‘ಸ್ಟಾಂಡ್ ಅಪ್ ಆನ್ ದ ಬೆಂಚ್’. ಇದು ಹಳೆಯ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಸಿಗುತ್ತಿದ್ದ ಶಿಕ್ಷೆಯ ಆಣತಿ. ಇದಕ್ಕೆ ಸಿಲುಕಿದ ವಿದ್ಯಾರ್ಥಿ ಶಿಕ್ಷೆಯಿಂದ ಮುದುಡಿ ಹೋಗುತ್ತಿದ್ದ.

ಈಗ ಐಟಿ (ಮಾಹಿತಿ ತಂತ್ರಜ್ಞಾನ) ಕಂಪೆನಿಗಳಲ್ಲಿ ‘ಸಿಟ್ ಡೌನ್ ಆನ್ ದ ಬೆಂಚ್’ ಎಂಬ ಆಣತಿಯೇನಾದರೂ ಬಂದರೆ ಯುವ ಉದ್ಯೋಗಿ ಕುಗ್ಗಿ ಹೋಗುತ್ತಾನೆ. ಅಂಥ ಪರಿಸ್ಥಿತಿ ತನಗೆ ಬರಬಾರದೆಂದೇ ಆಶಿಸುತ್ತಾನೆ. ಬೆಂಚ್ ಮೇಲೆ ಕೂರುವುದು ಎಂದರೆ ಕೈಗಳಿಗೆ ಕೆಲಸ ಕೊಡಲಾಗದೆ ಸುಮ್ಮನೆ ಕೂರಿಸಿದ್ದಾರೆ ಎಂದರ್ಥ.

ಎರಡು ಎರಡೂವರೆ ವರ್ಷದ ಹಿಂದೆ ಭಾರತದ ಎಂಜಿನಿಯರರಿಗೆ ದುಃಸ್ವಪ್ನ. ನಿರುದ್ಯೋಗ ಕಾಡಬಹುದೆಂಬ ಭೀತಿ. ಬೆಂಚ್ ಮೇಲೆ ಕೂರುವ ಪರಿಸ್ಥಿತಿ ಬರಬಾರದೆಂದು ಹಪಹಪಿಸುವುದು. ಹಿಂದಿನ ಸೆಪ್ಟಂಬರ್‌ ೧೧ರಂದು ಅಮೆರಿಕದಲ್ಲಿ ಇರುವವರನ್ನೆಲ್ಲ ಹೊರಕ್ಕೆ ಹಾಕುತ್ತಾರೆಂಬ ಭೀತಿ. ಆದರೆ ಭಾರತದ ಮಟ್ಟಿಗೆ ಈ ಭಿತಿಗೆ ‘ಬದಲಿ’ ಎನಿಸಿದ ಮಾರ್ಗೋಪಾಯಗಳೂ ಗೋಚರಿಸಿದವು. ಅದೇ ‘ಔಟ್ ಸೋರ್ಸಿಂಗ್’ ವಹಿವಾಟು.

ಅಮೆರಿಕದ ಕಂಪೆನಿಗಳು ತಮ್ಮ ವಹಿವಾಟು ಏನಿದೆಯೋ ಅದರ ಕಡತ ಪರಿಪಾಲನೆ ಮತ್ತು ಕಚೇರಿ ಕೆಲಸವನ್ನೆಲ್ಲ ಬೇರೆ ದೇಶಗಳಿಗೆ ವರ್ಗಾಯಿಸಲು ನಿರ್ಧರಿಸಿದವು. ವಹಿವಾಟು ಅಮೆರಿಕದಲ್ಲೆ. ಆದರೆ ಕಚೇರಿ ಕೆಲಸ ಭಾರತದಂಥ ಕಡೆ. ಟೆಲಿಫೋನು, ದೂರ ಸಂಪರ್ಕ, ಸಂಪರ್ಕ ಉಪಗ್ರಹ ಎಂಬಿತ್ಯಾದಿ ತಂತ್ರಜ್ಞಾನ ಕೈಲಿ ಇರುವಾಗ ನಿಮ್ಮ ಗುಮಾಸ್ತೆ, ನಿಮ್ಮ ಅಧಿಕಾರಿ, ಪಕ್ಕದ ಕೋಣೆಯಲ್ಲಿದ್ದರೇನು? ಭಾರತದಂತಹ ದೇಶಗಳಲ್ಲಿ ಇದ್ದರೇನು? ಇಂಥ ಅನುಕೂಲದಿಂದಾಗಿ ಬರೀ ಸಾಫ್ಟ್‌ವೇರ್‌ ಅಭಿವೃದ್ಧಿಗೆ ಭಾರತ ಸೀಮಿತಗೊಳ್ಳಲಿಲ್ಲ. ಐಟಿ ಯುಕ್ತ ಸೇವೆಗಳು ಇದರ ತೆಕ್ಕೆಗೆ ಬಿದ್ದುವು.

ಇವತ್ತು ಭಾರತದ ಒಟ್ಟು ರಫ್ತಿನ ಶೇ.೪.೫ ಭಾಗ ಐಟಿ ಕ್ಷೇತ್ರದ್ದು. ೨೬೪೦೦ ಕೋಟಿ ರೂಪಾಯಿ ರಫ್ತು ಗಳಿಕೆ ಅದರದು. ಹಿಂಜರಿತದಿಂದ ವಿಶ್ವವೇ ತತ್ತರಿಸುತ್ತಿತರುವಾಗ ನಮ್ಮ ಯುವಜನರು ಹೀಗೆ ಅಪ್ರತಿಮ ಸಾಧನೆ ಮಾಡುತ್ತಿದ್ದಾರೆ.

ಇಂಥ ಹೆಗ್ಗಳಿಕೆಯು ಇತರರ ಕಣ್ಣು ಕಿಸುರಾಗುವಂತೆ ಮಾಡದೆ? ಮಾಡದೆ ಉಂಟೆ! ಅಮೆರಿಕನ್ನರೆ ಇದನ್ನು ಸಹಿಸಿಕೊಳ್ಳುತ್ತಿಲ್ಲ. ಅಮೆರಿಕನ್ನರ ಹಿತಕ್ಕೆ ವಿರುದ್ಧವಾಗಿ ಐಟಿ ಕೆಲಸದ ಹೊರಗುತ್ತಿಗೆ ಕೊಡುವುದನ್ನು ತಡೆಯಲು ಅಮೆರಿಕದ ರಾಜಕಾರಣಿಗಳು ಯೋಚಿಸುತ್ತಿದ್ದಾರೆ. ಭಾರತದ ಪ್ರತಿಭೆಯನ್ನು ಒಟ್ಟುಗೂಡಿಸಿ ಪೂರೈಸುವ ಉದ್ಯೋಗ ಗುತ್ತಿಗೆದಾರರನ್ನು ನಿರ್ಬಂಧಕ್ಕೆ ಸಿಲುಕಿಸಿದರೆ ಅಮೆರಿಕನ್ನರ ಹಿತದ ಸಾಧನೆ ಆಗುತ್ತದೆ ಎಂಬ ಹಂಚಿಕೆ ಅವರದು. ಸಾಮಾನ್ಯವಾಗಿ ಭಾರತ ಮತ್ತಿತರ ಮೂಲಗಳ ಎಂಜನಿಯರರು ಅಗ್ಗಕ್ಕೆ ಸಿಗುತ್ತಾರೆ. ಇದೇ ಗುತ್ತಿಗೆದಾರರ ಪಾಲಿಗೆ ಇರುವ ಆಕರ್ಷಣೆ.

ಮೊಟ್ಟ ಮೊದಲಿಗೆ ನ್ಯೂಜೆರ್ಸಿ ಸಂಸ್ಥಾನ ಇಂಥ ಶಾಸನ ಮಾಡಲು ಹೊರಟಿತು. ಇದೀಗ ಕನೆಕ್ಟಿಕಟ್, ಮಿಸ್ಸೋರಿ, ಮೇರಿಲ್ಯಾಂಡ್, ವಿಸ್ಕಾನ್ ಸಿನ್ ಹೀಗೆ ಹಲವು ರಾಜ್ಯಗಳು ಶಾಸನ ತರುವ ತವರೂರಿನಲ್ಲಿವೆ. ಸೆನೆಟರ್‌ಗಳ ಈ ಬಗೆಯ ಆತುರಕ್ಕೆ ಕಾರಣವಿಲ್ಲದೆ ಇಲ್ಲ. ಕೆಲವೇ ತಿಂಗಳುಗಳಲ್ಲಿ ಉಭಯ ರಾಜಕೀಯ ಪಕ್ಷಗಳು ತಂತಮ್ಮ ಅಭ್ಯರ್ಥಿಗಳನ್ನು ಆಯುತ್ತಿವೆ. ಹೇಗೂ ಹೊರಗಿನ ಎಂಜನಿಯರರು ತಮ್ಮ ಉದ್ಯೋಗಾವಕಾಶಗಳನ್ನು ಕಸಿಯುತ್ತಿದ್ದಾರೆಂಬ ದೂರು ಅಮೆರಿಕನ್ನರಿಂದ ಬರುತ್ತಿದೆ ಎಂಬ ಭಾವನೆ ರಾಜಕಾರಣಿಗಳದು. ಈ ಜನ ಎಲ್ಲಿದ್ದರೂ ಒಂದೇ; ಚುನಾವಣೆ ಬಂದಾಗ ಇದೇ ಚಿಂತೆ; ಭಾರತವಾದರೇನು, ಅಮೆರಿಕಾದವಾದರೇನು?

ಆದರೆ ಅಮೆರಿಕದ ಉದ್ಯಮಿಗಳು ರಾಜಕಾರಣಿಗಳಿಗೆ ಶಾಸನ ತರಲು ಒತ್ತಾಸೆ ಕೊಡುತ್ತಿಲ್ಲ. ಬದಲಿಗೆ ವಿರೋಧಿಸುತ್ತಿದ್ದಾರೆ. ಏಕೆಂದರೆ ಅಗ್ಗದ ಕೆಲಸಗಾರರು ಸಿಗುತ್ತಿದ್ದರೆ ಮಾತ್ರ ಇವರ ಲಾಭ ಹೆಚ್ಚುತ್ತದೆ.

ಅಮೆರಿಕದಲ್ಲಿ ಐಟಿ ಕೆಲಸಗಾರರಿಗೆ ಗಂಟೆಗೆ ಆರು ಡಾಲರ್‌ ಕನಿಷ್ಠ ವೇತನ ಕೊಡಬೇಕೆಂಬ ನಿರ್ಬಂಧವಿದೆ. ಇಷ್ಟು ವೇತನವನ್ನು ಭಾರತ ಮತ್ತಿತರ ಕಡೆಗಳಿಂದ ಬಂದವರಿಗೆ ಕೊಡುವುದೇ ಇಲ್ಲ. ಇದಕ್ಕಿಂತ ಬಹಳ ಕಡಿಮೆ ಕೊಡುವುದು. ಭಾರತದಲ್ಲಿರುವ ಕಂಪೆನಿಯವರು ಅಮೆರಿಕದಂಥ ಕಡೆ ಐಟಿ ಕೆಲಸದ ಗುತ್ತಿಗೆ ಹಿಡಿದಾಗ ಸರಿಸುಮಾರು ಈ ಲೆಕ್ಕದಲ್ಲಿ ವೆಚ್ಚ ತೋರಿಸುತ್ತಾರೆ. ಆದರೆ ಕಡಿಮೆ ಕೊಡುತ್ತಾರೆ. ಭಾರತದ ಕಂಪೆನಿಗಳಿಗೆ ತಮ್ಮ ಉದ್ಯೋಗಿಗಳನ್ನು ಹೊರದೇಶಕ್ಕೆ ಕಳುಹಿಸುವುದೆಂದರೆ ಸಿಹಿ ತಿಂದಷ್ಟು ಸಂತೋಷ. ಏಕೆಂದರೆ ತಮ್ಮ ಬ್ಯಾಲೆನ್ಸ್‌ಷೀಟ್‌ಗಳಲ್ಲಿ ಲಾಭ ಏರುವಂತಾಗುತ್ತದೆ.

ಹೀಗಿದ್ದರೂ ಭಾರತದ ಯುವಕರು ಏಕೆ ವಿದೇಶಕ್ಕೆ ಹೋಗಿ ದುಡಿಯಲು ನುಗ್ಗಿ ನುಗ್ಗಿ ಬರುತ್ತಾರೆ?

ಅವರಿಗೆ ವಿದೇಶಕ್ಕೆ ಕೆಲಸ ಮಾಡಲು ನಿಯುಕ್ತರಾದಾಗ ದೇಶದೊಳಗೆ ಏನು ಸಂಬಳ ಇದೆಯೋ ಅದು ಅವರ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ. ಅದೇ ವೇಳೆ ವಿದೇಶಿ ನೆಲದ ಮೇಲೆ ದುಡಿದಿದ್ದಕ್ಕೆ ಅಲ್ಲಿನ ಹಣದ ಲೆಕ್ಕಾಚಾರದಲ್ಲಿ ಸಂಬಳ ಆ ನೆಲದ ಮೇಲೆ ಪಾವತಿ ಆಗುತ್ತಿದೆ. ಹೀಗೆ ಎರಡು ಸಂಬಳ ಕೊಡುವ ಪದ್ಧತಿಯನ್ನು ಸಾಕಷ್ಟು ಕಂಪೆನಿಗಳು ಪಾಲಿಸಿಕೊಂಡು ಬರುತ್ತಿವೆ. ಹೀಗಿರುವಾಗ ಅಮೆರಿಕದ ಕನಿಷ್ಠ ವೇತನವಾದ ಗಂಟೆಗೆ ಆರು ಡಾಲರ್‌ ಬದಲು ಮೂರ‍್ನಾಲ್ಕು ಡಾಲರ್‌ ಅಥವಾ ತತ್ಸಮಾನ ಕರೆನ್ಸಿ ವೇತನಕ್ಕೂ ಒಪ್ಪಿಕೊಳ್ಳುತ್ತಾರೆ.

ಇರುವ ಆಕರ್ಷಣೆ ಒಂದೇ; ಅಮೆರಿಕದಲ್ಲಿ ಜೀವನ ನಡೆಸಿ ಒಂದು ಸಾವಿರ ಡಾಲರನ್ನು ಭಾರತಕ್ಕೆ ತಂದರೆ, ಇಲ್ಲವೇ ರವಾನೆ ಮಾಡಿದರೆ ಅದು ೪೭೦೦೦ ರೂಪಾಯಿ ಆಗುತ್ತದೆ. ಅದೇ ರೀತಿ ಇಂಗ್ಲಂಡಿನಲ್ಲಿ ಒಂದು ಸಾವಿರ ಪೌಂಡ್ ಉಳಿಸಿದರೆ ೭೫೦೦೦ ರೂಪಾಯಿ ಆಗುತ್ತದೆ.

ಇಂಥ ಪ್ರಶಸ್ತವಾದ ವರಮಾನ ಬಾಬಿಗೆ ಧಕ್ಕೆ ಉಂಟಾಗುತ್ತದೆಂದರೆ ಭಾರತ ಮೂಲದ ಎಂಜಿನಿಯರ್‌ಗಳಿಗೆ ಮತ್ತು ಭಾರತದ ಕಂಪೆನಿಗಳಿಗೆ ಗಾಬರಿ ಆಗಬೇಡವೆ? ಒಳಗೊಳಗೆ ಭಯ ಆಗಿದ್ದರೂ ಮೇಲೆ ಮೇಲೆ ನಿರ್ಭಯ. ಏಕೆ ಗೊತ್ತೆ ? ಸ್ವತಃ ಅಮೆರಿಕದ ಕಂಪೆನಿಗಳು ಸಹಾ ಇದಕ್ಕಿಂತ ಅಗ್ಗದ ಮಾನವ ಸಂಪನ್ಮೂಲವನ್ನು ಅಮೆರಿಕದೊಳಗೆ ಕಂಡುಕೊಳ್ಳಲು ಸಾಧ್ಯವಿಲ್ಲ. ಜೊತೆಗೆ ಭಾರತದ ಕಂಪೆನಿಗಳು ಅಮೆರಿಕವನ್ನು ಮಾತ್ರವೇ ನೆಚ್ಚಿಕೊಂಡಿಲ್ಲ. ಯುರೋಪ್ ಮತ್ತಿತರ ಭೂಭಾಗಗಳ ದೇಶಗಳಲ್ಲಿ ಬೇಡಿಕೆ ಕುದುರಿಸಿಕೊಂಡಿವೆ. ವಾಸ್ತವವಾಗಿ ಸದ್ಯ ಡಾಲರ್‌ ದುರ್ಬಲವಾಗಿದೆ. ಐರೋಪ್ಯ ಕರೆನ್ಸಿ ಅದಕ್ಕಿಂತ ದೃಢವಾಗಿದೆ. ಆದ್ದರಿಮದ ಅಮೆರಿಕದ ಪರಿವೆ ಕಡಿಮೆ.

ಈ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿನಿಂದ ಈಚೆಗೆ ಇನ್ಫೋಸಿಸ್, ವಿಪ್ರೋ ಮತ್ತು ಸತ್ಯಂ ಮತ್ತಿತರ ಕಂಪೆನಿಗಳವರು ಜನರ ನೇಮಕವನ್ನು ಹೆಚ್ಚಿಸಿಕೊಂಡಿವೆ. ಮುಂಚಿನಂತೆ ಕಾಲೇಜು ಕ್ಯಾಂಪಸ್‌ಗಳಿಗೆ ಹೋಗಿ ಹೊಚ್ಚ ಹೊಸ ಪ್ರತಿಭೆಗಳನ್ನು ಹೆಕ್ಕದೆ ಇರಬಹುದು. ಆದರೆ ಬೇಕು ಬೇಕಾದ ಬಗೆಯ ಪರಿಣತಿ ಇರುವವರನ್ನು ಹುಡುಕಿ ಹುಡುಕಿ ನೇಮಿಸಿಕೊಳ್ಳುತ್ತಿದೆ.

ಇತ್ತೀಚೆಗೆ ನ್ಯಾಸ್ಕಾಂ (ಐಟಿ ಕ್ಷೇತ್ರದ ಅಗ್ರಮಾನ್ಯ ಅಭಿವೃದ್ಧಿ ಸಂಸ್ಥೆ) ಬಿಡುಗಡೆ ಮಾಡಿದ ಅಂಕೆ ಸಂಖ್ಯೆ ಪ್ರಕಾರ ೨೦೦೨-೦೩ರ ಸಾಲಿನಲ್ಲಿ ಹಿಂದಿನ ವರ್ಷಕ್ಕಿಂತ ಶೇ.೨೪.೪ ಅಧಿಕ ಜನರನ್ನು ನೇಮಿಸಿಕೊಂಡು ಆಗಿದೆ.

ಮಾರ್ಚ್ ಅಂತ್ಯದೊಳಗೆ ವರ್ಷದಲ್ಲಿ ೬,೫೦,೦೦೦ ತಂತ್ರಜ್ಞರನ್ನು ಹೊಸದಾಗಿ ನೇಮಿಸಿಕೊಂಡಂತೆ ಆಗುತ್ತದೆ. ಕಳೆದ ವರ್ಷ ಹೊಸದಾಗಿ ನೇಮಿಸಿಕೊಂಡಿದ್ದು ೫,೨೨,೨೫೦ ಜನರನ್ನು ಮಾತ್ರ. ಇದರಲ್ಲಿ ಶೇ. ೬೦ ಜನ ಸಾಫ್ಟ್‌ವೇರ್‌ ಇಂಜನೀಯರುಗಳು. ಇನ್ನು ಶೇ. ೪೦ ಜನ ಐಟಿ ಯುಕ್ತ ಸೇವೆಗಳ ಇನ್ನಿತರ ತಂತ್ರಜ್ಞರು. ಕರೆ ಕೇಂದ್ರ ಮುಂತಾದ ಕಡೆ ನಿಯುಕ್ತರಾಗುವವರು. ನ್ಯಾಸ್ಕಾಂ ಸಮೀಕ್ಷೆ ಪ್ರಕಾರ ೨೦೦೮ ಇಸವಿ ಹೊತ್ತಿಗೆ ಭಾರತ ಮೂಲದ ಐಟಿ ಇಂಜನಿಯರರ ಒಟ್ಟು ಬೇಡಿಕೆ ೧೧ ಲಕ್ಷ ಆಗಿರುತ್ತದೆ. ಆದರೆ ಆ ವೇಳೆಗೆ ಲಭ್ಯವಾಗುವ ಜನರ ಸಂಖ್ಯೆ ೮ ಲಕ್ಷ ೮೫ ಸಾವಿರ ಜನ. ಅಂದರೆ ಇನ್ನು ೨ ಲಕ್ಷ ೧೫ ಸಾವಿರ ಜನರಷ್ಟು ಕೊರತೆ ಹಾಗೆಯೇ ಉಳಿಯುತ್ತದೆ. ಈ ಕೊರತೆ ತುಂಬಲು ಈಗಿನಿಂದಲೇ ಏನು ಕ್ರಮ ಕೈಗೊಳ್ಳಬೇಕೆಂದು ಯೋಚಿಸಲು ಯುಜಿಸಿ (ಯುನಿವರ್ಸಿಟಿ ಗ್ರಾಂಟ್ ಕಮಿಷನ್) ಅಂಥವರನ್ನು ಕೇಳುತ್ತಿರುವುದಾಗಿ ನ್ಯಾಸ್ಕಾಂ ಅಧ್ಯಕ್ಷ ಕಿರಣ್ ಕಾರಣಿಕ್ ಅವರು ಹೇಳುತ್ತಾರೆ.

ಇದೀಗ ಐಟಿ ಜನರನ್ನು ತಮ್ಮ ಕಾಲೇಜುಗಳಿಂದ ಹೆಚ್ಚಾಗಿ ಹೊರ ತರುವುದು ಹೇಗೆಂದು ಬೇರೆ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ಯುಜಿಸಿಯನ್ನು ಮುಗಿಬಿದ್ದು ಕೇಳುತ್ತಿದ್ದಾರೆ.

ಐಟಿ ಕ್ಷೇತ್ರದಲ್ಲಿ ಏನೇ ಬದಲಾವಣೆ ಆದರೂ ಚಿಂತೆ ಕರ್ನಾಟಕಕ್ಕೆ, ಬೆಂಗಳೂರಿಗೆ ಸ್ವಲ್ಪ ಹಿನ್ನಡೆ ಉಂಟಾಗಿದ್ದ ಹಿಂದಿನ ವರ್ಷ ಚಿಂತೆ ಮುಡಿದ್ದು ಹೆಚ್ಚಿಗೆ ಕರ್ನಾಟಕಕ್ಕೆ ಸರಿ.

೧೯-೦೨-೨೦೦೩