‘ಸಾಲವನು ಕೊಂಬಾಗ ಹಾಲೋಗರುಂಡಂತೆ. ಸಾಲಿಗರು ಬಂದು ಕೇಳೆವಾಗ ಕಿಬ್ಬದಿಯ ಕೀಲು ಮುರಿದಂತೆ ಸರ್ವಜ್ಞ’. ಹೌದು. ಸಾಲ ವಸೂಲಿಗೆ ಬಂದಾಗ ಜೇಬಿನ್ಲಲಿ ಹಣ ಇಲ್ಲದಿದ್ದರೆ, ಭಂಡಾರ ಬರಿದಾಗಿದ್ದರೆ, ಮೈಪರಚಿಕೊಳ್ಳುವಂತೆ ಆಗುತ್ತದೆ. ಮಾತ್ರವಲ್ಲ; ಪ್ರಾಣ ಹೋದಂತೆ ಆಗುತ್ತದೆ. ನೋವು ಎಷ್ಟೆಂದರೆ, ‘ಕಿಬ್ಬದಿಯ ಕೀಲು ಮುರಿದಂತೆ’. ಸಂಧಿವಾತ ಇದ್ದವರು ಮಾತ್ರ ಈ ನೋವನ್ನು ಅನುಭವಿಸಿ ಬಲ್ಲರು.

ಒಂದು ಪಕ್ಷ ಕೈ ತುಂಬಾ ‘ಹಣವೋ ಹಣ’ ಆಗಿದ್ದರೆ ! ಅದ್ಭುತ. ಕೊಡಬೇಕಾದ ಹಣವನ್ನು ಬಿಸಾಡುವುದೇ ಅಲ್ಲದೆ ಸಾಲ ಪಡೆಯುವ ಬದಲು, ಸಾಲ ಕೊಡುವ ಸ್ಥಿತಿ ಬರುತ್ತದೆ.

ಇದನ್ನು ವಿದೇಶಿ ಬಾಕಿ ಹಣ ಪಾವತಿ ಸ್ಥಿತಿ ಎನ್ನುತ್ತೇವೆ. ವ್ಯಾಪಾರ ಚೆನ್ನಾಗಿ ನಡೆದು ಗಲ್ಲಾಪೆಟ್ಟಿಗೆ ತುಂಬಿದ್ದರೆ, ಅಂದರೆ ಬ್ಯಾಂಕ್‌ ಬ್ಯಾಲೆನ್ಸ್‌ ಚೆನ್ನಾಗಿದ್ದರೆ, ಆತ್ಮ ವಿಶ್ವಾಸವೋ ಆತ್ಮವಿಶ್ವಾಸ. ಸಾಲ ತಂದವರು ಹಣ ಕೊಟ್ಟು ಗಳಿಸಿದ್ದರಲ್ಲಿ ಒಂದಿಷ್ಟು ಉಳಿಸಿಕೊಳ್ಳಬಹುದು.

ವಿದೇಶಿ ಹಣ ಹರಿದು ಬರಲು ಮುಖ್ಯವಾದ ಮಾರ್ಗವೆಂದರೆ ರಫ್ತುವೃದ್ಧಿ. ಆರ್ಥಿಕ ಸುಧಾರಣಾ ಕ್ರಮಗಳು ಜಾರಿಗೆ ಬಂದ ಮೇಲಿನ ಒಂದು ದಶಕದಲ್ಲಿ ರಫ್ತು ಸ್ಥೈರ್ಯ ಜಾಸ್ತಿ ಆಗಿದೆ. ಪ್ರಸ್ತುತ ಹಣಕಾಸು ವರ್ಷದ ಅರ್ಧ ಅವಧಿಯಲ್ಲಿ ಔಷಧಿ ರಫ್ತು, ವಾಹನ ಮತ್ತು ವಾಹನ ಬಿಡಿಭಾಗ, ಕೃಷಿ ಉತ್ಪನ್ನ, ಹಣ್ಣು ಹೂವು ರಫ್ತು ಮುಂತಾದುವೆಲ್ಲ ಏರಿದೆ. ಆಮದು ಕಡಿಮೆಯೇ ಆಗಿದೆ. ರಫ್ತು ಕ್ಷೇತ್ರದಲ್ಲಿ ಏಕಮಾತ್ರ ಎನ್ನುವಂತೆ ವಿಜೃಂಭಿಸುತ್ತಿರುವುದು ಸಾಫ್ಟ್‌ವೇರ್‌ ಮತ್ತು ಕಂಪ್ಯೂಟರ್‌ ಸೇವಾಸೌಲಭ್ಯದ ರಫ್ತು.

ಈ ವರ್ಷ ರಫ್ತು ಬಾಬಿನ ಗಳಿಕೆ ೬೫೦೦ ಕೋಟಿ ಡಾಲರ್‌ ಆಗಲಿಕ್ಕೆ ಸಾಕು. ಇದು ಒಟ್ಟಾರೆ ಆಂತರಿಕ ಉತ್ಪನ್ನ ಜಿಡಿಪಿಯ ಶೇ. ೧೪ ಆಗುತ್ತದೆ. ಒಂದು ದಶಕದ ಹಿಂದೆ ಇದು ಶೇ. ೫ ಆಗಿತ್ತು. ವಿದೇಶಿ ವಿನಿಮಯ ಚಾಲ್ತಿ ಲೆಕ್ಕದಲ್ಲಿ ಈಗ ೨೮೦ ಕೋಟಿ ಡಾಲರ್‌ ಶಿಲ್ಕು ಇದೆ.

ವಿದೇಶಿ ವಿನಿಮಯ ಸಂಗ್ರಹ ಎಷ್ಟೊಂದು ಕ್ಷೇಮಕರವಾಗಿದೆ ಎನ್ನುವುದಕ್ಕೆ ಒಂದು ಉದಾಹರಣೆ ೨೦೦೨ ಸೆಪ್ಟೆಂಬರ್‌ನಲ್ಲಿ ರಿಸರ್ವ್‌ ಬ್ಯಾಂಕ್‌ ಒಂದು ಸೂಚನೆ ಹೊರಡಿಸಿತು. ಕಂಪನಿಗಳು ವ್ಯಾಪಾರೋದ್ದೇಶಕ್ಕೆ ಹಿಂದೆ ಎತ್ತಿದ ಸಾಲದ ಕಂತನ್ನು ಅವಧಿಗೆ ಮುನ್ನವೇ ಬೇಕಾದರೆ ತೀರಿಸಬಹುದು ಎಂಬುದೇ ಆ ಸೂಚನೆ. ಹಾಗೆ ತೀರಿಸುವ ಕಂತಿನ ಮೊತ್ತ ಹತ್ತು ಕೋಟಿ ಡಾಲರ್‌ಗಿಂತ ಕಡಿಮೆ ಇದ್ದರೆ ರಿಸರ್ವ್‌ ಬ್ಯಾಂಕಿನ ಔಪಚಾರಿಕ ಅನುಮತಿಯೂ ಬೇಕಿಲ್ಲ. ವಿನಿಮಯ ಹಣವನ್ನು ಪಡಿತರದಂತೆ ಈಚಿನವರೆಗೂ ಮಂಜೂರು ಮಾಡುತ್ತಿದ್ದರು.

ಅವಧಿಗೆ ಮುನ್ನವೇ ತೀರಿಸಿದ ಬಾಕಿ ಕಂತು ಸೇರಿದಂತೆ ಕಂಪನಿ ವಲಯ ತೀರಿಸಿದ ಮೊತ್ತ ಏಪ್ರಿಲ್‌-ಡಿಸೆಂಬರ್‌ ಅವಧಿಯಲ್ಲಿ ೩೦೮ ಕೋಟಿ ಡಾಲರ್‌. ಸಾಲವೆಂದು ಪಡೆದ ಹಣ ೨೧೦ ಕೋಟಿ ಡಾಲರ್‌ (ಹಿಂದಿನ ವರ್ಷದ ಇದೇ ಅವಧಿಯಲ್ಲಿ ೩೧೦ ಕೋಟಿ ಡಾಲರ್‌ ಹಾಗೂ ೨೩೦ ಕೋಟಿ ಡಾಲರ್‌).

ಕಂಪನಿ ವಲಯ ಮಾತ್ರವಲ್ಲ. ಸರ್ಕಾರ ಸಹಾ ಅಧಿಕ ಬಡ್ಡಿ ದರದ ೧೦೪ ಕೋಟಿ ಡಾಲರ್‌ ಏಷ್ಯಾ ಅಭಿವೃದ್ಧಿ ಬ್ಯಾಂಕ್‌ ಸಾಲವನ್ನೂ, ೧೭೦ ಕೋಟಿ ಡಾಲರ್‌ ವಿಶ್ವಬ್ಯಾಂಕ್‌ ಸಾಲವನ್ನೂ ಈ ಫೆಬ್ರವರಿಯಲ್ಲಿ ಅವಧಿಗೆ ಮುಂಚೆ ತೀರಿಸಿತು.

ಒಟ್ಟಾರೆ ಆರ್ಥಿಕತೆಗೆ ಹೋಲಿಸಿದರೆ ಈ ಮೊತ್ತಗಳೇನೂ ಭಾರಿ ದೊಡ್ಡದಲ್ಲ. ಆದರೆ ವಿದ್ಯಮಾನ ಚೇತೋಹಾರಿ. ಈ ಸನ್ನಿವೇಶದಲ್ಲಿ ಡಾಲರ್‌ ಅನ್ವಯ ರೂಪಾಯಿ ಮೌಲ್ಯ ದೃಢಗೊಂಡಿದ್ದು ಮಾತ್ರ ಇನ್ನಷ್ಟು ಚೇತೋಹಾರಿ ಎನ್ನುವ ವಿದ್ಯಮಾನ. ಕಳೆದ ೧೨ ತಿಂಗಳಲ್ಲಿ ರೂಪಾಯಿ ಮೌಲ್ಯ ಶೆ. ೩.೪ ಹೆಚ್ಚಾಗಿದೆ. ವಿಶ್ವರಂಗದಲ್ಲಿ ಡಾಲರ್‌ ಮೌಲ್ಯ ಶೇ. ೨೧ ಕುಸಿದಿದೆ. ಭಾರತದ ರಫ್ತು ಹೆಚ್ಚಾಗಿ ವಿನಿಮಯ ಸಂಗ್ರಹ ಅಧಿಕಗೊಂಡಿದೆ. ಫಲಿತವೆಂದರೆ ಭಾರತದೊಳಗೆ ಡಾಲರ್‌ಗೆ ಬೇಡಿಕೆ ಕಡಿಮೆ ಆಗಿದೆ. ರೂಪಾಯಿ ಬಲಗೊಂಡಿದೆ.

ರೂಪಾಯಿ ಅಪಮೌಲ್ಯ ಅಥವಾ ಮಲ್ಯಚ್ಛೇದನ ದಶಕಗಳ ಹಿಂದೆ ದುಃಸ್ವಪ್ನವೆನಿಸಿತ್ತು. ೧೯೫೨ರವರೆಗೆ ರೂಪಾಯಿ ಮೌಲ್ಯ ಬ್ರಿಟನ್ನಿನ ಪೌಂಡ್‌ಗೆ ಲಗತ್ತಾಗಿತ್ತು. ೬೦ರ ದಶಕದಲ್ಲಿ (ಆ ವೇಳೆಗೆ ರೂಪಾಯಿ ಡಾಲರ್‌ನ ಸಾದೃಶ್ಯಕ್ಕೆ ಒಳಗಾಗಿತ್ತು) ವಿನಿಮಯ ಹಣ ಕೊರತೆ ಬಿಕ್ಕಟ್ಟು ಮೂಡಿಸಿದಾಗ ಅಂತರಾಷ್ಟ್ರೀಯ ನೆರವು ನಮ್ಮ ದೇಶವನ್ನು ಕಾಪಾಡಿತ್ತು. ೭೦ರ ದಶಕದಲ್ಲಿ ವಿದೇಶಗಳಿಗೆ ಹೋಗಿ ದುಡಿಯತೊಡಗಿದ ಭಾರತೀಯರು ಕಳುಹಿಸಿದ ಹಣವು ನೆರವಿಗೆ ಬಂದಿತ್ತು. ೮೦ರ ದಶಕದ ಅಂತ್ಯದ ವೇಳೆಗೆ ವಿದೇಶಿ ವಿನಿಮಯ ಸಂಗ್ರಹ ಅನ್ವಯ ದೇಶಕ್ಕೆ ಒಂದು ಬಗೆಯ ದಿವಾಳಿತನ. ೯೦ರ ದಶಕ ಆರಂಭದಿಂದ ನಿಜವಾದ ಅರ್ಥದಲ್ಲಿ ದೃಢತೆ.

ವಾಸ್ತವವಾಗಿ ಪೌಂಡ್‌ ನಂತರ ಡಾಲರ್‌ ಹಣದ ಸಾದೃಶ್ಯದ ಅನ್ವಯ; ಅಂದರೆ ಆರ್ಥಿಕ ದೃಢತೆ ಅನ್ವಯ; ಡಾಲರ್‌ ರೂಪಾಯಿ ಪರಸ್ಪರ ಹೇಗೆ ತೂಗುತ್ತವೆ ಎಂದು ಲೆಕ್ಕಹಾಕಿ, ವಿನಿಮಯ ದರವನ್ನು ನಿರ್ಧರಿಸುವುದು ನಡೆದಿತ್ತು. ೧೯೯೩ರಿಂದ ಮಾತ್ರವೇ, ಯಾವುದೇ ವಿದೇಶಿ ಹಣದ ಅನ್ವಯ ರೂಪಾಯಿಯು ಎಷ್ಟೇ ಬೆಲೆಯನ್ನು ಬೇಕಾದರೂ ನಿಗದಿ ಮಾಡಿಕೊಳ್ಳಲಿ ಎನ್ನುವಂತೆ ತೇಲಿ ಬಿಟ್ಟಿದ್ದು. ಅಲ್ಲಿಂದ ಮುಂದೆಯೇ ರೂಪಾಯಿ ಸತ್ವ ತಾನೇತಾನಾಗಿ ವ್ಯಕ್ತವಾಗತೊಡಗಿದ್ದು.

ಹಣದ ಮೌಲ್ಯ ನಿರ್ಧಾರವನ್ನು ಹೀಗೆ ತೇಲಿಬಿಟ್ಟ ಪ್ರಸಂಗಗಳಲ್ಲಿ ಸಹ ಪ್ರತಿಯೊಂದು ರಾಷ್ಟ್ರವೂ, ಈಗ ಭಾರತ ಮಾಡುತ್ತಿರುವಂತೆ, ಕರೆನ್ಸಿ ಮೌಲ್ಯವು ವಿಪರೀತವಾಗಿ ಏರಿ ಇಳಿಯದಂತೆ ಎಚ್ಚರಿಕೆ ವಹಿಸುತ್ತದೆ. ಆಯಾ ರಾಷ್ಟ್ರದ ಕೇಂದ್ರ ಬ್ಯಾಂಕುಗಳು (ನಮ್ಮ ರಿಸರ್ವ್‌ ಬ್ಯಾಂಕಿನಂಥವು) ನಾನಾ ಮಾರ್ಗಗಳಿಂದ ನಿಯಂತ್ರಿಸಲು ಯತ್ನಿಸುತ್ತವೆ.

ರೂಪಾಯಿ, ಡಾಲರ್‌, ಪೌಂಡ್‌, ಯೆನ್‌, ಯೂರೋ ಹೀಗೆ ಹಣ ಯಾವುದೇ ಆದರೂ, ಅದರ ಮೌಲ್ಯವು ದೃಢಗೊಂಡಂತೆ ಆಯಾ ರಾಷ್ಟ್ರದ ಆರ್ಥಿಕ ಆರೋಗ್ಯಕ್ಕೆ ದಿಕ್ಸೂಚಿಯಾಗಿ ಪರಿಣಮಿಸುತ್ತದೆ. ಹಾಗೆ ಆಗುವುದರಿಂದ ಅನೇಕ ವೇಳೆ ಅನುಕೂಲಕ್ಕಿಂತ ಅನಾನುಕೂಲವೇ ಅಧಿಕ.

ರೂಪಾಯಿ ಮೌಲ್ಯ ಕುಸಿದರೆ ವ್ಯಾಪಾರ ಮಾಡುವಾಗ ಡಾಲರ್‌ನವರಿಗೋ ಯೆನ್‌ನವರಿಗೋ ಅನುಕೂಲ. ರೂಪಾಯಿನವರಿಗೆ ಆಮದು ತುಟ್ಟಿಯಾಗುತ್ತದೆ. ಆದರೆ ಅನ್ಯ ಕರೆನ್ಸಿಯವರು ನಮಗೆ ಸರಕು ಮಾರಲು ಮುಂದಾಗುತ್ತಾರೆ. ಏಕೆಂದರೆ ಪ್ರತಿ ಪ್ರಸಂಗದಲ್ಲೂ ಅವರಿಗೆ ಹೆಚ್ಚು ಮೊತ್ತ ಸಂದಾಯ ಆಗುತ್ತಿರುತ್ತದೆ.

ಅದೇ ರೀತಿ ರೂಪಾಯಿ ದೃಢಗೊಂಡರೆ ಅನ್ಯ ರಾಷ್ಟ್ರದವರಿಗೆ ಸರಕು ಮಾರುವುದಕ್ಕೆ ಅನಾನುಕೂಲ. ಏಕೆಂದರೆ ತಮ್ಮ ಕೈಗೆ ಬರುವ ಮೊತ್ತ ಕಡಿಮೆಯೆಂದು ಭಾವಿಸುವಂತಾಗುತ್ತದೆ.

ಅದೇ ರೀತಿ, ರೂಪಾಯಿ ದುರ್ಬಲವಾಗಿದ್ದರೆ ನಾವು ಬೇಕಾದಷ್ಟು ಸರಕು ಮಾರಬಹುದು. ರೂಪಾಯಿ ಸಬಲಗೊಂಡರೆ ರಫ್ತು ಕಷ್ಟವಾಗುತ್ತದೆ.

ಯಾವುದೇ ರಾಷ್ಟ್ರವು ವಿದೇಶ ವ್ಯಾಪಾರ ಮಾಡುವಾಗ ತನ್ನ ಕರೆನ್ಸಿಯು ಪ್ರತಿಷ್ಠೆಯ ಪ್ರತೀಕವಾಗಿದ್ದರೂ ಅಧಿಕ ರಫ್ತು ಸಾಧಿಸಬೆಕೆಂದೇ ಪ್ರಯತ್ನಿಸುತ್ತದೆ. ತನ್ನ ಕರೆನ್ಸಿ ದುಬಾರಿ ಎನ್ನುವ ಕಾರಣಕ್ಕೆ ಗ್ರಾಹಕ ರಾಷ್ಟ್ರ ತನ್ನನ್ನು ಬಿಟ್ಟು ತನ್ನ ಪ್ರತಿಸ್ಪರ್ಧಿ ರಾಷ್ಟ್ರದಿಂದ ಸರಕು ಖರೀದಿಸುವಂತೆ ಆಗಬಾರದು ಎಂದೇ ಭಾವಿಸುತ್ತದೆ.

ಅಮೆರಿಕವು ಜಗತ್ತಿನ ಅತಿ ಬಲಿಷ್ಠ ರಾಷ್ಟ್ರವೆಂದೇ ಬೀಗುತ್ತಿದ್ದರೂ ಕಳೆದ ಒಂದು ವರ್ಷದಲ್ಲಿ ಭಾರೀ ಪ್ರಮಾಣದ ಡಾಲರ್‌ ಮೌಲ್ಯ ಕುಸಿತಕ್ಕೆ ಅವಕಾಶ ಮಾಡಿಕೊಟ್ಟಿತೇಕೆ? ಅದರ ಅಭಿಮಾನಕ್ಕೆ ಭಂಗವುಂಟಾಗಲಿಲ್ಲವೇ? ವಾಸ್ತವವಾಗಿ ಇತರ ಕರೆನ್ಸಿಗಳೆಲ್ಲ ಮುಂಚಿಗಿಂತ ದೃಢಗೊಂಡು, ಡಾಲರ್‌ ಮೌಲ್ಯ ಕುಸಿದಾಗ ಅಮೆರಿಕ ಒಪ್ಪಿಕೊಳ್ಳಲೇಬೇಕು.

ರಫ್ತು ವ್ಯಾಪಾರ ಕುದುರಿಸಿಕೊಳ್ಳುತ್ತಲೇ ಇರಲು ಜಪಾನು ತನ್ನ ಯೆನ್‌ ಮೌಲ್ಯವನ್ನು ಕಾಪಾಡಿಕೊಂಡು ಬಂದಿದೆ.

ಹೀಗೆ ಪ್ರತಿ ರಾಷ್ಟ್ರವೂ ತನ್ನ ವ್ಯಾಪಾರ ಮತ್ತು ಕರೆನ್ಸಿಯ ಮೌಲ್ಯ ಇವುಗಳ ನಡುವೆ ಸಮತೋಲನ ಸಾಧಿಸುವುದಕ್ಕೆ ಹೆಣಗುತ್ತಲೇ ಇರುತ್ತದೆ.

ಯಾವುದೇ ರಾಷ್ಟ್ರ ಸರಕನ್ನೂ, ಸೇವಾ ಸೌಲಭ್ಯಗಳನ್ನೂ ಹೆಚ್ಚು ಹೆಚ್ಚು ಸೃಷ್ಟಿಸಲು ಹೆಣಗುತ್ತದೆ. ಆಗ ಮಾತ್ರ ಅದು ಆರೋಗ್ಯ ಕಾಪಾಡಿಕೊಂಡಂತೆ. ಆದರೆ ಉತ್ಪಾದಿಸಿದ್ದನ್ನು ಮಾರಲು ಸಧ್ಯವಾದರೆ ಮಾತ್ರ ಸಂಪತ್ತು ಸೃಷ್ಟಿಯಾದಂತೆ. ಬಳಸಿ ಮಿಕ್ಕಿದ್ದನ್ನು ಮಾರುವುದೂ ಸಾಧ್ಯವಾಗಬೇಕು. ಬಳಕೆ ಕಡಿಮೆ ಮಾಡಿಕೊಂಡಾದರೂ ಮಾಡಿಕೊಳ್ಳಬೇಕು. ಒಟ್ಟಿನಲ್ಲಿ ಧಾನ್ಯ ಬೆಳೆಯುವ ನಮ್ಮ ಬಡ ರೈತನನ್ನು ಕೇಳಿದರೂ ಸಾಕು; ಈ ಆರ್ಥಿಕ ಅಂಶವನ್ನು ದೃಢಪಡಿಸುತ್ತಾನೆ. ಹೀಗಾಗಿ ರಾಷ್ಟ್ರಗಳು ತಂತಮ್ಮ ವಿನಿಮಯ ದರವನ್ನು ಕೇಂದ್ರ ಬ್ಯಾಂಕ್‌ಗಳ ಮೂಲಕ ನಿಯಂತ್ರಿಸಲು ಸದಾ ಯತ್ನಿಸುತ್ತವೆ.

ಕರೆನ್ಸಿಯನ್ನು ಇತರ ಕರೆನ್ಸಿಗಳ ಅನ್ವಯ ತೇಲಿ ಬಿಟ್ಟಿರುವಾಗ ಮೌಲ್ಯ ಏರುಪೇರು ಆಗುತ್ತಿರುತ್ತದೆ. ಅದು ವಿಪರೀತವಾಗಬಾರದು. ಭಾರತ ಸಹ ಡಾಲರ್‌ ರೂಪಾಯಿ ಅನ್ವಯ ವಿನಿಮಯ ದರ ವಿಪರೀತ ಹೆಚ್ಚು ಕಡಿಮೆ ಆಗದಂತೆ ಮಾಡಲು ಹೆಣಗುತ್ತದೆ. ಉದಾಹರಣೆಗೆ ಮೇ ೨೨ ರಂದು ಡಾಲರ್‌ನ ವಿನಿಮಯ ದರ ರೂ. ೪೬.೯೦ ಆದಾಗ ರಿಸರ್ವ್‌ ಬ್ಯಾಂಕ್ ಹೆಣಗಾಡಿತು. ವಾಸ್ತವವಾಗಿ ರೂ. ೪೬.೯೦ ದಿನದ ಅಂತ್ಯದ ದರ ಮಧ್ಯಾಹ್ನ ೪೬.೮೧ ಆಗಿತ್ತು. ಅಂದರೆ ರೂಪಾಯಿ ಮೌಲ್ಯ ಮಧ್ಯಾಹ್ನ ಜಾಸ್ತಿಯಾಗಿತ್ತು. ಸಂಜೆ ವೇಳೆಗೆ ತಗ್ಗಿತು. ಇದಕ್ಕೆ ಮುಖ್ಯ ಕಾರಣ ರಿಸರ್ವ್ ಬ್ಯಾಂಕು. ಅದು ಆ ಒಂದೇ ದಿನದಂದು ತನ್ನ ಸಂಗ್ರಹದಲ್ಲಿದ್ದ ೨೦ ಕೋಟಿ ಡಾಲರ್‌ ಹಣವನ್ನು ಮಾರಾಟಕ್ಕೆ ಬಿಟ್ಟಿತು. ಡಾಲರ್‌ಗೆ ಬೇಡಿಕೆ ಕಡಿಮೆ ಆಯಿತು. ರಿಸರ್ವ್‌ ‌ಬ್ಯಾಂಕ್ ಮಾತ್ರವಲ್ಲ; ರಫ್ತುದಾರರು ಸಹ ಡಾಲರ್‌ ರೂಪದಲ್ಲಿದ್ದ ತಮ್ಮ ಹಣವನ್ನು ಡಾಲರ್‌ ‌ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಕಾರಣ ಗೊತ್ತೆ? ರೂಪಾಯಿ ಮೌಲ್ಯ ಅಧಿಕಗೊಂಡರೆ ರಫ್ತು ಬೆಲೆ ಕುದುರುವುದು ಕಡಿಮೆ. ತಮಗೆ ರಫ್ತು ಸಾಧ್ಯತೆ ಕಡಿಮೆ ಆಗಬಾರದು. ಡಾಲರ್‌ ಲಭ್ಯತೆ ಹೆಚ್ಚಾದಂತೆ ೨೦೦೦ ನವೆಂಬರ್‌ನಲ್ಲಿ ವಿನಿಮಯ ದರ ಈಗಿರುವಷ್ಟೇ ಇತ್ತು. ಮರುವರ್ಷ ಅದೇ ವೇಳೆ ರೂ.೪೭ರ ಗೆರೆ ದಾಟಿತ್ತು. ೨೦೦೨ರ ಜೂನ್‌ನಲ್ಲಿ ಅದು ರೂ. ೪೯. ಮುಂದೆ ಅಂತರಾಷ್ಟ್ರೀಯ ಸ್ಥಿತಿಗತಿ ಬದಲಾದಂತೆ ೨೦೦೩ ಜನವರಿಯಲ್ಲಿ ರೂ. ೪೭.೮೦, ಮೇ ೧೨ ರಂದು ರೂ. ೪೭.೧೭. ಅನಂತರ ರೂ. ೪೭ ಗೆರೆ ಕೆಳಕ್ಕೆ.

ಈ ಏರಿಳಿತಗಳ ನಡುವೆ ಎರಡು ವಿದ್ಯಮಾನಗಳನ್ನು ಪ್ರಧಾನವಾಗಿ ಗಮನಿಸಬೇಕು. ಭಾರತದಿಂದ ವಿದೇಶಗಳಿಗೆ ಹೋಗಿ ಭಾರತಕ್ಕೆ ಹಣ ಕಳುಹಿಸುವವರು, ಭಾರತಕ್ಕೆ ಪ್ರವಾಸಿಗಳಾಗಿ ಬರುವವರು ವಿನಿಮಯ ಹಣವು ದೇಶದೊಳಕ್ಕೆ ಬರಲು ನೆರವಾಗುತ್ತಾರೆ. ಅದೇ ವೇಳೆ ಯಾವುದೇ ಸರಕನ್ನು ರಫ್ತು ಮಾಡದಿದ್ದರೂ ತಜ್ಞರ ಬುದ್ಧಿಶಕ್ತಿ ಬಳಸಿ ಅಭಿವೃದ್ಧಿಪಡಿಸಿದ ಸಾಫ್ಟ್‌ವೇರ್‌ ಮಾರುವವರು ಹಾಗೂ ಕಂಪ್ಯೂಟರ್‌ ಕ್ಷೇತ್ರಕ್ಕೆ ಜನರನ್ನು ಬಳಸಿ ವಿನಿಮಯ ಹಣ ಗಳಿಸುವವರು ಸಹ ರಫ್ತುದಾರರು ಎಂದೇ ಎನಿಸಿಕೊಳ್ಳುತ್ತಾರೆ. ಹೀಗೆ ಐ. ಟಿ. ಕ್ಷೇತ್ರದ ಗಳಿಕೆ ಗಮನಾರ್ಹ ಎನಿಸಿದೆ. ೧೯೯೦-೯೧ರಲ್ಲಿ ಈ ಬಾಬಿನಿಂದ ಇದ್ದ ಗಳಿಕೆ ೭೫೦ ಕೋಟಿ ಡಾಲರ್‌. ಅದೇ ೨೦೦೧-೦೨ರ ವೇಳೆಗೆ ೩೫೦೦ ಕೋಟಿ ಡಾಲರ್‌ಗೆ ಏರಿತು. ಪ್ರತಿಯೊಂದು ಡಾಲರ್‌ ಸರಿಸುಮಾರು ೪೫-೫೦ ರೂಪಾಯಿಗೆ ಸರಿಸಮ ಎಂದಾಗ ಡಾಲರ್‌ಗಳಲ್ಲಿ ದುಡಿಯಲು ಭಾರತೀಯರಾದವರಿಗೆ ಸಹಜವಾಗಿ ಆತುರವಿರುತ್ತದೆ. ವಿದೇಶಗಳಿಗೆ ಹೋಗಿ ಎಷ್ಟು ಪರಿಪಾಟಲು ಪಡಲೂ ಅವರು ಸಿದ್ಧರಿರುತ್ತಾರೆ. ಆದರೆ ರೂಪಾಯಿ ಮೌಲ್ಯ ಅಧಿಕವಾಗಿ ರಫ್ತು ಗಳಿಕೆ ಕಡಿಮೆಯಾದಂತೆಲ್ಲ ಐ.ಟಿ.ಕಂಪನಿಗಳನ್ನು ನಡೆಸುವವರ ಉತ್ಸಾಹ ಕಡಿಮೆಯಾಗುತ್ತದೆ. ಅವರು ತಮ್ಮ ಸಿಬ್ಬಂದಿಗೆ ಕೊಡುವ ವೇತನ ಇತ್ಯಾದಿ ಕಡಿಮೆ ಮಾಡಲು ಮುಂದಾಗುತ್ತಾರೆ. ಆದ್ದರಿಂದ ಸಮತೋಲನ ಸಾಧಿಸುವ ಸರ್ಕಸ್‌ ತಪ್ಪಿಸುವಂತಿಲ್ಲ.

ಸದ್ಯದ ರೂಪಾಯಿ ಪ್ರಾಬಲ್ಯಕ್ಕೆ ಡಾಲರ್‌ನ ಮೌಲ್ಯ ಕುಸಿತ ಮುಖ್ಯವಾದ ಕಾರಣ. ಒಂದು ವರ್ಷದಿಂದ ಡಾಲರ್‌ಗೆ ದುರ್ದೆಸೆ. ಆದರೆ ಕುಸಿತ ಮಿತಿಯಲ್ಲಿದೆ ಎಂದೇ ಅಮೆರಿಕ ಸರ್ಕಾರ ಭಾವಿಸಿದೆ. ಡಾಲರ್‌ ಬಲವಾಗಿರಬೇಕು ಎಂಬ ನೀತಿಗೇನೂ ಅಮೆರಿಕ ಕಟ್ಟು ಬೀಳುತ್ತಿಲ್ಲ ಎನ್ನುವುದು ಮೇ ಎರಡನೇ ವಾರದ ವರದಿ. ಅದೇ ವೇಳೆ ಮೇ ಮೂರನೇ ವಾರದಲ್ಲಿ ಭಾರತದ ರಿಸರ್ವ್‌ ಬ್ಯಾಂಕು ರೂಪಾಯಿ ಮೌಲ್ಯ ಪರಿಸ್ಥಿತಿ ಅರಾಮದಾಯಕವಾಗಿದೆ ಎಂದೇ ಹೇಳಿತು.

ಅಮೆರಿಕ ಪರಿಸ್ಥಿತಿ ಸದ್ಯವೇ ದಿಢೀರನೆ ಸುಧಾರಿಸುವುದಿಲ್ಲ ಎಂಬ ಭಾವನೆ ಬಲವಾಗಿದೆ. ಆದ್ದರಿಂದ ಮುಂದಿನ ಒಂದು ವರ್ಷ ರೂ. ೪೭ರ ಆಸುಪಾಸಿನ ಮಟ್ಟದಲ್ಲೇ ರೂಪಾಯಿಯನ್ನು ಇನ್ನು ಒಂದು ವರ್ಷ ಇಟ್ಟಿರಬೇಕು ಎಂಬ ತಜ್ಞರ ನಿಲುವು ಕಾರ್ಯಸಾಧುವೇ ಸರಿ.

ಅಧಿಕೃತ ಅಂಕಿಸಂಖ್ಯೆ ಅನ್ವಯ ಇದೆಲ್ಲ ಸರಿ. ಆದರೆ ವ್ಯವಹಾರಸ್ಥರು ಈಗಲೂ ಒಂದು ಕಿವಿ ಮಾತು ಹೇಳುತ್ತಾರೆ. ಡಾಲರ್‌ಗೆ ಇನ್ನೂ ಸ್ವಲ್ಪ ಕಡಿಮೆ ರೂಪಾಯಿ ದರ ವಿಧಿಸಬಹುದು ಎಂಬುದು ಅವರ ಅಭಿಮತ. ರೂ. ೪೭ ಅಲ್ಲ. ರೂ. ೪೫.೭೦ ನಿಗದಿ ಮಾಡಿದರೂ ನಡೆಯುತ್ತದೆ. ಅಷ್ಟು ಆಗಬೇಕಾದರೆ ಅಮೆರಿಕದ ಸ್ಥಿತಿ ಇನ್ನೂ ಬಹಳ ಸುಧಾರಿಸಬೇಕಾಗುತ್ತದೆ.

ಭಾರತದ ವಹಿವಾಟೆಲ್ಲ ಅಮೆರಿಕಕ್ಕೆ ಲಗತ್ತಾದಂತೆ ನಡೆಯುವುದರಿಂದ ಇಷ್ಟೆಲ್ಲ ಲೆಕ್ಕಾಚಾರ. ಡಾಲರ್‌ ಬದಲು ಬೇರೆ ಕರೆನ್ಸಿ ನಂಟಸ್ತನ ಬೆಳೆದಂತೆ ಈ ಲೆಕ್ಕಾಚಾರಗಳೂ ಬದಲಾಗುತ್ತವೆ, ಸ್ವಲ್ಪ. ೦೪, ೦೬, ೨೦೦೩.