ಊರಿಗೆ ಬಂದವಳು ನೀರಿಗೆ ಬರದೆ ಇರುತ್ತಾಳೆಯೇ ? ಇದು ಹಳೆಯ ಗಾದೆ. ಇದರ ಪರಿಷ್ಕೃತ ಆವೃತ್ತಿ ಎಂದರೆ, ಸಿಟಿಗೆ ಬಂದವಳು ಸಿನಿಮಾಕ್ಕೆ ಬರದೆ ಇರುತ್ತಾಳೆಯೇ ?

ಆಧುನಿಕ ಯುಗದಲ್ಲಿ ಇಂಥದೇ ಗಾದೆ ಎಂದರೆ ‘ಟೆಲಿಪೋನ್’ ಇಟ್ಟುಕೊಂಡಿರುವವನು ಇನ್ ಕಂ ಟ್ಯಾಕ್ಸ್ ಕೊಡದೆ ಉಳಿಯಲು ಸಾಧ್ಯವೆ ?’

ವಾಸ್ತವವಾಗಿ ಕಾರನ್ನು ಇರಿಸಿಕೊಂಡಿದ್ದರೂ ಕ್ರೆಡಿಟ್ ಕಾರ್ಡ ಬಳಸುತ್ತಿದ್ದರೂ ಟೆಲಿಪೋನ್ ಖರ್ಚನ್ನು ನಿಭಾಯಿಸುತ್ತಿದ್ದರೂ ವರಮಾನ ಕರ ತೆರಬೇಕಾಗುವುದು ನಿಶ್ಚಿತ. ತೆರಿಗೆಯವರು ತೆರಿಗೆ ತೆರಬೇಕಾದವರನ್ನು ಹಿಡಿದು ಹಾಕುವುದೇ ಇದನ್ನು ಪತ್ತೆ ಹಚ್ಚುವ ಮೂಲಕ.

ಕಾಲ ಸರಿದಂತೆ ಟೆಲಿಪೋನ್ ಸಹಾ ಲಕ್ಷುರಿ ಆಗಿ ಉಳಿದಿಲ್ಲ. ಸೆಲ್ಯುಲರ್ ಪೋನ್ ಅಂದರೆ, ಮೊಬೈಲ್ ಅವತರಿಸಿದ್ದರಿಂದ ಮನೆ ಮನೆಯಲ್ಲಿ ಮಾತ್ರವಲ್ಲ; ರಸ್ತೆ ರಸ್ತೆಯಲ್ಲೆಲ್ಲ ಮೊಬೈಲ್ ಪೋನ್‌ಗಳು ತಲೆ ಚಿಟ್ಟು ಹಿಡಿಸುತ್ತಿವೆ. ೧೯೯೫ರಿಂದೀಚೆಗೆ ನಡೆದಂಥ ಪೋನ್ ಕ್ರಾಂತಿಯನ್ನು ಇನ್ನಾವ ದೇಶದಲ್ಲೂ ನೋಡಲಾಗದು. ಕುಗ್ರಾಮಗಳಲ್ಲಿ ರಸ್ತೆ, ವಿದ್ಯುತ್ತು, ಕುಡಿಯುವ ನೀರು ಇಲ್ಲದಿದ್ದರೂ ಎಸ್.ಟಿ.ಡಿ., ಐಎಸ್.ಡಿ ಬೂತಗಳಿಗೆ ಕೊರತೆ ಇಲ್ಲ. ಸರ್ಕಾರಿ ವಲಯದ ಬಿ.ಎಸ್.ಎನ್.ಎಲ್. ಮತ್ತು ಎಂಟಿಎನ್.ಎಲ್. ಈ ಬೃಹದ್ದೇಹಿ ಸಂಪರ್ಕ ಕಂಪೆನಿಗಳಿಂದಾಗಿ ಐದು ಕೋಟಿ ಪೋನ್ ಸಂಚಾರ ಮಾರ್ಗಗಳು ನಿರ್ಮಾಣವಾಗಿವೆ. ಟೆಲಿಪೋನ್ ಎಕ್ಸಚೇಂಜಗಳ ಸಂಖ್ಯೆಯೇ ೩೫,೦೦೦ ದಾಟಿದೆ.

ಇದು ಸ್ಥಿರವಾಗಿ ಜೋಡಿಸಿಟ್ಟ ಟೆಲಿಪೋನ್ ಉಪಕರಣ ಬಳಕೆಯ ವ್ಯಾಪ್ತಿ. ವೈರಲೆಸ್ ಟೆಲಿಪೋನ ಬಂದ ಮೇಲಂತೂ ಮೊಬೈಲ್ ಉಪಕರಣಗಳು ಸಂಚರಿಸುವ ಜನರ ಜೇಬುಗಳಲ್ಲೂ ಹ್ಯಾಂಡ್ (ವ್ಯಾನಿಟಿ) ಬ್ಯಾಗಗಳಲ್ಲೂ ತಣ್ಣಗೆ ಕುಳಿತಿರುವುದಿಲ್ಲ. ಎಲ್ಲೆಂದರಲ್ಲಿ ಟ್ರಿನಗುಡುಗುತ್ತಲಲೇ ಇರುತ್ತವೆ. ಕಕ್ಕಸಿಗೆ ಹೋಗುವಾಗಲೂ, ವಾಹನ ನಡೆಸುವಾಗಲೂ ಜನರು ಮೊಬೈಲ್‌ನಲ್ಲಿ ಮಾತನಾಡುತ್ತಿರುತ್ತಾರೆ. ೧೯೯೭ರಲ್ಲಿ ಕೇವಲ ಮೂರು ಲಕ್ಷ ಬಳಕೆದಾರರಿದ್ದರು. ಈಗ ಒಂದು ಕೋಟಿಗೂ ಅಧಿಕ ಮೊಬೈಲ್ ಬಳಕೆದಾರರಿದ್ದಾರೆ. ಇನ್ನು ಆರು ತಿಂಗಳಲ್ಲಿ ಅದು ಎರಡು ಕೋಟಿ ಆಗಲಿಕ್ಕೂ ಸಾಕು.

ಟೆಲಿಪೋನ ಸೇವೆ ಒದಗಿಸವುದು ಇದೀಗ ಬಹಳ ದೊಡ್ಡ ವ್ಯಾಪಾರ. ೧೯೯೪ರಲ್ಲಿ ಹಾಗೂ ೧೯೯೭ರಲ್ಲಿ ಭಾರತ, ರಾಷ್ಟ್ರೀಯ ಟೆಲಿಕಾಂ ನೀತಿಯನ್ನು ಅಂಗೀಕರಿಸಿತು. ಹಾಗಿದ್ದರೂ ಪ್ರತಿ ಗ್ರಾಮಕ್ಕೊಂದು ಪಿ.ಸಿ.ಓ. ಸ್ಥಾಪಿಸಲು ಇಟ್ಟುಕೊಂಡ ಗುರಿ ಇನ್ನೂ ಕೈಗೂಡಿಲ್ಲ. ರಾಷ್ಟ್ರೀಯ ಅಂತರ ರಾಷ್ಟ್ರೀಯ ಮಾರ್ಗಗಳನ್ನು ಹಿಡಿದು ಜನರು ಕ್ಷಣ ಮಾತ್ರದಲ್ಲಿ ಲಕ್ಷಗಟ್ಟಲೆ ಮೈಲಿ ಆಚೆ ಇರುವವರ ಜೊತೆ ಸಂಭಾಷಿಸುತ್ತಾರೆ. ಎನ್ನುವುದು ಹೋನನ ಒಂದು ಬಗೆಯ ಬಳಕೆ ಮಾತ್ರ. ಇಂಟರ್ನೆಟ್ ಜಾಲದ ಬೆನ್ನು ಹತ್ತಿ ಮಾಹಿತಿಯೆಂಬ ಸಮುದ್ರದಲ್ಲಿ ಈಜಾಡುವುದಕ್ಕೆ ಸಾಧ್ಯವಾಗಿರುವುದೇ ಪೋನ ಜಾಲವನ್ನು ಬಳಸುತ್ತಿರುವುದರಿಂದ. ಈ ಮಾರ್ಗಗಳಲ್ಲಿ ಧ್ವನಿ ಮಾತ್ರವಲ್ಲದ ಚಿತ್ರ (ಚಲಚ್ಚಿತ್ರ) ರವಾನೆ ಸಹಾ ಸಾಧ್ಯವಾಗಿರುವುದು ನವೀನ ತಂತ್ರಜ್ಞಾನದ ಸೋಜಿಗ.

ಇಂಟರನೆಟ್ ಜಾಲಕ್ಕಿಳಿದು ಮೊಬೈಲಗಳನ್ನು ಕಂಪ್ಯೂಟರ್ ಪಿ.ಸಿ.ಗಳಂತೆ ಬಳಸುವ ಕಾಲ ಕೆಲವೇ ತಿಂಗಳುಗಳಷ್ಟು ಹತ್ತಿರವಿದೆ.

ಸಂಪರ್ಕ ಸಾಧನಕ್ಕೇ ಮೀಸಲಾದ ಉಪಗ್ರಹಗಳನ್ನು ಮಾತ್ರವಲ್ಲದೆ ನೆಲದಡಿಯ ಹಾಗೂ ಸಾಗರದಡಿಯ ಕೇಬಲುಗಳನ್ನೂ ಸುಧಾರಿತ ಆಪ್ಟಿಕ್ ಫೈಬರ್ ಕೇಬಲಗಳನ್ನೂ ಬಳಸುವಂತಾಗಿದೆ. ಸರ್ಕಾರ ನಿರ್ಮಿಸಿಟ್ಟ ಮೂಲ ಸಂಪರ್ಕ ಕಲ್ಪಿಸುವ ಅವಕಾಶವನ್ನು ವಿದೇಶಿ ಸಹಯೋಗದ ಎಂ.ಎನ್.ಸಿ. ಮಾದರಿಯ ಕಂಪನಿಗಳಿಗೆ ವಹಿಸಲಾಗಿದೆ. ಸೆಲ್ಯುಲರ್ ಆಪರೇಟರಗಳೆಂದೇ ಪ್ರಖ್ಯಾತರಾದ ಏರಟೆಲ್, ಸ್ಪೈಸ್, ಹಚ್ ಮುಂತಾದ ವ್ಯಾಪಾರ ನಾಮಗಳನ್ನು ಹೊತ್ತ ಕಂಪೆನಿಗಳು ಮೊಬೈಲ್ ಪೋನ್ ಚಂದಾದಾರರ ಜೊತೆ ವ್ಯಾಪಾರ ಕುದುರಿಸಿಕೊಂಡಿವೆ.

ವಿದೇಶಿ ನಿರ್ವಹಣಾ ತಂತ್ರಗಳಲ್ಲಿ ಬಳಸಿದರೂ ಈ ಮೊಬೈಲ್ ಕಂಪೆನಿಗಳಿಗೆ ಭಾರಿ ಸ್ವಾತಂತ್ರ್ಯವೇನಿಲ್ಲ. ಸರ್ಕಾರ ರಚಿಸಿರುವ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಬೆರಳು ತೋರಿಸಿದಂತೆ ನಡೆಯಬೇಕು. ಬಳಕೆದಾರರಿಗೆಂದು ನಿಶ್ಚಯಿಸುವ ಶುಲ್ಕದ ಪರಮಾವಧಿ ಎಷ್ಟೆಂಬುದು ಸಹಾ ನಿಯಂತ್ರಣಕ್ಕೊಳಪಟ್ಟಿದೆ.

ದೂರಸಂಪರ್ಕ ಜಾಲದ ಜವಾಬ್ದಾರಿ ಹೊತ್ತ ಕಂಪೆನಿಗಳ ನಡುವೆ ತಕರಾರು ಇದ್ದರೆ ಅದರ ಪಂಚಾಯ್ತಿ ತೀರ್ಮಾನಕ್ಕೆ ಬೇರೆಯದೇ ವ್ಯವಸ್ಥೆ ಇದೆ. ಬೇರೆ ಬೇರೆ ಪ್ರದೇಶಗಳಿಗೆ ಸಂಬಂಧಪಟ್ಟಂತೆ ದೂರಸಂಪರ್ಕ ಕಲ್ಪಿಸುವ ಹೊಣೆಯನ್ನು ಗೊಂದಲವಿಲ್ಲದಂತೆ ಬೇರೆ ಬೇರೆ ಕಂಪೆನಿಗಳಿಗೆ ವಹಿಸಿಕೊಟ್ಟಿದೆ. ಆದರೂ ಅವು ಪ್ರತ್ಯೇಕ ದ್ವೀಪಗಳಂತೆ ಕೆಲಸ ಮಾಡುವಂತಿಲ್ಲ.

ಬಳಕೆದಾರನಿಗೆ ತೊಂದರೆ ಆಗದಂತೆ ತಮ್ಮ ವ್ಯಾಪ್ತಿಯ ಹಾಗೂ ಪಕ್ಕದ ಪ್ರದೇಶದ ವ್ಯಾಪ್ತಿಯ ಕಂಪನೆ ಜೊತೆ ಸಹಕರಿಸಲೇಬೇಕು.

ದೂರಸಂಪರ್ಕ ವ್ಯವಸ್ಥೆಯ ಸೇವಾಗುತ್ತಿಗೆ ನಿಡುವ ಸಂಬಂಧ ಹಳೆಯ ಚರಿತ್ರೆ ಸ್ವಲ್ಪ ಉಂಟು. ಮೊಲದಿಗೆ ಕಂಪೆನಿಗಳು ಭಾರಿ ಬಿಡ್ ಮೊತ್ತಕ್ಕೆ ಒಪ್ಪಿ ಗುತ್ತಿಗೆ ಹಿಡಿದವು.

ಅನಂತರ ತಮಗೆ ಅಷ್ಟೊಂದು ವರಮಾನ ಇಲ್ಲ ಎಂದಾದಾಗ ತಕರಾರು ಹೂಡಿದವು. ಭಾರತ ಸರ್ಕಾರ ಇಡೀ ವ್ಯವಸ್ಥೆಯನ್ನು ಹೆಚ್ಚು ಕಡಿಮೆ ಮಾಡಿ ಮರುಹಂಚಿಕೆ ಮಾಡಿತು.

ಎಂ.ಎನ್.ಸಿ. ಮಾದರಿಯ ಕಂಪನಿಗಳು ಮಾತಿಗೆ ತಪ್ಪಿದಂತೆ ಆಯಿತು.

೨೦೦೩ ಆರಂಭವಾದಂತೆ ಇನ್ನೊಂದು ಸಮಸ್ಯೆ ತಲೆದೋರಿತು. ಹೊಸ ತಂತ್ರಜ್ಞಾನ ಬಂದಿದ್ದು ಅದಕ್ಕೆ ಕಾರಣ. ಎಂ.ಎನ್.ಸಿ. ಮಾದರಿಯ ದೊಡ್ಡ ವ್ಯಾಪ್ತಿಯ ದೇಶೀಯ ಕಂಪೆನಿಗಳು ಪೈಪೋಟಿ ನೀಡತೊಡತಿದ್ದು ಇನ್ನೊಂದು ಕಾರಣ.

ಹೊಸದಾಗಿ ಪ್ರವೇಶಿಸಿದ ರಿಲಯನ್ಸ್ ಇನಪೋಕಾಂ ಮತ್ತು ಟಾಟಾ ಇಂಡಿಕಾಂ ಈ ಎರಡೂ ಕಂಪೆನಿಗಳು ಅತ್ಯಾಧುನಿಕ ಆಪ್ಟಿಕ್ ಫೈಬರ್ ಕೇಬಲಗಳ ಜಾಲವನ್ನು ದೇಶದಾದ್ಯಂತ ಹರಡಿದವು. ಮಾಮೂಲಿನಂತೆ ಸರ್ಕಾರ ಈ ಕಂಪೆನಿಗಳ ನಿರ್ದಿಷ್ಟ ಪ್ರದೇಶಗಳ ಗುತ್ತಿಗೆಯನ್ನು ಹಚ್ಚಿಕೊಟ್ಟಿತು.

ಇವರ ತಂತ್ರಜ್ಞಾನ ಹೊಸದು. ಮೊಬೈಲ್ ಸೇವೆ ಒದಗಿಸುವವರದು ಸೆಲ್ಯುಲರ್ ಮೊಬೈಲ್ ಸರ್ವಿಸ್ ಪ್ರೊವೈಡರ್ಸ್ (ಸಿ.ಎಂ.ಎಸ್.ಪಿ)ಗಳು ಎನಿಸಿಕೊಂಡರು. ಇವರು ಪರಸ್ವರ ಪ್ರದೇಶಗಳ ಕಂಪನಿಗಳವರ ಜೊತೆ ಚೆನ್ನಾಗಿ ಸಹಕರಿಸುವರು. ಬಳಕೆದಾರನಿಗೆ ಸಂಪರ್ಕ ಸಾಧಿಸವು ಸಂಬಂಧ ಯಾವುದೇ ಬಾಧೆ ಇರದು. ಆದರೆ ಹೊಸದಾಗಿ ಬಂದ ಎರಡು ಕಂಪನಿಗಳ ತಂತ್ರಜ್ಞಾನ ಬೇರೆಯಾಗಿದ್ದರಿಂದ ಇವರು ತಕರಾರು ಎತ್ತಲು ಅವಕಾಶವಾಯಿತು.

ಹೊಸ ಕಂಪೆನಿಗಳು ವೈರಲೆಸ್ ಲೋಕಲ್ ಲೂಪ್ (ಡಬ್ಲ್ಯುಎಲ್.ಎಲ್.) ಎಂಬ ತಂತ್ರಜ್ಞಾನ ಹೊಂದಿವೆ. ತಾಮ್ರದ ತಂತಿಯ ಕೇಬಲಗಳನ್ನು ಹಾಕಿಸಿದ್ದರೆ ಎಷ್ಟು ಖರ್ಚು ಬರುತ್ತದೋ ಅದರ ಮೂರನೇ ಒಂದು ಪಾಲಿನ ಖರ್ಚಿನಲ್ಲಿ ಅದೇ ಟೆಲಿಪೋನ್ ಸೇವೆಯನ್ನು ಫೈಬರ್ ಆಪ್ಟಿಕ ಕೇಬಲಗಳ ಮೂಲಕ ಒದಗಿಸಲು ಶಕ್ಯವಾಗುತ್ತದೆ. ಒಂದೇ ಇತಿಮಿತಿ ಎಂದರೆ ಸ್ಥಳೀಯವೆನಿಸಿದ ಪುಟ್ಟ ಪ್ರದೇಶದಲ್ಲಿ ಮಾತ್ರ ಈ ತಂತ್ರಜ್ಞಾನ ಕೈಗೆತ್ತಿಕೊಂಡವರು ಕೆಲಸ ಮಾಡಬೇಕು. ಗ್ರಾಮ ಪ್ರದೇಶಗಳಿಗೆ ಹೇಳಿ ಮಾಡಿಸಿದ ತಂತ್ರಜ್ಞಾನವಿದು. ಇದು ಸಾಂಪ್ರದಾಯಿಕ ಟೆಲಿಪೋನ್ ಮಾತ್ರವಲ್ಲದೆ ಮೊಬೈಲ್ ಟೆಲಿಪೋನ್ ಜೊತೆಗೆ ಹೋಲಿಸಿದರೂ ಸೇವಾ ಸೌಲಭ್ಯ ಬಹಳ ಅಗ್ಗ.

ಭಾರತ ಸರ್ಕಾರ ಇವರಿಗೆ ಅವಕಾಶ ಕೊಟ್ಟ ನಂತರ ರಿಲಯನ್ಸ್ ಮತ್ತು ಟಾಟಾ ಕಂಪೆನಿಗಳು ಬಹಳ ವೇಗವಾಗಿ ಪ್ರಗತಿ ಸಾಧಿಸುತ್ತಿದ್ದಂತೆ ಮೊಬೈಲ್ ಟೆಲಿಪೋನ್ ಕಂಪೆನಿಗಳವರು ಅಸಹಕಾರ ಚಳವಳಿ ಆರಂಭಿಸಿದರು. ಡಬ್ಲ್ಯುಎಲ್.ಎಲ್. ಪ್ರದೇಶ ಪಕ್ಕದಲ್ಲೇ ಇದ್ದರೂ ಮುಂದಿನ ಪೋನ್ ಪ್ರದೇಶಕ್ಕೆ ಸಂಪರ್ಕ ಸಾಧಿಸಿಕೊಳ್ಳುವಲ್ಲಿ ಸಹಕರಿಸುವುದಿಲ್ಲ ಎಂದು ಮೊಬೈಲನವರು ಘೋಷಿಸಿದರು. ಟಾಟಾ ಕಂಪನಿಯವರಿಗಿಂತ ರಿಲಯನ್ಸ್ ಕಂಪೆನಿಯವರ ವಿರುದ್ಧ ಇವರಿಗೆ ಕೋಪ.

ಈ ಕೋಪಕ್ಕೆ ಕಾರಣವಿಲ್ಲದೆ ಇಲ್ಲ. ಅಕ್ಕಪಕ್ಕ ನಿರ್ಮಿಸಿದ ಎಲ್ಲ ಪ್ರದೇಶಗಳಿಗೂ ಸಂಬಂಧಿಸಿದಂತೆ ಚಂದಾದಾರನ ಹೆಸರನ್ನು ರಿಲಯನ್ಸನವರು ನೋಂದಾಯಿಸುತ್ತಾ ಹೋದರು. ಎರಡು ಅಕ್ಕಪಕ್ಕದ ಪ್ರದೇಶಗಳಲ್ಲಿ ಒಬ್ಬನೇ ಚಂದಾದಾರ ಸಮಾನವಾಗಿ ನೋಂದಾಯಿಸಲ್ಪಟ್ಟಿದ್ದರೆ ಸಂಪರ್ಕದ ಸಂಬಂಧ ತಕರಾರೇ ಇರುವುದಿಲ್ಲ. ಹೀಗೆ ೫೦ ಲಕ್ಷ ಚಂದಾದಾರರು ರಿಲಯನ್ಸ್ ಸೇವೆ ಪಡೆಯಲು ಉದ್ಯುಕ್ತರಾದಾಗ ಮೊಬೈಲನವರಿಗೆ ಗಾಬರಿಯಾಗತೊಡಗಿತು.

ಅವರಲ್ಲಿ ಎರಡು ಕಂಪೆನಿಗಳವರು ಏರಟೆಲ್ ಮತ್ತು ಹಚ್ ನವರು ಸುಪ್ರೀಂಕೋರ್ಟಿಗೆ ಹೋದರು.

ಈ ಮಧ್ಯೆ ಟೆಲಿಕಾಂ (ದೂರಸಂಪರ್ಕ) ಖಾತೆಗೆ ನೇರವಾಗಿ ಸಂಬಂಧಿಸಿದ ವಿವಿಧ ಖಾತೆಗಳ ಸಚಿವರ ಗುಂಪೊಂದು ಈ ಹೊಸ ಕಂಪೆನಿಗಳಿಗೂ ಮೊಬೈಲನವರಂತೆಯೇ ಎಲ್ಲಿಂದ ಎಲ್ಲಿಗೆ ಬೇಕಾದರೂ (ನಿರ್ದಿಷ್ಟ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲದಂತೆ) ಸೇವಾ ಸೌಲಭ್ಯ ಕಲ್ಪಿಸುವ ಏಕೀಕೃತ ಲೈಸನ್ಸ ನೀಡಲು ಸಮ್ಮತಿಸಿತು. ಇದರಿಂದ ಪ್ರಕರಣ ಕೋರ್ಟಿನ ಹೊರಗೇ ನಿರ್ಣಯಗೊಂಡಂತೆ ಆಯಿತು.

ರಿಲಯನ್ಸ್ ಕಂಪೆನಿಯವರು ಹೀಗೆ ಬಳಸು ಮಾರ್ಗಅನುಸರಿಸಿದ್ದಕ್ಕೆ ಕೇಂದ್ರ ಸರ್ಕಾರ ೪೮೫ ಕೋಟಿ ರೂಪಾಯಿ ದಂಡ ವಿಧಿಸಿತು. ಮೊಬೈಲ್‌ನವರ ಕಾರ್ಯಕ್ಷೇತ್ರ ಪ್ರವೇಶಿಸಿದ್ದಕ್ಕೆ ೧೫೮೧ಕೋಟಿ ರೂಪಾಯಿನ ಶುಲ್ಕ ವಿಧಿಸಿತು. ಅದಕ್ಕೆ ರಿಲಯನ್ಸ್ ಒಪ್ಪುತ್ತದೆ.

ತಮ್ಮ ಜೊತೆ ಪುಟ್ಟ ಕಾರ್ಯಕ್ಷೇತ್ರದ ಸಂಪೂರ್ಣ ದೇಶೀಯವೆನಿಸಿದ ಕಂಪೆನಿಗಳು ಪೈಪೋಟಿ ನಡೆಸಿರುವುದಕ್ಕೆ ಮೊಬೈಲ್ ಕಂಪೆನಿಯವರಿಗೆ ಸಿಟ್ಟು ಬಂದಿದೆ. ಅದರಲ್ಲೂ ಅಗ್ಗದ ತಂತ್ರಜ್ಞಾನವು ದೇಶಿ ಕಂಪೆನಿಗಳ ಕೈಗೆ ಸಿಕ್ಕಿದ್ದು ಈ ಕಂಪೆನಿಗಳ ಲಾಭ ಸಾಧ್ಯತೆ ಕಡೆಮೆ ಮಾಡಿದೆ. ಒಟ್ಟಾರೆಯಗಿ ಬಳಕೆದಾರನಿಗೆ ಲಾಭವಾಗುತ್ತಿದೆ. ಸರ್ಕಾರವು ಮೊಬೈಲನವರಿಗೂ ಏನಾದರೂ ಅನುಕೂಲ ಮಾಡಿಕೊಡುವ ಭರವಸೆ ನೀಡಿದೆ. ಮೊಬೈಲನವರು ಸಹಾ ಶೇ. ೫೧ ಭಾಗ ದೇಶೀಯ ಬಂಡವಾಳ ಹೊಂದಿರುವವರೇ ಆಗಿದ್ದಾರೆ.

ವಿದೇಶಿ ಸಹಯೋಗದ ಬಹುರಾಷ್ಟ್ರೀಯ ಶೈಲಿಯ ಕಂಪೆನಿಗಳು ಪ್ರಥಮ ಬಾರಿಗೆ ದೇಶಿಯ ಕಂಪೆನಿಗಳಿಗೆ ಪೈಪೋಟಿಯಲ್ಲಿ ಮಣಿದಂತೆ ಆಗಿದೆ. ಬಂಡವಾಳ ಮತ್ತು ತಂತ್ರಜ್ಞಾನ ಹೊತ್ತು ಭಾರತಕ್ಕೆ ಹಣ ಮಾಡಲೆಂದು ಬರುವ ಎಂ.ಎನ್.ಸಿ.ಗಳಿಗೆ ಇಲ್ಲಿ ಒಂದು ಸಂದೇಶವಿದೆ. ದೇಶೀಯರನ್ನು ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಹಾಗೂ ಮಿತಿಮೀರಿದ ಪ್ರಮಾಣದಲ್ಲಿ ಲಾಭ ಮಾಡುವ ಖಾತರಿ ಇರುವುದಿಲ್ಲ.

ಕಂಪೆನಿಗಳ ನಡುವಣ ಹೋರಾಟ ಕಳೆದ ಒಂದು ವರ್ಷದಲ್ಲಿ ಗೂಳಿ ಕಾಳಗದಂತೆ ಗೋಚರಿಸಿತು. ದೇಶೀಯರು ಟಗರು ಕಾಳಗ ಮತ್ತು ಕೋಳಿ ಅಂಕಣಗಳಿಗೆ ಮಾತ್ರ ಪ್ರಸಿದ್ಧರಾದವರೇನಲ್ಲ ಎಂಬುದು ಸಾಬೀತು ಆಯಿತು. ಸರ್ಕಾರ ಮಾತ್ರ ಇವರಿಗೆ ಒತ್ತಾಸೆಯಾಗಿ ನಿಂತಿತು ಎಂಬುದು ನಿಜ.

೦೫-೧೦-೨೦೦೩