ಸಾಫ್ಟವೇರ್ ನಕಲು ಪೀಡೆ ತಡೆಯಲು ಕರ್ನಾಟಕ ಸರ್ಕಾರವು ಮೈಕ್ರೋಸಾಫ್ಟ್ ಮತ್ತು ಒರೇಕಲ್ ಕಂಪೆನಿಗಳ ಸಹಯೋಗದಲ್ಲಿ ಕಾರ್ಯನಿರತವಾಗುತ್ತಿದೆ. ಎರಡೂ ಬಹುರಾಷ್ಟ್ರೀಯ ಸಂಸ್ಥೆಗಳು ಪ್ರಪಂಚಾದ್ಯಂತ ವಹಿವಾಟು, ತಂತ್ರಜ್ಞಾನ ಅಭಿವೃದ್ಧಿ ಇವುಗಳಿಂದಾಗಿ ದೈತ್ಯ ಕಂಪೆನಿಗಳೇ ಆಗಿವೆ. ನಕಲು ಪೀಡೆ ತಡೆಯುವ ಕಾರ್ಯಾಚರಣೆಗಳಲ್ಲಿ ಇವುಗಳ ಸಹಯೋಗ ಇರುತ್ತದೆ ಎಂದು ಆದಾಗ, ನಮ್ಮ ಪೋಲೀಸರು ಆ ಕಂಪನಿಗಳ ತೋರುಬೆರಳಿನ ದಿಕ್ಕನ್ನೇ ಅನುಸರಿಸುವಂತೆ ಆಗುತ್ತದೆ ಎನ್ನುವುದು ಅನಿವಾರ್ಯ.

ಯಾವ ಒಂದು ಕಂಪೆನಿಯೂ ತಾನು ಸರಕು ಸ್ವಾಮ್ಯ ಹೊಂದಿರುವ ಸಾಫ್ಟವೇರ್ ನಕಲಾಗಿ ಕೈ ಬದಲಾಯಿಸುತ್ತಾ ಹೋಗುವುದನ್ನು ಬಯಸುವುದಿಲ್ಲ. ಆದರೆ ಅವು ನಕಲು ಪೀಡೆಯನ್ನು ‘ಸಹಿಸಿಕೊಳ್ಳು’ತ್ತಾ ಹೋಗುತ್ತವೆ. ಈ ಬಗೆಯ ಸೈರಣೆಗೂ ಕಾರಣಗಳಿಲ್ಲದೆ ಇಲ್ಲ. ವಾಸ್ತವವಾಗಿ ಎಲ್ಲ ಬಳಕೆದಾರರೂ ಮೂಲ ಸಾಫ್ಟವೇರನ್ನೇ ಬಳಸಬೇಕು. ನಕಲು ಆಗಿ ಪ್ರಸಾರಗೊಂಡ ಸಾಫ್ಟವೇರನ್ನು ಬಳಸುವಂತೆಯೇ ಇಲ್ಲ ಎನ್ನುವಂಥ ಪರಿಸ್ಥಿತಿ ಉಂಟಾದರೆ ಪ್ರಪಂಚಾದ್ಯಂತ ಅಗತ್ಯವಾಗುವಷ್ಟು ಮೂಲ ಪ್ರತಿಗಳನ್ನು ಪೂರೈಸುವಲ್ಲಿ ಇವು ಅಶಕ್ತವಾಗುತ್ತವೆ.

ಬೃಹತ್ ಪ್ರಮಾಣದಲ್ಲಿ ಪ್ರತಿಗಳನ್ನು ತಯಾರಿಸಿ ಮಾರಲು ಹೊರಟಾಗ ಸಾಫ್ಟವೇರ್‌ನ ಮೂಲ ಬೆಲೆಯನ್ನು ವಿಪರೀತವಾಗಿ ಇಳಿಸಬೇಕಾಗುತ್ತದೆ. ಪರಿಸ್ಥಿತಿ ಎಷ್ಟೊಂದು ಕೈಮೀರಿ ಹೋಗುತ್ತದೆಂದರೆ, ಈಗ ನಕಲು ಪ್ರತಿಗಳಿಗೆ ಚಿಲ್ಲರೆ ಬಳಕೆದಾರ ಮಟ್ಟದಲ್ಲಿ ಏನು ಬೆಲೆ ನಿಗದಿ ಆಗುತ್ತದೆಯೋ ಸರಿಸುಮಾರು ಅದೇ ಬೆಲೆಗೆ ಮೂಲದ ಅಧಿಕೃತ ಪ್ರತಿಗಳನ್ನು ಪೂರೈಸಬೇಕಾಗುತ್ತದೆ. ಅದಕ್ಕೆ ಈ ಕಂಪೆನಿಗಳು ಸಿದ್ಧವಾಗಿರುವುದಿಲ್ಲ. ಏಕೆಂದರೆ ಬೃಹತ್ ಮತ್ತು ಪ್ರತಿಷ್ಠಿತ ಸಾಫ್ಟವೇರ್ ಕಂಪೆನಿಗಳವರು ಅತಿ ಹೆಚ್ಚು ಬೆಲೆಯನ್ನಾದರೂ ತೆರಬಲ್ಲ ಶ್ರೀಮಂತ ಕಂಪೆನಿಗಳಿಗೆ ತಮ್ಮ ಸರಕನ್ನು ಮಾರುವುದಕ್ಕೆ ಆದ್ಯತೆ ನೀಡುತ್ತಾರೆ. ಮಿಕ್ಕಂತೆ ತಮ್ಮ ಉತ್ಪನ್ನದ ನಕಲು ಪ್ರತಿಗಳು ಎಲ್ಲ ಕಡೆ ವಿಜೃಂಭಿಸುವುದನ್ನು ವಿರೋಧಿಸದೆ ಸಹಿಸಿಕೊಳ್ಳುತ್ತಾರೆ. ತಮ್ಮ ಸರಕು ಎಲ್ಲ ಕಡೆ ಚಾಲ್ತಿಯಲ್ಲಿರಲು ಈ ನಕಲು ಪೀಡೆ ನೆರವಾಗುತ್ತವೆ ಎಂದೇ ಅವರು ಭಾವಿಸುತ್ತಾರೆ. ಆ ಬಗೆಗೆ ಪ್ರಕಟವಾಗಿ ಏನೂ ಹೇಳುವುದಿಲ್ಲ.

ವಾಸ್ತವವಾಗಿ ದೊಡ್ಡ ಕಂಪೆನಿಯೊಂದು ಈ ಹಿಂದೆ ವಿಶ್ವವ್ಯಾಪಿಯಾಗಿ ಚಾಲ್ತಿಗೆ ಬಂದಂಥ ಸಾಫ್ಟವೇರನ್ನು ಬಿಡುಗಡೆ ಮಾಡಿದ ಸ್ವಲ್ಪ ಕಾಲ ನಕಲು ಪೀಡೆಗೆ ಅದು ಪ್ರೋತ್ಸಾಹವನ್ನೇ ಕೊಟ್ಟಿತು. ಅದು ಹೆಚ್ಚು ಚಾಲ್ತಿಗೊಂಡು ಆವರೆಗೆ ವಿಜೃಂಭಿಸಿದ್ದ ಪೈಪೋಟಿ ಉತ್ಪನ್ನ ಮೂಲೆಗುಂಪಾದ ಮೇಲೆ ತನ್ನ ಸರಕನ್ನು ಬಿರುಸಾಗಿ ಮಾರಿಕೊಳ್ಳತೊಡಗಿತು. ಆಮೇಲೆ ನಕಲುಪೀಡೆ ವಿರುದ್ಧ ಸಮರ ಸಾರಿತು! ಹೀಗೆ ಸ್ವಂತ ಹಿತಕ್ಕಾಗಿ ನಕಲು ಪೀಡೆಯನ್ನು ಬಳಸಿಕೊಂಡು ಅದರ ವಿರುದ್ಧ ಕಂಪೆನಿಗಳು ಸಮರ ಸಾರುತ್ತವೆ.

ಇದು ಸಮಸ್ಯೆಯ ಒಂದು ಮುಖ. ಅತ್ಯುತ್ತಮ ಸಾಫ್ಟವೇರಗಳ ಸ್ವಾಮ್ಯ ಪಡೆದಿರುವ ಅಮೇರಿಕದಂಥ ಶ್ರೀಮಂತ ರಾಷ್ಟ್ರಗಳ ಕಂಪೆನಿಗಳು ಇತರ ಶ್ರೀಮಂತ ರಾಷ್ಟ್ರಗಳ ಗ್ರಾಹಕರಿಗೆ ದುಬಾರಿ ಬೆಲೆ ಇಟ್ಟ ಸರಕನ್ನು ಮಾರಬಲ್ಲವು. ಆದರೆ ಭಾರತದಂಥ ಹಲವು ರಾಷ್ಟ್ರಗಳಲ್ಲಿ ದುಬಾರಿ ಬೆಲೆಯ ಕಾರಣ ಅವನ್ನು ಮಾರಲಾರದು. ಈ ಎರಡನೇ ಶ್ರೇಣಿಯ ಗ್ರಾಹಕ ರಾಷ್ಟ್ರಗಳ ಸರ್ಕಾರಗಳು ಸಹಾ ವಿಪರೀತ ತೆರಿಗೆ ಸುಂಕ ವಿಧಿಸಿ ತಂತಮ್ಮ ಬೊಕ್ಕಸ ತುಂಬಿಸಿಕೊಳ್ಳುತ್ತವೆ. ಇಲ್ಲೆಲ್ಲ ನಕಲು ಸರಕು ಚಾಲ್ತಿಯಲ್ಲಿ ಇರುವುದೇ ಸೂಕ್ತವೆಂದು ಶ್ರೀಮಂತ ರಾಷ್ಟ್ರಗಳ ಸಾಫ್ಟವೇರ ಉತ್ಪಾದಿಸಲು ಭಾವಿಸುತ್ತಾರೆ. ಶ್ರೀಮಂತ ರಾಷ್ಟ್ರಗಳಾಗಲಿ, ಎರಡನೇ ಶ್ರೇಣಿಯ ರಾಷ್ಟ್ರಗಳಾಗಲೀ ಸಾಫ್ಟವೇರ ಮೇಲೆ ಅತ್ಯಧಿಕ ಸುಂಕ ತೆರಿಗೆ ವಿಧಿಸುವ ಗೋಜಿಗೆ ಹೋಗಬಾರದು. ಯಾವುದೇ ಸಾಫ್ಟವೇರ್ ಸದಾ ಕಾಲ ಉಳಿಯುವುದಿಲ್ಲ. ತಂತ್ರಜ್ಞಾನ ಎಷ್ಟು ಬೇಗ ಬೆಳೆಯುತ್ತದೆಂದರೆ ಬೇಗ ಸಾಫ್ಟವೇರ್ ಹಳತಾಗುತ್ತದೆ. ಅದಕ್ಕೆ ಮುಂಚೆ ಪೂರ್ಣಪ್ರಮಾಣದಲ್ಲಿ ಬಳಕೆ ಆಗಿ ಕೆಲವು ವರ್ಷಗಳಲ್ಲೇ ಎಲ್ಲವೂ ಮುಗಿದು ಹೋಗಿ ಹೊಸದಕ್ಕೆ ದಾರಿಯಾಗಬೇಕು. ದುಬಾರಿ ಬೆಲೆ ತೆರಲಾಗದ ಗ್ರಾಹಕರನ್ನು ಹೊಂದಿರುವ ರಾಷ್ಟ್ರಗಳು ವಿಪರೀತ ಸುಂಕ ತೆರಿಗೆ ಹೇರಬಾರದು ಎನ್ನುವುದಕ್ಕೆ ಇದೇ ಕಾರಣ.

ಭಾರತವು ಸ್ವತಃ ಸಾಫ್ಟವೇರ್ ತಂತ್ರಜ್ಞರ ಭಂಡಾರವೇ ಆಗಿದ್ದರೂ ಬೇರೆಯವರಿಗೆ ಸೇವಾ ಸೌಲಭ್ಯ ಒದಗಿಸುವ ಮಾದರಿಯ ಚಟುವಟಿಕೆಯಲ್ಲಿ ಹೆಚ್ಚಾಗಿ ನಿರತರಾಗಿರುತ್ತದೆ. ಭಾರತದ ಸಾಫ್ಟವೇರಗಳನ್ನು ಬೇರೆ ಬೇರೆ ಉದ್ದೇಶಗಳಿಗೆ ಅನ್ವಯ ಮಾಡುವ ಕಾರ್ಯವನ್ನು ಅಮೇರಿಕದಂಥ ಮುಂದುವರೆದ ರಾಷ್ಟ್ರಗಳು ನಡೆಸುತ್ತವೆ. ನಮ್ಮ ಕಡೆಯಿಂದ ಪಡೆದ ಸಾಫ್ಟವೇರನ್ನು ಅಭಿವೃದ್ಧಪಡಿಸಿ, ಸ್ವಂತಕ್ಕೆ ಸರಕು ಸ್ವಾಮ್ಯ ಪಡೆದು, ನಮಗೇ ಹಲವು ನೂರುಪಟ್ಟು ಬೆಲೆಗೆ ಮಾರಿದ ನಿದರ್ಶನಗಳೂ ಇವೆ. ನಮ್ಮ ನಮ್ಮ ದೇಶದ ಅತಿ ದೊಡ್ಡ ಸಾಫ್ಟವೇರ್ ಕಂಪೆನಿಗಳು ಸಹಾ ವಿಶ್ವಮಟ್ಟದಲ್ಲಿ ಕುಬ್ಜವೇ. ನಮ್ಮ ಮೇಲಿನ ಅವರ ಪ್ರೇಮಕ್ಕೆ ನಾವು ಅಗ್ಗವಾಗಿ ದುಡಿಯುತ್ತೇವೆ ಎಂಬುದೇ ಕಾರಣ. ಅಗ್ಗ ಮಾತ್ರವಲ್ಲ; ಪರಿಣತಿ ಸಹಾ ಅಪ್ರತಿಮ. ಸಾಫ್ಟವೇರ್ ಎಂಜಿನೀಯರಗಳನ್ನೆಲ್ಲ ಹೊರದೂಡಲಾಗುತ್ತಿದೆ ಎಂಬ ವಿದ್ಯಮಾನವೊಂದು ಉಂಟಷ್ಟೆ. ನಿಜವಾದ ಸಂಗತಿ ಎಂದರೆ ಭಾರತದಿಂದ ಬಂದವರನ್ನು ಹೊರದೂಡುತ್ತಿಲ್ಲ ! ಅದೇಕೆ ಈ ಪಕ್ಷಪಾತ ಎಂದು ಅಮೇರಿಕದಲ್ಲಿ ದನಿ ಎತ್ತಿರುವುದೂ ಉಂಟು.

ಇಷ್ಟೆಲ್ಲ ಆದರೂ ಭಾರತದಲ್ಲಿ ಅಭಿವೃದ್ಧಿಪಡಿಸಿದ ಸಾಫ್ಟವೇರನ್ನು ಇಲ್ಲಿಯೇ ಅಭಿವೃದ್ಧಿಪಡಿಸಲು ಸಾಧ್ಯವೇಕಾಗುತ್ತಿಲ್ಲ ? ಭಾರತದ ಜನರ ಪಾಲಿಗೆ ಅನುಕೂಲಕರವಾಗಿ ಪರಿಣಮಿಸುವ ನಕಲು ಪ್ರತಿಗಳನ್ನು ತಮಗೆ ಅನುಕೂಲಕರವಾಗಿ ಪ್ರತಿಬಂಧಿಸುವ ವಿದೇಶಿ ಹಿತಾಸಕ್ತಿಯ ಕಂಪೆನಿಗಳ ತಾಳಕ್ಕೆ ಕರ್ನಾಟಕದಂಥ ರಾಜ್ಯದಲ್ಲಿ ನಡೆಯುವುದೇಕೆ ? ಕೇಂದ್ರ ಸರ್ಕಾರಕ್ಕಾದರೂ ಸಾಫ್ಟವೇರ್ ಕುರಿತಂತೆ ನೀತಿಯೇನಾದರೂ ಉಂಟೆ? ಈ ಬಗೆಯ ಪ್ರಶ್ನೆಗಳು ಏಳುವುದಕ್ಕೆ ಇರುವ ಕಾರಣ ಒಂದೇ: ಸರ್ಕಾರಗಳಿಗೆ ಹೇಗೆ ನಡೆದುಕೊಳ್ಳಬೇಕೆಂಬ ಬಗೆಗೆ ಖಚಿತ ಪರಿಜ್ಞಾನ ಇಲ್ಲ. ಉದ್ಯಮ ಕುರಿತಂತೆ ಚಿಂತಿಸಿರುವುದು ಕಡಿಮೆ. ವಿದೇಶಿ ಮೂಲದ ಬಹುರಾಷ್ಟ್ರೀಯ ಕಂಪೆನಿಗಳನ್ನು ಓಲೈಸುವುದು ಮಾತ್ರ ಮುಖ್ಯವಾಗಿರುತ್ತದೆ.

ಈಗೀಗಷ್ಟೇ ದೇಶಿಯ ಉದ್ಯಮದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾರ್ಯ ನಡೆಯುತ್ತಿದೆ. ವಿದೇಶಿ ಕಂಪನಿಗಳು ತಮ್ಮಲ್ಲಿಗೆ ಬಂದು ತಳ ಊರಿದರೆ ಸಾಕೆಂಬ ತವಕವೊಂದೇ ಎಲ್ಲ ರಾಜ್ಯಗಳಿಗೂ ಇದೆ. ವಿದೇಶಿ ಕಂಪನಿಗಳು ಬಂದು ಭಾರತದ ರಾಜ್ಯಗಳಲ್ಲಿ ಶಾಖಾ ಕಚೇರಿಗಳನ್ನು ತೆರೆದಾಗ ಅವುಗಳ ಉದ್ದೇಶಕ್ಕೆ ಎರಡು ಮುಖ: ವ್ಯಾಪಾರ ಮಾಡುವುದು ಹಾಗೂ ಅಗ್ಗಕ್ಕೆ ಇಲ್ಲಿನವರನ್ನು ದುಡಿಸಿಕೊಳ್ಳುವುದು. ಇಷ್ಟರ ಹೊರತು ಬೇರೇನೂ ಇರದು. ಇದನ್ನು ನಾವು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು.

೨೦-೦೬-೨೦೦೧