ಪೂರ್ವ ಬೆಂಗಳೂರಿನ ಉದ್ದಕ್ಕೂ ಹರಡಿಕೊಂಡಿರುವರೆಂದರೆ ನಾನಾ ಕಂಪೆನಿಗಳಿಗೆ ಸೇರಿದ ಸಾಫ್ಟ್‌ವೇರ್‌ ಎಂಜನೀಯರುಗಳು. ಎಲೆಕ್ಟ್ರಾನಿಕ್ ಸಿಟಿ, ಮಡಿವಾಳ, ಹೊಸೂರ ರಸ್ತೆ, ಕೋರಮಂಗಲ, ಐಟಿಪಿಎಲ್, ಈ ಪ್ರದೇಶಗಳು ಮಾತ್ರವಲ್ಲದೆ ಹಲವಾರು ಜನನಿಬೀಡ ಕೇಂದ್ರಗಳಲ್ಲಿ ಯಾವುದೇ ಕಟ್ಟಡ ಅಥವಾ ಕಾಂಪ್ಲೆಕ್ಸ್‌ ಶ್ರೀಮಂತವಾಗಿ ಕಾಣುತ್ತಿದ್ದರೆ ಅದೇನು ಸಾಫ್ಟ್‌ವೇರ್‌ ಕಂಪೆನಿಯೇ? ಎಂದು ಪ್ರಶ್ನಿಸಲಾಗುತ್ತಿತ್ತು. ಶುಭ್ರವಸನರಾಗಿ ಆಧುನಿಕ ವಾಹನಗಳನ್ನೇರಿ ಸಂಚರಿಸುವ ಯುವಕರನ್ನು ನೋಡಿದಾಗ ಸಂತೋಷವಾಗುತ್ತದೆ. ಏಕೆಂದರೆ ಅವರು ಒಳ್ಳೆಯ ಸಂಬಳ, ಸಾರಿಗೆ ಪಡೆಯುವವರು ಎಂಬುದಷ್ಠೆ ಅಲ್ಲದೆ, ಸಂಪತ್ತಿನ ದೃಷ್ಟಿಯಲ್ಲಿ ದೇಶಕ್ಕೆ ನೆರವಾಗುತ್ತಿದ್ದಾರೆ ಎಂಬುದು ಮುಖ್ಯ. ಅದಕ್ಕಿಂತ ಹೆಚ್ಚಾಗಿ ರಾಜ್ಯದ ಹಾಗೂ ದೇಶದ ಪ್ರತಿಷ್ಠೆಯನ್ನು ಹೆಚ್ಚಿಸುವವರು ಈ ಯುವಕ ಯುವತಿಯರು ನಮ್ಮ ಪಾಲಿಗೆ ಅಮೂಲ್ಯ ಸಂಪನ್ಮೂಲ.

ಬಿಇ ಪದವಿಗಾಗಿ ಯಾವುದೇ ಶಾಖೆಯನ್ನು ಆಯ್ಕೆ ಮಾಡಿಕೊಂಡಿದ್ದರೂ ಅಂತಿಮವಾಗಿ ಸಾಫ್ಟ್‌ವೇರ್‌ ಕಂಪೆನಿಯೊಂದನ್ನು ಸೇರಬೇಕೆನ್ನುವುದೇ ಎಲ್ಲ ವಿದ್ಯಾರ್ಥಿಗಳ ಅಂತಿಮ ಆಯ್ಕೆ ಆಗಿರುತ್ತದೆ. ಆದರೆ ಈಗೊಂದು ಎರಡು ವರ್ಷದ ಹಿಂದೆ ಇಂಥವರಿಗೆ ಏನು ಅವಕಾಶಗಳು ಸುಲಭವಾಗಿ, ಮುಕ್ತವಾಗಿರುತ್ತಿದ್ದವೋ ಅವು ಈಗ ಇಲ್ಲ. ಕ್ಯಾಂಪಸ್‌ಗಳಿಗೆ ಹೋಗಿ ಅಭ್ಯರ್ಥಿಗಳನ್ನು ಕಂಪೆನಿಗಳವರು ಆಯ್ಕೆ ಮಾಡುವುದು ನಿಂತು ಹೋಗಿದೆ. ಕಡೆಯ ಸೆಮಿಸ್ಟರ್‌ಗಳಲ್ಲಿ ಇರುವ ಇಂಜನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಕೈಗೆ ಡಿಗ್ರಿ ತಲುಪುವ ವೇಳೆಗಾದರೂ ಮತ್ತೆ ಐಟಿ ಅವಕಾಶಗಳು ದೊಡ್ಡದಾಗಿ ತೆರೆದುಕೊಳ್ಳುವವೋ ಇಲ್ಲವೋ? ಎಂದು ತವಕಗೊಂಡಿದ್ದಾರೆ. ಆದರೆ ಅವರ ಪ್ರಶ್ನೆಗೆ ಅನುಕೂಲಕರ ಉತ್ತರ ಸಧ್ಯ ಸಿಗುವಂತಿಲ್ಲ.

‘ಐಟಿ ಕ್ಷೇತ್ರದ ಮಂದಗತಿ ಇನ್ನೆಷ್ಟು ದಿನ ಇದ್ದೀತು?’ ಎಂದು ಉದ್ಯಮಿಗಳೂ, ಷೇರುದಾರರೂ ಆರ್ಥಿಕತೆ ಸುಧಾರಿಸಬೇಕೆಂದು ಬಯಸುವವರೂ ಲೆಕ್ಕ ಹಾಕುತ್ತಾರೆ. ಪೂರ್ತಿ ದಯನೀಯವಾಗಿರುವ ಮಾರುಕಟ್ಟೆಗಳಲ್ಲಿ ಚೈತನ್ಯ ಕಾಣುವಂತಾಗಬೇಕಾದರೆ ಐಟಿ ಕ್ಷೇತ್ರ ಚುರುಕುಗೊಳ್ಳಬೇಕು. ಏಕೆಂದರೆ ರಫ್ತು ವಲಯದಲ್ಲಿ ಖಚಿತ ಎನ್ನುವಂಥ ಯಶಸ್ಸು ಐಟಿಯಿಂದ ಮಾತ್ರವೇ ಸಾಧ್ಯವಾಘುತ್ತಿರುವುದು. ಆದ್ದರಿಂದ ಹಿಂದಿನ ಉತ್ತೇಜಿತ ದಿನಗಳನ್ನು ಐಟಿ ಕ್ಷೇತ್ರ ಕಾಣುವುದೇ ಎಂಬುದು ಸಹಜ ತವಕ.

ಐಟಿ ಕ್ಷೇತ್ರದಲ್ಲಿ ಸಾಫ್ಟ್‌ವೇರ್‌ ಉತ್ಪನ್ನಗಳನ್ನು ಹಾಗೂ ಅವುಗಳನ್ನು ಸಿದ್ಧ ಮಾಡಿಕೊಡುವ ಎಂಜನಿಯರುಗಳನ್ನು ತಯಾರಿಸುವುದರಿಂದಲೇ ಸಂಪತ್ತು ಸೃಷ್ಟಿಯಾಗುತ್ತಿರುವುದು. ಅಂದರೆ ವಿಶ್ವದಾದ್ಯಂತ ಬೇಡಿಕೆ ಇರುವುದು ಈ ಸಂಪನ್ಮೂಲಕ್ಕೆ. ಆದರೆ ಈಚೆಗೆ ಅಂದರೆ ಕಳೆದ ವರ್ಷದ ಸೆಪ್ಟಂಬರ್‌ ೧೧ರಂದು ಅಮೆರಿಕದ ಬೃಹತ್ ಕಟ್ಟಡ ಕುಇದ ಮೇಲೆ, ಭಾರತಕ್ಕಿರುವ ವ್ಯಾಪಾರ ಉದ್ದೇಶಗಳು ಬಹಳ ಹೆಚ್ಚಾಗಿವೆ. ಆ ಅವಕಾಶಗಳನ್ನು ಭಾರತ ನಿಧಾನವಾಗಿ ಬಾಚಿಕೊಂಡಿದೆ. ಸಾಫ್ಟ್‌ವೇರ್‌ ಎಂದು ಗುರುತಿಸುವುದು ಒಂದು ಭಾಗ. ಇಂಗ್ಲಿಷನಲ್ಲಿ ‘ಸರ್ವಿಸಸ್’ ಎಂದು ಗುರುತಿಸುವುದು ಅವಕಾಶಗಳ ಇನ್ನೊಂದು ಭಾಗ. ಇವೆರಡು ಸೇರಿದಂತೆ ಭಾರತಕ್ಕೆ ಲಭಿಸುವ ರಫ್ತುಗಳಿಕೆ ಸತತ ಏರುತ್ತಲೇ ಇದೆ.

ವಿದೇಶಿ ವಿನಿಮಯ ರಾಶಿ ಭಾರತದಲ್ಲಿ ಏರಲು ಈ ಗಳಿಕೆ ಬಹಳ ಸಹಕಾರಿ. ಸಧ್ಯ ಈ ಬಾಬಿನಿಂದ ೭೫೦೦ ಕೋಟಿ ಡಾಲರ್‌ ವಿನಿಮಯ (ಸುಮಾರು ೩೭,೫೦೦ ಕೋಟಿ ರೂಪಾಯಿ) ಹಣ ದೇಶದ ಬೊಕ್ಕಸವನ್ನು ಪ್ರತಿ ವರ್ಷ ಸೇರುವಂತಾಗಿದೆ. ಇದು ೨೦೦೮ ಇಸವಿ ಹೊತ್ತಿಗೆ ೮೦೦೦ ಕೋಟಿ ಡಾಲರ್‌ ಮಟ್ಟಕ್ಕೆ ಏರುತ್ತದೆ ಎಂಬ ಅಂದಾಜಿದೆ.

ಈ ಮಟ್ಟಕ್ಕೆ ಗಳಿಕೆಯು ಯಾವ ರೀತಿಯಲ್ಲಿ ನೆರವಾಗುತ್ತದೆ ಎಂಬುದು ಗಮನಾರ್ಹ. ಆಮದು ರಫ್ತು ಸತತವಾಗಿ ನಡೆಯುತ್ತಿರುವ ವಿದ್ಯಮಾನವೇ ಆದರು ಭಾರತ ರಫ್ತು ಮಾಡುವುದಕ್ಕಿಂತ ಆಮದು ಮಾಡಿಕೊಳ್ಳುವುದೇ ಅಧಿಕ. ವಿದೇಶಿ ವಾಣಿಜ್ಯ ಕೊರತೆ ಏನಿರುವುದೋ ಅದನ್ನು ತುಂಬಲು ಹೆಣಗುತ್ತಲೇ ಇರುವ ಪರಿಸ್ಥಿತಿ. ೨೦೦೮ರ ಹೊತ್ತಿಗೆ ಈ ವಿದೇಶಿ ವಾಣಿಜ್ಯ ಕೊರತೆ ೨೫೦೦ ಕೋಟಿ ಡಾಲರ್‌ನಷ್ಟು ಇರಬಹುದೆಂದು ಅಂದಾಜಿಸಿದೆ. ಆದರೆ ಆ ಹೊತ್ತಿಗೆ ಐಟಿ ರಫ್ತು ಗಳಿಕೆಯು ೭೫೦೦ ಕೋಟಿ ಡಾಲರನ್ನು ದಾಟಿರುತ್ತದೆ. ಅಂದರೆ ಬೀಳುವ ಕೊರತೆಯ ಮೂರುಪಟ್ಟು ಹಣವು ಈ ಒಂದು ಕ್ಷೇತ್ರದ ಗಳಿಕೆ ಆಗಿರುತ್ತದೆ.

ರಪ್ತು ಗಳಿಕೆಯಲ್ಲಿ ಸಾಫ್ಟ್‌ವೇರ್‌ ಜೊತೆಗೂಡುವ ಇನ್ನೊಂದು ಬಾಬು ಎನಿಸಿದ ಸರ್ವಿಸಸ್‌ ವಾಸ್ತವವಾಗಿ ನಾನಾ ಬಗೆಯ ಸೌಲಭ್ಯಗಳೇ ಆಗಿರುತ್ತವೆ.

ಅಮೆರಿಕದ ಕಚೇರಿಗಳಲ್ಲಿ ಕಡತಗಳನ್ನು ಕಾಪಾಡುವ ಕೆಲಸ ಏನಿದೆಯೋ ಅದನ್ನು ಬೇರೆಯವರಿಗೆ ಗುತ್ತಿಗೆ ಕೊಡುತ್ತಾರೆ. ಅಮದರೆ ಆ ಕೆಲಸದಲ್ಲೇ ಪರಿಣತಿ ಪಡೆದಿರುವ ಇನ್ನೊಂದು ಕಂಪೆನಿಯವರಿಗೆ ವಹಿಸಿಕೊಡುತ್ತಾರೆ.

ಕೆಲಸದ ಗುತ್ತಿಗೆದಾರರೂ ಎಂಥದು? ಉದಾಹರಣೆಗೆ ತಮ್ಮ ಉದ್ಯೋಗಿಗಳ ಸಂಬಳ, ಭತ್ಯೆ, ಮುಂತಾದವುಗಳ ಲೆಕ್ಕ ಸಿದ್ಧ ಪಡಿಸುವುದು. ಕಂಪೆನಿಯವರು ಸ್ವತಃ ಮಾಡಿಕೊಳ್ಳುವುದೇ ಸರಿ ಎಂದೇನೂ ಅಲ್ಲ, ಗುತ್ತಿಗೆ ಕೊಡುವುದು ಯಾರಿಗೆ? ಭಾರತದಲ್ಲಿರುವ ಒಂದು ಕಂಪೆನಿಗೆ ! ಅವರು ಅಮೆರಿಕದಲ್ಲಿರುವ ಜನರ ಉದ್ಯೋಗ ಕುರಿತ ಮಾಹಿತಿ ಲೆಕ್ಕಾಚಾರ ಕುರಿತ ಕಡತಗಳನ್ನು ಭರತದಲ್ಲಿ ನಿಭಯಿಸುತ್ತಾರೆ. ಅಮೆರಿಕದಲ್ಲಿ ನಡೆಯುವ ಪ್ರತಿಯೊಂದು ವಿದ್ಯಮಾನದ ವಿವರ ಭಾರತದಲ್ಲಿ ಗುತ್ತಿಗೆ ಪಡೆಯುವ ಕಂಪೆನಿಗೆ ಸ್ಯಾಟಲೈಟು ಸಂಪರ್ಕ ದೂರಸಂಪರ್ಕ ಮಾರ್ಗಗಳ ಮೂಲಕ ತತ್‌ಕ್ಷಣ ಎಂಬಂತೆ ಬಂದು ತಲುಪುತ್ತದೆ. ಕಂಪ್ಯೂಟರ್‌-ಕಂಪ್ಯೂಟರ್‌ಗಳ ಜೋಡಣೆ ಬಲು ಪರಿಣಾಮಕಾರಿ. ಲೆಕ್ಕ ಸಿದ್ಧಪಡಿಸಿ ದಾಖಲು ಮಾಡುವ ಕಾರ್ಯ ಎಲ್ಲೇ ನಡೆದರೂ ಕಂಪ್ಯೂಟರ್‌ ತೆರದು ನೋಡಿದರೆ ಮಾಹಿತಿ ಸಿದ್ಧ.

ಭಾರತದಲ್ಲಿರುವ ಕಂಪೆನಿ ಹೀಗೆ ಕೆಲಸ ಮಾಡಿಕೊಡುವಾಗ ಅಮೆರಿಕದ ಒಂದು ಕಂಪೆನಿಯ ಜೊತೆ ಮಾತ್ರ ಒಪ್ಪಂದ ಮಾಡಿಕೊಂಡಿರುವುದಿಲ್ಲ. ಹಲವು ಕಂಪೆನಿಗಳ ಜೊತೆ ಒಪ್ಪಂದ ಮಾಡಿಕೊಂಡಿರುತ್ತಾರೆ. ಏಕಕಾಲಕ್ಕೆ ಹಲವು ಕಂಪೆನಿಗಳ ಪಾಲಿಗೆ ಸೇವಾ ಸೌಲಭ್ಯ ಒದಗಿಸುತ್ತಿರುತ್ತಾರೆ. ನಮ್ಮಲ್ಲಿ ಮದುವೆ ಮುಂತಾದ ಸಂದರ್ಭಗಳಲ್ಲಿ ಅಡಿಗೆಯವರು ಏಕಕಾಲಕ್ಕೆ ಹಲವು ತಂಡಗಳ ರೂಪದಲ್ಲಿ ಹಲವು ಕಡೆ ಅಡುಗೆ ಕಾರ್ಯ ನೇರವೇರಿಸಿಕೊಟ್ಟ ಹಾಗೆ ಇದು.

ಬರಿದೆ ಸಂಬಳ ಸಾರಿಗೆ ಲೆಕ್ಕ ಮಾತ್ರವಲ್ಲ. ಭಾರತದ ಕಂಪೆನಿಯವರು ಅಮೆರಿಕದ ಹಲವಾರು ಕಂಪೆನಿಗಳ ಕಾರ್ಯಭಾರದ ನಾನಾ ಬಗೆಯ ಚಟುವಟಿಕೆಗಳ ಹೊಣೆ ಹೊತ್ತುಕೊಂಡಿರುತ್ತವೆ.

ವಿಮೆ ಕಂಪೆನಿಯವರು ಕ್ರೆಡಿಟ್ ಕಾರ್ಡ್ ಕಂಪೆನಿಯವರು, ಟೆಲಿಫೋನ್ ಕಾರ್ಡ್ ಮಾರಾಟ ಮಾಡುವವರು, ಇಂಟರ್‌ನೆಟ್‌ಸೇವೆ ಒದಗಿಸುವವರು ಮುಂತಾದವರೆಲ್ಲ ಕೆಲಸದ ಗುತ್ತಿಗೆಯನ್ನು ದೂರದ ದೇಶದ ಸೇವಾ ಪೂರೈಕೆದಾರರಿಗೆ ನೀಡುತ್ತಾರೆ.

ಕಂಪ್ಯೂಟರ್‌ ಕ್ಷೇತ್ರದ ನಾನಾ ಹಾರ್ಡ್‌ವೇರ್‌ ಹಾಗೂ ಭಾಗ ಸಾಧನಗಳನ್ನು ಪೂರೈಸುವವರು ಗ್ರಾಹಕರಿಗೆ ವಿವಿಧ ಗ್ಯಾರಂಟಿಗಳನ್ನು ಕೊಟ್ಟಿರುತ್ತಾರೆ. ಗ್ರಾಹಕರು ಫೋನ್ ಮಾಡಿದರೆ ಅದು ಬಂದು ತಲುಪುವುದು ಭಾರತದ ಗುತ್ತಿಗೆದಾರ ಕಂಪೆನಿಗೆ. ಅಲ್ಲಿಂದ ಗ್ರಾಹಕನಿಗೆ ಏನು ಸೇವೆ ಸಂದಾಯ ಆಗಬೇಕೋ ಅದರ ವ್ಯವಸ್ಥೆಯಾಗುತ್ತದೆ.

ಅದೇರೀತಿ ವಿಮೆ (ಮುಖ್ಯವಾಗಿ ವಾಹನ ವಿಮೆ) ಇಳಿಸಿದವರು, ಕ್ರೆಡಿಟ್ ಕಾರ್ಡ್ ಗ್ರಾಹಕರು ಮುಂತಾದವರು ಫೋನ್ ಮಾಡಿದಾಗ ಅದಕ್ಕೆ ಮಾರುತ್ತರ ಕೊಡುವವರು ಭಾರತದಲ್ಲಿ ಕುಳಿತಿರುವವರು ಎಂಬುದು ಯಾರಿಗೂ ಕಲ್ಪನೆಗೆ ನಿಲುಕುವುದಿಲ್ಲ. ಅಷ್ಟು ದಕ್ಷತೆಯಿಂದ ಸೇವಾ ಗುತ್ತಿಗೆ ಪಡೆದಿರುವವರು ಕಾರ್ಯ ನಿರ್ವಹಿಸುತ್ತಾರೆ. ಇಂಥ ಕಾರ್ಯಗಳನ್ನು ನಿರ್ವಹಿಸುವ ಸೇವಾ ಕೇಂದ್ರಗಳನ್ನು ಸ್ಥೂಲವಾಗಿ ಒಟ್ಟುಗೂಡಿಸಿ ಕಾಲ್‌ಸೆಂಟರ್‌ಗಳೆಂದು ಕರೆಯುತ್ತಾರೆ.

ಈ ಬಗೆಯ ಸೇವಾ ಕಾರ್ಯವನ್ನಾಗಲಿ ಇನ್ನಾವುದೇ ಬಗೆಯ ಕಂಪ್ಯೂಟರ್‌ ಕಾಮಾರಿಯನ್ನಾಗಲಿ ವಹಿಸಿಕೊಡುವ ವ್ಯವಹಾರವನ್ನು ಔಟ್‌ಸೋರ್ಸಿಂಗ್ ಎನ್ನುತ್ತಾರೆ. ವಾಸ್ತವವಾಗಿ ಇಂಥ ವ್ಯವಹಾರಗಳ ಒಂದು ಬಾರಿಗೆ ಮುಗಿಯುವ, ಒಂದು ತಿಂಗಳು ಅಥವಾ ಒಂದು ವರ್ಷ ನಡೆಯುವಂಥಹದು ಆಗಿರುವುದಿಲ್ಲ. ಒಮ್ಮೆ ಗುತ್ತಿಗೆ ನೀಡಿದರೆ ಐದು, ಹತ್ತು ವರ್ಷವಾದರೂ ನಡೆಯುತ್ತದೆ. ಅಂದರೆ ವಾರ್ಷಿಕ ವರಮಾನ ಎಂಬಂತೆ ವಿದೇಶಿ ವಿನಿಮಯ ಹಣ ಬಂದು ಸೇರುತ್ತಿರುತ್ತದೆ.

ಭಾರತದ ಐಟಿ ಖಂಪೆನಿಗಳು ಇನ್ನೂ ಒಂದು ಬಗೆಯ ಸೇವಾ ಸೌಲಭ್ಯ ಒದಗಿಸುತ್ತವೆ. ಯಾವುದೇ ಕಂಪೆನಿಯ ಗುತ್ತಿಗೆ ಕಾರ್ಯವನ್ನು ಆ ಕಂಪೆನಿ ಇರುವ ವಿದೇಶದಲ್ಲೇ ತನ್ನ ಕಚೇರಿ ತೆಗೆದು ತನ್ನ ಜನರನ್ನು ನಿಯುಕ್ತಗೊಳಿಸಿ ನಿಗದಿತ ಕಾರ್ಯವನ್ನು ಪೂರೈಸಿಕೊಡುತ್ತದೆ. ಹೀಗೆ ಭಾರತದ ಕಂಪೆನಿಗಳ ಉದ್ಯೋಗಿ ಎಂಜನಿಯರರು ಕೆಲಸದ ಗುತ್ತಿಗೆ ಕೊಟ್ಟ ಕಂಪೆನಿಗಳಿಗಾಗಿ ಅಮೆರಿಕ, ಬ್ರಿಟನ್ ಮುಂತಾದ ದೇಶಗಳಿಗೆ ಹೋಗಿ ದುಡಿಯುತ್ತಾರೆ. ಕೆಲಸ ಮುಗಿದ ಮೇಲೆ ವಾಪಸ್ಸು ಬರುತ್ತಾರೆ.

ಪ್ರತಿ ಎಂಜನಿಯರ್‌ನ ಸೇವೆಯನ್ನು ಗಂಟೆಗಳ ಆಧಾರದಲ್ಲಿ ಲೆಕ್ಕ ಹಾಕಿ ಭಾರತದ ಕಂಪೆನಿಗಳು ಶುಲ್ಕ ನಿಗದಿ ಮಾಡುತ್ತವೆ. ವಾಸ್ತವಾಗಿ ಅಸಲು ಹತ್ತರಷ್ಟು ಇಪ್ಪತ್ತರಷ್ಟು ದರದಲ್ಲಿ ಶುಲ್ಕ ವಿಧಿಸುತ್ತಾರೆ. ವಿದೇಶಿ ಗ್ರಾಹಕರು ಒಪ್ಪಿಕೊಳ್ಳುತ್ತಾರೆ. ಭಾರತದ ಎಂಜನಿಯರುಗಳು ಸಂತೋಷವಾಗಿ ಹೋಗಿ ಬರುತ್ತಾರೆ. ಆದರೆ ಅವರಿಗೆ ಅಸಲು ಖರ್ಚಿನ ಹತ್ತಿಪ್ಪತ್ತರಷ್ಟು ಪ್ರತಿಫಲ ಕೊಡುವುದಿಲ್ಲ. ದೇಶದೊಳಗೆ ದುಡಿದರೆ ಯಾವ ಫ್ರತಿಫಲ ಬರುತ್ತದೋ ಅದರ ಐದರಷ್ಟು ಅಥವಾ ಎಂಟರಷ್ಟು ಹಣ ಬರುವಂತೆ ಲೆಕ್ಕ ಹಾಕುತ್ತಾರೆ. ಮಿಕ್ಕದ್ದೆಲ್ಲ ಕಂಪೆನಿಯ ಬೊಕ್ಕಸ ಸೇರುತ್ತದೆ. ಆದ್ದರಿಂದಲೇ ಕಂಪೆನಿಗಳು ಅಪಾರ ಹಣ ಮಾಡುವುದು. ಆದ್ದರಿಂದಲೇ ಭಾರತದ ಎಂಜಿನಿಯುಗಳು ಲಕ್ಷಾಂತರ ಸಂಖ್ಯೆಯಲ್ಲಿ ಅಮೆರಿಕದಲ್ಲೂ ಹತ್ತಾರು ಸಹಸ್ರಾರು ಸಂಖ್ಯೆಯಲ್ಲಿ ಬ್ರಿಟನ್‌ನಲ್ಲೂ ತಂತಮ್ಮ ಕಂಪೆನಿಗಳ ಪರವಾಗಿ ದುಡಿಯುತ್ತಿರುವುದು. ತಾಯ್ನಾಡು ಅಲ್ಲದ ಕಡೆ ನಾನಾ ರೀತಿ ಭಂಗ ಪಟ್ಟುಕೊಂಡು ದುಡಿಯಲು ಭಾರತೀಯರು ಸಿದ್ಧರಾಗುತ್ತಾರೆ.

ಅಮೆರಿಕದಿಂದ ಬರುವ ಒಂದು ಡಾಲರ್‌ ಭಾರತದಲ್ಲಿ ೪೫ ರೂಪಾಯಿ. ಬ್ರಿಟನ್ನಿನಿಂದ ಬರುವ ಒಂದು ಪೌಂಡು ೭೫ ರೂಪಾಯಿ ಬೆಲೆ ಬಾಳುವುದರಿಂದ ಈ ಕಂಪೆನಿಗಳು ಈ ತಂತ್ರಜ್ಞರು ಮೂಗಿಗೆ ಕವಡೆ ಕಟ್ಟಿಕೊಂಡು ದುಡಿಯುತ್ತಾರೆ.

ಇನ್ನೂ ಒಂದು ವಿಶೇಷವುಂಟು. ಗುತ್ತಿಗೆ ಕಾರ್ಯ ನಿರ್ವಹಿಸಲು ಭಾರತ ಬಿಟ್ಟು ಹೋಗುವ ಪ್ರತಿ ಎಂಜನಿಯರ್‌ಗೆ ಇಲ್ಲೂ ಸಂಬಳ ಕೊಡುತ್ತಾರೆ. ಅಲ್ಲಿನ ಕೆಲಸಕ್ಕೆ ಒಪ್ಪಿಗೆ ನೀಡಿದ ಪ್ರಕಾರ ಅಲ್ಲಿನ ಹಣದ ಪಾವತಿ ಆಗುತ್ತದೆ. ಆದರೆ ತಮ್ಮವರಲ್ಲದ ಜನರ ನಡುವೆ ವಿದೇಶದಲ್ಲಿ ಅವರ ಅಗತ್ಯಕ್ಕನುಸಾರವಾಗಿ ಹಗಲು ರಾತ್ರಿ ದುಡಿಯುವಾಗ ಆಗುವ ಮಾನಸಿಕ ಹಿಂಸೆ, ತೊಳಲಾಟಗಳಿಗೆ ಬೆಲೆ ಕಟ್ಟಲಾಗದು. ಅವರು ಉಳಿಸಿ ತರುವ ಡಾಲರು ಪೌಂಡು ರೂಪಾಯಿಗಳಾಗಿ ಪರಿವರ್ತನೆಗೊಂಡಾಗ ಅವರಿಗೂ ಅಪಾರ ಲಾಭ. ದೇಶಕ್ಕೂ ಅನುಕೂಲ.

೧೮-೧೨-೨೦೦೨