‘ಕ್ಯಾನ್‌ಕನ್‌’ ಮೆಕ್ಸಿಕೊ ದೇಶದ ಈ ನಗರ ಇದೀಗ ಜಗತ್ತಿನಾದ್ಯಂತ ಗಮನ ಸೆಳೆದಿದೆ. ಬುಧವಾರ ವಿಶ್ವವಾಣಿಜ್ಯ ಸಂಸ್ಥೆ (ಡಬ್ಲ್ಯೂಟಿಓ) ವರಿಷ್ಠರ ಸಮಾವೇಶ ಇಲ್ಲಿ ಸೇರುತ್ತಿದೆ.

೧೯೯೯ರ ಸಿಯಾಟ್ಲ್ ಮತ್ತು ೨೦೦೧ರ ದೋಹಾ ಸಮಾವೇಶಗಳು ಭಾರೀ ಗದ್ದಲಕ್ಕೆ ಕಾರಣವಾಗಿದ್ದವು. ‘ಕ್ಯಾನ್‌ಕನ್‌’ ಫಲಶೃತಿ ಏನು? ಇದೇ ಎಲ್ಲರ ಕುತೂಹಲ.

ವಿಶ್ವ ವಾಣಿಜ್ಯ ಸಂಸ್ಥೆ ಈಗ ಪರಿಣಾಮಕಾರಿಯಾಗಿ ಗಟ್ಟಿಕೊಳ್ಳುತ್ತಿದೆ. ವಿಶ್ವದಾದ್ಯಂತ ಈಗ ರಾಜಕೀಯ ಎನ್ನುವದು ಮುಖ್ಯ ಎನಿಸುವುದಿಲ್ಲ. ಈಗ ಏನಿದ್ದರೂ ವ್ಯಾಪಾರವೇ ಬಹಳ ಮುಖ್ಯ. ಭಾರತವೂ ಸೇರಿದಂತೆ ಹಲವು ಅಭಿವೃದ್ಧಿಶೀಲ ರಾಷ್ಟ್ರಗಳು, ಅಭಿವೃದ್ಧಿ ಸಾಕಷ್ಟಿಲ್ಲದ ಬಡ ರಾಷ್ಟ್ರಗಳು ಇದೀಗ ಹೊರ ಪ್ರಪಂಚಕ್ಕೆ ತೆರೆದುಕೊಳ್ಳುತ್ತಿವೆ. ಏಕೆಂದರೆ ಅಂತಾರಾಷ್ಟ್ರೀಯ ವಾಣಿಜ್ಯದಲ್ಲಿ ಪಾಲ್ಗೊಳ್ಳದಿದ್ದರೆ ಅಭಿವೃದ್ಧಿಗೆ ಸಂಚಕಾರ. ಬೇಕಾದನ್ನೆಲ್ಲಾ ಸ್ವತಃ ಬೆಳೆದುಕೊಂಡು, ತಯಾರಿಸಿಕೊಂಡು ತನಗೆ ಬೇಕಾದಂತೆ ಸ್ವಾವಲಂಬಿತವಾಗಿ ಬದುಕಿಕೊಂಡಿರಲು ಸಾಧ್ಯವಿಲ್ಲ. ಇದು ಈ ದೇಶಗಳಿಗೆ ಆಗಿರುವ ಮನವರಿಕೆ.

ಅದೇ ವೇಳೆಗೆ ಅಭಿವೃದ್ಧಿ ಹೊಂದಿದ ಮುಮದುವರೆದ ರಾಷ್ಟ್ರಗಳು ತಮ್ಮ ಸುತ್ತ ಗಟ್ಟಿ ಕೋಟೆ ಕಟ್ಟಿಕೊಂಡಿವೆ. ಸಂಪತ್ತನ್ನಾಗಲಿ, ಅಭಿವೃದ್ಧಿಯ ಫಲಿತವನ್ನಾಗಲಿ ಬಿಟ್ಟು ಕೊಡಲು ತಯಾರಿಲ್ಲ. ಆದರೆ ಅವುಗಳಿಗೂ ತಮ್ಮಲ್ಲಿ ಧಂಡಿಯಾಗಿ ಏನಿದೆಯೋ ಅದನ್ನು ಮಾರಿ ಕಿಸೆ ತುಂಬಿಕೊಳ್ಳುವ ತವಕ.

ರಾಷ್ಟ್ರಗಳನ್ನು ಬಡ ಹಾಗೂ ಶ್ರೀಮಂತ ಎಂದು ಸರಳವಾಗಿ ವಿಂಗಡಿಸಿ ಹೇಳಬಹುದಾದರೆ ಈ ಶ್ರೀಮಂತ ರಾಷ್ಟ್ರಗಳು ಬಡ ರಾಷ್ಟ್ರಗಳಿಗೆ ಸಹಾಯ ಮಾಡಲು ಸಿದ್ಧವಿಲ್ಲ. ಸಹಾಯ ಏನಿದ್ದರೂ ತನಗೆ ಅನುಕೂಲವಾದಂಥ ವ್ಯಾಪಾರ ಕುದುರಿದರೆ ಮಾತ್ರ.

ಬಡ ರಾಷ್ಟ್ರಗಳಿಗಾದರೋ ಇವುಗಳನ್ನು ಕಂಡರೆ ಸಹಜವಾಗಿ ಈಗಲೂ ಭಯ. ಆದರೆ, ವ್ಯಾಪಾರಕ್ಕಾಗಿ ವಿಶ್ವಕ್ಕೆ ತೆರೆದುಕೊಳ್ಳುವ ಅನಿವಾರ್ಯತೆ ಉಭಯವರ್ಗಗಳ ರಾಷ್ಟ್ರಗಳೂ ಒಂದು ವೇದಿಕೆಯಡಿ ಸೇರುತ್ತವೆ. ಪರಸ್ಪರ ಬೇಳೆ ಬೇಯಿಸಿಕೊಳ್ಳಲು, ಯಾವುದೇ ರಾಷ್ಟ್ರ ಸಾಧ್ಯವಾದಷ್ಟು ಗಿಟ್ಟಿಸಿಕೊಳ್ಳಲು ಹವಣಿಸುತ್ತದೆ. ಆದರೆ ‘ನೀನು ಕೊಡೆ, ನಾನು ಬಿಡೆ’ ಎಂಬ ಧೋರಣೆ ಎಲ್ಲರದೂ ಆಗಿರುವುದರಿಂದ ವಿಶ್ವ ವಾಣಿಜ್ಯ ಸಂಸ್ಥೆ ಎಂಬ ವೇದಿಕೆಯಡಿ ಜಟಾಪಟಿ ನಡೆಸುತ್ತವೆ. ತಮ್ಮ ಸುತ್ತ ನಿರ್ಮಿಸಿಕೊಂಡ ಕೋಟೆಗಳನ್ನು ಕೊಂಚ ಕೊಂಚವೇ ಕೆಡವಲು ಸಿದ್ಧವಾಗುತ್ತವೆ.

ಯಾವುದೇ ರಾಷ್ಟ್ರ ಶ್ರೀಮಂತ ವರ್ಗಕ್ಕೆ ಅಥವಾ ಬಡ ವರ್ಗಕ್ಕೆ ಹೀಗೆ ಯಾವುದಕ್ಕೆ ಸೇರಿದ್ದರೂ ತನ್ನ ಮಟ್ಟಿಗೆ ಆದ್ಯತೆ ಇರುವ ಕ್ಷೇತ್ರದ ಬಗೆಗೆ ತೀರ್ಮಾನ ಆಗಬೇಕು. ಹಾಗೆ ವಿಶ್ವವಾಣಿಜ್ಯ ಸಂಸ್ಥಯಡಿ ತೀರ್ಮಾನ ಆಗಿದ್ದರೂ ಅದರ ಜಾರಿ ಸಂಬಂಧವಿದ್ದ ತಕರಾರುಗಳ ಇತ್ಯರ್ಥ ಅದೇ ವೇದಿಕೆಯಡಿ ಇತ್ಯರ್ಥ ಆಗಬೇಕು ಎಂದು ಆತುರಪಡುತ್ತವೆ. ಆದರೆ ಎಲ್ಲವೂ ಅಷ್ಟೇ ಸುಲಭವಾಗಿ ತಿರ್ಮಾನ ಅಥವಾ ಇತ್ಯರ್ಥ ಆಗುವುದಿಲ್ಲ. ಅದೇ ವೇಳೆ ಪ್ರತಿ ರಾಷ್ಟ್ರಕ್ಕೂ ಆತುರ. ಆದ್ದರಿಮದಲೇ ಕ್ಯಾನ್‌ಕನ್‌ದಂಥ ಸಮಾವೇಶಗಳಿಗೆ ಮಹತ್ವ. ಈಗಲೂ ಎಷ್ಟೋ ವಿಷಯಗಳಲ್ಲಿ ಒಮ್ಮತ ಸಾಧ್ಯವಾಗದೇ ಚರ್ಚೆ ಮುಂದೂಡಬೇಕಾಗುತ್ತದೆ.

ಉದಾಹರಣೆಗೆ ತೀರ್ಮಾನವಾಗದೆ ಉಳಿದಿರುವ ವಿಷಯ ‘ಟ್ರಿಪ್ಸ್‌’ ಬಗೆಗೆ ಗಮನಹರಿಸುವುದು. ಬೌದ್ಧಿಕ ಆಸ್ತಿಯು ವ್ಯಾಪಾರ ಸಂಬಂಧ ಹೊಂದಿದ್ದರೆ ಅದರ ಬಗೆಗೆ ಹಕ್ಕು ಸಾಧಿಸುವುದನ್ನು ‘ಟ್ರಿಪ್ಸ್‌’ ಎನ್ನುತ್ತಾರೆ. ಸಂಶೋಧನೆ, ವಿಚಾರ ಮುಂತಾದವುಗಳ ಫಲಿತ ಒಂದು ಆಸ್ತಿ. ಅದರಿಂದ ಹಣ ಮಾಡುವುದಕ್ಕೆ ಸಾಧ್ಯವಾಗುತ್ತದೆ ಎನ್ನುವುದಾದರೆ ಅದರ ಮೇಲೆ ಹಕ್ಕು ಸ್ಥಾಪಿಸುತ್ತಾರೆ. ಇಂಥ ವ್ಯವಸ್ಥೆಯ ಕಟ್ಟುಪಾಡಿಗೆ ವಿಶ್ವವಾಣಿಜ್ಯ ಸಂಸ್ಥೆ ಅಡಿ ಬರುವ ಎಲ್ಲ ರಾಷ್ಟ್ರಗಳೂ ಒಳಪಡಬೇಕು ಎಂಬುದು ಶ್ರೀಮಂತ ರಾಷ್ಟ್ರಗಳ ಒತ್ತಾಯ. ಇನ್ನೂ ಎಷ್ಟೋ ವಿಷಯಗಳು ಮುಖ್ಯವಾಗಿದ್ದರೂ ಇದರ ಬಗೆಗೆ ಮೊದಲು ತೀರ್ಮಾನ ಆಗಬೇಕು ಎನ್ನುವುದು ಅವುಗಳ ಆತುರ. ಕ್ಯಾನ್‌ಕನ್‌ನಲ್ಲಿ ಇದು ಪ್ರಮುಖವಾಗಲಿಕ್ಕೆ ಸಾಕು.

ಭಾರತ, ದಕ್ಷಿಣ ಆಫ್ರಿಕಾ, ಬ್ರೆಜಿಲ್ ಮತ್ತು ಚೀನಾಗಳಿಗೆ ಇದರಿಂದ ಅನುಕೂಲವಾಗುತ್ತದೆ ಎಂದು ಈ ರಾಷ್ಟ್ರಗಳು ಪ್ರತಿಪಾದಿಸುತ್ತವೆ. ಈ ರಾಷ್ಟ್ರಗಳಲ್ಲಿ ಔಷಧಗಳನ್ನು ತಯಾರಿಸುವ ವಿಫುಲ ಅವಕಾಶಗಳಿವೆ. ‘ಟ್ರಿಪ್ಸ್’ ಕಟ್ಟುಪಾಡಿಗೆ ಒಳಪಟ್ಟರೆ ತಂತ್ರಜ್ಞಾನ ಸುಲಭವಾಗಿ ಹರಿದುಬರುತ್ತದೆ. ಆಗ ಔಷಧಗಳನ್ನು ತಯಾರಿಸಿ ರಪ್ತು ಮಾಡಬಹುದು ಎಂದು ಈ ಬಡರಾಷ್ಟ್ರಗಳಿಗೆ ಆಸೆ ಹು      ಟ್ಟಿಸುವ ಯತ್ನ ನಡೆದಿದೆ. ಭಾರತದಂಥ ಒಂದೆರಡು ರಾಷ್ಟ್ರಗಳು ಹಾಗೆಂದು ನಂಬಿದರೂ ಆಶ್ಚರ್ಯವಿಲ್ಲ. ತಂತ್ರಜ್ಞಾನವನ್ನು ಹಾಗೂ ಬಂಡವಾಳವನ್ನು ಕೈಲಿಟ್ಟುಕೊಂಡಿರುವ ಶ್ರೀಮಂತ ರಾಷ್ಟ್ರಗಳು ಮಾರುಕಟ್ಟೆ ಅವಕಾಶಗಳಿಗಾಗಿ ಹಾತೊರೆಯುತ್ತಿವೆ. ಈ ಬಡರಾಷ್ಟ್ರಗಳನ್ನು ಬಳಸಿಕೊಂಡು ವ್ಯಾಪಾರ ಬಡಾಯಿಸಿಕೊಳ್ಳಲು ಮುಂದಾಗುತ್ತವೆ. ಆದ್ದರಿಂದ ಬಡ ರಾಷ್ಟ್ರಗಳು ಎಚ್ಚರಿಕೆಯಿಂದ ಹೆಜ್ಜೆ ಮುಂದಿಡಬೇಕು. ಕೆಲವು ಬಡರಾಷ್ಟ್ರಗಳು ಈ ವಿಚಾರದಲ್ಲಿ ಭಾರತ ಏನು ಮಾಡುತ್ತದೆ ಎಂದು ನೋಡುತ್ತಿದೆ.

ಭಾರತದ ಒಳಗೆ ಔಷಧ ತಯಾರಿಕಾ ಉದ್ಯಮ ಬಹಳ ಲಾಭಕಾರಿಯಾಗಿ ನಡೆಯುತ್ತಿದೆ. ‘ಟ್ರಿಪ್ಸ್‌’ಗೆ ಇನ್ನೂ ಒಳಪಡದೆ ಇರುವ ಕಾರಣ ವಿಶ್ವದ ಯಾವುದೇ ಮೂಲೆಯಲ್ಲಿ ಹೊಸದಾಗಿ ತಯಾರಾದ ಔಷಧವನ್ನು ದೇಶದೊಳಗಿನ ಕಂಪೆನಿಗಳು ತಯಾರಿಸಿ ಮಾರಾಟಕ್ಕೆ ಬಿಡಲು ಸಾದ್ಯವಾಗುತ್ತಿದೆ. ಹಲವಾರು ಬಹುರಾಷ್ಟ್ರೀಯ ಕಂಪೆನಿಗಳು ಸೇರಿದಂತೆ ಅನೇಕ ಕಂಪೆನಿಗಳು ಅತ್ಯಾಧುನಿಕ ಸಂಶೋಧನಾ ಫಲಿತಗಳನ್ನು ಅನಾಮತ್ತಾಗಿ ನಕಲು ಮಾಡಿ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತವೆ. ಮುಂದುವರೆದ ಬೇರೆ ರಾಷ್ಟ್ರಗಳಲ್ಲಿ ಅಪಾಯಕಾರಿಯೆಂಬ ಕಾರಣಕ್ಕೆ ನಿಷೇಧಕ್ಕೆ ಒಳಗಾದ ಔಷಧಗಳನ್ನು ಸಹಾ ತಯಾರು ಮಾಡಿ ಮಾರಾಟ ಮಾಡುತ್ತಿವೆ. ಭಾರತದಲ್ಲಿ ಔಷಧ ಬಳಕೆ ಬಹಳ. ಅಸಲು ಬೆಲೆಯ ನೂರಾರು ಪಟ್ಟು ಬೆಲೆ ಇಟ್ಟರೂ ಔಷಧಗಳನ್ನು ಖರೀದಸುವವರು ಕಡಿಮೆಯಿಲ್ಲ.

ರಫ್ತಿನ ಆಸೆಯಿಂದ ಔಷಧ ಉದ್ಯಮ ಕುರಿತ ‘ಟ್ರಿಪ್ಸ್‌’ ಪ್ರಸ್ತಾವಕ್ಕೆ ಭಾರತ ಅಸ್ತು ಎಂದರೆ ಏನಾಗುತ್ತದೆ? ವಸ್ತುಶಃ ಗಂಭೀರ ಪರಿಣಾಮ ಉಂಟಾಗುತ್ತದೆ. ವಿದೇಶಿ ಸಂಶೋಧನೆಯ ಯಾವುದೇ ಫಲಿತಕ್ಕೆ ಕೈ ಹಾಕಿ ಹೊಸ ಔಷಧಗಳು ದೇಶದೊಳಗೆ ಇನ್ನಷ್ಟು ದುಬಾರಿ ಆಗುತ್ತದೆ. ತ್ಯಾಗಕ್ಕೆ ಸಿದ್ಧವಾದರೂ ಔಷಧ ರಪ್ತಿಗೆ ನಿಜವಾಗಿ ಅವಕಾಶಗಳು ಸೃಷ್ಟಿಯಾಗುತ್ತವೇನು? ಅನುಮಾನಿಸಿದೆ. ಮುಂದುವರೆದ ರಾಷ್ಟ್ರಗಳು ಹಿಡಿತ ಸಾಧಿಸುವುದು ಹೆಚ್ಚು.

ಶ್ರೀಮಂತ ರಾಷ್ಟ್ರಗಳು ವಾಸ್ತವಾಗಿ ಬಡರಾಷ್ಟ್ರಗಳ ಆದ್ಯತೆ ನಿರ್ಲಕ್ಷಿಸಿ ತಮ್ಮ ಆದ್ಯತೆ ಕ್ಷೇತ್ರಗಳ ಬಗೆಗೆ ಗಮನ ಹರಿಸುತ್ತವೆ. ‘ಸಿಂಗಪುರ ಆದ್ಯತೆ’ ಎಂದೇ ಹೆಸರಾದ ಕೆಲವು ವಿಚಾರಗಳು ಅವುಗಳ ಪಾಲಿಗೆ ಮುಖ್ಯ. ರಾಷ್ಟ್ರ-ರಾಷ್ಟ್ರಗಳ ನಡುವೆ ವ್ಯಾಪಾರ ಮಾರ್ಗ ಸುಗಮಗೊಳಿಸುವುದು. ಸರಕಾರಿಗಳು ಮಾಡುವ ಖರೀದಿಗಳ ಬಗೆಗೆ ಪಾರದರ್ಶಕತೆ ಸಾಧಿಸುವುದು. ಪೈಪೋಟಿ ವಿಪರೀತವಾದಾಗ ಅನುಸರಿಸಬೇಕಾದ ಕ್ರೆಮಗಳು, ಅಗತ್ಯ ಇರುವವರಿಗೆ ಬಂಡವಾಳ ಪೂರೈಕೆ ಮುಂತಾದವು ತೀರ್ಮಾನವಾಗಬೇಕು ಎಂದು ಅವು ಬಯಸುತ್ತವೆ. ‘ಟ್ರಿಪ್ಸ್‌’ ಕೂಡಾ ಇದೇ ಸಾಲಿಗೆ ಸೇರಿದ್ದು.

‘ಟ್ರಿಪ್ಸ್‌’ ವ್ಯಾಪ್ತಿಗೆ ಪೇಟೆಂಟ್ ಕಾಯ್ದೆ ಬರುತ್ತದೆ. ಈ ದೆಸೆಯಲ್ಲಿ ಇನ್ನಷ್ಟ ಶಾಸನ ಕ್ರಮಗಳು ಬರಬೇಕೆನ್ನುವ ಒತ್ತಡ ಭಾರತದ ಮೇಲಿದೆ.

ಭಾರತಕ್ಕೆ ಬಂಡವಾಳದ ಅಗತ್ಯವಿದೆ. ವಿದೇಶಿ ಮೂಲದ ಬಂಡವಾಳ ಲಭ್ಯವಾಗಲು ಅವಕಾಶಗಳಿವೆ. ಆದರೆ ಅಂಥ ಬಂಡವಾಳವು ನಾನಾ ನಿಯಮಗಳಿಗೆ ಒಳಪಡುವುದರಿಂದ ದೇಶದೊಳಗೆ ವಿರೋಧವೂ ಇದೆ. ಕ್ಯಾನ್‌ಕನ್‌ ಸಮಾವೇಶದಲ್ಲಿ ಹಣ ಹೂಡಿಕೆ ಕುರಿತ ಪ್ರಸ್ತಾವಗಳು ಬರಬಹುದು.

ಬಡ ರಾಷ್ಟ್ರಗಳ ಪಾಲಿಗೆ ಬೇಗ ತೀರ್ಮಾನವಾಗಬೇಕಾದ ವಿಚಾರಗಳಲ್ಲಿ ಮುಖ್ಯವಾದುದು ಕೃಷಿ ಅಭಿವೃದ್ಧಿ ಹಾಗೂ ಕೃಷಿ ಉತ್ಪನ್ನ ರಫ್ತು ಸಾಧನೆ. ತಾವು ಬೆಳೆದಿದ್ದನ್ನು ರಫ್ತು ಮಾಡಲು ಸಾಧ್ಯವಾದರೆ ಸಾಕು. ಬೇಕಾದ್ದನ್ನೆಲ್ಲ ಆಮದು ಮಾಡಿಕೊಳ್ಳಬಹುದು ಎಂಬುದು ಅವುಗಳ ಆಸೆ.

ಕೃಷಿ ಉತ್ಪನ್ನ ರಫ್ತು ಅಷ್ಟೇನೂ ಸುಲಭವಲ್ಲ. ಮೊದಲಿಗೆ ವಿವಿಧ ಮಾರುಕಟ್ಟೆಗಳನ್ನು ಪ್ರವೇಶಿಸಲು ಅವಕಾಶ ಸಿಗಬೇಕು. ಅಂದರೆ ತಮ್ಮ ಉತ್ಪನ್ನಗಳನ್ನು ಬಿಟ್ಟುಕೊಡಲು ಇತರರು ಸಿದ್ಧವಾಗಬೇಕು. ಸ್ವಂತ ಬಳಕೆ ಕಡಿಮೆ ಮಾಡಿಯಾದರೂ ರಫ್ತು ಮಾಡಬೇಕಾಗುತ್ತದೆ. ವಿರೋಧ ಬರುತ್ತದೆ. ಸರಕಾರಗಳು ನಿಭಾಯಿಸುವ ಶಕ್ತಿ ಹೊಂದಿರಬೇಕು. ಕೃಷಿ ಉತ್ಪನ್ನ ರಫ್ತು ವಿಚಾರ ಬಂದಾಗ ನಾನಾ ರೂಪದ ಸಬ್ಸಿಡಿಗಳನ್ನು ಪ್ರೋತ್ಸಾಹಕ ಕ್ರಮಗಳನ್ನೂ ರೂಪಿಸಿಬೇಕು. ಈ ಎಲ್ಲ ಸಿದ್ಧತೆಗಳನ್ನು ಆಮದುದಾರರ ರಾಷ್ಟ್ರಗಳು ಒಪ್ಪಬೇಕು.

ಇಷ್ಟಕ್ಕೆಲ್ಲ ಬಡ ರಾಷ್ಟ್ರಗಳು ಸಿದ್ಧವಾದರೂ ಶ್ರೀಮಂತ ರಾಷ್ಟ್ರಗಳು ಕೃಷಿ ಸಂಬಂಧ ವಿಚಾರಗಳ ಚರ್ಚೆಗೆ ಸುತಾರಾಂ ಒಪ್ಪುತ್ತಿಲ್ಲ. ಮುಖ್ಯವಾಗಿ ಐರೋಪ್ಯ ಒಕ್ಕೂಟದ ರಾಷ್ಟ್ರಗಳು ಕೃಷಿ ಸಂಬಂಧ ರಿಯಾಯ್ತಿ ನೀಡಲು ಸಿದ್ಧವಿಲ್ಲ. ಕೃಷಿಯನ್ನು ಕಡಿಮೆ ವೆಚ್ಚದಲ್ಲಿ ನಡೆಸಲು ಸಾಧ್ಯವಾಗುತ್ತಿಲ್ಲ. ಯಾವುದೇ ಉತ್ಪನ್ನವನ್ನು ತೆಗೆದುಕೊಂಡರೂ ಕೃಷಿ ದುಬಾರಿ. ಅನ್ಯರಾಷ್ಟ್ರಗಳಲ್ಲಿ ಅಗ್ಗ. ಹಾಗಾಗಿ ರಫ್ತು ಮಾಡಬೇಕಾದರೆ ಭಾರೀ ಪ್ರೊತ್ಸಾಹಕ ಕ್ರಮಗಳನ್ನು ರೂಪಿಸಬೇಕು. ಆಂತರಿಕ ಬಳಕೆ ಉತ್ಪನ್ನ ತೆಗೆಯಲು ಈಗ ಸಬ್ಸಿಡಿ ಕೊಡುವುದು ತಪ್ಪಿಲ್ಲ. ಅದು ತಪ್ಪಿದರೆ ಕೃಷಿ ಉತ್ಪನ್ನ ಇನ್ನೂ ದುಬಾರಿ ಯಾಗುತ್ತದೆ. ರಫ್ತು ಸಾಧ್ಯತೆ ಇನ್ನೂ ಕಡಿಮೆ ಆಗುತ್ತದೆ. ಆದ್ದರಿಂದ ಕ್ಯಾನ್‌ಕನ್‌ನಲ್ಲಿ ಕೃಷಿ ಕುರಿತ ತೀರ್ಮಾನ ಬರದೇ ಇದ್ದರೂ ಚಿಂತೆ ಇಲ್ಲ ಎನ್ನುವ ಭಾವನೆ ಇದೆ.

ವಿಶ್ವ ವ್ಯಾಪಾರ ಸಂಸ್ಥೆ ಸಮಾವೇಶಗಳಲ್ಲಿ ಒತ್ತಡ ತಂತ್ರ ಕೆಲಸ ಮಾಡುವುದು ಹೆಚ್ಚು. ಆ ವೇಳೆ ಬಡ ರಾಷ್ಟ್ರಗಳು ತಮ್ಮ ಪರವಾಗಿ ಭಾರತದಂಥ ರಾಷ್ಟ್ರಗಳು ಮುಖಂಡತ್ವ ವಹಿಸಬೇಕೆಂದು ಬಯಸುತ್ತವೆ. ಆಗೆಲ್ಲ ಧೀರೋದಾತ್ತೆ ಮುಖ್ಯವಾಗಬಾದರು ಎಂದು ವಿಶ್ಲೇಷಕರು ಎಚ್ಚರಿಸುತ್ತಾರೆ.

ಸಿಯಾಟ್ಲಾನಲ್ಲಿ ಬಡರಾಷ್ಟ್ರಗಳವರು ಶ್ರೀಮಂತರ ಧೋರಣೆ ವಿರೋಧಿಸಿ ಪ್ರಬಲ ಪ್ರದರ್ಶನ ನಡೆಸಿದ್ದರು. ತಮ್ಮ ಮೇಲೆ ಇತರರ ಹಿಡಿತ ಪ್ರಬಲವಾಗಿ ತಾವು ಅತಂತ್ರರಾಗಬೇಕಾಗುತ್ತದೆ ಎಂಬ ಭೀತಿ ಇದಕ್ಕೆ ಕಾರಣ. ಸಣ್ಣಪುಟ್ಟ ರಾಷ್ಟ್ರಗಳು ಶ್ರೀಮಂತರ ಒತ್ತಡದಿಂದ ನಲುಗಿ ದೀನಾತಿದೀನ ಸ್ಥಿತಿ ತಲುಪಿರುವುದು ಉಂಟು. ಶ್ರೀಮಂತ ರಾಷ್ಟ್ರಗಳವರು ತಮ್ಮ ಸರಕನ್ನೆಲ್ಲ ತಮ್ಮ ದೇಶದಲ್ಲಿ ತಂದು ಸುರಿದು ಭಂಗಪಡಿಸುತ್ತಾರೆ ಎಂಬುದು ಅವರ ಪಾಲಿಗೆ ಅನುಭವ ಜನ್ಯ ಮಾತು. ಸುರಿ ನೀತಿಯು ಭಯ ಭಾರತಕ್ಕೂ ಇಲ್ಲದಿಲ್ಲ.

೧೦-೦೯-೨೦೦೩