ಹಳ್ಳಿಗಳಲ್ಲಿ ಕೆಲಸ ಸಿಗುವುದು ಕಡಿಮೆ. ಕೃಷಿ ಚಟುವಟಿಕೆಯಲ್ಲೂ ವರ್ಷ ಪೂರ್ತಿ ನಿತ್ಯ ಕೆಲಸ ಇರುವುದಿಲ್ಲ. ಮನೆ ಮಟ್ಟದ ಹಾಗೂ ಗದ್ದೆಯ ಚಾಕರಿ ಹೆಣ್ಣು ಮಕ್ಕಳ ಹೆಗಲಿಗೆ ಸಾಕಷ್ಟು ಗಂಟು ಬೀಳುತ್ತದೆ. ಹೀಗಾಗಿ ಸಾಕಷ್ಟು ಸಂಖ್ಯೆಯ ಯುವಕರು ಪೋಲಾಗುತ್ತಾರೆ.

ಕೃಷಿ ಬಿಟ್ಟು ಇತರ ಕೆಲಸಗಳಿಗೆ ಅಲ್ಲೆಲ್ಲ ಅವಕಾಶ ಇಲ್ಲ ಎಂಬುದು ತಪ್ಪು ಕಲ್ಪನೆ. ತಂತ್ರಜ್ಞಾನವು ನಗರಗಳಲ್ಲಿ ಮಾತ್ರ ಬೆಳೆಯುತ್ತದೆಂದೂ ಹಳ್ಳಿಯಲ್ಲಿ ಅಲ್ಲವೆಂದೂ ಹೇಳುವುದೂ ಸರಿಯಲ್ಲ. ಉದಾಹರಣೆಗೆ ದೂರ ಸಂಪರ್ಕ. ಎಸ್‌ಟಿಡಿ ಬೂತ್‌ಗಳು ಉದ್ದಕ್ಕೂ ಉದ್ಯೋಗ ಒದಗಿಸಿವೆ. ಹಾಗೆಯೇ ಕಂಪ್ಯೂಟರ್‌ಗಳು ಅಧಿಕ ಬಳಕೆಗೆ ಬಂದರೆ ಉದ್ಯೋಗಾವಕಾಶ ಹೆಚ್ಚುವುದು ನಿಸ್ಸಂಶಯ. ಆದರೆ ಈ ಕ್ಷೇತ್ರದಲ್ಲಿ ತರಬೇತಿಯದೇ ಸಮಸ್ಯೆ. ಟೈಪ್ ರೈಟರ್ ಯಂತ್ರಗಳನ್ನು ಕೂಡಾ ಕಂಪ್ಯೂಟರ್‌ಗಳು, ಅಂದರೆ ಪಿಸಿಗಳು, ಪಕ್ಕಕ್ಕೆ ತಳ್ಳಿ ತಾವು ಬಂದು ಕುಳಿತಿವೆ. ಟೈಪ್ ರೈಟರ್‌ಗಳ ಗುಂಡಿ ಒತ್ತುವ ಸರಳ ಕಾರ್ಯಾಚರಣೆಗಳನ್ನು ಸುಲಭವಾಗಿ ಕರಗತ ಮಾಡಿಕೊಂಡಿರುವುದುಂಟು, ಆದರೂ ವಿದ್ಯುಕ್ತ ತರಬೇತಿ ಎನ್ನುವುದು ಬೇಕು.

ಪಿಸಿಗಳನ್ನು ಕಂಪ್ಯೂಟರ್ ಎಂದೇ ಕರೆಯುತ್ತಾರೆ. ಯಂತ್ರ ಭಾಗವನ್ನೇನೋ ಅಂದರೆ ಹಾರ್ಡ್‌ವೇರ್ ಅನ್ನು ಖರೀದಿಸಿ ಬಿಡಬಹುದು. ಆದರೆ ಅದರೊಳಗಿನ ‘ಮೆದುಳು’ ಭಾಗವನ್ನು ಅಂದರೆ ಸಾಫ್ಟ್‌ವೇರ್ ಅನ್ನು ನಮ್ಮ ಅಗತ್ಯಕ್ಕೆ ಅನುಗುಣವಾಗಿ ತುಂಬಿಕೊಳ್ಳಬೇಕು. ನಿರ್ದಿಷ್ಟವಾಗಿ ಸೂಚನೆಗಳನ್ನು ಕಮ್ಯಾಂಡ್‌ಗಳ ಮೂಲಕ ಪಿಸಿಗೆ ನೀಡಿದಾಗ ನಿರ್ದಿಷ್ಟ ಕ್ರಮದಲ್ಲಿ ಕಾರ್ಯಾಚರಣೆ ನಡೆಯುತ್ತದೆ. ಹೀಗೆ ಸೂಚನೆಗಳನ್ನು ನೀಡಿದಾಗ ಇಂತಿಂಥ ಕಾರ್ಯಾಚರಣೆಗಳು ಮನೋವೇಗದಲ್ಲಿ ನಡೆಯುತ್ತವೆ. ಅದರ ತರಬೇತಿಯೇ ಅತ್ಯಗತ್ಯವಾಗುವುದು.

ನಗರಗಳು ಮತ್ತು ಪಟ್ಟಣಗಳಲ್ಲಿ ಕಂಪ್ಯೂಟರ್ ಕೇಂದ್ರಗಳು ತಲೆಯೆತ್ತಿವೆ. ಅವು ಸಾಮಾನ್ಯ ಜನಕ್ಕೆ ವಿದ್ಯಾರ್ಥಿ ದಿಸೆಯಲ್ಲೇ ಇರುವವರಿಗೆ, ಹೊಸ ಹೊಸ ಕಂಪ್ಯೂಟರ್ ವಿದ್ಯಮಾನಗಳ ಬಗೆಗೆ ಕಲಿಯುವ ಜನಕ್ಕೆ ತರಬೇತಿ ನೀಡುತ್ತವೆ. ಆದರೆ ಅಲ್ಲೆಲ್ಲ ಕಲಿಕೆಯು ದುಬಾರಿ ಎನಿಸದಿರದು. ಅದಕ್ಕೆ ಇರುವ ಕಾರಣಗಳು ಎರಡು; ಕಂಪ್ಯೂಟರ್ ಕಲಿಕಾ ಕೇಂದ್ರ ಎಂದಾಕ್ಷಣ ಬಂಡವಾಳ ತೊಡಗಿಸಬೇಕು. ಅದರ ಮೇಲೆ ಬಡ್ಡಿ ದುಡಿಯಬೇಕು. ಜೊತೆಗೆ ಕಲಿಸಲು ಬರುವ ಜನಕ್ಕೆ ಸಂಬಳ, ಸಾರಿಗೆ ಪೂರೈಸುವುದು ಸುಲಭವಾಗಿಲ್ಲ.

ಕರ್ನಾಟಕವೇನೋ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಅದ್ವಿತೀಯ ಎನಿಸಿದೆ. ಆದರೆ ಜನರನ್ನು ಅಯಾ ಪ್ರಕಾರಗಳಲ್ಲಿ ಅಗತ್ಯಾನುಸಾರ ತರಬೇತುಗೊಳಿಸುವ ಸದೃಢ ವ್ಯವಸ್ಥೆ ಮಾಡಲು ಏನೂ ಕ್ರಮ ಕೈಗೊಂಡಿಲ್ಲ. ತರಬೇತಿ ಕೇಂದ್ರಗಳನ್ನು ಸಣ್ಣ ವಾಣಿಜ್ಯೋದ್ಯಮ ಎಂಬಂತೆ ಕೈಗೆತ್ತಿಕೊಂಡಾಗ ಖಾಸಿಗಿ ವಲಯದವರು ತಮ್ಮ ತಮಗೆ ತೋಚಿದಂತೆ ತರಬೇತಿ ನೀಡುವ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಒಂದೆರಡು ದೊಡ್ಡ ಕಂಪೆನಿಗಳು ಕೋಟ್ಯಂತರ ಹಣ ತೊಡಗಿಸಿ ರಾಷ್ಟ್ರವ್ಯಾಪಿ ಚಾಲ ಹರಡಿಸಿರುವುದು ಉಂಟು. ಇವರ ವಹಿವಾಟಿನಲ್ಲಿ ತಲೆ ಹಾಕಿಲ್ಲ. ಇವರನ್ನು ‘ನಿಯಂತ್ರಿಸಲು’ ಅದು ಮುಂದಾದರೆ ಪರಿಸ್ಥಿತಿ ಅಧ್ವಾನವಾಗುವುದೇ ಹೊರತು, ಕಲಿಯುವವರು ಖರ್ಚು ಮಾಡಬೇಕಾದ್ದು ಹೆಚ್ಚಾಗುತ್ತದೆಯೇ ಹೊರತು ಬೇರೇನಲ್ಲ.

ಶಿಕ್ಷಣಾರ್ಥಿಗಳು ಪಡುವ ಪರಿಪಾಟಲು ಮಾತ್ರ ಅಪಾರ. ಮೊದಲಿಗೆ ಕಂಪ್ಯೂಟರ್ ಶಿಕ್ಷಣದ ಯಾವ ಪ್ರಕಾರದಲ್ಲಿ ತರಬೇತಿ ಪಡೆಯಬೇಕು ಎಂಬುದು ಅರ್ಥವಾಗುವುದಿಲ್ಲ. ಕಂಪ್ಯೂಟರ್ ಕಲಿಕಾ ಕೇಂದ್ರಗಳವರು ಕೌನ್ಸೆಲಿಂಗ್ ಎಂಬುದನ್ನು ಮಾಡುತ್ತಾರೆ. ಆ ವೇಳೆ ಅವರು ಎಷ್ಟು ಹೆಚ್ಚಿನ ಶುಲ್ಕದ ಕೋರ್ಸುಗಳಿಗೆ ಇವರನ್ನು ಸೇರಿಸಿಕೊಳ್ಳಬೇಕು ಎಂಬುದನ್ನು ಮಾತ್ರ ಯೋಚಿಸುತ್ತಾರೆ. ಗ್ರಾಹಕನ ಅಗತ್ಯ ಏನು ಎಂಬುದು ಮುಖ್ಯ ಎನಿಸುವುದಿಲ್ಲ. ಜೊತೆಗೆ ಪ್ಲೇಸ್‌ಮೆಂಟ್ ಎಂದರೆ ಕೆಲಸ ಕೂಡಿಸುವುದಾಗಿ ನಂಬಿಸುತ್ತಾರೆ. ಬಹುಪಾಲು ಪ್ರಸಂಗಗಳಲ್ಲಿ ಕೆಲಸ ಕೊಡಿಸುವುದಿಲ್ಲ. ಚೆನ್ನಾಗಿ ಕಲಿತು ಕಷ್ಟ ಪಡುವವರಿಗೆ ಕೆಲಸ ಸಿಗುವುದು ಕಷ್ಟವೆನಿಸುವುದಿಲ್ಲ ಎಂಬುದು ಸತ್ಯಾಂಶ. ದೊಡ್ಡ ಕಂಪೆನಿಗಳವರು ವರ್ಷಗಟ್ಟಲೆ ಕಲಿಸುವ ಕಾರ್ಯಕ್ರಮಕ್ಕೆ ಒಪ್ಪಿಸಿ ೫೦-೬೦ ಸಾವಿರ ರೂಪಾಯಿ ಶುಲ್ಕ ವಸೂಲು ಮಾಡುವುದುಂಟು. ಕೊನೆಗೆ ಯಾವುದೇ ಉಪಯೋಗಕ್ಕೆ ಬರದಂಥ ಸ್ಥಿತಿಯಲ್ಲೇ ಶಿಕ್ಷಣಾರ್ಥಿ ಇರುವುದಕ್ಕೆ ದೃಷ್ಟಾಂತಗಳು ಸಿಗುತ್ತವೆ.

ಎಷ್ಟೋ ವೇಳೆ ಸಣ್ಣ ಪುಟ್ಟ ಕೋರ್ಸುಗಳನ್ನು ಕೊಡುವ ಚಿಕ್ಕ ಇನ್ಸ್‌ಸ್ಟಿಟ್ಯೂಟ್‌ಗಳೇ ವಾಸಿ ಎನಿಸದಿರದು. ಪ್ರತಿಯೊಬ್ಬ ಶಿಕ್ಷಣಾರ್ಥಿಗೂ ಖುದ್ದು ಮುತುವರ್ಜಿ ವಹಿಸಿ ಕಲಿಸುವುದನ್ನು ಇಲ್ಲಿ ನೋಡಬಹುದು. ಇಂಥ ಕಡೆ ಶುಲ್ಕವೂ ದುಬಾರಿ ಇರದು.

ಕಂಪ್ಯೂಟರ್ ಕಲಿಕೆ ಸಂಸ್ಥೆಗಳ ಪಾಲಿಗೆ ಎದುರಾಗಿರುವ ದೊಡ್ಡ ಸಮಸ್ಯೆ ಎಂದರೆ ಚೆನ್ನಾಗಿ ಕಲಿಸುವವರು ಸಿಗದೇ ಇರುವುದು. ಎಷ್ಟೋ ವೇಳೆ ಸ್ವತಃ ಬಹಳ ಕಲಿಯದೇ ಇರುವ ಅಂದರೆ ತಾವು ಕಲಿತಿರುವಷ್ಟನ್ನೇ ಚೆನ್ನಾಗಿ ಹೇಳಿಕೊಡುವ ಸೀಮಿತ ಸಾಮರ್ಥ್ಯದ ಜನರ ಮೇಲೇ ಅವರು ಆಧಾರ ಪಡುವಂತೆ ಆಗುತ್ತದೆ. ಹೊಸದಾಗಿ ಸಣ್ಣದಾಗಿ ಕಲಿಕೆ ಆರಂಭಿಸಬೇಕಿರುವ ಶಿಕ್ಷಣಾರ್ಥಿಗಳು ಇಂಥ ಕಡೆ ಹೋಗುವುದೇ ಯುಕ್ತ.

ಕಲಿಸುವ ಕೇಂದ್ರಗಳ ಸಾಲಿಗೆ ಸೂಕ್ತ ಸಾಪ್ಟವೇರ್, ಅದರಲ್ಲೂ ಆಧುನಿಕವಾದುದು ಸಿಗುವುದು ಸುಲಭವಲ್ಲ. ಸದ್ಯ ನಕಲು ಮಾಡಿಕೊಂಡ ಪ್ರತಿಗಳನ್ನೇ ಸಂಗ್ರಹಿಸಿಕೊಳ್ಳುತ್ತಾರೆ. ಅದರ ಹೊರತಾಗಿ ಮೂಲ ಸಾಪ್ಟವೇರ್‌ನ್ನೇ ಬಳಸಬೇಕೆಂಬ ನಿರ್ಬಂಧ ತಂದರೆ ಶಿಕ್ಷಣ ಶುಲ್ಕ ತುಂಬಾ ದುಬಾರಿಯಾಗಿ ಪರಿಣಮಿಸುತ್ತದೆ.

ಸದ್ಯ ಈ ಕೆಂದ್ರಗಳು ನೀಡುವ ಸರ್ಟಿಫಿಕೇಟ್‌ಗಳಿಗೆ ಭಾರೀ ಪುರಸ್ಕಾರವೇನಿಲ್ಲ. ಕಲಿತವರು ಕೆಲಸ ಚೆನ್ನಾಗಿ ಮಾಡುತ್ತಾರೆಯೇ ಎಂಬುದು ಮಾತ್ರ ಮುಖ್ಯವಾಗುತ್ತದೆ. ಈ ಸಂಬಂಧ ಯಥಾಸ್ಥಿತಿ ಯುಕ್ತ.

ಕಲಿಯುವವರು ಸುಲಭವಾಗಿ ಕಲಿಯಬೇಕು. ಕಲಿಯಬೇಕೆನ್ನುವವರ ಸಂಖ್ಯೆ ಹೆಚ್ಚಾಗಬೇಕು ಎನ್ನುವುದೇ ಮುಖ್ಯ. ವಿನಾಕಾರಣ ಸಾಪ್ಟವೇರ್ ತಯಾರಿಸುವ ಕಂಪನಿಗಳ ಹಿತ ಕಾಪಾಡುವಂಥ ನಿರ್ಬಂಧಗಳು ಮುಖ್ಯವಾಗಬಾರದು.