‘ಒಂದು ರೂಪಾಯಿಗೆ ಏನು ಮಹಾ ಬರುತ್ತದೆ?’ ನಿಜ. ಭಿಕ್ಷೆ ಬೇಡುವವರು ಸಹ ಒಂದು ರೂಪಾಯಿ ಕೇಳುತ್ತಾರೆ. ಚಿಲ್ಲರೆ ನಾಣ್ಯ ಕೇಳುವುದಿಲ್ಲ. ಐದು ಪೈಸೆ, ಹತ್ತು ಪೈಸೆ ನಾಣ್ಯಗಳಿಗೆ ಬೆಲೆಯೇ ಇಲ್ಲ.

ಹೀಗೆ ಮಾತ್ರವಲ್ಲದೆ ನಾನಾ ರೀತಿಯಲ್ಲಿ ರೂಪಾಯಿ ಬಗೆಗೆ ಮೂಗೆಳೆಯುತ್ತಿದ್ದವರು ಸಹ ಈಗ ಸುಮ್ಮನಾಗಿದ್ದಾರೆ. ವಿಶ್ವರಂಗದಲ್ಲಿ ರೂಪಾಯಿನ ಕಿಮ್ಮತ್ತು ಏರಿದೆ.

ವಿಶ್ವಕ್ಕೆಲ್ಲ ದೊಡ್ಡಣ್ಣ ಎನಿಸಿಕೊಳ್ಳಲು ಕಾತರಿಸುವ ಅಮೆರಿಕದ ಕರೆನ್ಸಿಯಾದ ಡಾಲರ್‌ ಈತನಕ ಒಂದು ಅಳತೆಗೋಲು. ಯಾವ ದೇಶದ ಕರೆನ್ಸಿಯೇ ಆದರೂ ಒಂದು ಡಾಲರ್‌ಗೆ ಎಷ್ಟು ತೂಗುತ್ತದೆ ಎಂದೇ ಲೆಕ್ಕ ಹಾಕುತ್ತಾರೆ. ಈ ತನಕ ಈ ಬಗೆಯ ಲೆಕ್ಕಾಚಾರಕ್ಕೆ ಧಕ್ಕೆ ಬಂದಿಲ್ಲ. ಆ ರೀತಿಯಲ್ಲಿ ಲೆಕ್ಕ ಹಾಕಿದರೂ ರೂಪಾಯಿ ಮೌಲ್ಯ ಏರುತ್ತದೆ. ಸತತವಾಗಿ ಏರುತ್ತಿದೆ.

ಡಾಲರ್‌ಗಳಲ್ಲಿ ನಮೂದಾದ ಯಾವುದೇ ದೊಡ್ಡ ಮೊತ್ತವನ್ನು ರೂಪಾಯಿಗಳಲ್ಲಿ ಅರ್ಥಮಾಡಿಕೊಳ್ಳಲು ಐವತ್ತರಿಂದ ಗುಣಿಸಿಬಿಡುತ್ತಿದ್ದೆವು. ಸ್ಥೂಲವಾಗಿ ಒಂದು ಡಾಲರ್‌ಗೆ ಐವತ್ತು ರೂಪಾಯಿ ಎಂದೇ ಲೆಕ್ಕಾಚಾರ. ಆದರೀಗ ನಲವತ್ತೈದು ಆಗಿದೆ.

ಡಾಲರ್‌ನ ರೂಪಾಯಿ ವಿನಿಮಯ ದರ ಇನ್ನೂ ೪೫ಕ್ಕೆ ಬಂದಿಲ್ಲ. ಆದರೆ ಕೆಲವೇ ದಿನಗಳಲ್ಲಿ ಅದು ೪೫ ಸಹ ದಾಟಬಹುದು. ಅಂದರೆ ಬರಿದೆ ೪೫ ರೂಪಾಯಿಗೆ ಒಂದು ಡಾಲರ್‌, ವಾರಾಂತ್ಯದಲ್ಲಿ ದರವು ರೂ. ೪೫.೫೦ ಆಗಿತ್ತು.

ಡಾಲರ್‌ ಮಾತ್ರವಲ್ಲ; ವಿಶ್ವದ ಯಾವುದೇ ಪ್ರಮುಖ ಕರೆನ್ಸಿ ತೆಗೆದುಕೊಂಡರೂ ರೂಪಾಯಿ ಸತತವಾಗಿ ಹೆಚ್ಚು ಹೆಚ್ಚು ಬೆಲೆ ಪಡೆದುಕೊಳ್ಳುತ್ತಿದೆ. ಏಕೀಕೃತ ಯೂರೋಪಿನ ಯೂರೋ ಮಾತ್ರವೇ ಭಾರತದ ರೂಪಾಯಿಗಿಂತ ಹೆಚ್ಚು ದೃಢವಾಗಿರುವುದು.

ಈ ಆಸುಪಾಸಿನ ಯಾವುದೇ ದಿನದ ದರಗಳನ್ನು ಹಿಂದಿನ ವರ್ಷದ ಅದೇ ದಿನದ ದರಗಳಿಗೆ ಹೋಲಿಸಿದಾಗ ಡಾಲರ್‌ ಅನ್ವಯ ರೂಪಾಯಿ ಬೆಲೆ ಶೇ. ೫ ಏರಿರುವುದು ಗೊತ್ತಾಗುತ್ತದೆ.

ದಶಕಗಳ ಪರ್ಯಂತ ವಿನಿಮಯ ದರ ಏರಿಳಿಯದೆ ಸಮತೋಲ ಕಾಪಾಡಿಕೊಂಡ ವಿಶ್ವದ ಏಕೈಕ ಕರೆನ್ಸಿ ಎಂದರೆ ಜಪಾನಿನ ಯೆನ್‌. ಅದರ ಅನ್ವಯ ರೂಪಾಯಿ ಏರಿಕೆ ಕಂಡಿದ್ದು ಶೇ. ೭.೬. ಭಾರತದವರಿಗೆ ಬ್ರಿಟನ್ನಿನ ಪೌಂಡ್‌ ಎಂದರೆ ಅಮೆರಿಕದ ಡಾಲರ್‌ನಷ್ಟೇ ಗೌರವ. ಅದಕ್ಕೆ ಚರಿತ್ರೆಯೇ ಕಾರಣ. ಅಂಥ ಪೌಂಡ್‌ ಅನ್ವಯ ಸಹ ರೂಪಾಯಿಯು ಶೇ. ೩.೭ರಷ್ಟು ಬಲಗೊಂಡಿದೆ. ಈಚೆಗೆ ವಿಶ್ವದ ಸರ್ವಮಾನ್ಯ ಕರೆನ್ಸಿ ಎನಿಸಿಕೊಂಡ ಯೂರೋ ಅನ್ವಯ ಮಾತ್ರ ರೂಪಾಯಿಯು ಒಂದು ವರ್ಷದಲ್ಲಿ ಶೇ. ೫ ದುರ್ಬಲಗೊಂಡಿದೆ.

ಭಾರತೀಯರಿಗೆ ರೂಪಾಯಿ ಬೆಲೆ ಕಳೆದುಕೊಳ್ಳುತ್ತಿದೆ ಎಂದೇ ದಶಕಗಳ ಪರ್ಯಂತ ಚಿಂತೆ ಮಾಡಿ ರೂಢಿ. ರೂಪಾಯಿನ ಅಪಮೌಲ್ಯ ಅಥವಾ ಮೌಲ್ಯಚ್ಛೇದ ಎಂಬ ದುಃಸ್ವಪ್ನ ಆಗಾಗ ಕಾಡಿದೆ. ವಿದೇಶಗಳ ಒತ್ತಡ ರಾಜಕೀಯ ಕಾರಣ ಮುಂತಾದ ರೀತಿಯಲ್ಲಿ ರೂಪಾಯಿ ಮೌಲ್ಯಚ್ಛೇದವನ್ನು ವಿಶ್ಲೇಷಿಸುತ್ತಿದ್ದುಂಟು. ಹಾಗೆ ವಿನಿಮಯ ದರವನ್ನು ನಿಗದಿಪಡಿಸುತ್ತಿದ್ದುದು ಹಳೆಯ ಮಾತು. ವಿಶ್ವದ ನಾನಾ ಕರೆನ್ಸಿಗಳ ಅನ್ವಯ ರೂಪಾಯಿಯನ್ನು ಸಹ ತೇಲಿಬಿಡಲಾಗಿದೆ. ಅಂದರೆ ನಿತ್ಯ ರೂಪಾಯಿ ತನ್ನ ಬೆಲೆಯನ್ನು ತಾನೇ ಕಂಡುಕೊಳ್ಳುತ್ತದೆ. ಅದೇ ಈಗಿನ ವ್ಯವಸ್ಥೆ. ಬಹುತೇಕ ಎಲ್ಲ ರಾಷ್ಟರಗಳಲ್ಲೂ ಅದೇ ಈಗಿನ ರೂಢಿ. ನಿತ್ಯ ಮೌಲ್ಯಚ್ಛೇದ. ಇಲ್ಲದೇ ಮೌಲ್ಯವರ್ಧನೆ.

ದೇಶದ ಆರ್ಥಿಕ ದಾರ್ಢ್ಯ ಹೆಚ್ಚುತ್ತಾ ಹೋದಂತೆಲ್ಲ ರೂಪಾಯಿ ಬೆಲೆ ಏರುತ್ತಾ ಹೋಗುತ್ತದೆ. ಇನ್ನೊಂದು ದೇಶದ ಕರೆನ್ಸಿಗೆ ಸರಿಸಮನಾಗಿ ಕೊಡಬೇಕಾಗುವ ರೂಪಾಯಿ ಮೊತ್ತ ಕಡಿಮೆಯಾಗುತ್ತಾ ಹೋಗುತ್ತದೆ.

ರೂಪಾಯಿ ಬೆಲೆಯಲ್ಲಿ ಏನೇ ವ್ಯತ್ಯಾಸವಾದರೂ ಆಮದು ರಫ್ತು ಮೊತ್ತ ವ್ಯತ್ಯಾಸವಾಗುತ್ತಾ ಹೋಗುತ್ತದೆ. ರೂಪಾಯಿ ಬಲಗೊಂಡಂತೆಲ್ಲ ಆಮದು ಮಾಡಿಕೊಳ್ಳುವ ರಕು ಅಥವಾ ಸೇವಾ ಸೌಲಭ್ಯಕ್ಕೆ ತೆರಬೇಕಾಗುವ ಹಣ ಕಡಿಮೆಯಾಗುತ್ತದೆ. ಅಂದರೆ ಬಳಕೆದಾರನ ಪಾಲಿಗೆ ಆಮದು ಅಗ್ಗವಾಗುತ್ತದೆ. ಇಲ್ಲಿನ ಸರಕು ಸೇವೆ ಇವನ್ನು ರಫ್ತು ಮಾಡಿದಾಗ ಕೈಗೆ ಹತ್ತುವ ರೂಪಾಯಿ ಹಣ ಕಡಿಮೆಯಾಗುತ್ತದೆ.

ಒಂದು ಉದಾಹರಣೆ: ರೂಪಾಯಿ ಮೌಲ್ಯವರ್ಧನೆ ಕಾರಣ ಈಗ ಭಾರತವು ಹತ್ತಾರು ಲಕ್ಷ ಸಂಖ್ಯೆಯಲ್ಲಿ ಕೊಳ್ಳುತ್ತಿರುವ ಸೆಲ್‌ಫೋನ್‌ ಉಪಕರಣ ಅಗ್ಗವಾಗುತ್ತಿದೆ. ಅದೇ ರೀತಿ ಆಮದು ಮಾಡಿಕೊಳ್ಳುತ್ತಿರುವ ಪೆಟ್ರೋಲಿಯಂ ಕಚ್ಚಾ ತೈಲಕ್ಕೆ ಸಂದಾಯ ಮಾಡುವ ಹಣ ರೂಪಾಯಿ ಲೆಕ್ಕದಲ್ಲಿ ಕಡಿಮೆ ಆಗುತ್ತಿದೆ.

ಅದೇ ರೀತಿ ಭಾರತವು ಮುಖ್ಯವಾಗಿ ರಫ್ತು ಮಾಡುತ್ತಿರುವ ಸಾಫ್ಟ್‌ವೇರ್‌ ತರುವ ರೂಪಾಯಿ ಹಣದ ಮೊತ್ತ ಕಡಿಮೆಯಾಗುತ್ತದೆ.

ಒಬ್ಬ ಮನುಷ್ಯನ ಬಳಿ ಕೈನಿಂದ ಖರ್ಚು ಮಾಡಲು ಎಷ್ಟು ಹಣ ಲಭ್ಯವಿದೆ ಅರ್ಥಾತ್‌ ಖರ್ಚುಮಾಡಬಲ್ಲಂತ ಹಣ ಎಷ್ಟಿದೆ ಎಂಬುದರಿಂದ ಆತನ ಹೆಚ್ಚುಗಾರಿಕೆ ಅಳೆಯುತ್ತಾರೆ. ಅದೇ ರೀತಿ ಭಾರತದಲ್ಲಿ ಎಷ್ಟು ಮಾತ್ರ ವಿದೇಶಿ ವಿನಿಮಯ ಸಂಗ್ರಹ ಲಭ್ಯವಿದೆ ಎಂಬುದರಿಂದ ರೂಪಾಯಿನ ಮೌಲ್ಯ ನಿರ್ಧಾರವಾಗುತ್ತದೆ. ಭಾರತದ ಬಳಿ ಜಮೆ ಆಗಿರುವ ವಿನಿಮಯ ಸಂಗ್ರಹ ಸತತವಾಗಿ ಹೆಚ್ಚಾಗುತ್ತಿದೆ. ಅದೇ ಈಗಿನ ಸುಸ್ಥಿತಿ.

ಸದ್ಯ ವಿನಿಮಯ ಸಂಗ್ರಹ ೮೫ ಬಿಲಿಯನ್‌ ಡಾಲರ್‌ ದಾಟಿದೆ. (ಬಿಲಿಯನ್‌ ಎಂದರೆ ಶತಕೋಟಿ, ಡಾಲರ್‌ ಎಂದರೆ ಸದ್ಯಕ್ಕೆ ರೂ. ೪೫.೫೦) ಇದು ಇನ್ನು ಕೆಲವೇ ದಿನಗಳಲ್ಲಿ ೯೦ ಬಿಲಿಯನ್‌ ಆಗಲಿದೆ ಎಂಬುದು ಬಹುಪಾಲು ಖಚಿತ. ಮುಂದಿನ ಮಾರ್ಚ್‌ ಅಂತ್ಯಕ್ಕೆ ಮುಂಚೆಯೇ ವಿದೇಶಿ ವಿನಿಮಯ ಸಂಗ್ರಹವು ೧೦೦ ಬಿಲಿಯನ್ ಗೆರೆ ದಾಟುತ್ತದೆ ಎಂಬುದಕ್ಕೆ ದಟ್ಟ ನಿರೀಕ್ಷೆ.

ಆರ್ಥಿಕ ಸುಧಾರಣಾ ಕ್ರಮಗಳನ್ನು ಜಾರಿ ಮಾಡಿದ ೧೯೯೧ರಲ್ಲಿ ಭಾರತದ ಬಳಿ ಇದ್ದ ವಿನಿಮಯ ಸಂಗ್ರಹ ಕೇವಲ ೫೦೮ ಬಿಲಿಯನ್‌ ಡಾಲರ್‌. ೯೭ ರಲ್ಲಿ ಅದು ೨೪ ಬಿಲಿಯನ್‌ ಆಗಿತ್ತು. ೨೦೦೩ರ ಮಾರ್ಚ್‌ನಲ್ಲಿ ೭೪.೮ ಬಿಲಿಯನ್‌ ಹಾಗೂ ದರ ಮುಂದಿನ ತಿಂಗಳು ೭೭ ಬಿಲಿಯನ್‌ಗೆ ಏರಿತು. ಜುಲೈ ಮಧ್ಯಭಾಗದಲ್ಲಿ ೮೨.೭ ಬಿಲಿಯನ್‌.

ನಿಜವಾಗಿ ನಿಬ್ಬೆರಗಾಗುವಂತೆ ಮಾಡಿದ ವಿದ್ಯಮಾನ ಈ ಗ್ರಹ ಏರಿಕೆ.

ವಿನಿಮಯ ಸಂಗ್ರಹ ಎಂಬುದು ಆರ್ಥಿಕ ಸಾಮರ್ಥ್ಯವನ್ನೇ ಬಿಂಬಿಸಿದರೂ ಅಷ್ಟೂ ಹಣವು ರಫ್ತಿನಿಂದ ಗಳಿಸಿದ್ದಲ್ಲ. ಅನ್ಯ ದೇಶೀಯರು ಅಥವಾ ಅನಿವಾಸಿ ಭಾರತೀಯರು ಬಂಡವಾಳ ರೂಪದಲ್ಲಿ, ಠೇವಣಿ ರೂಪದಲ್ಲಿ ಭಾರತದೊಳಕ್ಕೆ ತಂದ ಹಣವೂ ಇದರಲ್ಲಿ ಸೇರಿರುತ್ತದೆ. ಏನೇ ಆದರೂ ಇದು ದೇಶದ ದಾರ್ಢ್ಯಕ್ಕೆ ಸೂಚಿಯೇ ಸರಿ. ನಂಬಿಕೆ ಇಲ್ಲದ ಕಡೆ ಯಾರೂ ಹಣವನ್ನು ತಂದಿಡುವುದಿಲ್ಲ.

ಭಾರತದಲ್ಲಿ ಕಂಪನಿಗಳ ಆರ್ಥಿಕ ಸ್ಥಿತಿ ಸುಧಾರಿಸಿದೆ. ರಫ್ತು ವೃದ್ಧಿಯಾಗುತ್ತಿದೆ. ಭಾರತದಿಂದ ಅನ್ಯ ದೇಶಗಳಿಗೆ ಉದ್ಯೋಗ ಅರಸಿ ಹೋದವರು ಅಲ್ಲಿಂದೆಲ್ಲ ತಮ್ಮ ಗಳಿಕೆಯ ಒಂದು ಪಾಲು ಹಣವನ್ನು ಆಯಾ ದೇಶದ ಕರೆನ್ಸಿಯಲ್ಲಿ ಕಳುಹಿಸುತ್ತಾರೆ. ಭಾರತದ ಬಂಡವಾಳ ಪೇಟೆಗಳಿಗೆ ಮುಖ್ಯವಾಗಿ ಕಂಪನಿಗಳ ಷೇರುಗಳಿಗೆ ವಿದೇಶಿ ಹಣಕಾಸು ಸಂಸ್ಥೆಗಳು ನಾನಾ ಕರೆನ್ಸಿಗಳ ರೂಪದಲ್ಲಿ ಹಣ ಪೂರೈಸುತ್ತಿವೆ. ಈಚೆಗೆ ಪರಮಾಯಿಷಿ ಎನಿಸಿದ ವಿದೇಶಿ ನೇರ ಬಂಡವಾಳ ಸಹ ದೇಶದೊಳಕ್ಕೆ ಬರುವುದು ಹೆಚ್ಚಾಗುತ್ತಿದೆ.

ದೇಶದೊಳಕ್ಕೆ ಬಂದು ಸಂಚಯಗೊಳ್ಳುತ್ತಿರುವ ವಿದೇಶಿ ವಿನಿಮಯವು ಅಮೆರಿಕನ್‌ ಡಾಲರ್‌ಗಳ ರೂಪದಲ್ಲಿ ಮಾತ್ರವೇ ಇಲ್ಲ. ಎಲ್ಲ ಕರೆನ್ಸಿಗಳೂ ಇರುತ್ತವೆ. ಸದ್ಯ ಶೇ. ೩೦ ಭಾಗ ಯೂರೋಗಳಲ್ಲಿದೆ.

ವಿನಿಮಯ ಭಂಡಾರ ಇದ್ದಕ್ಕಿದ್ದಂತೆ ಹೆಚ್ಚಲು ಕಾರಣವಾದರೂ ಏನು?

ಭಾರತದಲ್ಲಿ ಬಡ್ಡಿ ದರಗಳನ್ನು ಏಕಪ್ರಕಾರವಾಗಿ ಇಳಿಸುವ ವಾಡಿಕೆ ಹೊಸದಾಗಿ ಏನಿದೆಯೋ, ಅದು ವಾಸ್ತವವಾಗಿ ವಿಶ್ವ ವಿದ್ಯಮಾನ. ಅಮೆರಿಕ ಮತ್ತಿರ ಕಡೆ ಬಡ್ಡಿದರ ಇಳಿತ ಭಾರತಕ್ಕಿಂತ ಅಧಿಕ. ಈ ಕಾರಣದಿಂದ ಮತ್ತು ಇನ್ನಿತರ ಬ್ಯಾಂಕಿಂಗ್ ವಲಯದ ವಾಡಿಕೆಗಳಿಂದಾಗಿ ವಿದೇಶದಲ್ಲಿ ಇರುವವರಿಗೆ, ಮುಖ್ಯವಾಗಿ ಅನಿವಾಸಿ ಭಾರತೀಯರಿಗೆ ಭಾರತದಲ್ಲಿ ಹಣವನ್ನು ತಂದಿಡುವುದು ಲಾಭದಾಯಕವಾಗಿ ಪರಿಣಮಿಸಿದೆ. ಕೆಲವೊಮ್ಮೆ ಅನಿವಾಸಿ ಭಾರತೀಯರು ಅಗ್ಗದ ಬಡ್ಡಿ ದರದಲ್ಲಿ ಹಣ ಸಂಗ್ರಹಿಸಿ, ಅಧಿಕವಾಗಿಟಟಿರುತ್ತದೆ ಎನ್ನುವ ಕಾರಣದಿಂದ ಭಾರತದೊಳಕ್ಕೆ ತರುತ್ತಾರೆ. ಷೇರುಪೇಟೆಗಳಲ್ಲಿ ಹಣ ಹೂಡಲು ಮಾರಿಷಸ್‌ನಂಥ ಅನುಕೂಲಕರ ದೇಶದೊಳಕ್ಕೆ ಭಾರತ ಮೂಲಗಳಿಂದಲೇ ಹಣ ಸಾಗಿಸಿ, ಅಲ್ಲಿಂದ ಪುನಃ ಹೆಬ್ಬಾಗಿಲಿನ ಮೂಲಕ ಭಾರತಕ್ಕೆ ಬಂಡವಾಳ ತರುತ್ತಾರೆ. ಈಚೆಗೆ ಇಂಥ ಕ್ರಮಗಳ ವಿರುದ್ಧ ಕೇಂದ್ರ ಸರ್ಕಾರ ನಿರ್ಬಂಧಿತ ಕ್ರಮಗಳನ್ನು ಜಾರಿಗೆ ತಂದಿತು.

ಸದ್ಯ ಬಹಳವಾಗಿ ಚರ್ಚೆಗೆ ಬಂದಿರುವ ವಿಚಾರ ಎಂದರೆ, ರೂಪಾಯಿ ಬಲಗೊಂಡಿದ್ದರಿಂದ ರಫ್ತುದಾರರಿಗೆ ಅನುಕೂಲ ತಪ್ಪುತ್ತದೆ ಎನ್ನುವುದು. ರೂಪಾಯಿ ಮೌಲ್ಯವರ್ಧನೆ ಆದಾಗ ಮುಂಚಿಗಿಂತ ಹೆಚ್ಚು ಪ್ರಮಾಣದಲ್ಲಿ ವಿದೇಶಿ ವಿನಿಮಯ ದೇಶದ ಒಳಗೆ ಹರಿದು ಬರುತ್ತದೆ. (ರೂಪಾಯಿ ಮೌಲ್ಯ ಹಾಗೇ ಇದ್ದಿದ್ದರೆ ಒಳಕ್ಕೆ ಬರುತ್ತಿದ್ದ ವಿನಿಮಯಕ್ಕಿಂತ ಹೆಚ್ಚು). ಈ ಹೆಚ್ಚುವರಿ ಸಂಪನ್ಮೂಲವನ್ನು ರಫ್ತುದಾರರು ಹಾಗೂ ಇತರ ಉದ್ಯಮದವರಿಗೆ ಬೇಕಾದ ರಸ್ತೆ, ವಿದ್ಯುತ್‌, ಸಂಪರ್ಕ ಮತ್ತಿತರ ಮೂಲ ಸೌಲಭ್ಯ ಸೃಷ್ಟಿಗಾಗಿ ಬಳಸಲು ಶಕ್ಯವಾಗುತ್ತದೆ. ಅದೇ ವೇಳೆ ರಫ್ತುದಾರರಿಗೆ ಅನಗತ್ಯವಾಗಿ ನೀಡುವ ಸಬ್ಸಿಡಿ, ರಿಯಾಯ್ತಿ, ವಿನಾಯ್ತಿಗಳನ್ನು ಕಡಿಮೆ ಮಾಡಬಹುದು. ವಿಶ್ವವಾಣಿಜ್ಯ ಸಂಸ್ಥೆಯು ಇವನ್ನು ಕಡಿಮೆ ಮಾಡಬೇಕೆಂದು ಹೇಳುತ್ತಲೇ ಬಂದಿದೆ.

ಕೆಲವು ರಫ್ತು ಬಾಬುಗಳಲ್ಲಿ ಕಚ್ಚಾ ಸಾಮಗ್ರಿ ಮುಂತಾದುವನ್ನು ವಿಫುಲವಾಗಿ ಆಮದು ಮಾಡಿಕೊಳ್ಳುವುದು ವಾಡಿಕೆ. ರೂಪಾಯಿ ಬಲವರ್ಧನೆಯಿಂದ ಆಮದು ಅಗ್ಗವಾಗುವುದರಿಂದ ಅಂಥ ಬಾಬಿನ ರಫ್ತುದಾರರಿಗೆ ಅನುಕೂಲವೇ ಹೌದು. ಏಕೆಂದರೆ ಅವರ ಅಸಲು ವೆಚ್ಚ ಕಡಿಮೆ ಆಗುತ್ತದೆ. ಹೆಚ್ಚುತ್ತಿರುವ ವಿನಿಮಯ ಸಂಗ್ರಹವು ಹಲವು ಬಗೆಯ ತೊಡಕುಗಳನ್ನು ಸೃಷ್ಟಿಸುತ್ತಿದೆ. ವಿನಿಮಯ ಹಣ ವ್ಯತ್ಯಾಸವಾದರೂ ವಿನಿಮಯ ವಹಿವಾಟಿನಲ್ಲಿ ಕೋಟಿಗಟ್ಟಲೆ ಹಣವು ವ್ಯವಹಾರಸ್ಥನ ಕೈ ಸೇರುತ್ತದೆ, ಇಲ್ಲವೇ ಕೈಜಾರುತ್ತದೆ. ವ್ಯವಹಾರವೇ ಅಷ್ಟೊಂದು ಸೂಕ್ಷ್ಮ. ರಫ್ತಿನ ಮೇಲಿನ ಪರಿಣಾಮವೂ ಗಂಭೀರ. ಅನುಕೂಲ ಅನಾನುಕೂಲಗಳನ್ನು ಏನೇ ಪಟ್ಟಿ ಮಾಡಿದರೂ ಹೊರದೇಶಗಳ ಪೈಪೋಟಿಯು ರಫ್ತು ಆಮದು ರಂಗದ ಮೇಲೆ ದುಷ್ಪರಿಣಾಮ ಬೀರಲು ಅವಕಾಶ ಕೊಡಬಾರದು.

ಈ ಎರಡೂ ಕಾರಣಗಳಿಂದ ವಿನಿಮಯ ಪೇಟೆಯಲ್ಲಿ ವಿಪರೀತ ಏರುಪೇರು ಆಗುವುದಕ್ಕೆ ಅವಕಾಶ ಕೊಡಬಾರದು. ಆ ಕಾರಣದಿಂದ ದೇಶದೊಳಕ್ಕೆ ಹರಿದು ಬರುವ ವಿನಿಮಯ ಹಣವನ್ನು ರಿಸರ್ವ್‌ ಬ್ಯಾಂಕು ತನ್ನ ಭಂಡಾರಕ್ಕೆ ಸೇರಿಸಿಕೊಳ್ಳುತ್ತಾ ಹೋಗುತ್ತದೆ. ವಿನಿಮಯ ದರ ಹಾಗೂ ತತ್ಪರಿಣಾಮವಾಗಿ ರೂಪಾಯಿ ಮೌಲ್ಯ ನಿಯಂತ್ರಿಸಲು ನಿತ್ಯ ಕ್ರಮ ಕೈಗೊಳ್ಳುತ್ತದೆ. (ತನ್ನ ಕರೆನ್ಸಿ ಸಮತೋಲ ಸಾಧಿಸುವಂತೆ ಪ್ರತಿಯೊಂದು ದೇಶವೂ ಇಂಥ ಕ್ರಮ ಕೈಗೊಳ್ಳುವುದುಂಟು) ಏರುಪೇರು ತಡೆಯಲು ವಿನಿಮಯ ಹಣವನ್ನು ಖರೀದಿಸುತ್ತದೆ. ಇಲ್ಲವೇ ಪೇಟೆಗೆ ಬಿಡುಗಡೆ ಮಾಡುತ್ತದೆ. ಇಲ್ಲಿಯೇ ರಿಸರ್ವ್‌ ಬ್ಯಾಂಕಿನ ಕಾರ್ಯಕ್ಷಮತೆ ವ್ಯಕ್ತವಾಗುತ್ತಿರುವುದು.

ವಿನಿಮಯ ಸಂಗ್ರಹವು ೧೦೦ ಬಿಲಿಯನ್‌ ಮಟ್ಟಕ್ಕೆ ಏರುತ್ತಿರುವ ಸದ್ಯದ ಕಾಲ ಘಟ್ಟದಲ್ಲಿ ಎದ್ದಿರುವ ಪ್ರಶ್ನೆ ಎಂದರೆ ಭಾರತವು ಕ್ಷೇಮವಾಗಿ ಎಷ್ಟು ವಿನಿಮಯ ಹಣವನ್ನು ಗುಡ್ಡೆ ಹಾಕಿ ಇಟ್ಟುಕೊಳ್ಳಬಹುದು? ಎಂಬುದು. ನಿಜ, ಸಮೃದ್ಧಿಯೂ ಸಮಸ್ಯೆಯಾಗಬಲ್ಲದು.

ಹಣವನ್ನು ಏನು ಮಾಡಬೇಕು? ಖರ್ಚು ಮಾಡಿಬಿಡಲು ಸಾಧ್ಯವಾಗದು. ಸದ್ಯ ಸಂಗ್ರಹವಾಗಿರುವ ವಿದೇಶಿ ವಿನಿಮಯದಲ್ಲಿ ಗಳಿಸಿದ್ದೂ ಇದೆ. ಬಂಡವಾಳವಾಗಿ ಸಂಗ್ರಹಿಸಿದ್ದೂ ಇದೆ. ಬಂಡವಾಳವಾಗಿ ಬಂದ ಹಣವು ಹೂಡಿಕೆಯಾಗಬೇಕೇ ಹೊರತು ಅಭಿವೃದ್ಧಿ ಕಾರ್ಯಗಳ ನೆಪದಲ್ಲಿ ಸಹ ಖರ್ಚಾಗಿ ಬಿಡಬಾರದು. ಬಂಡವಾಳ ಹಣವನ್ನು ತಕ್ಷಣವೇ ತೊಡಗಿಸಲು ಸಾಧ್ಯವಾಗುವುದಿಲ್ಲ ಕೂಡಾ.

ಆದ್ದರಿಂದ ವಿನಿಮಯ ಸಂಗ್ರಹ ವಿಪರೀತವಾಗಿ ಬೆಳೆಯಲು ಅವಕಾಶ ಕೊಡಬಾರದು ಎಂದೇ ತಜ್ಞರು ಹೇಳುತ್ತಾರೆ. ೬೫ ರಿಂದ ೭೦ ಬಿಲಿಯನ್‌ ಡಾಲರ್‌ ‌ಮಟ್ಟಕ್ಕೆ ಮೀರಿದರೆ ಸದ್ಯದ ಪರಿಸ್ಥಿತಿಯಲ್ಲಿ ಆ ಹಣ ನಿರುತ್ಪಾದಕ ಆಗುತ್ತದೆ ಎಂಬುದು ಒಂದು ನಿಲುವು.

ವಿನಿಮಯ ಸಂಗ್ರಹ ಪರಿಸ್ಥಿತಿ ಚೆನ್ನಾಗಿರುವುದರಿಂದ ಕೇಂದ್ರ ಸರ್ಕಾರವು ತಾನು ಮಾಡಿರುವ ಸಾಲವನ್ನು ಅವಧಿಗೆ ಮುಂಚೆಯೇ ತೀರಿಸಲು ಮುಂದಾಗಿದೆ. ಒಳ್ಳೆಯ ಕೆಲಸವೇ ಸರಿ. ಆದರೆ ಹಾಗೆ ಮಾಡಬೇಕಾದರೆ ಒಪ್ಪಂದದಲ್ಲಿ ಹೇಳಿರುವಂತೆ ಕೆಲವು ಬಗೆಯ ದಂಡ ತೆರಬೇಕಾಗುತ್ತದೆ.

ಖಾಸಗಿ ಉದ್ಯಮಿಗಳು ತಾವು ಮಾಡಿರುವ ವಿದೇಶಿ ಸಾಲ ತೀರಿಸಲು ವಿನಿಮಯ ಹಣ ಒದಗಿಸುವುದಾಗಿ ಸಹ ಕೇಂದ್ರ ತಿಳಿಸಿದೆ. ಸಾಲ ತಿರಿಸಲು ವಿನಿಮಯ ಹಣ ಒದಗಿಸುವುದಾಗಿ ಸಹ ಕೇಂದ್ರ ತಿಳಿಸಿದೆ.

ಸಾಲ ತೀರಿಸುವ ಕ್ರಮಗಳು ಸಹ ಅನೇಕ ಪ್ರಕರಣಗಳಲ್ಲಿ ಉತ್ಪಾದಕ ಎನಿಸುವುದಿಲ್ಲ ಎನ್ನುವುದು ವಾಸ್ತವಾಂಶ. ಸದ್ಯ ಭಾರತವು ತನ್ನ ಬಳಿ ಸಂಗ್ರಹವಾದ ವಿದೇಶಿ ವಿನಿಮಯ ಹಣದ ಶೇ. ೩೫ ಭಾಗವನ್ನು ಬಡ್ಡಿಗೆ ಇಟ್ಟಿದೆ. ಇದು ಆರೋಗ್ಯಕರವಾದ ಕ್ರಮವೇನೂ ಅಲ್ಲ.   ೦೧. ೧೦. ೨೦೦೩