ನಿತ್ಯ ಕಚೇರಿಗೆ ತಪ್ಪದೇ ಬಂದು ತೆಪ್ಪಗೆ ಕೆಲಸ ಮಾಡಿಕೊಂಡು ಹೋಗುತ್ತಿರುವ ಉದ್ಯೋಗಿಗೆ ದಿಢೀರನೆ ‘ಕೆಲಸವಿಲ್ಲ; ಮನೆಗೆ ಹೋಗು!’ ಎಂದರೆ ಎಷ್ಟೊಂದು ಕಕ್ಕಾಬಿಕ್ಕಿ ಆಗುತ್ತದೆ?

ಅದೇ ಪರಿಸ್ಥಿತಿ ಭಾರತದ ಐ.ಟಿ. (ಮಾಹಿತಿ ತಂತ್ರಜ್ಞಾನ) ಉದ್ಯಮದ ಒಂದು ವರ್ಗದ್ದು.

ಭಾರತದಲ್ಲಿ ಆರ್ಥಿಕ ಹಿಂಜರಿತವಿದೆ. ಆದರೆ ದುಡಿಯುವ ಮರದುಳುಗಳಿವೆ. ಆದ್ದರಿಂದಲೇ ಕಷ್ಟ ಕಾಲದಲ್ಲೂ ಐ.ಟಿ. ಕ್ಷೇತ್ರ ಪ್ರವರ್ಧಮಾನಕ್ಕೆ ಬಂದಿದೆ. ಅಮೆರಿಕ ಸಹಾ ಆರ್ಥಿಕ ಹಿಂಜರಿತದಿಂದ ಕಂಗೆಟ್ಟಿದೆ. ಆದರೆ ಸಪ್ಟಂಬರ್‌ ೧೧ರ ಭಯೋತ್ಪಾದನೆ ಕಾರಣ ದಿಕ್ಕೆಟ್ಟಿರುವದೂ ಉಂಟು. ಆದ್ದರಿಂದ ಮುಖ್ಯವಾದ ಕೆಲವು ಬಗೆಯ ಕಚೇರಿ ಕೆಲಸಗಳನ್ನು ಭಾರತದಂಥ ರಾಷ್ಟ್ರಗಳಿಗೆ ರವಾನಿಸಲು ನಾನಾ ನಮೂನೆ ಕಂಪೆನಿಗಳು ನಿರ್ಧರಿಸಿ ಆ ದಿಕ್ಕಿನಲ್ಲಿ ಮುಂದಾದವು. ಆಗ ಬಂದಿತು ವಿರೋಧ.

ಅಮೆರಿಕದಲ್ಲಿ ನಿರುದ್ಯೋಗ ಹೆಚ್ಚಲು ಇಂಥ ಕ್ರಮಗಳು ಕಾರಣವಾಗುತ್ತವೆ ಎಂಬ ಆಕ್ಷೇಪವನ್ನು ಅಲ್ಲಿನ ಕೆಲವು ರಾಜ್ಯಗಳ ರಾಜಕಾರಣಿಗಳು (ಉದ್ಯಮಿಗಳು ಅಲ್ಲ) ಎತ್ತಿದವು. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಆ ಆಕ್ಷೇಪ ನಿಧಾನವಾಗಿ ಪ್ರತಿರೋಧವಾಗಿ ಬೆಳೆದು ಬುಷ್ ಸರಕಾರಕ್ಕೆ ಪ್ರತಿಬಂಧ ವಿಧಿಸುವಂಥ ಮಸೂದೆ ಬರುವುದಕ್ಕೆ ಕಾರಣವಾಯಿತು.

ಭಾರತದಂಥ ಹೊರ ರಾಷ್ಟ್ರಕ್ಕೆ ಕಚೇರಿ ಕೆಲಸದ ಹೊರ ಗುತ್ತಿಗೆ (ಔಟ್ ಸೋರ್ಸಿಂಗ್) ವಹಿಸುವುದನ್ನು ಸಪ್ಟಂಬರ್‌ವರೆಗೆ ನಿರ್ಬಂಧಿಸುವ ಮಸೂದೆ ಸೆನೆಟ್ ಅಂಗೀಕರಿಸಿತು. ಆದರೆ ಅದರಿಂದ ಭಾರತದ ಐ.ಟಿ. ಕ್ಷೇತ್ರದಲ್ಲಿ ಭಾರೀ ಕೋಲಾಹಲ ಅಥವಾ ತುಮುಲವೆನೂ ಏಳಲಿಲ್ಲ.

ಏಕೆಂದರೆ ಅಮೆರಿಕದಲ್ಲಿ ಇದೀಗ ಚುನಾವಣಾ ಸಮಯ. ಭಾರತದಲ್ಲಿ ಹೇಗೋ ಹಾಗೆ ಅಮೆರಿಕದಲ್ಲೂ ರಾಜಕಾರಣಿಗಳಿಗೆ ಅಡಾವುಡಿ. ನಾಗರಿಕರಿಗೆ ಹುದ್ದೆಗಳನ್ನು ಇಲ್ಲವಾಗಿಸಿ ಹೊರ ಗುತ್ತಿಗೆ ನೀಡುವ ಧಾರಾಳತನ ತೋರಿಸಿದರೆ ಮತ ನೀಡುವವರು ಪ್ರಶ್ನಿಸುವುದಿಲ್ಲವೇ? ಆ ಭಯ ಅಮೆರಿಕದ ರಾಜಕಾರಣಿಗಳಿಗೆ ಇದೆ. ಓಹಿಯೊ ಸಂಸ್ಥಾನದ ಒಬ್ಬ ಸೆನೆಟ್ ನೇತೃತ್ವದ ಗುಂಪೊಂದು ಆಸಕ್ತಿ ವಹಿಸಿದ್ದರಿಂದ ಮಸೂದೆಯೊಂದು ಸಿದ್ಧವಾಯಿತು. ಬುಷ್ ಸರಕಾರವು ಅಂಗೀಕಾರ ಪಡೆಯಬೇಕಾದ ಖರ್ಚಿಗೆ ಅಸ್ತು ಎನ್ನುವ, ಸಮಗ್ರ ಮಸೂದೆಯೊಂದಿಗೆ ಅವನ್ನು ಅಳವಡಿಸಲಾಯಿತು. ಅದು ಪಾಸಾಯಿತು.

ಭಾರತದ ಐ.ಟಿ. ಉದ್ಯಮ ನಿಟ್ಟುಸಿರು ಇಟ್ಟಿತು; ಕನಲಲಿಲ್ಲ. ಏಕೆಂದರೆ ಮಸೂದೆಯು ಸರಕಾರಿ ಕೆಲಸದ ಹೊರ ಗುತ್ತಿಗೆಯನ್ನು ಮಾತ್ರ ನಿಷೇಧಿಸಿತ್ತು. ಭಾರತದಲ್ಲಿ ಖಾಸಗಿ ಉದ್ಯಮದವರು ನೀಡುವ ಹೊರ ಗುತ್ತಿಗೆಯನ್ನು ಅಂಗೀಕರಿಸುವುದೇ ಹೆಚ್ಚು. ರಾಜಕಾರಣಿಗಳು ಏನೇ ಹೇಳಲಿ; ಖಾಸಗಿ ಉದ್ಯಮಿಗಳು ಭಾರತದಂಥ ರಾಷ್ಟ್ರಕ್ಕೆ ಹೊರ ಗುತ್ತಿಗೆ ಕೊಡದೆ ತಮ್ಮಲ್ಲೇ ಕೆಲಸ ಮಾಡಿಸಿದರೆ (ಹೊರಗಿನವರನ್ನು ಕರೆಸುವುದನ್ನೂ ಕೈಬಿಟ್ಟು) ದುಬಾರಿ ಆಗುತ್ತದೆ. ನಷ್ಟ ಸಾಧ್ಯತೆ ತಪ್ಪಿದ್ದಲ್ಲ.

ಸಧ್ಯ ಭಾರತದ ಕಂಪೆನಿಗಳು ೧೦೦೦ ಕೋಟಿ ಡಾಲರ್‌ನಷ್ಟು ಕೆಲಸದ ಗುತ್ತಿಗೆ ಹಿಡಿಯಲಿವೆ. ಈಗ ಅಮೆರಿಕದ ಸರಕಾರವು ಯಾವ ಸರಕಾರಿ ಕಾಮಗಾರಿ ಗುತ್ತಿಗೆ ಕೊಡುವುದನ್ನು ನಿಷೇಧಿಸುತ್ತಿದೆಯೋ ಅದು, ಈ ಮೌಲ್ಯದ ಶೇ.೨ ಮಾತ್ರ ಆಗಿರುತ್ತದೆ. ಅದರಲ್ಲೂ ಅಮೆರಿಕದ ಬೊಕ್ಕಸ ಮತ್ತು ಸಾರಿಗೆ ಕುರಿತ ಕಂಪ್ಯೂಟರ್‌ ಕಾರ್ಯಾಚರಣೆ ಕಾಮಗಾರಿಗಳನ್ನು ಮಾತ್ರ ಭಾರತದ ಕಂಪೆನಿಗಳಿಗೆ ಗುತ್ತಿಗೆ ಕೊಡುತ್ತಿರುವುದು. ವಾಸ್ತವವಾಗಿ ಇಸ್ರೇಲ್‌ಗೆ ರಕ್ಷಣಾ ಬಾಬಿನ ಕಂಪ್ಯೂಟರ್‌ ಕೆಲಸದ ಗುತ್ತಿಗೆ ಕೊಡುತ್ತಾರೆ. ಬಿಸಿ ತಟ್ಟುವುದು ಏನಾದರೂ ಇದ್ದರೆ ಆ ರಾಷ್ಟ್ರಕ್ಕೆ ಮಾತ್ರ. ನಿಷೇಧ ತಂದಿರುವುದು ಸಹಾ ಸಪ್ಟಂಬರ್‌ತನಕ ಮಾತ್ರ. ಆದ್ದರಿಂದಲೇ ಶೇ. ೨ ಸನ್ವಯವಾಗುವ ಕಾಮಗಾರಿ ವಿಷಯದಲ್ಲಿ ನಿಷೇಧವು ಕೆಲವು ತಿಂಗಳಷ್ಟೇ. ಅಮೆರಿಕ ಸರಕಾರ ಕೈಗೊಂಡ ಕ್ರಮವೇ ನಗಣ್ಯ. ಆದರೂ ಏಕೆ ಅಷ್ಟೊಂದು ಹುಯಿಲೆದ್ದಿತು? ಸುಮಾರು ಒಂದೂವರೆ ವರ್ಷದಿಂದ ಅಲ್ಲಲ್ಲಿ ಬೇರೆ ಬೇರೆ ಸಂಸ್ಥಾನಗಳಲ್ಲಿ ಅಸಮಾಧಾನ ಹೊಗೆ ಆಡಿದ್ದು ಏಕೆ? ಅದಕ್ಕೆ ರಾಜಕೀಯವೇ ಕಾರಣ. ಅಮೆರಿಕದಲ್ಲಿ ನಿರುದ್ಯೋಗ ಭೀತಿ ಕಾಡುತ್ತಿರುವುದರಿಂದ ಜನರ ಪರವಾಗಿ ತಾವು ಇರುವುದಾಗಿ ಬಿಂಬಿಸಲು ರಾಜಕಾರಣಿಗಳು ಐಟಿ ಕೆಲಸದ ಹೊರ ಗುತ್ತಿಗೆ ನೀಡುವುದರ ವಿರುದ್ಧ ಧ್ವನಿ ಎತ್ತಿದ್ದಾರೆ.

ಭಾರತಕ್ಕೆ ಹೀಗೆ ವಹಿಸುತ್ತಿರುವುದರಿಂದ ಅಮೆರಿಕನ್ನರ ಪಾಲಿಗೆ ದಕ್ಕ ಬೇಕಾಗಿದ್ದ ೨೬ ಲಕ್ಷ ಹುದ್ದೆಗಳು ಕೈತಪ್ಪಿವೆ ಎಂಬ ದೂರು ಇದೆ. ಈ ಸಂಖ್ಯೆ ಸಹಳ ಉಪ್ರೇಕ್ಷೆಯಿಂದ ಕೂಡಿದೆ. ಆದರೆ ನಿರುದ್ಯೋಗದ ಭೀತಿ ಇದೆ ಎನ್ನುವುದಂತೂ ನಿಜ. ಒಂದು ಪಕ್ಷ ಸರಕಾರೇತರ ಹಾಗೂ ಖಾಸಗಿ ವಲಯ ಸೀಮಿತ ಹೊರ ಗುತ್ತಿಗೆಯನ್ನು ಪೂರ್ತಿ ನಿಷೇಧಿಸಿದರೆ ಅಮೆರಿಕದ ಹಿತಕ್ಕೆ ಅನುಕೂಲವಾಗುತ್ತದೆ ಎಂಬ ಖಾತರಿಯೇನೂ ಇಲ್ಲ. ಮೊದಲನೆಯದಾಗಿ ಅಮೆರಿಕನ್ ಕೆಲಸಗಾರರಿಗೆ ಕಂಪ್ಯೂಟರ್‌ ಕಾರ್ಯಾಚರಣೆಗಳ ಕಾಮಗಾರಿ ನೀಡಿದರೆ ಇಡೀ ಚಟುವಟಿಕೆ ದುಬಾರಿ ಆಗುತ್ತದೆ. ಎರಡನೆಯದಾಗಿ ಅಗ್ಗದಲ್ಲಿ ಕೆಲಸ ಮಾಡಿಕೊಡುವ ಅಗ್ಗದ ವೇತನವುಳ್ಳ ರಾಷ್ಟ್ರಗಳ ಆರ್ಥಿಕತೆಗಳು ಸೊರಗುತ್ತವೆ. ಅವನ್ನು ಸೊರಗದಂತೆ ಉಳಿಸಿಕೊಂಡರೆ ಪ್ರಶಸ್ತ ಸಮಯಗಳಲ್ಲಿ ಅಮೆರಿಕದಂಥ ಬೃಹತ್ ಆರ್ಥಿಕತೆ ವೃದ್ಧಿಗೆ ನೆರವಾಗುತ್ತವೆ. ಆದ್ದರಿಂದ ಅಮೆರಿಕದ ರಾಜಕಾರಣಿಗಳು ಭಾರತದಂಥ ರಾಷ್ಟ್ರಗಳ ವಿರುದ್ಧ ವೃಥಾ ಹುಯಿಲೆಬ್ಬಿಸುವುದನ್ನು ಬಿಡಬೇಕು.

ಭಾರತದಂಥ ರಾಷ್ಟ್ರಗಳು ಉದಾಹರಣೆಗೆ ಒಂದು ಡಾಲರ್‌ನಷ್ಟು ಮೌಲ್ಯದ ಕಾಮಗಾರಿ ಒಪ್ಪಿಕೊಂಡು ಮುಗಿಸಿ ಕೊಟ್ಟರೆ, ಅಮೆರಿಕಕ್ಕೆ ಆಗುವ ಲಾಭವೆಷ್ಟು? ಮ್ಯಾಕ್‌ಕಿನ್ಸೇ ಸರ್ವೇಕ್ಷಣ ಸಂಸ್ಥೆ ಅಧ್ಯಯನದ ಪ್ರಕಾರ ೧.೨ ರಿಂದ ೧.೪ ಡಾಲರ್‌ನಷ್ಟು. ಏಕೆಂದರೆ ಅಮೆರಿಕನರಿಂದಲೇ ಆ ಕೆಲಸ ಮಾಡಿಸಿದ್ದರೆ ಆ ಕಾಮಗಾರಿಗೆ ಅಷ್ಟು ಖರ್ಚು ಬೀಳುತ್ತಿತ್ತು. ಭಾರತಕ್ಕೆ ಆಗುವ ಲಾಭ ಎಷ್ಟು? ೦.೩೩ ಡಾಲರ್‌ನಷ್ಟು.

ಈ ಸಂಖ್ಯೆ ಬಗೆಗೆ ಒಂದಿಷ್ಟು ವಿವರಣೆ ಅಗತ್ಯ. ಒಂದು ಡಾಲರ್‌ ಕಾಮಗಾರಿ ಪೂರೈಸಿದರೆ ಸುಮಾರು ೪೫ ರೂಪಾಯಿ ಸಿಗುತ್ತದೆ. ಖರ್ಚು ಕಳೆದರೆ ೧೪ ರೂಪಾಯಿ ಸಿಗುತ್ತದೆ. ೪೫ ರೂಪಾಯಿ ವ್ಯವಹಾರದಲ್ಲಿ ೧೪ ರೂಪಾಯಿ ಬಹಳ ಒಳ್ಳೆಯ ಲಾಭ. ಅಮೆರಿಕಕ್ಕೆ ಅದೇ ವೇಳೆ ಒಂದು ಡಾಲರ್‌ನಷ್ಟು ಗುತ್ತಿಗೆ ಕೊಟ್ಟಾಗ ಶೇ. ೧೨ ರಿಂದ ೧೪ ರಷ್ಟು ಹೆಚ್ಚಿಗೆ ಕೆಲಸ ಆಗಿರುತ್ತದೆ. ವಾಸ್ತವವಾಗಿ ಹೊರ ಗುತ್ತಿಗೆ ಕಾಮಗಾರಿ ಎಂದರೆ ಬಿಪಿಓ ಕೆಲಸ ಎಂದೇ ಅರ್ಥ. ಬಿಪಿಓ ಎನ್ನುವಾಗ ಬಿಸಿನೆಸ್ ಪ್ರೋಸೆಸ್ ಔಟ್ ಸೋರ್ಸಿಂಗ್ ಎಂಬುದೇ ವಿವರಣೆ. ಅಮೆರಿಕದ ಕಂಪೆನಿಯೊಂದು ವಹಿವಾಟು ನಡೆಸುವಾಗ ಲೆಕ್ಕ ಪತ್ರ ನಮೂದು ಮಾಡುವುದು; ಬೇಕೆಂದಾಗ ವಿವರ ಹೆಕ್ಕುವುದು; ಆಗಿರುವ ವ್ಯವಹಾರ ವಿಶ್ಲೇಷಿಸುವುದು; ಲಾಭ ನಷ್ಟದ ವಿವರ ಸಿದ್ಧಪಡಿಸುವುದು; ಅಂಕಿಸಂಖ್ಯೆಗಳ ರೂಪದಲ್ಲಿ ನಾನಾ ಬಗೆಯಲ್ಲಿ ವ್ಯವಹಾರವನ್ನು ಚಿತ್ರಿಸುವುದು; ಮುಂತಾದ ಕೆಲಸಗಳು ಏನೆಲ್ಲ ಇರುತ್ತವೋ ಅವನ್ನು ಸ್ವದೇಶದಲ್ಲಿ ಅಮೆರಿಕನ್ನರಿಂದಲೇ ನಡೆಸುವುದು ಹಳೇ ಪದ್ಧತಿ. ಹೊರ ಗುತ್ತಿಗೆ ನೀಡಿದರೆ ಭಾರತದಲ್ಲಿರುವ ವಾಣಿಜ್ಯ ಪಧವೀಧರರು, ಸಿಎಗಳು ಮುಂತಾದವರು ಅಮೆರಿಕದಲ್ಲಿ ನಡೆದ ವ್ಯವಹಾರಗಳಿಗೆ ಸಂಬಂಧಿಸಿದ ಕೆಲಸಗಳನ್ನೆಲ್ಲ ಭಾರತದಲ್ಲಿ ನಿರ್ವಹಿಸಿ ಲಬ್ಧ ಮಾಹಿತಿ ರವಾನೆ ಮಾಡುತ್ತಾರೆ. ದೂರದ ಅಮೆರಿಕ ಸಮಸ್ತ ಮಾಹಿತಿ ದತ್ತಾಂಶಗಳನ್ನು ಉಪಗ್ರಹ ಮೂಲಕ ಸೆಕೆಂಡುಗಳ ಕಾಲದ ಅಂತರದಲ್ಲಿ ರವಾನಿಸಲು ಶಕ್ಯವಿದೆ. ಅದೇ ರೀತಿ ಭಾರತದ ಲೆಕ್ಕಿಗರು ಸಿದ್ಧಪಡಿಸಿದ ಮಾಹಿತಿಯನ್ನು ತಕ್ಷಣ ರವಾನಿಸಬಹುದು. ಈ ಸೌಲಭ್ಯ ಪಡೆದು ಮಾಹಿತಿ ಕುರಿತ ಕಾರ್ಯಾಚರಣೆ ನಡೆಸಿ ಹೊತ್ತು ಹಾಕುತ್ತಾರೆ.

ಭಾರತದಲ್ಲಿರುವ ದೊಡ್ಡ ದೊಡ್ಡ ಐಟಿ ಕಂಪೆನಿಗಳು ಬಿಪಿಓ ಕೆಲಸಕ್ಕೆ ಅಮೆರಿಕ ಕಂಪೆನಿಗೆ ಬಿಲ್ ಮಾಡುವ ವೈಖರಿ ಕುತೂಹಲಕಾರಿ. ಲೆಡ್ಜರ್‌ ನಮೂದಾತಿಯಂಥ ಸಾಮಾನ್ಯ ಕೆಲಸಕ್ಕೆ ಒಬ್ಬ ವ್ಯಕ್ತಿಗೆ ಒಂದು ವರ್ಷಕ್ಕೆ ೩೦ ಸಾವಿರ ಡಾಲರ್‌; ಸಿಎಗಳನ್ನು ಕೆಲಸಕ್ಕೆ ಹಚ್ಚಿದ ಕೆಳಹಂತ ಅಧಿಕಾರಿಗಳಿಗೆ ತಲಾ ೩೦ ರಿಂದ ೩೫ ಸಾವಿರ ಡಾಲರ್‌ ವರ್ಷಕ್ಕೆ ದೊಡ್ಡ ಮ್ಯಾನೇಜರ್‌ಗಳನ್ನು ನೇಮಿಸುವ ಉನ್ನತ ಸ್ತರದ ಕೆಲಸಕ್ಕೆ ೫೦ ರಿಂದ ೬೦ ಸಾವಿರ ಡಾಲರ್‌ ಹೀಗೆ ಬಿಲ್ ಮಾಡುತ್ತಾರೆ.

ಈ ಅಂಕಿ ಸಂಖ್ಯೆ ಆ ಕಡೆ ಈ ಕಡೆ ಆಗಬಹುದು. ಸರಿ ಸುಮಾರು ಆ ಅಂದಾಜಿನ ದರಗಳಲ್ಲಿ ಹೊರ ಗುತ್ತಿಗೆ ಕೆಲಸ ನಡೆಯುತ್ತದೆ. ಇಲ್ಲಿನ ಲೆಕ್ಕಿಗರು ಮತ್ತು ಮ್ಯಾನೆಜರುಗಳು ಬರಿದೇ ಲೆಕ್ಕಿಗರಾಗಿರದೇ ಕಂಪ್ಯೂಟರ್‌ ತಂತ್ರಜ್ಞಾನವನ್ನು ಚೆನ್ನಾಗಿ ಬಲ್ಲವರಾಗಿರುತ್ತಾರೆ.

ಸಾಮಾನ್ಯ ಕಾರಕೂನನಿಗೆ ೩೦ ಸಾವಿರ ಡಾಲರ್‌ ವಾರ್ಷಿಕ ಶುಲ್ಕ ವಸೂಲು ಮಾಡಿದರೆ ತಿಂಗಳಿಗೆ ಎರಡೂವರೆ ಸಾವಿರ ಡಾಲರ್‌ ಆಯಿತು. ರೂಪಾಯಿಗೆ ಪರಿವರ್ತಿಸಿದರೆ ೧ ಲಕ್ಷ ೧೨ ಸಾವಿರದ ೨೦೦ ರೂಪಾಯಿ ಆಯಿತು. ಭಾರತದ ಐಟಿ ಕಂಪೆನಿಯು ದೊಡ್ಡ ಕಚೇರಿ ಹಾಗೂ ಕಂಪ್ಯೂಟರ್‌ ಜಾಲ ಸೌಲಭ್ಯ ಇವನ್ನೆಲ್ಲ ನಿರ್ಮಿಸಲು ಭಾರೀ ದೊಡ್ಡ ಮೊತ್ತದ ಬಂಡವಾಳ ತೊಡಗಿಸಿರುತ್ತದೆ. ಹಲವು ಬಗೆಯ ನಷ್ಟ ಸಾಧ್ಯತೆಗಳಿರುತ್ತವೆ. ಅದಕ್ಕೆಲ್ಲ ಶೇ.೫೦ ಹಣ ತೆಗೆದಿರಿಸಿದರೂ ಲೆಕ್ಕಿಗನೊಬ್ಬನ ಸಂಬಳದ ಬಾಬ್ತು ಎಂದು ಸುಮಾರು ೫೦ ಸಾವಿರ ರೂಪಾಯಿ ಕೊಡಬಹುದು. ಆದರೆ ಭಾರತದಲ್ಲಿ ಶೇ.೨೦ ಸಾವಿರ ಕೆಲಸಗಾರರು ಸಿಗುತ್ತಾರೆ.

ಇದು ಬಿಪಿಓ ಲೆಕ್ಕಾಚಾರ. ಹೊರಗುತ್ತಿಗೆ ಪಡೆದ ಕಂಪೆನಿಯು ತನ್ನ ಕೆಲಸಗಾರರನ್ನು ಗ್ರಾಹಕನ ರಾಷ್ಟ್ರಕ್ಕೆ ಕಳುಹಿಸುವುದು ಉಂಟು. ಕಚೇರಿ ಕಾರ್ಯಾಚರಣೆ ಬದಲಿಗೆ ಸಾಫ್ಟ್‌ವೇರ್‌ಅಭಿವೃದ್ಧಿಪಡಿಸಿಕೊಡುವ ಯೋಜನೆಗಳಿಗಾಗಿ ಇಂಜನೀಯರ್‌‌ಗಳನ್ನು ಮುಖ್ಯವಾಗಿ ಅಮೆರಿಕ, ಬ್ರಿಟನ್ ಮುಂತಾದ ಕಡೆಗೆ ಕಳುಹಿಸುತ್ತಾರೆ. ಆಗೆಲ್ಲ ಪ್ರತಿ ಮನುಷ್ಯನ ಪ್ರತಿ ಗಂಟೆ ಕೆಲಸಕ್ಕೆ ಇಂತಿಷ್ಟು ಎಂಬುದಾಗಿ ಕಂಪೆನಿಗಳವರು ಬಿಲ್ ಮಾಡುತ್ತಾರೆ. ಡಾಲರ್‌, ಪೌಂಡ್ ಲೆಕ್ಕದಲ್ಲಿ ಬಿಲ್ ಮಾಡಿ ಯಾವುದೇ ಕಾಮಗಾರಿಗೆ ಪಡೆಯುವ ಮೊತ್ತಗಳು ಭಾರತದಲ್ಲಿರುವ ಹುಲುಮಾನವರ ಲೆಕ್ಕದ ಪ್ರಕಾರ ಗಾಬರಿ ಬೀಳುವಷ್ಟು ಇರುತ್ತವೆ.

ಅಲ್ಲಿಯೂ ಕಂಪೆನಿಗಳವರು ತಾವು ಗ್ರಾಹಕ ಕಂಪೆನಿಗೆ ಬಿಲ್ ಮಾಡಿದ ಮೊತ್ತದ ಶೇ. ೨೫ ರಿಂದ ೪೦ರವರೆಗೆ ಭಾಗವನ್ನು ಉದ್ಯೋಗಿಗೆ ವರ್ಗಾಯಿಸುತ್ತಾರೆ. ಮಿಕ್ಕದ್ದು ಭಾರತದ ಕಂಪೆನಿಯ ಲಾಭ. ಆದರೆ ಉದ್ಯೋಗಿಗಳನ್ನು ವಿದೇಶದಲ್ಲಿಟ್ಟುಕೊಂಡು ಸಾಕುವುದು ಸುಲಭವಲ್ಲ. ಇಡೀ ವ್ಯವಹಾರದಲ್ಲಿ ನಷ್ಟ ಸಾಧ್ಯತೆ ಏನೂ ಕಡಿಮೆ ಇರುವುದಿಲ್ಲ.

ಭಾರತದಿಂದ ತಮತಮ್ಮ ಕಂಪೆನಿಗಳ ಪರವಾಗಿ ದುಡಿಯಲು ಹೋಗುವ ಎಂಜನೀಯರುಗಳು ಕಷ್ಟ ಸಹಿಷ್ಣುಗಳಾಗಿರುತ್ತಾರೆ. ವಿದೇಶಗಳ ಸ್ಥಳೀಯ ಉದ್ಯೋಗಿಗಳ ಜೊತೆ ಹೆಗಲುಜ್ಜಿ ಕೆಲಸ ಮಾಡುವಾಗ ಆಗುವ ಮನಃಕ್ಲೇಷವೇನು ಕಡಿಮೆಯಿಲ್ಲ. ಕಂಪೆನಿಯು ಬಿಲ್ ಮಾಡಿದ ಮೊತ್ತದ ಶೇ. ೪೦ ಭಾಗ ಕೊಟ್ಟರೂ ತಮ್ಮಪಾಲಿಗೆ ಲಾಭಕರ ಎಂದೇ ಅವರು ಭಾವಿಸುತ್ತಾರೆ. ಏಕೆಂದರೆ ವಿದೇಶಗಳಲ್ಲಿ ಬಹಳ ಕಷ್ಟಪಟ್ಟು ಉಳಿಸಿದ ಪ್ರತಿ ಡಾಲರ್‌ ಭಾರತದಲ್ಲಿ ೪೫ ರೂಪಾಯಿ ಆಗುತ್ತದೆ. ಪ್ರತಿ ಪೌಂಡ್ ೮೦ ರೂಪಾಯಿ ಆಗುತ್ತದೆ. ಹಾಗೂ ಪ್ರತಿ ಯುರೋ ೫೦ ರೂಪಾಯಿ ಆಗುತ್ತದೆ.

ಭಾರತದಿಂದ ಹೋದ ಇಂಜನೀಯರ್‌ ಅದೇ ಸ್ಥಾನಮಾನದ ಅಲ್ಲಿನ ಎಂಜನೀಯರ್‌ ಮಾಡುವ ಕೆಲಸದ ಮೂರ್ನಾಲ್ಕು ಪಟ್ಟು ಕೆಲಸ ಮಾಡುತ್ತಾನೆ. ಹೀಗಿದ್ದರೂ ಬಹುತೇಕ ಗ್ರಾಹಕ ರಾಷ್ಟ್ರಗಳಲ್ಲಿ ಹೊರಗಿನವರಿಗೆ ಕೊಡುವ ಸಂಬಳಕ್ಕಿಂತ ಜಾಸ್ತಿ ಸಂಬಳವನ್ನು ದೇಶೀಯ ಎಂಜನೀಯರಿಗೆ ಕೊಡುತ್ತಾರೆ ಎಂಬುದೂ ಕಟು ವಾಸ್ತವವೇ ಸರಿ.

ಅಮೆರಿಕದಂಥ ರಾಷ್ಟ್ರವು ನಿಷೇಧ ಹೇರುವ ಕ್ರಮದ ಜೊತೆಗೆ ಬೇರೆ ರೀತಿಯಲ್ಲೂ ಹೊರ ಗುತ್ತಿಗೆ ಪಡೆದ ಕಂಪೆನಿಗಳನ್ನು ನಿರ್ಬಂಧಿಸುವುದೂ ನಿಯಂತ್ರಿಸುವುದೂ ಉಂಟು. ಮುಖ್ಯವಾದ ರೀತಿ ಎಂದರೆ ವೀಸಾ ನೀಡಿಕೆ ನಿರ್ಬಂಧ.

ಅಮೆರಿಕವನ್ನೇ ತೆಗೆದುಕೊಂಡರೂ ಎಚ್‌ಒನ್‌ಬಿ ವೀಸಾ ನೀಡಿ ಕೆಲಸಗಾರರನ್ನು ಒಳಕ್ಕೆ ಬಿಟ್ಟುಕೊಳ್ಳುವುದು ಹೆಚ್ಚು. ಅಲ್ಲಿ ನಾನಾ ನಿರ್ಬಂಧಗಳನ್ನು ಹೇರುತ್ತಾರೆ. ಇವನ್ನೆಲ್ಲಾ ನಿಭಾಯಿಸುವಲ್ಲೇ ಹೊರ ಗುತ್ತಿಗೆ ಪಡೆದ ಐಟಿ ಕಂಪೆನಿ ಹೈರಾಣಾಗುತ್ತದೆ. ಆದರೆ ಲಾಭದಾಸೆಯಿಂದ ಅವು ಇಂಥವನ್ನೆಲ್ಲ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ದೊಡ್ಡ ಐಟಿ ಕಂಪೆನಿಗಳು ಭಾರತದಲ್ಲಿ ನಿರ್ವಹಿಸುವ ಹೊರ ಗುತ್ತಿಗೆ ಕೆಲಸಕ್ಕೆ ವಿದೇಶಿಯರನ್ನೇ ನೇಮಿಸಿಕೊಳ್ಳ ಲಾರಂಭಿಸಿದ್ದಾರೆ. ಭಾರತದಲ್ಲಿ ಜೀವನ ವೆಚ್ಚ ಬಹಳ ಕಡಿಮೆ ಇದೆ ಎಂಬ ಕಾರಣಕ್ಕಾಗಿ ವಿದೇಶಿಯರು ಬಂದು ಕೆಲಸ ಮಾಡಲು ಆರಂಭಿಸಿದ್ದಾರೆ. ವೀಸಾ ತೊಂದರೆ ಹೆಚ್ಚಾದರೆ ಗ್ರಾಹಕ ರಾಷ್ಟ್ರದಲ್ಲಿ ಆ ರಾಷ್ಟ್ರದ ಕಂಪನಿ ನೀಡಿದ ಹೊರ ಗುತ್ತಿಗೆ ಕೆಲಸ ಮಾಡಲು ಅಲ್ಲಿನ ಸ್ಥಳೀಯರನ್ನೇ ನೇಮಿಸಿಕೊಳ್ಳಲು ಇವರೂ ಸೈ. ಆದರೆ ಅಲ್ಲಿನ ಇಂಜನೀಯರರು ಭಾರತದ ಎಂಜನೀಯರ್‌ರಿಗೆ ಸರಿ ಸಮನಾದ ಕಾರ್ಯ ಸಾಮರ್ಥ್ಯ ತೋರಿಸಬೇಕಾಗುತ್ತದೆ. ಅಂಥ ಜನ ಅಗತ್ಯವಾದಷ್ಟು ಸಂಖ್ಯೆಯಲ್ಲಿ ಅಲ್ಲಿ ಲಭ್ಯವಿದ್ದಿದ್ದರೆ ಅಲ್ಲಿನವರು ಹೊರ ಗುತ್ತಿಗೆಯನ್ನೇ ಕೊಡುತ್ತಿರಲಿಲ್ಲವೇನೋ?

ಕಂಪ್ಯೂಟರ್‌ ಕಾರ್ಯಾಚರಣೆಗೆ ಹೊರತಾದ ಕರೆ ಕೇಂದ್ರ (ಕಾಲ್ ಸೆಂಟರ್‌) ಮೆಡಿಕಲ್ ಟ್ರಾನ್ಸ್‌ಕ್ರಿಪ್ಷನ್ ಮುಂತಾದ ಬಾಬುಗಳಲ್ಲಿ ಸಹಾ ತೋಳು ತಿರಿಚುವ ಕೃತ್ಯವನ್ನು ಅಮೆರಿಕದ ರಾಜಕಾರಣಿಗಳು ಮಾಡಲಿಕ್ಕೆ ಸಾಕು. ಆ ಮೂಲಕ ಬಿಲ್ ಮಾಡುವುದು ಕಡಿಮೆ ಆಗುವಂತೆ ಮಾಡುವ ಹುನ್ನಾರ ಸಹಾ ನಡೆಯಬಹುದು. ಅಮೆರಿಕದ ಆರ್ಥಿಕತೆ ದಿಡೀರ್‌ ಸುಧಾರಿಸದಿದ್ದರೆ ಈ ಧೋರಣೆ ಬದಲಾಗಲಿಕ್ಕೂ ಸಾಕು.

೦೧-೦೨-೨೦೦೪