ಬಹುಮುಖ ವ್ಯಾಪ್ತಿಯ ದಿವಂಗತ ಉದ್ಯಮಿ ಧೀರೂಭಾಯಿ ಅಂಬಾನಿ ಒಮ್ಮೆ ಹೇಳಿದರಂತೆ:

‘ಮೊಬೈಲ್ ಟೆಲಿಪೋನಗಳು ಸರ್ವವ್ಯಾಪಿ ಆಗಬೇಕೆಂದರೆ ಒಂದು ಕರೆಯ ಬೆಲೆಯು ಪೋಸ್ಟಕಾರ್ಡ ಬೆಲೆಗಿಂತ ಕಡಿಮೆ ಆಗಬೇಕು’.

ಅವರ ಭವಿಷ್ಯವಾಣಿ ನಿಜವಾಗುತ್ತಿದೆ. ಈಗಾಗಲೇ ಮೊಬೈಲ್ (ಸೆಲ್) ಪೋನ್ ಸೌಲಭ್ಯವನ್ನು ಒದಗಿಸುತ್ತಿರುವ ವಿದೇಶಿ ಮೂಲ ಕಂಪನಿಗಳ ಜೊತೆ ಪೈಪೋಟಿಗೆ ಇಳಿದಿರುವ ಅಂಬಾನಿ ಅವರದೇ ಆದ ರಿಲಯನ್ಸ ಹಾಗೂ ಟಾಟಾ ಕಂಪನಿಗಳು ಪೋನ್ ಕರೆ ಅತ್ಯಂತ ಕಡಿಮೆ ಆಗುವಂತೆ ಮಾಡುತ್ತಿವೆ.

ದೇಶೀ ಮೂಲದ ಈ ಸಣ್ಣ ಕಂಪನಿಗಳು ಬೃಹತ್ ಸೆಲಪೋನ್ ಕಂಪೆನಿಗಳು ಸ್ವತಃ ಬೆಲೆಗಳನ್ನು ಇಳಿಸುವಂತೆ ಮಾಡಿವೆ. ಅದಕ್ಕೆ ಕಾರಣ ಬೃಹತ್ ಸೆಲ್ ಕಂಪೆನಿಗಳು ಬಳಸುವುದಕ್ಕಿಂತ ಬಹಳ ಭಿನ್ನವಾದ ತಂತ್ರಜ್ಞಾನವನ್ನು ಬಳಸುತ್ತಿರುವುದು. ಹೊಸ ತಂತ್ರಜ್ಞಾನದ ದೆಸೆಯಿಂದಾಗಿ ದೂರದೂರಿನ ಟೆಲಿಪೋನ್ ಕರೆ ಬೆಲೆ ಒಂದು ನಿಮಿಷಕ್ಕೆ ಕೇವಲ ೨೦ ಪೈಸೆ ಆಗುತ್ತದೆ ಎಂಬುದು ರಿಲಯನ್ಸ್ ಅಂಬೋಣ. ವಾಸ್ತವವಾಗಿ, ಕೇಂದ್ರ ಸರ್ಕಾರ ಹಾಗೂ ಇಡೀ ಟೆಲಿಕಾಂ ಚಟುವಟಿಕೆಯನ್ನು ನಿಯಂತ್ರಿಸುವ ಭಾರತದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಇವೆರಡೂ ಸೇರಿ ಪೋನ್ ಕರೆಗಳ ಸೇವೆ ಒದಗಿಸುವ ಕಂಪೆನಿಗಳನ್ನು ಪರಸ್ಪರ ಪೈಪೋಟಿಗೆ ಹಚ್ಚಿವೆ. ಸರ್ಕಾರಿ ವಲಯದ ಭಾರತೀಯ ಸಂಚಾರ ನಿಗಮ ಲಿಮಿಟೆಡ್ ಹಾಗೂ ಮಹಾನಗರ ಟೆಲಿಪೋನ್ ನಿಗಮ (ಬಿ.ಎಸ್.ಎನ್.ಎಲ್. ಹಾಗೂ ಎಂ.ಟಿ.ಎನ್.ಎಲ್.) ಒಂದು ಕಡೆ ಭಾರತ ಹೆಚ್. ಆರ್.ಪಿ.ಜಿ., ಬಿಪಿಎಲ್ ಮತ್ತು ಎಸ್ಕೊಟೆಲ್ ಇನ್ನೊಂದು ಕಡೆ ಹೊಸದಾಗಿ ರಂಗಪ್ರವೇಶ ಮಾಡಿರುವ ಟಾಟಾ ಇಂಡಿಕಾಂ ಹಾಗೂ ಪ್ರವೇಶ ಮಾಡಲಿರುವ ರಿಲಯನ್ಸ್ ಮುಂತಾದುವು ಇನ್ನೊಂದು ಕಡೆ ಈ ಮೂರು ಗುಂಪಿನ ಕಂಪೆನಿಗಳು ಇದೀಗ ಪರಸ್ಪರ ಸೆಣಸಾಡುತ್ತಿವೆ. ಫಲಿತ ಬಳಕೆದಾರನಿಗೆ ಇನ್ನಷ್ಟು ಮತ್ತಷ್ಟು ಅಗ್ಗದಲ್ಲಿ ಟೆಲಿಪೋನ್ ಸೇವೆ.

ಭಾರತದಲ್ಲಿ ಟೆಲಿಪೋನ್ ಕಂಪೆನಿಗಳಿಂದ ಇಷ್ಟೊಂದು ಪೈಪೋಟಿಯೆ?

ಈ ಪ್ರಶ್ನೆ ಏಳುವುದು ನಿಜ. ಇತ್ತೀಚಿನವರೆಗೆ ಒಂದು ಟೆಲಿಪೋನ್ ಸಂಪರ್ಕಕ್ಕಾಗಿ ಹಲವು ವರ್ಷ ಕಾಯಬೇಕಾಗುತ್ತಿತ್ತು. ಈಗಲೂ ಮನೆಯಲ್ಲಿ ಒಂದು ಟೆಲಿಪೋನ ಎಂಬುದು ಒಂದು ಭೋಗ ಸಾಧನವೇ ಸರಿ. ವರಮಾನ ತೆರಿಗೆ ಜಾಲದಿಂದ ತಪ್ಪಸಿಕೊಂಡವರನ್ನು ಹುಡುಕುವಾಗ ಅವರ ಮನೆಯಲ್ಲಿ ಪೋನ್ ಇದೆಯೇ ಎಂದು ಅಧಿಕಾರಿಗಳು ವಿಚಾರಿಸುತ್ತಾರೆ. ಇದ್ದರೆ ಅವರು ವರಮಾನ ತೆರಿಗೆ ತರಲು ಯೋಗ್ಯರು ಎಂಬುದೇ ಸರ್ಕಾರದ ನಿರ್ಣಯ!

ಆದರೆ ಆಧುನಿಕ ತಂತ್ರಜ್ಞಾನದ ಪರಿಣಾಮವಾಗಿ ಟೆಲಿಪೋನ್ ಜಾಲ ದೇಶದಾದ್ಯಂತ ಹರಡಿಕೊಂಡಿತು. ಪ್ರತಿ ಸಣ್ಣ ಊರಿನಲ್ಲೂ ಈಗ ಒಂದು ಎಸ್.ಟಿ.ಡಿ ಬೂತ್, ಈಗ ಪ್ರತಿ ಐವರಲ್ಲಿ ಒಬ್ಬರ ಕೈಲಿ ಸೆಲ್ ಪೋನ್. ಈ ಸೆಲ್ ಪೋನ್ ಕಂಪನೆಗಳಂತೂ ಬಗೆ ಬಗೆಯ ಮೊಬೈಲ್‌ (ಕೈಬಳಕೆಯ) ಪೋನ್ ಉಪಕರಣಗಳ ಮಳೆಯನ್ನೇ ಬಳಕೆದಾರನ ಮೇಲೆ ಹರಿಸಿವೆ. ಎರಡೂವರೆ ಸಾವಿರ ರೂಪಾಯಿಗೆಲ್ಲ ಸೆಲ್ ಪೋನ್ ಉಪಕರಣ ಸಿಗುವಂತಾಗಿದೆ.

ಭಾರತದ ಜನರು ತಂತ್ರಜ್ಞಾನದ ರುಚಿ ನೋಡಿದರೆ ಸಾಕು; ಅದನ್ನು ಅರಗಿಸಿಕೊಳ್ಳಲು ಎಷ್ಟು ದೂರ ಬೇಕಾದರೂ ಹೋಗಬಲ್ಲರು. ಈ ಮಾತು ಕಳೆದ ಹಲವು ದಶಕಗಳಲ್ಲಿ ಉದ್ದಕ್ಕೂ ರುಜುವಾತು ಆಗಿದೆ. ಅತ್ಯಂತ ದೊಡ್ಡ ಉದಾಹರಣೆ ಎಂದರೆ ಹಸಿರು ಕ್ರಾಂತಿ ಸಾಧ್ಯವಾಗಿಸಲು ಸಾಂದ್ರ ಬೇಸಾಯ ತಂತ್ರಜ್ಞಾನವನ್ನು ರೈತರು ತಮ್ಮದಾಗಿ ಮಾಡಿಕೊಂಡಿದ್ದು, ಈಗಲೂ ಪ್ರತಿವರ್ಷ ಹಿಂದಿನ ವರ್ಷಗಳಿಗಿಂತ ಅಧಿಕ ಎನಿಸುವಷ್ಟು ಧಾನ್ಯ ಬೆಳೆಯುವ ಹಾದಿಯಲ್ಲೇ ರೈತರು ನಡೆದಿರುವುದು.

ಅದೇ ರೈತರು ಮತ್ತು ಹಳ್ಳಿಗರು ಹಾಲನ್ನು ಸಂಸ್ಕರಿಸುವ ತಂತ್ರಜ್ಞಾನ ಅರಗಿಸಿಕೊಂಡು ಕ್ಷೀರಕ್ರಾಂತಿ ಸಾಧಿಸಿದರು.

ಅನಂತರ ಭಾರತ ಕೈಗೂಡಿಸಿದ ಸಮುದಾಯ ಬಳಕೆಯ ತಂತ್ರಜ್ಞಾನ ಎಂದರೆ ವಾಹನ ತಯಾರಿಕೆಯದು. ಮೊಪೆಡನಿಂದ ಹಿಡಿದು ಲಕ್ಷುರಿ ಕಾರವರೆಗೆ ವಾಹನಗಳೋ, ವಾಹನಗಳು!.

ಐಟಿ (ಮಾಹಿತಿ ತಂತ್ರಜ್ಞಾನ) ಕಳೆದ ಐದೇ ವರ್ಷದಲ್ಲಿ ಬೆಳೆದ ಪರಿ ನಭೂತೋ ನಭವಿಷ್ಯತಿ. ಇದಂತೂ ಭಾರತವನ್ನು ತೆರೆದುಕೊಂಡು ವಿಶ್ವದ ಹೊಸ್ತಿಲಿಗೆ ತಂದು ನಿಲ್ಲಿಸಿತು.

ಇದೀಗ ಟೆಲಿಕಾಂ ಕ್ರಾಂತಿ. ದುಬಾರಿ ಮಾಡದೆ ಕೈಗೆಟಕುವಂತೆ ಮಾಡಿದರೆ ಭಾರತೀಯ ಏನನ್ನಾದರೂ ಬಾಚಿಕೊಳ್ಳಬಲ್ಲ ಎನ್ನುವುದಕ್ಕೆ ಈ ಸೆಲಪೋನ್ ಕ್ರಾಂತಿಯೇ ಅತ್ಯುತ್ತಮ ಉದಾಹರಣೆ.

ಟೆಲಿಕಾಂ ಕಂಪನಿಗಳು ಇದೀಗ ೪೦ ಸಹಸ್ರ ಕೋಟಿ ರೂಪಾಯಿ ವಹಿವಾಟಿನ ಮಾರುಕಟ್ಟೆ ಇರುವುದನ್ನು ಕಂಡುಕೊಂಡಿದೆ. ಮುಂದಿನ ಐದು ವರ್ಷಗಳಲ್ಲಿ ಈ ಮಾರುಕಟ್ಟೆ ೮೦ ಸಹಸ್ತ ಕೋಟಿ ರೂಪಾಯಿ ಗಾತ್ರಕ್ಕೆ ಬೆಳೆಯುತ್ತದೆ.

ಈಗ ಮೊಬೈಲ್ ಪೋನಗಳಲ್ಲಿ ಒಳಬರುವ ಕರೆ ಮತ್ತು ಹೊರಹೋಗುವ ಕರೆಗಳಿಗೆ ಶುಲ್ಕ ವಿಧಿಸುವ ಪದ್ಧತಿ ಇದೆ. ಕಂಪೆನಿಗಳ ಪರಸ್ಪರ ಪೈಪೋಟಿ ಕಾರಣ ಬಳಕೆ ಅನ್ವಯ ಶುಲ್ಕ ವಸೂಲಿ ಪದ್ಧತಿ ಹೋಗಲಿಕ್ಕೂ ಸಾಕು. ನಿಮಿಷಕ್ಕೆ ೬೦ ಪೈಸೆ ಶುಲ್ಕ ಎಂದು ಆದಾಗ ೧೫ ಸೆಕೆಂಡಿಗೆ ಬೀಳುವ ವೆಚ್ಚ ಬರೀ ಐದು ಪೈಸೆ.

ಈಗಾಗಲೇ ಮೊಬೈಲ್ ಅಲ್ಲದ ನೆಲ ತಂತಿ ಜಾಲದ ಸಾಂಪ್ರದಾಯಿಕ ಪೋನಗಳಲ್ಲೇ ಹತ್ತಿರ ಇರುವ ಊರುಗಳ ನಡುವಣ ಕರೆ ಎಸ್.ಟಿ.ಡಿ. ಆಗಿ ಉಳಿದಿಲ್ಲ. ಇನ್ನು ಮುಂದೆ ಮೊಬೈಲ್ ಸಹಾ ಸೇರಿದಂತೆ ದೂರದ ಊರುಗಳ ನಡುವೆ ಕರೆಗಳೇ ಸ್ಥಳೀಯ ಕರೆಗಳಂತೆ ಪರಿವರ್ತನೆಗೊಳ್ಳುವ ಸಂಭವವಿದೆ.

ರಾಜ್ಯದಿಂದ ರಾಜ್ಯಕ್ಕೆ ಒಂದು ಭೂ ಪ್ರದೇಶದಿಂದ ಇನ್ನೊಂದಕ್ಕೆ ಪ್ರಯಾಣ ಮಾಡಿದರೆ ಬೇರೆ ಬೇರೆ ಪೋನ್ ಸೇವೆ ಪೂರೈಕೆದಾರರಿರುತ್ತಾರೆ. ರೋಮಿಂಗ್ ಸೌಲಭ್ಯ ಪಡೆದಾಗ ಕೈಲಿರುವ ಮೊಬೈಲಗಾಗಿ ಸೇವೆ ಪಡೆದ ಕಂಪೆನಿ ಯಾವುದೇ ಆಗಿದ್ದರೂ ಪೋನ್ ಸಂಪರ್ಕ ಚಾಲೂ ಇರುತ್ತದೆ. ಆದರೆ ಶುಲ್ಕ ದರ ಜಾಸ್ತಿ. ನಿಮಿಷಕ್ಕೆ ೧೦ ರೂಪಾಯಿ ಇದ್ದ ಆ ಶುಲ್ಕ ಇದೀಗ ಒಂದೂವರೆ ರೂಪಾಯಿಗೆ ಇಳಿದಿದೆ.

ಟೆಲಿಕಾಂ ಕ್ರಾಂತಿ ಆರಂಭವಾಗಿದ್ದೇ ಸೆಲ್‌ಪೋನಗಳ ಚಲಾವಣೆಯಿಂದ ಎನ್ನಬಹುದು. ಟೆಲಿಕಾಂ ಕ್ಷೇತ್ರವನ್ನು ನಿಯಂತ್ರಣಗಳಿಂದ ಕೇಂದ್ರ ಸರ್ಕಾರ ೧೯೯೫ರಲ್ಲಿ ಮುಕ್ತಗೊಳಿಸಿದ್ದರಿಂದ ತಂತ್ರಜ್ಞಾನ ಪೂರ್ಣ ಪ್ರಮಾಣದಲ್ಲಿ ಒಳಕ್ಕೆ ನುಗ್ಗಿತು. ವಿದೇಶಿ ಕಂಪನಿಗಳು ಇಲ್ಲಿನ ಭಾರೀ ದೊಡ್ಡ ಮಾರುಕಟ್ಟೆ ಆಶೆಯಿಂದ ಭರದಿಂದ ಪ್ರವೇಶ ಮಾಡಿದಾಗ ಕೇಂದ್ರ ಸರ್ಕಾರ ಲೈಸನ್ಸ್ ಶುಲ್ಕವನ್ನು ಅವುಗಳ ಮೇಲೆ ದೊಡ್ಡ ದೊಡ್ಡ ಮೊತ್ತದ ಲೈಸನ್ಸ್ ಶುಲ್ಕಕ್ಕೆ ಸಮ್ಮತಿಸಿ ಸಹಿ ಹಾಕಿದವು. ಕರೆ, ಶುಲ್ಕ ಭಾರತೀಯರಲ್ಲಿ ಬಹುತೇಕ ಜರನ ಕೈಗೆ ಎಟುಕುವಂತಿರಲಿಲ್ಲ. ಒಂದೊಂದು ಬಗೆಯದೂ ೫-೭-೧೨ ಸಾವಿರ ರೂಪಾಯಿ ಬೆಲೆಬಾಳುವ ಉಪಕರಣ ಕೊಂಡರೂ ಕರೆ ಶುಲ್ಕ ‘ಹೊರೆ’ ಎನಿಸುವಂತಿತ್ತು. ಲೈಸೆನ್ಸ್ ಶುಲ್ಕ ತೆರುವಷ್ಟು ಲಾಭ ಕಂಪೆನಿಗಳಿಗೆ ಬರಲಿಲ್ಲ. ತಕರಾರು ಆರಂಭಿಸಿದವು. ಸಹಿ ಹಾಕಿದ್ದ ಕರಾರು ಮುರಿದವು. ಕೊನೆಗೆ ಸರ್ಕಾರ ಮಣಿದು ಕಂಪನಿಗಳಿಸುವ ಆದಾಯವನ್ನು ನಿರ್ದಿಷ್ಟ ಪ್ರಮಾಣದಲ್ಲಿ ಹಂಚಿಕೊಳ್ಳುವ ವಿಧಾನದ ಲೈಸೆನ್ಸ್ ಶುಲ್ಕವನ್ನು ೧೯೯೯ರಲ್ಲಿ ವಿಧಿಸತೊಡಗಿತು. ತಂತ್ರಜ್ಞಾನ, ಉಪಕರಣ, ಕರೆಗಳ ಮೇಲಿನ ಶುಲ್ಕ ಎಲ್ಲ ಕಡಿಮೆಯಾದವು. ಇವುಗಳ ಒಟ್ಟು ಪರಿಣಾಮ ಎಂದರೆ ಸೆಲಪೋನ್ ಸೌಲಭ್ಯ ಅಗ್ಗವಾಗತೊಡಗಿತು.

ತಿಂಗಳಿಗೆ ೩೦೦ ರೂಪಾಯಿ ಕೊಟ್ಟರೆ ಮುಂಚೆಯೇ ನಿರ್ದಿಷ್ಟ ಅವಧಿಯ ಪೋನ್ ಕರೆಗಳಿಗೆ ಆಗುವ ಮೊತ್ತಕ್ಕೆ ಕಾರ್ಡ ಕೊಂಡರೆ ಎಲ್ಲಿಂದ ಎಲ್ಲಿಗೆ ಬೇಕಾದರೂ ಪೋನ್ ಮಾಡಬಲ್ಲದು ಕೈಲಿರುವ ಉಪಕರಣ.

ಇದಕ್ಕಿಂತ ಹೆಚ್ಚಾಗಿ ಯಾವುದೇ ಒಂದು ಮೊಬೈಲ್ ಉಪಕರಣಕ್ಕೆ ಇನ್ನೊಂದರಿಂದ ಕಳುಹಿಸಬಹುದಾದ ಪುಟ್ಟ ಪದಗಳ ಎಸ್.ಎಮ್.ಎಸ್. ಸಂದೇಶಗಳು ಟೆಲಿಕಾಂ ಕ್ರಾಂತಿಯ ಅತ್ಯಂತ ರೋಚಕ ಅಂಶ. ನಿರ್ಲಕ್ಷಿಸಬಹುದಾದಷ್ಟು ಸಣ್ಣ ಮೊತ್ತಕ್ಕೆ ದೇಶದಿಂದ ದೇಶಕ್ಕೆ ಎಸ್.ಎಮ್.ಎಸ್. ಸಂದೇಶಗಳು ಟೆಲಿಕಾಂ ಕ್ರಾಂತಿಯ ಅತ್ಯಂತ ರೋಚಕ ಅಂಶ. ನಿರ್ಲಕ್ಷಿಸಬಹುದಾದಷ್ಟು ಸಣ್ಣ ಮೊತ್ತಕ್ಕೆ ದೇಶದಿಂದ ದೇಶಕ್ಕೆ ಎಸ್.ಎಮ್.ಎಸ್. ಸಂದೇಶ ಕಳುಹಿಸುತ್ತೇವೆ.

ಇಷ್ಟೆಲ್ಲ ಬೆಳವಣಿಗೆ ಆದ ಮೇಲೂ ಟೆಲಿಕಾಂ ರಂಗದಲ್ಲಿ ಭಾರೀ ತುಮುಲವೆದ್ದಿದೆ. ಸರ್ಕಾರಿ ವಲಯದ ಬಿ.ಎಸ್.ಎನ್. ಮತ್ತು ಎಂ.ಟಿ.ಎನ್.ಎಲ್. ಇವು ಸರ್ಕಾರಕ್ಕೇ ಸೇರಿದ ಕಂಪನಿಗಳಾದ್ದರಿಂದ ಬೊಕ್ಕಸಕ್ಕೆ ಹೆಚ್ಚು ಹಣ ತೆರುವುದಿಲ್ಲ. ಲೈಸನ್ಸ್ ಶುಲ್ಕ ಮತ್ತಿತರ ರೂಪದಲ್ಲಿ ಖಾಸಗಿ ವಲಯದ (ವಿದೇಶಿ ಮೂಲದ) ಸೆಲಪೊನ್ ಕಂಪೆನಿಗಳು ತೆರುವುದು ಹೆಚ್ಚು. ಸರ್ಕಾರಿ ವಲಯ ಕಂಪೆನಿ ಸೌಲಭ್ಯ ಪಡೆದ ಗ್ರಾಹಕರ ಪೋನಗೆ ಖಾಸಗಿ ಕಂಪೆನಿ ಕಡೆಯಿಂದ ಬಂದ ಪ್ರತಿಪೋನ್ ಕರೆಗೆ ರೂ. ೧.೨೦ ಪ್ರಕಾರ ಸಂಪರ್ಕ ಶುಲ್ಕ ತೆರಬೇಕು. ಆದರೆ ಖಾಸಗಿ ಪೋನಗೆ ಸರ್ಕಾರಿ ವಲಯ ಕಂಪನಿ ಗ್ರಾಹಕನ ಕಡೆಯಿಂದ ಕರೆ ಬಂದರೆ ಅಂಥ ಸಂಪರ್ಕ ಶುಲ್ಕ ಇರುವುದಿಲ್ಲ. ಇದು ಅನ್ಯಾಯ ಎಂದು ವಿದೇಶಿ ಮೂಲದ ಖಾಸಗಿ ಕಂಪೆನಿಗಳು ವಾದಿಸುತ್ತಿವೆ.

ಇದೀಗ ಟಾಟಾ ರಿಲಯನ್ಸ್ ಮುಂತಾದ ಕಂಪೆನಿಗಳು ಅಗ್ಗದ ದರದಲ್ಲಿ ಸ್ಥಳೀಯವಾಗಿ ಸೀಮಿತವಾದ ಪೋನ್ ಕರೆ ಸೌಲಭ್ಯ ಒದಗಿಸಲು ಲೈಸನ್ಸ್ ಪಡೆದಿದ್ದವು. ಈ ಬಗೆಯ ದೇಶಿ ಕಂಪೆನಿಗಳು ಮೊದಲಿಗೆ ಮೊಬೈಲ್ ಉಪಕರಣಗಳ ಬಳಕಗೆ ಲಗತ್ತಾದಂತೆ ಒದಗಿಸುವ ಸ್ಥಿತಿಯಲ್ಲಿ ಇರಲಿಲ್ಲ. ಅಂದರೆ ನೆಲಹಾಸು ತಂತಿಗಳ ಮೂಲಕ ಲ್ಯಾಂಡಲೈನ್ ಪೋನಗಳ ಸೇವೆ ಮಾತ್ರ ಪೂರೈಸುವ ಉದ್ದೇಶ ಹೊಂದಿದ್ದವು. ೧೯೯೬ರಿಂದ ಅದೇ ಪರಿಸ್ಥಿತಿ ಇದ್ದರೂ ಕ್ರಮೇಣ ತಂತ್ರಜ್ಞಾನದ ಲಾಭ ಪಡೆದು ನಿಸ್ತಂತು ಮೊಬೈಲ್ ಪೋನ್ ಉಪಕರಣಕ್ಕೂ ಸಂಪರ್ಕ ಕೊಡುವ ಮಟ್ಟಕ್ಕೆ ೨೦೦೨ರ ಹೊತ್ತಿಗೆ ಬಂದವು. ಮುಖ್ಯವಾಗಿ ವಿವಿಧ ದೇಶಿ ಕಂಪನಿಗಳು ಆಯ್ದ ನಗರಗಳಲ್ಲಿ ಮತ್ತು ಗ್ರಾಮ ಪ್ರದೇಶಗಳಲ್ಲಿ ಬೇರೂರಲು ಆರಂಭಿಸಿವೆ. ಮೊಬೈಲ್ ಸೇವೆಯನ್ನು ಟಾಟಾ ಕಂಪೆನಿ ಆರಂಭಿಸಿದೆ. ರಿಲಯನ್ಸ್ ತುದಿಗಾಲಲ್ಲಿ ನಿಂತಿದೆ. ಕರೆ ಶುಲ್ಕ ಅಗ್ಗವಾಗುತ್ತಿದೆ.

ಆದರೆ ಬೃಹತ್ತಾಗಿ ಬೆಳೆಯುತ್ತಿರುವ ವಿದೇಶಿ ಮೂಲ ಕಂಪೆನಿಗಳು (ಏರಟೆಲ್, ಸ್ಪೈಸ್ ಇತ್ಯಾದಿ ಬ್ರ್ಯಾಂಡ್ ಹೊತ್ತವು) ಇವುಗಳ ಚಂದಾದಾರರು ಮೊಬೈಲ್ ಮೂಲಕ ತಲುಪಲು ಬಿಡುತ್ತಿಲ್ಲ. ವಿವಾದ ನಡೆದಿದೆ. ಈ ಪತ್ರಿಕೆ ಓದುಗರ ಕೈ ಸೇರುವ ಹೊತ್ತಿಗೆ ವಿವಾದ ಹಾಗೆಯೇ ಇರಲಿಕ್ಕೂ ಸಾಕು. ಇಲ್ಲವೇ ದೊಡ್ಡ ಕಂಪೆನಿಗಳು ಮಣಿದು ಸಣ್ಣವುಗಳ ಚಂದಾದಾರರ ಜೊತೆ ಸಂಪರ್ಕಕ್ಕೆ ಒಪ್ಪಿರಲಿಕ್ಕೂ ಸಾಕು. ಒಪ್ಪಿರದಿದ್ದರೆ ಒಪ್ಪದೇ ವಿಧಿ ಇರದು.

ತಪ್ಪಿದರೆ ವಿವಾದ ಬಹಳ ಕಾಲ ಮುಂದುವರೆದರೆ ನಿಯಂತ್ರಣ ಪ್ರಾಧಿಕಾರ ’ಟ್ರಾಯ್’ ಹೊಣೆ ಹೊತ್ತು ಗ್ರಾಹಕನ ನೆರವಿಗೆ ಬರಬೇಕಾಗುತ್ತದೆ. ಎಲ್ಲಿಂದ ಎಲ್ಲಿಗೆ ಬೇಕಾದರೂ, ಯಾವ ಕಂಪೆನಿಯ ಚಂದಾದಾರ ಆಗಿದ್ದರೂ ಸಂಪರ್ಕ ಸಿಗುವಂತಿರಬೇಕು. ಅದೇ ಬಳಕೆದಾರ ಹಿತ. ಇದಲ್ಲೆ ಬದ್ಧವಾಗದ ಯಾವ ಕಂಪನಿಗೂ ಕೆಲಸ ಮಾಡಲು ಬಿಡಬಾರದು. ತಂತ್ರಜ್ಞಾನ ಬೇರೆ ಬೇರೆ ಇರುವುದು ತಕರಾರಿಗೆ ಕಾರಣವಾಗಬಾರದು.

ಯಾವುದೇ ಕಂಪೆನಿಯ ಜಗಳ ಏನಿದ್ದರೂ ಸರ್ಕಾರದ ಜೊತೆ, ಟ್ರಾಯ್ ಜೊತೆ, ಮಾತ್ರವೇ ಹೊರತು ಕಂಪೆನಿ ಕಂಪೆನಿಗಳ ನಡುವೆ ಇರಕೂಡದು. ಆಗಲೇ ಬಳಕೆದಾರ ಫಲಾವುಭವಿ ಆಗಬಲ್ಲ.

೨೨-೦೧-೨೦೦೩