೆಯೇ ಏಳುವುದಿಲ್ಲ.

ರೇಷ್ಮೆ ರಂಗದಲ್ಲಿ ನಾವು ಸೋತಿದ್ದೇಕೆ ಎಂಬುದನ್ನು ಒಂದಿಷ್ಟು ವಿಚಾರ ಮಾಡಬಹುದು. ಸುಧಾರಣೆ, ಆಧುನಿಕ ತಂತ್ರಜ್ಞಾನ ಎಂಬುದೆಲ್ಲ ಒಂದು ಹಂತಕ್ಕೆ ಮಾತ್ರ ನಿಂತುಹೋಯಿತು. ಗೂಡು ಉತ್ಪಾದನೆ ಹಂತದ ನಂತರ ಏನೂ ಸುಧಾರಣೆ ಆಗಲಿಲ್ಲ. ಜಪಾನಿ ನೆರವು ಎಂಬುದು ಸಹಾ ಪೂರ್ತಿ ಪ್ರಯೋಜನಕಾರಿ ಎನಿಸಲಿಲ್ಲ. ಬಿಳಿಗೂಡು, ಅಂದರೆ ಬೈವೋಲ್ಟೈನ್ ರೇಷ್ಮೆ ಎಲ್ಲ ಕಡೆ ಬೆಳೆಯಲಾಗಲಿಲ್ಲ.

ಸಾಂಸ್ಕೃತಿಕ ತಾಕಲಾಟಗಳು ಸಹಾ ಈ ಅಡ್ಡ ಪರಿಣಾಮಕ್ಕೆ ಕಾರಣ. ಸೊಪ್ಪು ಬೆಳೆದು ಹುಳುವಿಗೆ ತಿನ್ನಿಸಿ ಗೂಡು ಉತ್ಪಾದಿಸುವವರು ಮುಖ್ಯವಾಗಿ ಹಿಂದುಗಳು. ಬಿಸಿ ನೀರಿಗೆ ಬೆಳೆದ ಗೂಡನ್ನು ಹಾಕಿ ನೂಲು ಹೊರಕ್ಕೆ ಎಳೆಯುವವರು ಮುಸ್ಲಿಮರು. ತೆಗೆದ ನೂಲನ್ನು ಅಂದರೆ ಕಚ್ಚಾ ರೇಷ್ಮೆಯನ್ನು ಅವರು ಮಾರುವುದು ಮತ್ತೆ ಹಿಂದುಗಳಿಗೆ. ಈಗಲೂ ಹಿಂಸಾಚಾರದಲ್ಲಿ ಭಾಗಿ ಆಗಲೊಪ್ಪದ ಜೈನರು ರೇಷ್ಮೆ ಸಂಬಂಧಿಸಿದ ಯಾವ ವ್ಯವಹಾರಕ್ಕೂ ಬರುವುದಿಲ್ಲ. ಈಗಷ್ಟೇ ಕೆಲವರು ರೇಷ್ಮೆ ಜವಳಿ ವ್ಯಾಪಾರಕ್ಕೆ ಇಳಿದಿದ್ದಾರೆ.

ಚೀನಾದಲ್ಲಿ ಇಂಥ ಯಾವ ತಾಕಲಾಟವೂ ಇರುವುದಿಲ್ಲ. ವಿಶ್ವದ ಇನ್ನು ಯಾವ ರಾಷ್ಟ್ರವೂ ಉತ್ಪಾದಿಸಲಾಗದಂಥ ಅತ್ಯುತ್ತಮ ರೇಷ್ಮೆಯನ್ನು ಸುಲಭವಾಗಿ ತಯಾರಿಸುತ್ತದೆ. ರೇಷ್ಮೆ ಸಂಶೋಧನಾ ರಂಗ ಅಗ್ಗದ ತಂತ್ರಜ್ಞಾನವನ್ನು ರೂಪಿಸಿ ದೇಶಿ ರೇಷ್ಮೆ ದುಬಾರಿ ಆಗದಂತೆ ನೋಡಿಕೊಳ್ಳಲೇ ಇಲ್ಲ.

ಒಟ್ಟಿನಲ್ಲಿ ಅತ್ಯಂತ ಅಧಿಕ ಉದ್ಯೋಗಾವಕಾಶ ಕಲ್ಪಿಸುವ ಉದ್ಯಮ ಇದೀಗ ಚೀನಾ ವಶದಲ್ಲಿ. ಆ ದೇಶದವರು ಸಾಧಿಸಿದ ಸುಧಾರಣಾ ವೇಗ ನಮ್ಮದಾಗಲಿಲ್ಲ.

ಕರ್ನಾಟಕದಲ್ಲಿ ರೇಷ್ಮೆ ಹೇಗೋ ಹಾಗೆ ತಮಿಳುನಾಡಿನಲ್ಲಿ ಜವಳಿ ಉತ್ಪಾದಿಸುತ್ತಾರೆ. ತಿರುಪೂರು ಮತ್ತಿತರ ಪ್ರದೇಶಗಳಲ್ಲಿ ಹೊಸೈರಿ ಉತ್ಪಾದನೆ ಬಹಳ. ಪಂಚೆ, ಸೀರೆ, ಶರಟು, ಪ್ಯಾಂಟು ಮುಂತಾದವಕ್ಕೆ ಬಳಸುವುದು ನೇಯ್ದ ಬಟ್ಟೆ. ನೆಟ್ ಬನಿಯನ್, ಒಳ ಉಡುಪು ಮುಂತಾದ ಬೆವರು ಹೀರುವ ಜವಳಿ ಉತ್ಪನ್ನಗಳು ನೇಯ್ಗೆಯಿಂದ ಆದುದಲ್ಲ. ಹೆಣಿಗೆಯಿಂದ ಆದುದು. ಸ್ವೆಟರ್‌ ಹೆಣೆದಂತೆಯೇ ಯಂತ್ರಗಳಿಂದ ಹೊಸ್ಕೆರಿ ಉತ್ಪನ್ನಗಳನ್ನು ಹೆಣೆಯುತ್ತಾರೆ.

ಇಲ್ಲಿ ಸಹಾ ಬದಲಾವಣೆಯ ಗಾಳಿ ಬೀಸಿದೆ. ತಮಿಳುನಾಡಿನ ಎಲ್ಲ ನೇಕಾರರೂ, ಹೆಣಿಗೆದಾರರೂ ಹತ್ತಿ ಜವಳಿ ಉತ್ಪಾದಿಸುವಲ್ಲಿ ನಿಷ್ಣಾತರು. ಬಿಸಿಗೆ, ಧಗೆಗೆ ಹೆಸರಾದ ಹವಾಮಾನದಲ್ಲಿ ಸಹಜವಾಗಿ ಹತ್ತಿಯ ಜವಳಿ ಧರಿಸುವರು; ಅದನ್ನು ಉತ್ಪಾದಿಸಬಲ್ಲರು. ತಮಿಳರು. ಆಧುನೀಕರಣ ಇವರ ಪಾಲಿಗೆ ಹತ್ತಿಯು ದಕ್ಕದಂತೆ ಮಾಡಿದೆ. ಪೆಟ್ರೋಲಿಯಂ ಸಂಸ್ಕರಣೆ ಮತ್ತು ರಾಸಾಯನಿಕಗಳ ಉತ್ಪಾದನೆಗಳ ಭರಾಟೆ ಹೆಚ್ಚಾದಂತೆಲ್ಲ ಕಳೆದ ೨೫ ವರ್ಷಗಳಲ್ಲಿ ಕೃತಕ ಎಳೆ ಧಂಡಿಯಾಗಿ ಲಭಿಸುವಂತಾಗಿದೆ. ಹತ್ತಿಗಿಂತ ಕೃತಕ ನೂಲು ಅಗ್ಗವೇ ಅಗ್ಗ. ಈಗೆಲ್ಲ ಹತ್ತಿಯ ಜವಳಿ ಎಂದೇ ಭಾವಿಸಿ ಕೃತಕ ನೂಲಿನ ಜವಳಿ ಬಳಸುವುದೇ ಅಧಿಕ. ಹಾಗೇ ನೊಡಿದರೆ ರೇಷ್ಮೆ ಎಂದು ಮೋಸ ಮಾಡಿ ರೇಷ್ಮೆಯಂತೆ ಭಾಸವಾಗುವ ಕೃತಕ ನೂಲನ್ನು ಬಳಸಿದ ಜವಳಿಯನ್ನು ಮಾರುವುದೇ ಹೆಚ್ಚು. ಕೃತಕ ರೇಷ್ಮೆಯನ್ನು, ಅಸಲಿ ರೇಷ್ಮೆಯನ್ನು ಬೆರೆಸಿ ಹಾಸಿಗೊಂದು ಹೊಕ್ಕಿಗೊಂದು ಎಂಬಂತೆ ನೇಯ್ದು ಅಗ್ಗದಲ್ಲಿ ಸೀರೆ ತಯಾರಿಸಿ ರೇಷ್ಮೆ ಸೀರೆ ಎಂದು ಹೇಳುವುದು ಮಾಮೂಲು.

ಹೀಗಾಗಿ ಶೇಕಡಾ ೧೦೦ರ ಹತ್ತಿ ಜವಳಿ ಅಥವಾ ರೇಷ್ಮೆ ಜವಳಿ ಬಹಳ ತುಟ್ಟಿ. ಇಂಥ ಬಟ್ಟೆ ಬಳಸುವುದು ಫ್ಯಾಷನ್ ಕೂಡಾ. ಬಹುರಾಷ್ಟ್ರೀಯ ಸಂಸ್ಥೆಗಳು ಲೇಬಲ್ ಹಚ್ಚಿದ ಉಡುಪು ತಯಾರಿಸುವಾಗ ಶೇ.೧೦೦ ಹತ್ತಿ ಎಂದು ನಮೂದಿಸುತ್ತಾರೆ. ಅದೇನೋ ಅತ್ಯಮೂಲ್ಯ ಸರಕು ಎನ್ನುವಂತೆ ಬಿಂಬಿಸುತ್ತಾರೆ. ಇತ್ತೀಚಿನವರೆಗೆ ಕಡು ಬಡವರು ಸಹಾ ಬಲಸುತ್ತಿದ್ದುದು ಶೇ.೧೦೦ ಹತ್ತಿಯನ್ನೇ. ಇದೀಗ ಆಧುನೀಕರಣ ಅವರ ಕೈಯಿಂದ ಹತ್ತಿಯನ್ನು ಕಿತ್ತುಕೊಂಡಿದೆ. ಈಗ ಬನಿಯನ್, ಒಳುಡುಪು ಬೇಕಾದರೂ ಗ್ರಾಹಕ ಶೇ.೧೦೦ ಹತ್ತಿಯೆಂಬುದನ್ನು ಹೆಕ್ಕಿ ತೆಗೆಯಬೇಕಾಗುತ್ತದೆ.

ಕೈಗೆ ನಿಲುಕಿದ ನೂಲು ಯಾವುದೇ ಇದ್ದರೂ ಉತ್ಪನ್ನ ವೈವಿಧ್ಯ ಸಾಧಿಸುವಲ್ಲಿ ತಿರುವೂರಿನ ಹೊಸ್ಕೆರಿಯವರು ಯಶಸ್ವಿಯಾಗಿದ್ದಾರೆ. ಬನಿಯನ್, ಚೆಡ್ಡಿಗೆ ಅವರು ಸೀಮಿತರಾಗಿಲ್ಲ. ಟಿ ಷರ್ಟ್‌ ಹಾಗೂ ಮಕ್ಕಳ ಉಡುಪನ್ನು ತಯಾರಿಸುವಲ್ಲಿ ನಿಷ್ಣಾತರಾಗಿದ್ದಾರೆ. ಆ ಸಂಬಂಧ ನವೀನ ತಂತ್ರಜ್ಞಾನವನ್ನು ಹೀರಿಕೊಳ್ಳುವಲ್ಲಿ ತಿರುವೂರಿನವರು ಹಿಂದೆ ಬಿದ್ದಿಲ್ಲ. ಖಾದಿ ಬಟ್ಟೆ ತಯಾರಿಕೆಗೆ ಹೆಸರಾಗಿದ್ದವರು ಇದೀಗ ನವೀನ ಶೈಲಿಯ ಜವಳಿಗೂ ಹೆಸರಾಗಿದ್ದಾರೆ. ವಾಸ್ತವವಾಗಿ ತಮಿಳುನಾಡಿನಿಂದ ರಫ್ತಾಗುವ ಜವಳಿಯಲ್ಲಿ ಅರ್ಧಭಾಗ ತಿರುವೂರು ಮತ್ತು ಸುತ್ತಮುತ್ತಲಿನ ಘಟಕಗಳ ಹೊಸ್ಕೆರೆ ಉತ್ಪನ್ನವೇ ಆಗಿದೆ.

ತಿರುವೂರಿನವರಿಗೂ ಹೊಸ ಸವಾಲುಗಳು ಎದುರಾಗಲಿವೆ. ೨೦೦೫ ಇಸವಿಗೆ ಭಾರತದ ತುಂಬಾ ವಿದೇಶಿ ಜವಳಿ ಇಟ್ಟಾಡುತ್ತದೆ. ವಿಶ್ವ ಜವಳಿ ಉತ್ಪಾದಕರು ಅಲ್ಲಿಯವರೆಗೆ ಭಾರತದೊಳಕ್ಕೆ ತಮ್ಮ ಸರಕನ್ನು ನುಗ್ಗಿಸುವಂತಿಲ್ಲ. ಭಾರತದ ಉತ್ಪಾದಕರಿಗೆ ಕೋಟಾ ಪದ್ಧತಿಯಡಿ ಸಧ್ಯ ರಫ್ತು ಅವಕಾಶಗಳಿವೆ. ಅದು ಹೋಗಿ ಬಿಡುತ್ತವೆ. ಕೋಟಾ ಪದ್ಧತಿಯಲ್ಲಿ ಜವಳಿ ಪೂರೈಸಬೇಕೆಂಬ ವಿಶ್ವ ಒಪ್ಪಂದ ೨೦೦೫ರಲ್ಲಿ ಕೊನೆಗೊಂಡಂತೆ ತುರುವೂರು ಮಾತ್ರವಲ್ಲ; ದೇಶದ ಇಡೀ ಜವಳಿ ಉತ್ಯಮದ ಮೇಲೆ ಕರಿ ನೆರಳು ಹಾಯುವುದು ಖಂಡಿತ.

ಜಾಗತೀಕರಣದ ಬಿಸಿ ತಾಕುವುದು ರಫ್ತು ಸಾಧ್ಯತೆಗಳು ಕಡಿಮೆ ಆದಾಗಲೇ. ವಾಸ್ತವವಾಗಿ ರಫ್ತು ಸಾಧಿಸಬೇಕೆನ್ನುವುದು ಸಮಸ್ಯೆಯ ಒಂದು ಮುಖ ಮಾತ್ರ. ಆಮದು ನುಗ್ಗಿ ಬರುತ್ತದೆ ಎನ್ನುವುದು ಇನ್ನೊಂದು ಮುಖ. ಆಮದು ಸರಕು ದೇಶದ ಆಂತರಿಕ ಮಾರುಕಟ್ಟೆಯನ್ನು ನುಂಗಿ ಹಾಕುತ್ತದೆ. ರಫ್ತು ಮಾಡಲು ಸಾಧ್ಯವಾಗದ ಬಡಪಾಯಿ ತನ್ನ ಉತ್ಪನ್ನವನ್ನು ದೇಶದೊಳಗಿನ ಮಾರುಕಟ್ಟೆಯಲ್ಲಾದರೂ ಮಾರಿಕೊಳ್ಳಲು ಸಾಧ್ಯವಾಗಬೇಕು. ಅದಕ್ಕೇ ತತ್ವಾರವಾದರೆ?! ….. ೨೦೦೫ರ ನಂತರ ಎಲ್ಲ ಜವಳಿ ಉತ್ಪಾದಕರು ಈ ಸಮಸ್ಯೆಯನ್ನು ಎದುರಿಸುತ್ತಾರೆ.

ಬಹುರಾಷ್ಟ್ರೀಯರೂ ಸೇರಿದಂತೆ ಲೆಕ್ಕವಿಲ್ಲದಷ್ಟು ಕಂಪೆನಿಗಳವರು ತಯಾರಿಸುವ ಸಿದ್ಧ ಉಡುಪೆನಿಸಿದ ಶರಟು ಪ್ಯಾಂಟು ಮುಂತಾದವು ನಗರಗಳಲ್ಲಿ ಮಾತ್ರವಲ್ಲದೆ ಸಣ್ಣ ಊರುಗಳಲ್ಲೂ ಬಳಕೆದಾರರ ಮನಗೆದ್ದಿವೆ. ಸಿಂಪಿಗರ ಉದ್ಯೋಗಕ್ಕೆ ಕತ್ತರಿ ಬೀಳುತ್ತಿದೆ. ಬಟ್ಟೆ ಖರೀದಿಸಿ ಹೊಲಿಸುವವರೇ ಕಡಿಮೆಯಾಗುತ್ತಿದ್ದಾರೆ. ಒಟ್ಟಾರೆ ಚಿತ್ರಣ ಇನ್ನೂ ಬದಲಾಗುತ್ತದೆ. ೨೦೦೫ರ ನಂತರ ವಿದೇಶಿ ತಯಾರಕರ ಸರಕು ಭಾರತದಲ್ಲೆಲ್ಲಾ ಹರಡಿಕೊಂಡಂತೆ ಅಲ್ಲಲ್ಲಿ ನಿರುದ್ಯೋಗ ಕಾಣಿಸಿಕೊಂಡರೂ ಆಶ್ಚರ್ಯವಿಲ್ಲ. ಅಂಥ ಪರಿಸ್ಥಿತಿಯನ್ನು ಎದುರಿಸುವುದು ಹೇಗೆ?

ಇದೀಗ ಒಂದು ಸಣ್ಣ ಆಶಾಕಿರಣ ಕಾಣಿಸಿಕೊಂಡಿದೆ. ಇಟಲಿಯ ಕಂಪೆನಿಯವರು ತಿರುಪೂರಿನ ಘಟಕಗಳತ್ತ ಆಸಕ್ತಿ ತೋರಿಸಿದ್ದಾರೆ. ಇಟಲಿಯಲ್ಲಿ ಟ್ರೆವಿಸೋ ಎಂಬುದೊಂದು ಊರು. ಅದು ಒಂದು ರೀತಿಯಲ್ಲಿ ತಿರುಪೂರನ್ನು ಹೋಲುತ್ತದೆ. ಅಲ್ಲಿ ಸಹಾ ಸಣ್ಣ ಮತ್ತು ಮಧ್ಯಮ ಗಾತ್ರದ ತಯಾರಿಕಾ ಘಟಕಗಳ ಗುಂಪುಗಳು ಅಲ್ಲಲ್ಲಿ ಹರಡಿಕೊಂಡಂತೆ ಜವಳಿ ತಯಾರಿಸುತ್ತವೆ. ಟ್ರೆವಿಸೊ ಮತ್ತು ಇತರ ನಗರಗಳ ಜವಳಿ ಘಟಕಗಳು ರಫ್ತು ವ್ಯಾಪಾರದಲ್ಲಿ ತೊಡಗಿವೆ. ಯಂತ್ರೋಪಕರಣಗಳ ತಯಾರಿಕೆಯಲ್ಲಿ ಇಟಲಿ ಎತ್ತಿದಿದ ಕೈ. ನಂತರದ ಸ್ಥಾನ ಜವಳಿಗೆ.

ಟ್‌ಎವಿಸೊ ಮಾತ್ರವಲ್ಲದೆ ಪೋರ್ಚುಗಲ್‌ನ ಜವಳಿ ತಯಾರಕರು ಐರೋಪ್ಯ ಒಕ್ಕೂಟದ ಹಣ ನೆರವನ್ನು ಬೇಡಿದ್ದಾರೆ. ಒಕ್ಕುಟವು ಮೂರು ಲಕ್ಷ ಯುರೊ ಹಣವನ್ನು ಮಂಜೂರು ಮಾಡುವುದರಲ್ಲಿದೆ. ತಾಂತ್ರಿಕ ನೆರವನ್ನು ಪಡೆದು ರಫ್ತು ಹೆಚ್ಚಿಸುವುದು ಅವರ ಉದ್ದೇಶ.

ಟ್ರೆವಿಸೊದವರು ತಿರುಪೂರಿನ ತಯಾರಕರ ಜೊತೆ ಸಹಯೋಗ ಸಾಧಿಸಲು ಕಾತರರಾಗಿದ್ದಾರೆ. ತಯಾರಿಕಾ ತಂತ್ರಜ್ಞಾನ ನೀಡುವುದೇ ಅಲ್ಲದೆ ಹೊಸ್ಕೆರಿ ಉಡುಪನ್ನು ತಯಾರಿಸುವಲ್ಲಿ ತಿರುಪೂರಿನ ಸಿಬ್ಬಂದಿಗೆ ತರಬೇತಿ ನೀಡಲು ಅವರು ಮುಂದಾಗಲಿದ್ದಾರೆ. ಭಾರತ ಇಟಾಲಿಯನ್ ವಾಣಿಜ್ಯೋದ್ಯಮ ಮಹಾಸಂಘ ಈ ಉದ್ಯಮ ಸ್ನೇಹಕ್ಕೆ ಕಾರಣವಾಗುತ್ತಿದೆ. ಟ್ರೆವಿಸೊ ತಯಾರಕ ಕಂಪೆನಿಗಳು ತಮ್ಮ ಉತ್ಪಾದನೆಯ ಶೇ.೬೦-೭೦ರಷ್ಟನ್ನು ಯುರೋಪಿಗೆ ಮತ್ತು ಅಮೆರಿಕಕ್ಕೆ ರಫ್ತು ಮಾಡುತ್ತಿವೆ. ಈಗ ಹತ್ತಿ ಮತ್ತು ಇತರ ನೂಲಿನ ಹೊಸ್ಕೆರಿ ಉತ್ಪನ್ನಗಳು ಭಾರತದಿಂದಲೂ ತರಿಸಿಕೊಂಡು ರಫ್ತು ಮಾಡಬಾರದೇಕೆ ಎಂಬುದು ಅಲ್ಲಿನವರ ವಿಚಾರ.

ಇಟಲಿಯ ಒಂದು ದೊಡ್ಡ ಕಂಪೆನಿಯವರು ಈಗಾಗಲೇ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಇದೇ ಉದ್ದೇಶದ ಒಂದು ಕಂಪೆನಿ ಸ್ಥಾಪಿಸಿದ್ದಾರೆ.

ಕರ್ನಾಟಕದವರಲ್ಲಿ ಮೂಡುವ ಆಸೆಯೆಂದರೆ, ಇಂಥ ಅವಕಾಶ ತಿರುಪೂರಿನವರಂತೆ ಇಲ್ಲಿನ ರೇಷ್ಮೆ ನೇಕಾರರಿಗೂ ಸಿಗುವಂತಾಗಬಾರದೇ!

ಇಟಾಲಿಯನ್ನರ ಆಸಕ್ತಿ ಬಹಳ ದೊಡ್ಡ ಅವಕಾಶಗಳ ಬಾಗಿಲು ತೆರೆಯುತ್ತದೆ ಎಂದೇನಲ್ಲ. ಆದರೆ ರಫ್ತು ಸವಾಲು ಎದುರಿಸುವಾಗ ಒಂದು ಸಣ್ಣ ಅವಕಾಶ ಕೂಡಾ ದೊಡ್ಡ ಸಾಧ್ಯತೆಗಳಿಗೆ ದಾರಿ ಮಾಡಿಕೊಡಬಲ್ಲದು.

೧೧-೦೬-೨೦೦೩