ಕೈ ತೋರಿಸುವ ಮೂಲಕ ಅಥವಾ ಜಾಕತದ ಪ್ರತಿ ಇಟ್ಟು ‘ವಿದೇಶ ಪ್ರವಾಸ ಯೋಗ ಇದೆಯೇ?’ ಎಂದು ಜ್ಯೋತಿಷಿಗಳನ್ನು ಕೇಳುವ ಕಾಲ ಹಿಂದೆ ಹೋಯಿತು.

ಹಣವಿದ್ದರೆ ಈಗ ವಿದೇಶಕ್ಕೆ ಸುಲಭವಾಗಿ ಹೋಗಿಬರಬಹುದು. ಆದರೆ ಖರ್ಚಿಗೆ ವಿದೇಶಿ ವಿನಿಮಯ? ಇತ್ತೀಚಿನವರೆಗೂ ಪ್ರತಿ ಪ್ರಯಾಣಿಕ ತಾನು ಒಯ್ಯುವ ವಿದೇಶಿ ವಿನಿಮಯವನ್ನು ಅಧಿಕೃತ ಮೂಲಗಳಿಂದ  ಕೊಳ್ಳಲು ರಿಸರ್ವ್‌ ಬ್ಯಾಂಕ್‌ ಅನುಮತಿ ಪಡೆಯಬೇಕಿತ್ತು.

ಆದರೀಗ ವಿದೇಶ ಪ್ರಯಾಣ ಬಯಸುವವರು ವರ್ಷಕ್ಕೆ ೧೦ ಸಾವಿರ ಡಾಲರ್‌‌ವಿನಿಮಯ ಹಣವನ್ನು ಯಾವುದೇ ಅನುಮತಿ ಇಲ್ಲದೆ ಹೊಂದಿಸಿಕೊಳ್ಳಬಹುದು.

ವಿದೇಶ ಪ್ರಯಾಣವನ್ನು ಪ್ರವಾಸಿಗನಾಗಿ ಮಾಡಲು ಮಾತ್ರವಲ್ಲ; ವೈದ್ಯ ಚಿಕಿತ್ಸೆ ಅಥವಾ ವಿದೇಶದಲ್ಲಿ ವ್ಯಾಸಂಗ ಈ ಬಾಬುಗಳಿಗಾಗಿ ವೆಚ್ಚ ಮಾಡಲು ಬೇಕಾಗುವ ವಿನಿಮಯ ಹಣ ಒದಗಿಸುವ ನಿಯಮಗಳನ್ನು ಸಹಾ ಸಿಕ್ಕಾಪಟ್ಟೆ ಉದಾರಗೊಳಿಸಿದ್ದಾರೆ. ಈ ಎರಡೂ ಬಾಬುಗಳಿಗೆ ತಲಾ ಹತ್ತು ಲಕ್ಷ ಡಾಲರ್‌ವರೆಗೆ ವಿನಿಮಯ ಹಣವನ್ನು ಯಾವುದೇ ಅನುಮತಿ ಇಲ್ಲದೆ ಖರೀದಿಸಬಹುದು.

ಇದೇನಿದು? ದೇಶದ ವಿದೇಶಿ ವಿನಿಮಯ ಭಂಡಾರ ತುಂಬಿ ತುಳುಕುತ್ತಿದೆಯೇನು? ಅಕ್ಷರಶಃ ಹೌದು.

ಡಿಸೆಂಬರ್‌ ೧೯ರ ವರ್ಷಾಂತ್ಯದಲ್ಲಿ ಮುಂಬರುವ ವರ್ಷದಲ್ಲಿ ದೇಶದ ಆರ್ಥಿಕ ದಾರ್ಢ್ಯ ಎಷ್ಟೊಂದು ಸುಸ್ಥಿತಿಯಲ್ಲಿದೆ ಎಂಬುದನ್ನು ನಿರೂಪಿಸುತ್ತಿದ್ದಾರೆಯೋ ಎಂಬಂತೆ; ವಿನಿಮಯ ಭಂಡಾರ ತುಂಬಿ ತುಳುಕುತ್ತಿದೆ ಎಂದು ಅಧಿಕೃತವಾಗಿ ಅರ್ಥ ಸಚಿವರು ಹೊರಗೆಡಹಿದ ಪ್ರಕಾರ; ವಿದೇಶಿ ವಿನಿಮಯ ಸಂಗ್ರಹ ಮೊತ್ತವು ಇತಿಹಾಸದಲ್ಲೇ ಪ್ರಥಮ ಬಾರಿಗೆ ಒಂದು ನೂರು ಬಿಲಿಯನ್‌ (೧೦೦೦೦ ಕೋಟಿ) ಡಾಲರ್‌ ದಾಟಿತು. ಇದೇನೂ ಕಡಿಮೆ ಸಾಧನೆಯಲ್ಲ. ಕಳೆದ ವರ್ಷಾಂತ್ಯಕ್ಕೆ ಹೋಲಿಸಿದರೆ ಸಂಗ್ರಹವು ೨೮ ಬಿಲಿಯನ್‌ನಷ್ಟು ಬೆಳೆದಿದೆ.

ಮೊತ್ತದ ಸಂಖ್ಯೆಯ ಕಾರಣದಿಂದ ಮಾತ್ರವೇ ಇದಕ್ಕೆ ಮಹತ್ವ ಎನ್ನುವಂತಿಲ್ಲ. ಹನ್ನೆರಡು ವರ್ಷದ ಹಿಂದೆ ೧೯೯೧ರಲ್ಲಿ ವಿದೇಶಿ ವಿನಿಮಯ ಸಂಗ್ರಹ ಪೂರ್ತಿ ಖಾಲಿಯಾಗಿ ಹೋಗಿತ್ತು. ಆಗ ಮೊತ್ತವು ಒಂದು ಬಿಲಿಯನ್‌ ‌ಡಾಲರ್‌ಗೂ ಕಡಿಮೆ ಆಗಿತ್ತು. ಒಂದು ವಾರದ ಅಮದಿಗೆ ಮಾತ್ರ ಸಾಕಾಗುವಷ್ಟು ವಿನಿಮಯ ಹಣ ಕೈಲಿತ್ತು. ಕೊಲ್ಲಿ ಯುದ್ಧದ ಪರಿಣಾಮವಾಗಿ ಪೆಟ್ರೋಲಿಯಂ ತೈಲದ ಬೆಲೆ ಗಗನಕ್ಕೇರಿತ್ತು. ಅದೇ ಹೊತ್ತಿಗೆ ನಮ್ಮವರೇ ಎಂದು ನಾವು ಭಾವಿಸುವ ಅನಿವಾಸಿ ಭಾರತೀಯರು ತಮ್ಮ ಠೇವಣಿಗಳನ್ನೆಲ್ಲ ವಾಪಸ್‌ ತೆಗೆದುಕೊಂಡಿದ್ದರು.

ಅಲ್ಪಾವಧಿ ಸಾಲದ ಕಂತುಗಳನ್ನು ಕಟ್ಟುವ ಒತ್ತಡವೂ ಇತ್ತು. ಆಗ ಬೊಕ್ಕಸದಲ್ಲಿದ್ದ ಮೀಸಲು ಚಿನ್ನವನ್ನು ಒತ್ತೆ ಇಟ್ಟು ಬ್ಯಾಂಕ್‌ ಆಫ್‌ ಇಂಗ್ಲೆಂಡ್‌ ಮತ್ತು ಬ್ಯಾಂಕ್‌ ಆಫ್ ಜಪಾನ್‌ಗಳಿಂದ ಸಾಲ ಎತ್ತಬೇಕಾಯಿತು. ಅಷ್ಟೇ ಅಲ್ಲ; ಕಳ್ಳಸಾಗಣೆದಾರರಿಂದ ಮುಟ್ಟುಗೋಲು ಹಾಕಿಕೊಂಡಿದ್ದ ೨೦ ಕೋಟಿ ಡಾಲರ್‌ ಮೊತ್ತದ ಚಿನ್ನವನ್ನು ಮಾರಾಟ ಮಾಡಬೇಕಾಯಿತು. ವಿದೇಶಿ ಮೂಲ ಸಾಲದ ಮರುಪಾವತಿ ಸಂಬಂಧ ತಪ್ಪಿತಸ್ಥನ ಸ್ಥಾನದಲ್ಲಿ ನಿಂತುಕೊಳ್ಳುವುದು ಬೇಡ ಎಂಬುದಕ್ಕೆ ಎಷ್ಟೊಂದು ಪಾಡುಪಡಬೇಕಾಯಿತು. ಹಾಗೆ ಏನಾದರೂ ಆಗಿದ್ದರೆ ಭಾರತದ ರೂಪಾಯಿ ಮೌಲ್ಯಚ್ಛೇದ ಮಾಡಬೇಕಾಗುತ್ತಿತ್ತು. ಏಕಾಏಕಿ ಭಾರೀ ಹಾನಿಯುಂಟಾಗುತ್ತಿತ್ತು.

ಒಂದು ರೀತಿಯಲ್ಲಿ ಈ ಬಿಕ್ಕಟ್ಟು ಒಳ್ಳೆಯ ಪಾಠವನ್ನೇ ಕಲಿಸಿತು. ಹಣಕಾಸು, ಆಮದು, ರಫ್ತು ಮುಂತಾದ ವಿಷಯಗಳಲ್ಲಿ ಗಂಭೀರ ಚರ್ಯೆ ತೆಗೆದುಕೊಳ್ಳಲು ಅನಿವಾರ್ಯವಾಗಿ ಮುಂದಾಗಬೇಕಾಯಿತು. ಮೊಟ್ಟಮೊದಲು ಮಾಡಿದ ಕೆಲಸವೆಂದರೆ ಅಂತರರಾಷ್ಟ್ರೀಯ ಹಣಕಾಸು ನಿಧಿ ಬಳಿ ಕೈಚಾಚಿ ಐದು ಬಿಲಿಯನ್‌ ‌ಡಾಲರ್‌ನಷ್ಟು ಸಾಲ ತೆಗೆದುಕೊಂಡೆವು. ಅದನ್ನು ಪಡೆದಾಗ ನಮ್ಮ ಕೈಲಿ ಉಳಿದಿದ್ದುದು ಬರಿದೆ ೦.೮೩ ಬಿಲಿಯನ್‌ ಡಾಲರ್‌ ವಿನಿಮಯ ಹಣ ಮಾತ್ರ. ಅದನ್ನೇ ಒಂದು ಬಿಲಿಯನ್‌ ಡಾಲರ್‌ಗೂ ಕಡಿಮೆ ಹಣ ಕೈಲಿತ್ತು ಎಂಬುದಾಗಿ ಈಗ ಸ್ಮರಿಸುವುದು.

ಆ ವರ್ಷದಿಂದೀಚೆಗೆ ಆರ್ಥಿಕ ಉದಾರೀಕರಣವನ್ನು ಜಾರಿಗೆ ತಂದು ಆಮದು ಮತ್ತು ರಫ್ತು ವ್ಯವಹಾರಗಳನ್ನು ಚುರುಕುಗೊಳಿಸಲಾಯಿತು. ಜಾಗತೀಕರಣ ಎಂಬ ಹೆಸರಿನಲ್ಲಿ ಹೊರ ಜಗತ್ತಿಗೆ ತೆರೆದುಕೊಳ್ಳಲು ಆರಂಭಿಸಿದ್ದು ಆಗಲೇ, ಮುಂದೆ ಸ್ವಲ್ಪ ಸ್ವಲ್ಪವೇ ಪರಿಸ್ಥಿತಿ ಸುಧಾರಿಸಿತು. ವಿನಿಮಯ ಸಂಗ್ರಹ ಬೆಳೆಯತೊಡಗಿತು.

ಹತ್ತು ವರ್ಷ ಕಳೆದ ಮೇಲೆ ಕೂಡಾ ೨೦೦೦-೨೦೦೧ರ ಸಾಲಿನಲ್ಲಿ ಇದ್ದ ವಿನಿಮಯ ಸಂಗ್ರಹ ೪೨ ಬಿಲಿಯನ್‌ ಡಾಲರ್‌ ಮಾತ್ರವೇ. ಮುಂದಿನ ಎರಡು ವರ್ಷ ಅದು ಕ್ರಮವಾಗಿ ೫೪ ಬಿಲಿಯನ್‌ ಮತ್ತು ೭೫ ಬಿಲಿಯನ್‌ ಆಯಿತು. ೨೦೦೩ ಡಿಸೆಂಬರ್‌ನಲ್ಲಿ ೧೦೦ ಬಿಲಿಯನ್‌ ದಾಟಿತು. ೨೦೧೦ರ ವೇಳೆಗೆ ಇದು ೨೦೦ ಬಿಲಿಯನ್‌ ಆಗುತ್ತದೆ ಎಂಬ ಅಂದಾಜಿದೆ.

೧೯೯೧ರ ಬಿಕ್ಕಟ್ಟಿನ ವೇಳೆ ರಿಸರ್ವ್‌ ಬ್ಯಾಂಕ್ ಗವರ್ನರ್‌ ಆಗಿದ್ದ ಎಸ್‌. ವೆಂಕಟರಮಣನ್‌ ಅವರು ಈಗಿನ ಪರಿಸ್ಥಿತಿಯನ್ನು ‘ಇರುಸುಮುರಿಸು ತರುವಂಥ ಶ್ರೀಮಂತಿಕೆ ದೊಡ್ಡ ಸವಾಲು’ ಎಂದೇ ವರ್ಣಿಸುತ್ತಾರೆ. ಅದೇನೇ ಇದ್ದರೂ ದಿಢೀರ್‌ ಹಣ ಬೇಕಾದಾಗ ವಿವಿಧ ರಾಷ್ಟ್ರಗಳ ಕೇಂದ್ರ ಬ್ಯಾಂಕುಗಳ ಮುಂದೆ ಭಿಕ್ಷಾಪಾತ್ರೆಯನ್ನು ಚಾಚುವ ಅಗತ್ಯ ಬೀಳುವುದಿಲ್ಲ.

ಭಾರತದಲ್ಲಿ ಭಂಡಾರ ತುಂಬಬಹುದು. ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಇದು ಹೇಳಿಕೊಳ್ಳುವಂಥದೇನೂ ಅಲ್ಲ. ಉದಾಹರಣೆಗೆ ಚೀನಾ ಬಳಿ ಸದ್ಯ ಇರುವ ವಿನಿಮಯ ಸಂಗ್ರಹ ೪೦೦ ಬಿಲಿಯನ್‌ ಡಾಲರ್‌ ದಾಟಿದೆ. ಕಳೆದ ಒಂದು ವರ್ಷದಲ್ಲೇ ೧೦೦ ಬಿಲಿಯನ್‌ ಡಾಲರ್‌ನಷ್ಟು ಜಮೆ ಆಗಿದೆ. ಚೀನಾ ಮಾತ್ರವಲ್ಲ; ತೈವಾನ್‌, ದಕ್ಷಿಣ ಕೊರಿಯಾ ಮತ್ತು ಹಾಂಗ್‌ಕಾಂಗ್‌ಗಳಲ್ಲೂ ಭಾರತಕ್ಕಿಂತ ಅಧಿಕ ವಿನಿಮಯ ಸಂಗ್ರಹವಿದೆ. ಆದರೂ ಭಾರತದ ಅಧಿಕಾರಿಗಳ ಪಾಲಿಗೆ ಒಂದು ಸಮಾಧಾನವಿದೆ. ನಾವೇನೂ ರಫ್ತಿನಲ್ಲಿ ಅದ್ಭುತ ಯಶಸ್ಸನ್ನು ಸಾಧಿಸಿಲ್ಲ. ದೊಡ್ಡ ಮೊತ್ತದ ಅಂತರಾಷ್ಟ್ರೀಯ ಸಾಲವನ್ನೂ ಎತ್ತಿಲ್ಲ. ಚೀನಾದಂತೆ ವಿದೇಶೀಯರು ನೇರ ಬಂಡವಾಳ ತಂದು ಹಾಕಿದ ಕಾರಣದಿಂದ ಹರಿದು ಬಂದ ಹಣವೇನಲ್ಲ.

ಅಂತರಾಷ್ಟ್ರೀಯ ಮೂಲಗಳಿಂದ ಹಿಂದೆ ಎತ್ತಿದ್ದ ಸಾಲದ ಕಂತಿಗಾಗಿ ೨೦೦೩ರಲ್ಲಿ ಐದು ಬಿಲಿಯನ್‌ ಡಾಲರ್‌ ಕಳೆದು ಸಂಗ್ರಹವು ೧೦೦ ಬಿಲಿಯನ್‌ ಗೆರೆ ದಾಟಿದೆ.

ಭಾರತದೊಳಕ್ಕೆ ವಿದೇಶಿ ನರ ಬಂಡವಾಳ ಹೆಚ್ಚಾಗಿ ಬರದೇ ಇದ್ದರೂ ವಿದೇಶಿ ಮೂಲದ ಸಾಂಸ್ಥಿಕ ಹಣ ಹೂಡಿಕೆ (ಎಫ್‌ಐಐ) ಮೂಲದಿಂದ ಹೆಚ್ಚು ಹಣ ಬರತೊಡಗಿದೆ. ಅಂದರೆ ಈ ಮೂಲದವರು ನೇರ ಹೂಡಿಕೆದಾರರು ಮಾಡುವಂತೆ ವಿನಿಮಯ ರೂಪದ ಹಣವನ್ನು ಭಾರತದ ಉದ್ಯಮಿಗಳು ರೂಪಿಸಿದ ವ್ಯಾಪಾರ ಯೋಜನೆಗಳಲ್ಲಿ ತೊಡಗಿಸುವುದಿಲ್ಲ. ಬದಲಿಗೆ ವಿವಿಧ ಕಂಪನಿಗಳ ಷೇರುಪತ್ರ ಮತ್ತು ಸಾಲಪತ್ರಗಳನ್ನು ಖರೀದಿಸುವ ಮೂಲಕ ತೊಡಗಿಸುತ್ತಾರೆ. ಈ ವರ್ಷ ಇಲ್ಲಿಯತನಕ ೭ ಬಿಲಿಯನ್‌ ಡಾಲರ್‌ಗೂ ಅಧಿಕ ಹಣವನ್ನು ಇವರು ಭಾರತದೊಳಕ್ಕೆ ತಂದಿದ್ದಾರೆ. ಇಲ್ಲಿಯವರೆಗೆ ಪ್ರತಿ ವರ್ಷ ಎರಡು ಅಥವಾ ಮೂರು ಬಿಲಿಯನ್‌ ಡಾಲರ್‌ ಪ್ರಮಾಣದಲ್ಲಿ ಹೀಗೆ ಹೂಡುತ್ತಿದ್ದರು.

ಈ ಬಗೆಯ ಹೂಡಿಕೆದಾರರು ತಂದು ಹಾಕುವ ಹಣ ಒಂದು ರೀತಿಯಲ್ಲಿ ಅನಿಸ್ಥಿತ ಪರಿಣಾಮ ಬೀರುತ್ತದೆ. ಎಫ್‌ಐಐನವರು ಬೇಕೆಂದಾಗ ತಮ್ಮಲ್ಲಿರುವ ಷೇರುಪತ್ರ ಸಾಲ ಪತ್ರಗಳನ್ನು ಮಾರಿ ತಮ್ಮ ಹಣ ಕೈಸೇರಿಸಿಕೊಂಡು ತಮ್ಮ ದೇಶಕ್ಕೆ ಒಯ್ಯಬಹುದು. ಆದರೂ ಈ ರೂಪದ ಬಂಡವಾಳವನ್ನು ಒಲ್ಲೆ ಎನ್ನಲಾಗದು. ದೇಶ ಸುಸ್ಥಿತಿಯಲ್ಲಿ ಇರುವತನಕ ಅಭಿವೃದ್ಧಿ ಕಾಣಿಸುತ್ತ ಇರುವವರೆಗೆ ಹಣವನನು ಇರಿಸುತ್ತಾರೆ. ಆದರೆ ಅಪಾಯವೊಂದುಂಟು. ಭಾರತಕ್ಕಿಂತ ಬೇರೊಂದು ದೇಶದಲ್ಲಿ ಅಧಿಕ ಗಿಟ್ಟುಪಾಟು ಇದೆ. ಎಂದಾದರೆ ತಕ್ಷಣ ಇಲ್ಲಿ ಖಾಲಿ ಮಾಡಿ ಅಲ್ಲಿ ಹಣ ಹೂಡುತ್ತಾರೆ.

ಎಫ್‌ಐಐಗಳವರು ಹಿಂದೆಯೂ ಭಾರತದಲ್ಲಿ ಹಣ ಹೂಡಲು ಆಸಕ್ತಿ ತೋರಿದ್ದರು. ಆದರೆ ಚೀನಾದಲ್ಲಿ ಸನ್ನಿವೇಶ ಇಲ್ಲಿಗಿಂತ ಪರಶಸ್ತವಾಗಿದೆ ಎಂದು ಮನವರಿಗೆ ಆದಾಗ ಇಲ್ಲಿಂದ ಹಣ ವಾಪಸ್‌ ಪಡೆದು ಅಲ್ಲಿಗೆ ಧಾವಿಸಿದ್ದರು.

ನೇರ ಬಂಡವಾಳ ಹೂಡುವವರು ಇಲ್ಲಿನ ಉದ್ಯಮ ಯೋಜನೆಗಳಲ್ಲಿ ಹಣ ತೊಡಗಿಸಿ ಲಾಭಗಳಿಸಿ, ಭಾರತ ಸರ್ಕಾರ ಅನುಮತಿ ಕೊಟ್ಟ ಪ್ರಮಾಣದಲ್ಲಿ ಬಂಡವಾಳ ಮತ್ತು ಗಳಿಕೆ ಹಣವನ್ನು ಒಯ್ಯುತ್ತಾರೆ. ಆದರೆ ಆ ಬಾಬಿನ ಹೆಚ್ಚು ಹಣ ಹರಿದು ಬರುತ್ತಿಲ್ಲ.

ಇದೇನೇ ಇದ್ದರೂ ೧೦೦ ಬಿಲಿಯನ್‌ ಡಾಲರ್‌ ಬಂಡವಾಳ ಕ್ಷೇಮಕರವಾಗಿಯೇ ಪರಿಣಮಿಸುತ್ತದೆ ಎನ್ನಬಹುದು. ವಾಸ್ತವವಾಗಿ ಭಾರತದ ಒಟ್ಟು ವಿದೇಶ ಸಾಲ ಕೂಡ ಪರಿಣಮಿಸುತ್ತದೆ ಎನ್ನಬಹುದು. ವಾಸ್ತವವಾಗಿ ಭಾರತದ ಒಟ್ಟು ವಿದೇಶ ಸಾಲ ಕೂಡ ೧೦೦ ಬಿಲಿಯನ್‌ಗೆ ಹೋಲಿಕೆಯಾಗುವಷ್ಟು ಮಾತ್ರ ಇದೆ. ವಾಸ್ತವವಾಗಿ ಹಳೆಯ ಸಾಲದ ಕಂತುಗಳನ್ನು ಅವಧಿಗೆ ಮುನ್ನವೇ ತೀರಿಸುವುದು ಸಹ ಕಳೆದ ಹಲವು ತಿಂಗಳಿನಿಂದ ನಡೆದಿದೆ. ಭಾರತವು ಎತ್ತಿರುವ ವಿವಿಧ ಮೂಲದ ಅಲ್ಪಾವಧಿ ಸಾಲ ಸಹ ಸದ್ಯಕ್ಕೆ ೫.೬ ಬಿಲಿಯನ್‌ ಮಾತ್ರ. ಹಳೆಯ ದೀರ್ಘಾವಧಿ ಸಾಲ ಮತ್ತು ಅಲ್ಪಾವಧಿ ಸಾಲದ ಬಾಬ್ದು ಕಂತುಗಳನ್ನು ಕಟ್ಟುವುದು ಸದ್ಯ ವರ್ಷಕ್ಕೆ ೧೧ ಬಿಲಿಯನ್‌ನಷ್ಟು ಮಾತ್ರವಿದೆ.

ಕೇಂದ್ರ ಅರ್ಥ ಸಚಿವರು ಹೇಳುವ ಒಂದು ಮಾತು ಅರ್ಥಗರ್ಭಿತ. ೧೯೯೧ರಿಂದ ಈಚೆಗೆ ವಿದೇಶಿ ವಿನಿಮಯ ಸಂಗ್ರಹವು ೯೪ ಬಿಲಿಯನ್‌ ಡಾಲರ್‌ನಷ್ಟು ಬೆಳೆಯಿತು. ಅದೇ ಅವಧಿಯಲ್ಲಿ ವಿದೆಶಿ ಸಾಲ ಬೆಳೆದಿದ್ದು ೨೦ ಬಿಲಿಯನ್‌ ಡಾಲರ್‌ನಷ್ಟು ಮಾತ್ರ.

ಇದೆಲ್ಲ ಸರಿಯೆ. ಭಾರತದೊಳಕ್ಕೆ ವಿದೇಶಗಳಿಂದ ಹರಿದು ಬರುತ್ತಿರುವ ವಿನಿಮಯ ಹಣವು ಎಷ್ಟರಮಟ್ಟಿಗೆ ಭಾರತಕ್ಕೆ ಸೇರಿದ ಹಣ?. ಸಾಲವಾದರೂ ಅಷ್ಟೆ; ಹರಿದು ಬಂದಿದ್ದು ಹೂಡಿಕೆ ಹಣವಾದರೂ ಅಷ್ಟೆ; ಅದು ಸ್ವಂತ ಗಳಿಕೆ ಅಲ್ಲ. ನೆರೆಯ ಮಿತ್ರನೊಬ್ಬ ಈ ಹಣ ನಿಮ್ಮಲ್ಲಿ ಜೋಪಾನ ಮಾಡಿ, ಎಂದು ಹೇಳಿಕೊಟ್ಟು ಹೋಗಿರುವ ಹಣ. ಅದನ್ನು ಹೆಚ್ಚೆಂದರೆ ಗಳಿಕೆಗೆ ಹಚ್ಚಬೇಕೆ ಹೊರತು ಖಚು ಮಾಡಿಕೊಳ್ಳುವುದಕ್ಕೆ ಬಿಟ್ಟು ಹೋಗಿರುವ ಹಣ ಇದಲ್ಲ.

ನಮ್ಮ ಉದ್ಯಮಿಗಳು ಲಾಭದ ಹಣ ದುಡಿಯುವುದಕ್ಕಾಗಿ ಬಂಡವಾಳವಾಗಿ ಈ ಹಣವನ್ನು ಬಳಸಿಕೊಳ್ಳದಿದ್ದರೆ ಈಗಿನ ಸಂಪನ್ನತೆ ವ್ಯರ್ಥ. ನಮ್ಮ ಉದ್ಯಮಿಗಳಲ್ಲಿ ಅಷ್ಟೊಂದು ಉತ್ಸಾಹ ಎಲ್ಲಿದೆ?. ಬಂಡವಾಳ ತೊಡಗಿಸಿ ಸರಕು ಸಹಿತ ಸಿದ್ಧಪಡಿಸಿ ರಫ್ತು ಮಾಡಿದರೆ ಮಾತ್ರ, ಅದನ್ನು ಲಾಭಕರವಾಗಿ ರಫ್ತು ಮಾಡಿದರೆ ಮಾತ್ರ, ಈ ಬಂಡವಾಳ ಉಪಯುಕ್ತವಾದೀತು. ಇಲ್ಲವೇ ಖರ್ಚಿಗೆ ದಾರಿ ಆದೀತು.

ಭಾರತವಾದರೂ ಹೆಚ್ಚಿಗೆ ಆದ ವಿನಿಮಯ ಹಣವನ್ನು ಏನು ಮಾಡಬಲ್ಲುದು? ಅಂತರಾಷ್ಟ್ರೀಯ ಬ್ಯಾಂಕುಗಳಲ್ಲಿ ಠೇವಣಿ ಇಡಬಹುದು. ಈಗ ಎಫ್‌ಐಐಗಳವರು ಸ್ವತಃ ಆ ಕೆಲಸ ಮಾಡಬಹುದಿತ್ತು. ತಾನೇ?. ಅವರೇ ಆ ರೀತಿ ತೊಡಗಿಸಿದ್ದರೆ ಎಷ್ಟು ಲಾಭವಾಗುತ್ತಿತ್ತೋ ಅದಕ್ಕಿಂತ ಹೆಚ್ಚು ಲಾಭ ಭಾರತದ ಷೇರುಗಳ್ಲಲಿ ತೊಡಗಿಸಿದರೆ ಬರುತ್ತದೆ ಎಂಬ ಲೆಕ್ಕಾಚಾರದಿಂದಲೇ ಭಾರತದೊಳಕ್ಕೆ ವಿನಿಮಯ ಹಣ ತಂದಿದ್ದಾರೆ. ಅವರ ನಿರೀಕ್ಷೆ ಹುಸಿ ಆಗುತ್ತದೆ ಎಂಬ ಸಣ್ಣ ಸುಳಿವು ಸಿಕ್ಕರೂ ಹಣವನ್ನು ವಾಪಸ್‌ ಒಯ್ಯುತ್ತಾರೆ.

ಭಾರತದಲ್ಲಿ ವಿದೇಶಿ ಬಂಡವಾಳ ಹಾಗೂ ಸ್ವದೇಶಿ ಬಂಡವಾಳ ತೊಡಗಿಸಿ ಇಲ್ಲವೇ ಸ್ವಂತ ದುಡಿಮೆಯಿಂದ ಗಳಿಸಿ ಬ್ಯಾಂಕುಗಳಲ್ಲಿ ಇಟ್ಟಿರುವ ಹಣವನ್ನು ಯಾರುಬೇಕಾದರೂ ಎಷ್ಟು ಬೇಕಾದರೂ ವಿದೇಶಕ್ಕೆ ಒಯ್ಯುವಂತಿಲ್ಲ. ಒಯ್ದು ಅಲ್ಲೆಲ್ಲ ಹಣ ಠೇವಣಿ ಇಡುವಂತಿಲ್ಲ.

ವಿದೇಶ ನೇರ ಬಂಡವಾಳ ತಂದವರು ಸಹ ತಾವು ಇಲ್ಲಿನ ಯೋಜನೆಗಳಲ್ಲಿ ಪಾಲ್ಗೊಂಡ ಗಳಿಸಿಟ್ಟ ಹಣವನ್ನು ಪೂರ್ತಿ ಒಯ್ಯುವಂತಿಲ್ಲ. ಭಾಗಶಃ ಒಯ್ಯಲು ಮಾತ್ರ ಅವಕಾಶವಿದೆ.

ವಿನಿಮಯ ಸಂಗ್ರಹ ತುಂಬಿ ತುಳುಕುತ್ತಿದೆ ಎಂಬ ಪರಿಸ್ಥಿತಿಯಲ್ಲಿ ಅದಿಕ ವಿನಿಮಯವನ್ನು ಹೊರಕ್ಕೆ ಸಾಗಿಸಲು ಧಾರಾಳ ಅವಕಾಶ ಕೊಟ್ಟರೆ ಅಲ್ಲಿಗೆ ಮುಗಿಯಿತು. ಮುಂದೆಂದೋ ಹಣ ದುಡಿಯುತ್ತೇನೆಂದು ಹೇಳಿ, ಇಂದು ಕೈಲಿರುವುದನ್ನು ಕಳೆದುಕೊಳ್ಳುವವನ ಪಾಡು ಆಗುತ್ತದೆ ಭಾರತದ್ದು.

೨೧.೧೨.೨೦೦೩