ಇದು ಸತತವಾಗಿ ಜನ ಕೇಳುವ ಪ್ರಶ್ನೆ. ಆರ್ಥಿಕತೆ ಸತ್ತು ಸುಣ್ಣವಾಗಿದೆ. ವ್ಯಾಪಾರೋದ್ಯಮಿಗಳಂತೂ ನಿರ್ವಿಣ್ಣವರಾಗಿದ್ದಾರೆ.

ಮೊದಲನೆಯದಾಗಿ ಯಾವ ಸರಕು, ಸೇವೆಗೂ ಬೇಡಿಕೆ ಇಲ್ಲ. ಉತ್ಪನ್ನ ಯಾವುದೇ ಇದ್ದರೂ ಸೇವಾ ಸೌಲಭ್ಯ ಏನೇ ಆಗಿದ್ದರೂ ಕೊಳ್ಳುವವನ ಬಳಿ ಹಣವೇ ಇಲ್ಲದಿದ್ದರೆ ಯಾರು ತಾನೇ ಏನು ಮಾಡಬಲ್ಲರು? ಆರ್ಥಿಕ ಹಿಂಜರಿತ ಎಂದರೆ ಇಷ್ಟೊಂದು ದುರ್ಭರ ಇದ್ದೀತು ಎಂಬ ಕಲ್ಪನೆ ಇತ್ತೀಚಿನವರೆಗೂ ಯಾರಿಗೂ ಇರಲಿಲ್ಲ. ಅಭಾವದ ಕೊರತೆಯ, ಬೇಡಿಕೆ ಪೂರೈಕೆ ಏರುಪೇರಿನ ಅನುಭವ ಮಾತ್ರ ಇರುವವರಿಗೆ ಆರ್ಥಿಕ ಹಿಂಜರಿತದ ರುಚಿ ‘ಬಹಳ ಬಹಳ ಕಹಿ’ ಆಗಿರದೆ ಬೇರೆ ಆಗಲಿಕ್ಕೆ ಸಾಧ್ಯವೇ ಇಲ್ಲ.

ಆರ್ಥಿಕ ಹಿಂಜರಿತ ನಮ್ಮ ದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಅಮೆರಿಕ ಜಪಾನುಗಳೂ ಸೇರಿದಂತೆ ಎಲ್ಲ ರಾಷ್ಟ್ರಗಳನ್ನೂ ಕಾಡುತ್ತಿರುವುದು. ಶ್ರೀಮಂತ ರಾಷ್ಟ್ರಗಳಿಗೆ ಏನೇ ಆದರೂ ಚಿಂತೆ ಇಲ್ಲ ಎನ್ನುವ ಮಾತು ಸಲ್ಲುವುದಿಲ್ಲ. ಸ್ಥಳೀಯವಾಗಿ ಯೋಚನೆ ಮಾಡುವಾಗ ಅನುಕೂಲಸ್ಥರಿಗೆ ಚಿಂತೆ ಇರುವುದಿಲ್ಲ. ಎಂದು ಸಾಮಾನ್ಯವಾಗಿ ಹೇಳುತ್ತಾರೆ. ಆಗೆಲ್ಲ ಬರುವ ಜವಾಬೆಂದರೆ ‘ಆನೆ ಭಾರ ಆನೆಗೆ, ಇರುವೆ ಭಾರ ಇರುವೆಗೆ!’ ಎನ್ನುವುದು. ಈ ಮಾತು ರಾಷ್ಟ್ರಗಳ ಮಟ್ಟಿಗೂ ಅನ್ವಯಿಸುತ್ತದೆ.

ಅನುಕೂಲಸ್ಥರಿಗೆ ಚಿಂತೆ ಇರುವುದಿಲ್ಲ ಎಂದು ಹೇಳುವಾಗ ಬಡವರು ತಮ್ಮ ಬವಣೆಗೆ ಕೊನೆಯೇ ಇಲ್ಲ ಎಂದು ವಿವರಿಸುತ್ತಾರೆ. ಅದೇ ಸಾದೃಶ್ಯವನ್ನು ದೇಶ ದೇಶಗಳ ಮಟ್ಟಕ್ಕೆ ವಿಸ್ತರಿಸಿದಾಗ ಭಾರತದ ಸ್ಥಿತಿ-ಗತಿ ಏನೆಂಬುದು ಪ್ರಧಾನವಾಗುತ್ತದೆ. ನೆಹರೂ ಕಾಲದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಹಣ ಒದಗಿ ಬಂದಿದ್ದು ವಿದೇಶಿ ನೆರವಿನಿಂದ. ಆ ಕಾಲಕ್ಕೆ ಊಹಿಸಲು ಸಾಧ್ಯವಾಗದಂಥ ಬೃಹತ್ ಯೋಜನೆಗಳು ಜಾರಿಗೆ ಬರಲು ಅದೇ ಕಾರಣ.

ಇಂದಿರಾಗಾಂಧಿ ಕಾಲದ ಉತ್ತರಾರ್ಧದ ವೇಳೆಗೆ ಪರಿಸ್ಥಿತಿ ಬದಲಾಗಿತ್ತು. ಅಪಾರವಾಗಿ ಸಾಲ ಸಿಗತೊಡಗಿತು. ಮೊದಲು ಮೊದಲು ವಿದೇಶಿ ನೆರವಿನ ಜೊತೆಗೆ ಲಗತ್ತಾದ ಸಾಲ, ಅನಂತರ ಬಡ್ಡಿ ತರಬೇಕಾಗುವ ಆಧಾರದ ಶುದ್ಧ ಸಾಲ.

ರಾಜೀವಗಾಂಧಿ ಮತ್ತು ಅನಂತರದ ವರ್ಷಗಳಲ್ಲಿ ವಿದೇಶಿ ಸಾಲವೂ ಬತ್ತಿ ಹೋಗುವಂತಾಯಿತು. ಏನಿದ್ದರೂ ವಿದೇಶಿ ಬಂಡವಾಳವನ್ನು ಆಕರ್ಷಿಸುವುದು ಮಾತ್ರ ಉಳಿಯಿತು.

ವಿದೇಶಿ ಮೂಲದ ಬಂಡವಾಳವನ್ನು ಆಕರ್ಷಿಸುವುದು ಅಷ್ಟು ಸುಲಭದ ಮಾತಲ್ಲ. ಎಂಬುದು ಮತ್ತೆ ಮತ್ತೆ ಮನದಟ್ಟು ಆಗುತ್ತಿದೆ. ಸಾಮಾನ್ಯವಾಗಿ ವಿದೇಶಿ ಬಂಡವಾಳ ಹರಿದು ಬರಬೇಕಾದರೆ ವಿಶ್ವ ವ್ಯಾಪಾರಕ್ಕೆ ಲಗತ್ತಾಗಿರಬೇಕು. ಇಲ್ಲವೇ ತಂತ್ರಜ್ಞಾನವನ್ನು ಪಡೆಯುವ ಅನಿವಾರ್ಯತೆ ಇರಬೇಕು.

ವ್ಯಾಪಾರಕ್ಕೆ ಲಗತ್ತಾಗಿರಬೇಕು ಎನ್ನುವಾಗ ವಿದೇಶಗಳಲ್ಲಿ ತಯಾರಾಗುವ ಯಂತ್ರೋಪಕರಣಗಳನ್ನೋ, ಇತರ ಉತ್ಪನ್ನಗಳನ್ನೋ ತರಿಸಿಕೊಳ್ಳಲು ಸಿದ್ಧರಿರಬೇಕು. ಅದಕ್ಕೆ ಸನ್ನಿವೇಶ ಪ್ರಶಸ್ತವಾಗಿರಬೇಕು. ಎಂದರೆ ತರಿಸಿಕೊಳ್ಳುವುದು ಏನೇ ಇದ್ದರೂ ಅದರ ಅಗತ್ಯ ಇರಬೇಕು.

ಇನ್ನೊಂದು ಸಾಧ್ಯತೆ ಎಂದರೆ ಇಲ್ಲಿನ ಉತ್ಪನ್ನಗಳನ್ನು ಮಾರಲು ಸಾಧ್ಯವಾಗಬೇಕು. ಅದರೆ ಇಲ್ಲಿನ ತಯಾರಿಕಾ ವೆಚ್ಚವೇ ಅಧಿಕ.

ಇನ್ನು ತಂತ್ರಜ್ಞಾನಕ್ಕೆ ಜಗತ್ತಾದ ಹಣ ಹೂಡಿಕೆ ವಿಚಾರ. ಹಣ ಮತ್ತು ತಂತ್ರಜ್ಞಾನ ಪಡೆದು ತಯಾರಿಸಿದ ಸರಕನ್ನು ಅಥವಾ ಸೇವೆಯನ್ನು ಲಾಭಕರವಾಗಿ ದೇಶದೊಳಗೆ ಅಥವಾ ದೇಶದಿಂದ ಹೊರಗೆ ಮಾರಲು ಶಕ್ತರಾಗಬೇಕು.

ಈ ಎರಡೂ ಸಾಧ್ಯತೆಗಳು ಈಗ ದೂರ. ಆರ್ಥಿಕ ಹಿಂಜರಿತ ಎರಡಕ್ಕೂ ಅಡ್ಡಿ ಉಂಟು ಮಾಡಿದೆ. ಯಾರಿಂದಲೂ ಯಾವುದಕ್ಕೂ ಬೇಡಿಕೆ ಇಲ್ಲವಾಗಿದೆ ಎನ್ನುವಾಗ ದಾರಿಯಾದರೂ ಯಾವುದಿದೆ?

ಎಲ್ಲ ಸಂಕಷ್ಟದ ನಡುವೆ, ಹಣ ಹೂಡಿಕೆ ಆಗುತ್ತಿಲ್ಲ ಎನ್ನುವಾಗ, ರಫ್ತು ಕುದುರುತ್ತಿಲ್ಲ ಎನ್ನುವಾಗ, ಆಸೆ ಮೂಡಿಸಿದ್ದೆಂದರೆ ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರದ ಬೆಳವಣಿಗೆ. ಐದಾರು ವರ್ಷಗಳ ಅವಧಿಯಲ್ಲಿ ನಿಬ್ಬರಗಾಗುವಂಥ ರೀತಿಯಲ್ಲಿ ವಿದೇಶಿ ವಿನಿಮಯವನ್ನು ಈ ಕ್ಷೇತ್ರ ಗಳಿಸಿಕೊಟ್ಟಿತು. ಸಹಸ್ರಾರು ಮಂದಿ ಎಂಜನಿಯರುಗಳಿಗೆ ಲಕ್ಷಾವಧಿ ಮಂದಿ ತಂತ್ರಜ್ಞರಿಗೆ ಭಾರೀ ವರಮಾನದ ಅವಕಾಶಗಳನ್ನು ಒದಗಿಸಿತು. ಆದರೆ, ಕಳೆದ ಒಂದು ವರ್ಷದ ಅವಧಿಯಲ್ಲಿ ಮುಗ್ಗರಿಸಿತು. ಇದು ಕರ್ನಾಟಕದ ಮಟ್ಟಿಗೆ ಸಹಾ ಆತಂಕ ತಂದಿತು. ಏಕೆಂದರೆ ಐಟಿ ಮುನ್ನಡೆಯಿಂದ ರಾಜ್ಯವು ಮುಂಚೂಣಿಗೆ ಬಂದು ನಿಂತಿತು.

ಸ್ವತಃ ಐ.ಟಿ. ಕ್ಷೇತ್ರದ ಒಂದು ವಿದ್ಯಮಾನ ಎನಿಸಿದ ಬಿಲ್‌ಗೇಟ್ಸ್‌ ಅವರು ಭವಿಷ್ಯ ನುಡಿದಿದ್ದಾರೆ. ಮತ್ತೆ ಐಟಿ ಕ್ಷೇತ್ರದ ಉಚ್ಛ್ರಾಯ ಸ್ಥಿತಿ ಕಾಣುವಂತಾಗಲು ಎರಡು ವರ್ಷ ಕಾಯಬೇಕೆಂದರು. ವಾಸ್ತವವಾಗಿ ಐ.ಟಿ ಕ್ಷೇತ್ರ ಕುದುರಲು ಇನ್ನೂ ಒಂದು ವರ್ಷ ಸಾಕೆಂಬ ಅಭಿಪ್ರಾಯವಿತ್ತು. ಅಮೆರಿಕದ ಆರ್ಥಿಕ ಹಿಂಜರಿತವು ತೀವ್ರ ನಿರುದ್ಯೋಗಕ್ಕೆ ದಾರಿ ಮಾಡಿಕೊಟ್ಟಾಗ ಅದರ ಬಿಸಿ ಭಾರತಕ್ಕೆ ತಟ್ಟಿತ್ತು.

ಎಂಜಿನಿಯರರನ್ನು ಪರೀಕ್ಷೆಗೆ ಮುಂಚೆಯೇ ಉದ್ಯೋಗಪಾತ್ರರನ್ನಾಗಿ ಮಾಡುತ್ತಿದ್ದ ಸಾಫ್ಟ್‌ವೇರ್ ಕಂಪನಿಗಳು ಯುವ ಜನರನ್ನು ಕೆಲಸಕ್ಕೆ ತೆಗೆದುಕೊಳ್ಳುವುದೇ ಕೈಬಿಟ್ಟವು. ಹೆಚ್ಚು ಉಪಯೋಗಕ್ಕೆ ಬರದವರನ್ನು, ಹೆಚ್ಚುವರಿಯಾಗಿ ಕೆಲಸದಲ್ಲಿ ಇದ್ದವರನ್ನು ಕೆಲಸದಿಂದ ತೆಗೆದುಹಾಕಿದವು. ರಫ್ತು ವ್ಯವಹಾರ ಕುಸಿಯಿತು. ಲಾಭ ಗಳಿಕೆಗೆ ಅಡ್ಡಿಯೇನಿಲ್ಲ ಎನ್ನುವಂತಿದ್ದರೂ ಮುಂಚಿನ ವೈಭವ ಮರೆಯಾಯಿತು. ಈ ಹಿನ್ನಲೆಯಲ್ಲಿ ವ್ಯಾಪಕವಾದ ನಿರುದ್ಯೋಗ ಕಾಣಿಸಿಕೊಳ್ಳುವುದೆಂಬ ಭೀತಿ ನಿಜವಾಗಲಿಲ್ಲ. ಆದರೆ ಐ.ಟಿ. ಕ್ಷೇತ್ರದ ಲಾಭ ಪಡೆಯಲು ತುದಿಗಾಲಲ್ಲಿ ನಿಂತಿದ್ದ ನವ ಬಿ.ಇ. ಪದವೀಧರರಿಗೆ ನಿರಾಶೆಯುಂಟಾಯಿತು.

ಹಾಗಿರುವಾಗ ಬಿಲ್ ಗೇಟ್ಸ್ ಹೇಳುತ್ತಾರೆ ಇನ್ನೂ ಎರಡು ವರ್ಷ ಕಾಯಬೇಕೆಂದು. ಇಷ್ಟೆಲ್ಲಾ ಆಗಿದ್ದು ಭಯೋತ್ಪಾದಕರ ದಾಳಿಗೆ ತುತ್ತಾಗಿ ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರ ನೆಲಸಮ ಆದುದರ ಪರಿಣಾಮ. ಅಮೆರಿಕದಲ್ಲಿದ್ದ ಆರ್ಥಿಕ ಹಿಂಜರಿತದ ಜೊತೆ ಜೊತೆಗೆ ಭಯೋತ್ಪಾದಕರು ಮೂಡಿಸಿದ ಭೀತಿಯು ಅಮೆರಿಕವನ್ನು ಮಾತ್ರವಲ್ಲದೆ ಅಮೆರಿಕದ ಜೊತೆ ವ್ಯಾಪಾರ ಸಂಬಂಧ ಇರಿಸಿಕೊಂಡ ಎಲ್ಲರನ್ನೂ ಆತಂಕಕ್ಕೆ ಗುರಿ ಮಾಡಿದೆ. ಅಮೇರಿಕ ಚೇತರಿಸಿಕೊಳ್ಳುವ ತನಕ ಇತರರಿಗೂ ನೆಮ್ಮದಿ ಇಲ್ಲ.

ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಭಾರತದ ಸಾಫ್ಟವೇರ್ ಉದ್ಯಮ ಶೇಕಡ ೨೫ರ ವೃದ್ಧಿ ಸಾಧಿಸಿದೆ.

ಹಿಂದಿನ ವರ್ಷಗಳಿಗೆ ಹೋಲಿಸಿದರೆ ಇದು ದೊಡ್ಡ ವೃದ್ಧಿಯೇನಲ್ಲ. ಜೊತೆಗೆ ಮುಂದಿನ ಮೂರು ತಿಂಗಳು, ಅಂದರೆ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಭಾರತ ಐ.ಟಿ. ಕ್ಷೇತ್ರವು ಅಮೋಘವಾದುದೇನನ್ನೂ ನಿರೀಕ್ಷಿಸುವಂತಿಲ್ಲ.

ಆದರೆ ಬಿಲ್ ಗೇಟ್ಸ್ ಸಹಿತ ಎಲ್ಲರೂ ಹೇಳುವಂತೆ ಅಮೆರಿಕದಲ್ಲಿ ಹಿನ್ನಡೆ ಆಗಿದ್ದರೂ ಐರೋಪ್ಯ ರಾಷ್ಟ್ರಗಳಲ್ಲಿ ಸಾಫ್ಟ್‌ವೇರ್ ಉದ್ಯಮಕ್ಕೆ ಭಾರೀ ದೊಡ್ಡ ಅವಕಾಶಗಳು ಲಭಿಸಲಿವೆ. ಅದರತ್ತ ಗಮನಹರಿಸಬೇಕು.

ಬ್ರಿಟನ್‌ನ ಐ.ಟಿ. ರಾಜಧಾನಿ ರೆಡಿಂಗ್ಸ್ ನಲ್ಲಿ ಸಾಫ್ಟ್‌ವೇರ್ ಅವಕಾಶಗಳನ್ನು ಬಾಚಿಕೊಳ್ಳಲು ಭಾರತದಿಂದ ಹೋದ ಹಲವು ನೂರು ಕುಟುಂಬಗಳಿವೆ. ಇಟಲಿ, ಫ್ರಾನ್ಸ್ ಮಾತ್ತು ಜರ್ಮನಿ ಇಲ್ಲೆಲ್ಲ ಈಗಾಗಲೇ ಭಾರತದ ಎಂಜಿನಿಯರರು ಕಾಲೂರಿದ್ದಾರೆ.

ಭಾರತದೊಳಗೆ ಸಾಫ್ಟವೇರ್ ಉದ್ಯಮಕ್ಕೆ ಇರುವ ಅವಕಾಶಗಳು ಸೀಮಿತ ಅಲ್ಲವಾದರೂ ವಿದೇಶಗಳಲ್ಲಿರುವ (ಐರೋಪ್ಯ ರಾಷ್ಟ್ರಗಳೂ ಸೇರಿದಂತೆ) ಅವಕಾಶಗಳು ಸದ್ಯ ತುಂಬಾ ಆಕರ್ಷಕವಾಗಿ ಕಾಣತೊಡಗಿವೆ. ಭಾರತ ಮೂಲದ ಎಂಜಿನಿಯರರ ದುಡಿಮೆ ಸಾಕಷ್ಟು ಅಗ್ಗ ಇದ್ದರೂ ಅಮೆರಿಕ ಸೇರಿದಂತೆ ಎಲ್ಲ ರಾಷ್ಟ್ರಗಳೂ ಇನ್ನಷ್ಟು ಲಾಭಕರವಾಗಿ ಅವರನ್ನು ದುಡಿಸಿಕೊಳ್ಳಲು ಹವಣಿಸುತ್ತವೆ. ಇದು ವಾಸ್ತವಾಂಶ. ಆದರೆ ವಿದೇಶಿ ನೆಲದ ಮೇಲೆ ಜಾರಿ ಮಾಡುವ ಕಾಮಗಾರಿಗಳಿಗೆ ವಿದೇಶಿ ವಿನಿಮಯ ರೂಪದಲ್ಲಿ ಪ್ರತಿಫಲ ಬರುವುದು ಭಾರೀ ಅನುಕೂಲಕರ ಎನಿಸಿಕೊಳ್ಳುತ್ತದೆ.

ಉದಾಹರಣೆಗೆ ಪ್ರಸಕ್ತ ಸಾಲಿನ ಮೂರನೇ ತ್ರೈಮಾಸಿಕದಲ್ಲಿ ಶೇಕಡಾ ೨೫ ವೃದ್ಧಿ ಏನು ಕಂಡಿದೆಯೋ ಅದು ವಿದೇಶಿ ವಿನಿಮಯ ಗಳಿಕೆಯ ಫಲಶ್ರುತಿಯೇ ಸರಿ. ಈಚೆಗೆ ರೂಪಾಯಿ ಮೌಲ್ಯ ಸತತವಾಗಿ ಕುಸಿಯತೊಡಗಿದ್ದರಿಂದ ಗಳಿಕೆಯಲ್ಲ ದೊಡ್ಡದಾಗಿ ಕಾಣಿಸುತ್ತಿದೆ.

ಒಂದು ವರ್ಷವಲ್ಲವಾದರೆ ಎರಡು ವರ್ಷ ಕಾಯಬೇಕೆಂದರೆ ಅದಕ್ಕೆ ಸಿದ್ಧರಿರಬೇಕು. ಮುಸುಳಿದ ಮೋಡ ಸದಾಕಾಲ ಮುಖವನ್ನು ಆವರಿಸಿರುವುದಿಲ್ಲ. ಕಣ್ಣು ಕಾಣಿಸದಂತೆ ಮೂಡಿರುವ ಕಾವಳ ಕರಗಲೇಬೇಕು. ಸಾಫ್ಟವೇರ್ ಉದ್ಯಮ ನಿಂತಿರುವುದೇ ಶಿಖರಾಗ್ರದಲ್ಲಿ. ಮೋಡ ಕರಗಿದರೆ ದೃಷ್ಟಿ ನಿಚ್ಚಳ. ಆಗ ಇನ್ನೊಂದು ಶೃಂಗ ಕಣಿಸುವುದು ಖಚಿತ.

ಚಿಂತೆಯೊಂದಿದೆ. ಅದೇ ಚೀನಾದ ಐ.ಟಿ. ಸಾಮರ್ಥ್ಯ. ಅದು ಎಷ್ಟು ದೊಡ್ಡದು; ಎಷ್ಟೊಂದು ಸವಾಲು ಒಡ್ಡಬಹುದು ಎಂಬುದು ತಕ್ಷಣ ಗೊತ್ತಾಗುತ್ತಿಲ್ಲ. ಆ ಸಂಬಂಧ ಎಲ್ಲ ವಿವರಗಳನ್ನು ಏಪ್ರೀಲ್ ವೇಳೆಗೆ ಹೊರಗೆಡಹುದಾಗಿ ಉದ್ಯಮದ ಒಕ್ಕೂಟವಾದ ‘ವ್ಯಾಸ್ ಕಾಂ’ ತನ್ನ ಸದಸ್ಯರಿಗೆ ಹೇಳಿದೆ.