ಮಾಹಿತಿ ತಂತ್ರಜ್ಞಾನ-ಐಟಿ-ಕ್ಷೇತ್ರವೆಂದರೆ ಉದ್ಯಮ ಎಂದು ಸ್ಫುರಿಸುವುದೇ ಅಧಿಕ. ಸಾಫ್ಟವೇರ್ ಸಿದ್ಧಪಡಿಸುವ ತಿಂಗಳುಗಟ್ಟಲೆ ಅಥವಾ ವರ್ಷಗಟ್ಟಲೆ ಚಟುವಟಿಕೆ ಎಂಜಿನೀಯರಗಳ ಕಾಯಕ. ಆದರೆ ಐಟಿ ಕ್ಷೇತ್ರಕ್ಕೆ ಲಗತ್ತಾದಂತೆ ಇನ್ನಿತರ ಚಟುವಟಿಕೆಗಳು ಎಂಜಿನೀಯರುಗಳಲ್ಲದ ಸಾಮಾನ್ಯ ಜನರಿಗೂ ಉದ್ಯೋಗ ಒದಗಿಸುತ್ತವೆ. ಹೀಗೆ ಸಾಮಾನ್ಯ ಜನರಿಗೆ ಒದಗಿ ಬರುವ ಕೆಲಸಗಳೂ ಅನ್ಯ ಕ್ಷೇತ್ರಗಳಿಗೆ ಹೋಲಿಸಿದರೆ ಉತ್ತಮ ಎನ್ನುವಂಥ ಸಂಬಳ ಸಾರಿಗೆಗಳನ್ನು ಕೈಗೆಟಕುವಂತೆ ಮಾಡಿವೆ. ರಾಜ್ಯದ ಹಲವೆಡೆ ಪ್ರಸಿದ್ಧಿಗೆ ಬಂದಿರುವ ’ಮೆಡಿಕಲ್ ಟ್ರಾನ್ಸಕ್ರಿಪ್ಷನ್’ ಎಂಬ ಉದ್ಯೋಗ ಇಂಥದ್ದೇ ಒಂದು.

ಅಮೇರಿಕದಲ್ಲಿ ಹಾಗೂ ಮುಂದುವರಿದ ಇತರ ಹಲವು ರಾಷ್ಟ್ರಗಳಲ್ಲಿ ವಿಮಾ ವ್ಯಾಪಾರ ಬಹಳ ಮುಂದುವರಿದಿವೆ. ನಮ್ಮಲ್ಲಿ ವಾಹನ ವಿಮೆಯಂಥದ್ದನ್ನು ಕಡ್ಡಾಯ ಮಾಡುತ್ತಾರೆ. ಅಲ್ಲೆಲ್ಲ ಹಾಗಿಲ್ಲ, ಎಲ್ಲ ಬಾಬಿನಲ್ಲೂ ವಿಮೆ ಇಳಿಸುವುದು ಬಹಳ. ಅದರಲ್ಲೂ ಆರೋಗ್ಯ ವಿಮೆಯ ಬಗೆಗೆ ಕಾಳಜಿ ಬಹಳ.

ಯಾವುದೇ ವಿಮೆ ಕುರಿತಂತೆ ಪಕ್ಕಾ ದಾಖಲೆ ಸೃಷ್ಟಿ ಮಾಡಿ ಇಡುವುದು ಅನಿವಾರ್ಯ. ಮೆಡಿಕಲ್ ಟ್ರಾನ್ಸಕ್ರಿಪ್ಷನ್ ಎನ್ನುವುದು ದಾಖಲೆ ಮಾಡಿ ಇಡುವ ಅಂಥ ಕಾರ್ಯ. ವಿಮಾ ಕಾರ್ಯ ಲಕ್ಷಾಂತರ ಕಿ,ಮೀ. ಆಚಿನ ಪ್ರದೇಶದಲ್ಲಿ ನಡೆಯುವಂಥದ್ದು. ಅದಕ್ಕೆ ಸಂಬಂಧಿಸಿದ ದಾಖಲಾತಿ ಚಟುವಟಿಕೆ ಇಲ್ಲಿ ಅವರಿಗಾಗಿ, ನಡೆಯುತ್ತದೆ. ಕಂಪ್ಯೂಟರ್ ಜೊತೆಗೆ ಕೆಲಸ ಮಾಡುವ ಜನ ಅಲ್ಲಿ ಬಹಳ ದುಬಾರಿ. ಇಲ್ಲಿ ಅಗ್ಗ. ಅಲ್ಲಿನ ಮಾಹಿತಿಯನ್ನು ಕಂಪ್ಯೂಟರ, ಫೋನ್, ದೂರ ಸಂಪರ್ಕ ಉಪಗ್ರಹ, ಟೆಲಿಫೋನ್, ಕಂಪ್ಯೂಟರ್ ಈ ಮಾರ್ಗದಲ್ಲಿ ಕಳುಹಿಸುತ್ತಾರೆ.

ಆ ಮಾಹಿತಿಯನ್ನು ಇಲ್ಲಿ ಕುಳಿತ ಸಿಬ್ಬಂದಿ ನಿಗದಿತ ನಮೂನೆಯಲ್ಲಿ ದಾಖಲು ಮಾಡಿ ಅದೇ ಮಾರ್ಗದಲ್ಲಿ ವಾಪಸು ಕಳುಹಿಸುತ್ತಾನೆ. ಅಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ನಾನಾ ಬಗೆಯ ವಿಮೆ ಪಾಲಿಸಿಗಳಿರುತ್ತವೆ. ಅಪಘಾತವಾದರೆ ವಾಹನ ವಿಮೆಗೆ ಸಂಬಂಧಿಸಿದಂತೆ ತಕ್ಷಣ ದಾಖಲೆ ನಿರ್ಮಾಣವಾಗುತ್ತದೆ.

ಬಹಳ ಸುಲಭ. ಅಲ್ಲಿನವರು ಫೋನಿನಲ್ಲಿ ನೀಡಿದ ಬಾಯಿ ಮಾತಿನ ಮಾಹಿತಿ ಇಲ್ಲಿನ ಇಯರ್ ಫೋನಗಳಲ್ಲಿ ಕೇಳಿಸುತ್ತದೆ. ಅದನ್ನು ದಾಖಲೆ ಮಾಡಬೇಕು. ಬದಲಿಗೆ ಇಂಟರನೆಟ್ ಮೂಲಕ ಅದೇ ಮಾಹಿತಿ ಇಲ್ಲಿನ ಪಿಸಿಗಳಿಗೆ ರವಾನೆ ಆಗುತ್ತದೆ. ಬ್ಯಾಂಕುಗಳಲ್ಲಿ ಒಂದೇ ಲೆಕ್ಕ ನಾನಾ ರೀತಿಯಲ್ಲಿ ಹೇಗೆ ದಾಖಲಾಗುತ್ತದೋ ಅದೇ ರೀತಿ ನಿಗದಿತ ಮಾಹಿತಿ ಇಲ್ಲಿ ಅವರಿಗಾಗಿ ಸಂಸ್ಕರಣಗೊಂಡು ನಿಗದಿತ ನಮೂನೆಯಲ್ಲಿ ಅಲ್ಲಿಗೆ ರವಾನೆ ಆಗುತ್ತದೆ. ಈ ಕೆಲಸಕ್ಕೆ ಸಾಮಾನ್ಯ ಜನರು ಸಾಕು. ವಿಶೇಷ ಎಂಜಿನೀಯರಿಂಗ್ ಪ್ರೌಢಿಮೆ ಬೇಕಾಗದು. ಆ ಜನಕ್ಕೆ ಒಂದಿಷ್ಟು ತರಬೇತಿ ಅಗತ್ಯ. ಅಲ್ಲಿನ ಜನ ನೀಡುವ ಮಾಹಿತಿಯ ಸ್ವರೂಪವನ್ನು, ಅಲ್ಲಿನ ಜನರ ಉಚ್ಛಾರಣೆ ಮತ್ತು ಬಳಸುವ ಪದ ಪುಂಜಗಳನ್ನು ಅರ್ಥ ಮಾಡಿಕೊಂಡರೆ ಸಾಕು. ಪಟ ಪಟನೇ ಕೀ ಬೋರ್ಡುಗಳ ಮೇಲೆ ಕೈಯಾಡಿಸಿ ಪಿಸಿಗಳಿಗೆ ತಂದುಕೊಳ್ಳುವ ನಾನಾ ಫೈಲುಗಳಲ್ಲಿ ನಮೂದು ಮಾಡಬಹುದು.

ಅಮೇರಿಕದಂಥ ಕಡೆಯ ಜನರ ಭಾರತದ ಕಡೆಯಂಥವರಿಗೆ ಈ ರೀತಿಯ ಕೆಲಸ ಕೊಡಲು ಕಾರಣಗಳಿಲ್ಲದೇ ಇಲ್ಲ. ದೂರ ಸಂಪರ್ಕ ತಂತ್ರಜ್ಞಾನ ಅಭಿವೃದ್ಧಿ ಹೊಂದಿರುವುದರಿಂದ ಎಲ್ಲಿನ ಕೆಲಸವನ್ನಾದರೂ ಎಲ್ಲಿಯಾದರೂ ಕೂತು ಮಾಡಬಹುದು. ಭಾರತದಲ್ಲಿರುವ ಜನರು ಇಂಥ ಕೆಲಸದಲ್ಲಿ ಕುಶಾಗ್ರಮತಿಗಳು. ಇಲ್ಲಿನ ಜೀವನ ಮಟ್ಟ ಕಡಿಮೆಯಾದ್ದರಿಂದ ಅಲ್ಲಿನ ಲೆಕ್ಕದಲ್ಲಿ ಕೊಡಬಹುದಾದ ಸಾಧಾರಣ ಮಟ್ಟದ ಸಂಭಳವು ಇಲ್ಲಿ ದೊಡ್ಡದಾಗಿ ಕಾಣಿಸುತ್ತದೆ. (ಒಂದು ಅಮೇರಿಕ ಡಾಲರು ೪೫ ರೂಪಾಯಿಗೆ ಸಮಾನ). ಇಲ್ಲಿನ ಜನರಿಗೆ ಉಚ್ಛಾರ ಮುಂತಾದವು ಬದಲಾದರೂ ಇಂಗ್ಲಿಷೆಂಬುದು ಸುಲಭ.

ಎಲ್ಲಕ್ಕಿಂತ ಹೆಚ್ಚಾತಿ ಹಗಲು ರಾತ್ರಿಗಳಲ್ಲಿ ಸಮಯದ ವ್ಯತ್ಯಾಸ ಬಹಳ ಅನುಕೂಲಕರವಾಗಿದೆ. ಅಲ್ಲಿ ಸಂಜೆ ಕೆಲಸ ಮುಗಿಸಿ ಅಂದಿನ ಕಲಾಪಕ್ಕೆ ಸಂಬಂಧಿಸಿದ ಮಾಹಿತಿಯನ್ನೆಲ್ಲ ರವಾನೆ ಮಾಡಿದರೆ ಇಲ್ಲಿ ಹಗಲಿನ ವೇಳೆಯಾಗಿರುವ ಕಾರಣ ಜನರು ಸಹಜವಾಗಿ ಕೆಲಸ ಮಾಡುವ ಕಾಲವಾಗಿರುತ್ತದೆ. ಇಲ್ಲಿನ ಹಗಲಿನಲ್ಲಿ ಅಲ್ಲಿನ ರಾತ್ರಿಯ ಕಾಲದಲ್ಲಿ ಮಾಡಬಹುದಾದ ದಾಖಲಾತಿ ಕಾರ್ಯವನ್ನು ಮಾಡಿ ಮುಗಿಸಿ ರವಾನೆ ಮಾಡಿದರೆ ಅಲ್ಲಿನವರಿಗೆ ಮಾರನೆಯ ದಿನದ ಕಾರ್ಯ ಆರಂಭವಾಗಿರುತ್ತದೆ. ಹಿಂದಿನ ದಿನದ ಇಡೀ ಕಲಾಪದ ವಿವರ ಬೆಳಿಗ್ಗೆ ಕೆಲಸ ಆರಂಭಿಸುವ ವೇಳೆ ಸಿದ್ಧವಾಗಿ ಲಭ್ಯ.

ಈ ಬಗೆಯ ವಿದ್ಯಮಾನವು ಈಗೀಗ ಹೊಸ ಅವಕಾಶಗಳನ್ನು ತೆರೆದಿಡುತ್ತಿದೆ. ಅಮೇರಿಕದ ಕಂಪನಿಗಳು ತಮ್ಮ ಲೆಕ್ಕ ಪತ್ರ ಮತ್ತಿತರ ಕಂಪೆನಿ ವ್ಯವಹಾರದ ಎಲ್ಲ ಮಾಹಿತಿಗಳನ್ನು ಸಿದ್ಧಪಡಿಸಿ ಸಂರಕ್ಷಿಸುವ ಕೆಲಸವನ್ನು ನೂರಾರು ಸಾವಿರಾರು ಕಿ.ಮೀ. ದೂರದ ಕಚೇರಿಗಳಿಗೆ ವಹಿಸುವುದಕ್ಕೆ ತೊಡಗಿದ್ದಾರೆ. ಹತ್ತು ಸಾವಿರ ಇಪ್ಪತ್ತು ಸಾವಿರದಷ್ಟು ದೊಡ್ಡ ಸಂಖ್ಯೆಯಲ್ಲಿ ಕೆಲಸಗಾರರನ್ನು ನೇಮಿಸಿಕೊಂಡು ವಿವಿಧ ಕಂಪನಿಗಳ ಕಡತಗಳನ್ನು ಕರೆಯುವ ವ್ಯವಸ್ಥೆ ಜಾರಿಗೆ ಬಂದಿದೆ.

ದೆಹಲಿ, ಮುಂಬೈ ಮುಂತಾದ ಕಡೆ ನೂರಾರು ಜನರನ್ನು ನೇಮಿಸಿಕೊಳ್ಳುವ ಕರೆ ಕೇಂದ್ರಗಳು ತಲೆಯೆತ್ತಿವೆ. ಬೆಂಗಳೂರು, ಮೈಸೂರುಗಳಲ್ಲಿ ಪ್ರಾರಂಭವಾಗಿದೆ. ಎಲ್ಲ ನಗರಗಳಲ್ಲೂ ದೂರದರ್ಶನ ಕಚೇರಿಗಳೆನಿಸಿದ ಕರೆ ಕೇಂದ್ರಗಳೂ ಬರುತ್ತಿವೆ. ಮೆಡಿಕಲ್ ಟ್ರಾನ್ಸಕ್ರಿಪ್ಷನನಷ್ಟೇ ಇವೂ ಪ್ರಚಲಿತದಲ್ಲಿವೆ. ಈ ವರ್ಷದಲ್ಲಿ ಏಪ್ರಿಲವರೆಗೆ ಟೆಲಿಕಾಂ ಇಲಾಖೆ ೭೦ಕ್ಕೂ ಹೆಚ್ಚು ಹೊಸ ಕರೆ ಕೇಂದ್ರಗಳಿಗೆ ಅನುಮತಿ ನೀಡಿತು. ಅವಸಾನ ಕಾಣುತ್ತಿರುವ ಹಲವಾರು ಡಾಟಕಾಂ ಮಾಹಿತಿ ಕಂಪೆನಿಗಳು ಕರೆ ಕೇಂದ್ರಗಳಾಗಿ ಪರಿವರ್ತನೆಗೊಳ್ಳುತ್ತಿವೆ.

ಟೆಲಿಪೋನ್ ಸಂಪರ್ಕ ಆಧಾರಿತ ಕರೆ ಕೇಂದ್ರಗಳಲ್ಲಿ ಶೇಕಡ ೬೦ ಭಾಗ ವಿದೇಶಿ ಕಂಪನಿಗಳಿಗಾಗಿ ಕಾರ್ಯಾಚರಣೆ ನಡೆಸುತ್ತಿವೆ. ಹಾಗೆ ಭಾರತದ ಕರೆ ಕೇಂದ್ರಗಳನ್ನು ಬಳಸಿಕೊಳ್ಳುವ ವಿದೇಶಿ ಕಂಪನಿಗಳ ಸಂಖ್ಯೆ ಸುಮಾರು ೫೦೦ ಎಂಬ ಅಂದಾಜಿದೆ. ಈಗ ಬಿಡುವಿಲ್ಲದ ಕೆಲಸ ಮಾಡುತ್ತಿರುವ ಕರೆ ಕೇಂದ್ರಗಳಲ್ಲಿ ಶೇಕಡಾ ೧೦ರಷ್ಟು ವಾಸ್ತವವಾಗಿ ಬಹುಪಾಲು ಬಹುರಾಷ್ಟ್ರೀಯ ಕಂಪನಿಗಳ ಶಾಖೆಗಳೇ ಆಗಿರುತ್ತವೆ. ಮುಖ್ಯವಾಗಿ ವಿದೇಶಿ ಸಹಯೋಗದ ಜಂಟಿ ಒಡೆತನ ಕಂಪನಿಗಳ ಪಾಲಿಗೆ ಕರೆ ಕೇಂದ್ರ ವಿದ್ಯಮಾನ ವರವಾಗಿ ಪರಿಣಮಿಸಿದೆ. ಇವು ಆರಂಭಕ್ಕೇ ಅರೆಕುಶಲ ಕೆಲಸಗಾರರಿಗೆ ತಿಂಗಳಿಗೆ ೮ ರಿಂದ ೧೦ ಸಾವಿರ ರೂಪಾಯಿ ಸಂಬಳ ಕೊಡುವುದರಿಂದ ಇವುಗಳ ಪಾಲಿಗೆ ಕೆಲಸಗಾರರಿಗೇನೂ ಕೊರತೆ ಇಲ್ಲ. ಒಂದು ಕಂಪನಿಯು ಈ ಬಗೆಯ ಕೆಲಸಕ್ಕಾಗಿ ೧೦೦ ಜನರನ್ನು ನೇಮಿಸಿಕೊಳ್ಳಲು ಕರೆದಾಗ ಸುಮಾರು ೮೦೦೦ ಅರ್ಜಿಗಳು ಬಂದವು. ಭಾರತದ ಕರೆ ಕೇಂದ್ರಗಳಲ್ಲಿ ಕೆಲಸ ಮಾಡುವವರ ಸಂಖ್ಯೆ ಇದೀಗ ೭೫ ಸಾವಿರ ದಾಟಿದೆ.

೨೭-೦೬-೨೦೦೧