ಅಜೀರ್ಣವಾದಾಗ ವೈದ್ಯರ ಬಳಿಗೆ ಹೋದರೆ ಅವರು ಔಷಧ ಕೊಡುತ್ತಾರೆ. ಔಷಧವು ಎರಡು ರೀತಿಯಲ್ಲಿ ಕೆಲಸ ಮಾಡಲು ಶಕ್ಯ. ಮೊದಲನೆಯದಾಗಿ ಉಬ್ಬರಿಸಿಕೊಂಡ ಹೊಟ್ಟೆಯಲ್ಲಿನ ‘ಗ್ಯಾಸ್‌’ ಹೊರಹೊಮ್ಮುವಂತೆ ಮಾಡಿದರೆ ಆರಾಮ ಸಿಗುವುದು. ಜೀರ್ಣಶಕ್ತಿಯನ್ನೇ ವೃದ್ಧಿ ಮಾಡಿ ಆಹಾರ ಸೇವನೆ ಹೆಚ್ಚಾದರೂ ತಡೆದುಕೊಳ್ಳುವಂತೆ ಆಗುವುದು.

ಕೇಂದ್ರ ಅರ್ಥ ಸಚಿವ ಜಸ್ವಂತಸಿಂಗ್‌ ಇದೀಗ ವೈದ್ಯನ ಪಾತ್ರ ನಿರ್ವಹಿಸಿದ್ದಾರೆ. ಅರ್ಥಸಚಿವ ಖಾತೆಯನ್ನು ವಹಿಸಿಕೊಂಡು ವರ್ಷವಾಗುತ್ತಾ ಬಂತು. ಎಲ್ಲರೂ ನಿರೀಕ್ಷಿಸಿದಂತೆ ಏನೂ ಚಮತ್ಕಾರ ಮಾಡಿ ತೋರಿಸಲಿಲ್ಲ. ಇಡೀ ಹಣಕಾಸು ವ್ಯವಸ್ಥೆ ಮತ್ತು ಮಂದಗತಿಯ ಆರ್ಥಿಕ ಚಟುವಟಿಕೆ ಇವು ಜಸ್ವಂತನಂಥವರ ಕೈಯನ್ನು ಸಹಾ ಕಟ್ಟಿ ಹಾಕಿತು. ಆದರೆ ತಾವು ಎಂತಹ ಜಾದೂಗಾರ ಎಂಬುದನ್ನು ಮನದಟ್ಟು ಮಾಡಿಕೊಡಲು ಅವರು ಹವಣಿಸಿಯೇ ಇದ್ದಾರೆ.

ಭಾರತದ ಪಾಲಿಗೆ ಬಹಳ ದೊಡ್ಡ ಕೊರತೆ ಎಂದರೆ ಬಂಡವಾಳದ್ದು. ವಿದೇಶಿ ಬಂಡವಾಳಕ್ಕೆ ಹೆಬ್ಬಾಗಿಲನ್ನು ತೆರೆದಿಟ್ಟರೂ ವಿದೇಶಿ ಹಣದ ಥೈಲಿಯನ್ನು ಹಿಡಿದು ಬಂದವರು ಕಡಿಮೆ. ಹಿಂದಿನ ದಿನಗಳನ್ನು ನೆನಪಿಸಿಕೊಳ್ಳುವುದಾದರೆ ಸ್ವಾತಂತ್ರ್ಯ ಬಂದ ಹೊಸತರಲ್ಲಿ ವಿದೇಶಿ ಗ್ರಾಂಟು ಸಿಗುತ್ತಿತ್ತು. ಅನಂತರ ರಿಯಾಯ್ತಿ ದರದ ಬಡ್ಡಿ ಮೇಲೆ ವಿಶ್ವಬ್ಯಾಂಕೇ ಮುಂತಾದ ಮೂಲಗಳಿಂದ ಸಾಲ ಎತ್ತುವ ದಿನಗಳು. ಜೊತೆ ಜೊತೆಗೇ ಬಂದಿದ್ದು ದುಬಾರಿ ಬಡ್ಡಿಗೆ ಧಾರಾಳ ಸಿಗುವ ಸಾಲ ಎತ್ತುವುದು. ಅನಂತರ ನಾನಾ ಬಾಬುಗಳಲ್ಲಿ ಹಣ ಹೂಡಿರೆಂದು ಬಂಡವಾಳಗಾರರನ್ನು ಕರೆಯುವುದು.

ಮೊದಲು ಅವಕಾಶ ಮಾಡಿಕೊಟ್ಟಿದ್ದು ವಿದೇಶಿ ಹಣಕಾಸು ಸಂಸ್ಥೆಗಳು ಭಾರತದಲ್ಲಿ ಹಣ ಹೂಡುವುದಕ್ಕೆ. ಆದರೆ ಅಂಥ ಸಂಸ್ಥೆಗಳು ಹಣ ತರುವುದಕ್ಕಿಂತ ಹಿಂಜರಿದಿದ್ದೇ ಅಧಿಕ. ಚೀನಾದಂಥ ರಾಷ್ಟ್ರಗಳಲ್ಲಿ ಹಣ ಹೂಡುವುದು ಅನುಕೂಲ ಎಂದೇ ಅವುಗಳ ಭಾವನೆ.

ಹಳೆಯ ಸಾಲದ ಬಾಬ್ತು ತೀರಿಸಲು ಭಾರತಕ್ಕೆ ವಿದೇಶಿ ವಿನಿಮಯ ಬೇಕು. ರಫ್ತು ಏರುತ್ತಿದ್ದರೆ ಚಿಂತೆ ಇರಲಿಲ್ಲ. ಆದರೆ ಜಾಗತಿಕ ಆರ್ಥಿಕ ಹಿಂಜರಿತದ ಕಾರಣ ಭಾರತದ ಸರಕಿಗೆ ಬೇಡಿಕೆ ಇಲ್ಲ. ಆಮದು ಅಗತ್ಯಗಳಿಗೂ ಅಧಿಕಾಧಿಕ ವಿನಿಮಯ ಹಣ ಬೇಕು. ಈ ಪರಿಸ್ಥಿತಿಯಲ್ಲಿ, ಹೂಡಿಕೆ ಬರದೆ ಪೇಚು. ಇದು ಜಸ್ವಂತಸಿಂಗ್‌ ಅರ್ಥಸಚಿವ ಖಾತೆ ವಹಿಸಿಕೊಂಡಾಗ ಇದ್ದ ಪರಿಸ್ಥಿತಿ.

ಆದರೆ ಅಮೆರಿಕದ ಆರ್ಥಿಕ ಪರಿಸ್ಥಿತಿಯ ಪಾಲಿಗೆ ಪ್ರತಿಕೂಲ ಹವೆ ಕಾಣ ತೊಡಗಿದಂತೆ ಡಾಲರ್‌ ತನ್ನ ಮೌಲ್ಯ ಕಾಪಾಡಿಕೊಳ್ಳುವಲ್ಲಿ ಸೋಲತೊಡಗಿತು. ವಿಶ್ವವಾಣಿಜ್ಯ ಸಂಸ್ಥೆ ಕಟ್ಟಡಗಳು ಕುಸಿದ ಮೇಲೆ ಅಮೆರಿಕನ್ನರು ನಿರ್ವಿಣ್ಣರಾಗಿರುವುದು ನಿಜ. ಆದರೆ ಜನತೆ ಮತ್ತೆ ಹಣ ಖರ್ಚು ಮಾಡುವ ಧೋರಣೆ ತೋರಿಸತೊಡಗಿದರು. ಮಾರುಕಟ್ಟೆ ಪ್ರಧಾನ ಆರ್ಥಿಕತೆಗೆ ಚೇತರಿಸಿಕೊಳ್ಳಲು ಇನ್ನೇನು ಬೇಕು? ಭರವಸೆ ಕುದುರಿತು. ಆದರೆ ಸ್ಥೈರ್ಯ ‌ಬಹಳ ದಿನ ಉಳಿಯಲಿಲ್ಲ. ಡಾಲರ್‌ಮೌಲ್ಯ ನಿಧಾನವಾಗಿ ಕಡಿಮೆ ಆಗತೊಡಗಿತು. ಹೇಗೋ ಯಥಾಸ್ಥಿತಿ ಕಾಪಾಡಿಕೊಂಡು ಬರುತ್ತಿರುವ ಭಾರತದ ಕರೆನ್ಸಿಯಾದ ರೂಪಾಯಿಗೆ ಬಲ ಬರತೊಡಗಿತು.

ರೂಪಾಯಿ ಮೌಲ್ಯವರ್ಧನೆ ಆದಾಗಲೆಲ್ಲ ಒಂದು ಅನುಕೂಲವುಂಟು. ವಿದೇಶಿ ವಿನಿಮಯ ಒಳಕ್ಕೆ ಹರಿದು ಬರುತ್ತದೆ. ರಫ್ತುದಾರರು ಸಾಮಾನ್ಯವಾಗಿ ತಮಗೆ ವಿದೇಶಗಳಿಂದ ಬರಬೇಕಾದ ಹಣದ ಸ್ವಲ್ಪ ಭಾಗವನ್ನಾದರೂ ಅಲ್ಲೇ ಇರುವಂತೆ ಕಾಪಾಡಿರುತ್ತಾರೆ. ರೂಪಾಯಿ ಮೌಲ್ಯ ಹೆಚ್ಚಾದರೆ ಮುಂಚಿಗಿಂತ ಕಡಿಮೆ ರೂಪಾಯಿ ಹಣಕೊಟ್ಟರೂ ಹೆಚ್ಚಿಗೆ ಡಾಲರ್‌ ಅಥವಾ ಮತ್ತಿತರ ಕರೆನ್ಸಿ ಸಿಗುವಂತಾಗುತ್ತದೆ. ಆಗ ಭಾರತದೊಳಕ್ಕೆ ಹೆಚ್ಚು ವಿನಿಮಯ ಹರಿದು ಬರುವಂತಾಗುತ್ತದೆ. ಇದು ಸಹಜ ವಿದ್ಯಮಾನ.

ರೂಪಾಯಿ ಮೌಲ್ಯ ಅಧಿಕಗೊಂಡಾಗ ವಿದೇಶಿ ಹಣ ಹೂಡಿಕೆದಾರರೂ ಆಸಕ್ತಿ ವಹಿಸುತ್ತಾರೆ. ಯಾವ ದೇಶದ ಕರೆನ್ಸಿ ಬಲಗೊಳ್ಳುತ್ತಿರುವುದೋ ಅದರತ್ತ ಹೂಡಿಕೆದಾರರ ಕಣ್ಣು ಬೀಳುವುದು ಸಹಜ.

ವಿದೇಶಿ ಹಣಕಾಸು ಸಂಸ್ಥೆಗಳಲ್ಲಿ ಹಲವು, ವಾಸ್ತವವಾಗಿ ಅನಿವಾಸಿ ಭಾರತೀಯರಿಂದ ಸಂಪನ್ಮೂಲ ಸಂಗ್ರಹಿಸಿರುತ್ತವೆ. ಈ ಬಾರಿ ರೂಪಾಯಿ ಬಲಗೊಂಡಂತೆ ಈ ನಮೂನೆಯ ಹೂಡಿಕೆದಾರ ಸಂಸ್ಥೆಗಳು ಜಾಗೃತಗೊಂಡವು. ಭಾರತದಲ್ಲಿ ಹಣ ಹೂಡಲು ಈಗಾಗಲೇ ಅನುಮತಿ ಪಡೆದಿರುವ ವಿದೇಶಿ ಹಣಕಾಸು ಸಂಸ್ಥೆಗಳು ಪೂರ್ಣ ಪ್ರಮಾಣದಲ್ಲಿ ಹಣ ಹೂಡಿಕೆಗೆ ತೊಡಗಬೇಕೆಂದು ರಿಸರ್ವ್‌ ಬ್ಯಾಂಕು ಕಳೆದ ತಿಂಗಳು ಪ್ರೇರೇಪಣೆ ನೀಡಿತು. ಅದರ ಫಲವಾಗಿ ಹೂಡಿಕೆ ಬಾಬಿನ ಹಣ ಒಳಕ್ಕೆ ಹರಿಯತೊಡಗಿತು.

ಇದರ ಒಂದು ಭಾಗವಾಗಿ ಅನಿವಾಸಿ ಭಾರತೀಯರು ತಮ್ಮ ತಾಯ್ನಾಡಿನ ಒಳಕ್ಕೆ ಡಾಲರ್‌ ಮುಂತಾದವು ಬರಲು ವ್ಯವಸ್ಥೆ ಮಾಡಿದರು.

ಹೀಗೆ ಮಾಡುವಾಗ ಹವಾಲಾ ಕಾರ್ಯಾಚರಣೆಯನ್ನು ಬಳಸಿಕೊಂಡಿರಬಹುದು ಎಂದು ವಿಶ್ಲೇಷಕರು ಶಂಕಿಸಿದ್ದಾರೆ. ಹವಾಲಾ ಕಾರ್ಯಾಚರಣೆ ನಡೆಯುವುದೇ ಅನಧೀಕೃತ. ಹಣ ರವಾನೆಗಾಗಿ ವಿದೇಶಗಳಲ್ಲಿ ಹಣ ದುಡಿಯುತ್ತಿರುವವರು ಮತ್ತು ಹಣವನ್ನು ಇಟ್ಟವರು ಅನೇಕ ಬಾರಿ ಹವಾಲಾ ಮೊರೆಹೊಗ್ಗುತ್ತಾರೆ. ಅಂದರೆ ವಿದೇಶದಲ್ಲಿ ಅಲ್ಲಿನ ಕರೆನ್ಸಿ ನೀಡುತ್ತಾರೆ. ಇಲ್ಲಿ ಭಾರತೀಯ ರೂಪಾಯಿ ರೂಪದಲ್ಲಿ ಹವಾಲಾದಾರರಿಂದ ಹಣ ಪಡೆಯುತ್ತಾರೆ. ಅಂದರೆ ವಿದೇಶಿ ವಿನಿಮಯದ ಭಾರತ ಪ್ರವೇಶಕ್ಕೆ ತಡೆ ಒಡ್ಡಿದಂತಾಯಿತು. ಹವಾಲಾದಾರರು ಅಥವಾ ಅವರನ್ನು ಬಳಸಿಕೊಳ್ಳುತ್ತಿರುವವರು ವಾಸ್ತವವಾಗಿ ಬಂಗಾರ ಮತ್ತೀತರ ಕಳ್ಳಸಾಗಣೆ ಮತ್ತಿತರ ದಂಧೆಗಳಲ್ಲಿ ತೊಡಗಿರುತ್ತಾರೆ. ವಿದೇಶದಲ್ಲಿ ಖರೀದಿಸಿದ ಸರಕನ್ನು ಭಾರತದಲ್ಲಿ ಮಾರಿ ಲಾಭ ಮಾಡಿಕೊಳ್ಳುತ್ತಾರೆ. ಅದಕ್ಕಾಗಿ ವಿದೇಶದಲ್ಲಿ ಸಂಗ್ರಹಿಸಿದ ಅಲ್ಲಿನ ಕರೆನ್ಸಿ ಬದಲಿಗೆ ಭಾರತದಲ್ಲಿ ರೂಪಾಯಿ ಹಣವನ್ನು ಪೂರೈಸುತ್ತಾರೆ. ಅಂದರೆ ಭಾರತಕ್ಕೆ ರವಾನಿಸಿರೆಂದು ಕೊಟ್ಟ ಹಣ ಇವರ ಪಾಲಿಗೆ ಬಂಡವಾಳವಾಗುತ್ತದೆ. ಅದರ ಆಧಾರದ ಮೇಲೆ ಕಳ್ಳಸಾಗಣೆ ಆಗುತ್ತದೆ. ಭಾರತದಲ್ಲಿ ರೂಪಾಯಿ ಹಣ ಪಾವತಿ ಆಗುತ್ತದೆ.

ಹವಾಲಾದಾರರು ಈ ಬಾರಿ ವಿದೇಶಿ ವಿನಿಮಯ ಬರುವುದಕ್ಕೆ ತಡೆ ಒಡ್ಡುವ ಬದಲು ಭಾರತದಿಂದ ಹೊರಕ್ಕೆ ಕಳ್ಳ ಸಾಗಣೆ ಆದ ಹಣದಿಂದ ವಿದೇಶ ಮೂಲದ ವಿನಿಮಯ ಹಣವನ್ನು ಭಾರತದೊಳಗೆ ಪಾವತಿ ಮಾಡಿದ್ದಾರೆ ಎನ್ನಲಾಗಿದೆ. ಅಂದರೆ ತಿರುವುಮುರುವಾದ ಹವಾಲಾ.

ಒಟ್ಟಿನಲ್ಲಿ ರೂಪಾಯಿ ಮೌಲ್ಯ ಹೆಚ್ಚಿದಂತೆ ಭಾರತದೊಳಗೆ ವಿದೇಶಿ ವಿನಿಮಯ ಹೆಚ್ಚು ಜಮೆಯಾಗಿ ಹೂಡಿಕೆ ಸಂಸ್ಥೆಗಳು ಹಾಗೂ ಇತರರ ಹಿತಾಸಕ್ತಿಗಳು ಚುರುಕಾದವು.

ಹೀಗಾಗಿ ಈ ಬಾರಿ ಒಂದೇ ವರ್ಷದಲ್ಲಿ ೨೨ ಶತಕೋಟಿ ಡಾಲರ್‌ನಷ್ಟು ವಿನಿಮಯ ಹಣದ ಸಂಗ್ರಹ ವೃದ್ಧಿಗೊಂಡಿತು. ಇಷ್ಟೊಂದು ಹಣ ಏಕಾಏಕಿ ಲಭಿಸಿದ್ದು ಈಚಿನ ವರ್ಷಗಳಲ್ಲಿ ಕಂಡುಬಂದಿಲ್ಲ. ಭಾರತದಲ್ಲಿರುವ ವಿದೇಶಿ ವಿನಿಮಯ ಸಂಗ್ರಹದ ಭಂಡಾರ ೭೦ ಶತಕೋಟಿ ಡಾಲರ್‌  ಮಟ್ಟಕ್ಕೆ ಏರಿದ್ದು ಇದರಿಂದಲೇ.

ಇದು ಒಂದು ರೀತಿಯ ಅಜೀರ್ಣ. ಅಮೆರಿಕದ ಡಾಲರು ದುರ್ಬಲಗೊಂಡಿದ್ದರಿಂದ ಕೊರಿಯ, ಸಿಂಗಪುರ, ಮಲೇಷ್ಯ ಮತ್ತು ಹಾಂಕಾಂಗ್‌ನಂತ ಪರಮಾಯಿಷಿ ವ್ಯಾಪಾರ ಕಂಡಿರುವ ರಾಷ್ಟ್ರಗಳ ಕರೆನ್ಸಿಗಳು ಸದ್ಯ ಬಲಗೊಂಡಿವೆ. ಇವುಗಳಾದರೋ ಚೆನ್ನಾಗಿ ವ್ಯಾಪಾರ ನಡೆಸುತ್ತಿರುವುದರಿಂದ ಅಜಿರ್ಣವಾಗದ ರೀತಿ ಪರಿಸ್ಥಿತಿ ನಿಭಾಯಿಸಿಯಾವು.

ಅಮೆರಿಕ ಡಾಲರ್‌ ದುರ್ಬಲಗೊಂಡರೂ ಐರೋಪ್ಯ ರಾಷ್ಟ್ರಗಳ ಕರೆನ್ಸಿ ದುರ್ಬಲಗೊಂಡಿಲ್ಲ. ಆದ್ದರಿಂದ ಏಷ್ಯದ ರಾಷ್ಟ್ರಗಳ ಪಾಲಿಗೆ ಮಾತ್ರ ಈಗ ಒಂದು ಸವಾಲು.

ದಿಢೀರ್‌ ಆದ ಅಜೀರ್ಣದಿಂದ ಭಾರತಕ್ಕೆ ಸದ್ಯ ಅನಾನುಕೂಲವೇ ಸರಿ. ರೂಪಾಯಿ ಮೌಲ್ಯ ವೃದ್ಧಿಯಾದರೆ ರಫ್ತು ವ್ಯಾಪಾರ ಸಾಮಾನ್ಯವಾಗಿ ಕಡಿಮೆ ಆಗುತ್ತದೆ. ಏಕೆಂದರೆ ಭಾರತದ ಸರಕನ್ನು ಕೊಳ್ಳುವವರು ತಮ್ಮ ಕರೆನ್ಸಿಯ ಹಣವನ್ನು ಹೆಚ್ಚಾಗಿ ತರಬೇಕಾಗುತ್ತದೆ. ಹೊರ ದೇಶದ ಆಮದುದಾರರು ಹಿಂದೆಗೆದರೆ, ಭಾರತದ ರಫ್ತುದಾರರಿಗೆ ವ್ಯಾಪಾರವಿಲ್ಲ!

ಆದ್ದರಿಂದ ಭಾರತದ ಅರ್ಥಸಚಿವರಿಗೆ ಈಗ ಒಂದು ಹೊಸ ಕೆಲಸ. ವಿದೇಶಿ ವಿನಿಮಯ ಹೊರಕ್ಕೆ ಹೋಗುವಂತೆ ಮಾಡಿ ಅಜೀರ್ಣ ನಿವಾರಣೆ ಮಾಡುವುದು. ವರ್ಷಾರಂಭದಲ್ಲಿ ಅವರು ನಾನಾ ರಿಯಾಯ್ತಿಗಳನ್ನು ಪ್ರಕಟಿಸಿದರು. ವಿದೇಶಕ್ಕೆ ಹೋಗುವವರು ಹತ್ತು ಸಾವಿರ ಡಾಲರ್‌ವರೆಗೆ ಖರ್ಚಿಗೆ ಹಣ ಒಯ್ಯಬಹುದು ಎಂದು ಧಾರಾಳ ಅವಕಾಶ ನೀಡಿದರು. ಅನಿವಾಸಿ ಭಾರತೀಯರು ಡಾಲರ್‌ ಲೆಕ್ಕ ಖಾತೆ ತೆರೆಯಲು ಅನುಮತಿ ನೀಡಿದರು. ಬ್ಯಾಂಕುಗಳವರು ರೂಪಾಯಿ ಬದಲು ವಿದೇಶಿ ವಿನಿಮಯ ರೂಪದಲ್ಲಿ ಸಾಲ ನೀಡಬಹುದೆಂದರು. ಮ್ಯೂಚುಯಲ್‌ ಫಂಡ್‌ಗಳವರು ವಿದೇಶಿ ವಿನಿಮಯವನ್ನು ದೇಶದ ಹೊರಕ್ಕೆ ಒಯ್ದು ವಿದೇಶಗಳಲ್ಲಿ ಹಣ ಹೂಡಿಕೆ ಮುಂತಾದ ದಂಧೆ ನಡೆಸಲು ಅವಕಾಶ ಕಲ್ಪಿಸಿದರು. ರಫ್ತುದಾರರು ಮತ್ತು ಇತರರು ವಿದೇಶಗಳ ಷೇರುಪೇಟೆಗಳಲ್ಲಿ ವ್ಯವಹಾರ ನಡೆಸಬೇಕೆಂದರು. ವಿದೇಶಗಳಲ್ಲಿ ಸಾಲ ಮಾಡಿರುವ ಭಾರತೀಯ ಕಂಪನಿಗಳವರು ಅವಧಿಗೆ ಮುಂಚೆಯೇ ಸಾಲ ಚುಕ್ತಾ ಮಾಡಬಹುದೆಂದರು.

ಏಕೆಂದರೆ ಇವನ್ನೆಲ್ಲ ಮಾಡದಿದ್ದರೆ ಸಮೃದ್ಧಿಯೇ ಸಮಸ್ಯೆಯಾಗುತ್ತದೆ.

ಈಗಾಗಲೇ ವಿಪರೀತ ವಿನಿಯಮ ಹಣ ಕೈಸೇಸಿರುವುದರಿಂದ ಆಯ ತಪ್ಪಿದಂತೆ ಆಗಬಾರದೆಂದು ಲೆಕ್ಕಹಾಕಿ ರಿಸರ್ವ್‌ ಬ್ಯಾಂಕ್‌ ಹಲವು ಶತಕೋಟಿ ಮೊತ್ತದ ಡಾಲರ್‌ ಹಣವನ್ನು ಸ್ವಂತ ಸಂಪನ್ಮೂಲ ವ್ಯಯಿಸಿ ಖರೀಸಿದೆ.

ಇದು ತತ್‌ಕ್ಷಣದ ಕ್ರಮ. ಮುಂದೆ ಆಮದು ನಿರ್ಬಂಧಗಳನ್ನು ಸಡಿಲಿಸಲು ಶಕ್ಯವಿದೆ. ಹೂಡಿಕೆದಾರರು ಭಾರತದ ಉದ್ಯಮಗಳಲ್ಲಿ ತೊಡಗಿಸಿರುವ ಹಣ ದುಡಿದಿರುವ ಲಾಭವನ್ನು ಶೇ. ೧೦೦ರಷ್ಟು ಒಯ್ಯಬಹುದೆಂದು ಅವಕಾಶ ಕೊಡುವಂತೆ ಕೂಡಾ ಆಗಬಹುದು. ಅಂದರೆ ಲಾಭ ಗಳಿಕೆ ವಿದೇಶಿ ಕರೆನ್ಸಿ ಪೂರ್ಣ ಪರಿವರ್ತನೆಗೆ ಅನುಮತಿ ನೀಡಲು ಸಾಧ್ಯವಾಗಬಹುದು. ಅಂಥ ಕ್ರಮ ಶಾಶ್ವತಗೊಂಡರೆ ಸಂತೋಷವೇ!

ಆದರೆ ಮತ್ತೆ ಡಾಲರ್‌ ದೃಢಗೊಳ್ಳುವುದಿಲ್ಲ ಎಂದು ಹೇಗೆ ಹೇಳು ಸಾಧ್ಯ?

೨೯.೦೧.೨೦೦೩