ಅಮೆರಿಕ ಡಾಲರ್‌ ಎಂದರೆ ಖುಷಿ. ಭಾರತದ ರೂಪಾಯಿಗದು ಜೋಲು ಮುಖ. ಇದು ಭಾರತದ ಗಡಿ ದಾಟಿ ವಿದೇಶಕ್ಕೆ ಹೋಗಿ ಬರುವ ಪ್ರತಿಯೊಬ್ಬರ ಅನುಭವ. ಕೆಲವು ತಿಂಗಳು ಕೆಲವು ವರ್ಷ ವಿದೇಶದಲ್ಲಿದ್ದು ದುಡಿದು ಬರಲು ಲಕ್ಷಾವಧಿ ಭಾರತೀಯರು ಹೋಗುತ್ತಾರೆ. ಬರುವಾಗ ಅಥವಾ ಅವರು ಕಳುಹಿಸಿದ ಹಣದ ರೂಪದಲ್ಲಿ ವಿದೇಶಿ ವಿನಿಮಯ ದೇಶದೊಳಕ್ಕೆ ಹರಿದುಬರುತ್ತದೆ. ವಿದೇಶಗಳಿಗೆ ಹೋದವರು ಅಲ್ಲೆಲ್ಲ ಹೊಟ್ಟೆ ಬಟ್ಟೆ ಕಟ್ಟಿ ಹಣ ಉಳಿಸುತ್ತಾರೆ. ಏಕೆಂದರೆ ವಿದೇಶಿ ಕರೆನ್ಸಿಯ ಒಂದೊಂದು ಘಟಕ ಇಲ್ಲಿ ಹಲವು ಪಟ್ಟು ಬೆಲೆ ಬಾಳುತ್ತದೆ. ಉದಾಹರಣೆಗೆ ಅಮೆರಿಕದಲ್ಲಿ ಉಳಿಸಿದ ಕಾರಣ ಭಾರತವನ್ನು ಸೇರಿದ ಪ್ರತಿ ಒಂದು ಡಾಲರ್‌ ಇಲ್ಲಿ ಸದ್ಯ ೪೮-೪೯ ರೂಪಾಯಿ ಬೆಲೆ ಬಾಳುತ್ತದೆ. ಎಂಥ ಕಷ್ಟಗಳನ್ನು ವಿದೇಶಗಳಲ್ಲಿ ಸಹಿಸಿದರೂ ಸರಿ; ಕೆಲವು ವರ್ಷ ಅಲ್ಲಿ ದುಡಿದರೆ ಭಾರತಕ್ಕೆ ಬಂದ ಮೇಲೆ ನೆಮ್ಮದಿಯ ಜೀವನಕ್ಕೆ ಸಾಕಾಗುವಷ್ಟು ಹಣ ಇರುತ್ತದೆ. ಭಾರತದಲ್ಲಿ ಜೀವನ ಪೂರ್ತಿ ದುಡಿದರೂ ಹೀಗೆ ತಂದ ಹಣಕ್ಕೆ ಸಮ ಎನಿಸುವುದಿಲ್ಲ ಎನ್ನುವ ಭಾವನೆ ತರಿಸುವ ಪ್ರಸಂಗಗಳಿಗೆ ಲೆಕ್ಕವಿಲ್ಲ.

ಇಷ್ಟಕ್ಕೆಲ್ಲ ಕಾರಣ ಭಾರತದ ರೂಪಾಯಿಯ ಶಕ್ತಿಮಾಂದ್ಯತೆ. ಆದರೆ ವಿಶ್ವದೆಲ್ಲ ಜನಕ್ಕೆ ಅಮೆರಿಕದ ಡಾಲರ್‌ ಎಂದರೆ ಪರಮಾಯಿಷಿ. ವಾಸ್ತವವಾಗಿ ಕರೆನ್ಸಿ ಎನ್ನುವುದು ಆಯಾ ದೇಶದ ಸಂಪನ್ನತೆಯನ್ನು ಅಳೆಯುತ್ತದೆ. ಅಮೆರಿಕವು ಅತಿ ಸಂಪನ್ನ ದೇಶ ಆಗಿರುವುದರಿಂದ ವಿಶ್ವದಲ್ಲಿ ಅಮೆರಿಕನ್‌ ಡಾಲರ್‌ನದೇ ಯಜಮಾನಿಕೆ.

ವಾಸ್ತವವಾಗಿ ಭಾರತದ ರೂಪಾಯಿ ಮೌಲ್ಯವನ್ನು ಸದಾ ಅಮೆರಿಕನ್‌ ಡಾಲರ್‌ ಜೊತೆಗೆ ಲಗತ್ತಿಸಲಾಗಿತ್ತು. ಇತರ ಕರೆನ್ಸಿಗಳಿಗೆ ಈಗ ತತ್ಸಮ ಬೆಲೆ ಏನೆಂದು ನಿಗದಿ ಆಗುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಅದು ತಪ್ಪಿದೆ. ವಿಶ್ವದ ಇತರ ಎಲ್ಲ ಕರೆನ್ಸಿಗಳ ಏರಿಳಿತದ ಅನ್ವಯ (ಅಮೆರಿಕದ ಡಾಲರ್‌ನ ಏರಿಳಿತ ಸಹ ಅನುಸರಿಸಿ) ಭಾರತದ ರೂಪಾಯಿಯ ವಿನಿಮಯ ದರವನ್ನು ನಿಗದಿಪಡಿಸುವ ವಾಡಿಕೆ ಬಂದಿದೆ.

ಸೆಪ್ಟೆಂಬರ್‌ ೧೧ರ ಭಯೋತ್ಪಾದನಾ ಕೃತ್ಯದ ನಂತರ ಅಮೆರಿಕದ ಜನಜೀವನ ಹೇಗೋ ಹಾಗೆ ಅದರ ಆರ್ಥಿಕತೆ ಸಹಾ ತತ್ತರಿಸಿದೆ. ಕಂಪನಿ ವಲಯ ಚೇತರಿಸಿಕೊಂಡಿಲ್ಲ. ಜನರ ಖರ್ಚು ಮಾಡುವ ಪ್ರವೃತ್ತಿ ನಿಧಾನಗೊಂಡಿದೆ. ಉದ್ಯಮಗಳ ಲಾಭಕ್ಷಮತೆ ಏರಿಸುವುದು ಮುಖ್ಯವಾಗಿದೆ. ಆದರೆ ಜನರ ಖರೀದಿ ಸಾಮರ್ಥ್ಯವೇ ಕಡಿಮೆ ಎನಿಸತೊಡಗಿದೆ. ಈ ಹಿನ್ನೆಲೆಯಲ್ಲಿ ಡಾಲರ್‌ ಮೌಲ್ಯ ಕುಸಿಯತೊಡಗಿದೆ.

ಇದೇ ವೇಳೆ ಯೂರೋ (ಯುರೋಪಿನ ರಾಷ್ಟ್ರಗಳ ಏಕೀಕೃತ ಕರೆನ್ಸಿ)ಅನ್ವಯ ಡಾಲರ್‌ ಬೆಲೆ ಶೇ. ೬ ಇಳಿದಿದೆ. ಕಳೆದ ೧೭ ತಿಂಗಳಲ್ಲಿ ಇನ್ನಿಲ್ಲದಷ್ಟು ಕೆಳಕ್ಕೆ ಬಂದಿದೆ. ಯೂರೋ ಮಾತ್ರವಲ್ಲ, ಜಪಾನಿನ ಯೆನ್‌ ಸಹಾ ಸೇರಿದಂತೆ ವಿಶ್ವದ ಪ್ರತಿಯೊಂದು ಪ್ರಮುಖ ರಾಷ್ಟ್ರದ ಕರೆನ್ಸಿ ಅನ್ವಯ ಡಾಲರ್‌ ಬೆಲೆ ಕುಸಿದಿದೆ. ಯೆನ್‌ ಅಂತೂ ಕಳೆದ ಎಂಟು ತಿಂಗಳಲ್ಲಿ ಈಗಿನಷ್ಟು ಎತ್ತರಕ್ಕೆ ಏರಿರಲಿಲ್ಲ. ಎಲ್ಲ ಕರೆನ್ಸಿಗಳ ವಿನಿಮಯ ದರದ ದೈನಿಕ ಏರಿಳಿತದ ವಿದ್ಯಮಾನವನ್ನು ಕಂಡುವರು ಯಾವುದೂ ಹೀಗೆಯೇ ಇರುತ್ತದೆ ಎಂದು ಹೇಳುವುದಿಲ್ಲ. ಆದರೆ ಅಮೆರಿಕದ ವಿದ್ಯಮಾನಗಳನ್ನು ವಿಶ್ಲೇಷಿಸುವ ತಜ್ಞರ ಪ್ರಕಾರ ಮುಂದಿನ ಎರಡು ಅಥವಾ ನಾಲ್ಕು ತಿಂಗಳ ಅವಧಿಯಲ್ಲಿ ಡಾಲರ್‌ ಮೌಲ್ಯ ಹಿಂದಿನ ಮಟ್ಟಕ್ಕೆ ಬರುವುದಿಲ್ಲ.

ಎಲ್ಲ ರಾಷ್ಟ್ರಗಳೂ ತಂತಮ್ಮ ಕರೆನ್ಸಿ ಸ್ಥಿರವಾಗಿರುವಂತೆ ನೋಡಿಕೊಳ್ಳುತ್ತವೆ. ಅಗತ್ಯಾನುಸಾರ ವಿಶ್ವದ ಇತರ ಕರೆನ್ಸಿಗಳ ವಿನಿಮಯ ದರಗಳ ಅನ್ವಯ ತಮ್ಮ ಕರೆನ್ಸಿ ದರ ಸ್ವಲ್ಪ ಇಳಿಯುವಂತೆ ಅಥವಾ ಸ್ವಲ್ಪ ಏರುವಂತೆ ಮಾಡಬಹುದು. ಸಹಾ. ಉದಾಹರಣೆಗೆ ಡಾಲರ್‌ಗೆ ೪೯ ರೂಪಾಯಿ ಇರುವಂತೆ ಭಾರತದ ರಿಸರ್ವ್‌ ಬ್ಯಾಂಕು ಈಗ ನೋಡಿಕೊಂಡಿದೆ. ಅದೇ ರೀತಿ ಯೂರೊ ತನ್ನ ದರವನ್ನು ಡಾಲರ್‌ಗೆ ೯೭ ಸೆಂಟ್‌ ಇರುವಂತೆ ನೋಡಿಕೊಂಡಿದೆ. ಶೀಘ್ರವೇ ತನ್ನ ಯೂರೋ ದರವನ್ನು ಯೂರೋಪು ಒಂದು ಡಾಲರ್‌ಗೆ ಸಮ ಎಂದು ಮಾಡಿಕೊಳ್ಳಬಹುದು ಎಂಬ ನಿರೀಕ್ಷೆ ಇದೆ. ವಾಸ್ತವವಾಗಿ ಯಾವುದೇ ಕರೆನ್ಸಿಯ ವಿನಿಮಯ ದರವನ್ನು ಬೇಕೆಂದ ಹಾಗೆ ಏರಿಸಿಕೊಳ್ಳಲು ಅಥವಾ ಇಳಿಸಿಕೊಳ್ಳಲು ಬರುವುದಿಲ್ಲ. ಆಯಾ ದೇಶದ ಸಂಪತ್ತು ಗಳಿಕೆ, ಆರ್ಥಿಕ ದಾರ್ಢ್ಯತೆ, ಹಣ ಉಳಿಸಿ ಮೀಸಲಾಗಿ ಇಟ್ಟುಕೊಂಡ ನಿಧಿಯ ಗಾತ್ರ ಹೀಗೆ ಹಲವು ಅಂಶಗಳ ಪ್ರಕಾರ ಕರೆನ್ಸಿಯ ಶಕ್ತಿ ತಾನೇತಾತಾಗಿ ನಿರ್ಧಾರವಾಗುತ್ತದೆ. ಆದರೂ ವಿವಿಧ ರಾಷ್ಟ್ರಗಳ ಕೇಂದ್ರ ಬ್ಯಾಂಕುಗಳು ಕರೆನ್ಸಿಯ ವಿನಿಮಯ ದರಗಳನ್ನು ಸ್ವಲ್ಪ ಏರಿಳಿತ ಗೊಳಿಸಿಕೊಳ್ಳಬಹುದು.

ಉದಾಹರಣೆಗೆ ಭಾರತದ ರಿಸರ್ವ್‌ ಬ್ಯಾಂಕು ದೇಶದೊಳಗೆ ಲಭ್ಯವಿರುವ ಡಾಲರ್‌ ಹಣವನ್ನು ಖರೀದಿಸುತ್ತಾ ಹೋದರೆ ಅದಕ್ಕೆ ಬೇಡಿಕೆಯುಂಟಾಗಿ ವಿನಿಮಯ ದರ ಹೆಚ್ಚಾಗುತ್ತದೆ. ಮಾರುತ್ತ ಹೋದರೆ ದರ ಇಳಿಯುತ್ತದೆ. ದೇಶದೊಳಕ್ಕೆ ಹರಿದು ಬರುವ ಡಾಲರ್ ಹಣದ ಪ್ರಮಾಣ ಹೆಚ್ಚಬಹುದು. ಅಂತೂ ಅಮೆರಿಕದಲ್ಲಿ ಭಾರತೀಯರು ಮತ್ತು ಅನಿವಾಸಿಗಳು ಗಳಿಸಿ ಕಳುಹಿಸುವುದು ಹೆಚ್ಚಾಗುವ; ಸಾಲ ಸಂಗ್ರಹ ಅಥವಾ ವಿದೇಶಿ ಬಂಡವಾಳಗಾರರು ಡಾಲರ್‌ ಹಣ ಹೂಡುವುದು ಅಧಿಕಗೊಳ್ಳುವ; ಸಂದರ್ಭಗಳಲ್ಲಿ ಲಭ್ಯತೆ ಹೆಚ್ಚಾಗಿ ಡಾಲರ್‌ ಬೆಲೆ ಕುಸಿಯಬಹುದು. ಹೀಗೆ ನಾನಾ ಪ್ರಸಂಗಗಳಲ್ಲಿ ರಿಸರ್ವ್‌ ಬ್ಯಾಂಕು ಡಾಲರನ್ನು ಬಿಡುಗಡೆ ಮಾಡುವ ಅಥವಾ ಸಂಗ್ರಹಿಸುವ ಕಾರ್ಯ ನಡೆಸುತ್ತದೆ. ಇದನ್ನು ಮಧ್ಯಪ್ರವೇಶ ಎಂದೇ ಕರೆಯುತ್ತಾರೆ.

ಇಂಥ ವಿದ್ಯಮಾನವು ಯೂರೋ, ಯೆನ್‌ ಅಥವಾ ಇನ್ನಾವುದೇ ಕರೆನ್ಸಿ ವಿಷಯದಲ್ಲಿ ಸಹಾ ನಡೆಯಬಹುದು. ಆದರೆ ಅದು ಅಷ್ಟು ಪ್ರಮುಖವಾಗುವುದಿಲ್ಲ. ಕರೆನ್ಸಿಗಳಿಗೆಲ್ಲ ಅಮೆರಿಕನ್ ಡಾಲರೇ ನಾಯಕ. ಭಾರತದ ವಹಿವಾಟು ಅಮೆರಿಕದ ಜೊತೆಗೇ ಅಧಿಕ. ಆದ್ದರಿಂದ ವಿನಿಮಯ ದರ ಡಾಲರ್‌ಗೆ ಲಗತ್ತಾಗುವುದೇ ಸಹಜ.

ಕೇಂದ್ರ ಬ್ಯಾಂಕು, ಅಂದರೆ ಭಾರತದಲ್ಲಿ ರಿಸರ್ವ್‌ ಬ್ಯಾಂಕು, ವಿನಿಮಯ ದರವನ್ನು ಮುಕ್ತವಾಗಿ ನಿಗದಿಗೊಳ್ಳಲು ಬಿಡದೇ ಮಧ್ಯಪ್ರವೇಶ ಮಾಡುವುದಾದರೂ ಏಕೆ? ಅದಕ್ಕೆ ಕಾರಣಗಳಿಲ್ಲದೇ ಇಲ್ಲ. ಕರೆನ್ಸಿಯ ಮೌಲ್ಯ ಕುಸಿದರೆ, ಅಂದರೆ ವಿನಿಮಯ ದರ ಏರಿದರೆ, ಅನ್ಯ ದೇಶದವರು ಸರಕನ್ನು ತರಿಸಿಕೊಳ್ಳುವುದು ಹೆಚ್ಚಾಗುತ್ತದೆ. ದರ ಕಡಿಮೆಯಾದರೆ ಅನ್ಯ ದೇಶದಿಂದ ಸರಕು ತರಿಸುವುದು ಹೆಚ್ಚಾಗುತ್ತದೆ. ನಿದರ್ಶನಕ್ಕೆ ರೂಪಾಯಿ ಬೆಲೆ ಕುಸಿದರೆ. ಅಮೆರಿಕನ್ನರಾಗಲಿ, ಯುರೋಪಿಯನ್ನರಾಗಲಿ, ಜಪಾನಿಗಳಾಗಲಿ, ಭಾರತದ ಸರಕನ್ನು ಹೆಚ್ಚು ಬಯಸುತ್ತಾರೆ. ರಫ್ತು ಏರುತ್ತದೆ. ರೂಪಾಯಿ ಬಲಗೊಂಡರೆ ಇದೇ ದೇಶಗಳಿಂದ ಸರಕು ತರಿಸಲು ಭಾರತಕ್ಕೆ ಸುಲಭವಾಗುತ್ತದೆ. ಆಮದು ಆಕರ್ಷಕವಾಗುತ್ತದೆ.

ರಫ್ತು ಏರಿಸಲು ಅಥವಾ ಆಮದು ಸುಗಮ ಮಾಡಿಕೊಳ್ಳಲು ರಿಸರ್ವ್‌ ಬ್ಯಾಂಕಿನ ಮಧ್ಯಪ್ರವೇಶ ನೆರವಾಗಬಲ್ಲರು. ಮುಂಚೆ ರೂಪಾಯಿ ಮೌಲ್ಯ ನಿರ್ಧಾರ ಪ್ರಕ್ರಿಯೆಯು ಅಮೆರಿಕನ್‌ ಡಾಲರ್ ಜೊತೆಗೆ ಮಾತ್ರ ಲಗತ್ತಾಗಿದ್ದಾಗ ಆಗಾಗ ರೂಪಾಯಿ ಅಪಮೌಲ್ಯ ಅಥವಾ ಮೌಲ್ಯಚ್ಛೇದ ನಡೆಯುತ್ತಿತ್ತು. ಈಗ ಅವೆಲ್ಲ ಇಲ್ಲ. ವಿಶ್ವದ ಒಟ್ಟು ಕರೆನ್ಸಿಗಳ ಮೌಲ್ಯದ ಹಿನ್ನೆಲೆಯಲ್ಲಿ ನಿತ್ಯ ಮಧ್ಯಪ್ರವೇಶ ಮೂಲಕ ಮೌಲ್ಯದ ಏರಿಳಿತವನ್ನು ನಿರ್ಧರಿಸುವುದು ನಡೆದಿದೆ.

ಇದೀಗ ಅಮೆರಿಕದ ಡಾಲರ್‌ ಮೌಲ್ಯ. ಕಿಂಚಿತ್ತು ಕುಸಿದಿರುವುದರಿಂದ ಜಪಾನ್‌, ಯುರೋಪಿನ ರಾಷ್ಟ್ರಗಳು ಮುಂತಾದವು ಎಚ್ಚೆತ್ತುಕೊಂಡಿವೆ. ತಂತಮ್ಮ ಕರೆನ್ಸಿಗಳನ್ನು ಬಲಪಡಿಸಿಕೊಳ್ಳಲು ಮುಂದಾಗಿವೆ. ಅಮೆರಿಕದ ಮೇಲುಗೈ ಕಡಿಮೆ ಆಗುತ್ತಿರುವ ವೇಳೆ ಸ್ವತಃ ಅಂತಃಸತ್ವವುಳ್ಳ ತನ್ನ ಕರೆನ್ಸಿ ತಾನೇತಾನಾಗಿ ಬಲಗೊಳ್ಳಲು ಬಿಡಬೇಕು ಎಂದು ಭಾವಿಸಿರುವ ಜಪಾನು ಮಧ್ಯಪ್ರವೇಶ ಕಾರ್ಯವನ್ನೇ ಸ್ವಲ್ಪ ಕಾಲ ನಿಲ್ಲಿಸಲು ನಿರ್ಧರಿಸಿದೆ. ಯೂರೋ ಸ್ವತಃ ಒಂದು ಡಾಲರ್‌ಗೆ ಸರಿಸಮನಾಗಲು ತವಕಗೊಂಡಿವೆ. ವಿಶ್ವ ಹಣ ಪೇಟೆಯಲ್ಲಿ ಇದೀಗ ಚೇತೋಹಾರಿ ದೃಶ್ಯ. ಕರೆನ್ಸಿಗಳ ನಡುವೆ ಒಂದು ರೀತಿಯ ಯುದ್ಧ.

ಭಾರತಕ್ಕಾದರೋ ಇದೀಗ ಸ್ವಲ್ಪ ಗಲಿಬಿಲಿ. ರೂಪಾಯಿ ಮೌಲ್ಯ ಏರಿಸಿಕೊಳ್ಳಲು ಇದು ಸಕಾಲವೇ ಸರಿ. ಭಾರತದಲ್ಲಿ ಆರ್ಥಿಕ ಹಿನ್ನಡೆ ಪರಿಸ್ಥಿತಿ ಸುಧಾರಿಸಿಲ್ಲ. ಕೃಷಿ ಪ್ರಧಾನ ರಾಷ್ಟ್ರವಾದ್ದರಿಂದ, ಸತತವಾಗಿ ಸಾಕಷ್ಟು ಮಳೆ ಬರುತ್ತಿರುವುದರಿಂದ, ಆಹಾರ ಸ್ವಾಲಂಬನೆ ಅನಿರ್ಬಾಧಿತ.

ಜಪಾನು ಆದರೋ ತನ್ನೆಲ್ಲ ಆರ್ಥಿಕ ಹಿಂಜರಿತ ಎನ್ನುವುದು ಕೊನೆಗೊಂಡಿದೆ ಎಂದು ಖಚಿತವಾಗಿ ಭಾವಿಸಿದೆ. ಈಚೆಗೆ ಸಮಾವೇಶಗೊಂಡಿದ್ದ ಔರೋಪ್ಯ ಒಕ್ಕೂಟವಾದರೋ ಆರ್ಥಿಕ ಹಿಂಜರಿತ ಮುಗಿದ ಮಾತು ಎಂದು ಘೋಷಿಸಿದೆ. ಚೀನಾ, ಕೊರಿಯಾದಂಥ ಏಷ್ಯಾ ರಾಷ್ಟ್ರಗಳು ಹಿಂಜರಿತದ ಬಿಗಿಯಿಂದ ಪಾರಾಗುತ್ತಿವೆ. ಭಾರತದಲ್ಲೂ ಅಂಥ ಭಾವನೆ ಬರುತ್ತಿದೆ ಎನ್ನುತ್ತಾರೆ. ಆದರೆ ಅಧಿಕ ಸರಕು ಆಮದು ಮಾಡಿಕೊಳ್ಳಲು ಕಾಲ ಒದಗುತ್ತಿಲ್ಲ. ಅಧಿಕ ಹಣ ಹೂಡಿಕೆ ಕಂಡುಬರುತ್ತಿಲ್ಲ. ನೆನಸಿದಷ್ಟು ಪ್ರಮಾಣದಲ್ಲಿ ಉದ್ಯಮ ಚೇತರಿಸಿಕೊಳ್ಳುತ್ತಿಲ್ಲ.

ರೂಪಾಯಿ ಬಲವೃದ್ಧಿಗೆ ಯತ್ನಿಸಿದರೆ, ರಫ್ತಿಗೆ ಧಕ್ಕೆ ಒದಗುತ್ತದೆನ್ನುವ ಭಯ ಬೇಡವೆಂದೂ, ಅನ್ಯ ರಾಷ್ಟ್ರಗಳ ಕರೆನ್ಸಿಗಳು ಸಹ ಬಲವೃದ್ಧಿ ಮಾಡಿಕೊಳ್ಳುತ್ತಿರುವುದರಿಂದ ರಫ್ತು ಕುಸಿಯುವ ಪ್ರಮೇಯ ಇಲ್ಲವೆಂದೂ ಆರ್ಥಿಕ ತಜ್ಞರು ವಾದಿಸತೊಡಗಿದ್ದಾರೆ.

ಕೆಲವು ಬಗೆಯ ರಫ್ತು ವಾಸ್ತವವಾಗಿ ಭಾರೀ ಪ್ರಮಾಣದ ಆಮದನ್ನು ಬಯಸುತ್ತದೆ. ಅಂಥ ಬಾಬುಗಳ ರಫ್ತನ್ನು ಪ್ರೋತ್ಸಾಹಿಸಬೇಕು.

ಆರ್ಥಿಕ ಬೆಳವಣಿಗೆ ಸುಗಮ ಎನಿಸಿಕೊಳ್ಳುವ ಪ್ರಸಂಗಗಳಲ್ಲಿ ರೂಪಾಯಿ ಮೌಲ್ಯವನ್ನು ಮಧ್ಯಪ್ರವೇಶದಂಥ ಕೃತಕ ಮಾರ್ಗಗಳಿಂದ ಅದುಮಿಡುವ ಕಾರ್ಯವನ್ನು ಕೈಬಿಡಬೇಕು ಎಂದೆಲ್ಲ ತಜ್ಞರು ಭಾವಿಸಿದ್ದಾರೆ. ಚರ್ಚೆ ನಡೆಯುತ್ತಿದೆ.

ಭಾರತದಲ್ಲಿ ಹಣದುಬ್ಬರವನ್ನು ಈಚೆಗೆ ನಿಯಂತ್ರಿಸಲಾಗಿದೆ. ಈ ವೇಳೆ ಆರ್ಥಿಕ ವೃದ್ಧಿ ಸಾಧಿಸಬೇಕಾದರೆ ಡಾಲರ್‌ನ ಖರೀದಿ ಹೆಚ್ಚಿಸಿ ರೂಪಾಯಿ ಮೌಲ್ಯ ಕಡಿಮೆ ಇರುವಂತೆ ನೋಡಿಕೊಳ್ಳುವುದಕ್ಕಿಂತ ವಿನಿಮಯ ಮೀಸಲು ಕರಗಿಸಬೇಕು ಎನ್ನುವ ವಿಚಾರಕ್ಕೆ ಪುಷ್ಟಿ ಬಂದಿಲ್ಲ.

ಇಂಥದಕ್ಕೆಲ್ಲ ಭಾರತದಂತೆ ಹಿಂಜರಿಯುತ್ತಿರುವ ರಾಷ್ಟ್ರಗ ಪೈಕಿ ಪಾಕಿಸ್ತಾ ಸಹ ಒಂದು.