ಚೆನ್ನಾಗಿ ನಡೆಯುತ್ತಿರವಾಗ ನಾಲ್ಕು ಕಾಸು ಕೂಡಿಡಬೇಕು. ಇದು ಸದಾ ಕಾಲಕ್ಕೂ ಅನ್ವಯಿಸುವ ಮಾತು.

ಆದರೆ ಪಾಶ್ಚಾತ್ಯ ಪ್ರಧಾನ ಜನಜೀವನ ಇರುವ ಕಡೆಯೆಲ್ಲ ಜನರು ನಂಬುವ ಸಿದ್ಧಾಂತವೇ ಬೇರೆ ಗಳಿಸಿದ್ದನ್ನು ಖರ್ಚು ಮಾಡಿ ಸುಖಪಡು ಎಂಬುದು.

ಆರ್ಥಿಕ ಸುಧಾರಣಾ ಕ್ರಮಗಳ ಹೆಸರಿನಲ್ಲಿ ಭಾರತದಲ್ಲಿ ಇದೇ ಧೋರಣೆಯನ್ನು ಪೋಷಿಸುತ್ತಾರೇನೋ ಎಂದೆನಿಸುತ್ತದೆ.

ಒಂದು ಕಡೆ ಖರೀದಿ ಸಾಮರ್ಥ್ಯವೇ ಇಲ್ಲದೆ ಬಡವರು ಮತ್ತು ಕೆಳ ಮಧ್ಯಮ ವರ್ಗದವರು ಪರಿತಪಿಸುತ್ತಿದ್ದಾರೆ. ಸಾಕು ಸಾಕಾದಷ್ಟು ಸರಕುಗಳೂ ಸೌಲಭ್ಯಗಳೂ ಧಂಡಿಯಾಗಿ ಲಭಿಸುತ್ತಿದೆ. ಆದರೆ ಅದಕ್ಕಾಗಿ ವ್ಯಯ ಮಾಡಲು ಹಣ ಇಲ್ಲ. ಅದೇ ವೇಳೆ ಮೇಲ್ಮಧ್ಯಮ ಮತ್ತು ಶ್ರೀಮಂತ ವರ್ಗಗಳಿಗೆ ಸೇರಿದ ಜನರಲ್ಲಿ ಉಳಿಸಬಹುದಾದಷ್ಟು ವರಮಾನವಿದ್ದರೆ ಉಳಿಸಲು ಪ್ರೋತ್ಸಾಹವಿಲ್ಲ. ಉಳಿಸಿದ ಹಣವನ್ನು ಇಡುವುದಾದರೂ ಎಲ್ಲಿ? ಮಡಿಕೆಯಲ್ಲಿಟ್ಟು ನೆಲದಲ್ಲಿ ಹೂತಿಡುವ ಕಾಲ ಇದಲ್ಲ.

ವಾಸ್ತವವಾಗಿ ಇದ್ದುದರಲ್ಲಿ ಸ್ವಲ್ಪ ಉಳಿಸುವ ಜಾಯಮಾನ ಭಾರತದ ಎಲ್ಲ ವರ್ಗದ ಜನರಲ್ಲೂ ಇದೆ. ಕಷ್ಟಕಾಲಕ್ಕೆಂದು ಒಂದಿಷ್ಟು ಚಿನ್ನವಾದರೂ ಖರೀದಿ ಮಾಡಿ ಇಡುವ ಪ್ರವೃತ್ತಿ ಅವರದ್ದು. ಪ್ರತಿಯೊಬ್ಬರಲ್ಲೂ ಸ್ವಂತಕ್ಕೆ ಒಂದು ಸೂರು ಮಾಡಿಕೊಳ್ಳುವ ಹಂಬಲ ಇರುತ್ತದೆ. ಕಷ್ಟಕಾಲಕ್ಕೆಂದು ವಿಮೆ ಕಂತು ಕಟ್ಟುತ್ತಾರೆ. ಷರುಗಳಲ್ಲಿ ಹಣ ತೊಡಗಿಸುತ್ತಾರೆ.

ಯಾವುದೇ ರೂಪದಲ್ಲಿ ಉಳಿತಾಯ ಮಾಡಿದರೂ ಕಾಲಕ್ರಮೇಣ ಸಂಪತ್ತು ತಾನಾಗಿ ವೃದ್ಧಿಗೊಳ್ಳಬೇಕು ಎಂದು ಜನ ಸಹಜವಾಗಿ ಬಯಸುತ್ತಾರೆ. ಅದು ಸಾಧ್ಯವಾಗದೇ ಇದ್ದಲ್ಲಿ ಸ್ವಾರಸ್ಯ ಕಡಿಮೆ.

ಈಚೆಗೆ ಚಿನ್ನದ ಬೆಲೆ ಏರುತ್ತಿಲ್ಲ. ಒಡವೆ ಮಾಡಿಸಿಕೊಂಡು ಧರಿಸುವಾಗ ಆನಂದ ಪಡುವುದಕ್ಕೆಂದು ಮಾತ್ರ ಚಿನ್ನ ಖರೀದಿಸಬಹುದೇ ಹೊರತು ಹಣ ಕೂಡಿಡುವುದಕ್ಕಲ್ಲ. ಅದೇ ರೀತಿ ಮನೆಮಾರು ಸಹಾ ಸ್ವಂತ ಭೋಗಕ್ಕೆ ಬೇಕೇ ಹೊರತು ಹಣ ವೃದ್ಧಿಗೆ ನೆರವಾಗುವಂಥದಲ್ಲ. ವಿಮೆ ವ್ಯಾಪಾರ ಬಹಳ ತೇಜಿ ಎಂದು ಭಾವಿಸಿ ವಿದೇಶಿ ಮೂಲದ ಕಂಪನಿಗಳು ಭಾರತಕ್ಕೆ ಲಗ್ಗೆ ಇಟ್ಟಿವೆ. ಭಾರತದ ಹಣಕಾಸು ಸಂಸ್ಥೆಗಳ ಜೊತೆಗೂಡಿ ನಾನಾ ಬಗೆಯ ಪಾಲಿಸಿಗಳನ್ನು ರೂಪಿಸಿವೆ. ಆದರೆ ಜನಕ್ಕೆ ಅವುಗಳಲ್ಲಿ ನಂಬಿಕೆಯೇ ಬರುತ್ತಿಲ್ಲ. ಷೇರುಗಳಲ್ಲಿ ಹಣ ತೊಡಗಿಸಿದವರು ಕೈಸುಟ್ಟುಕೊಂಡಿದ್ದೇ ಅಧಿಕ.

ಇದನ್ನೆಲ್ಲ ನೋಡಿದಾಗ ಹಣ ಉಳಿಸಿ ಜೋಪಾನ ಮಾಡುವುದಕ್ಕೆ ಬ್ಯಾಂಕ್‌ನಲ್ಲಿ ಠೇವಣಿ ಇಡುವುದಷ್ಟೇ ಅತ್ಯಂತ ಸುರಕ್ಷಿತ ಮಾರ್ಗ ಎನಿಸದಿರದು. ಆದರೆ ಜಾಗತೀಕರಣದ ಅಂಗವಾಗಿ ಬಡ್ಡಿ ದರಗಳನ್ನು ಒಂದೇ ಸಮನೆ ಇಳಿಸುತ್ತಿದ್ದಾರೆ. ಮೊನ್ನೆ ಸಹಾ ರಿಸರ್ವ್‌ ಬ್ಯಾಂಕ್‌ ಬಡ್ಡಿದರವನ್ನೂ ಇನ್ನೂ ಸ್ವಲ್ಪ ಕೆಳಕ್ಕೆ ತಂದಿತು. ಬಡ್ಡಿ ದುಡಿಯದ ಹಣ ಇಟ್ಟುಕೊಂಡು ಏನು ಮಾಡುವುದು ಖರ್ಚು ಮಾಡಿ ಬಿಡುವುದೇ ಯುಕ್ತ ಎಂದು ಭಾವಿಸುವಂತಾಗಿದೆ.

ಠೇವಣಿಗಳು ತರುವ ಬಡ್ಡಿ ಹಣವನ್ನೇ ನೆಚ್ಚಿಕೊಂಡಿರುವ ನಿವೃತ್ತರು ಮುಂತಾದವರ ಪಾಡು ಹೇಳತೀರದು.

ಇದರ ನಡುವೆಯೂ ಈಚಿನ ವರ್ಷಗಳಲ್ಲಿ ಮ್ಯೂಚುವಲ್‌ ಫಂಡ್‌ಗಳು ಆಕರ್ಷಕವಾಗಿ ಕಂಡಿದ್ದುಂಟು. ೧೯೬೩ರಲ್ಲಿ ಕೇಂದ್ರ ಸರ್ಕಾರವು ಕಾನೂನು ಮಾಡಿ ಯುಎಸ್‌ ೬೪ ಎಂಬ ಫಂಡ್‌ ಯೋಜನೆಯನ್ನು ಮರುವರ್ಷದಿಂದ ಸ್ಥಾಪಿಸಲು ಅವಕಾಶ ಮಾಡಿಕೊಟ್ಟಿತು. ಖಾಸಗಿ ವಲಯ ಹಣಕಾಸು ಸಂಸ್ಥೆಗಳು ಅಂಥ ಫಂಡ್‌ ಯೋಜನೆಯನ್ನು ಸ್ಥಾಪಿಸಲು ಸುಮಾರು ೨೫ ವರ್ಷವೇ ಹಿಡಿಯಿತು. ಆದರೆ ಯುಎಸ್‌ ೬೪ನಲ್ಲಿ ಹಣ ತೊಡಗಿಸುವುದು ನಷ್ಟಕಾರಿ ಎಂದು ಜನರು ಭಾವಿಸತೊಡಗಿದಾಗ ಒಟ್ಟಾರ ಮ್ಯೂಚುವಲ್‌ ಫಂಡ್‌ಗಳ ಬಗೆಗೆ ಭ್ರಮನಿರಸನ ಆಯಿತೆಂಬುದು ನಿಜ.

ಫಂಡ್‌ಗಳ ಧ್ಯೇಯೋದ್ದೇಶವೇ ಕುತೂಹಲಕಾರಿ. ಚಿನ್ನದ ಬೆಲೆ, ಷೇರುಪೇಟೆ, ಸ್ಥಿರಾಸ್ತಿ ಬೆಲೆ, ಬಡ್ಡಿ ದರ ಮುಂತಾದವೆಲ್ಲ ದೇಶದ ಸ್ಥಿತಿಗತಿ ಮತ್ತು ವಿಶ್ವದ ಆಗುಹೋಗುಗಳನ್ನು ಅವಲಂಬಿಸಿದ್ದು. ಹೀಗೆ ಹೊರಗಿನ ಸ್ಥಿತ್ಯಂತರಗಳು ಬಿಡಿ ವ್ಯಕ್ತಿಯ ಉಳಿತಾಯ ಹಣದ ಗಿಟ್ಟುಪಾಡನ್ನು ನಿರ್ಧರಿಸುತ್ತದೆ.

ಪರಿಸ್ಥಿತಿ ಹೀಗಿದ್ದರೂ ತೊಡಗಿಸಿದ ಹಣವು ಒಳ್ಳೆಯ ರೀತಿಯಲ್ಲಿ ‘ದುಡಿಯು’ವಂತಾಗಲು ಏನು ಮಾಡಬೇಕು? ಈ ಪ್ರಶ್ನೆಗೆ ಉತ್ತರ ಎನ್ನುವಂತೆ ಮೂಡಿದ್ದು ಫಂಡ್‌ಗಳ ವಿದ್ಯಮಾನ.

ಸಾಮಾನ್ಯವಾಗಿ ಷೇರು ಮಾತ್ರವಲ್ಲದೆ ಬಾಂಡು ಡಿಬೆಂಚರು ಮುಂತಾದ ಪತ್ರಗಳಲ್ಲಿ ಹಣ ಹೂಡಬಹುದು. ಫಂಡ್‌ಗಳನ್ನು ನಡೆಸುವವರು ಇಂಥ ಪತ್ರಗಳನ್ನು ಕೊಂಡು ಗುಡ್ಡೆ ಹಾಕುತ್ತಾರೆ. ಈ ಫಂಡ್‌ ನಿರ್ಮಿಸಲು, ಅಂದರೆ ಉಳಿತಾಯದ ಹಣ ಸಂಗ್ರಹಿಸಲು, ರೂಪಿಸಿದ ಯೋಜನೆಯಲ್ಲಿ ಪಾಲ್ಗೊಳ್ಳಲು ಜನರಿಗೆ ಆಹ್ವಾನ ನೀಡುತ್ತಾರೆ. ಯುಎಸ್‌ ೬೪ ಸಹಾ ಇಂಥದೇ ಒಂದು ಯೋಜನೆಯಾಗಿತ್ತು.

ಜನರು ಇದರಲ್ಲಿ ಹಣ ತೊಡಗಿಸಬಹುದು. ಹಾಗೆ ಒಟ್ಟುಗೂಡಿಸಿದ ಮ್ಯುಚುವಲ್ ಫಂಡ್‌ ಯೋಜನೆಯಲ್ಲಿ, ಸಂಗ್ರಹಿಸಿದ ಹಣದಿಂದ ನಾನಾ ಬಗೆಯ ಉಳಿತಾಯ ಪತ್ರಗಳನ್ನು ಖರೀದಿಸಿ ಇಟ್ಟುಕೊಳ್ಳುತ್ತಾರೆ. ಷೇರು ಪೇಟೆಯ ಏರಿಳಿತಗಳನ್ನು ಅನುಸರಿಸಿ ಒಂದು ಯೋಜನೆಯಲ್ಲಿ ಕೂಡಿಸಿ ಇಟ್ಟ ಪತ್ರಗಳ ಮೊತ್ತ, ಅಂದರೆ ಆಸ್ತಿಮೌಲ್ಯ, ಏರುಪೇರಾಗುತ್ತಾ ಇರುತ್ತದೆ. ಕೆಲವು ಷೇರುಗಳ ಬೆಲೆ ಏರಬಹುದು; ಮತ್ತೆ ಕೆಲವು ಷೇರುಗಳ ಬೆಲೆ ಇಳಿಯಬಹುದು. ಬುದ್ಧಿವಂತಿಕೆಯಿಂದ ಲೆಕ್ಕ ಹಾಕಿ ಸರಿಯಾದ ರೀತಿಯಲ್ಲಿ ಹಣ ತೊಡಗಿಸಿದರೆ ನಷ್ಟವಾಗುವುದೇ ಇಲ್ಲ ಎನ್ನುವಂತೆ ಮಾಡಬಹುದು. ಅಷ್ಟೇ ಅಲ್ಲ; ಒಂದು ಯೋಜನೆಯಲ್ಲಿ ಕೂಡಿಸಿಟ್ಟ ಒಟ್ಟಾರೆ ಆಸ್ತಿ ಮೊತ್ತ ಎನ್‌ಎವಿ ಸದಾಕಾಲ ಏರುತ್ತಲೇ ಇರುವಂತೆ ನೋಡಿಕೊಳ್ಳಬಹುದು. ಹಾಗೆ ಏರುತ್ತಲೇ ಇದ್ದರೆ, ಠೇವಣಿಯು ಬಡ್ಡಿಯನ್ನು ದುಡಿಯುವಂತೆ ಹುಟ್ಟುವಳಿ ದುಡಿಯಬಹುದು. ಅಷ್ಟು ಮಾತ್ರವಲ್ಲ; ಸಂಗ್ರಹಿಸಿಟ್ಟ ಉಳಿತಾಯ ಪತ್ರಗಳನ್ನು (ಷೇರು ಪತ್ರಗಳನ್ನು ಸಹಾ)ಕೊಳ್ಳುತ್ತಾ ಮಾರುತ್ತಾ ಇದ್ದರೆ ಎನ್‌ಎವಿ ಇಳಿಯುವುದೇ ಇಲ್ಲ ಎನ್ನುವಂತೆ ಮಾಡಬಹುದು. ಸಣ್ಣ ಹೂಡಿಕೆದಾರನೊಬ್ಬ ಸ್ವತಃ ಷೇರುಗಳನ್ನು ಕೊಳ್ಳುತ್ತಾ ಮಾರುತ್ತಾ ತನ್ನಲ್ಲಿರುವ ಹಣವನ್ನು ವೃದ್ಧಿಸಿಕೊಳ್ಳಬಹುದು. ಅದೇ ಕಾರ್ಯವನ್ನು ಫಂಡ್‌ಗಳವರು ಮಾಡುತ್ತಾರೆ.

ಅದಕ್ಕಾಗಿ ಬೇಕಾಗುವ ತಜ್ಞರನ್ನು ನೇಮಿಸಿಕೊಳ್ಳುತ್ತಾರೆ. ಆ ತಜ್ಞರೂ, ಫಂಡ್‌ ಮ್ಯಾನೇಜರುಗಳೂ ವಿಫಲರಾಗುವುದುಂಟು. ಅನಿರೀಕ್ಷಿತ ಬೆಳವಣಿಗೆಗಳೂ ಆಗಬಹುದು. ಆದರೆ ಯಶಸ್ವಿಯಾಗಿ ನಡೆದ ಫಂಡ್‌ ಯೋಜನೆಗಳೂ ಇಲ್ಲದಿಲ್ಲ.

ಯೂನಿಟ್‌ ಟ್ರಸ್ಟ್‌ನಲ್ಲಿ ಬಂಡವಾಳದ ಯೂನಿಟ್‌ಗಳಲ್ಲಿ ಹಣ ತೊಡಗಿಸುವ ಪರಿಕಲ್ಪನೆಯನ್ನು ಸಾಕಾರಗೊಳಿಸಿದ ಆಗಿನ ಅರ್ಥ ಸಚಿವ ಟಿ.ಟಿ. ಕೃಷ್ಣಮಾಚಾರಿ ಅವರು ‘ಬಿಡಿ ಹೂಡಿಕೆದಾರರಿಗೆ, ಅದರಲ್ಲೂ ಯಾರ ಬಳಿ ಅತಿ ಸಣ್ಣ ಮೊತ್ತ ಉಳಿತಾಯ ಹಣ ಇದೆಯೋ ಅಂಥವರ ಅನುಕೂಲಕ್ಕೆ ಯುಟಿಐ’ ಎಂದಿದ್ದರು.

ಕಾಲ ಶತಮಾನಕಾಲ ಯುಟಿಐ ವಿಜೃಂಭಿಸಿದ ನಂತರ ನೆಲೆಯೂರಿದ ಬೇರೆ ಬೇರೆ ಕಂಪನಿಗಳ, ಬ್ಯಾಂಕುಗಳ ಫಂಡ್‌ಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದರೂ ಜನರಿಗೆ ಪೂರ್ತಿ ವಿಶ್ವಾಸ ಮೂಡಿಲ್ಲ ಎಂಬುದು ನಿಜ.

ಯೂನಿಟ್‌ ಟ್ರಸ್ಟ್‌ ಆಫ್‌ ಇಂಡಿಯಾ ಎರಡು ಕೋಟಿಗೂ ಅಧಿಕ ಹೂಡಿಕೆದಾರರಿಂದ ವಿವಿಧ ಯೋಜನೆಗಳ ಮೂಲಕ ಸಂಗ್ರಹಿಸಿರುವ ನಿಧಿ ೭೦ ಸಹಸ್ರ ಕೋಟಿ ರೂಪಾಯಿಗೂ ಅಧಿಕವಿದೆ. ಯುಟಿಐ ಜೊತೆಗೆ ಇನ್ನು ೩೪ ಬ್ಯಾಂಕುಗಳು ಖಾಸಗಿ ಹಣಕಾಸು ಸಂಸ್ಥೆಗಳೂ ಫಂಡ್‌ ಯೋಜನೆಗಳನ್ನು ರೂಪಿಸಿವೆ. ಒಟ್ಟಾರೆ ಉಳಿತಾಯ ಹಣ ಯುಟಿಐ ಸೇರಿ ಸಂಗ್ರಹವಾಗಿರುವುದು ೧೦೦ ಸಹಸ್ರ ಕೋಟಿ ರೂಪಾಯಿ ಮೀರುತ್ತದೆ. ಇದರಲ್ಲಿ ವಿದೇಶಿ ಸಂಸ್ಥೆಗಳ ಸಹಯೋಗ ಹೊಂದಿರುವ ಖಾಸಗಿ ಕಂಪನಿಗಳ ಫಂಡ್‌ಗಳಲ್ಲಿರುವ ೨೦ ಸಹಸ್ರ ಕೋಟಿ ರೂಪಾಯಿ ಎನ್‌ಎವಿ ಸಹ ಸೇರಿದೆ.

ಮ್ಯೂಚುವಲ್‌ ಫಂಡ್‌ಗಳು ವಾಸ್ತವವಾಗಿ ದಿಢೀರ್‌ ಬೆಳೆಯಬೇಕಾದ ವೇಳೆಯಲ್ಲೇ (ಅಂದರೆ ಬಡ್ಡಿ ದರಗಳು ಇಳಿಯತೊಡಗಿದ ಕಾಲದಲ್ಲೇ) ಹೂಡಿಕೆದಾರರಿಗೆ ಷಾಕ್‌ ಕೊಟ್ಟಿತು. ಯೂನಿಟ್‌ ಟ್ರಸ್ಟ್‌ನ ಅತಿ ವಿಶ್ವಾಸಾರ್ಹ ಹಾಗೂ ಆದ್ಯ ಪ್ರವರ್ತಕ ಯೋಜನೆ ಎನಿಸಿದ ಯುಎಸ್‌ ೬೪ ಕಳೆದ ವರ್ಷ ನೆಲ ಕಚ್ಚಿತು. ಅದರ ಎನ್‌ಎವಿ ಕೆಳಕ್ಕಿಳಿಯಿತು. ಯೂನಿಟ್‌ನ ಬೆಲೆಯು ಅದರ ಮುಖ ಬೆಲೆಗಿಂತ ಕೆಳಕ್ಕಿಳಿಯಿತು. ಕಣ್ಣು ಮುಚ್ಚಿಕೊಂಡು ಯೂನಿಟ್‌ಗಳಲ್ಲಿ ಹಣ ತೊಡಗಿಸುತ್ತಿದ್ದವರು ಕಣ್ಣು ಕಣ್ಣು ಬಿಡುವಂತಾಯಿತು.

ಷೇರುಪೇಟೆಗಳು ಕುಸಿದಿದ್ದು ಮಾತ್ರವೇ ಕಾರಣವಲ್ಲ. ಕೇಂದ್ರ ಅರ್ಥ ಸಚಿವರು, ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಮತ್ತು ಷೇರು ವಿನಿಮಯ ಕೇಂದ್ರ ‘ಸೆಬಿ’ಯ ಮುಖ್ಯಸ್ಥ ಇವರು ಮೂವರು ಜವಾಬ್ದಾರಿಯಿಂದ ವರ್ತಿಸಲಿಲ್ಲ ಎಂದು ಹೂಡಿಕೆದಾರರು ಭಾವಿಸುವಂತೆ ಆಯಿತು. ಈಚೆಗೆ ಯೂನಿಟ್‌ಗಳನ್ನು ವಾಪಸು ಕೊಟ್ಟು ಹಣ ಮರಳಿ ಪಡೆಯುವ ಆತುರ ತೋರಿದ ಹೂಡಿಕೆದಾರರಿಗೆ ತೀವ್ರ ನಿರಾಶೆ ಆಗಿದ್ದೆಂದರೆ, ಯೂನಿಟ್‌ಗಳ ಮಾರಾಟಕ್ಕೆ ನಿಷೇಧ ಒಡ್ಡಿದಾಗ. ಕೊನೆಗೂ ವಿವಾದವನ್ನು ಅಂತ್ಯಗೊಳಿಸಲು ಕೇಂದ್ರ ಸರ್ಕಾರವು ಯುಟಿಐ ಅನ್ನು ಎರಡಾಗಿ ಒಡೆದಿಡುವ ನಿರ್ಧಾರಕ್ಕೆ ಬಂದಿದೆ.

ಎನ್‌ಎವಿಗಳನ್ನು ಆಧರಿಸಿದ ಯೋಜನೆಗಳನ್ನೆಲ್ಲ ಮಾಡಿ ಸೆಬಿ ಅಡಿ ಕಾರ್ಯ ನಿರ್ವಹಿಸುವಂತೆ ಮಾಡುವುದು; ಆದರೆ ಎನ್‌ಎವಿ ಗೋಜಿಲ್ಲದ (ಅಂದರೆ ಷೇರು ಬೆಲೆಗಳಿಗೆ ಲಗತ್ತಾಗದ) ಉಳಿತಾಯ ಯೋಜನೆಗಳನ್ನು ಸರ್ಕಾರಿ ಅಂಕೆಯಲ್ಲೇ ಯುಟಿಐ ಅಡಿ ಇರಿಸಿಕೊಳ್ಳುವುದು. ಇದರಿಂದ ಹೂಡಿಕೆದಾರರಿಗೆ ಎಷ್ಟು ತೃಪ್ತಿಯಾಗುತ್ತದೆ ಎನ್ನುವುದು ಖಚಿತವಲ್ಲ. ಯುಟಿಐ ತನ್ನ ಪಾಲಿಗೆ ಸಮಸ್ಯೆಯಾಗಿ ಪರಿಣಮಿಸಿದ ತನ್ನದೇ ಆದ ಒಂದು ಆವಯವವನ್ನು ತುಂಡರಿಸಿ ಸೆಬಿ ಅಡಿಗೆ ದೂಡಿ ಕೈ ತೊಳೆದುಕೊಂಡಿತು ಎಂಬುದು ವಾಸ್ತವಾಂಶ. ಪೂಜೆಗಿಟ್ಟ ಕಲಶ ಒಡೆದುಹೋಗಿ ಅಮೂಲ್ಯ ನಿಧಿ ಭೂಮಿ ಪಾಲು ಆಗುತ್ತಿದೆ ಎಂದರೆ ಹೂಡಿಕೆದಾರನಿಗೆ ಆಗುವ ಗಾಬರಿ ಕಡಿಮೆಯೇ?

ಇದೇ ಯುಎಸ್‌ ೬೪ ಯೋಜನೆಯಡಿ ಆರಂಭದಲ್ಲಿ ಒಂದು ವರ್ಷ ಹೂಡಿಕೆದಾರರಿಗೆ ಶೇ. ೨೬ ಡಿವಿಡೆಂಡ್‌ ನೀಡಿದ್ದರು! ಈಚೆಗೆ ೨೦೦೦ ಇಸ್ವಿಯಲ್ಲಿ ಡಿವಿಡೆಂಡ್‌ ಶೇ. ೧೦ಕ್ಕೆ ಇಳಿಯಿತು. ಆದರೆ ಇಡೀ ಆರ್ಥಿಕತೆ ತತ್ತರಿಸುವಂತೆ ಆದಾಗ ಯುಟಿಐ ತಾನೇ ಏನು ಮಾಡಬಲ್ಲದು?

ಒಳ್ಳೆಯ ದಿನಗಳು ಮಾತ್ರ ಬಂದಾಗ ಮ್ಯುಚುವಲ್‌ ಫಂಡ್‌ಗಳ ಸಣ್ಣ ಹೂಡಿಕೆದಾರರ ವಿಶ್ವಾಸ ಗಳಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ. ೨೪.೧೨.೨೦೦೩