ಕರ್ನಾಟಕದ ಮಟ್ಟಿಗೆ ಬಿ.ಇ. ಇಂಜನೀಯರಿಂಗ್ ಡಿಪ್ಲೋಮಾ ಶಿಕ್ಷಣಕ್ಕೆ ಮಹತ್ವ ಬಹಳ. ಇಲ್ಲಿಂದ ಶಿಕ್ಷಣ ಪಡೆಯುವ ಯುವಕರು ಮತ್ತು ಯುವತಿಯರು ದೇಶಾದ್ಯಂತ ಹರಡಿಕೊಳ್ಳುತ್ತಾರೆ. ಸೀಮೋಲ್ಲಂಘನ ಮಾಡಿ ವಿದೇಶಗಳಲ್ಲಿ ನೆಮ್ಮದಿಯ ಜೀವನ ನಡೆಸುವ ಕನಸು ಕಾಣುತ್ತಾರೆ. ಅಲ್ಲಿ ನೆಮ್ಮದಿ ಕಾಣುತ್ತಾರೋ, ಬರಿದೆ ಹಣ ಮಾಡಿ ಅದನ್ನು ಖರ್ಚು ಮಾಡುವುದರಲ್ಲಿಯೇ ಜೀವನವಿದೆ ಎಂದು ಭಾವಿಸುತ್ತಾರೋ, ಆ ಮಾತು ಬೇರೆ. ಆದರೆ ಗಣಿತ ವಿಜ್ಞಾನದ ಒಲವು ಇರುವ ಎಲ್ಲರೂ ಬಿ.ಇ. ಪದವಿ ಪಡೆಯಲು ಹಾತೊರೆಯುತ್ತಾರೆ.

ಪಡೆಯುವ ಪದವಿ ಯಾವುದೇ ಇದ್ದರೂ ಬಹುಪಾಲು ಮಂದಿ ದಡ ಸೇರುವುದು ಸಾಫ್ಟ್‌ವೇರ್‌ ಹಾರ್ಡ್‌ವೇರ್‌ ಇಂಜನೀಯರುಗಳಾಗಿ, ಆದ್ದರಿಂದಲೇ ಮಾಹಿತಿ ತಂತ್ರಜ್ಞಾನ (ಐಟಿ) ಬೆಳವಣಿಗೆ ಮೇಲೆ ಅವರು ಸದಾ ಕಣ್ಣಿಡುತ್ತಾರೆ. ಐಟಿ ಕ್ಷೇತ್ರವು ಸದವಕಾಶ ಒದಗಿಸುವುದು ಮಾತ್ರವಲ್ಲ; ಇನ್ನು ಯಾವುದೇ ಕ್ಷೇತ್ರಕ್ಕೆ ಹೋಲಿಸಿದರೂ ಒಳ್ಳೆಯ ಸಂಬಳವನ್ನು ತಂದುಕೊಡುತ್ತವೆ. ಆದರೆ ಆ ಕ್ಷೇತ್ರಕ್ಕೆ ಆಗ ಸ್ವಲ್ಪ ಹಿನ್ನಡೆ. ಈ ಕ್ಷೇತ್ರದ ವಾರ್ಷಿಕ ವೃದ್ಧಿ ದರದ ಶೇ. ೫೦ರಷ್ಟು ಇತ್ತು. ಕಂಪೆನಿಗಳ ಲಾಭಾಂಶ ಶೇ.೨೦೦ ಅಥವಾ ೩೦೦ರ ಪ್ರಮಾಣದಲ್ಲಿರುತ್ತಿತ್ತು. ಈಗೆಲ್ಲ ಬಹಳ ಕಡಿಮೆ ಆಗಿದೆ. ಗಟ್ಟಿ ನೆಲೆಗಟ್ಟು ಇಲ್ಲದ ಅಸಂಖ್ಯಾತ ಕಂಪೆನಿಗಳು ಮುಚ್ಚಿಹೋಗಿವೆ. ಅಮೆರಿಕದ ಆರ್ಥಿಕ ಹಿಂಜರಿತ ಮತ್ತಿತ್ತರ ಬೆಳವಣಿಗೆಗಳು ಮಾರಕ ಆಗಿವೆ.

ಎಂಜನಿಯರುಗಳು ಮಾತ್ರವಲ್ಲ, ವಿವಿಧ ಸೆಮಿಸ್ಟರ್‌‌ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೂ ಇದರಿಂದ ಆತಂಕವಾಗಿದೆ. ಕ್ಯಾಂಪಸ್‌ಗಳಿಗೆ ಹೋಗಿ ಓದು ಮುಗಿಸುವ ಮುನ್ನವೇ ಉದ್ಯೋಗ ನೀಡಿಕೆ ಪತ್ರ ಕೊಡುತ್ತಿದ್ದ ಕಂಪೆನಿಗಳು ಅದನ್ನು ನಿಲ್ಲಿಸಿವೆ. ನೀಡಿದ್ದ ಉದ್ಯೋಗ ಪತ್ರಗಳಿಗೂ ಕಾಸಿನ ಕಿಮ್ಮತ್ತಿಲ್ಲ. ಇರುವ ಉದ್ಯೋಗಿಗಳನ್ನು ತೆಗೆದುಹಾಕುತ್ತಿದ್ದಾರೆ. ಆದರೆ, ಇದ್ದಕ್ಕಿದ್ದಂತೆ ಕಂಪೆನಿಗಳು ಅಮೆರಿಕಕ್ಕೆ ಹೊಸದಾಗಿ ಇಲ್ಲಿಂದ ತರಬೇತಾದ ಇಂಜನಿಯರುಗಳನ್ನು ಕಳುಹಿಸಲು ನಾಮಮಾತ್ರ ಪ್ರಮಾಣದಲ್ಲಾದರೂ ಆರಂಭಿಸಿವೆ. ಇದು ಸ್ವಲ್ಪ ಸಮಾಧಾನ ತಂದ ಸಂಗತಿ. ಈ ನಡುವೆ ಐ.ಟಿ. ಉದ್ಯಮ ನಾಯಕರು ಸಹಾ ತಮ್ಮ ಅಂಕೆಗೆ ಬರುವ ತಂತ್ರಜ್ಞಾನ ಸ್ಥೈರ್ಯವೃದ್ಧಿ ಮಾಡಲು ಏನು ಮಾಡಬೇಕು ಎಂದು ಯೋಚಿಸತೊಡಗಿದ್ದಾರೆ. ಅದರ ಫಲವಾಗಿ ಉದ್ಯಮದ ಅಗ್ರಸಂಸ್ಥೆ ನ್ಯಾಸ್‌ಕಾಮ್‌ ಸಮೀಕ್ಷೆಯೊಂದನ್ನು ನಡೆಸಿತು. ಅದರ ಪ್ರಕಾರ ಸದ್ಯಕ್ಕೆ ಆತಂಕ ಕಂಡರೂ ಮುಂಬರುವ ತಿಂಗಳುಗಳಲ್ಲಿ ಪರಿಸ್ಥಿತಿ ಸುಧಾರಿಸುತ್ತದೆ. ೨೦೦೪-೦೫ರ ಸಾಲಿನಲ್ಲಿ ಹೊಸದಾಗಿ ಬಿ.ಇ. ಮಾಡಿ ತರಬೇತಾದ ಪ್ರತಿ ಯುವಕ ಯುವತಿಗೂ ಐಟಿ ಕ್ಷೇತ್ರವು ಕೆಲಸ ಒದಗಿಸುವ ಸ್ಥಿತಿ ಮುಟ್ಟುತ್ತದೆ.

ಕಳೆದ ಸಾಲಿನಲ್ಲಿ ಅಂದರೆ ೨೦೦೧-೦೨ರಲ್ಲಿ ೪,೧೬,೦೦೦ ಜನರಿಗೆ ಉದ್ಯೋಗಾವಕಾಶ ಇತ್ತು. ಆದರೆ ಲಭ್ಯವಿದ್ದ ಅಭ್ಯರ್ಥಿಗಳ ಸಂಖ್ಯೆ ೪,೨೮,೦೦೦. ಮುಂದಿನ ೨೦೦೪-೦೫ರ ಸಾಲಿನಲ್ಲಿ ಕನಿಷ್ಠ ೯,೩೯,೦೦೦ ಜನರಿಗೆ ಕೆಲಸ ಕೊಡುವಂತಾಗುವುದು. ವಾಸ್ತವ ಬೇಡಿಕೆ ಇನ್ನೂ ಹೆಚ್ಚಾಗಬಹುದು. ಅದು ೧೪,೦೮,೫೦೦ ಮಟ್ಟ ತಲುಪಲೂಬಹುದು.

ಅದೇ ವೇಳೆ ಲಭ್ಯವಾಗುವ ಅರ್ಹ ಅಭ್ಯರ್ಥಿಗಳ ಸಂಕ್ಯೆ ೮,೭೫,೦೦೦ ಅಂದರೆ ಕನಿಷ್ಠ ಮಟ್ಟದ ಬೇಡಿಕೆಯನ್ನು ಲೆಕ್ಕಕ್ಕೆ ಇಟ್ಟುಕೊಂಡರೂ ೬೪,೦೦೦ ಜನರಷ್ಟು ಕೊರತೆ ಬೀಳುತ್ತದೆ. ವಾಸ್ತವ ಬೇಡಿಕೆ ಗರಿಷ್ಠ ಅಂದಾಜನ್ನು ಮುಟ್ಟಿದರೆ ೫,೩೩,೫೦೦ ಸಂಖ್ಯೆಯಷ್ಟು ಕೊರತೆ ಉಂಟಾಗಬಹದು.

ನ್ಯಾಸ್‌ಕಾಮ್‌ ಅಧ್ಯಕ್ಷ ಕಿರಣ್ ಕಾರಣಿಕ್ ಹೇಳುವ ಪ್ರಕಾರ ಐಟಿ ಕ್ಷೇತ್ರ ಪ್ರತಿ ವರ್ಷವೂ ಕಡಿಮೆ ಎಂದರೆ ಒಂದು ಲಕ್ಷ ಹೊಸ ಹುದ್ದೆಗಳನ್ನು ಸೃಷ್ಟಿಸುತ್ತಿದೆ. ಬಹುಶಃ ಭಾರತದಲ್ಲಿ ಯಾವ ಇನ್ನೊಂದು ಉದ್ಯಮ ಸಹಾ ಈ ಮಟ್ಟದಲ್ಲಿ ಉದ್ಯೋಗಾವಕಾಶ ಸೃಷ್ಟಿಸುವುದಿಲ್ಲ.

ಈ ಹಿಂದೆ ಪದೇ ಪದೇ ಪ್ರಸ್ತಾಪಿಸಿದಂತೆ ಐಟಿ ಕ್ಷೇತ್ರವು ಹಣ ದುಡಿಯುವುದು ಡಾಲರು ಮತ್ತಿತ್ತರ ರೂಪದಲ್ಲಿ. ಉದ್ಯೋಗಿಗಳಿಗೆ ಹಣ ಪಾವತಿ ಆಗುವುದು ರೂಪಾಯಿಗಳಲ್ಲಿ. ಅದುವೇ ಶ್ರೀಮಂತಿಕೆಯ ಗುಟ್ಟು. ನಮ್ಮ ಹುಡುಗ ಹುಡುಗಿಯರು ವಿದೇಶಕ್ಕೆ ಹೋಗಿ ವಾಪಸು ಬಂದರೆ ಅಥವಾ ಅಲ್ಲಿಂದ ಉಳಿತಾಯ ಹಣ ರವಾನೆ ಮಾಡಿದರೆ ಇಲ್ಲಿ ಆ ಉಳಿತಾಯ ಹಣವು ಅಪಾರ ಮೊತ್ತವಾಗಿ ಪರಿಣಮಿಸುತ್ತದೆ. ಆದ್ದರಿಂದಲೇ ಆಕರ್ಷಣೆ ತಪ್ಪದು.

ಮುಂಬರುವ ವರ್ಷಗಳಲ್ಲಿ ಚಿತ್ರ ಹೇಗಿರುತ್ತದೆ ಹೀಗೆ ಸಮೀಕ್ಷಿಸಿದ್ದರೂ ಹಿಂಜರಿತ ಕಂಡ ನಿಕಟಪೂರ್ವ ಅವಧಿಯಲ್ಲೂ ಉದ್ಯೋಗಾವಕಾಶ ಕುರಿತಂತೆ ಭಾರೀ ನಿರಾಸೆಯೇನೂ ಆಗಿಲ್ಲ. ೧೯೯೯ರಲ್ಲಿ ಇದ್ದ ಐಟಿ ಸಾಫ್ಟ್‌ವೇರ್‌ ತಂತ್ರಜ್ಞರ ಸಂಖ್ಯೆ ೨.೮ ಲಕ್ಷ. ಅದು ೨೦೦೨ರ ಮಾರ್ಚ್ ವೇಳೆಗೆ ೫.೨೨ ಲಕ್ಷಕ್ಕೆ ಏರಿತ್ತು. ಅಂದರೆ ನ್ಯಾಸ್‌ಕಾಮ್‌ ಅಧ್ಯಕ್ಷರು ಹೇಳಿರುವ ವರ್ಷಕ್ಕೆ ಒಂದು ಲಕ್ಷ ಮಂದಿಗೆ ಉದ್ಯೋಗ ಎನ್ನುವ ಮಾತು ಸರಿಯಾಯಿತು.

ಭಾರತದಲ್ಲಿ ಇಂಜನಿಯರಿಂಗ್ ಪದವಿ ಡಿಪ್ಲೋಮಾ ಪಡೆದ ಯುವಜನರು ವಿಶ್ವಮಟ್ಟಕ್ಕೆ ಹೋಲಿಸಿದಾಗ ಬಹಳ ಅಗ್ಗಕ್ಕೆ ದುಡಿಯುತ್ತಾರೆ ಎಂಬುದು ಪ್ರತೀತಿ ಮಾತ್ರವಲ್ಲ; ವಾಸ್ತವ ಸಹಾ. ವಿದೇಶದಲ್ಲಿ ಕೌಶಲ ಮತ್ತು ಪ್ರೌಢಿಮೆ ದೃಷ್ಟಿಯಿಂದ ಉದ್ಯೋಗಿಗಳನ್ನು ಅಳೆದಾಗ ಅಲ್ಲಿನ ಸ್ಥಳಿಯರಿಗಿಂತ ಕಡೆಯಿಂದ ಬಂದವರೇ ಬಹಳ ಅಗ್ಗಕ್ಕೆ ದುಡಿಯುವವರು. ಅಮೆರಿಕದಲ್ಲಾದರೋ ವ್ಯಾಪಾರಿ ಲೆಕ್ಕಾಚಾರ ಬಹಳ. ಕಂಪೆನಿಯ ಲಾಭಕ್ಕೆ ದುಡಿಯುವವರು ಯಾರಾದರೇನು ಎಂದೇ ಅಲ್ಲಿನ ಉದ್ಯಮಿಗಳು ಭಾವಿಸುತ್ತಾರೆ. ಆದ್ದರಿಂದಲೇ ಭಾರತದಂಥ ಯಾವುದೇ ಕಡೆಯಿಂದ ಹೋದವರಿಗೂ ಅಲ್ಲಿ ಧಾರಾಳ ಅವಕಾಶ.

ಆದರೆ ಈಚೆಗೆ ಅಮೆರಿಕದಲ್ಲಿ ಪ್ರೋತ್ಸಾಹಕ್ಕೆ ಮಿತಿ ಇದೆ ಎಂಬ ಪರಿಸ್ಥಿತಿಯನ್ನು ಅನುಸರಿಸಿ ಐಟಿ ಪರಿಣಿತರು ಯುರೋಪ್‌ಗೆ ಹೆಚ್ಚು ಹೆಚ್ಚಾಗಿ ಕಾಲಿಡತೊಡಗಿದ್ದಾರೆ. ಅಲ್ಲೆಲ್ಲ ಅವರ ಪಾಲಿಗೆ ಜೀವನವು ಅಮೆರಿಕದಲ್ಲಿ ಇದ್ದಷ್ಟು ಸುಗಮವಾಗಲಿಲ್ಲ. ಸ್ಥಳೀಯರಿಂದಲೇ ಪ್ರತಿರೋಧ ಅಲ್ಲವಾದರೂ ಅತೃಪ್ತಿಯ ಅಪಸ್ವರ ಬಂದಿದ್ದನ್ನು ಎದುರಿಸಬೇಕಾಯಿತು. ಕೆಲಸದ ಗುಣಮಟ್ಟದಲ್ಲಿ ಭಾರತೀಯರು ವಿಶೇಷವಿಲ್ಲವಾದರೂ ಅಗ್ಗಕ್ಕೆ ಸಿಗುತ್ತಾರೆಂದೇ ಪ್ರಾಶಸ್ತ್ಯವೇ? ಇದು ಯುರೋಪಿನ ಕೆಲವೆಡೆ ಸ್ಥಳೀಯರು ಎತ್ತುವ ಆಕ್ಷೇಪ.

ಈ ಪರಿಸ್ಥಿತಿಗೆ ಉತ್ತರವಾಗುವಂತೆ ಹಾಗೂ ಸಧ್ಯದ ಹಿನ್ನಡೆಯನ್ನು ದಾಟಿ ಬರುವಂತೆ ಒಂದು ಪರಿಹಾರೋಪಾಯ ಸಧ್ಯ ಗೋಚರವಾಗುತ್ತದೆ. ಅದೇನೆಂದರೆ ವಿದೇಶಿ ಗ್ರಾಹಕರಿಗೆ ಕೆಲಸದ ಗುತ್ತಿಗೆಯಾದರೆ ‘ಸೇವೆ ಮಾಡು’ ವ ಬದಲು ಹೆಚ್ಚು ಬೆಲೆಯ ಕೆಲಸ ಮಾಡಲು ಕಲಿಯಬೇಕು ಎಂಬುದೇ ಆ ಉಪಾಯ.

ಎಂಬೆಡೆಡ್ ಸಿಸ್ಟಂಸ್ (ಸಿಗ್ನಲ್ ಆಧಾರಿತ ಕಾರ್ಯಾಚರಣೆ ನಡೆಸುವ ಕಾರ್ಯ ಪದ್ಧತಿ) ಸೆಮಿ ಕಂಡಕ್ಟರ್ಸ್ (ಹಾರ್ಡ್‌ವೇರ್‌ನ ಮೂಲ ಸಾಧನ), ಹೋಂ ನೆಟ್‌ವರ್ಕಿಂಗ್ (ಮನೆ ಕಚೇರಿ ಮಟ್ಟದಲ್ಲಿ ಸಿಗ್ನಲ್ ಆಧಾರಿತ ಸ್ವತಶ್ಚಲಿ ಕಾರ್ಯಗಳ ವ್ಯವಸ್ಥೆ) ಡಿಜಿಟಲ್ ಸಿಗ್ನಲ್ ಪ್ರೋಸೆಸಿಂಗ್ (ಕಾರ್ಯಾಚರಣೇಗಳೆಲ್ಲ ಡಿಜಿಟಲ್ ಆಧಾರಿತ ಕ್ರಿಯೆಗಳಿಗೆ ಒಳಪಡಿಸುವುದು, ಟೆಲಿಕಾಂ (ದೂರಸಂಪರ್ಕ) ಮುಂತಾದ ಡೊಮೇನ್‌ಗಳಲ್ಲಿ ಪರಿಣಿತಿ ಸಾಧಿಸಬೇಕು. ಸಂಕೇತಾಕ್ಷರ (ಕೋಡಿಂಗ್ ಆಧಾರಿತ) ಪ್ರೋಗ್ರಾಂ ಬರೆಯುವದಕ್ಕಷ್ಟೇ ಭಾರತೀಯರು ಸೀಮಿತಗೊಳ್ಳಬಾರದು. ಈ ವಿಚಾರಗಳಿಗೆ ಈಗ ಪುಷ್ಠಿ ಬಂದಿದೆ. ಇದು ಕಾಮಗಾರಿ ಗುತ್ತಿಗೆಗಿಂತ ಭಿನ್ನವಾದುದು. ಉತ್ಪನ್ನಗಳ ಮೌಲ್ಯವರ್ಧಿತಕ್ಕೆ ಕಾರಣವಾಗುವಂಥದು. ಅವಕೃಪೆ ಮಾತೇ ಏಳುವುದಿಲ್ಲ. ಬಹುರಾಷ್ಟ್ರೀಯ ಕಂಪೆನಿಗಳು (ಎಂಎನ್‌ಸಿ) ಇದರಿಂದ ಹೆಚ್ಚು ಆಕರ್ಷಿತರಾಗುತ್ತಾರೆ.

ವಾಸ್ತವವಾಗಿ ಎಂಎನ್‌ಸಿಗಳು ರಫ್ತಿಗೆ ನೆರವಾಗಿರುವುದು ಕಡಿಮೆಯೇನಲ್ಲ. ಕಳೆದ ಒಂದು ವರ್ಷದಲ್ಲಿ ೧೨೧ ಕೋಟಿ ಡಾಲರ್‌‌ಗೆ ಸಮನಾದ ರಫ್ತನ್ನು ಇವು ಸಾಧಿಸಿವೆ. ಇನ್ನಾವ ಕ್ಷೇತ್ರಕ್ಕೂ ಇವುಗಳ ಕೊಡುಗೆ ಇಷ್ಟಿಲ್ಲ. ವಿದೇಶಿ ನೇರ ಬಂಡವಾಳ ಈಗಾಗಲೇ ೭೦ ಕೋಟಿ ಡಾಲರ್‌ನಷ್ಟು ಹರಿದುಬಂದಿದೆ.

ಇಷ್ಟೆಲ್ಲ ಆದರೂ ಕೇಂದ್ರ ಸರಕಾರವಾಗಲೀ ಕರ್ನಾಟಕ ರಾಜ್ಯ ಸರಕಾರವಾಗಲಿ ರಿಯಾಯ್ತಿಗಳನ್ನು ಮುಂದುವರೆಸುವ ಮೂಡ್‌ನಲ್ಲಿ ಇಲ್ಲ. ವಾಸ್ತವವಾಗಿ ರಿಯಾಯ್ತಿಗಳ ಅಗತ್ಯ ಇರುವುದು ಈಗಲೇ. ಏಕೆಂದರೆ ವಿಶ್ವಮಟ್ಟದಲ್ಲಿ ಚೀನಾ, ರಷ್ಯಾ, ಐರ್ಲೆಂಡ್ ಮತ್ತು ಇಸ್ರೇಲ್‌ಗಳೆಲ್ಲ ಪೈಪೋಟಿ ಕಾಡತೊಡಗಿವೆ.

ಈ ಬಾರಿ ಕೇಂದ್ರ ಬಜೆಟ್‌ನಲ್ಲಿ ಒಂದು ರಿಯಾಯ್ತಿಯನ್ನು ತೆಗೆದುಹಾಕಲಾಯಿತು. ಕಂಪೆನಿ ವಶ ಅಥವಾ ವಿಲೀನ ಸಾಧಿಸಿದಾಗ ಕೂಡಾ ಲಾಭಾಂಶದ ಶೇ. ೧೦೦ ರಷ್ಟಕ್ಕೆ ಆದಾಯಕರ ವಿನಾಯ್ತಿಯನ್ನು ಕೊಡಲಾಗುತ್ತಿತ್ತು. ಹೊಸ ಕಂಪೆನಿಗಳಿಗೆ ನಿಡುವಂತೆ ಆದರೆ ಇನ್ನು ಮುಂದೆ ೯೦ರಷ್ಟಕ್ಕೆ ಮಾತ್ರ ಈ ಸೌಲಭ್ಯ ಕೊಡಲಾಗುವುದು. ಇದು ಎಂಎನ್‌ಸಿಗಳ ಪಾಲಿಗೆ ನಿರುತ್ತೇಜಕವಾಗಿದೆ ಎಂಬುದು ನಾಸ್‌ಕಾಮ್‌ ಅಂಬೋಣ.

ಇನ್ನು ರಾಜ್ಯ ಸರಕಾರದ ನಿಲುವು ಅತಿದೊಡ್ಡ ಐಟಿ ರಾಜ್ಯವಾದ ಕರ್ನಾಟಕದಲ್ಲಿ ಕಳೆದ ಬಾರಿ ಶೇ.೪ ಮಾರಾಟ ತೆರಿಗೆ ವಿಧಿಸಿದರು. ಅನಂತರ ಜಾರಿ ಮಾಡಲಿಲ್ಲ. ತೆಗೆದರು ಈ ಬಾರಿ ಮುಖ್ಯಮಂತ್ರಿ ಮತ್ತೆ ಅದನ್ನು ಹಾಕಿದ್ದಾರೆ.

ವಾಸ್ತವವಾಗಿ ಹೈಟೆಕ್ ಮುಖ್ಯಮಂತ್ರಿ ಎಂದೇ ಹೆಸರಾಗಿದ್ದ ಎಸ್.ಎಂ. ಕೃಷ್ಣ ಅವರು ಈ ಹಿಂದೆ ರಾಜ್ಯದ ಅತಿ ದೊಡ್ಡ ಸಾಧನೆ ಎಂದರೆ ಐಟಿ ಸಾಧನೆ ಎನ್ನುತ್ತಿದ್ದರು. ಅದು ಈಗಲೂ ವಾಸ್ತವಾಂಶವೇ. ಆದರೆ ಅನಂತರ ಐಟಿ ಕೀರ್ತಿ ಅವರ ಪಾಲಿಗೆ ಭಾರವಾತೊಡಗಿತು. ಗ್ರಾಮೀಣ ಹಿತಸಾಧನೆಯಿಂದ, ಕೃಷಿ ನೀರಾವರಿಯಿಂದ ದೂರ ಸರಿಯುತ್ತಿದ್ದಾರೆಂಬ ಆರೋಪ ತಮ್ಮ ಮೇಲೆ ಬರಬಾರದೆಂದೇ ಅವರು ಭಾವಿಸುತ್ತಿದ್ದಾರೆ. ಅದನ್ನು ಪ್ರಸ್ತುತ ಬಜೆಟ್‌ನಲ್ಲಿ ಬಿಂಬಿಸಿದ್ದಾರೆ ಕೂಡಾ. ಆದರೆ ಐಟಿಗೆ ನೀಡಿದ್ದ ಪ್ರಾಮುಖ್ಯವನ್ನು ತೊಡೆದು ಹಾಕಬೇಕಾಗುವುದಿಲ್ಲ. ಅವರಿಗೆ ಈ ಸಂಬಂಧ ತಮ್ಮ ಪಕ್ಷದ ಹೈಕಮಾಂಡ್ ಕಡೆಯಿಂದ ತೊಡಕಿರುವಂತೆ ಕಾಣುತ್ತದೆ. ಐಟಿ ಏನಿದ್ದರೂ ಜನಸಾಮಾನ್ಯರ ಹಿತಕ್ಕೆ ಹೊರತಾದುದು ಎಂಬ ಅಭಿಪ್ರಾಯವನ್ನು ಮುಖ್ಯಮಂತ್ರಿ ಅವರಲ್ಲಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಅವರಿಗೆ ಮನವರಿಕೆ ಮಾಡಿಕೊಡುವ ಜವಾಬ್ದಾರಿ ಉದ್ಯಮದ್ದು.

೨೭-೦೩-೨೦೦೨