ನಾಳೆ ಮಾಡುವುದನ್ನು ಇಂದೇ ಮಾಡು, ಇಂದೇ ಮಾಡುವುದನ್ನು ಈಗಲೇ ಮಾಡು.

ಏನನ್ನಾದರೂ ಸಾಧಿಸಬೇಕೆನ್ನುವವರು ಸಾಮಾನ್ಯವಾಗಿ ಪಾಲಿಸುವ ನಿಯಮವಿದು. ಆದರೆ ರಾಜಕಾರಣದಲ್ಲಿ ಇರುವವರು ಸಾಮಾನ್ಯವಾಗಿ ಇದಕ್ಕೆ ಅಪವಾದ. ದೀರ್ಘಾವಧಿ ಮತ್ತು ಶಾಶ್ವತ ಪರಿಣಾಮ ಬೀರಬಲ್ಲ ಯಾವುದೇ ನೀತಿ ಅಥವಾ ಕ್ರಮ ಇರುವುದಾದರೆ ಮೀನ ಮೇಷ ಎಣಿಸುವುದು ಬಹಳ. ಆರ್ಥಿಕ ವಿಷಯಗಳು ಬಂದಾಗಲಂತೂ ಹಿಂಜರಿಕೆ ಬಹಳ. ಪರಿಣಾಮ ಏನಾಗಬಹುದು ಎಂಬ ಬಗೆಗೆ ಅಂಜಿಕೆ ಬಹಳ.

ಪೇರು ವಿಕ್ರಯ ಅಥವಾ ಖಾಸಗೀಕರಣ ಎಂಬುದರಿಂದ ಗುರುತಿಸಲಾದ ವಿದ್ಯಮಾನವನ್ನೇ ತೆಗೆದುಕೊಂಡರೆ ಮುಂದಿನ ಕ್ರಮ ಏನೆಂಬುದರ ಬಗೆಗೆ ಕೇಂದ್ರ ಸರಕಾರ ಒಡೆದುಕೊಂಡಿದೆ. ನಿರ್ಣಯವನ್ನು ಮೂರು ತಿಂಗಳ ಕಾಲ ಮುಂದಕ್ಕೆ ಹಾಕಿದ್ದಾರೆ. ಆಗಲೂ ಒಂದು ನಿಶ್ಚಿತವಾದ ಹಾದಿ ಕೇಂದ್ರ ಸಚಿವ ಸಮೂಹಕ್ಕೆ ಕಾಣಿಸುವ ಸಾಧ್ಯತೆ ಕಡಿಮೆ. ಏಕೆಂದರೆ ಆಡಳಿತಾರೂಢ ಕೂಟದ ಬಿಜೆಪಿಗೆ ಮುಂಬರುವ ರಾಜ್ಯಗಳ ವಿಧಾನಸಭೆ ಚುನಾವಣೆ ಬಗೆಗೆ ಚಿಂತೆ. ಏನೇ ಇದ್ದರೂ ತಮ್ಮ ಪಾಲಿಗೆ ಹೆಚ್ಚು ಕಡಿಮೆ ಆಗಬಾರದು.

ಷೇರು ವಿಕ್ರಯ ಎಂದರೆ ಸರಕಾರವು ಬಂಡವಾಳವನ್ನು ಮಾರಿಕೊಂಡು ತಿಂದು ಹಾಕುತ್ತದೆ ಎಂದೇ ಅರ್ಥ. ಸರಕಾರಿ ವಲಯವನ್ನು ಬೃಹತ್ತಾಗಿ ಬೆಳೆಸಿ ಇಟ್ಟಕೊಂಡ ಮೇಲೆ ಆ ಸಾಮ್ರಾಜ್ಯವನ್ನು ಕೈಯಾರೆ ಕೆಡವಿಹಾಕಬೇಕು ಎನ್ನುವಾಗ ಹಿಂಜರಿಕೆ ಸಹಜ. ಇಷ್ಟಾಗಿ ಇದೇ ಖಾಸಗೀಕರಣ ವಿವಾದವು ದೊಡ್ಡದಾಗಿರುವುದು ತೈಲ ಕಂಪೆನಿಗಳ ವಿಚಾರ ಬಂದಾಗ. ತೈಲ ಕಂಪೆನಿಗಳ ಅವ್ಯವಹಾರವಾದುದರಿಂದ ಜಾರಿಕೆ ಬಹಳ !

ಸರಕಾರದ ಬಳಿ ಇರುವ ಷೇರುಗಳನ್ನು ವಿಕ್ರಯ ಮಾಡಬೇಕಾದ ವಿಧಾನ ಹೇಗೆಂಬುದು ಇಡೀ ವಿವಾದಕ್ಕೆ ಕಾರಣವಾಗಿದೆ. ಚಿಲ್ಲರೆ ಚಿಲ್ಲರೆಯಾಗಿ ಷೇರುಗಳನ್ನು ಕೊಳ್ಳಬಲ್ಲ ಗ್ರಾಹಕರಿಗೆ ಸುಲಭವಾಗಿ ದಕ್ಕುವಂತೆ ಸರಕಾರಿ ಷೇರುಗಳನ್ನು ಪೇಟೆಗೆ ಬಿಟ್ಟರೆ ಎರಡು ಬಗೆಯ ದುಷ್ಪರಿಣಾಮ ಎದುರಾಗುವ ಶಂಕೆ. ಖಾಸಗಿ ವಲಯದ ರಿಲಾಯನ್ಸ್‌ ಕಂಪೆನಿ ಕೈವಶ ಆಗಿ, ಈಗಾಗಲೇ ಬಲಿಷ್ಠವಾಗಿರುವ ಇಂಡಿಯನ್ ಆಯಿಲ್ ಮೇಲುಗೈ ತಪ್ಪಿ ಹೋಗುತ್ತದೆ. ಎರಡನೇ ಶಂಕೆ ಎಂದರೆ ಬಹುರಾಷ್ಟ್ರೀಯ ಕಂಪೆನಿಗಳ ಕೈವಶವಾದರೆ ತೈಲ ಹಮಚಿಕೆಯಂಥ ಪ್ರಮುಖ ಕ್ಷೇತ್ರದ ಮೇಲೆ ಸರಕಾರಕ್ಕೆ ಇರುವ ಹಿಡಿತ ತಪ್ಪಿ ಹೋಗುತ್ತದೆ. ತುರ್ತು ಸಂದರ್ಭಗಳಲ್ಲಿ ತೈಲ ಸಿಗದಂತೆ ಆಗಿ ಸರಕಾರದ ಕೈ ಕಟ್ಟಿದಂತೆ ಆಗಬಾರದು. ವಾಸ್ತವವಾಗಿ ಜವಾಹರಲಾಲ್ ನೆಹರೂ ಕಾಲದಲ್ಲಿ ಹೀಗೆ ಆಗಿದ್ದರಿಂದ ಮುಂದೆ ಬೃಹತ್ತಾಗಿ ತೈಲ ಉದ್ಯಮವನ್ನು ಸರಕಾರಿ ವಲಯದಲ್ಲಿ ಬೆಳೆಸಲಾಯಿತು.

ಸರಕಾರದ ಪಾಲಿಗೆ ಈ ಬಗೆಯ ಶಂಕೆ ಸಂದಿಗ್ಧಗಳು ಏಳುವುದು ಸಹಜವೇ. ಆದರೆ ಸಮಸ್ಯೆಯನ್ನು ಸಮಚಿತ್ತ ತೋರಿ ಬಿಡಿಸುವ ಬದಲು ನಿರ್ಣಯ ತೆಗೆದುಕೊಳ್ಳುವುದನ್ನು ಮುಂದೂಡುವುದು ಎಷ್ಟು ಸರಿ? ಈ ಬಗೆಯ ಧೋರಣೆ ಒಟ್ಟಾರೆ ಆರ್ಥಿಕ ಸುಧಾರಣಾ ಕ್ರಮಗಳಿಗೆ ಅಡ್ಡಿ ಬರುವುದಲ್ಲವೆ?

ಆರ್ಥಿಕ ಸುಧಾರಣಾ ಕ್ರಮಗಳನ್ನು ದೇಶ ಅಂಗೀಕರಿಸಿ ಹನ್ನೊಂದು ವರ್ಷಗಳಾಗಿದ್ದರೂ ಪ್ರಗತಿ ತೃಪ್ತಿಕರವಾಗಿಲ್ಲ. ಜಾಗತೀಕರಣ ಸಾಧಿಸಲು ಆಯ್ದುಕೊಂಡ ಈ ಮಾರ್ಗದಲ್ಲಿ ಸಾಕಷ್ಟು ಕ್ರಮಿಸಿ ಬಂದುದಾಗಿದೆ. ನಲವತ್ತು ವರ್ಷ ಕಾಲ ನಡೆದು ಬಂದ ದಾರಿಯನ್ನು ಮರೆಯಲು ಸಾಧ್ಯವಿಲ್ಲ. ನಿಜ. ಅಲ್ಲಿಂದೀಚೆಗೆ ಜಗತ್ತೇ ಬದಲಾಗಿದೆ. ಬೃಹತ್ ರಾಷ್ಟ್ರಗಳ ಶಕ್ತಿ ರಾಜಕಾರಣ ವೈಖರಿಯೇ ಬದಲಾಗಿದೆ. ದೇಶಗಳು ಖಂಡಗಳು ಪ್ರತ್ಯೇಕವಾಗುಳಿಯಲು ಸಾಧ್ಯವಾಗಿಲ್ಲ. ಸೋವಿಯತ್ ಸಾಮ್ರಾಜ್ಯ ಕುಸಿದು ಅದರ ಪಳೆಯುಳಿಕೆ ಆಗಿ ಉಳಿದ ರಷ್ಯಾ ಮಾತ್ರವಲ್ಲ; ಚೀನಾ ಸಹಾ ಹೊರ ಜಗತ್ತಿಗೆ ತೆರೆದುಕೊಳ್ಳುವ ದಿಕ್ಕಿನಲ್ಲಿ ದಾಪುಗಾಲು ಇಟ್ಟಿದೆ. ಮಾರುಕಟ್ಟೆ ಪ್ರಧಾನ ಆರ್ಥಿಕತೆಯನ್ನು ಅಂಗೀಕರಿಸಿ ಪೈಪೋಟಿ ಮೇಲೆ ಬದಲಾವಣೆಗಳನ್ನು ಜಾರಿಗೆ ತರುತ್ತಿದೆ. ಕಮ್ಯುನಿಸ್ಟ್‌ ರಾಜ್ಯಭಾರ ವ್ಯವಸ್ಥೆಯನ್ನು ಕಾಪಾಡಿಕೊಂಡು ಬಂದಿರುವ ಚೀನಾದಲ್ಲಿ ಬದಲಾವಣೆ ತುರುವುದು ಸುಲಭ ಇರಬಹುದು. ಆದರೆ ಪ್ರಜಾತಂತ್ರ ವ್ಯವಸ್ಥೆ ಇರುವ ಕಾರಣ ಮುಂದೊಡ್ಡಿ ಭಾರತವು ಪೈಪೋಟಿಯಲ್ಲಿ ಹಿಮದೆ ಉಳಿಯುವುದು ಯುಕ್ತವೆನಿಸುವುದಿಲ್ಲ.

ಆರ್ಥಿಕ ಸುಧಾರಣಾ ಕ್ರಮಗಳನ್ನು ಜಾರಿಗೆ ತರುವ ಮೊದಲ ಹಂತವಾಗಿ ಹೊರ ಜಗತ್ತಿನ ಜೊತೆಗೆ ವ್ಯಾಪಾರ ನಡೆಸುವ ನೀತಿ ಬಗೆಗೆ ಮಾರ್ಪಾಡು ಮಾಡಿಕೋಂಡೆವು. ಆಮದು ರಫ್ತು ನೀತಿಯಲ್ಲಿ ಅಮೂಲಾಗ್ರ ಬದಲಾವಣೆ ಸಾಧ್ಯವಾಯಿತು. ಅನಂತರ ದೇಶದೊಳಗಿನ ವ್ಯಾಪಾರ ವ್ಯವಹಾರಗಳಲ್ಲಿ ಸುಧಾರಣೆ ತರುವ ಕೆಲಸ. ಅದಕ್ಕಾಗಿ ಆರ್ಥಿಕ ನೀತಿಯ ಅಂತಃಸ್ವರೂಪದಲ್ಲಿ ಕೆಲವು ಮಾರ್ಪಾಟು ಮಾಡುವ ಕೆಲಸ ನಡೆಯಿತು. ಕೃಷಿಯೋಗ್ಯ ಭೂಮಿ ನಮ್ಮಲ್ಲಿ ತುಂಡು ತುಂಡು. ಹಾಗೆಯೇ ಕಂಪೆನಿಗಳು ಪುಟ್ಟ ಪುಟ್ಟವು. ಅದರಿಂದಾಗಿ ಉತ್ಪಾದಕತೆ ಕಡಿಮೆ. ಏನನ್ನೇ ಉತ್ಪಾದಿಸಿದರೂ ದುಬಾರಿ ಆಗುತ್ತದೆ. ಈ ಪರಿಸ್ಥಿತಿಯಲ್ಲಿ ರಫ್ತು ಗಳಿಕೆ ತಾನೇ ಹೇಗೆ ಸುಲಭ? ಕಂಪೆನಿಗಳು ಪರಸ್ಪರ ವಿಲೀನಗೊಳ್ಳುವುದಕ್ಕೆ ಪರಸ್ಪರ ವಶಪಡಿಸಿಕೊಳ್ಳುವುದಕ್ಕೆ ಸರಕಾರಿ ವಲಯದಿಂದ ಖಾಸಗಿ ವಲಯಕ್ಕೆ ಪರಿವರ್ತನೆಗೊಳ್ಳುವುದಕ್ಕೆ ಅವಕಾಶ ಕಲ್ಪಿಸಲಾಯಿತು.

ಭಾರತದಲ್ಲಿ ಬಡ್ಡಿ ದರಗಳು ಬಹಳ ಹೆಚ್ಚು. ಮುಂದುವರೆದ ಯಾವ ರಾಷ್ಟ್ರದಲ್ಲೂ ಸಾಲ ಎತ್ತುವುದು ಇಷ್ಟೊಂದು ದುಬಾರಿ ಎನಿಸುವುದಿಲ್ಲ. ದುಬಾರಿ ಬಡ್ಡಿ ದರದಿಂದಾಗಿ ಅಗ್ಗದಲ್ಲಿ ಉತ್ಪಾದನೆ ಸಾಧ್ಯವಾಗುತ್ತಿಲ್ಲ. ಅದರಿಂದ ನಮ್ಮ ಸರಕನ್ನು ಕೊಳ್ಳುವವರೇ ಇಲ್ಲವಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ಹೊರ ದೇಶಗಳ ಸರಕು ಭಾರತದ ಮಾರುಕಟ್ಟೆಗಳಿಗೆ ಸುಲಭವಾಗಿ ನುಗ್ಗುತ್ತವೆ. ಬಡ್ಡಿದರ ಕುರಿತಂತೆ ಇನ್ನೊಂದು ಮಾನವೀಯ ಅಂಶವು ಉಂಟು. ಬಡ್ಡಿ ವ್ಯಾಪಾರ ಮಾಡುವವರು ಸ್ವತಃ ಯಾವುದೇ ರಚನಾತ್ಮಕ ದಂಧೆ ನಡೆಸಲು ಮುಂದೆ ಬರುವುದಿಲ್ಲ. ಇತರರನ್ನು ದುಡಿಮೆಗೆ ಹಚ್ಚಿ, ಅವರು ದುಡಿದಿದ್ದರಲ್ಲಿ ಪಾಲು ಪಡೆಯಲು ಮುಮದಾಗುತ್ತಾರೆ. ಬಡ್ಡಿದರಗಳನ್ನು ಇಳಿಸುವುದಿರಂದ ಇದಕ್ಕೆ ತಡೆ ಉಂಟಾಗುತ್ತದೆ.

ಭಾರತಕ್ಕೆ ಸ್ವಾತಂರ್ತ್ಯ ಬಂದ ಹೊಸತರದಲ್ಲಿ ಅನ್ಯ ರಾಷ್ಟ್ರಗಳಿಂದ ನೆರವು ಸಿಗುತ್ತಿತ್ತು. ಅನಂತರ ಸಾಲ ಸಿಗುವಂತಾಯಿತು. ಮೊದಲು ಭಾರಿ ರಿಯಾಯಿತಿ ಷರತ್ತುಗಳ ಸುಲಭ ಕಂತಿನ ಸಾಲ. ಮುಂದೆ ಅದು ಸಹಾ ದುರ್ಲಭವಾಯಿತು. ವಾಣಿಜ್ಯೋದ್ದೇಶ ಪ್ರಧಾನ ದುಬಾರಿ ಸಾಲ ಮುಂದಿನ ಸರದಿ. ಈಗ ಹೊರ ಜಗತ್ತಿನಿಂದ ಭಾರತದ ಉದ್ಯಮಗಳಲ್ಲಿ ಬಂಡವಾಳ ಹೂಡಿಕೆ. ಈ ಹೂಡಿಕೆ ಯುಗದಲ್ಲಿ ದೇಶಕ್ಕೆ ಅನುಕೂಲ ಆಗುವಂತಹ ರೀತಿಯಲ್ಲಿ ಮಾತ್ರವೇ ಹಣ ಹೂಡಿಕೆಗೆ ಅವಕಾಶ ತೆಗೆದಿಡಬೇಕು.

ಜಾಗತೀಕರಣಕ್ಕೆ ಭಾರತ ತೆರೆದುಕೊಂಡ ಮೇಲೆ ಹಣ ಹೂಡಲು ಬಯಸುವ ವಿದೇಶಿಯರು ಆಸಕ್ತಿ ತೋರಿಸಿದರು. ಹಣಕಾಸು ಪೂರೈಕೆ ಸಂಸ್ಥೆಗಳು ಭಾರತದ ಷೇರುಪೇಟೆಗಳ ಮೇಲೆ ಪರಿಣಾಮ ಬೀರುವಂತಾಯಿತು. ಯಾವ ಕಂಪೆನಿಗಳಿಗೆ ಸಹಾಯ ಮಾಡಲು ಬಯಸುತ್ತಾರೋ ಅವುಗಳ ಷೇರುಗಳನ್ನು ಇವರು ಖರೀದಿಸುವ ಕಾರ್ಯ ನಡೆಯಿತು. ಆರಂಭಕ್ಕೆ ಸಾಂಸ್ಥಿಕ ಹಣಕಾಸು ಒಳ್ಳೆಯ ಪರಿಣಾಮ ಬೀರಿತು. ಈ ಬಗೆಯ ಹಣಕಾಸು ಪಡೆಯುವುದರಿಂದ ಇರುವ ಅಪಾಯ ಏನೆಂಬುದುದ ಸಹಾ ಬೇಗನೇ ಮನವರಿಕೆ ಆಯಿತು.

ಈ ಸಾಂಸ್ಥಿಕ ಹಣಕಾಸು ಸಂಸ್ಥೆಗಳವರು ಆರ್ಥಿಕ ರಂಗದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಇರಿಸುಮುರಿಸಾಗುತ್ತಾರೆ. ಇಲ್ಲವೆ ಇನ್ನೊಂದು ದೇಶದಲ್ಲಿ ಹುಟ್ಟುವಳಿ ಹೆಚ್ಚಾಗಿರುತ್ತದೆ ಎಂದು ಮನವರಿಕೆ ಆದ ತಕ್ಷಣ ಕೈಲಿರುವ ಭಾರತದ ಕಂಪೆನಿಗಳ ಷೇರುಗಳನ್ನು ಮಾರಿ ಕೈ ತೊಳೆದುಕೋಳ್ಳುತ್ತಾರೆ. ತಮ್ಮ ಹಣ ಒಯ್ದು ತಮ್ಮ ಗೂಡು ಸೇರಿಸಿಕೊಳ್ಳುತ್ತಾರೆ.

ಇಂಥ ಹಣಕಾಸನ್ನು ತೀವ್ರವಾಗಿ ಆಧರಿಸಿದ ಇತರ ರಾಷ್ಟ್ರಗಳು ಬೇಸ್ತು ಬಿದ್ದಿವೆ. ಭಾರತವು ಅವರಸ ಪಡದೇ ಇದ್ದ ಕಾರಣ, ಬಹಳ ಹಣವನ್ನು ಒಳಕ್ಕೆ ಬಿಟ್ಟುಕೊಳ್ಳದೆ ಇದ್ದ ಕಾರಣ ಬೆಸ್ತು ಬೀಳಲಿಲ್ಲ. ಬಚಾವಾಯಿತು.

ವಿದೇಶಿ ನೇರ ಬಂಡವಾಳಕ್ಕೆ ಈಗ ವಿಫುಲ ಅವಕಾಶ ನೀಡಲಾಗಿದೆ. ಭಾರತೀಯರ ಉದ್ಯಮ ಯೋಜನೆಗಳಲ್ಲಿ ವಿದೇಶಿಯರು ನೇರವಾಗಿ ಪಾಲು ಪಡೆಯುವುದಕ್ಕೆ ಅವಕಾಶ ಮಾಡುವುದು ಇದರಲ್ಲಿನ ಕ್ರಮ. ಬಂಡವಾಳ ಹೂಡಿದವರು ಸ್ವತಃ ಉದ್ಯಮ ನಡೆಸುವುದರಲ್ಲಿ ಪಾಲ್ಗೊಂಡು ಲಾಭ ಮಾಡಬೇಕು. ಇದರಿಂದ ವಿದೇಶಿಯರ ಕೆಲವೊಂದು ಲಾಭಕಾರಿ ಕಾರ್ಯಾಚರಣೆಗಳು ಭಾರತೀಯರ ಪಾಲಿಗೆ ಅಉಭವಕ್ಕೆ ಬರುತ್ತವೆ. ಅಲ್ಲದೆ ನೇರವಾಗಿ ಹಣ ಹೂಡಿದವರು ಸಾಂಸ್ಥಿಕ ಹಣಕಾಸಿನವರಂತೆ ಬೇಕೆಂದಾಗ ಗುಡಾರ ಎತ್ತುವಂತಿಲ್ಲ.

ಸದ್ಯ ವಿದೇಶಿ ಹೂಡಿಕೆಗಾರರು ಭಾರತದಲ್ಲಿ ತಾವು ಗಳಿಸಿದ್ದನ್ನೆಲ್ಲ ತಮ್ಮ ದೇಶದ ಹಣದ ರೂಪದಲ್ಲಿ ಒಯ್ಯಲು ಸಾಧ್ಯವಿಲ್ಲ. ಈಗಿನ ನಿಯಮಗಳ ಪ್ರಕಾರ ಸ್ವಲ್ಪ ,ಭಾಗ ಮಾತ್ರ ಒಯ್ಯಬಹುದು. ಹೀಗಾಗಿ ಹೂಡಿಕೆ ರೂಪದಲ್ಲಿ ಬಂದ ಹಣ ಸಾಕಷ್ಟು ಕಾಲ ಇಲ್ಲೇ ಉಳಿಯುತ್ತದೆ.

ಜಾಗತೀಕರಣ ಪ್ರಕ್ರಿಯೆಯಲ್ಲಿ ಭಾರತಕ್ಕೆ ಖುದ್ದು ಮಾರ್ಗದರ್ಶನ ನೀಡುತ್ತಿರುವ ವಿಶ್ವ ಬ್ಯಾಂಕಿನವರು ಮೊದಲಿಗೇ ಹಣದುಬ್ಬರ ನಿಯಂತ್ರಣ ಆಗಬೇಕೆಂದು ಹೇಳಿದರು. ಅದನ್ನು ಕಳೆದ ಐದು ವರ್ಷಗಳಲ್ಲಿ ಮಾಡಿ ತೋರಿಸಿದ್ದಾಗಿದೆ. ತೀವ್ರವಾದ ಹಣದುಬ್ಬರಕ್ಕೆ ತುತ್ತಾಗಿ ಹಾಳಾಗಿ ಹೋದ ದೃಷ್ಟಾಂತಗಳು ಅನೇಕ ಇವೆ. ಹಣದುಬ್ಬರ ನಿಯಂತ್ರಣ ಭಾರತದ ಒಮದು ದೊಡ್ಡ ಸಾಧನೆ. ಸಧ್ಯ ಆರ್ಥಿಕ ಹಿಂಜರಿತ ಇನ್ನೂ ಕಾಡುತ್ತಿದೆ. ಬಳಕೆದಾರನ ಖರೀದಿ ಸಾಮರ್ಥ್ಯ ಏರದೇ ಇರುವುದಕ್ಕೆ ಹಣದುನಬ್ಬರ ಕಡಿವಾಣ ಹಾಗೂ ಆರ್ಥೀಕ ಹಿಂಜರಿತ ಎರಡೂ ಕಾರಣ. ಈಚಿನ ಹಲವು ವಾರಗಳಲ್ಲಿ ಪರಿಸ್ಥಿತಿ ಸ್ವಲ್ಪ ಮಾತ್ರ ಸುಧಾರಿಸಿದಂತೆ ಕಾಣುತ್ತದೆ.

ಈ ಸನ್ನಿವೇಶದಲ್ಲಿ ಭಾರತವು ಹಿಂದಕ್ಕೆ ಹೋಗಲು ಸಾಧ್ಯವೇ? ಬಿ.ಜೆ.ಪಿ. ಸರಕಾರ ಮಾತ್ರವಲ್ಲದೆ ಇನ್ನಾವ ಸರಕಾರ ಇದ್ದಿದ್ದರೂ ಹಿಂದಕ್ಕೆ ಹೋಗಲು ಸಾದ್ಯವಿಲ್ಲ. ಏನಿದ್ದರೂ ವೇಗವನ್ನು ಕಡಿಮೆ ಮಾಡಬಹುದು. ಆದರಿಂದ ಹಾನಿಯೇ ಬಹಳ.

ಪ್ರಪಂಚದಲ್ಲಿ ಎರಡು ಬಗೆಯ ಆರ್ಥಿಕ ವ್ಯವಸ್ಥೆ. ರಾಜಕೀಯ ರಂಗವು ವಾಣಿಜ್ಯೋದ್ಯಮ ರಂಗವನ್ನು, ಅಂದರೆ ಹಣವನ್ನು ನಿಯಂತ್ರಿಸುವುದು. ಇನ್ನೊಂದು ಬಗೆ ಎಂದರೆ ಹಣವು ರಾಜಕೀಯ ರಂಗವನ್ನು ನಿಯಂತ್ರಿಸುವುದು.

ಮಿಶ್ರ ಆರ್ಥಿಕ ವ್ಯವಸ್ಥೆ ಎಂಬುದನ್ನು ಅಂಗೀಕರಿಸಿದ್ದ ಭಾರತ ಎರಡೂ ಪದ್ಧತಿಗಳ ಮಿಶ್ರಣ ಪಾಲಿಸಿಕೊಂಡು ಬಂದಿತ್ತು. ಈಗ ಪರಿಸ್ಥಿತಿ ಬದಲಾಗಿ ರಾಜಕೀಯವೂ ಹಣದ ನಿಯಮತ್ರಣಕ್ಕೆ ಒಳಗಾಗುವ ವ್ಯವಸ್ಥೆಯು ಜಾಗತೀಕರಣದ ಫಲವಾಗಿ ಜಾರಿಗೆ ಬರುತ್ತಿದೆ.

ಈ ಅವಸ್ಥಾಂತರ ಸ್ಥಿತಿಯಲ್ಲಿ ಗೊಂದಲ ತಳಮಳ ಎದ್ದಿದೆ. ಇದು ಶಮನಗೊಳ್ಳಲು ಹಲವು ವರ್ಷಗಳೇ ಹಿಡಿಯುತ್ತದೆ.

೦೨-೧೦-೨೦೦೨