ಚಿನ್ನದ ಮೊಟ್ಟೆ ಇಡುವ ಬಾತುಕೋಳಿ. ಉದ್ಯಮ ರಂಗದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ (ಐ.ಟಿ.ಗೆ) ಅನ್ವಯಿಸುವ ಒಂದು ಮಾತು ಇದು. ಆದರೆ ಆ ಬಾತುಕೋಳಿ ಚಿನ್ನದ ಮೊಟ್ಟೆ ಇಡುವುದು ಕಡಿಮೆ ಆಗಿದೆ. ಆದರೂ ಇತರ ಉದ್ಯಮ ವಲಯಗಳಿಗೆ ಹೋಲಿಸಿದರೆ ಮೋಸವಿಲ್ಲ.

ಐ.ಟಿ. ಮೇಳವೆಂಬ ಒಂದು ಬಗೆಯ ಜಾತ್ರೆ ಬೆಂಗಳೂರಿನಲ್ಲಿ ಪ್ರತಿ ವರ್ಷ ನಡೆಯುತ್ತದೆ. ಈ ವರ್ಷ ಆ ಮೇಳಕ್ಕೆ ಖದರ್‌ ಇರುವುದಿಲ್ಲ ಎಂಬ ನಿರೀಕ್ಷೆ ಇತ್ತು. ಅದಕ್ಕೆ ಕಾರಣವಿಲ್ಲದೆ ಇಲ್ಲ. ವಿಶ್ವಾದ್ಯಂತ ಐ.ಟಿ. ವಲಯ ನಿತ್ರಾಣಗೊಂಡಿದೆ. ಹಾಗಿರುವಾಗ ಬೆಂಗಳೂರಿನ ಮೇಳಕ್ಕೆ ಎಷ್ಟು ಮಹಾ ವಿದೇಶಿ ಕಂಪೆನಿಗಳವರು ಬಂದಾರು? ಅದು ನಿಜ. ಪ್ರತಿಷ್ಠಿತ ಕಂಪೆನಿಗಳು ಬಹಳ ಬಂದಿಲ್ಲ. ಆದರೂ ಐಟಿ ಮೇಳವೇನೂ ಭಣ ಭಣ ಎನ್ನುತ್ತಿಲ್ಲ. ಮುಂದೇನು ಎನ್ನುವ ಕುತೂಹಲ ಈ ಕ್ಷೇತ್ರದವರಿಗೆ ಇರುವುದರಿಂದ ಹೊಸ ಸಾಧ್ಯತೆಗಳ ಹುಡುಕಾಟ ನಡೆಸುವವರು ದೂರ ಉಳಿದಿಲ್ಲ.

ವ್ಯಾಪಾರದ ದೃಷ್ಟಿಯಿಂದ ಅಂಥ ಉತ್ತೇಜಕ ವಾತಾವರಣ ಇಲ್ಲದಿದ್ದರೂ, ಹಲವಾರು ಕುತುಹಲಕಾರಿ ಅಂಶಗಳು ಬೆಳಕಿಗೆ ಬಂದಿವೆ. ಭಾರತದ ಸಿಲಿಕಾನ್ ಕಣಿವೆ ಎಂದೇ ಪ್ರಸಿದ್ಧವಾದ ಬೆಂಗಳೂರಿನಲ್ಲಿ ಕಿರಿಯರಿಗೆ ಐಟಿ ಮೇಳಗಳೆಂದರೆ ತುಂಬಾ ಆಕರ್ಷಣೆ. ಅದಕ್ಕೆ ಈ ಬಾರಿ ಮೋಸವಾಗಲಿಲ್ಲ. ವ್ಯಾಪಾರೋದ್ದೇಶದಿಂದ ಬರುವವರ ಭರಾಟೆ ಕಡಿಮೆಯಾದುದು ಕಿರಿಯರಿಗೆ ಮತ್ತು ಜ್ಞಾನಾರ್ಜನೆಗೆ ಬರುವವರ ಪಾಲಿಗೆ ಹಿಂದಿನ ಮೇಳಗಳಿಗಿಂತ ಹೆಚ್ಚು ಅನುಕೂಲಕರ ವಾತಾವರಣವೇ ಇತ್ತು.

ಐ.ಟಿ ಬಗೆಗೆ ಬೆಂಗಳೂರು ಮತ್ತಿತರ ನಗರ ಪ್ರದೇಶಗಳ ಕಿರಿಯರಿಗೆ ಅರಿವು ಹೆಚ್ಚೆಂಬ ಹಾಗೂ ನಗರೇತರ ಗ್ರಾಮ ಪ್ರದೇಶಗಳ ಕಿರಿಯರಿಗೆ ಅದು ಕಡಿಮೆಯೆಂಬ ಭಾವನೆ ಪ್ರಚಲಿತ. ಆದರೆ ಈ ವರ್ಷ ಐಟಿ ಮೇಳದಲ್ಲಿ ನಡೆಸಿದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಇದು ತಪ್ಪೆಂಬ ಅಂಶ ಬೆಳಕಿಗೆ ಬಂದಿತು. ದೂರದ ಜಿಲ್ಲೆಗಳ ಕಿರಿಯರು ಬೆಂಗಳೂರು ನಗರದ ಕಿರಿಯರ ಸರಿಸಮಾನ ಎನ್ನುವ ರೀತಿಯಲ್ಲಿ ಮೆರೆದರು. ಬಹುಮಾನ ಗಳಿಸಿದರು.

ಬೆಂಗಳೂರಿನ ಕಿರಿಯರಿಗೆ ಐ.ಟಿ. ಕಲಿಕೆಗೆ ಹಾಗೂ ಅರಿವು ಗಳಿಕೆಗೆ ಪ್ರಶಸ್ತಿ ಎನ್ನುವಂಥ ವಾತಾವರಣ ಸಹಜ ಲಭ್ಯ. ಅಂಥ ವಾತಾವರಣವೇ ಇಲ್ಲದಿದ್ದರೂ ಸ್ವತಃ ಕಷ್ಟಪಟ್ಟು ಮನಗೂಡಿಸಿಕೊಂಡ ಅರಿವಿನಿಂದಾಗಿ ಮಂಡ್ಯ, ಹಾಸನ, ರಾಯಚೂರು, ಗದಗ, ಸಿರಗುಪ್ಪಗಳಿಂದ ಬಂದ ವಿದ್ಯಾರ್ಥಿಗಳು ಬೆಂಗಳೂರಿನ ವಿದ್ಯಾರ್ಥಿಗಳ ಜೊತೆ ಸರಿ ಸಮನಾಗಿ ಸೆಣಸಿ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಬಹುಮಾನಗಳನ್ನು ಬಾಚಿಕೊಂಡರು. ಈ ರಸಪ್ರಶ್ನೆ ಕಾರ್ಯಕ್ರಮಗಳಿಗಾಗಿ ಟಿ.ಸಿ.ಎಸ್. ನವರು ರೂಪಿಸಿದ್ದ ಪ್ರಶ್ನೆಗಳು ಸಾಕಷ್ಟು ಕಠಿಣ ಇತ್ತೆಂದು ರಾಜ್ಯ ಸರಕಾರದ ಐ.ಟಿ. ಮುಖ್ಯಸ್ಥ ವಿವೇಕ ಕುಲಕರ್ಣಿ ಹೇಳಿದರು.

ಅಂದರೆ ಐ.ಟಿ.ಉದ್ಯಮ ಹಿಂಜರಿತ ಕಂಡಿದೆ ಎನ್ನುವ ಹಿನ್ನೆಲೆಯಲ್ಲಿ ಕಂಪ್ಯೂಟರ್‌ ಕಲಿಕಾ ಕೇಂದ್ರಗಳಿಗೂ ಬೇಡಿಕೆ ಕಡಿಮೆ. ಕಲಿತವರೇ ಕೆಲಸವಿಲ್ಲದೇ ಪರಿತಪಿಸುತ್ತಿದ್ದಾರೆ ಎನ್ನುವ ಕಾರಣದಿಂದ ಸಹಸ್ರಾರು ರೂಪಾಯಿ ವೆಚ್ಚದ ಕಲಿಕಾ ಕೋರ್ಸ್‌ಗಳಿಗೆ ಸೇರಲು ಕಿರಿಯರು ಹಿಂಜರಿಯುತ್ತಿದ್ದಾರೆ. ಸಣ್ಣ ಪುಟ್ಟ ಕಂಪ್ಯೂಟರ್‌ ಶಾಲೆಗಳು ಮುಚ್ಚಿಹೋಗಿವೆ. ಐ.ಟಿ ಮೇಲದಲಲ್‌ಇ ನಿರುದ್ಯೋಗಿಗಳದು ಸಾಲು ಸಾಲು. ಯಾವುದಾದರೂ ಕಂಪೆನಿಯಲ್ಲಿ ಉದ್ಯೋಗಾವಕಾಶ ಸಿಗುವುದೇನೋ ಎಂಬ ಹುಡುಕಾಟ ಸಾಮಾನ್ಯವಾಗಿ ಸಾಫ್ಟವೇರ್‌ ಎಂಜಿನೀಯರ್‌ರವರು ಒಂದು ಕಡೆ ನೆಲೆ ಊರುವವರಲ್ಲ. ಉದ್ಯೋಗವನ್ನು ಬೇರೆ ಬೇರೆ ಕಂಪೆನಿಗಳಲ್ಲಿ ಅರಸುತ್ತಾ ಇರುತ್ತಾರೆ. ಉನ್ನತ ತಂತ್ರಜ್ಞಾನ ಅಧಿಕ ಸಂಬಳ ಎಂಬುದರ ಕಡೆಯೇ ಇವರ ಕಣ್ಣು. ಆದರೆ ದುರದೃಷ್ಟವಶಾತ್ ಎಲ್ಲ ಐ.ಟಿ. ಕಂಪೆನಿಗಳು ಅತ್ಯಗತ್ಯ ಎನಿಸುವಷ್ಟು ಎಂಜನೀಯರುಗಳನ್ನು ಮಾತ್ರ ಇರಿಸಿಕೊಂಡು ತೆಗೆಯಬಹುದಾದ ಎಲ್ಲರನ್ನೂ ತೆಗೆದಿದ್ದಾರೆ. ಹೊಸಬರನ್ನು ಸೇರಿಸಿಕೊಳ್ಳುತ್ತಿಲ್ಲ. ಕ್ಯಾಂಪಸ್‌ಗಳಿಗೆ ಹೋಗಿ ಆಯ್ಕೆ ಮಾಡಿಬಂದ ಹುಡುಗ ಹುಡುಗಿಯರಿಗೆ ಉದ್ಯೋಗ ಪತ್ರ ಕಳಿಸಲಿಲ್ಲ.

ಐ.ಟಿ. ಕಂಪೆನಿಗಳ ಸಂದಿಗ್ಧ ಸಹಾ ಅರ್ಥವಾಗುವಂಥದೇ. ತಮ್ಮಲ್ಲಿ ಉಪಯುಕ್ತವಾಗಿ ಇರುವವರ ಸವಲತ್ತುಗಳನ್ನು ಅಧಿಕ ಮಾಡಲೆಂದು ಅವಕಾಶ ಮಾಡಿಕೊಟ್ಟಿದ್ದ ಖರ್ಚುಗಳನ್ನು ಮೊಟಕುಗೊಳಿಸಿದ್ದಾರೆ. ಆದರೂ ಐ.ಟಿ. ಕ್ಷೇತ್ರದಲ್ಲಿ ಕೆಲಸ ಮಾಡಲು ಜನ ಲಭ್ಯ. ಇಳಿಸಿದ ದರಗಳ ಸಂಬಳಕ್ಕೆ ಸರಿಸಮಾನದ ಹಣ ಕೂಡಾ ಭಾರೀ ಮೊತ್ತ ಎನಿಸಿಕೊಳ್ಳುತ್ತದೆ. ಆದ್ದರಿಂದ ಈಗಲೂ ಯುವ ಜನತೆ ಬೇರೆಡೆ ಕಣ್ಣು ಹಾಯಿಸದೆ ಇಲ್ಲಿ ಕೆಲಸ ಸಿಗಲೆಂದು ಇಲ್ಲಿನ ಕೆಲಸ ಉಳಿಸಿಕೊಳ್ಳಬೇಕೆಂದು ಹಾತೊರೆಯುತ್ತಾರೆ.

ಕಂಪೆನಿಯವರು ಸಹಾ ತಮ್ಮಲ್ಲಿ ತರಬೇತಾಗಿ ನುರಿತಿರುವ ಸಿಬ್ಬಂದಿಯನ್ನು ತೆಗೆದು ಹಾಕಲು ಸದಾ ಉತ್ಸುಕರಾಗುವುದಿಲ್ಲ. ಇವತ್ತು ವಹಿವಾಟು ಕಡಿಮೆ ಇರಬಹುದು. ನಾಳೆ ದಿಢೀರ್‌ ಪ್ರಾಜೆಕ್ಟ್ ಬಂದರೆ ಜನರು ಬೇಕಲ್ಲವೆ? ಅನುಭವಸ್ಥರನ್ನು ತೆಗೆದು ಹಾಕಿದರೆ ಬೇಕೆಂದಾಗ ಬೇಕಾಗುವಷ್ಟು ಸಂಖ್ಯೆಯಲ್ಲಿ ಅವರು ಸಿಗುತ್ತಾರೆಯೇ? ಆದ್ದರಿಂದಲೇ ಕೈತುಂಬ ಕೆಲಸ ಇಲ್ಲದಾಗಲೂ ಅವರನ್ನು ಸಾಕಿಕೊಂಡು ಬರಲು ಸಿದ್ಧರಾಗುತ್ತಾರೆ.

ಐ.ಟಿ. ಕ್ಷೇತ್ರಕ್ಕೆ ಬರಿದೆ ಎಂಜಿನಿಯರರು ಮಾತ್ರ ಬೇಕಾಗುತ್ತಾರೆ ಎನ್ನುವಂತಿಲ್ಲ. ಬಿ.ಇ. ಗಿಂತ ಕಡಿಮೆ ವಿದ್ಯಾರ್ಹತೆಯುಳ್ಳ ನಾನಾ ಕಂಪ್ಯೂಟರ್‌ ಕಾರ್ಯಾಚರಣೆಗಾಗಿ ಬೇಕಾಗುತ್ತಾರೆ. ಉದ್ಯೋಗಾವಕಾಶಗಳು ಕಡಿಮೆ ಆಗಿರುವುದು ಇಂಥವರನ್ನು ಕಾಡುತ್ತಿದೆ.

ಅಮೆರಿಕದಲ್ಲಿ ಸೆಪ್ಟಂಬರ್‌ ೧೧ರಂದು ನಡೆದ ದುರ್ಘಟನೆ ನಂತರ ಅಲ್ಲಿನ ಕಾರ್ಯವನ್ನು ಅನಾಮತ್ತಾಗಿ ಬೇರೆ ಕಡೆಗೆ ವರ್ಗಾಯಿಸಿವೆ. ಮುಂಭಾಗದ ಕಚೇರಿಗಳನ್ನು ಹಿಂಭಾಗದ ಕಚೇರಿಗಳು ದೂರಕ್ಕೆ ಸಾಗಿಸಿವೆ. ಹಿಂಭಾಗದ ಕಚೇರಿ ಎಂದರೆ ಲೆಕ್ಕ ಪತ್ರ ಮತ್ತಿತರ ದಾಖಲೆಗಳನ್ನು ಸೃಷ್ಟಿಸಿ ಕಾಪಾಡುವುದು. ಕಾರ್ಯ ಚಟುವಟಿಕೆಯ ವಿಶ್ಲೇಷಣೆ ನಡೆಸುವುದು ಮುಂತಾದವು ಸೇರುತ್ತವೆ. ಗ್ರಾಹಕರ ಜೊತೆ ಎಡತಾಕುವ ಮುಂಭಾಗ ಕಚೇರಿ ಅಲ್ಲೇ ಇರಬೇಕು. ಹಿಂಭಾಗ ಕಚೇರಿ ಎಲ್ಲೂ ಇರಬಹುದು. ಅದನ್ನು ಭಾರತದಂಥ ಕಡೆಗೆ ವರ್ಗಾಯಿಸಬಹುದು. ಎಲ್ಲ ಕಡೆಗೂ ಉಪಗ್ರಹ ಮೂಲಕ ಸಂಪರ್ಕ ಸಾಧ್ಯವಾಗುವ ಕಾರಣ ಅಮೆರಿಕದ ಒಂದು ಕೊಠಡಿಯ ಕಾರ್ಯವನ್ನು ಭಾರತದಲ್ಲಿರುವ ಕೊಠಡಿಯ ಕಂಪ್ಯೂಟರ್‌ಗಳ ಜೊತೆಗೂಡಿಸಬಹುದು.

ಹೀಗೆ ಹೊರ ಕಚೇರಿ ಕಾರ್ಯಬಾರವನ್ನು ವಹಿಸಿಕೊಂಡು ಗುತ್ತಿಗೆ ಮೇಲೆ ಕಾರ್ಯ ನಿರ್ವಹಿಸುವ ವಿಶಿಷ್ಟ ಕಂಪೆನಿಗಳೇ ಹುಟ್ಟಿಕೊಂಡಿವೆ. ಒಂದೊಂದು ಕಂಪೆನಿಯೂ ಅಮೆರಿಕದ ನಾಲ್ಕಾರು ಕಂಪೆನಿಗಳ ಕೆಲಸದ ಗುತ್ತಿಗೆ ಹಿಡಿದಿರುವುದೂ ಉಂಟು.

ಇದೇ ರೀತಿ ಅಮೆರಿಕದ ಗ್ರಾಹಕರ ಕ್ರೆಡಿಟ್ ಕಾರ್ಡ್ ವಹಿವಾಟನ್ನು ಭಾರತದ ನೆಲದ ಮೇಲಿಂದ ನಿರ್ವಹಿಸುವುದು ಉಂಟು. ವಿಮಾ ಕಂಪೆನಿಗಳು ಅಪಘಾತಾನಂತರ ವೈದ್ಯ ಚಟುವಟಿಕೆ ಮತ್ತಿತರ ಕಾರ್ಯಾಚರಣೆಗಳನ್ನು ಭಾರತದಲ್ಲಿ ಸ್ಥಾಪಿಸಿದ ಕಂಪ್ಯೂಟರಗಳ ನೆರವಿನಿಂದ ನಡೆಸುವುದೂ ಉಂಟು. ಅಮೆರಿಕದಲ್ಲಿ ಅಭದ್ರತೆ ಮೂಡಿದ್ದು ಹೀಗೆ ಭಾರತದ ಜನರಿಗೆ ಉದ್ಯೋಗ ಒದಗಿಸಿಕೊಡುತ್ತದೆ. ಆದರೆ ಎಂಜನಿಯರರು ನಡೆಸುವ ಕಾರ್ಯಾಚರಣೆಗಳಿಗೇ ಸಾಫ್ಟ್‌ವೇರ್ ಮುಂತಾದವುಗಳಿಗೆ ಮನ್ನಣೆ ಬಹಳ. ಇವೆಲ್ಲ ಏನಿದ್ದರೂ ಸೇವಾ ಸೌಲಭ್ಯ ಒದಗಿಸುವಂಥವು ಮಾತ್ರ. ಗಿಟ್ಟುಪಾಡು ಕಡಿಮೆ. ಸಾಫ್ಟ್‌ವೇರ್‌ ಕೆಲಸ ಲಾಭಕಾರಿ. ಅದೆಲ್ಲ ಕಂಪ್ಯೂಟರ್‌ ಕಾರ್ಯಾಚರಣೆಗೆ ಮಿದುಳನ್ನು ಸೃಷ್ಟಿ ಮಾಡುವ ಕಾರ್ಯ.

ನಾನಾ ಸ್ವರೂಪದ ಕಂಪ್ಯೂಟರ್‌ ಕಾರ್ಯಾಚರಣೆಯನ್ನು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನಡೆಸಬಲ್ಲ ಮಾನವ ಸಂಪನ್ಮೂಲ ಭಾರತದಲ್ಲಿ, ಮುಖ್ಯವಾಗಿ ಬೆಂಗಳುರಿನಲ್ಲಿ ಲಭ್ಯ ಇರುವುದೇ ಸೊಗಸು. ಇದೇ ರಾಜ್ಯದ ಹೆಮ್ಮೆ.

ಭಾರತದಲ್ಲಿ ಹಾರ್ಡ್‌ವೇರ್‌ ಉದ್ಯಮವು ಸಾಫ್ಟ್‌ವೇರ್‌ ಉದ್ಯಮ ಬೆಳೆದ ಮಟ್ಟಕ್ಕೆ ಅಭಿವೃದ್ಧಿಗೊಳ್ಳಲಿಲ್ಲ ಎಂದು ವಿಷಾದಿಸುವುದುಂಟು. ಹಾರ್ಡ್‌ವೇರ್‌ ಉದ್ಯಮಾಭಿವೃದ್ಧಿ ಅವಕಾಶಗಳು ಈಗಾಗಲೇ ಕೈಜಾರಿ ಹೋಗಿವೆ. ಅದಕ್ಕಾಗಿ ಈಗ ಚಿಂತಿಸಿ ಫಲವಿಲ್ಲ.

ಹಾರ್ಡ್‌ವೇರ್‌ ಎಂದರೆ ಕಣ್ಣಿಗೆ ಹೊರಗಿನಿಂದ ಸುಲಭ ಗೋಚರ ಎನಿಸುವ ಕಂಪ್ಯೂಟರ್‌ ಭಾಗಗಳು. ಇವುಗಳನ್ನು ತಯಾರಿಸಲು ಭಾರೀ ದೊಡ್ಡ ಪ್ರಮಾಣದಲ್ಲಿ ಬಂಡವಾಳ ತೊಡಗಿಸಬೇಕಾಗುತ್ತದೆ. ತಂತ್ರಜ್ಞಾನ ಭಾರತದ ಬಳಿ ಇಲ್ಲ ಎನ್ನುವ ಪ್ರಮೇಯವೂ ಇಲ್ಲ. ಆದರೆ ಇತರ ದೇಶಗಳು ಭಾರತಕ್ಕಿಂತ ಬಹಳ ಅಗ್ಗವಾಗಿ ಹಾರ್ಡ್‌ವೇರ್‌ ತಯಾರಿಸಬಲ್ಲವು. ಹಾರ್ಡ್‌ವೇರ್‌ ನ್ನು ಸ್ವತಃ ತಯಾರಿಸುವುದಕ್ಕಿಂತ ಕೊಳ್ಳುವುದೇ ವಾಸಿ.

ಸಾಫ್ಟ್‌ವೇರ್‌‌ನ ಸೊಗಸೇ ಬೇರೆ. ಅದೇನಿದ್ದರೂ ನಮ್ಮ ತಂತ್ರಜ್ಞಾನ ಬುದ್ದಿಮತ್ತೆಯ ಫಲಿತ. ತಂತ್ರಜ್ಞಾನರೇ ನಮ್ಮ ಆಸ್ತಿ. ಈ ಮಾನವ ಸಂಪನ್ಮೂಲವನ್ನು ಕಾಪಾಡಿಕೊಳ್ಳಬೇಕು. ಬೆಳೆಸಬೇಕು.

ಐ.ಟಿ. ಕ್ಷೇತ್ರ ಉಚ್ಛ್ರಾಯ ಸ್ಥಿತಿಯಲ್ಲಿ ಇರುವಾಗ ಆ ವೈಭವದ ವಕ್ತಾರ ತಾನೆಂದು ಬೀಗುವ ರಾಜ್ಯ ಸರಕಾರವು ಐಟಿ ಹಿನ್ನೆಡೆಯ ವರ್ಷಗಳಲ್ಲಿ ಈ ಸಂಪನ್ಮೂಲದ ಯೋಗಕ್ಷೇಮ ಕುರಿತು ಏನು ಮಾಡಿದೆ? ಉತ್ತರ ಸಿಗುವುದಿಲ್ಲ. ವಾಸ್ತವವಾಗಿ ಐಟಿ ಕಂಪೆನಿಗಳ ಹಿತರಕ್ಷಣೆಗೆ ಟೊಂಕ ಕಟ್ಟುವ ಸರಕಾರ ಅದಕ್ಕಿಂತ ಮುಂದೆ ಹೋಗಿ ಏನೂ ಮಾಡುವುದಿಲ್ಲ.

ಕಂಪ್ಯೂಟರ್‌ ಕಲಿಕಾ ಕೇಂದ್ರಗಳು ಉಚ್ಛ್ರಾಯ ದಿನಗಳಲ್ಲಿ ಕಿರಿಯರನ್ನು ಭಾರೀ ಶುಲ್ಕ ವಿಧಿಸುವ ಮೂಲಕ, ಪರಿಪೂರ್ಣ ಹೇಳಿಕೊಡುವಲ್ಲಿ ವಿಫಲವಾಗುವ ಮೂಲಕ ಶೋಷಣೆ ಮಾಡಿವೆ. ಆಗಲೂ ಅವುಗಳ ಮೇಲೆ ನಿಯಂತ್ರಣ ಸಾಧಿಸಲಿಲ್ಲ. ಕಲಿಯುವವರ ಸಂಖ್ಯೆ ಕ್ಷೀಣಿಸಿದಾಗ ಮುಚ್ಚುವುದರ ಅಂಚಿಗೆ ಹೋಗಿವೆ. ಈಗಲೂ ಅವುಗಳ ಸಂಬಂಧ ನಿಷ್ಕಾಳಜಿ, ನಿಯಂತ್ರಣ ಕ್ರಮಗಳನ್ನು ಈಗ ತರುವುದು ಸುಲಭ. ಸಾಯುತ್ತಿರುವವು ಹೇಗೂ ಸಾಯುತ್ತವೆ. ಗಟ್ಟಿಯಾಗಿ ಉಳಿದುಕೊಳ್ಳಬಲ್ಲಂಥವು ನಿಯಂತ್ರಣ ಕ್ರಮಗಳಿಗೆ ಒಳಪಡುತ್ತವೆ. ಅವುಗಳ ಬಗೆಗೆ ಚಿಂತಿಸಲು ಇದು ಸಕಾಲ.

ನಿರುದ್ಯೋಗಿ ಅನುಭವಿಗಳನ್ನು ಜೋಪಾನ ಮಾಡುವ ದಿಕ್ಕಿನಲ್ಲಿ ಶ್ರಮಿಸುವ ಜವಾಬ್ದಾರಿ ಸಹಾ ರಾಜ್ಯ ಸರಕಾರದ ಮೇಲಿದೆ. ಸರಕಾರ ಅವರನ್ನು ಸಾಕಲು ಸಾಧ್ಯವೇ? ಇಲ್ಲ. ಇವರನ್ನು ಸರಕಾರದ ಕೆಲಸಕ್ಕೆ ಯಾವುದಾದರೂ ರೀತಿಯಲ್ಲಿ ಹಚ್ಚಲು ಸಾಧ್ಯವೇ? ಅದು ಸಹಾ ಸಾಧ್ಯವಿಲ್ಲ. ಆಡಳಿತ ರಂಗದಲ್ಲಿ ಕಂಪ್ಯೂಟರೀಕರಣವು ಪೂರ್ತಿಯಾಗಿ ಸಾಧ್ಯವೇ ಆಗಿಲ್ಲ. ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಕಡತ ನಿರ್ಮಾಣ ಉದ್ದೇಶದ ಕಂಪ್ಯೂಟರೀಕರಣ ಮಾತ್ರ ಸಾಧ್ಯವಾಗಿದೆ. ಆದರೆ ಅನುಭವಿ ತಂತ್ರಜ್ಞರನ್ನು ಅದಕ್ಕೆ ಹಚ್ಚಲು ಅಧಿಕಾರಶಾಹಿ ಇರುವ ಕಡೆ ಅಡ್ಡಿ ಆತಂಕ ಬಹಳ. ಅಲ್ಲದೆ ಈ ತಂತ್ರಜ್ಞರು ಒಳ್ಳೆಯ ಕೆಲಸ ಸಿಗುವಂತೆ ಆದಾಗ ಇದನ್ನು ಬಿಟ್ಟು ಹೋಗುವವರೇ ಸೈ.

ಆದರೂ ಇವರನ್ನು ಸಂರಕ್ಷಿಸುವ ಅಗತ್ಯವಿದೆ. ಅವರು ಕಲಿತಿರುವುದನ್ನು ಮರೆಯದಂತೆ ಮಾಡಬೇಕು. ಸಾಧ್ಯವಾದರೆ ಮುಂದುವರೆದು ಕಲಿಯುವಂತೆ ಮಾಡಬೇಕು. ಆ ಸಂಬಂಧ ಒಂದು ಯೋಜನೆ ರೂಪಿಸಿ ಹಲವು ತಿಂಗಳ ಸೀಮಿತ ಸ್ಟೈಫಂಡ್ ನೀಡುವ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಹಲವು ಕೋಟಿ ರೂಪಾಯಿ ಮಾತ್ರ ವೆಚ್ಚವಾಗಬಹುದು. ಆದರೆ ಸಹಸ್ರಾರು ಮಂದಿಯ ಕೌಶಲ ಜೀವಂತವಾಗಿ ಉಳಿಯುತ್ತದೆ. ಸರಕಾರ ಮುಂದಾದರೆ ಕಂಪೆನಿಗಳು ಸಹಾ ಇದಕ್ಕೆ ನೆರವಾದವು.

ಉಳಿದವುದು ಒಂದು ಪ್ರಶ್ನೆ. ಐಟಿ ಕ್ಷೇತ್ರ ಮತ್ತೇ ಕುದುರುವುದು ಯಾವಾಗ? ವಿಶ್ಲೇಷಕರ ಪ್ರಕಾರ ೨೦೦೩ರ ಮಧ್ಯಭಾಗದ ನಂತರ.

೦೬.೧೧.೨೦೦೨