ನಗದು ಹಣವನ್ನು ತಿಜೋರಿಯಲ್ಲಿ, ಕಪಾಟಿನಲ್ಲಿ, ಜೇಬಿನ ಪರ್ಸಿನಲ್ಲಿ ಭದ್ರಮಾಡಿ ಇಡುತ್ತೇವೆ. ಕಣ್ಣಿಗೆ ಕಾಣುವಂತೆ ಚೆಲ್ಲಾಡಿದರೆ, ಅದನ್ನು ‘ಎತ್ತುವವರು’ ಹುಟ್ಟಿಕೊಳ್ಳುತ್ತಾರೆ. ಎನ್ನುವುದು ಮುನ್ನೆಚ್ಚರಿಕೆ. ಕಂಡಾಗ, ಸುಲಭವಾಗಿ ಕಾಣಿಸುವಂತಿದ್ದಾಗ, ಯಾರಿಗಾದರೂ ಎತ್ತುವ ಮನಸ್ಸಾಗುತ್ತದೆ. ಕಳ್ಳತನ ಮಾಡುವ ಉದ್ದೇಶ ಇಲ್ಲದಿರುವವರಿಗೂ ಕೂಡಾ!

ಇವತ್ತು ಸಾಫ್ಟವೇರ್ ಗತಿಯೂ ಹೀಗೆಯೇ ಆಗಿದೆ. ಬೆಂಗಳೂರಿನ ಬಿಗ್ರೇಡ್ ರಸ್ತೆ ಹಾಗೂ ಇತರ ಕೆಲವು ಕಡೆ ಸಾಫ್ಟವೇರ್ ಚೆಲ್ಲಾಡಿ ಹೋಗಿದೆ. ಯಾವುದೇ ಒರಿಜಿನಲ್ ಸಾಫ್ಟವೇರನ ನಕಲು ಇಲ್ಲಿ ಸುಲಭ ಬೆಲೆಗೆ ಲಭ್ಯ.

ಸಾಫ್ಟವೇರ್ ಎಂದರೆ ಕಂಪ್ಯೂಟರಿನ ಮೆದುಳು. ಕಂಪ್ಯೂಟರು ಒಂದು ಯಂತ್ರ. ಯಾವುದೇ ಬಗೆಯ ಕೆಲಸವನ್ನು ಗಂಟೆಗಳ ಬದಲು ಸೆಕೆಂಡುಗಳಲ್ಲಿ ಮಾಡಿ ಮುಗಿಸುತ್ತದೆ ಕಂಪ್ಯೂಟರು. ಇಂತಿಂಥ ಕಾರ್ಯಾಚರಣೆಯನ್ನು ಹೀಗೆ ಹೀಗೆ ಹಂತಗಳಲ್ಲಿ ಮಾಡಬೇಕೆಂದು ಹೇಳಿ ಇಟ್ಟರೆ ಅದೇ ಕ್ರಮದಲ್ಲಿ ಮನೋವೇಗದಲ್ಲಿ ಮಾಡಲು ಸಜ್ಜಾಗುತ್ತದೆ. ಹೀಗೆ ಕ್ರಮವನ್ನು ಹೇಳಿ ಇಡುವ ಆಣತಿಗಳ ಸರಮಾಲೆಯೇ ಸಾಫ್ಟವೇರ್. ಅದನ್ನು ಕಣ್ಣಿಗೆ ಕಾಣುವ ಯಂತ್ರ ಭಾಗಗಳಿಂದಾದ ಕಂಪ್ಯೂಟರನ ಹಾರ್ಡವೇರನೊಳಗೆ ದೂಡಿ ಇಟ್ಟರೆ, ಅದರ ಭಾಷೆಯನ್ನು ಅರಿತು ಸೂಚನೆಗಳನ್ನು ಕೊಟ್ಟರೆ ನಮ್ಮ ಕೆಲಸ ಸುಸೂತ್ರವಾಗಿ ನಡೆಯುತ್ತದೆ.

ಈ ಸಾಫ್ಟವೇರನ್ನೇ ಈಗ ಜನ ನಕಲು ಮಾಡಿಕೊಂಡು ತಮ್ಮ ಕಂಪ್ಯೂಟರನೊಳಗೆ ದೂಡಿಕೊಂಡು, ತಂತಮ್ಮ ಕೆಲಸ ಪೂರೈಸಿಕೊಳ್ಳುತ್ತಾರೆ. ಜನರು ಮೂಲ ಸಾಫ್ಟವೇರ್ ಖರೀದಿಸದೆ ನಕಲು ಮಡಿಕೊಳ್ಳುತ್ತಲೇ ಹೋದರೆ ಅಪಾರ ಶ್ರಮವಹಿಸಿ ಕೋಟ್ಯಂತರ ಲಕ್ಷ ರೂಪಾಯಿ ತೊಡಗಿಸಿ, ಸಾಫ್ಟವೇರಗಳನ್ನು ತಯಾರಿಸುವ ಕಂಪನಿಗಳಿಗೆ ನಷ್ಟ. ಪ್ರತಿಯೊಂದು ದೇಶದಲ್ಲೂ ಈ ನಕಲು ಪೀಡೆ ಹಬ್ಬಿದೆ. ಅತಿ ಹೆಚ್ಚೆಂದರೆ ಚೀನಾದಲ್ಲಿ ಎರಡನೇ ಸ್ಥಾನ ಭಾರತಕ್ಕೆ ಬಾಧೆ ಹೆಚ್ಚಾಗಿ ತಟ್ಟುವುದು ಏನಿದ್ದರೂ ಬೆಂಗಳೂರಿಗೆ. ಏಕೆಂದರೆ ಅತಿ ಹೆಚ್ಚು ಸಾಫ್ಟವೇರ್ ಎಂಜಿನೀಯರರೂ ಅವರ ಕಂಪೆನಿಗಳೂ ಇರುವುದು ಬೆಂಗಳೂರಿನಲ್ಲಿ, ನಕಲು ಪೀಡೆಯ ರಾಷ್ಟ್ರೀಯ ಸರಾಸರಿ ಶೇ. ೭೦. ಅಂದರೆ ಕೆಲಸಕ್ಕೆ ಹಚ್ಚಿರುವ ಪ್ರತಿ ಮೂರು ಸಾಫ್ಟವೇರಗಳಲ್ಲಿ ಎರಡು ವಾಸ್ತವವಾಗಿ ನಕಲು; ಜೆರಾಕ್ಸ್ ಅಥವಾ ಕಾರ್ಬನ್ ಪ್ರತಿ ಮಾಡಿಕೊಳ್ಳುವಷ್ಟೇ ಸುಲಭವಾಗಿ ನಕಲು ಪ್ರಕ್ರಿಯೆ ನಡೆಯುತ್ತದೆ. ಇದರಿಂದಾಗಿ ಸಾಫ್ಟವೇರ್ ತಯಾರಿಸುವ ಕಂಪನಿಗಳಿಗೆ ಭಾರತದ ಪ್ರತಿವರ್ಷ ೯೦೦ ಕೋಟಿ ರೂಪಾಯಿ ನಷ್ಟವಾಗುತ್ತದೆ ಎಂದು ಅಧಿಕೃತ ಅಂದಾಜು. ಹೀಗೆ ಆಗುವುದರಿಂದ ಆದಾಯ ಖೋತಾ ಜೊತೆಗೆ ಸಾಫ್ಟವೇರ್ ಎಂಜಿನೀಯರಗಳ ಉದ್ಯೋಗಾವಕಾಶ ಕಡಿಮೆ ಆಗುತ್ತದೆ. ಉದ್ಯೋದಲ್ಲಿ ಇರುವವರಿಗೂ ದಕ್ಕುವ ವೇತನ ಮತ್ತು ಸವಲತ್ತು ಮೊಟಕು ಆಗುತ್ತದೆ. ತೆರಿಗೆ ಸೋರಿಹೋಗುತ್ತದೆ. ನಕಲು ಪೀಡೆ ಆಗದಿದ್ದರೆ ಹೊಸ ಕಂಪನಿಗಳು ಬಂದು ಇಲ್ಲಿ ಹಣ ಹೂಡುವುದು ಕಡಿಮೆ ಆಗುತ್ತದೆ. ಆದ್ದರಿಂದಲೇ ಸಾಫ್ಟವೇರ್ ಕಂಪನಿಗಳ ರಾಷ್ಟ್ರೀಯ ಸಂಘ ‘ನಾಸ್ ಕಾಂ’ ೧೯೯೪ರಿಂದಲೂ ನಕಲು ಪೀಡೆ ವಿರುದ್ಧ ಸಮರ ಸಾರಿದೆ. ಅದಕ್ಕೆ ಒತ್ತಾಸೆಯಾಗಿ ಸರ್ಕಾರ ಕೂಡಾ ನಕಲು ಪೀಡೆ ತಡೆಯಬಲ್ಲ ಹಲಕೆಲವು ಕಾನೂನುಗಳ ಬಿಗಿ ಜಾರಿಗಾಗಿ ಜಿ.ಓ.ಅನ್ನು (ಸರ್ಕಾರಿ ಆಜ್ಞೆಯನ್ನು) ಕಳೆದ ವಾರ ಹೊರಡಿಸಿತು. ನಕಲು ಪೀಡೆ ವಿರುದ್ಧ ಪೊಲೀಸರು ಇನ್ನು ಸುಲಭವಾಗಿ ಕಂಪನಿಗಳು ಮತ್ತು ಬಿಡಿ ವ್ಯಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು. ದಾಳಿ, ಬಂಧನ, ವಶ ಎಲ್ಲವೂ ಅವರಿಗೆ ಇನ್ನು ಸುಲಭ.

ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಸಾಫ್ಟವೇರ್ ನಕಲು ಉಗ್ರ ಶಿಕ್ಷೆ ಕೊಡಬಹುದಾದ ಕ್ರೈಂ ಅಮೇರಿಕದಲ್ಲಿ ಪ್ರತಿ ಉಲ್ಲಂಘನೆಗೆ ತಲಾ ಒಂದು ಲಕ್ಷ ಡಾಲರ್ ದಂಡ ವಿಧಿಸಬಹುದು. ಅದು ಎರಡೂವರೆ ಲಕ್ಷ ಡಾಲರವರೆಗೂ ಹೆಚ್ಚಬಹುದು. ಐದು ವರ್ಷದವರೆಗಿನ ಅವಧಿಗೆ ಜೈಲು ಶಿಕ್ಷೆ. ಬಹಳ ಬಿಗಿಯಾದ ಕ್ರಮ ತೆಗೆದುಕೊಳ್ಳಲು ಕಾನೂನು ಜಾರಿ ವಿಧಾನಗಳನ್ನು ಬಲಪಡಿಸಿಕೊಂಡು ಮುಂದೆ ಹೆಜ್ಜೆ ಇಟ್ಟಿರುವ ವಿಶ್ವದ ನಾಲ್ಕೈದು ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಇಲ್ಲಿ ಕೂಡಾ ಎರಡು ಲಕ್ಷ ರೂಪಾಯಿ ರೂಪಾಯಿವರೆಗಿನ ಮೊತ್ತದ ದಂಡ ಮತ್ತು ಮೂರು ವರ್ಷದವರೆಗಿನ ಜೈಲು ಶಿಕ್ಷಗೆ ಅವಕಾಶವಿದೆ. ಕಳ್ಳತನ, ಕಾಫಿರೈಟ್ ಉಲ್ಲಂಘನೆ, ಮೋಸ ಇತ್ಯಾದಿ ಆಧಾರದ ಮೇಲೆ ಶಿಕ್ಷೆ ಆಗುತ್ತದೆ. ಈಚೆಗೆ ಬೆಂಗಳೂರಿನ ಒಂದು ಕಂಪನಿಯು ಬರಿದೇ ನಕಲು ಸಾಫ್ಟವೇರ್ ಬಳಸುತ್ತಿದೆ ಎಂಬ ಕಾರಣಕ್ಕೆ ‘ದಾಳಿ’ಗೆ ಒಳಗಾಗಿತ್ತು. ನಗು ಬರಿಸುವ ಅಂಶ ಎಂದರೆ ೨೦೦೨ ಜನೆವರಿ ೧ರೊಳಗೆ ನಕಲು ಪೀಡೆಯನ್ನು ಸೊನ್ನೆ ಮಟ್ಟಕ್ಕೆ ತರುವುದಾಗಿ ರಾಜ್ಯ ಸರ್ಕಾರ ಭಾವಿಸಿರುವುದು! ದೈತ್ಯ ಪ್ರಮಾಣದಲ್ಲಿ ಸಾಫ್ಟವೇರ್ ತಯಾರಿಸುವ ಬಹುರಾಷ್ಟ್ರೀಯ ಕಂಪನಿಗಳಾದ ಮೂಕ್ರೊಸಾಫ್ಟ್ ಮತ್ತು ಒರೇಕಲಗಳ ಸಹಯೋಗ ಇರುವುದರಿಂದ ಸೊನ್ನೆ ಮಟ್ಟಕ್ಕೆ ತರುವ ಗುರಿಯನ್ನು ಸಾಧಿಸುವುದಾಗಿ ಪೊಲೀಸ್ ಇಲಾಖೆ ಹೊಣೆ ಹೊಂದಿರುವ ಗೃಹಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳುತ್ತಾರೆ. ಹೆಚ್ಚು ಹೆಚ್ಚು ಕಂಪನಿಗಳು ಕರ್ನಾಟಕ್ಕೆ ಬರುವಂತಾಗಲಿ ಎಂಬ ರಾಜ್ಯ ಸರ್ಕಾರದ ತವಕ ಸರಿಯೇ. ಪೊಲೀಸರು ಕಂಪನಿಗಳ ಹಿತರಕ್ಷಣೆ ಸಲುವಾಗಿ ಜನಕ್ಕೆ ಪೀಡೆಯಾಗಿ ಪರಿಣಮಿಸುವ ಅಪಾಯ ಇದ್ದೇ ಇದೆ. ಯಾರನ್ನು ಎಲ್ಲೆಲ್ಲಿ ಹಿಡಿದು ಹೇಗೆ ಶಿಕ್ಷೆ ವಿಧಿಸಲು ಸಾಧ್ಯ? ನಕಲು ಸಾಫ್ಟವೇರ್ ಬಳಸಿದ ಕಂಪನಿಗಳನ್ನು ಹಿಡಿಯುವಾಗ ಅದರ ಮ್ಯಾನೇಜರರು, ಎಂಜಿನೀಯರುಗಳು, ಇತರ ಉದ್ಯೋಗಿಗಳು ಇವರನ್ನೆಲ್ಲ ಹಿಡಿದು ಒಳಕ್ಕೆ ಹಾಕುವುದು ನಡೆಯುತ್ತದೆ. ಪೊಲೀಸರ ಕಾರ್ಯಶೈಲಿಯೇ ಹಾಗೆ. ಈಚೆಗಿನ ದಾಳಿಯಲ್ಲಿ ಆಗಿದ್ದೂ ಹಾಗೆಯೇ.

ಲಾಭಗೇಡಿ ಕಂಪನಿಗಳು ತಮ್ಮ ಕಡೆಯಿಂದ ಕೈಗೊಳ್ಳಬೇಕಾದ ಕ್ರಮಗಳೇ ಹೆಚ್ಚು ಫಲಕಾರಿ. ಅವು ತಮ್ಮ ಧನಪಿಪಾಸೆಯನ್ನು ಕಡಿಮೆ ಮಾಡಿಕೊಂಡು ಸಾಫ್ಟವೇರ್ ಮಾರಾಟ ದರಗಳನ್ನು (ಲಕ್ಷಗಟ್ಟಲೆ, ಕೋಟಿಗಟ್ಟಲೆ ರೂಪಾಯಿ ಮಟ್ಟದಲ್ಲಿ ಇರುವುದನ್ನು) ಕಡಿಮೆ ಮಾಡಿದರೆ ನಕಲಿನ ಬದಲು ಕೊಂಡು ಬಳಸುವ ಜನರಿಗೆ ಒತ್ತಾಸೆ ಕೊಟ್ಟಂತೆ ಆಗುತ್ತದೆ. ಸಣ್ಣ ಉದಾಹರಣೆ ಕೊಡಬಹುದಾದರೆ ಕಡಲೆ ಪುರಿಯಂತೆ ಖರ್ಚಾಗುವ ಆಫೀಸ್ ೨೦೦೦ ಎಂಬ ಹೆಸರಿನ ಒಂದು ಸಾಫ್ಟವೇರ್ ನ ಬೆಲೆ ಸುಮಾರು ಇಪ್ಪತ್ತು ಸಾವಿರ ರೂಪಾಯಿ, ಬಿಡಿ ವ್ಯಕ್ತಿಗಳು ಬಳಸುವ ಅತಿ ಸರಳ ಕಂಪ್ಯೂಟರ್ ಬೆಲೆಯೇ ಅಷ್ಟಿರುತ್ತದೆ. ಅದನ್ನು ಇಳಿಸಬಾರದೇಕೆ ?

ನಕಲು ಪೀಡೆ ವಿರುದ್ಧ ಅತಿರೇಕ ಮಾಡಿದರೆ ಕರ್ನಾಟಕಕ್ಕೇ ನಷ್ಟ. ಒಳ್ಳೆಯ ಕಲಿಕೆ ಅವಕಾಶಗಳು ಇರುವ ಕಾರಣದಿಂದಲೇ ರಾಜ್ಯದ ಸಾಮಾನ್ಯ ಜನರೂ ತರಪೇತಾಗುತ್ತಿದ್ದಾರೆ. ಕಂಪ್ಯೂಟರ್ ಶಿಕ್ಷಿತರ ಸಂಖ್ಯೆ ಬೆಂಗಳೂರಿನಂತೆ ರಾಜ್ಯದ ಇತರೆಡೆ ಸದಾ ಬೆಳೆಯುತ್ತದೆ. ಕಲಿಕಾ ಕೇಂದ್ರಗಳಲ್ಲಿ ನಕಲು ಸಾಫ್ಟವೇರ್ ಬಳಸಬಾರದೆಂದರೆ ಕಲಿಕೆಯ ವೆಚ್ಚ ಅಭ್ಯರ್ಥಿಗಳ ಪಾಲಿಗೆ ಹತ್ತಾರು ಪಟ್ಟು ಆದರೂ ಏರುತ್ತದೆ. ಕಲಿಯುವವರು ಕಡಿಮೆಯಾದರೆ ಕರ್ನಾಟಕದಲ್ಲಿ ಕಂಪನಿಗಳಿಗೆ ಮಣೆ ಹಾಕಿದ್ದರಿಂದ ಆಗುವ ಲಾಭವೇನು ? ರಾಜ್ಯ ಸರ್ಕಾರ ಕಂಪನಿ ಪ್ರೇರಿತ ಮಾತ್ರ ಆಗಬಾರದು.

೧೩-೦೬-೨೦೦೧