ಉದಾರೀಕರಣದ ಮೊದಲ ಹಂತದಲ್ಲೇ ಭಾರತವನ್ನು ಪ್ರವೇಶಿಸಿದ ಕಂಪ್ಯೂಟರುಗಳಿಗೆ ಹಾಗೂ ಅವನ್ನು ನಡೆಸಬಲ್ಲ ಜನಕ್ಕೆ ಚಿನ್ನದ ಗಣಿಯೊಂದು ಗೋಚರಿಸಿತು. ಅದೇ ಐಟಿ ಮಾಹಿತಿ ತಂತ್ರಜ್ಞಾನ. ಹೊಸ ಸಹಸ್ರಮಾನ ಸಂಧಿಕಾಲದಲ್ಲಿ ಶೋಭಾಯಮಾನವಾಗಿ ಬೆಳೆದ ಐಟಿ ಭಾರತದಲ್ಲಂತೂ ಸಮೂಹ ಸನ್ನಿಗೆ ಕಾರಣವಾಯಿತು. ಚಿನ್ನ ತೋಡುವ ಕಾರ್ಯಾಚರಣೆಯಲ್ಲಿ ಅಂದರೆ ಚಿನ್ನ ತೋಡುವುದಕ್ಕೆ ಸಮಾನವಾಗಿ ವ್ಯಾಪಾರ ನಡೆಸುವಲ್ಲಿ, ಭಾರತವು ಅಮೇರಿಕವನ್ನು ಮಾತ್ರವೇ ನೆಚ್ಚಿಕೊಂಡಿದ್ದರಿಂದ ಇದೀಗ ಎಡವಿದಂತಾಗಿದೆ; ಎಡವಿ ಮುಗ್ಗರಿಸಿದಂತೆ ಆಗಿದೆ. ಅಮೇರಿಕದಲ್ಲಿ ಹೊಸ ಸರ್ಕಾರ ಬಂದಾಗ ಐಟಿ ಎಂಬುದು ಆದ್ಯತೆ ಆಗಲಿಲ್ಲ; ಅದರ ಪರಿಣಾಮವು ಭಾರತದ ಐಟಿ ಕ್ಷೇತ್ರದ ಮೇಲೆ ಆಗಿದೆ. ಭಾರೀ ಅನಾಹುತವೇನೂ ಸದ್ಯ ಆಗಿಲ್ಲ. ಐಟಿ ಕಂಪೆನಿಗಳ ಲಾಭಗಳಿಕೆ ಕಡಿಮೆ ಆಗಿದೆ ಮಾತ್ರ.

ಎರಡು ಸಾವಿರ ಇಸವಿಯ ಮಧ್ಯಭಾಗದಲ್ಲಿ ಮಾನವ ಜೀನನ ಸ್ವರೂಪ ಪತ್ತೆಯಾಗಿದ್ದು, ಒಂದು ಅದ್ಭುತ ಶೋಧ. ಅದನ್ನು ಅನುಸರಿಸಿ ಜೀವ ವಿಜ್ಞಾನದ ಮಹತ್ವ ದಿನೇ ದಿನೇ ಹೆಚ್ಚು ಹೆಚ್ಚು ಮನದಟ್ಟಾಗುತ್ತಿದೆ. ಬುದ್ಧಿವಂತ ಯುವಜನರು ಮುಗಿಬಿದ್ದು ಹೇಗೆ ಐಟಿ ಕ್ಷೇತ್ರವನ್ನು ಹಿಡಿದುಕೊಳ್ಳಲು ಹೊರಟಿದ್ದಾರೆ. ಬಯೋಟೆಕ್ ವಾಸ್ತವವಾಗಿ ನಾಳೆ ವ್ಯಾಪಕವಾಗಿ ವಿಜೃಂಭಿಸುವ ಮಹತ್ತರ ಕ್ಷೇತ್ರ. ಅದ್ಭುತ ಉದ್ಯೋಗಾವಕಾಶಗಳನ್ನು ಈ ಬಯೋಟೆಕ್ ಕ್ಷೇತ್ರ ಕಲ್ಪಿಸುತ್ತಿದೆ. ಒಮ್ಮೆ ಮುಗ್ಗರಿಸಿರುವ ಐಟಿ ಕ್ಷೇತ್ರ ಮತ್ತು ಈ ಬಯೋಟೆಕ್ ಕ್ಷೇತ್ರ ಇವೆರಡರ ಬೆಸುಗೆ ಇದೀಗ ಸಾಧ್ಯವಾಗಿದೆ. ಅದೇ ಬಯೋ ಇನಫಾರ್ಮಾಟೆಕ್ಸ್, ಜೈವಿಕ ತಂತ್ರಜ್ಞಾನ ಕುರಿತ ಮಾಹಿತಿ ತಂತ್ರಜ್ಞಾನ ಕ್ಷೇತ್ರವಿದು. ಸದ್ದಿಲ್ಲದ ಬೆಳವಣಿಗೆ ಇದು. ಏನೆಲ್ಲ ಕ್ಷೇತ್ರಗಳಿಗೆ ನೆರವಾಗಬಲ್ಲ ಐಟಿಯು ಇದೀಗ ಜೀವ ವಿಜ್ಞಾನ ಕ್ಷೇತ್ರ ವೃದ್ಧಿಗೆ ನೆರವಾಗಲು ಸಿದ್ಧವಾಗುತ್ತಿದೆ. ಅದು ಹೇಗೆ ಎಂಬುದು ಕುತೂಹಲಕರ. ಸಾಫ್ಟವೇರ್ ಎಂಜಿನೀಯರುಗಳಲ್ಲಿ ಸಾಕಷ್ಟು ಜನರು ಇನ್ನೊಂದು ಚಿನ್ನದ ಗಣಿ ಸಿಗುತ್ತಿದೆ ಎಂದೇ ಭಾವಿಸತೊಡಗಿದ್ದಾರೆ.

ಯಾವುದೇ ಜೀವಿಯಲ್ಲಿ ಜೀವಧಾರನೆ ದ್ರವ್ಯವೆಂದರೆ ಪ್ರೋಟೀನುಗಳು. ಅವು ದೇಹ ಭಾಗದ ಜೀನಗಳಲ್ಲಿ ಹರಡಿಕೊಂಡಿರುತ್ತವೆ. ಹರಡಿಕೊಂಡಿರುವ ವಿಧಾನವು ಆ ಜೀವಿಯ ಲಕ್ಷಣಗಳನ್ನು ನಿರ್ಧರಿಸುತ್ತದೆ. ತಲೆಮಾರಿನಿಂದ ತಲೆಮಾರಿಗೆ ಆ ಗುಣ ಲಕ್ಷಣಗಳು ಬದಲಾಗುವುದಿಲ್ಲವಾದ್ದರಿಂದ ಜೀನಗಳನ್ನು ವಂಶವಾಹಿ ಎಂದೇ ಕರೆಯುತ್ತಾರೆ. ಮನುಷ್ಯ ದೇಹದಲ್ಲಿ ೪೦ ಸಾವಿರದಿಂದ ಒಂದು ಲಕ್ಷದವರೆಗಿನ ಸಂಖ್ಯೆಯಲ್ಲಿ ಜೀನಗಳಿರುತ್ತವೆ. ಪ್ರೋಟೀನುಗಳು ಅಮೈಲೋ ಆಮ್ಲಗಳಿಂದಾದುದು. ಜೀನಿಗಳ ರಸಾಯನಿಕ ಸ್ವರೂಪವನ್ನು ನಿಗದಿಪಡಿಸುವ ಡಿಯಾಕ್ಟಿ ರೈಬೋ ನ್ಯೂಕ್ಲಿಕ್ ಆಮ್ಲ (ಡಿ.ಎನ್.ಎ.) ಮುಖ್ಯವಾಗಿ ಏಸಿಟಿಜಿ ಎಂಬ ನಾಲ್ಕು ಸಾಧಾರ ನ್ಯೂಕ್ಲಿಯಾಟೈಡಗಳಿಂದ ಆದುದು. ಇವು ೨೩ ಬಗೆಯ ವರ್ಣಸೂತ್ರಗಳಲ್ಲಿ, ಕ್ರೊಮೊಸೋಮಗಳಲ್ಲಿ ವಿವಿಧ ರೀತಿಯಲ್ಲಿ ಜೋಡಣೆಗೊಂಡಿರುತ್ತವೆ.

ಮನುಷ್ಯ ದೇಹದಲ್ಲಿ ಈ ಜೀವಿ ವ್ಯವಸ್ಥೆ ಹೇಗೆ ಹರಡಿಕೊಂಡಿರುತ್ತದೆ ಎಂಬುದರ ಸ್ಥೂಲ ನಕ್ಷೆ ಇದೀಗ ಸಿದ್ಧಗೊಂಡಿದೆ. ಇದೇ ಜೀನೋಮ್. ಅದರ ಅಧ್ಯಯನವೇ ಜೀನೊಮಿಕ್ಸ್. ಜೋಡಣೆಯ ವಿಧಾನ ಮತ್ತು ವೈಪರೀತ್ಯಗಳು ಮನುಷ್ಯ ಜೀವನದ ಪಾಲಿಗೆ ಸಾಧಕ ಹಾಗೂ ಬಾಧಕ. ಜೋಡಣೆಗಳು ಕೋಟ್ಯಂತರ ಸಂಖ್ಯೆಯಷ್ಟಿರುತ್ತದೆ.

ಜೀನಿ ವೈವಿಧ್ಯ ಅಧ್ಯಯನ ಮಾಡಿದರೆ, ಒಂದು ನಿರ್ದಿಷ್ಟ ನ್ಯೂಕ್ಲಿಯೊಟೈಡ್ ಹೇಗೆ ಒಬ್ಬರ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂಬುದು ಗೊತ್ತಾಗುತ್ತದೆ. ನಿರ್ದಿಷ್ಟ ಕಾಯಿಲೆಗಳ ಪತ್ತೆಗಾಗಿ ಜೀನಿಗಳ ಅಧ್ಯಯನ ಮಾಡುವುದೂ ಉಂಟು. ಹಲವು ಸಣ್ಣ ಪುಟ್ಟ ಕಂಪೆನಿಗಳು ಅಷ್ಟು ಮಾತ್ರ ಮಾಡಿ ಮಾಹಿತಿಯನ್ನು ಮಾರಾಟ ಮಾಡುತ್ತದೆ. ಯಾವುದೇ ಒಂದು ಜೀನಿ ಅಥವಾ ಪ್ರೊಟೀನು ವಾಸ್ತವವಾಗಿ ಯಾವುದೇ ನಿರ್ದಿಷ್ಟ ಔಷಧವಾಗಲೀ ದೇಹದೊಳಗಿನ ರೋಗ ನಿರೋಧಕ ಪ್ರತಿಕಣವಾಗಲೀ ಹೇಗೆ ರೋಗಕ್ಕೆ ತಡೆ ಒಡ್ಡಬಲ್ಲದೆಂಬುದನ್ನು ಕಂಡು ಹಿಡಿಯಲು ಕಂಪ್ಯೂಟರಗಳನ್ನು ಬಳಸದೆ ವಿಧಿ ಇಲ್ಲ. ಈ ರೀತಿ ಹಲವು ಹತ್ತು ದಿಕ್ಕಿನ ಸಂಶೋಧನೆಗೆ ಮಾಹಿತಿ ತಂತ್ರಜ್ಞಾನ ನೆರವಾಗುತ್ತಿದೆ. ಜೀನಿಥೆರಪಿ ಅಂದರೆ, ಜೀನಿಗಳ ಸಂಬಂಧ ಚಿಕಿತ್ಸೆ ಮಾಡುವ ವೈದ್ಯಕ್ಷೇತ್ರ, ಬೆಳೆದಂತೆಲ್ಲ ಜೈವಿಕ ಮಾಹಿತಿ ತಂತ್ರಜ್ಞಾನವನ್ನೂ ಒಳಗೊಂಡಂತೆ ಸಂಶೋಧನೆ ನಡೆಸಲು ಕೋಟ್ಯಂತರ ಡಾಲರ್ ಹಣ ತೊಡಗಿಸುತ್ತಿದೆ.

ಸಾಮಾನ್ಯ ಕಾಯಿಲೆಗಳು, ಅಪರೂಪ ಕಾಯಿಲೆಗಳು ಮುಂತಾದ ವರ್ಗೀಕರಣದಲ್ಲಿ ಔಷಧ ಮತ್ತು ಚಿಕಿತ್ಸಾ ವಿಧಾನ ರೂಪಿಸುವುದು ಹಳೆಯ ಧಾಟಿ. ನಿರ್ದಿಷ್ಟ ವ್ಯಕ್ತಿಯ ಜೀನಿ ನಕ್ಷೆಯ ರೂಪಿಸುವುದು ಈಗಿನ ವಿಧಾನ. ಜೀನೊಮಿಕ್ಸಗಾಗಿ ಮಾಹಿತಿ ಪೂರೈಸುವ ಐಟಿ ಕಂಪನಿಗಳೇ ಹುಟ್ಟಿಕೊಂಡಿವೆ. ಈ ಬಗೆಯ ೪೦ಕ್ಕೂ ಹೆಚ್ಚು ಕಂಪೆನಿಗಳು ವಿಶ್ವದ ವೈದ್ಯ ವಿಜ್ಞಾನಿಗಳ ಅಗತ್ಯಗಳನ್ನು ಪೂರೈಸುತ್ತಿವೆ.

ಜೀವ ಕಣದಲ್ಲಿ ಯಾವ ರೀತಿ ಡಿ.ಎನ್.ಎ. ಅಣುಗಳು ಹರಡಿಕೊಂಡಿದೆ ಎಂಬುದಷ್ಟು ಪತ್ತೆಯಾದರೂ ಸಂಶೋಧನೆಗೆ ಸಿಗುವ ಅವಕಾಶಗಳು ಅಪಾರ. ಪ್ರತಿ ಜೀವಿಗೂ, ರೋಗಕ್ಕೂ ರೋಗ ಪ್ರತಿರೋಧಕ್ಕೂ ಇರುವ ಸಂಬಂಧಗಳು ಅನೇಕ. ಜೀವಿ ಸ್ವರೂಪ ಬದಲಾದಂತೆಲ್ಲ ಔಷಧ ಕಂಪೆನಿಗಳ ಚಟುವಟಿಕೆ ಹೆಚ್ಚಾಗುತ್ತದೆ. ದೇಹದೊಳಕ್ಕೆ ನೇರವಾಗಿ ಚುಚ್ಚು ಮದ್ದಿನ ರೂಪದಲ್ಲಿ ನಿರ್ದಿಷ್ಟ ಪ್ರೋಟೀನುಗಳನ್ನು ದೂಡಬಹುದಾದ ನೂರಾರು ಬಗೆಯ ಚಿಕಿತ್ಸೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ.

ಉದಾಹರಣೆಗೆ ಶಕ್ತಿಮಾಂದ್ಯತೆ ಇರುವ ರೋಗಿಗಳಲ್ಲಿ ಮೂಳೆಯ ನಡುವಣ ಮಜ್ಜೆಯನ್ನು ಚೋದನಗೊಳಿಸಿ ಹೆಚ್ಚು ರಕ್ತ ಕೆಂಪು ಕಣಗಳನ್ನು ಉತ್ಪತ್ತಿ ಮಾಡಲು ನೆರವಾಗುವ ನಿರ್ದಿಷ್ಟ ಜೀವಿ ಪ್ರೊಟೀನನ್ನು ಗುರುತಿಸಲಾಗಿದೆ.

ಐಟಿ ಕ್ಷೇತ್ರವು ಮಾಹಿತಿಯನ್ನು ಸಂಗ್ರಹಿಸಿ ವಿಶ್ಲೇಷಿಸಿ ಇಡುವುದಕ್ಕೆ ಮಿತಿ ಎಂಬುದೇ ಇಲ್ಲ. ಔಷಧ ಕ್ಷೇತ್ರವು ಐಟಿಗಾಗಿ ಅಷ್ಟೊಂದು ಅವಕಾಶಗಳನ್ನು ಸೃಷ್ಟಿಸಿ ಇಟ್ಟಿದೆ.

ಮುಂದಿನ ಕೆಲವು ವರ್ಷಗಳಿಂದಾಚೆಗೆ ‘ಶತಕೋಟಿ ಕೋಟಿ’ ಬೈಟಗಳಷ್ಟು ಮಾಹಿತಿಯನ್ನು ಕಂಪ್ಯೂಟರುಗಳು ನಿಭಾಯಿಸಬೇಕಾಗುತ್ತದೆ. ಒಂದು ಮಾತು ನಿಜ; ಈವರೆಗೆ ಯಾವ ಒಂದು ಸಂಶೋಧನಾ ಕ್ಷೇತ್ರದಲ್ಲೂ ಜೀನೋಮಿಕ್ಸನಲ್ಲಿ ಈಗ ತೊಡಗಿಸುತ್ತಿರುವಷ್ಟು ಹಣವನ್ನು ತೊಡಗಿಸಿರಲಿಲ್ಲ. ಅದು ಎಷ್ಟು ದೊಡ್ಡ ಮೊತ್ತ ಎಂಬ ಅಂದಾಜೀ ಸಿಗುತ್ತಿಲ್ಲ.