ದೇಶದಲ್ಲಿ ಇನ್ನಾರ ಪಾಲಿಗೆ ಅಲ್ಲವಾದರೂ ಕರ್ನಾಟಕದ ಪಾಲಿಗೆ ಐಟಿ ಮೇಳ ನಡೆಸುವುದೆಂದರೆ ಬಹಳ ಸಂಭ್ರಮದ ವಿಷಯ. ಮನೆಯಲ್ಲಿ ಶುಭ ಕಾರ್ಯ ನಡೆಯುವಾಗ ನೆಂಟರಿಷ್ಟರನ್ನು ಎದುರುಗೊಳ್ಳುವಾಗ ತವಕ, ಸಂಭ್ರಮ, ಆನಂದ ಎಲ್ಲ ಏನಿರುತ್ತದೋ ಅದೇ ರೀತಿ ಇದು. ಬೆಂಗಳೂರು ವಾಸ್ತವವಾಗಿ ದೇಶದ ಮಾಹಿತಿ ತಂತ್ರಜ್ಞಾನ ರಾಜಧಾನಿ. ಆದ್ದರಿಂದ ಹೊರಗಿನಿಂದ ಅಂದರೆ ಬೇರೆ ರಾಜ್ಯಗಳಿಂದ ಹಾಗೂ ಬೇರೆ ದೇಶಗಳಿಂದ ಬರುವ ಮಾಹಿತಿ ತಂತ್ರಜ್ಞಾನಪ್ರಿಯರಿಗೆ ಐಟಿ ಮೇಳ ಮಹತ್ವದ್ದು; ಹಾಗಿಲ್ಲವಾದರೂ, ಕುತೂಹಲಕಾರಿ ಮತ್ತು ಆಸಕ್ತಿದಾಯಕ.

ಬೆಂಗಳೂರಿನ ಜನಕ್ಕೆ ಮೇಳಗಳು ಹೊಸದಲ್ಲ. ವರ್ಷವಿಡೀ ಒಂದಲ್ಲ ಒಂದು ಮೇಳ ವ್ಯವಸ್ಥೆಗೊಂಡಿರುತ್ತದೆ. ಹಾಗೆ ಬೇರೆ ಉದ್ಯಮ ಪ್ರಕಾರಗಳಿಗೆ ಮತ್ತು ವಿಷಯಗಳಿಗೆ ಸಂಬಂಧಿಸಿದಂತೆ ನಡೆಯುವ ಮೇಳಗಳ ಬಗೆಗೆ ಒಂದಿಷ್ಟು ತಿಳಿವಳಿಕೆ ಇರುತ್ತದಾದ್ದರಿಂದ ಮೇಳಕ್ಕೆ ಭೇಟಿ ಕೊಡುವವರಿಗೆ ಏನೋ ಒಂದಿಷ್ಟು ಹೊಸತೆಂಬುದು ಗೋಚರಿಸುತ್ತದೆ. ಆದರೆ ತಾಂತ್ರಿಕವಾಗಿ ಏನೂ ಅರಿಯದ ಜನ ಐಟಿ ಮೇಳಕ್ಕೆ ಬಂದವರಿಗೆ ನಿರಾಶೆ ಕಾದಿರುತ್ತದೆ. ಎಲ್ಲವೂ ಆಯೋಮಯ. ಆದರೆ ಸಾಫ್ಟವೇರ್ ಎಂಜಿನಿಯರ್‌ಗಳ ಆಡುಂಬೊಲ ಎನಿಸಿಕೊಂಡ ಬೆಂಗಳೂರಿನಲ್ಲಿ ಐಟಿ ಮೇಲೆ ನಡೆದರೆ ಅದರ ಉಪಯೋಗ ಪಡೆದುಕೊಳ್ಳುವ ಜನರ ಸಂಖ್ಯೆ ಕೆಡಿಮೆಯೇನೂ ಇರುವುದಿಲ್ಲ. ಮೇಳಕ್ಕೆ ಲಗ್ಗೆ ಹಾಕುವ ಬಿಇ ವಿದ್ಯಾರ್ಥಿಗಳಿಗಂತೂ ಥಿಲ್ಲಿಂಗ್! ಈ ಹಿಂದೆ ಶಾಲಾ ವಿದ್ಯಾರ್ಥಿಗಳಿಗೆಂದೇ ಧಾರಾಳ ಸಂಖ್ಯೆಯಲ್ಲಿ ಪಿ.ಸಿ.ಗಳನ್ನು ಹಾಕಿದ್ದಾಗ ಸಾಕಷ್ಟು ಮಂದಿ ಕೆಳಹಂತ ವಿದ್ಯಾರ್ಥಿಗಳು ಕಂಪ್ಯೂಟರಗಳ ಬಗೆಗೆ ತಮಗಿರುವ ಭಯ ಕಳೆದುಕೊಂಡರು. ಈ ಬಾರಿ ಗ್ರಾಮಂತರ ಪ್ರದೇಶಗಳಿಗೆ ಮಾಹಿತಿ ತಂತ್ರಜ್ಞಾನ ಹೇಗೆ ಉಪಯುಕ್ತವಾಗುತ್ತದೆ ಎಂದು ಬಿಂಬಿಸುವ ಸಣ್ಣ ಪ್ರಯತ್ನ ನಡೆಯಿತು. ಅದು ಎಷ್ಟು ಉಪಯುಕ್ತವಾಯಿತು ಎಂಬ ಅಂದಾಜು ಸಿಗುತ್ತಿಲ್ಲ. ಆದರೆ ಆಡಳಿತಾಂಗದಲ್ಲಿ, ಅದರಲ್ಲೂ ನಗರೇತರ ಪ್ರದೇಶಗಳ ತಲಸ್ತರ ಆಡಳಿತದಲ್ಲಿ, ಕಂಪ್ಯೂಟರಗಳು ಹೇಗೆ ಉಪಯುಕ್ತವಾಗಬಲ್ಲದು ಎಂದು ಬಿಂಬಿಸುವ ಪ್ರಯತ್ನಗಳು ನಡೆಯಲಿಲ್ಲ. ಏಕೆಂದರೆ ಆ ದಿಕ್ಕಿನಲ್ಲಿ ರಾಜ್ಯವು ಕ್ರಮಿಸಬೇಕಾದ ದೂರ ಬಹಳವಿದೆ.

ಯಾವುದೇ ಮೇಳಕ್ಕೆ ಹೊರಗಿನಿಂದ ಮುಖ್ಯವಾಗಿ ವಿದೇಶಗಳಿಂದ ಬರುವ ತಂತ್ರಜ್ಞರು ಅಥವಾ ವ್ಯಾಪಾರ ಪ್ರತಿನಿಧಿಗಳು ಗ್ರಹಿಸುವ ಅಂಶಗಳು ಅನೇಕ. ಯಾವ ರೀತಿ ಉಪಯೋಗಕ್ಕೆ ಬರುತ್ತದೆ ಎಂದು ಇಣುಕಿ ನೋಡುವುದೇ ಮೇಳಕ್ಕೆ ಭೇಟಿ ನೀಡುವುದರ ಮುಖ್ಯ ಉದ್ದೇಶವಾಗಿರುತ್ತದೆ. ಈವರೆಗಿನ ವ್ಯಾಪಾರ ಪದ್ಧತಿ ಎಂದರೆ ಹೊರಗಿನಿಂದ ಮುಖ್ಯವಾಗಿ ಭಾರತದಂಥ ಕಡೆಯಿಂದ ತಂತ್ರಜ್ಞರನ್ನು ಕರೆಸಿಕೊಂಡು ಸಾಪ್ಟವೇರ್‌ಗಳನ್ನು ಸಿದ್ಧಪಡಿಸಿಕೊಳ್ಳುವುದು. ವಿದೇಶಗಳ ಉತ್ಪಾದಕರು ಹೀಗೆ ಕೆಲಸ ಕೊಡುವರೆಂದು ನಮ್ಮವರು ಅಲ್ಲಿಗೆ ಹಾರುತ್ತಿದ್ದರು. ಈಗ ಪ್ರವೃತ್ತಿ ಬದಲಾಗಿದೆ. ‘ಔಟ್ ಸೋರ್ಸಿಂಗ್’ ಅಂದರೆ ಬೇಕಾದ ಕೆಲಸವನ್ನು ಒಪ್ಪಿಸಿ ಹೊರಗಿನ ದೇಶಗಳಲ್ಲೇ ಮಾಡಿಸುವುದು ಈಗಿನ ಮತ್ತು ಇನ್ನು ಮುಂದಿನ ದಿನಗಳ ವಾಡಿಕೆ.

ಅಂಥ ಸಾಮರ್ಥ್ಯ ಭಾರತದ ಎಂಜಿನಿಯರುಗಳಿಗೆ ಇದೆಯೇ ಹಾಗೂ ಯಾವ ಯಾವ ಪ್ರಕಾರಗಳಲ್ಲಿ ಅವರು ಬಲಿಷ್ಠ ಕೆಲಸಗಾರರಾಗಿದ್ದಾರೆ ಎಂದು ಕಂಡುಕೊಳ್ಳಲು ವಿದೇಶಿಯರು ಐಟಿ ಮೇಳಕ್ಕೆ ಬರುವವರಾಗಿರುತ್ತಾರೆ.

ಪ್ರಪಂಚದ ಯಾವುದೇ ಸಾಫ್ಟವೇರ್ ಕಂಪನಿಯು ಭಾರತದಲ್ಲಿ ಕಚೇರಿ ಸ್ಥಾಪಿಸಿ ಇಲ್ಲವೆ ಪ್ರತಿನಿಧಿಯನ್ನು ನೇಮಿಸಿ ತನ್ನ ಇರವನ್ನು ಸಾಧಿಸಿಕೊಳ್ಳಲು ಯತ್ನಿಸುತ್ತದೆ. ಅಷ್ಟು ಮಾತ್ರವಲ್ಲ: ತನ್ನಂತೆಯೇ ಇತರ ಪ್ರತಿಸ್ಪರ್ದಿ ಅಥವಾ ಸಹಾಯಕ ಕಂಪನಿಗಳು ಭಾರತದಲ್ಲಿ ಏನು ಮಾಡುತ್ತಿವೆ ಹಾಗೂ ಎಷ್ಟರಮಟ್ಟಿಗೆ ಬೇರೂರಿರುತ್ತವೆ ಎಂದು ಕಂಡುಕೊಳ್ಳಲು ಐಟಿ ನೆರವಾಗಬಲ್ಲದು. ಬೇರೆ ಕಂಪನಿಗಳು ಭಾರತದಲ್ಲಿ ನೆಲೆಗೊಂಡು ಎಷ್ಟರಮಟ್ಟಿಗಿನ ವ್ಯಾಪಾರ ಸಂಬಂಧ ಬೆಳೆಸಿಕೊಂಡಿವೆ ಎಂಬುದನ್ನು ಅಂದಾಜು ಮಾಡುವುದು ಹಾಗೂ ತಾನು ಯಾರು ಯಾರ ಜೊತೆ ವ್ಯಾಪಾರ ಸಂಬಂಧವನ್ನು ಬೆಂಗಳೂರು ಮತ್ತಿತರ ಕಡೆ ಬೆಳೆಸಿಕೊಳ್ಳಲು ಸಾಧ್ಯ ಎಂದು ಪ್ರತಿ ವಿದೇಶಿ ಕಂಪನಿಯು ಲೆಕ್ಕ ಹಾಕುತ್ತಿರುತ್ತದೆ.

ಐಟಿ ಮೇಳಕ್ಕಾಗಲೀ, ಬಿಡಿ ದಿನಗಳ ಭೇಟಿಗಾಗಲೀ ಭಾರತಕ್ಕೆ ಬರುವ ವಿದೇಶಿ ತರಬೇತಿಗೆ ಸಾಕಷ್ಟು ಹಣ ತೊಡಗಿಸಿರುತ್ತದೆ. ಈಗ ಒಮ್ಮೆ ಕೆಲಸದಿಂದ ತೆಗೆದುಹಾಕಿ ಮತ್ತೆ ಕೈಗೆ ಬರುವ ಕೆಲಸ ಹೆಚ್ಚಾದಾಗ ಹೊಸದಾಗಿ ಜನರನ್ನು ನೇಮಿಸಿಕೊಂಡು ತರಬೇತಿ ಕೊಡಲಾಗುವುದಿಲ್ಲ. ಆದ್ದರಿಂದ ಅವರನ್ನು ಸಾಕಿಕೊಂಡೇ ಬರುತ್ತವೆ. ವಿದೇಶಿ ಗ್ರಾಹಕರು ತಮ್ಮಲ್ಲಿಗೆ ತರಬೇತಾದ ಜನರನ್ನು ಕಳುಹಿಸಿರೆಂದು ಕೇಳಿದಾಗಲೂ ಕಂಪನಿಗಳಿಗೆ ಭಾರೀ ಲಾಭವಿದೆ. ವಿದೇಶಿಗಳಿಗೆ ಕಳುಹಿಸುವಾಗ ಅದಕ್ಕೆಂದು ಗ್ರಾಹಕರಿಂದ ಪಡೆಯುವ ಮೊತ್ತವು ಆ ಎಂಜಿನಿಯರುಗಳಿಗೆ ಕೊಡುವ ಹಣದ ಮೂರರಿಂದ ಐದು ಪಟ್ಟು ವಸೂಲು ಮಾಡುತ್ತವೆ. ವಿದೇಶಗಳಿಗೆ ಹೋಗುವ ಎಂಜನಿಯರರಿಗೆ ಅದರೋ ಡಾಲರ್ ಅಥವಾ ಪೌಂಡಗಳಲ್ಲಿ ಹಣ ಪಡೆದು, ಒಂದಷ್ಟು ಉಳಿಸಿ ತಂದರೆ ರೂಪಾಯಿನ ೪೫ರಷ್ಟು ಅಥವಾ ೬೫ ಪಟ್ಟು ಮೊತ್ತ ಆಗುತ್ತದೆಂಬ ಆಸೆ, ಔಟ್ ಸೋರ್ಸಿಂಗ್ ವ್ಯಾಪಾರ ಜಾಸ್ತಿಯಾದರೆ ಎಂಜಿನಿಯರಿಗೆ ಮೋಸವೇ ಸರಿ.

ಐಟಿ ಮೇಳಗಳಿಗೆ ಬರುವವರು ಯಾವ ತಂತ್ರಜ್ಞಾನ ಇಲ್ಲಿ ಬೆಳೆದಿದೆ ಎಂದು ನೋಡುವಾಗ ಯಾವ ಬಗೆಯ ಎಂಜಿನಿಯರುಗಳು ಇಲ್ಲಿ ಲಭ್ಯವಿದ್ದಾರೆ ಎಂದು ಅಳೆಯುವ ಕೆಲಸ ನಡೆದಂತೆಯೇ ಸರಿ.

ಭಾರತದ ಕಂಪನಿಗಳು ಸಹಾ ಪೈಪೋಟಿ ಮೇಲೆ ವಿದೇಶಿ ಗ್ರಾಹಕರಿಗೆ ಸೇವಾ ಸೌಲಬ್ಯವನ್ನು ಮಾರುತ್ತಾರೆಂಬ ಭಾವನೆ ಇದೆ. ಈಚೆಗೆ ಕಂಪನಿಗಳವರೆಗೆ ಇದು ಮನವರಿಕೆ ಆಗುತ್ತಿದೆ. ಆರ್ಡರುಗಳನ್ನು ಪಡೆದು ಕೆಲಸ ಮಾಡಿಕೊಡುವುದಕ್ಕಿಂತ ವ್ಯಾಪಾರ ಸಹಯೋಗ, ಒಪ್ಪಂದ ಸಹಭಾಗಿತ್ವ ಮುಂತಾದುವಕ್ಕೆ ಭಾರತದ ಕಂಪನಿಗಳು ಮುಂದಾಗುತ್ತಿವೆ.

ಈ ಬಾರಿಯ ಐಟಿ ಮೇಳ ಈ ಹಿನ್ನಲೆಯಲ್ಲಿ ಮಹತ್ವದಾಗಿತ್ತು. ಜೊತೆಗೆ ಭಾರತದ ಸಾಫ್ಟವೇರ್ ಉದ್ಯಮವನ್ನು ಬಳಸಿಕೊಳ್ಳುವ ಅನಿವಾರ್ಯತೆ ಹೆಚ್ಚುತ್ತಿರುವ ಸಂದರ್ಭವೂ ಉಂಟು. ಹೀಗಾಗಿ ಹಿಂಜರಿತ ಬೇರೆಲ್ಲೋ ಇದ್ದರೂ ಭಾರತದ ಮಟ್ಟಿಗೆ ಅನುಕೂಲವೇ ಉಂಟೆಂಬ ಅಂದಾಜು ನಿಜವಾಗಲಿಕ್ಕೇ ಸಾಕು.