ಜಾನ ಪೆನಿಂಗ್ ಎಂಬ ಅರ್ಥತಜ್ಞ ಹಣ ಹೂಡಿಕೆ ಮತ್ತು ಅಭಿವೃದ್ಧಿ ಬಗೆಗೆ ಸುಂದರವಾಗಿ ಬರೆದಿದ್ದಾನೆ.

ಅತಿ ಬಡ ರಾಷ್ಟ್ರಗಳ ಬಳಿ ಇನ್ನೆಲ್ಲೋ ಹಣ ಹೂಡುವ ಚೈತನ್ಯ ಇರುವುದಿಲ್ಲ ಮಾತ್ರವಲ್ಲ; ವಿದೇಶಿ ಬಂಡವಾಳ ಆಕರ್ಷಿಸುವುದಕ್ಕೂ ಸಾಧ್ಯವಾಗುವುದಿಲ್ಲ. ತಮ್ಮ ದೇಶದ ನೈಸರ್ಗಿಕ ಸಂಪನ್ಮೂಲವನ್ನು ಆಧರಿಸಿ ಬದುಕುತ್ತವೆ.

ಅವರ ದೇಶ ಅಭಿವೃದ್ಧಿಗೊಂಡಂತೆ ಜನರ ಖರೀದಿ ಸಾಮರ್ಥ್ಯ ಹೆಚ್ಚುತ್ತದೆ. ಆಂತರಿಕ ಮಾರುಕಟ್ಟೆ ಬೆಳೆಯುತ್ತದೆ. ಅನಂತರ ಹೊರದೇಶಗಳವರು ಸರಕು ಮತ್ತು ಸೇವಾ ಸೌಲಭ್ಯಗಳನ್ನು ಈ ಮಾರುಕಟ್ಟೆಗೆ ಪೂರೈಸಲು ಹಾತೊರೆಯುವಂತಾಗುತ್ತದೆ. ಬಹುರಾಷ್ಟ್ರೀಯ ಕಂಪೆನಿಗಳು ಕಾಲಿಡುತ್ತವೆ. ದೇಶಿ, ವಿದೇಶಿ ಪೂರೈಕೆದಾರರು ಈ ಮಾರುಕಟ್ಟೆಯನ್ನು ಹಂಚಿಕೊಳ್ಳುತ್ತಾರೆ.

ಹೊರದೇಶದವರ ಜೊತೆ ಪಾಲುದಾರಿಕೆ ಹೀಗೆ ಬೆಳೆದ ಮೇಲೆ,ಅಲ್ಲಿನ ಬಳಕೆಗಾಗಿ ಸರಕು ಇಲ್ಲಿ ತಯಾರಾಗುವುದು. ಇಲ್ಲಿಗಾಗಿ ಅಲ್ಲಿ ತಯಾರಿಕೆ ನಡೆಯುವುದು ಮಾಮೂಲಾಗಿ ಅನುಕೂಲಸ್ಥ ಎನಿಸಿಕೊಳ್ಳದ ರಾಷ್ಟ್ರ ಸಹಾ ಬಲಿಷ್ಟ ರಾಷ್ಟ್ರಗಳಲ್ಲಿ ಹಣ ತೊಡಗಿಸುವಂತೆ ಆಗುತ್ತದೆ.

ಪಾಲುದಾರಿಕೆ ಮತ್ತು ಸಹಭಾಗಿತ್ವ ಲಾಭಕಾರಿಯಾಗಿ ಪರಿಣಮಿಸಿದಂತೆಲ್ಲ ದೇಶದಿಂದ ಹೊರಕ್ಕೆ ಹೋಗುವ ಬಂಡವಾಳವೇ ಹೆಚ್ಚಾಗಿ ಒಳಕ್ಕೆ ಬರುವ ಬಂಡವಾಳವೇ ಕಡಿಮೆ ಎನಿಸುತ್ತದೆ.

ಕಡೆಯ ಹಂತವೆಂದರೆ ಒಳಕ್ಕೆ ಬರುವ ಬಂಡವಾಳ ಹಾಗೂ ಹೊರಗೆ ಹೂಡುವ ಬಂಡವಾಳ ಸಮತೋಲ ಸಾಧಿಸುತ್ತವೆ. ಒಮ್ಮೆ ಇವರದು ಮೇಲುಗೈ ಒಮ್ಮೆ ಅವರದು ಮೇಲುಗೈ ಎನ್ನುವಂತಾಗುತ್ತದೆ.

ಐದೇ ವರ್ಷದ ಹಿಂದೆ ಸಹಾ ಈ ವೃತ್ತಾಂತವನ್ನು ಓದಿ ಆಸ್ವಾದಿಸುವ ಸ್ಥಿತಿಯಲ್ಲಿ ಭಾರತೀಯರು ಇರಲಿಲ್ಲ.ಆದರೆ ಈಗ ವಿದೇಶಿ ವಿನಿಮಯ ಭಂಡಾರ ತುಂಬಿ ತುಳುಕುತ್ತಿದೆ. ೧೦೦ ಬಿಲಿಯನ್ ಡಾಲರಗಿಂತ ಹೆಚ್ಚಾದ ಹಣ ನಮ್ಮ ಸಂಗ್ರಹದಲ್ಲಿದೆ. ಆ ಹಣವನ್ನು ಏನು ಮಾಡುವುದು ಎಂದು ಚಿಂತಿಸುವಂತಾಗಿದೆ. ಈ ಸನ್ನಿವೇಶದಲ್ಲಿ ನಾವು ನಿಂತಿರುವ ನೆಲೆ ಎಂಥದೆಂದು ಲೆಕ್ಕ ಹಾಕುವುದು ಅನಿವಾರ್ಯ.

ಭಾರತದಲ್ಲಿರುವ ಆಂತರಿಕ ಬಹಳ ದೊಡ್ಡದು. ಬಹುರಾಷ್ಟ್ರೀಯ ಕಂಪೆನಿಗಳು ರಭಸದಿಂದ ಒಳ ನುಗ್ಗಿದೆ. ವ್ಯಾಪಾರದ ಭರಾಟೆ ಜೋರಾಗಿದೆ. ದೇಶದೋಳಕ್ಕೆ ತುಂಬಿ ತುಳುಕುವಷ್ಟು ವಿದೇಶಿ ಮೂಲದ ಬಂಡವಾಳ ಹರಿದು ಬರುತ್ತಿದೆ.

ಅಷ್ಟು ಮಾತ್ರವಲ್ಲ, ಹೊರದೇಶ ಮೂಲದ ಬಹುರಾಷ್ಟ್ರೀಯ ಕಂಪೆನಿಗಳಿಗೆ ಸರಿಸಾಟಿ ಎನ್ನುವಂತೆ ದೇಶೀಯ ಬಹುರಾಷ್ಟ್ರೀಯ ಕಂಪೆನಿಗಳು ಬೆಳೆಯುತ್ತಿವೆ. ತುಂಬಾ ತೀಕ್ಷ್ಣವಾದ ಪೈಪೋಟಿಯನ್ನೇ ಕೊಡುತ್ತಿವೆ. ದೂರಸಂಪರ್ಕ ಕ್ಷೇತ್ರಕ್ಕೆ ಬಹುರಾಷ್ಟ್ರೀಯರನ್ನು ಬಿಟ್ಟುಕೊಂಡಾಗ ಅವರು ಬಿಗಿಮುಷ್ಟಿ ತೋರಿಸಿದರು. ಆರಂಭದಲ್ಲಿ ಭಾರೀ ಲಾಭ ಮಾಡುವ ತರದೂದು ಅವರದಾಗಿತ್ತು. ಆದರೆ ದೇಶೀಯ ರಿಲಯನ್ಸ್ ಕಂಪೆನಿ ಕೊಡುತ್ತಿರುವ ಪೈಪೋಟಿಯು ಹೊರಗಿನ ಬಹುರಾಷ್ಟ್ರೀಯರನ್ನು ತತ್ತರಿಸುವಂತೆ ಮಾಡಿರುವುದು ನಿಜ.

ಇಂಥ ಇನ್ನರ್ಧ ಡಜನ್ ಪ್ರಸಂಗಗಳು ನಡೆದಿದ್ದೇ ಆದರೆ ಬೇರೆ ಎಲ್ಲ ಕಡೆಯ ಬಹುರಾಷ್ಟ್ರೀಯರಿಗೆ ಹೋಗುವ ಸಂದೇಶವೇ ಬೇರೆ.ಭಾರತೀಯರನ್ನು ಲಘುವಾಗಿ ತೆಗೆದುಕೊಳ್ಳಲು ಯಾರಿಗೂ ಸಾಧ್ಯವಾಗುವುದಿಲ್ಲ.

ವಿದ್ಯುತ್ ಕ್ಷೇತ್ರ ಸುಧಾರಣೆಗೆ ಯತ್ನಿಸಿದಾಗ ಎನ್ರಾನ್ ಎಂಬೊಂದು ವಿದೇಶಿ ಸಂಸ್ಥೆ ಭಾರತಕ್ಕೆ ಕಾಲಿಟ್ಟಿತು. ಇಲ್ಲಿ ಭದ್ರವಾಗಿ ತಳವೂರಿ ವಿದ್ಯುತ್ ತಯಾರಿಸುವುದಕ್ಕೆ ಆ ಸಂಸ್ಥೆಗೆ ಸಾಧ್ಯ ಆಗಲೇ ಇಲ್ಲ. ಇಡೀ ವ್ಯವಹಾರವು ಎಷ್ಟೊಂದು ಗೊಂದಲ ಮತ್ತು ಗೋಜಲು ಆಯಿತೆಂದರೆ ಹಗರಣವನ್ನು ನೆನೆದುಕೊಳ್ಳುವುದಕ್ಕೇ ಹೇಸಿಗೆಯಾಗುತ್ತದೆ. ನಮ್ಮನ್ನು ಶೋಷಿಸಲು ಅವರು ಹೊರಟರೋ, ನಾವೇ ಅವರ ಜೊತೆ ವ್ಯಾವಹಾರಿಕವಾಗಿ ನಡೆದುಕೊಳ್ಳಲು ಸಾಧ್ಯವಾಗಲಿಲ್ಲವೋ,ಆ ಮಾತು ಬೇರೆ.

ಪರಿನಾಮವೆಂದರೆ ಭಾರತದಲ್ಲಿ ಬೃಹತ್ತಾಗಿ ಹಣ ಹೂಡಿ ಲಾಭ ಮಾಡುವುದೆಂದರೆ ಸುಲಭದ ಮಾತಲ್ಲ ಎಂದು ವಿದೇಶೀಯರು ಹಿಂಜರಿದರೆ, ಅದು ವಿಶೇಷ ಎನಿಸುವುದಿಲ್ಲ. ಬೃಹತ್ ಯೋಜನೆಗಳಲ್ಲಿ ಹಣ ಕೂಡಲು ಇನ್ನು ಮುಂದೆ ಗಂಭೀರವಾಗಿ ಯಾರಾದರೂ ಯತ್ನಿಸದಿದ್ದರೆ ಆಶ್ಚರ್ಯವಿಲ್ಲ. ವಿದ್ಯುತ್ ಕ್ಷೇತ್ರದಲ್ಲಿ ಸುಧಾರಣೆ ಸಾಧ್ಯವಾಗದೇ ಹೋದುದು ಮಾತ್ರ ವಾಸ್ತವಾಂಶ.

ಇದೆಲ್ಲ ಇರಲಿ; ೨೦೦೪ರ ಮೊದಲ ತಿಂಗಳು ೧೫ ದಿನಗಳು ಸಹಾ ಕಳೆದಿಲ್ಲ ಎನ್ನುವಾಗ ಭಾರತದ ಅರ್ಥ ಸಚಿವ ಜಸವಂತಸಿಂಗ್ ಅವರು ಭಾರತೀಯರು ಹೊರ ದೇಶಗಳಲ್ಲಿ ಹಣ ತೊಡಗಿಸಲು ಅವಕಾಶ ಕೊಡುತ್ತಿರುವುದಾಗಿ ಪ್ರಕಟಿಸಿದ್ದಾರೆ. ಅಂದರೆ ಭಾರತದಿಂದ ಬಂಡವಾಳ ಹೊರಕ್ಕೆ ಭಾರತದೊಳಕ್ಕೆ ಹೊರಗಿನಿಂದ ಮಾಮೂಲಾಗಿ ಬಂಡವಾಳ; ಎರಡೂ ಇನ್ನು ಮೇಲೆ ಸಾಧ್ಯ !

ಯಾವುದೇ ನಾಗರಿಕ ಒಂದು ಬ್ಯಾಂಕ್ ಪ್ರವೇಶಿಸಿ, ರೂಪಾಯಿ ಹಣ ನೀಡುವ ಮೂಲಕ ಗರಿಷ್ಠ ೨೫ ಸಾವಿರ ಡಾಲರ್ ಖರೀದಿಸಬಹುದು. ನೇರವಾಗಿ ವಿದೇಶಕ್ಕೆ ಕಳುಹಿಸಬಹುದು. ಮುಂದಿನ ವರ್ಷ, ಅದರ ಮುಂದಿನ ವರ್ಷ, ಹೀಗೆಯೇ ಮಾಡುತ್ತಾ ಹೋಗಬಹುದು.

ಈ ಹಣವನ್ನು ಏನು ಮಾಡಬಹುದು ?ವಿದೇಶಗಳಲ್ಲಿ ಷೇರು ಖರೀದಿಸಬಹುದು, ಅಂಗಡಿ, ಕಾರ್ಖಾನೆ ಮುಂತಾದವನ್ನು ಹಾಕಬಹುದು. ಡಾಲರ್ ಒಯ್ದು ಏನು ಮಾಡಿದೆ ಎಂದು ಯಾರೂ ಯಾರನ್ನೂ ಕೇಳುವುದಿಲ್ಲ. ಇದೇ ಮೊದಲ ಬಾರಿಗೆ ಭಾರತೀಯರಿಗೆ ಇಂಥ ಒಂದು ಅವಕಾಶ ಸಿಕ್ಕಿದೆ. ವಿದೇಶ ಪ್ರಯಾಣಕ್ಕೆ ಧಾರಾಳ ಹಣ ಬೇಕೆಂದರೆ ತೊಂದರೆ ಇಲ್ಲ ಎಂದು ಈಗಾಗಲೇ ಹೇಳಿದ್ದಾರೆ. ವಿದೇಶದಲ್ಲಿ ಓದಲು ಹೋಗಬೇಕಾದರೂ ಸುಲಭವಾಗಿ ವಿನಿಮಯ ಹಣ ಸಿಗುತ್ತದೆ. ಚಿಕಿತ್ಸೆ ಪಡೆಯಲೂ, ಸುಲಭವಾಗಿ ಸಿಗುತ್ತದೆ. ಇದೀಗ ವಾಣಿಜ್ಯೋದ್ಯಮಕ್ಕೆಂದು ಹಣ ಒಯ್ಯಬಹುದು.

ಈ ಹಣವನ್ನು ನಾಗರಿಕನಾದವನು ಗಳಿಸಿರಬೇಕು. ತನ್ನ ಖಾತೆಯಲ್ಲಿ ಇಟ್ಟಿದ್ದ ಹಣ ತೆಗೆದು ವಿನಿಮಯ ಹಣ ಖರೀದಿಸಿ ಒಯ್ಯಲು ಅವಕಾಶ.

ಈ ಹಿಂದೆ ಇಂಥ ಅವಕಾಶ ಅನ್ಯರಿಗೆ ಇತ್ತು. ಅನ್ಯರು ಎಂದರೆ ಅನಿವಾಸಿ ಭಾರತೀಯರು ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆದಾರರು ತಮ್ಮದೆಂದು ಭಾರತದೊಳಗೆ ಇರಿಸಿಕೊಂಡಿದ್ದುದನ್ನು ಅನಿರ್ಬಾಧಿತವಾಗಿ ಒಯ್ಯಲು ಅವಕಾಶವಿತ್ತು. ಹಾಗೆ ಹಣ ತಂದಿದ್ದವರು ಭಾರತದೊಳಗೆ ಆಸ್ತಿಪಾಸ್ತಿ ಖರೀದಿಸಿದ್ದರೆ, ಠೇವಣಿ ಇಟ್ಟಿದ್ದರೆ ಅದನ್ನು ವಿನಿಮಯವಾಗಿ ಪರಿವರ್ತಿಸಿ ಪೂರ್ತಿಯಾಗಿ ಒಯ್ಯಬಹುದು ಎಂಬುದಾಗಿ ಅವಕಾಶವಿತ್ತು. ಈಗಲೂ ಇದೆ. ಅದೇ ಸೌಲಭ್ಯ ಭಾರತೀಯ ಹಣವಂತರಿಗೆ ಈಗ ಲಭ್ಯವಾಗಿದೆ.

ಬಂಡವಾಳ ಲೆಕ್ಕದ ಪರಿವರ್ತನಿಯತೆ ಎನ್ನುತ್ತಾರೆ. ಕಳೆದ ಎರಡು ವರ್ಷಗಳಲ್ಲಿ ಸ್ವಲ್ಪ ಧಾರಾಳ ತೋರಿ ಕೆಲವು ಪ್ರಸಂಗಗಳಲ್ಲಿ ಮಾತ್ರ ನಿರ್ದಿಷ್ಟ ಬಾಬುಗಳಿಗಾಗಿ ಪೂರ್ತಾಪರಿವರ್ತನೀಯತೆಗೆ ಅವಕಾಶ ಕೊಟ್ಟಿದ್ದುದುಂಟು. ಆದರೆ ಇದೇ ಪ್ರಥಮ ಬಾರಿಗೆ ಯಾವುದೇ ನಾಗರಿಕನಿಗೆ ೨೫ ಸಾವಿರ ಡಾಲರವರೆಗೆ ಅವಕಾಶ ಕೊಡಲಾಗಿದೆ. ವಿದೇಶಿಯರಿಗೆ ಈ ಸೌಲಭ್ಯ ಕೊಟ್ಟಿಲ್ಲ.

ಈ ಧಾರಾಳತನ ತಾನೇ ಏಕೆ ಬಂದಿತು ? ಓತಪ್ರೋತವಾಗಿ ಹಣ, ಡಾಲರ್ ಹಣ, ಹರಿದು ಬರುತ್ತಿದ್ದರೆ ಇನ್ನೇನು ತಾನೇ ಮಾಡಬೇಕು? ಕೈಲಿರುವ ಡಾಲರ್ ಹೇಗಾದರೂ ಒಂದಿಷ್ಟು ಕೈಬಿಡಲಿ ಎಂದು ಸ್ವತಃ ರಿಸರ್ವ ಬ್ಯಾಂಕೇ ಬಯಸುತ್ತದೆ.

ವಾಸ್ತವವಾಗಿ ಬೇರೆ ಕರೆನ್ಸಿಗಳ ಅನ್ವಯ ಹಾಗೂ ರೂಪಾಯಿನ ಅನ್ವಯ ಅಮೇರಿಕನ್ ಡಾಲರ್ ಬೆಲೆ ಕುಸಿಯುತ್ತಿದೆ. ರೂಪಾಯಿ ಮೌಲ್ಯವು ೨೦೦೩ರಲ್ಲಿ ಶೇ ೫ರಷ್ಟು ಹೆಚ್ಚಾಗಿದೆ. ಡಾಲರ್ ಬೆಲೆ ವಿಪರೀತ ಕುಸಿಯಬಾರದೆಂದು ರಿಸರ್ವ ಬ್ಯಾಂಕ್ ಆಗಾಗ ಪೇಟೆಯಿಂದ ಡಾಲರ್ ಹಣವನ್ನು ಖರೀದಿಸುತ್ತಾ ಇರುತ್ತದೆ. ಆದರೆ ಭಾರತದೊಳಕ್ಕೆ ಬಂಡವಾಳ ರೂಪದಲ್ಲಿ ಡಾಲರ್ ಹಣ ಹರಿದು ಬರುತ್ತಲೇ ಇದೆ. ಎಫ್.ಐ.ಐ.ಗಳು ಏಳು ಬಿಲಿಯನ್ ಡಾಲರ ಹಣವನ್ನು ಭಾರತದೊಳಕ್ಕೆ ತಂದಿವೆ.

ಡಾಲರ್ ಮೌಲ್ಯ ಕುಸಿದರೆ ಕುಸಿಯಲಿ; ರೂಪಾಯಿ ಮೌಲ್ಯ ಹೆಚ್ಚು ಹೆಚ್ಚು ದೃಢಗೊಂಡರೆ ಅನುಕೂಲವಲ್ಲವೆ ?

ಈ ವಾದವನ್ನು ಒಪ್ಪಲಾಗುವುದಿಲ್ಲ. ಡಾಲರ್ ಮೌಲ್ಯ ಕುಸಿದರೆ ಭಾರತದಿಂದ ಆಗುವ ಸರಕು ಮತ್ತು ಸೇವೆಗಳಿಗೆ ಸಿಗುವ ಒಟ್ಟು ಮೊತ್ತ. ಸೇವೆಗಳಿಗೆ ಸಿಗುವ ಒಟ್ಟು ಮೊತ್ತ ಕಡಿಮೆಯಾಗುತ್ತದೆ. ರಫ್ತು ವ್ಯಾಪಾರ ಲಾಭದಾಯಕವಾಗಿ ಉಳಿಯುವುದಿಲ್ಲ.

ಬಂಡವಾಳ ರೂಪದಲ್ಲಿ ಭಾರತದೊಳಕ್ಕೆ ಹಣವನ್ನು ತರುವ ಎಫ್.ಐ.ಐ. ಮುಂತಾದವರ ಉದ್ದೇಶವಾದರೂ ಏನು ? ಈ ಜನ ಭಾರತದಂಥ ರಾಷ್ಟ್ರದೊಳಕ್ಕೆ ಬಂಡವಾಳವನ್ನು ತರದೇ ಹೋದರೆ ಏನು ಮಾಡುತ್ತಾರೆ ? ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಗಳಲ್ಲಿ ಅವರು ಠೇವಣಿ ಇಡಬೇಕಾಗುತ್ತದೆ.

ಭಾರತದ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ, ಭಾರತದಲ್ಲಿ ಉತ್ಪಾದನಾ ಚಟುವಟಿಕೆ ಲಾಭಕರವಾಗಿ ನಡೆಯುತ್ತಿರುವುದರಿಂದ ಆ ಬಂಡವಾಳ ಬೆಳೆಯುತ್ತದೆ. ಕಾಲಕ್ರಮದಲ್ಲಿ ಷೇರು, ಬಾಂಡು ಮುಂತಾದ ಬಂಡವಾಳ ಪತ್ರಗಳನ್ನು ಮಾರಿದಾಗ ಅಸಲು ಮತ್ತು ಬಡ್ಡಿ ಸೇರಿ ಮೊತ್ತ ಕೈಸೇರುತ್ತದೆ. ಹೀಗೆ ಬರುವ ಪ್ರತಿಫಲವು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಲ್ಲಿ ಸಿಗುವ ಬಡ್ಡಿ ಹಣಕ್ಕಿಂತ ಹೆಚ್ಚಾಗಿಯೇ ಇರುತ್ತದೆ.ಈ ಲೆಕ್ಕಾಚಾರದಿಂದೇ ಎಫ್.ಐ.ಐ.ಗಳು ಹಣ ತಂದಿವೆ.

ಆದರೆ ಅಜೀರ್ಣವಾಗುವಷ್ಟು ಬಂದಿರುವ ಹಣವನ್ನು ಉದ್ಯಮಾಭಿವೃದ್ಧಿಗೆ ಮಾತ್ರ ಬಳಸಿದರೇನೇ ಹೂಡಿಕೆದಾರರಿಗೆ ಸರಿಯಾದ ಪ್ರತಿಫಲ ಬರುವಂತೆ ಮಾಡಲು ಸಾಧ್ಯ.

ಭಾರತದವರು ಬಂಡವಾಳದ ಒಂದು ಪಾಲನ್ನು ಸ್ವಂತ ಜವಾಬ್ದಾರಿ ಮೇಲೆವ ವಿದೇಶಕ್ಕೆ ಒಯ್ದು ಅಲ್ಲಿ ಉದ್ಯಮ ನಡೆಸಿದರೆ ಸುಧಾರಿತ ವಾಣಿಜ್ಯೋದ್ಯಮ ಪದ್ಧತಿಗಳು ಮನದಟ್ಟಾಗುತ್ತವೆ.

ತಂತ್ರಜ್ಞಾನವನ್ನು ಹೀರಿಕೊಳ್ಳುವುದು ಹೇಗೆಂದು ಅರ್ಥವಾಗುತ್ತದೆ. ಮಾರಾಟ ಹಾಗೂ ಮ್ಯಾನೇಜಮೆಂಟ್ ಕೌಶಲಗಳು ವೃದ್ಧಿಗೊಳ್ಳುತ್ತವೆ. ಈ ದೃಷ್ಟಿಯಿಂದ ಒಂದಿಷ್ಟು ಬಂಡವಾಳವನ್ನು ಹಿಮ್ಮುಖ ಚಲಿಸುವಂತೆ ಸರ್ಕಾರ ಮಾಡಿದೆ.

ಇದು ಇಷ್ಟಕ್ಕೆ ನಿಲ್ಲುವುದಿಲ್ಲ. ಸಮೃದ್ಧಿ ತರುವ ಸಮಸ್ಯೆಗಳು ಅನೇಕ. ಸಮೃದ್ಧಿ ಮನುಷ್ಯನನ್ನು ಹಾಳುಮಾಡಬಲ್ಲದು. ಜೊತೆಗೆ ಅಧಿಕ ಜವಾಬ್ದಾರಿ ಉಳ್ಳವನನ್ನಾಗಿ ಸಹಾ!

೧೪-೦೧-೨೦೦೪