ಜಾಗತೀಕರಣವನ್ನು ಕಾಣಬೇಕೆ? ಬೆಂಗಳೂರಿನಲ್ಲಿ ಅದು ದೃಗ್ಗೋಚರ. ಹೇಳಿಕೊಳ್ಳುವಂಥ ಸೂಪರ್‌ಸ್ಟೋರ್‌ ನೀಲಗಿರಿಸ್ ಮಾತ್ರ ಇತ್ತು. ಕೆಲವು ವರ್ಷಗಳ ಹಿಂದೆ ಫುಡ್‌ವರ್ಲ್ಡ್ ಬಂದಿತು. ಬರಿದೆ ದಿನಸಿಯೇ ಮುಂತಾದ ನಿತ್ಯ ಬಳಕೆ ವಸ್ತುಗಳಿಗೆ ಮಾತ್ರ ಸೂಪರ್‌ ಬಜಾರ್‌ಗಳು ಸೀಮಿತವಾಗಿರಲಿಲ್ಲ. ಸಕಲ ಸಮಗ್ರ ವ್ಯಾಪಾರಕ್ಕೆ ಹರಡಿಕೊಂಡ ಫ್ಯಾಷನೆಬಲ್ ಬಹುವ್ಯಾಪಾರ ಮಳಿಗೆಗಳು ತಲೆಯೆತ್ತಿವೆ. ಇನ್ನಷ್ಟು ಮತ್ತಷ್ಟು ಬರಲಿವೆ.

ಷಾಪರ್ಸ್ ಸ್ಟಾಪ್, ಲೈಫ್ಸ್ಟೈಲ್, ಬಿಗ್‌ಬಜಾರ್‌, ಬಾಂಬೆ ಸ್ಟೋರ್‌ ಈಗಾಗಲೇ ತಲೆಯೆತ್ತಿ ನಿಂತಿವೆ. ಫ್ಯಾಮಿಲಿ ಮಾರ್ಟ್ ಬರಲಿದೆ. ಎಪಿಎಂಸಿಗಳಿಗೆ ಸಾಟಿಯಾಗಿ ನಿಲ್ಲುವ ‘ಮೆಟ್ರೊ’ ತಲೆ ಎತ್ತಿದೆ.

ಇವೆಲ್ಲ ಬಹುರಾಷ್ಟ್ರೀಯ ಕಂಪೆನಿ (ಎಂಎನ್‌ಸಿ)ಗಳ ಶೈಲಿಯಲ್ಲಿ ನಡೆಯುವಂಥವು. ಬಹುತೇಕ ಎಂಎನ್‌ಸಿಗಳ ಒಡೆತನ ಅಥವಾ ಪಾಲುದಾರಿಕೆ ಹೊಂದಿರುವಂಥವೇ. ಇವುಗಳ ಕಾರ್ಯವಿಧಾನವೇ ವಿಭಿನ್ನ ಹಾಗೂ ಚಿತ್ತಾಕರ್ಷಕ. ಯಾವುದೇ ಒಂದು ಉತ್ಪನ್ನವನ್ನೂ ರಾಶಿ ರಾಶಿ ಹಾಕುವುದು; ವಿಸ್ತಾರವಾದ ಷೋರೂಂಗಳನ್ನು ಒಳಗೊಂಡ ಬೃಹತ್ ಕಟ್ಟಡ ವ್ಯವಸ್ಥೆ ಮಾಡುವದು; ಕೊಳ್ಳಲು ಹಾತೊರೆಯುವಂಥ ಮಾಡುವ ಪ್ರದರ್ಶನ; ತಮ್ಮಲ್ಲಿ ಅತ್ಯುತ್ತಮ ಸರಕು ಲಭಿಸುತ್ತದೆ ಎಂದು ಬಿಂಬಿಸುವುದು. ಸಾಧ್ಯವಾದಾಗ ಬೆಲೆ ಕಡಿಮೆ ನಿಗದಿ ಮಾಡಿ, ರಿಯಾಯ್ತಿ ಕೊಟ್ಟು ಅದನ್ನು ಪ್ರದರ್ಶಿಸುವುದು; ಆಗಿಂದಾಗ ಕೆಲವೊಂದು ಸರಕನ್ನು ಬಹಳ ಇಳಿಸಿದ ದರಗಳಲ್ಲಿ ‘ಸೇಲ್’ ಎಂಬ ಹೆಸರಿನಲ್ಲಿ ಮಾರಾಟ ಮಾಡುವುದು ಎಂಎನ್‌ಸಿ ಶೈಲಿಯ ಮಳಿಗೆಗಳ ವೈಶಿಷ್ಟ್ಯ.

ಇದೆಲ್ಲ ಕೊಳ್ಳುಬಾಕ ಸಂಸ್ಕೃತಿಯ ಪ್ರತೀಕ. ಜನರು ಗಳಿಸಿದ್ದನ್ನೆಲ್ಲ ಖರ್ಚು ಮಾಡುವಂತೆ ಪ್ರೇರೇಪಿಸುವು ವ್ಯವಸ್ಥೆಗೆ ಸೇರಿದ್ದು. ಅತ್ಯುತ್ತಮ ಆದುದನ್ನು ಬೇಕಾದ ಎಲ್ಲವನ್ನೂ ಕೊಂಡು ‘ಸುಖೀಸಬೇಕು’ ಎನ್ನುವ ಭಾವನೆ ಗ್ರಾಹಕರಲ್ಲಿ ಉಂಟು ಮಾಡುವುದು ಕೊಳ್ಳುಬಾಕ ಸಂಸ್ಕೃತಿಯ ಧ್ಯೇಯೋದ್ಧೇಶ.

ಈ ಸಂಸ್ಕೃತಿ ಇಲ್ಲಿಗೆ ಕಾಲಿಡುವ ಮುನ್ನ ಭಾರತದ ಎಲ್ಲ ಕಡೆ ಸಹಕಾರಿ ಮಾರಾಟ ವ್ಯವಸ್ಥೆಯ ಅಂಗವಾಗಿ ಜನತಾ ಬಜಾರ್‌ಗಳೆಂಬ ಸ್ಥೂಲ ಸ್ವರೂಪದಲ್ಲಿ ಇದೇ ವಿದ್ಯಮಾನ ಕಾಣಿಸಿಕೊಂಡಿತು. ಆದರೆ ಅದು ಬೆಳೆಯಲಿಲ್ಲ. ಉದ್ಯಮಶೀಲಕ್ಕೆ ಹೆಸರಾದ ಖಾಸಗಿ ಜನ ಈ ಸೂಪರ್‌ ಸ್ಟೋರ್‌ಗಳನ್ನು ವಿಶ್ವಾದ್ಯಂತ ತಂದಿದ್ದಾರೆ. ಈ ಹೊಸ ವ್ಯವಸ್ಥೆಯಲ್ಲಿ ಮೆಚ್ಚಬೇಕಾದ ಅಂಶವೆಂದರೆ ಗ್ರಾಹಕನ ಅಗತ್ಯಗಳನ್ನು ಒಂದೇ ಸೂರಿನಡಿ ಪೂರೈಸುತ್ತಾರೆ ಎಂಬುದು.

ಲಂಡನ್ನಿನ ಹೊರವಲಯದ ಒಂದು ಸೂಪರ್‌ ಸ್ಟೋರ್‌ನಲ್ಲಿ ಬರೀ ಕಸೂತಿ, ಹೆಣಿಗೆ ಮುಂತಾದ ಮಹಿಳೆಯರ ಹವ್ಯಾಸಕ್ಕೆ ಬೇಕಾಗುವ ಹತ್ತು ಸಹಸ್ರಕ್ಕೂ ಹೆಚ್ಚು ಐಟಂಗಳಿವೆ. ನಮ್ಮಲ್ಲಿ ಹೆಂಗಳೆಯರು ತಮಗೆ ಬೇಕಾಗುವ ಐದು ಹತ್ತು ಬಗೆಯ ಐಟಂಗಳನ್ನು ಕೊಳ್ಳಲು ಬೀದಿ ಬೀದಿ ಅಲೆಯುತ್ತಾರೆ. ನಾಯಿ ಬೆಕ್ಕು ಸಾಕುವವರು ಮಾಡಬೇಕಾಗುವ ಖರೀದಿಗಾಗಿಯೇ ಪ್ರೆತ್ಯೇಕ ಸೂಪರ್‌ ಸ್ಟೋರ್‌ ವಿದೇಶಗಳಲ್ಲಿ ಲಭ್ಯ. ಮಕ್ಕಳ ಆಟದ ಸಾಮಗ್ರಿ, ಮಹಿಳೆಯರ ಮತ್ತು ಮಕ್ಕಳ ಬಟ್ಟೆ ಬರೆ, ಕ್ರೀಡಾ ಸಾಮಗ್ರಿ ಹೀಗೆ ನಿರ್ದಿಷ್ಟ ಖರೀದಿ ವರ್ಗಗಳಿಗೆ ಪ್ರತ್ಯೇಕವಾದ ಸೂಪರ್‌ ಸ್ಟೋರ್‌ ಇರುತ್ತವೆ. ಇವುಗಳಿಗೆ ಹೊರತಾದ ಸಣ್ಣ ಪ್ರಮಾಣದ ಷೋರೂಂಗಳೂ ಇರುತ್ತವೆ.

ವಿದೇಶಗಳಲ್ಲಿ ಈ ಬಗೆಯ ಮಾರಾಟ ವ್ಯವಸ್ಥೆ ಸಾಕಷ್ಟು ಅತಿರೇಕ ಎನಿಸುವಷ್ಟು ಬೆಳೆದಿರುವುದ ಉಂಟು. ಇಂಗ್ಲಿಷಿನ ಒಂದು ನುಡಿಗಟ್ಟಿನ ಪ್ರಕಾರ ‘ಜಗತ್ತು ವಾಸ್ತವಾಗಿ ಒಂದು ಗ್ರಾಮವಾಗಿದೆ’ ಅಂದರೆ ಯಾರೂ ಯಾವುದಕ್ಕೂ ದೂರ ಹೋಗಬೇಕಾಗಿಲ್ಲ. ಇರುವಲ್ಲೇ ಲಭ್ಯ ಎನ್ನುವುದನ್ನು ಈ ನುಡಿಗಟ್ಟು ಪ್ರತಿಪಾದಿಸುತ್ತದೆ.

ವಿದೇಶಗಳಲ್ಲಿ ನಮ್ಮಲ್ಲಿರುವ ಹಾಗೆ ಮನೆ ಹೊಸ್ತಿಲು ದಾಟಿದರೆ ಪುಟ್ಟ ಅಂಗಡಿ, ಪೆಟ್ಟಿಗೆ ಅಂಗಡಿಗಳು ಕಾಣಿಸುವುದಿಲ್ಲ. ರಾತ್ರಿ ಬಹುಹೊತ್ತಿನ ತನಕ ತೆಗೆದಿರುವ ಬಿಡಿ ಬಿಡಿ ಅಂಗಡಿಗಳು ಅಲ್ಲಲ್ಲಿ ಇರುವುದುಂಟು. ಪ್ರತಿ ಜನವಸತಿ ಪ್ರದೇಶದಲ್ಲೂ ಅಂಗಡಿಗಳು ಇಟ್ಟಾಡಿ ಹೋಗುವುದಿಲ್ಲ. ಫುಟ್‌ಪಾತ್‌ ವ್ಯಾಪಾರ ನಿರ್ದಿಷ್ಟ ಕಡೆ ನಾಮಮಾತ್ರ. ನಮ್ಮಲ್ಲಿ ಜನಕ್ಕೆ ಉದ್ಯೋಗಾವಕಾಶ ಸಿಗುತ್ತದೆಂಬ ಕಾರಣಕ್ಕೆ ಇಂಥ ವ್ಯಾಪಾರದ ಪಿಡುಗನ್ನು ತಾಳಿಕೊಳ್ಳಬೇಕು ಎಂಬ ಭಾವನೆಯಿದೆ. ಆದ್ದರಿಂದಲೇ ಅವ್ಯವಸ್ಥೆ.

ಅಲ್ಲಲ್ಲಿ ಗ್ರಾಮಕ್ಕೊಂದು ‘ವಿಲೇಜ್‌ ಸೆಂಟರ್‌ ಪಟ್ಟಣದಲ್ಲಿ ಒಂದು ಟೌನ್‌ ಸೆಂಟರ್‌’ ನಗರಗಳಲ್ಲಿ ಒಂದಕ್ಕಿಂತ ಹೆಚ್ಚು ಕಡೆ ‘ಸಿಟಿ ಸೆಂಟರ್‌’ ಇರುತ್ತವೆ. ಎಂಎನ್‌ಸಿಗಳ ಹಾಗೂ ಅದಕ್ಕೆ ಹೊರತಾದ ಮಳಿಗೆಗಳ ಸಮೂಹವೇ ಈ ಸೆಂಟರ್‌ಗಳು. ವಸತಿ ಪ್ರದೇಶಗಳವರು ಖರೀದಿಗಾಗಿ ಇಲ್ಲಿಗೆ ಬರುತ್ತಾರೆ. ಇಲ್ಲಿನ ಗ್ರಾಹಕ ಅನುಕೂಲಗಳೇ ಇಂಥವು. ಬಿಡಿಬಿಡಿ ಹರಡಿಕೊಂಡ ಅಂಗಡಿಗಳಿಗೆ ಜರೂರಾಗಿ ಬೇಕಾದಾಗ ಮಾತ್ರ ಹೋಗುತ್ತಾರೆ. ಎಂಎನ್‌ಸಿಗಳು ಎಷ್ಟೊಂದು ವ್ಯಾಪಿಸಿಕೊಂಡಿರುತ್ತವೆ ಎಂದರೆ ಯಾವ ಊರಿನ ಸೆಂಟರ್‌ಗೆ ಹೋದರೂ ಅವವೇ ಮಳಿಗೆಗಳಿರುತ್ತವೆ. ಅವೇ ರ್ಬ್ಯಾಂಡ್‌ಗಳು, ಅವೇ ಫ್ಯಾಶನ್, ಒಂದೇ ಬಗೆಯ ಸೇವಾಸೌಲಭ್ಯ. ಒಂದು ಊರಿಗಿಂತ ಇನ್ನೊಂದು ಬೇರೆಯಲ್ಲ, ಅದನ್ನೇ ಅತಿರೇಕ ಎನ್ನುವುದು.

ಅಂಗಡಿ ಮುಂಗಟ್ಟಿಗೆ ಅಲಂಕಾರಕ್ಕೆ ರಾಶಿ ಸರಕು ಹಾಕಿ ವೈವಿಧ್ಯ ಸಾಧಿಸಿರುವುದಕ್ಕೆ ಹಾಗೂ ಇನ್ನಿತರ ಬಾಬುಗಳಿಗಾಗಿ ವಿಪರೀತ ಹಣ ತೊಡಗಿಸಿರುವುದರಿಂದ ವಾಸ್ತವಾಗಿ ಇಲ್ಲಿನ ಸರಕು ದುಬಾರಿ ಎನಿಸುತ್ತದೆ. ಮುಖ್ಯವಾಗಿ ವ್ಯಾಪಾರಸ್ಥರಿಗೆ ಯಾವುದೇ ಸರಕಿನ ಅಸಲು ಬೆಲೆ ಎಷ್ಟು ಇದ್ದೀತು ಎಂಬುದು ಸುಲಭವಾಗಿ ಗೋಚರಿಸುವುದರಿಂದ ಗಾಬರಿಯಾಗುತ್ತದೆ. ಯಾವುದೇ ವಸ್ತುವಿನ ಬೆಲೆ ನಿಗದಿಪಡಿಸುವಾಗ ಅಸಲು ಬೆಲೆಯ ಹತ್ತಾರುಪಟ್ಟು ದರ ನಮೂದಿಸುವುದುಂಟು. ಆದರೆ ಅವರು ಬಳಸುವ ವ್ಯಾಪಾರ ತಂತ್ರಗಳು ಪರಿಣಾಮಕಾರಿ ಆಗುತ್ತದೆ.

ನಿದರ್ಶನಕ್ಕೆ ಎಂಎನ್‌ಸಿಗಳ ದರ ನಿಗದಿ. ಯಾವುದೇ ಒಂದು ಐಟಂನ ಒಂದು ಲಕ್ಷ ಪೀಸ್ ಸಿದ್ಧಪಡಿಸಿ ಆದ ಮೇಲೆ ಎಲ್ಲ ಮಳಿಗೆಗಳಿಗೆ ಏಕಕಾಲಕ್ಕೆ ಎಂಎನ್‌ಸಿಯವರು ಬಿಡುಗಡೆ ಮಾಡುತ್ತಾರೆ. ಹೊಸದಾಗಿ ಕಾಣುವಂತೆ ಮಾರಾಟಕ್ಕೆ ಬಿಟ್ಟ ಈ ಐಟಂ ಅತಿ ಹೆಚ್ಚಾಗಿ ಬೆಲೆ ಇಡಲು ಎಷ್ಟು ಸಾಧ್ಯ ಎಂದು ಯೋಚಿಸುತ್ತಾರೆ. ಅಷ್ಟೂ ಹೆಚ್ಚಾಗಿ ಬೆಲೆ ಇಡುತ್ತಾರೆ. ಒಂದು ಲಕ್ಷ ಪೀಸ್‌ಗಳ ಪೈಕಿ ೩೦-೩೫ ಸಾವಿರ ಪೀಸ್‌ಗಳನ್ನು ‘ಬೆಲೆ ಪರವಾಗಿಲ್ಲ’ ಎನ್ನುವ ಮಟ್ಟದ ದರ ನಿಗದಿ ಮಾಡಿ ಹಲವು ತಿಂಗಳ ಕಾಲ ಮಾರಾಟ ಮಾಡುತ್ತಾರೆ. ಅಗತ್ಯವೆನಿಸಿದರೆ ಇನ್ನೂ ಒಂದು ಹಂತದಲ್ಲಿ ಬೆಲೆ ಇಳಿಸುತ್ತಾರೆ. ಆ ಹೊತ್ತಿನ ಇನ್ನೊಂದು ಸರಣಿಯ ಒಂದೆರಡು ಲಕ್ಷ ಪೀಸ್‌ಗಳು ಸಿದ್ಧವಾಗಿರುತ್ತವೆ,. ಅವು ಮಳಿಗೆಗಳ ಕಪಾಟು ಸೇರಬೇಕಾದ ಅನಿವಾರ್ಯತೆ ಬರುತ್ತದೆ. ಆಗ ಅಳಿದುಳಿದ ಹಳೇ ಸರಣಿಯ ಹತ್ತಿಪ್ಪತ್ತು ಸಾವಿರ ಪೀಸ್‌ಗಳನ್ನು ಸೇಲ್‌ಗೆ ಹಾಕುತ್ತಾರೆ. ಆಗ ಪೀಸ್‌ಗಳದು ‘ಬಿಸಾಡುವ ಬೆಲೆ’ ಅಂದರೆ ಥ್ರೋ ಅವೇ ಪ್ರೈಸ್’

‘ಸೇಲ್’ಗಾಗಿ ಕಾತರಿಸಿ ಬೇಕು ಬೇಡವಾದದ್ದನ್ನೆಲ್ಲ ಗುಡ್ಡೆ ಹಾಕಿಕೊಳ್ಳುವ ಜನರೂ ಇರುತ್ತಾರೆ. ಅಮೆರಿಕ, ಇಂಗ್ಲಂಡ್‌ಗಳಲ್ಲಿ ನೆಲೆಸಿರುವ ಭಾರತೀಯರು ಇದಕ್ಕೆ ಹೆಸರುವಾಸಿ! ಪ್ರದರ್ಶನ, ಮಾರಾಟ ತಂತ್ರಗಳಿಗೆ ಹೆಸರಾದ ಕೊಳ್ಳುಬಾಕ ಸಂಸ್ಕೃತಿಯ ಹರಿಕಾರರಾದ ಎಂಎನ್‌ಸಿಗಳು ಗುಣಪಾಲನೆಗೆ ಎಷ್ಟು ಬದ್ಧರು? ಸಾಮಾನ್ಯವಾಗಿ ಒಳ್ಳೆಯ ಗುಣಮಟ್ಟದ ಸರಕನ್ನು ಸಂಗ್ರಹಿಸಿಡುತ್ತಾರೆ.

ಅದೇ ವೇಳೆ ಕಳಪೆ ಸರಕಿಗೂ ಹೆಸರುವಾಸಿಯೇ. ಇಂಗ್ಲಂಡ್ ಮೂಲದ ಸೂಪರ್‌ ಸ್ಟೋರ್‌ಗಳ ಒಂದು ಎಂಎನ್‌ಸಿ ಮೆಟಲಾನ್ ತನ್ನದು ‘ಕಡಿಮೆ ಬೆಲೆ ಸರಕು’ ಎಂದೇ ಜಾಹೀರು ಮಾಡಿಕೊಳ್ಳುತ್ತದೆ. ಅಗ್ಗದ ಸರಕು ಮುಗ್ಗಿದ ಜೋಳ ಆಗಿರದೇ ಇನ್ನೇನು ಆಗಿದ್ದಿತು? ಯಾವುದೇ ಸೂಪರ್‌ಸ್ಟೋರಿಗೆ ಹೋದಾಗಲೂ ಗ್ರಾಹಕನಾದವನು ನೋಡಬೇಕಾದುದು ತಾನು ಕೊಡುವ ಬೆಲೆಗೆ ತಕ್ಕುದಾದ ಗುಣಮಟ್ಟದ ಸರಕನ್ನು ಇಲ್ಲಿ ಇಟ್ಟಿದ್ದಾರೆಯೇ ಎಂಬುದನ್ನು ಮಾತ್ರವೇ.

ಅಮೆರಿಕ ಸೂಪರ್‌ಸ್ಟೋರ್‌ ತುಂಬ ಚೀನಾ ತಯಾರಿಸಿದ ಸರಕೇ ತುಂಬಿ ಹೋಗಿರುತ್ತವೆ. ಬಹುಶಃ ಯಾವುದೇ ಒಂದು ದೇಶ ಪಾಶ್ಚಿಮಾತ್ಯ ವಿಶ್ವದ ವ್ಯಾಪಾರ ಮಳಿಗೆಗಳನ್ನು ಇಷ್ಟೊಂದು ವ್ಯಾಪಿಸಿಕೊಂಡಿದ್ದು ಇಲ್ಲ. ರಾಶಿ ರಾಶಿ ಉತ್ಪಾದನೆ, ಉತ್ಪನ್ನ ವೈವಿಧ್ಯ ಮತ್ತು ಅಗ್ಗದ ಬೆಲೆ ಇವೇ ಚೀನಾ ಸರಕಿನ ವೈಶಿಷ್ಟ್ಯ. ಬೆಲೆಗೆ ತಕ್ಕುದಾದ ಸರಕೆ ಎಂದು ಪರಿಶೀಲಿಸಿದಾಗ ಅದು ಸರಿ ಎನಿಸುತ್ತದೆ.

ಇಂಗ್ಲಂಡಿನಲ್ಲಿ ಪ್ರೈಮಾರ್ಕ್ ಎಂಬ ಎಂಎನ್‌ಸಿ ತನ್ನ ಮಳಿಗೆಗಳನ್ನು ಎಲ್ಲೆಡೆ ಹರಡಿದೆ. ಮಹಿಳೆಯರ, ಪುರುಷರ ಉಡುಗೆ, ತೊಡುಗೆ ಇಲ್ಲಿ ಲಭ್ಯ. ವಿಶೇಷ ಎಂದರೆ ಬೇರೆ ಯಾವುದೇ ಮಳಿಗೆಗಿಂತ ಇಲ್ಲಿ ಸರಕು ಅಗ್ಗ; ಬಹಳ ಅಗ್ಗ. ಪ್ರತಿಷ್ಠಿತರು ಪ್ರೈ,ಮಾರ್ಕ್ ಚೀಲ. ಹಿಡಿದು ಅಡ್ಡಾಡಲು ಅಂಜಬಹುದು; ಆದರೆ ಎಲ್ಲ ಕಡೆಯ ಜನ ಮುಗಿಬಿದ್ದು ಇಲ್ಲಿ ವ್ಯಾಪಾರ ಮಾಡುತ್ತಾರೆ. ಇವರು ಸರಕನ್ನು ತರಿಸಿಕೊಳ್ಳುವುದು ಶ್ರೀಲಂಕಾದಿಂದ.

ಆರ್ಗೋಸ್ ಎಂಬುದು ಕ್ಯಾಟಲಾನ್ ಆಧಾರಿತ ಮಾರಾಟಕ್ಕೆ ಹೆಸರಾದುದು. ಅಲ್ಲಿನವರು ತಮ್ಮ ಅಗತ್ಯಾನುಸಾರ ವಿವಿಧ ಕಂಪೆನಿಗಳಿಂದ ಸಹಸ್ರಾರು ಬಗೆಯ ಸರಕು ಖರೀದಿಸುತ್ತಾರೆ. ಅವರಿಗೆ ಎಲೆಕ್ಟ್ರಿಕ್ ಸಾಧನಗಳನ್ನು ಪೂರೈಸುವ ಕಂಪೆನಿಯು ತಯಾರಿಕಾ ಘಟಕವನ್ನು ಹೊಂದಿರುವುದು ಹರಿಯಾಣದ ಒಂದು ಕೈಗಾರಿಕಾ ವಲಯದಲ್ಲಿ. ಇನ್ನೂರು ಜನ ಭಾರತೀಯ ಉದ್ಯೋಗಿಗಳು ಸರಕು ತಯಾರಿಸಿ ಪೂರೈಸುತ್ತಾರೆ. ಗುಣಮಟ್ಟದ ಬಗೆಗೆ ಕಿಂಚಿತ್ ತಕರಾರಿಲ್ಲ. ಈ ಕಂಪೆನಿಯಲ್ಲಿರುವ ಭಾರತೀಯ ವರಿಷ್ಠಾಧಿಕಾರಿ ಹೇಳುತ್ತಾರೆ. ‘ಭಾರತದ ನೆಲದ ಮೇಲಿನ ಘಟಕ ಕಳುಹಿಸುವ ಉತ್ಪನ್ನಗಳಿಂದಾಗಿ ಬ್ರಿಟನ್ನಿನಲ್ಲಿರುವ ಭಾರತೀಯರ ಬಗೆಗೆ ಸದಭಿಪ್ರಾಯ ಉಂಟಾಗಿದೆ’.

ಇಷ್ಟಾದರೂ ಎಂಎನ್‌ಸಿಗಳು ಮುಖ್ಯವಾಗಿ ತಯಾರಿಕಾ ರಂಗದ ಎಂಎನ್‌ಸಿಗಳು ಭಾರತದಲ್ಲಿ ಮುಖಕ್ಕೆ ಮಸಿ ಬಳಿದುಕೊಂಡಿವೆ.

ಭಾರತೀಯ ಸಂಪಾದಕರೊಬ್ಬರು ಸಿಕ್ಕಿದರೆ ವಿದೇಶಿ ಪತ್ರಿಕೆಯ ಹಿರಿಯ ಪತ್ರಕರ್ತರು ಕೇಳುವ ಪ್ರಶ್ನೆ ಎಂದರೆ ‘ಪೆಪ್ಸಿ ಪೇಯದಲ್ಲಿ ಕೀಟನಾಶಕದ ಅಂಶ ಇದೆ ಎಂದು ಭಾರತದಲ್ಲಿ ಗುಲ್ಲೆದ್ದಿರುವುದು ವಾಸ್ತವಾಂಶವೇನು?’

ಪೇಯದಲ್ಲಿ ಕೀಟನಾಶಕ ಇದೆ ಎಂದು ಮೊದಲು ಸೊಲ್ಲೆತ್ತಿದವರು ಬೇರೆ ಯಾರೂ ಅಲ್ಲ, ಸ್ವತಃ ಸಂಸತ್ ಸದಸ್ಯರು. ಅದೂ ಸಹ ಸದನದಲ್ಲೇ; ಈ ಪೇಯಗಳ ಎಂಎನ್‌ಸಿಗಳೇ ಪೂರೈಸಿದ ಕುಡಿಯುವ ನೀರಿನಲ್ಲಿ ಅಪಾಯಕಾರಿ ಅಂಶಗಳು ಇದ್ದುದು ಜನಜ್ಜಾಹೀರು ಆಯಿತು.

ಹೊಸ ಪ್ರಕರಣವೆಂದರೆ ಎಂಎನ್‌ಸಿ ತಯಾರಿಸಿದ ಚಾಕಲೇಟಿನಲ್ಲಿ ಹುಳುಗಳು ಇರುತ್ತವೆ; ಮೇಲಿಂದ ಮೇಲಿನ ಪ್ರಸಂಗಗಳಲ್ಲಿ ಹುಳುಗಳು ಪತ್ತೆಯಾಗುತ್ತಲೇ ಇವೆ.

ಪೇಯಗಳ ತಯಾರಕರು, ಚಾಕೋಲೇಟ್ ತಯಾರಕರೊಬ್ಬರು ಇದೀಗ ತಡಬಡಾಯಿಸಿದ್ದಾರೆ. ವಶೀಕರಣದ ಪರಿಣಾಮ ಬೀರುವಂಥ ಜಾಹೀರಾತುಗಳಿಂದಷ್ಟೇ ಭಾರೀ ಮಾರಾಟ ಸಾಧಿಸಿದ್ದ ಈ ಕಂಪೆನಿಗಳು ಪ್ರತಿಕೂಲ ಪ್ರಚಾರವು ಸಹಾ ತಮ್ಮ ಪಾಲಿಗೆ ಎಷ್ಟು ತೀಕ್ಷ್ಣ ಆಗಿರಬಹುದೆಂದಬ ಅನುಭವ ಪಡೆಯುತ್ತಿವೆ.

ಎಂಎನ್‌ಸಿಗಳು ಉತ್ಪನ್ನಕ್ಕೆ ಇಡುವ ಬೆಲೆ ಎಷ್ಟು ಸಮಂಜಸ ಎನ್ನುವುದು ಎಂದೂ ಯಾರಿಂದಲೂ ವಿಮರ್ಶೆಗೆ ಒಳಪಡುವುದಿಲ್ಲ. ಆರೆಂಟು ರೂಪಾಯಿ ಕೂಡಾ ಬಾಳದ ಉತ್ಪನ್ನಕ್ಕೆ ೧೫ ರೂಪಾಯಿ ಬೆಲೆ ಇಟ್ಟು ಭಾರತದಲ್ಲಿ ಪಾರಾಗಬಹುದು. ಪೆಪ್ಸಿಯಂಥ ಪೇಯ ಅಥವಾ ಒಂದು ಬಾಟಲಿ ಕುಡಿಯುವ ನೀರಿಗೆ ಅದೇ ಪ್ರಮಾಣದ ಹಾಲಿಗಿಂತ ದುಬಾರಿ ಬೆಲೆ!

ಬೆಲೆ ಹೀಗಿದ್ದರೂ ಗುಣಮಟ್ಟ ಕಳಪೆಯಾದರೂ ಅದಕ್ಕಿಂತ ದೊಡ್ಡ ಭ್ರಮನಿರಸನ ಬಳಕೆದಾರನಿಗೆ ಆಗಲು ಸಾಧ್ಯವೇ?

ಭಾರತದಂಥ ದೇಶದಲ್ಲಿ ಉತ್ಪನ್ನ ತಯಾರಿಸುವಾಗ ಮಾತ್ರವೇ ಎಂಎನ್‌ಸಿಗಳು ಗುಣಗೇಡಿಗಳು ಆಗಬೇಕೇಕೆ? ಗುಣಪಾಲನೆ ಮುಂತಾದ ವಿಷಯ ಬಂದಾಗ ಭಾರತೀಯರು ಬಿಗಿಯಾಗಿರುವುದಿಲ್ಲ. ನಿಜ ಹಾಗೆಂದ ಮಾತ್ರಕ್ಕೆ ಎಂಎನ್‌ಸಿಗಳು ಭಾರತ ಪ್ರವರ್ಧಮಾನ ಮಾರುಕಟ್ಟೆ ಎಂಬ ಪ್ರಜ್ಞೆ ಇಟ್ಟುಕೊಂಡೂ ಕಳಪೆ ಸರಕನ್ನು ತಳ್ಳಬಹುದೆ?

ತಯಾರಿಕಾ ರಂಗದವರಿಗೆ ಅನ್ವಯಿಸಿದ ಈ ಮಾತು ಬರಿದೇ ವ್ಯಾಪಾರ ಮಾತ್ರ ಮಾಡುವ ಎಂಎನ್‌ಸಿಗಳಿಗೂ ಅನ್ವಯವಾಗುತ್ತದೆ. ಭಾರತದ ಗ್ರಾಹಕರು ಬೆಲೆ ಬಗೆಗೆ ಚೌಕಾಶಿ ಮನೋಭಾವ ಇಟ್ಟುಕೊಂಡವರು. ಕೊಟ್ಟ ಬೆಲೆಗೆ ತಕ್ಕ ಗುಣಮಟ್ಟ ಇದೆಯೇ ಎಂದು ಪ್ರಶ್ನಿಸಿದಾಗ ಇವರೆಲ್ಲ ಸಿಕ್ಕಿ ಬೀಳುತ್ತಾರೆ.

ಕುಡಿಯುವ ನೀರನ್ನು ಮೊದಲು ಖನಿಜಯುಕ್ತ ನೀರು ಎಂದು ಕರೆಯುತ್ತಿದ್ದರು. ಏನೇನು ಖನಿಜಾಂಶ ಇರುತ್ತದೆ ಎಂದು ಪ್ರಶ್ನಿಸತೊಡಗಿದಾಗ ಶುದ್ಧೀಕರಿಸಿದ ನೀರು ಎಂದು ವಿವರಣೆಯನ್ನೇ ಬದಲಾಯಿಸಿದರು.

ಆಹಾರ ಉತ್ಪನ್ನ ಬಿಡುಗಡೆ ಮಾಡುವಾಗ ಯಾವ ಯಾವ ಆಹಾರಾಂಶ ಯಾವ ಪ್ರಮಾಣದಲ್ಲಿ ಆ ಸರಕಿನೊಡನೆ ಅಡಕವಾಗಿರುತ್ತದೆ ಎಂದು ಇದೇ ಎಂಎನ್‌ಸಿಗಳು ವಿದೇಶಗಳಲ್ಲಿ ಮಾರುವ ಉತ್ಪನ್ನದ ಪೊಟ್ಟಣಗಳ ಮೇಲೆ ಅಚ್ಚು ಮಾಡುತ್ತವೆ. ಆದರೆ ಅದನ್ನೇ ಭಾರತದಲ್ಲಿ ಅನುಸರಿಸುವುದಿಲ್ಲ.

ಭಾರತದಲ್ಲಿ ಎಂಎನ್‌ಸಿಗಳು ಬಳಕೆದಾರರನ್ನು ಹಗುರವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ.

೨೨-೧೦-೨೦೦೩