ಸೆಪ್ಟಂಬರ್ ೧೧ರ ಅಮೆರಿಕ ಘಟನೆ ನಂತರ ಏನಾಗಬಹುದು ಎನ್ನುವ ಊಹಾಪೋಹಗಳಿಗೆ ಮತ್ತು ಲೆಕ್ಕಾಚಾರಗಳಿಗೆ ಲೆಕ್ಕವಿಲ್ಲ. ಭಾರತದ ಮಟ್ಟಿಗೆ ಇದ್ದ ದೊಡ್ಡ ಭಯ ಎಂದರೆ ಪೆಟ್ರೋಲಿಯಂ ಬೆಲೆ ಏರುತ್ತದೆ ಎನ್ನುವುದು. ಆಫ್ಘಾನಿಸ್ತಾನದ ಮೇಲೆ ಅಮೆರಿಕ ದಾಳಿ ಆರಂಭಿಸಿದ್ದರೂ ಭಾರತದ ಪೆಟ್ರೋಲಿಯಂ ಉತ್ಪನ್ನಗಳಿಗೆ ಬೇಡಿಕೆ ಏರಲಿಲ್ಲ.

ಮುಖ್ಯ ಕಾರಣವೆಂದರೆ ವಿಶ್ವಾದ್ಯಂತ ಅತ್ಯುತ್ತಮ ಗ್ರೇಡಿನ ಇಂಧನವನ್ನು ನೀರಿನಂತೆ ಗುಟುಕರಿಸುತ್ತಿದ್ದ ವಿಮಾನಗಳು ನಿಸ್ತೇಜಗೊಂಡಿರುವುದು. ಅಮೇರಿಕದಲ್ಲಿ ಭಯೋತ್ಪಾದನೆ ಭೀತಿಯಿಂದ ವಿಮಾನಯಾನ ಕಡಿಮೆಯಾಗಿದೆ.

ಭಾರತದ ಐಟಿ ಉದ್ಯಮಕ್ಕೆ ಅಮೆರಿಕ ಘಟನೆಯಿಂದ ಅನುಕೂಲವಾಗುತ್ತದೆ ಎಂಬ ನಿರೀಕ್ಷೆ ನಿಜವಾಗುತ್ತಿದೆ. ಭಾರತದಂಥ ಕಡೆಯಿಂದ ಎಂಜಿನಿಯರರನ್ನು ಕರೆಸಿಕೊಂಡು ಐಟಿ ಯೋಜನೆಗಳಿಗೆ ಅವರನ್ನು ಹಚ್ಚುವ ಅಮೆರಿಕನ್ನರ ಪರಿಪಾಠ ಕಡಿಮೆಯಾಗುತ್ತಿದೆ.

ಔಟ್ ಸೋರ್ಸಿಂಗ್ ಅಂದರೆ ಮಾಡಿಸಬೇಕಾದ ಕೆಲಸವನ್ನು ಹೊರಗಿನಿಂದಲೇ ಮಾಡಿಸಿ ಪೂರೈಸಿಕೊಳ್ಳುವುದು ಹೆಚ್ಚಾಗುತ್ತಿದೆ.

ಭಾರತದಲ್ಲಿ ಐಟಿ ಕಂಪನಿಗಳ ಆಗುಹೋಗಿಗೆ ದಿಕ್ಸೂಚಿಯಾಗುವ ಎರಡು ಕಂಪನಿಗಳೆಂದರೆ ವಿಪ್ರೂ ಮತ್ತು ಇನ್‌ಫೋಸಿಸ್. ಅವು ಇದೀಗ ಉತ್ತೇಜಿತವಾಗಿವೆ ಎಂಬುದು ಅವುಗಳ ಇತ್ತೀಚಿನ ಮೂರು ತಿಂಗಳ ಅವಧಿಯ ಕಾರ್ಯ ಫಲಿತಾಂಶಗಳಿಂದಲೇ ವ್ಯಕ್ತವಾಗುತ್ತಿವೆ.

ಆರ್ಥಿಕ ಹಿಂಜರಿತದಿಂದಾಗಿ ಮಂಕು ಹಿಡಿದಿದ್ದ ಐಟಿ ವಲಯದಲ್ಲಿ ಇದೀಗ ಸ್ವಲ್ಪ ಸಂಚಲನವುಂಟಾಗಿದೆ. ಐಟಿ ಕ್ಷೇತ್ರ ಮತ್ತೆ ಚೇತರಿಸಿಕೊಳ್ಳುವುದು ಯಾವಾಗ ಎಂಬುದಕ್ಕೆ ಆರು ತಿಂಗಳ ಹಿಂದೆ ಉತ್ತರ ಸಿಕ್ಕಿರಲಿಲ್ಲ. ಕನಿಷ್ಠ ಒಂದು ವರ್ಷವಾದರೂ ಬೇಕು ಎಂಬ ಅಂದಾಜಿತ್ತು. ಅದು ನಿಜವಾಗಲಿಕ್ಕೆ ಸಾಕೆಂಬ ಭಾವನೆ ಇದೀಗ ಮೂಡುತ್ತಿದೆ. ಉದ್ಯಮಿಗಳಿಗೆ ಸ್ಥೈರ್ಯ ತುಂಬುವ ಕಾರ್ಯ ಅಮೆರಿಕದಲ್ಲಿ ಇನ್ನೂ ಪೂರ್ಣಗೊಂಡಿಲ್ಲ. ಅಧ್ಯಕ್ಷ ಬುಷ್ ಅದರ ಮಾತುಗಳಲ್ಲಿ ಸಿಟ್ಟು ಸ್ವಲ್ಪ ಕಡಿಮೆಯಾಗಿದೆ. ಅಮೆರಿಕನ್ನರಿಗೆ ಅವರ ನೆಲದ ಮೇಲೇ ಪರಾಭವ ಉಂಟಾಗಿರಲಿಲ್ಲ. ಸೆಪ್ಟೆಂಬರ್ ೧೧ ರ ಘಟನೆ ಅವರ ಪಾಲಿಗೆ ದೊಡ್ದ ತೇಜೋವಧೆ. ಆ ನೋವನ್ನು ನುಂಗಿಕೊಂಡು ಇದೀಗ ಒಂದು ರೀತಿಯ ಪುನಶ್ಚೇತನ ಕಾರ್ಯಕ್ಕೆ ಅಮೆರಿಕನ್ನರು ಕೈ ಹಾಕಿದ್ದಾರೆ.

ವಿಮಾನಗಳ ಅಪಹರಣವಾಗಬಹುದು. ಬಾಂಬ್ ಸಿಡಿಯಬಹುದು ಎನ್ನುವ ಭಯದ ಜೊತೆಗೆ ಆಂಥ್ರಾಕ್ಸ್ ಬ್ಯಾಕ್ಟೀರಿಯಾಗಳ ಸೋಂಕು ತಮಗೆ ತಗಲಬಹುದು ಎಂದು ಸಾಮಾನ್ಯ ಜನ ಸಹ ತಲ್ಲಣಿಸುವಂತಾಗಿದೆ. ಈ ಬಗೆಯ ಭಯ, ತಲ್ಲಣಗಳನ್ನು ದಾಟಿಕೊಂಡು ಯುದ್ಧವನ್ನು ಜಾರಿಯಲ್ಲಿಟ್ಟು ವಿಶ್ವ ವ್ಯಾಪರ ಕೇಂದ್ರ ನಾಶದ ಫಲವಾಗಿ ಕಾಣೆಯಾದ ಮಾಹಿತಿಯನ್ನು ಪುನಃ ನಿರ್ಮಿಸಿಕೊಂಡು ಅನಂತರ ವ್ಯಾಪಾರ ಸಾಪಾರ ಎಂದು ಸಹಜವಾಗಿ ಅಮೆರಿಕನ್ನರು ಯೋಚಿಸಬೇಕಾಗುತ್ತದೆ. ಆದ್ದರಿಂದಲೇ ಭಾರತದ ಐಟಿ ಕಂಪೆನಿಗಳಿಗೂ ಅಮೆರಿಕದಿಂದ ಆರ್ಡರುಗಳು ಬರಬೇಕಾದರೆ ಒಂದಿಷ್ಟು ಸಮಯ ಹಿಡಿಯುತ್ತದೆ. ಆದರೆ ಮಾಹಿತಿ ತಂತ್ರಜ್ಞಾನದ ಮಟ್ಟಿಗೆ ಹೇಳಬೇಕಾದರೆ ಅಮೆರಿಕವು ಭಾರತದ ಕಂಪೆನಿಗಳನ್ನು ಬಳಸಿಕೊಳ್ಳುವುದು ಅನಿವಾರ್ಯವಾಗುತ್ತದೆ.

ಅಮೆರಿಕದ ಅರ್ಥಿಕ ಹಿಂಜರಿತ ಕಾರಣದಿಂದಾಗಿ ಸೆಪ್ಟೆಂಬರ್ ೧೧ಕ್ಕೆ ಮುಂಚೆ ಭಾರತದ ಕಂಪೆನಿಗಳು ಬಹಳ ಜರ್ಝರಿತಗೊಂಡಿದ್ದವು. ಹೊಸ ಅಶೆ ಚಿಗುರಿದೆ ಎನ್ನುವುದನ್ನು ಬಿಟ್ಟರೆ ಈಗಲೂ ಅವು ಸುಸ್ತಾಗಿಯೇ ಮುಂದುವರೆದಿವೆ. ಹತ್ತು ಹನ್ನೆರಡು ಸಾವಿರವಿದ್ದ ಇನ್ಫೋಸಿಸ್‌ನ ಷೇರಿನ ಬೆಲೆ ಈ ಬರವಣಿಗೆ ಸಿದ್ಧವಾಗುತ್ತಿರುವ ಹೊತ್ತಿನಲ್ಲಿ ರೂ. ೩೦೦೦ದ ಗೆರೆ ದಾಟುವ ಹವಣಿಕೆಯಲ್ಲಿದೆ. ಇನ್ಫೋಸಿಸ್‌ನ ಈಚಿನ ಫಲಿತಾಂಶಗಳು ಪ್ರಕಟವಾಗುವ ಮುನ್ನ ರೂ. ೨೩೦೦ರ ತಳಕ್ಕೆ ಮುಟ್ಟಿತ್ತು.

ಕಳೆದ ವರ್ಷ ಈ ಕಂಪೆನಿಯ ಇದೇ ಷೇರು ಬೆಲೆ ಉಚ್ಛ್ರಾಯ ಸ್ಥಿತಿ ಕಂಡು ರೂ. ೧೨೦೦೦ದಷ್ಟು ಎತ್ತರಕ್ಕೆ ಏರಿತು. ಸಾಕಷ್ಟು ದಿನ ರೂ. ೧೦೦೦೦ ಮಟ್ಟದಲ್ಲಿ ನಡೆದಿತ್ತು. ಐ.ಟಿ ಕ್ಷೇತ್ರದ ದೆಸೆ ಕಡಿಮೆ ಆಯಿತು ಎನ್ನುತ್ತಿದ್ದಂತೆ ಇನ್ಫಾಸಿಸ್ ಷೇರಿನ ಬೆಳೆ ರೂ. ೨೩೦೦ಕ್ಕೆ ಬಂದುಬಿಟ್ಟಿತ್ತು.

ಇದೇ ಧಾಟಿ ಇತರ ಕಪೆನಿಗಳ ಸಂಬಂಧ ವ್ಯಕ್ತವಾದರೆ ಮತ್ತೆ ಒಳ್ಳೆಯ ದಿನಗಳು ಬಂದಂತೆಯೇ ಸರಿ. ಆದರೆ ಕೆಟ್ಟ ದಿನಗಳಲ್ಲಿ ಎಲ್ಲ ಐಟಿ ಕಂಪೆನಿಗಳು ತಮ್ಮ ಸ್ಥಿತಿಗತಿಗಳನ್ನು ತಮತಮಗೆ ತೋಚಿದಂತೆ ಉತ್ತಮಗೊಳಿಸಿಕೊಳ್ಳಲು ಹೆಣಗಿವೆ ಎಂಬುದು ನಿಜ. ಉದಾಹರಣೆಗೆ ಈ ಕಂಪೆನಿಗಳವರು ಹೊಸ ನೇಮಕಾತಿ ನೀತಿ ಅಂಗೀಕರಿಸಿದರು. ಕಾಲೇಜು ಕ್ಯಾಂಪಸ್‌ಗಳಿಗೇ ಹೋಗಿ ಪರೀಕ್ಷೆಗೆ ಮುಂಚೆಯೇ ಉದ್ಯೋಗಕ್ಕೆ ಆಯ್ಕೆ ಮಾಡಿಕೊಳ್ಳುವುದನ್ನು ಕೈಬಿಟ್ಟರು. ಅರ್ಥಿಕ ಹಿಂಜರಿತದ ಕಾರಣ ವ್ಯಾಪಾರ ಕಡಿಮೆ ಆಗಿದೆಯೆಂದು ಹೇಳಿ ಯಾವ ಉದ್ಯೋಗಿಗಳನ್ನೂ ತೆಗೆದುಹಾಕಲಿಲ್ಲ. ಅವರ ಸಂಬಳ ಕಡಿಮೆ ಮಾಡಲಿಲ್ಲ. ಹೆಚ್ಚು ಸಂಬಳದ ಅಶೆ ತೋರಿಸಿ ಬೇರೆ ಕಂಪೆನಿಗಳ ಉದ್ಯೋಗಿಗಳನ್ನು ಸೆಳೆದುಕೊಳ್ಳುವುದನ್ನು ಕಡಿಮೆ ಮಾಡಿದರು. ಎಲ್ಲ ಕಂಪೆನಿಗಳವರು ಸಂಬಳ ಕಡಿಮೆ ಮಾಡದಿದ್ದರೂ ಸವಲತ್ತುಗಳನ್ನು ಮೊಟಕು ಮಾಡಿದರು. ಸಾರಿಗೆ, ಸಂಪರ್ಕ, ಪ್ರಯಾಣ, ವಾಹನ ಸೌಲಭ್ಯಗಳನ್ನು ತೀವ್ರವಾಗಿ ಕಡಿಮೆ ಮಾಡಿದರು. ಒಟ್ಟಿನಲ್ಲಿ ನಾನಾ ಬಗೆಯ ಖರ್ಚುಗಳನ್ನು ಕಡಿಮೆ ಮಾಡಲು ತಲೆಯ ಮೇಲೆ ಕೂರಿಸಿಕೊಂಡಿದ್ದ ಉದ್ಯೋಗಿಗಳನ್ನು ಒಂದಿಷ್ಟು ಕಳಕ್ಕೆ ಇಳಿಸಲು ಎಲ್ಲ ಕಪೆನಿಗಳವರೂ ಮುಂದಾದರು. ಹೀಗೆ ಹೊಟ್ಟೆಕಟ್ಟುವ ಹಾಗೂ ಮೈತೂಕ ಇಳಿಸಿಕೊಳ್ಳುವ ವೇಳೆ ಅಗತ್ಯಕ್ಕಿಂತ ಹೆಚ್ಚಾಗಿಯೇ ಖರ್ಚಿನ ಮೇಲೆ ಹಿಡಿತ ಸಾಧಿಸಿದರು.

ಒಂದು ಮಾತು ನಿಜ. ಭಾರತದಲ್ಲಾಗಲೀ ವಿಶ್ವದ ಬೇರೆ ಕಡೆಗಳಲ್ಲಾಗಲಿ ಐಟಿ ಕಪನಿಗಳವರು ಎಂಜಿನಿಯರರನ್ನು ಹುಚ್ಚಾಪಟ್ಟೆ ಕೆಲಸದಿಂದ ತೆಗೆದುಹಾಕಲಿಲ್ಲ. ವ್ಯಾಪಕ ನಿರುದ್ಯೋಗಕ್ಕೇನೂ ದಾರಿಯಾಗಲಿಲ್ಲ. ಅಮೆರಿಕದಲ್ಲಿ ಕೆಲಸ ಕಳೆದುಕೊಂಡಿದ್ದಾಗಿ ಹೇಳಿ ವಾಪಸು ಬಂದ ಒಂದೇ ಒಂದು ನಿದರ್ಶನವೂ ಸಿಗುವುದಿಲ್ಲ.

ವಿಶ್ವಾದ್ಯಂತ ಐಟಿ ಕಂಪೆನಿಗಳಲ್ಲಿ ಕೆಲಸ ಕಡಿಮೆಯಾಗಿದ್ದರೂ ಉದ್ಯೋಗಿಗಳನ್ನು ಉಳಿಸಿಕೊಂಡಿದ್ದು ಏಕೆ? ಮತ್ತೆ ವ್ಯಾಪಾರ ಕುದುರಿದಾಗ ಬೇಕೆಂದಾಗ ತರಬೇತಿ ಪಡೆದ ಜನ ಸಿಗುವುದಿಲ್ಲ ಎನ್ನುವ ಕಾರಣಕ್ಕೆ! ಪ್ರತಿ ಕಂಪೆನಿಯೂ ತನ್ನ ಉದ್ಯೋಗಿಗಳ ಮೇಲೆ ಹಲವು ಹತ್ತು ಲಕ್ಷ ರೂಪಾಯಿ ಖರ್ಚು ಮಾಡಿ ತನಗೆ ಬೇಕಾದಂತೆ ತರಬೇತಿ ಮಾಡಿಕೊಂಡಿರುತ್ತದೆ. ಕಷ್ಟ ಕಾಲವೆಂದು ಹೇಳಿ ಕೆಲಸದಿಂದ ತೆಗೆದುಹಾಕಿದರೆ ನಾಳೆ ಬೇಕೆಂದಾಗ ಅವರು ತಕ್ಷಣ ಸಿಗುವುದಿಲ್ಲ. ಆದ್ದರಿಂದಲೇ ಅವರನ್ನು ಕಾಪಾಡಿಕೊಂಡು ಬಂದಿವೆ.

ಹಿಂಜರಿತ ಗೋಚರಿಸಿದಾಗ ಲೆಕ್ಕವಿಲ್ಲದಷ್ಟು ಕಂಪೆನಿಗಳು ಮುಖ್ಯವಾಗಿ ಡಾಟ್ ಕಾಂ ಕಂಪೆನಿಗಳು ಮುಚ್ಚಿ ಹೋಗಿವೆ. ಆಗ ನಿರುದ್ಯೋಗಿಗಳಾದವರನ್ನು ಮತ್ತೆ ನಾನಾ ಕಾರ್ಯಗಳಾಗಿ ತನ್ನ ತಕ್ಕೆಗೆ ತೆಗೆದುಕೊಂಡಿವೆ. ವಿಪರೀತ ಲಾಭ ಮಾಡದಿದ್ದರೂ ಅಸ್ತಿತ್ವ ಉಳಿಸಿಕೊಂಡ ಕಂಪೆನಿಗಳ ಸಂಖ್ಯೆಯೇ ಹೆಚ್ಚು.

ಈಗ ಒಳ್ಳೆಯ ದಿನಗಳು ಬರುತ್ತವೆಂದರೆ ಗತ ವೈಭವ ಪೂರ್ತಿ ಮರಳುತ್ತದೆ ಎಂದು ಹೇಳಲು ಬರುವುದಿಲ್ಲ. ಅಮೆರಿಕವು ಔಟ್ ಸೋರ್ಸಿಂಗ್ ನೀತಿ ಅನುಸರಿಸುತ್ತಿದೆ. ಮಾತು ಮಾತಿಗೆ, ಬೇಕೆಂದಾಗಲೆಲ್ಲ ಅಮೆರಿಕಕ್ಕೆ ಹಾರಲು ಭಾರತೀಯ ಎಂಜಿನಿಯರುಗಳಿಗೆ ಇನ್ನು ಮುಂದೆ ಅವಕಾಶ ಸಿಗುವುದಿಲ್ಲ ! ಅಮೆರಿಕದಲ್ಲಿರುವವರೇ ಭೀತಿಗ್ರಸ್ಥರಾಗಿದ್ದಾರೆ ಎನ್ನುವಾಗ ಇಲ್ಲಿನವರು ಅಲ್ಲಿ ಹೋಗಿ ನಿರಾಳವಾಗಿ ಕೆಲಸ ಮಾಡುವುದಾದರೂ ಹೇಗೆ? ಜೊತೆಗೆ ಅಮೆರಿಕದ ವಿಷಯ ಏನೇ ಆಗಿದ್ದರೂ ಭಾರತೀಯ ಎಂಜಿನಿಯರರಿಗೆ ಐರೋಪ್ಯ ರಾಷ್ಟ್ರ ಎಂದು ಆಯ್ಕೆ ವೇಳೆ ಎಚ್ಚರಿಕೆ ವಹಿಸಬೇಕಾದ್ದು ಮುಖ್ಯ.