ಆರ್ಥಿಕ ಹಿಂಜರಿತ ಎನ್ನುವ ಗುಮ್ಮ ಎಲ್ಲರ ತೆಲೆ ಹೊಕ್ಕಿದೆ. ಹಣಕಾಸು ವ್ಯವಹಾರಗಳೆಲ್ಲ ಪೂರ್ತಿ ಮಂದವಾಗಿದೆ. ಲಾಭಗಳಿಲ್ಲ, ಗ್ರಾಹಕರಿಗೆ ಖರೀದಿ ಸಾಮರ್ಥ್ಯವೇ ಇಲ್ಲ. ಎಲ್ಲ ರಂಗದವರೂ ತತ್ತರಿಸಿ ಹೋಗಿದ್ದಾರೆ. ವರ್ಷದ ಕೊನೆಯ ಹೊತ್ತಿಗೆ ಚೇತರಿಕೆ ಕಾಣಿಸಬಹುದು ಎನ್ನುವ ಮಾತನ್ನು ಸ್ವತಃ ಅರ್ಥ ಸಚಿವ ಯಶವಂತ ಸಿನ್ಹಾ ಹೇಳುತ್ತಾರೆ. “ಧೈರ್ಯ ತುಂಬುವುದು ಹೇಗೆ?” ಎಂಬ ಚಿಂತೆ ಅವರನ್ನು ಕಾಡುವುದು ಸಹಜ.

ಇಂಥ ಧೈರ್ಯಗೇಡಿ ವಾತಾವರಣದಲ್ಲೂ ಅಪ್ಯಾಯಮಾನ ಎನ್ನಬಹುದಾದ ಸುದ್ದಿ ಬಂದಿದೆ. ಅದು ಐಟಿ ಕ್ಷೇತ್ರಕ್ಕೆ ಸಂಬಂಧಿಸಿದ್ದು, ಅಮೇರಿಕದಲ್ಲಿ ಹೊಸ ಸರ್ಕಾರ ಬಂದ ಮೇಲೆ ಅಲ್ಲಿಯೂ ಹಿಂಜರಿತ ಕಾಡುತ್ತಿದೆ ಎನ್ನುವುದರ ಜೊತೆಗೆ ಐಟಿ ಕ್ಷೇತ್ರಕ್ಕೆ ಅಲ್ಲಿನ ಆದ್ಯತೆ ಕಡಿಮೆ ಆಗುತ್ತಿದೆ. ಎನ್ನುವುದು ಮನದಟ್ಟಾದಾಗ ಕರ್ನಾಟಕದ ಅದರಲ್ಲೂ ಬೆಂಗಳೂರಿನ ತಂತ್ರಜ್ಞರಿಗೆ ಗಾಬರಿ ಆಗಿದ್ದುಂಟು. ಎಂಜಿನೀಯರರು ಕೆಲಸವಿಲ್ಲದೆ ಚೆಂಚ್ ಮೇಲೆ ಕುಳಿತಿದ್ದಾರೆ. ವಿದೇಶಗಳಿಂದ ಮರುವಲಸೆ ಆರಂಭವಾಗುತ್ತದೆ ಎಂಬ ಭಯ. ಕಂಪೆನಿಗಳೆಲ್ಲ ಉದ್ಯೋಗಕ್ಕೆ ತೆಗೆದುಕೊಳ್ಳುವುದನ್ನು ನಿಲ್ಲಿಸಿದರು. ಸಂಬಳ ಸವಲತ್ತು ಕಡಿಮೆ ಮಾಡಿದರು. ಇದೆಲ್ಲ ಆದ ಮೇಲೆ ಐಟಿ ಕಂಪೆನಿಗಳು ಜನವರಿಯಿಂದ ಮಾರ್ಚ ಅಂತ್ಯದವರೆಗಿನ ಮೂರು ತಿಂಗಳ ಅವಧಿಯಲ್ಲಿ ಹೇಗೆ ಎಂಬ ವಿವರಗಳು ಹೊರಬಿದ್ದಿವೆ. ಅದು ಚೇತೋಹಾರಿ.

ಹಿಂದಿನ ಸಾಲಿನ ಮೊದಲ ಮೂರು ತಿಂಗಳಿಗೆ ಹೋಲಿಸಿದಾಗ ಹೈದರಾಬಾದಿನ ಸತ್ಯಂ ಕಂಪ್ಯೂಟರ್ಸ ಶೇ ೧೪೧ ಲಾಭವೃದ್ಧಿ ಸಾಧಿಸಿದೆ. ಗುರಗಾವನ ಹ್ಯೂಫ್ಸ್ ಸಾಫ್ಟವೇರ್ ಸಿಸ್ಟಮ್ಸ್ ಲಾಭವೃದ್ಧಿ ಶೇ. ೧೦೧. ಇನ್‌ಪೋಸಿಸನದು ಶೇ. ೧೧೫. ವಿಶ್ವದಲ್ಲೇ ಐಟಿ ಕ್ಷೇತ್ರ ಹಿನ್ನೆಡೆದಿರುವಾಗ ಭಾರತದಲ್ಲಿ ಇದು ಸಾಧ್ಯವಾಗಿದೆ. ಹಿನ್ನಡೆಯು ಕೈಕಾಲು ಕಟ್ಟಬಾರದು; ಅದಕ್ಕೆ ಏನು ಮಾಡಬೇಕು ಎಂದು ಕಂಪೆನಿಗಳು ಯೋಚಿಸಿ ಭದ್ರ ಮಾಡಿಕೊಂಡಿದ್ದರ ಫಲ ಇದು. ಕೆಲಸ ಕಡೆಮೆಯಾದಾಗ ಯಾರು ಯಾರೋ ಪೈಪೋಟಿ ಕೊಡುತ್ತಾರೆ. ಆದರೂ ಭಾರತದ ಕಂಪೆನಿಗಳವರು ತಮ್ಮ ದರಗಳನ್ನು ಕಾಪಾಡಿಕೊಂಡಿದ್ದಾರೆ. ಕಡಿಮೆ ಹಣಕ್ಕೆ ಕೆಲಸ ಮಾಡುವಾಗಲೂ ಶರಣಾಗತಿ ಧೋರಣೆ ತಳೆದಿಲ್ಲ. ವಿಪ್ರೋದ ಅಜೀಂ ಪ್ರೇಮಜಿ ಹೇಳಿದ್ದರು: ಬೇರೆ ದೇಶಗಳವರು ಐಟಿ ಕ್ಷೇತ್ರಕ್ಕೆ ಸಂಬಂಧಿಸಿದ ಖರ್ಚನ್ನು ಕಡಿಮೆ ಮಾಡಿದ್ದರೂ ಒಳ್ಳೆಯ ಹೆಸರಿದ್ದು ಗುಣಮಟ್ಟ ಕಾಪಾಡಿಕೊಂಡವರಿಗೆ ಹಣ ಕೊಡಲು ಹಿಂಜರಿಯುವುದಿಲ್ಲ. ಅವರ ಮಾತು ನಿಜವಾಗಿದೆ.

೨೦೦೧ ಮೊದಲ ಮೂರು ತಿಂಗಳ ವ್ಯವಹಾರದ ಮಾತು ಹಾಗಿರಲಿ, ೨೦೦೦ ಇಸವಿಯ ಹಣಕಾಸು ವರ್ಷದಲ್ಲಿ ಈ ಕ್ಷೇತ್ರ ಹೇಗೆ ಕೆಲಸ ಮಾಡಿತೆಂದು ಸಹಾ ನೋಡಬಹುದು. ಈ ಅವಧಿಯಲ್ಲಿ ಐಟಿ ಕ್ಷೇತ್ರವು ಪ್ರಥಮ ಬಾರಿಗೆ ದೇಶದೊಳಗಿನ ವ್ಯವಹಾರ ಮೀರಿಸಿದಷ್ಟು ರಫ್ತು ಸಾಧಿಸಿತು. ರಫ್ತು ಹಿಂದಿನ ವರ್ಷಕ್ಕಿಂತ ಶೇ. ೬೪ ಹೆಚ್ಚಾಯಿತು. ಆಂತರಿಕ ವ್ಯವಹಾ ಶೇ. ೩೭ ಮಾತ್ರ ಬೆಳೆಯಿತು. ಒಟ್ಟಾರೆ ಉದ್ಯಮ ವೃದ್ಧಿ ಶೇ. ೫೦.

ರಫ್ತು ಗಳಿಗೆ ರೂ ೫೦ ಸಾವಿರ ಕೋಟಿ ಹಿಂದನ ವರ್ಷ ಇದ್ದುದು ರೂ. ೩೩ ಸಾವಿರ ಕೋಟಿ. ಆಂತರಿಕ ವ್ಯವಹಾರದ ಗಳಿಕೆ ರೂ. ೨೩ ಸಾವಿರ ಕೋಟಿಯಿಂದ ರೂ. ೨೬ ಸಾವಿರ ಕೋಟಿಗೆ ಏರಿದೆ.

ಸಾಫ್ಟವೇರಗೇ ಹೆಸರಾದ ದೇಶದಲ್ಲಿ ಹಾರ್ಡವೇರ್ ರಫ್ತು ಪ್ರಥಮ ಬಾರಿ ರೂ.೧೦೦೦ ಕೋಟಿ ದಾಟಿದೆ. ಪಿಸಿಗಳ ಮಾರಾಟ ದೇಶದೊಳಗೆ ಹೆಚ್ಚಾಗಿದೆ. ಸರ್ವರಗಳ ಮಾರಾಟ ಶೇ. ೬೭ ಅಧಿಕಗೊಂಡಿದೆ.

ಹಿಂದಿನ ಸಾಲಿನ ೧೨ ತಿಂಗಳ ಅವಧಿಯ ಅಂಕಿ-ಸಂಖ್ಯೆಯಿಂದ ಆಶಾಭಾವನೆ ತಳೆಯುವುದು ಸರಿ. ಆದರೆ ಮೊದಲ ಮೂರು ತಿಂಗಳಿನ ಅಂಕಿ-ಸಂಖ್ಯೆ ತಾಳೆ ನೋಡಿ ಸಂತೋಷಪಡುವುದು ಯುಕ್ತ ಎನಿಸುತ್ತದೆಯೇ? ಏಕೆಂದರೆ ಕಳೆದ ಸಾಲಿನಲ್ಲಿ ಮೊದಲ ಮೂರು ತಿಂಗಳು ಎಲ್ಲವೂ ಚೆನ್ನಾಗಿತ್ತು. ಮುಂದಿನ ಮೂರು ಮೂರು ತಿಂಗಳ ಅವಧಿಗಳಲ್ಲಿ ಲಾಭ ಕುಸಿಯುತ್ತಲೇ ಹೋಯಿತು. ಆದ್ದರಿಂದ ಈ ಸಾಲಿನ ಮುಂದಿನ ಅವಧಿಗಳಲ್ಲಿ ಹೇಗೆ?

ವಿಶ್ಲೇಷಕರು ಹೇಳುವ ಪ್ರಕಾರ ವಿಶ್ವಮಟ್ಟದ ಆರ್ಥಿಕ ಹಿಂಜರಿತವು ಕನಿಷ್ಠ ಇನ್ನೂ ಒಂದು ವರ್ಷವಾದರೂ ಮುಂದುವರೆಯುತ್ತದೆ. ಈ ಹಿಂದೆ ಭಯಪಟ್ಟಂತೆ ಎಷ್ಟೋ ಸಣ್ಣ ಕಂಪನಿಗಳು ಮುಚ್ಚಿ ಹೋಗಬಹುದು. ನಿರುದ್ಯೋಗ ಭಯ ಈಗಲೂ ತಟ್ಟಿಲ್ಲ. ಓದು ಮುಗಿಯುತ್ತಿದ್ದಂತೆ ಕೆಲಸ ಸಿಗುವುದು ಕಾಯಂ ಎಂದು ನಂಬಿದ್ದ ವಿದ್ಯಾರ್ಥಿಗಳು ವಂಚನೆಗೆ ಒಳಗಾಗಿದ್ದಾರೆ. ಆದರೆ ಇದೇ ಸಕಾಲವೆಂದು ಭಾವಿಸಿ ಕಂಪೆನಿಗಳೆಲ್ಲ ತಂತಮ್ಮ ಕಾರ್ಯಕ್ಷೇತ್ರಗಳನ್ನು ಭದ್ರಪಡಿಸಿಕೊಂಡು ಕ್ರೋಢೀಕರಿಸಲು ಹಿಂದೆ ಬೀಳಬಾರದು. ವ್ಯವಹಾರ ಮಟ್ಟ ಹೀಗೆಯೇ ಮುಂದುವರೆದರೆ ಚಿಂತೆ ಇಲ್ಲ. ಷೇರುಗಳಲ್ಲಿ ಹಣ ಹೂಡಿದವರು ಇನ್ನೊಂದು ’ಬೂಮ್’ ಇರುವುದು ಯಾವಾಗ ಎಂದು ಕಾಯುತ್ತಿದ್ದಾರೆ. ಮುಂದಿನ ಮೂರು ಮೂರು ತಿಂಗಳುಗಳ ಫಲಿತಗಳೇ ಅದನ್ನೆಲ್ಲ ನಿಧಾರ ಮಾಡುವುದು.

ಡಾಟಾಕ್ವೆಸ್ಟನವರು ತಮ್ಮ ಸಮೀಕ್ಷೆ ವೇಳೆ ಸಾಮಾನ್ಯವಾಗಿ ಐಟಿ ಕ್ಷೇತ್ರದಲ್ಲಿ ಬೃಹತ್ ಎಂಬ ಐದು ಉದ್ಯಮ ಕೂಟಗಳನ್ನು ಗುರುತಿಸುವುದುಂಟು. ಅವುಗಳ ಯಶಸ್ಸು ಗಮನಾರ್ಹ. ಎಚ್.ಸಿ.ಎಲ್. ಟಾಟಾ, ವಿಪ್ರೋ, ಕಾಂಪ್ಯಾಕ್‌ ಮತ್ತು ಇನ್‌ಪೋಸಿಸ್ ಇದರಲ್ಲಿ ಮೊದಲ ನಾಲ್ಕು ವಾಸ್ತವವಾಗಿ ಆ ಹೆಸರಿನಡಿ ಬರುವ ಕಂಪೆನಿಗಳ ಕೂಟಗಳು ಇನ್‌ಪೋಸಿಸ್ ಏಕ ಕಂಪೆನಿ.

ಕಳೆದ ವರ್ಷ ಈ ಬಗೆಯ ಐದರಲ್ಲಿ ಸೇರಿದ್ದ ಹ್ಯೂಲೆಟ್ ಪ್ಯಾಕರ್ಡ ಮತ್ತು ಐಬಿಎಂ ಎರಡೂ ಬಹುರಾಷ್ಟ್ರೀಯ ಕಂಪೆನಿಗಳು ಐದರೊಳಗಿನ ಸ್ಥಾನ ಕಳೆದುಕೊಂಡಿವೆ. ಕಾಂಪ್ಯಾಕ್‌ ಯಶಸ್ಸಿಗೆ ಪಿಸಿ ಮಾರಾಟ ಹೆಚ್ಚಳ ಕಾರಣ. ಆದರೆ ಇನಪೋಸಿಸ್ ಸಾಧನೆ ಸದಾ ದಾರಿದೀಪ. ಪೈಪೋಟಿದಾರರು ಇನ್‌ಪೋಸಿಸ್ ದರಗಳ ಅರ್ಧಕ್ಕೆ ಸಾಫ್ಟವೇರ್ ಪೂರೈಸಲು ಸಿದ್ಧರಾದರೂ ಇನ್‌ಪೋಸಿಸ್ ದರಗಳು ಶೇ. ೧೦೦ರಿಂದ ಶೇ. ೯೫ಕ್ಕೆ ಮಾತ್ರ ಕೆಳಗಿಳಿಯುತ್ತದೆ.

ಇಂಥ ಒಂದು ಉಲ್ಲೇಖವೇ ಸಾಕು ಅದು ಮೂಡಿಸುವ ಹೆಸರಿನ ಬೆಲೆಯನ್ನು ಅಂದಾಜು ಮಾಡಲು.

ಐಟಿ ಕ್ಷೇತ್ರ ಸದ್ಯ ಕಷ್ಟಕಾಲ ಕಂಡಿದ್ದರೂ ವೃದ್ಧಿ ಕಾಣುವಲ್ಲಿ ಹಿಂದೆ ಬೀಳುತ್ತಿಲ್ಲ. ಇತರ ಕ್ಷೇತ್ರಗಳ ವಿಷಯ ಮಾತ್ರ ಬೇರೆ. ಅರ್ಥ ಸಚಿವರೇ ಹೇಳುವಂತೆ ಒಳ್ಳೆಯ ದಿನಗಳಿಗಾಗಿ ಕಾಯಬೇಕು. ಅದು ಬರಲಿದೆ, ಆದರೆ ಯಾವಾಗ ಎಂಬುದೇ ಖಚಿತವಿಲ್ಲ.

೧೮-೦೭-೨೦೦೧