ಜನಪದದಲ್ಲಿ ಒಂದು ಕಥೆ ಇದೆ. ಬೃಹತ್ ಗಾತ್ರದ ಆನೆಯ ಗರ್ವಭಂಗ ಒಂದು ಯಃಕಶ್ಚಿತ್ ಇರುವೆಯಿಂದ ಆದುದು ಆ ಕತೆ. ಇರುವೆಯು ಮಾಡಿದ್ದೆಲ್ಲ ಇಷ್ಟೆ; ನೇರ ಆನೆಯ ಹೊಳ್ಳೆಯ ಮೂಲಕ ಸೊಂಡಿಲಿನ ಒಳಹೊಕ್ಕಿತು. ಬೇಡಾ ಆನೆಯ ಫಜೀತಿ!

ಮಾಹಿತಿ ತಂತ್ರಜ್ಞಾನ (ಐ.ಟಿ) ಕ್ಷೇತ್ರದ ೬೫ ಸಾವಿರ ಭಾರತೀಯರು ಉದ್ಯೋಗ ಅರಸಿ ಪ್ರತಿವರ್ಷ ಅಮೆರಿಕಾ ಸೇರುತ್ತಾರೆ. ಅಮೆರಿಕಾದ ಕಂಪೆನಿಗಳು ಒಪ್ಪಿಸಿದ ಕೆಲಸಗಳನ್ನು ಇನ್ನು ೨೦೦ ಸಾವಿರ ಜನ ಭಾರತದಲ್ಲೇ ಮಾಡುತ್ತಾರೆ. ಇದರಿಂದ ಇದೇ ಐಟಿ ಕ್ಷೇತ್ರದ ಸುಮಾರು ೩೫೦ ಸಾವಿರ ಅಮೆರಿಕನ್ನರು ಭಯಬೀತರಾಗಿದ್ದಾರೆ. ಇಲ್ಲಿ ಭಾರತ ವಹಿಸಿರುವುದು ಇರುವೆಯ ಪಾತ್ರ.

ಭಾರತೀಯರೆಂಬ ಹುಲುಮಾನವರು ಅಮೆರಿಕನ್ನರ ಉದ್ಯೋಗಾವಕಾಶ ಕಸಿಯುತ್ತಿದ್ದಾರೆಂಬ ಅಂಶ ಮನವರಿಕೆಯಾದಂತೆ ಅಲ್ಲಿನ ಸೆನೆಟರ್‌ಗಳಲ್ಲಿ ಕೆಲವರು ತಮ್ಮ ಕಾರ್ಮಿಕರ ವಕಾಲತ್ತು ವಹಿಸುವುದಕ್ಕೆ ತೊಡಗಿದ್ದಾರೆ. ಅಮೆರಿಕದ ಕಂಪೆನಿಗಳು ಭಾರತದ ಕಂಪನಿಗಳಿಗೆ ಕೆಲಸ ಕೊಡುವುದನ್ನು (ಔಟ್ ಸೋರ್ಸಿಂಗ್ ಮಾಡುವುದನ್ನು) ನಿಷೇಧಿಸಬೇಕೆಂದು ಒತ್ತಾಯಿಸುವ ಮಸೂದೆಯನ್ನು ಮಂಡಿಸುತ್ತಿದ್ದಾರೆ. ಅವರ ಚಿಂತೆ ಅವರಿಗೆ. ಇಲ್ಲಿ ಐದು ಲಕ್ಷ ಐಟಿ ಕೆಲಸಗಾರರು ಇದೀಗ ನಿರುದ್ಯೋಗ ಭರ್ತಿಗಾಗಿ ಅರ್ಜಿ ಹಾಕಿದ್ದಾರೆ. ಹಿಂದಿನ ದಶಕಗಳಲ್ಲೂ ಅಮೆರಿಕದಲ್ಲಿ ಮುಂದಿನ ವರ್ಷ ಮಹಾಚುನಾವಣೆ ನಡೆಯಲಿದೆ. ಆದ್ದರಿಂದ ಮತದಾರರನ್ನು ಓಲೈಸುವ ತರದುದೂ ಇದೆ. ಅದಕ್ಕೆಂದೇ ಅಮೆರಿಕದ ಸಂಯುಕ್ತ ರಾಜ್ಯಗಳ ಪೈಕಿ ನ್ಯೂಜೆರ್ಸಿ, ಕೊಲರಾಡೊ, ಕ್ಯಾಲಿಫೋರ್ನಿಯಾ, ಕನೆಕ್ಟಿಕಟ್ ಮತ್ತು ಫ್ಲಾರಿಡಾ ಈ ಐದು ರಾಜ್ಯಗಳ ಸೆನೆಟರ್‌ಗಳು ಔಟ್‌ಸೋರ್ಸಿಂಗ್ ವಿರುದ್ಧ, ಅಂದರೆ ಹೊರದೇಶಗಳವರಿಗೆ ಐಟಿ ಕೆಲಸದ ಗುತ್ತಿಗೆ ಕೊಡುವುದರ ವಿರುದ್ಧ, ಮಸೂದೆಗಳನ್ನು, ತಂತಮ್ಮ ರಾಜ್ಯದ ಶಾಸನ ಸಭೆಗಳಲ್ಲಿ ತಂದಿದ್ದಾರೆ.

ವಾಸ್ತವವಾಗಿ ಈ ರಾಜ್ಯಗಳಲ್ಲಿ ಮಾತ್ರವಲ್ಲದೆ ಇಲ್ಲಿನಾಯ್ಸ್‌, ಮಿಸೌರಿ, ಪೆನಿಸಿಲ್ವೇನಿಯಾ, ನ್ಯೂಯಾರ್ಕ್, ಮೆಸಾಚುಸೆಟಸ್‌, ನ್ಯೂಜೆರ್ಸಿ, ವರ್ಜೀನೀಯಾ, ಜಾರ್ಜಿಯಾ ಮತ್ತು ಟೆಕ್ಸಾಸ್ ರಾಜ್ಯಗಳ ಐಟಿ ಕೆಲಸಗಾರರೂ ನಿರುದ್ಯೋಗ ವಿದ್ಯಮಾನದಿಂದ ಬಳಲಿದ್ದಾರೆ.

ಅಮೆರಿಕದ ನಿರುದ್ಯೋಗ ಬರಿದೆ ಐಟಿ ಕ್ಷೇತ್ರದ ಕೊಡುಗೆ ಅಲ್ಲ. ತಯಾರಿಕಾ ಕ್ಷೇತ್ರದ ಪರಿಣಾಮವೂ ಹೌದು. ೨೦೦೧ರ ಸಪ್ಟಂಬರ್‌ ೧೧ರಂದು ನಡೆದ ಭಯೋತ್ಪಾದಕರ ದಾಳಿ ಪರಿಣಾಮವಾಗಿ ತತ್ತರಿಸಿದ ಅಮೆರಿಕವು ದೇಶದೊಳಗಿನ ಉದ್ಯಮ ಚಟುವಟಿಕೆಯನ್ನು ಹೊರಕ್ಕೆ ವರ್ಗಾಯಿಸುವ ನಿರ್ಧಾರ ಕೈಗೊಂಡಿದೆ. ಸ್ವತಃ ಕೆಲಸ ಮಾಡುವುದಕ್ಕೆ ಬದಲು ಹೊರಗಿನಿಂದ ಮಾಡಿಸಿಕೊಳ್ಳಬೇಕು ಎಂಬುದು ಈಗಿನ ಸರಕಾರದ ನೀತಿ.

ತಯಾರಿಕಾ ಪ್ರಕ್ರಿಯೆಯನ್ನು ಹೊರಕ್ಕೆ ವರ್ಗಾಯಿಸುವುದನ್ನು ಬಿಪಿಓ ಎನ್ನುತ್ತಾರೆ. ಬಿಸಿನೆಸ್ ಪ್ರೋಸೆಸ್ ಔಟ್ ಸೋರ್ಸಿಂಗ್, ಅಂದರೆ ಚಟುವಟಿಕೆಯನ್ನು ವರ್ಗಾಯಿಸುವುದು ಎಂದರ್ಥ. ಹೀಗೆ ಮಾಡುವುದರಿಂದ ಭಯೋತ್ಪಾದಕರ ದಾಲಿ ಮತ್ತೆ ನಡೆದರೂ ನಷ್ಟ ಕಡಿಮೆ ಇರುತ್ತದೆ. ಕಳೆದ ಒಮದೂವರೆ ವರ್ಷದಲ್ಲಿ ೧೩ ಲಕ್ಷ ಹುದ್ದೆಗಳಷ್ಟು ಕೆಲಸವನ್ನು ಹೊರಗಿನ ತಯಾರಿಕಾ ಕಂಪೆನಿಗಳಿಗೆ ವರ್ಗಾಯಿಸಿ ಆಗಿದೆ. ಮುಂದಿನ ಹತ್ತು ವರ್ಷದಲ್ಲಿ ಬಿಪಿಓ ಪರಿಣಾಮವಾಗಿ ೩೩ ಲಕ್ಷ ಹುದ್ದೆಗಳನ್ನು ಕೆಲಸ ವರ್ಗಾವಣೆಗೊಳ್ಳುತ್ತದೆ. ಅನಂತರ ಉಳಿಯುವುದು ಸುಮಾರು ೨೫ ಲಕ್ಷ ಹುದ್ದೆಗಳು ಮಾತ್ರ ಎಂಬ ಅಂದಾಜಿದೆ.

ಒಂದೆಡೆ ಭಯೋತ್ಪಾದನೆ ಭೀತಿ ಇನ್ನೊಂದೆಡೆ ನಿರುದ್ಯೋಗ ಹೆಚ್ಚಾದರೆ ಅರಾಜಕತೆ ಹೆಚ್ಚಾಗುವ ಭೀತಿ. ಅಮೆರಿಕದ್ದು ವಿಶ್ವದ ಏಕಮೇವ ಶಕ್ತರಾಷ್ಟ್ರವೆಂಬ ಹೆಗ್ಗಳಿಕೆ. ಒಳಗೆ ಇಂಥ ಭೀತಿ.!

ಅಮೆರಿಕ ಹಿಂದಿನಂತೆ ಅಧಿಕ ವೃದ್ಧಿದರ ಸಾಧಿಸಿದರೆ ಈ ನಿರುದ್ಯೋಗ ತೊಡೆದು ಹೋಗುವುದಂತೆ. ಆದರೆ ಹಾಗೆ ಆಗುವುದು ಖಚಿತವೇ? ರಾಜಕಾರಣಿಗಳ ಚಿಂತೆ ರಾಜಕಾರಣಿಗಳಿಗೆ. ಆದ್ದರಿಂದ ತಾವೇ ಬಯಸಿ ಬಯಸಿ ನೀಡುತ್ತಿರುವ ಕಾಮಗಾರಿ ವಿರುದ್ಧ ತಾವೇ ತಿರುಗಿ ಬೀಳುತ್ತಿದ್ದಾರೆ.

ಭಾರತದ ಮಟ್ಟಿಗೆ ಅವಕಾಶಗಳನ್ನು ಬಿಡಬಾರದೆಂಬ ತವಕ. ಐಟಿ ಕಾಮಗಾರಿಗಳ ವಿಷಯ ಬಂದಾಗ ಚೀನಾ, ರಷ್ಯ, ಇಸ್ರೇಲ್, ಫಿಲಿಫೈನ್ಸ್ ಮುಂತಾದ ಹಲವು ರಾಷ್ಟ್ರಗಳವರು ಭಾರತಕ್ಕೆ ಪೈಪೋಟಿ ಕೊಡುತ್ತವೆ. ಅಮೆರಿಕ ಮಾತ್ರವಲ್ಲದೆ ಯುರೋಪ್‌ನ ಹಲವು ರಾಷ್ಟ್ರಗಳಲ್ಲಿ ಭಾರತಕ್ಕೆ ಕೆಲಸ ಸಿಗುತ್ತದೆ. ಭಾರತದ ತಂತ್ರಜ್ಞರು ಚೆನ್ನಾಗಿ ಕೆಲಸ ಮಾಡುತ್ತಾರೆ. ವಿಶ್ವ ಮಟ್ಟದಲ್ಲಿ ನೋಡಿದಾಗ ಬಹಳ ಅಗ್ಗವಾಗಿ ಕೆಲಸ ಮಾಡಿಕೊಡುತ್ತಾರೆ. ಇದನ್ನು ಮನಗಂಡೇ ಅಮೆರಿಕ ಮಾತ್ರವಲ್ಲದೆ ಯುರೋಪಿನ ಐಟಿ ಸ್ಥಳಿಕರು ಭಾರತದವರ ವಿರುದ್ಧ ಎರಗುತ್ತಿದ್ದಾರೆ.

ಏಪ್ರಿಲ್ ಆರಂಭದಲ್ಲಿ ಭಾರತ ಮೂಲದ ಐಫ್ಲೆಕ್ಸ್‌ಎಂಬ ಕಂಪೆನಿಯ ಮುಖ್ಯಸ್ಥ ಸೆಂತಿಲ್‌ಕುಮಾರ್‌ ಎಂಬುವವರನ್ನು ನೆದರ್ಲೆಂಡ್‌ನಲ್ಲಿ ಬಂಧಿಸಿ ಬ್ರಿಟನ್‌ಗೆ ಕರೆ ತಂದರು. ಅವರು ಮಾಡಿದ್ದ ಅಪರಾಧವೆಂದರೆ ತಮ್ಮ ಕಂಪೆನಿಯ ೧೨ ಜನರನ್ನು ಬಿಸಿನೆಸ್ ವೀಸಾ ಮೇಲೆ ಕರೆಸಿ ಕೆಲಸಕ್ಕೆ ಹಚ್ಚಿದ್ದು. ಉದ್ಯೋಗಕ್ಕೆಂದೇ ಕರೆಸುವಾಗ ಎಚ್‌ಒನ್‌ಬಿ ವೀಸಾ ಪಡೆಯಬೇಕು. ಅದಕ್ಕಾಗಿ ಆರು ತಿಂಗಳಾದರೂ ಕಾಯಬೇಕು; ಅಷ್ಟರೊಳಗೆ ಬಿಸಿನೆಸ್ ವೀಸಾ ಆಧಾರದ ಮೇಲೆ ಕರೆಸಿದರಾಯಿತು ಎಂದು ಭಾವಿಸಿದರು; ಎಲ್ಲರೂ ಮಾಡುವುದು ಅದನ್ನೇ. ಆದರೆ ಈ ಪ್ರಕರಣದಲ್ಲಿ ‘ಅಪರಾಧ’ವಾಯಿತು. ಹತ್ತು ಲಕ್ಷ ಪೌಂಡ್ ಮುಚ್ಚಳಿಕೆ ಬರೆದುಕೊಡಲು ಮುಂದಾದರೂ ತಕ್ಷಣ ಬಿಡುಗಡೆ ಮಾಡಲು ಒಪ್ಪಿಲ್ಲ. ಕೊನೆಗೆ ಭಾರತ ಸರಕಾರ ಮಧ್ಯೆ ಪ್ರವೇಶ ಮಾಡಿ ಒತ್ತಡ ತರಬೇಕಾಯಿತು. ಭಾರತದವರ ಬಗೆಗೆ ಇರುವ ಅಸಹನೆಗೆ ಇದು ಒಂದು ನಿದರ್ಶನ ಮಾತ್ರ.

ಅಮೆರಿಕದಲ್ಲಿ ಮಲೇಷ್ಯದಲ್ಲಿ ಮತ್ತಿತರ ಕಡೆ ಐಟಿ ತಜ್ಞರನ್ನು ಬಹಿರಂಗವಾಗಿ ಕಿರುಕುಳಕ್ಕೆ ಒಳಪಡಿಸಿದ ಪ್ರಕರಣಗಳಿಗೆ ಬರವಿಲ್ಲ.

ಆದರೆ ಏಪ್ರಿಲ್ ಪ್ರಕರಣದ ಅನಂತರ ಅಮೆರಿಕದಲ್ಲಿ ನಡೆದ ಇನ್ನೊಂದು ಘಟನೆ ಅಮೆರಿಕನ್ನರ ಅಸಹನೆ ಕಟ್ಟೆಯೊಡೆಯಲು ಕಾರಣವಾಯಿತು. ಬ್ಯಾಂಕ್ ಆಫ್ ಅಮೆರಿಕದ ೪೧ ವರ್ಷದ ಕೆವಿನ್ ಫ್ಲಾನಗನ್ ಎಂಬ ಸಾಫ್ಟ್‌ವೇರ್‌ ಪ್ರೋಗ್ರಾಮರ್‌ ಒಬ್ಬರು ಕಚೇರಿಯಿಂದ ಹೊರಕ್ಕೆ ಬಂದು ವಾಹನ ನಿಲುಗಡೆ ಪ್ರದೇಶದಲ್ಲಿ ಸ್ವತಃ ಗುಂಡಿಕ್ಕಿಕೊಂಡು ಸತ್ತರು. ಕಾರಣ, ಬ್ಯಾಂಕಿನಲ್ಲಿ ಅವರಿಗಿದ್ದ ಕೆಲಸ ಹೋಗಿತ್ತು. ತನ್ನ ನಿರುದ್ಯೋಗದ ಕಾರಣ ಅಥವಾ ಇನ್ನಾವುದೇ ಕಾರಣ ನಮೂದಿಸಲಿಲ್ಲ ಅವರು. ಆದರೆ ಅವರ ತಂದೆ ಅನಂತರ ಹೇಳಿಕೆ ನೀಡಿ ತಮ್ಮ ಮಗನ ಕೆಲಸ ಹೋಗಿದ್ದಕ್ಕೆ, ಆತನ ಜಾಗದಲ್ಲಿ ಒಬ್ಬ ಭಾರತೀಯನನ್ನು ನೇಮಿಸಿಕೊಂಡಿದ್ದು ಕಾರಣ ಎಂದು ಸಾರಿದರು. ಅಷ್ಟೇ ಅಲ್ಲ; ಆ ಭಾರತೀಯ ಎಂಜನೀಯರ್‌ಗೆ ಬಲವಂತವಾಗಿ ತಮ್ಮ ಮಗನಿಂದಲೇ ಕೆಲಸದ ತರಬೇತಿ ಕೊಡಿಸಿದರು. ಅನಂತರ ಕೆಲಸದಿಂದ ತೆಗೆದು ಹಾಕಿದರು ಎಂದು ಆತ ದೂರಿದರು.

ಈ ಘಟನೆಯು ಅಮೆರಿಕದಲ್ಲಿ ಪತ್ರಿಕೆಗಳಿಗೆ ಸುದ್ದಿ ಚಾನೆಲ್‌ಗಳಿಗೆ ಗ್ರಾಸವಾಯಿತು. ಪ್ರತಿರೋಧ ಅತಿಯಾಯಿತು. ಇದರ ನಂತರ ಅಮೆರಿಕವು ಭಾರತೀಯರಿಗೆ ಕೊಡುವ ವೀಸಾಗಳ ಸಂಖ್ಯೆಯನ್ನು ತೀವ್ರವಾಗಿ ಇಳಿಸಿದೆ. ಅಂದರೆ ಹೊರಗಿನವರನ್ನು ಒಳಕ್ಕೆ ಸೇರಿಸುವುದಿಲ್ಲ ಎಂದರ್ಥ. ಒಳಗಿರುವವರನ್ನು ಹೊರಕ್ಕೆ ತಳ್ಳುವ ಪರಿಸ್ಥಿತಿ ಬರುವುದೆಂಬ ನಿರೀಕ್ಷೆ ಇತ್ತು. ಆದರೆ ಹಾಗೇನೂ ಆಗಲಿಲ್ಲ. ಹಾಗೆ ಆಗಲಿಕ್ಕೂ ಸಾಧ್ಯವಿಲ್ಲ. ಅಮೆರಿಕದಲ್ಲಿರುವ ಅಥವಾ ಐರೋಪ್ಯದಲ್ಲಿರುವ ಪ್ರತಿ ಹತ್ತು ಜನ ಭಾರತೀಯ ಇಂಜನೀಯರ್‌ಗಳು ತಮ್ಮ ತಾಯ್ನಾಡಿನಲ್ಲಿ ತಮ್ಮ ಅಣತಿಗಾಗಿ ಕಾಯುತ್ತಾ ಕೂತಿರುವ ಕೆಲವು ನೂರು ಐಟಿ ಕಾರ್ಯಕರ್ತರಿಂದ ಕೆಲಸ ತೆಗೆಯಬಲ್ಲರು. ಬಿ.ಪಿ.ಓ ಎಂದರೇ ತಾನೇ ಏನು? ಅಮೆರಿಕದ ಕಂಪೆನಿಯ ಕೆಲಸ ಒಪ್ಪಿಕೊಂಡ ಕಂಪೆನಿಯವರು ಅಮೆರಿಕದಲ್ಲಿ ಕೆಲವರು ತಮ್ಮವರನ್ನು ನಿಯೋಜಿಸುತ್ತಾರೆ. ಆ ಸಂಖ್ಯೆಯ ಹಲವು ಹತ್ತುಪಟ್ಟು ಜನರನ್ನು ಅದೇ ಕೆಲಸಕ್ಕೆ ಭಾರತದಲ್ಲಿ ನಿಯೋಜಿಸುತ್ತಾರೆ. ಭಾರತದಿಂದ ಹೊರಗೆ ಹೋಗಿ ಗ್ರಾಹಕ ಕಂಪೆನಿ ಇರುವ ಕಡೆ ಕುಳಿತವರು ಅಗತ್ಯಾನುಸಾರ ಕೆಲಸ ಹೇಳುತ್ತಾ ಹೋಗುತ್ತಾರೆ. ಭಾರತದಲ್ಲಿ ಇರುವವರು ಅದನ್ನು ಕಂಪ್ಯೂಟರ್‌ ಕಾರ್ಯಾಚರಣೆಗಳ ರೂಪದಲ್ಲಿ ಮಾಡಿಕೊಡುತ್ತಾ ಹೋಗುತ್ತಾರೆ. ಇದು ಕಾರ್ಯ ವಿಧಾನ.

ಇನ್ನು ಐಟಿ ಸಾಫ್ಟ್‌ವೇರ್‌ಅಭಿವೃದ್ಧಿ ಮಾಡುವುದೆಂದರೆ ಕಂಪ್ಯೂಟರ್‌ನ ಮೆದುಳನ್ನು ಸೃಷ್ಟಿ ಮಾಡಿಕೊಡುವುದು ಎಂದರ್ಥ. ಎಷ್ಟೋ ವೇಳೆ ಬಿಪಿಓ ಒಳಗೇ ಇದೂ ಸೇರಿರುತ್ತದೆ. ಪ್ರತ್ಯೇಕವಾಗಿ ಸಾಫ್ಟ್‌ವೇರ್‌ಅಭಿವೃದ್ಧಿ ಮಾಡಿಕೊಡುವುದು ಇದ್ದೇ ಇದೆ.

ಇನ್ನೊಂದು ಬಗೆಯ ಕೆಲಸವೂ ಉಂಟು. ಐಟಿಯನ್ನು ಕೆಲಸಕ್ಕೆ ಹಚ್ಚಿ ಹಲವು ಬಗೆಯ ಸೇವಾ ಸೌಲಭ್ಯಗಳನ್ನು ಸೃಷ್ಟಿಸುವುದು. ಇದನ್ನು ಐಟಿಇಎಸ್ ಎನ್ನುತ್ತಾರೆ. ಅಂದರೆ ಐಟಿ ಎನೆಬಲ್ಡ್‌ಸರ್ವಿಸಸ್‌. ಕಾಲ್‌ಸೆಂಟರ್‌, ಮೆಡಿಕಲ್ ಟ್ರಾನ್ಸ್‌ಕ್ರಿಪ್ಷನ್‌ಮುಂತಾದ ಸೇವಾ ಕೇಂದ್ರಗಳು ಈ ಬಗೆಯ ಸೇವಾ ಸೌಲಭ್ಯಗಳ ವ್ಯಾಪ್ತಿಗೆ ಬರುತ್ತವೆ. ಹೊರದೇಶದಲ್ಲಿ ಕೆಲಸ ಮಾಡುತ್ತಿರುವ ಕಂಪೆನಿಗಳ ಶಾಖೆಯಂತೆ ಇವು ಕೆಲಸ ಮಾಡುತ್ತವೆ.

ಐಟಿ ಕ್ಷೇತ್ರದ ಯಾವುದೇ ಕೆಲಸವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಕಂಪ್ಯೂಟರೀಕರಿಸಿದ ಯಾವುದೇ ಕಚೇರಿಯಲ್ಲಿ ಹಲವು ಅಂತಸ್ತುಗಳಿರಬಹುದು. ಯಾವುದೇ ಅಂತಸ್ತಿನ ಕಂಪ್ಯೂಟರಿನ ಮಾಹಿತಿಯ ಇನ್ನೊಂದು ಅಂತಸ್ತಿನ ಕಂಪ್ಯೂಟರಿನಲ್ಲಿ ಕಾಣಿಸುತ್ತದೆ. ಒಂದನೇ ಮಹಡಿಗೂ, ಆರನೇ ಮಹಡಿಗೂ ಕಂಪ್ಯೂಟರ್‌ಗಳ ಪಾಲಿಗೆ ಯಾವುದೇ ವ್ಯತ್ಯಾಸ ಇರುವುದಿಲ್ಲ. ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ಸೂಚನೆ ಕೊಡಬಹುದು.

ಅದೇ ರೀತಿ ಒಂದು ಅಂತಸ್ತಿಗೂ ಇನ್ನೊಂದು ಅಂತಸ್ತಿಗೂ ಸಂಬಂಧ ಇರುವಂತೆ ಒಂದು ದೇಶಕ್ಕೂ ಇನ್ನೊಂದು ದೇಶಕ್ಕೂ ವ್ಯತ್ಯಾಸ ಇರುವುದಿಲ್ಲ. ಆ ತತ್ವದ ಆಧಾರದ ಮೇಲೆ ಅಲ್ಲು ಇಲ್ಲೂ ಬೇರೆ ಬೇರೆ ಜನ ಒಂದೇ ಬಗೆಯ ಕೆಲಸವನ್ನು ಪಕ್ಕಪಕ್ಕದಲ್ಲಿ ಕುಳಿತಿರುವರೇನೋ ಎಂಬಂತೆ ಮಾಡಬಹುದು. ಈ ರೀತಿ ಫ್ರಂಟ್ ಆಫೀಸ್ ಅಮೆರಿಕದಲ್ಲಿರುತ್ತದೆ. ಅದರ ಬ್ಯಾಕ್ ಆಫೀಸ್ ಭಾರತದಲ್ಲಿರುತ್ತದೆ.

ಬಸ್ ರಿಸರ್ವೇಷನ್, ರೈಲು ರಿಸವೇರ್ಷನ್ ಮಾಡಿಸಲು ಹೋದಾಗ ದೂರದ ನಿಲ್ದಾಣದ ಪರಿಸ್ಥಿತಿ ಏನೆಂದು ಇಲ್ಲಿನವರು ಕಂಪ್ಯೂಟರ್‌ ಮೂಲಕ ಕುಳಿತಲ್ಲಿಯೇ ಕಂಡುಕೊಳ್ಳುತ್ತಾರೆ. ಸೀಟು ಕಾದಿರಿಸಿ ಸೂಚನೆ ದಾಖಲು ಮಾಡುತ್ತಾರೆ. ಇಡೀ ಸಾರಿಗೆ ಸಂಸ್ಥೆಯದು ಅಥವಾ ರೈಲ್ವೇಯದು ಒಂದೇ ನೆಟ್‌ವರ್ಕ್ ಆಗಿರುತ್ತದೆ. ಅಮೆರಿಕ ಮತ್ತು ಭಾರತದ ನಡುವಿನದು ಪೂರ್ತಿಯಾಗಿ ಒಂದೇ ನೆಟ್‌ವರ್ಕ್.

ಕಂಪ್ಯೂಟರ್‌ ಸೇವೆಯನ್ನು ಅಧಿಕಾವಧಿಕ ಬೆಳೆಸಿಕೊಳ್ಳುತ್ತಾ ಹೋದಂತೆ ಎಂಜನೀಯರ್‌ಗಳು ಮತ್ತು ತಜ್ಞರು ಹೇಗೋ ಹಾಗೆ ತಾಂತ್ರಿಕ ಪರಿಣತಿ ಹೆಚ್ಚಿಗೆ ಇಲ್ಲವಾದರೂ ಬಹಳ ದೊಡ್ಡ ಸಂಕ್ಯೆಯಲ್ಲಿ ಬೇಕಾಗುತ್ತಾರೆ. ಅಂದರೆ ಉದ್ಯೋಗಾವಕಾಶಗಳು ಬಹಳ ಬಹಳ ಸೃಷ್ಟಿಯಾಗುತ್ತಿವೆ. ಅದನ್ನು ಬಾಚಿಕೊಳ್ಳುವುದು ಭಾರತಕ್ಕೆ ಮುಖ್ಯ. ಬುದ್ಧಿ ಉಪಯೋಗಿಸಿದಂತೆಲ್ಲಾ ಗಳಿಕೆ ಹೆಚ್ಚು. ಇಲ್ಲಿ ಕೆಲಸ ಮಾಡುವವರು ಏನನ್ನೂ ಹೆಚ್ಚಾಗಿ ಖರ್ಚು ಮಾಡಬೇಕಾಗುವುದಿಲ್ಲ. ಬುದ್ಧಿಯನ್ನು ಮಾತ್ರ ಖರ್ಚು ಮಾಡಬೇಕು. ಐಟಿ ಕ್ಷೇತ್ರದ ಸಂಬಳ ಭತ್ಯೆಗಳು ಇತರ ಕಡೆಗಳಿಗಿಂತ ಸಾಕಷ್ಟು ಜಾಸ್ತಿ. ಭಾರತದ ಜನ ಐಟಿ ಕೆಲಸಗಳಿಗೆ ಬಹಳ ಸುಲಭವಾಗಿ ಒಗ್ಗಿಕೊಳ್ಳುತ್ತಿದ್ದಾರೆ.

ಹೀಗಿರುವಾಗ ಪ್ರತಿರೋಧ ಬಂತೆಂದು ಹಿಂಜರಿಯುವುದು ಸರಿಯೆ? ಅಮೆರಿಕದಲ್ಲಿ ನಡೆದ ಹುಲ್ಲಾ ಬಲ್ಲಾ ಹೆಚ್ಚಾಗಿ ಸುದ್ದಿ ಆಗಲೇ ಇಲ್ಲ ಭಾರತದಲ್ಲಿ. ಏಕೆಂದರೆ ಭಾರತದ ಕಂಪೆನಿಗಳೇ ಇದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಭಾರತದ ಕಂಪೆನಿಗಳವರಿಗೆ ತಮ್ಮ ಶಕ್ತಿ ಸಾಮರ್ಥ್ಯ ಏನೆಂದು ಚೆನ್ನಾಗಿ ಗೊತ್ತು. ಎಷ್ಟೇ ಜನರನ್ನು ಬೇಕಾದರೂ ಎಷ್ಟು ಬಗೆಯ ಕಂಪ್ಯೂಟರ್‌ ಕೆಲಸಗಳಿಗಾದರೂ ನೇಮಿಸಿಕೊಳ್ಳಲು ಸಾದ್ಯವಿದೆ ಎಂಬುದು ಅವರಿಗೆ ಚೆನ್ನಾಗಿ ಗೊತ್ತು. ಭಾರತದಲ್ಲಿ ನಿಜವಾದ ಅರ್ಥದಲ್ಲಿ ಮಾನವ ಸಂಪನ್ಮೂಲ ಲಭ್ಯವಿದೆ.

ಆದರೂ ಭಾರತದ ಕೆಲಸಗಾರರ ವಿರುದ್ಧ ಅಮೆರಿಕದಲ್ಲಿ ಶಾಸನಾಕ್ರಮಗಳು ನಡೆದಿವೆ ಎಂದರೆ ಸುಮ್ಮನೆ ಕೂರಲಾಗದು. ಭಾರತದ ವಾಣಿಜ್ಯ ಸಚಿವ ಅರುಣ್ ಜೆಟ್ಲಿ ಬುಷ್ ಸರಕಾರದ ಪ್ರತಿನಿಧಿಗಳ ಜೊತೆ ವಾಷಿಂಗ್ಟನ್‌ನಲ್ಲಿ ಮಾತುಕತೆ ನಡೆಸಿದರು. ಅಮೆರಿಕದಲ್ಲಿರುವ ಪ್ರತಿರೋಧವು ಭಾರತ ಅಮೆರಿಕಗಳ ವ್ಯಾಪಾರ ಸಂಬಂಧಕ್ಕೆ ಅಡ್ಡಿ ಆಗದಂತೆ ನೋಡಿಕೊಳ್ಳುವ ಭರವಸೆ ಬಂದಿದೆ.

ವಾಸ್ತವವಾಗಿ ಅಮೆರಿಕ ಕಾರ್ಮಿಕ ಸಂಘಗಳ ಪ್ರತಿರೋಧವನ್ನು ತೀವ್ರವಾಗಿ ಲೆಕ್ಕಿಸಬೇಕಿಲ್ಲ. ಏಕೆಂದರೆ ಅಮೆರಿಕದ ಐಟಿ ಕಂಪೆನಿಗಳೇ ಭಾರತದ ಪರವಾಗಿ ನಿಲ್ಲುತ್ತವೆ. ಭಾರತವನ್ನು ದೂರವಿಟ್ಟರೆ ಅಗ್ಗವಾಗಿ ಕೆಲಸ ಮಾಡುವವರನ್ನು ಹುಡುಕುವುದು ಕಷ್ಟವಾಗುತ್ತದೆ. ತಮ್ಮ ಲಾಭಕ್ಷಮತೆ ಕಡಿಮೆಯಾಗುತ್ತದೆ ಎಂದೇ ತಮ್ಮ ಸರಕಾರಕ್ಕೆ ತಿಳಿಸಿದ್ದಾರೆ.

ಅಷ್ಟಾಗಿ ಸೆನೆಟರ್‌ಗಳು ರಾಜ್ಯಗಳಲ್ಲಿ ತಂದಿರುವ ಮಸೂದೆಗಳು ಖಾಸಗಿ ಮಸೂದೆಗಳು. ಸರಕಾರ ತಂದಿರುವವಲ್ಲ.