‘ನಿಮ್ಮ ಕಡೆ ಮಳೆ ಹೇಗಿದೆ?’ – ಬೇರೆ ಪ್ರದೇಶದವರು ಯಾರಾದರೂ ಬಸ್ಸು ರೈಲಿನಲ್ಲಿ ಸಿಕ್ಕಿದಾಗ ಕೂಡಾ ಲೋಕಾಭಿರಾಮ ಕೇಳುವ ಪ್ರಶ್ನೆ ಇದು.

ಭಾರತದಲ್ಲಿ ಮಳೆ ಬೆಳೆಯದೇ ಜೀವನದ ಮುಖ್ಯ ಪ್ರಶ್ನೆ. ಕಾಲಕಾಲಕ್ಕೆ ಮಳೆಯಾಗಿ ಒಳ್ಳೆಯ ರೈತನ ಕೈಗೆ ಹತ್ತಿದರೆ, ಆ ಬೆಳೆಯಲ್ಲಿ. ಸ್ವಂತಕ್ಕೆ ಬಳಕೆಯಾಗಿ ಮಾರಾಟಕ್ಕೆ ಸಾಕಷ್ಟು ಉಳಿಸಿದರೆ, ರೈತನಿಗೆ ಅದೇ ದೊಡ್ಡ ಭಾಗ್ಯ. ಜೀವನೋಪಾಯಕ್ಕೆ ವ್ಯವಸ್ಥೆ ಆಗಿ ಖರ್ಚಿಗೆ ಒಂದಿಷ್ಟು ಹಣ ಉಳಿಯುತ್ತದೆ. ಆಗ ಕೈಗಾರಿಕೆಯ ಚಕ್ರಗಳು ಜೋರಾಗಿ ತಿರುಗುತ್ತವೆ.

ಅನಾವೃಷ್ಟಿಯ ಕಾವಿಗೆ ಭೂಮಿ ಬೆಂದಿರುವ ಹಿನ್ನೆಲೆಯಲ್ಲಿ ನಿರೀಕ್ಷೆಗಿಂತ ಒಳ್ಳೆಯ ಮಳೆ ಈ ಬಾರಿ ಆದಾಗ ಪ್ರಧಾನಿಯಿಂದ ಮೊದಲ್ಗೊಂಡು ಎಲ್ಲರೂ ದೇಶದ ಸಂಪನ್ನತೆ ಯಾವ ಪ್ರಮಾಣದಲ್ಲಿ ಹೆಚ್ಚುತ್ತದೆ ಎಂದು ಮಾತನಾಡಿದವರೇ ಸರಿ. ಆಡಳಿತಗಾರರು, ತಜ್ಞರು, ಪತ್ರಕರ್ತರು ಎಲ್ಲರೂ ಜಿಡಿಪಿ ಎಷ್ಟಕ್ಕೆ ಏರುತ್ತದೆ ಎಂದೇ ಲೆಕ್ಕ ಹಾಕಿದರು.

ಯಾವುದಿದು ಆರ್ಥಿಕಾಭಿವೃದ್ಧಿಯ ಮಾನದಂಡ?

ಆರ್ಥಿಕ ವಿಷಯಗಳನ್ನು ಕುರಿತು ಸಾಮಾನ್ಯ ಜ್ಞಾನವನ್ನು ಮೈಗೂಡಿಸಿಕೊಳ್ಳುವ ಪ್ರಯತ್ನಿಯೊಬ್ಬರೂ ಜೆಡಿಪಿ ಬಗೆಗೆ ಮಾತನಾಡುತ್ತಾರೆ. ಗ್ರಾಸ್‌ ಡೊಮೆಸ್ಟಿಕ್‌ ಪ್ರಾಡಕ್ಟ್‌ ಎಂಬುದರ ಸಂಕ್ಷಿಪ್ತ ರೂ. ಸ್ಥೂಲವಾಗಿ ಗ್ರಾಸ್‌ ನ್ಯಾಷನಲ್‌ ಪ್ರಾಡಕ್ಟ್‌ (ಜಿಎನ್‌ಪಿ) ಎಂದೂ ಭಾರತಕ್ಕೆ ಅನ್ವಯವಾಗುವಂತೆ ಹೇಳುತ್ತಾರೆ. ಮುಂಚೆ ಇದನ್ನು ರಾಷ್ಟ್ರೀಯ ಉತ್ಪನ್ನ ಎಂದು ಕರೆಯುತ್ತಿದ್ದರು. ನೆಟ್‌ ನ್ಯಾಷನಲ್‌ ಪ್ರಾಡಕ್ಟ್‌ ಎಂದೂ ಕರೆಯುತ್ತಿದ್ದರು.

ಜುಲೈನಲ್ಲಿ ಮಳೆ ಬರತೊಡಗಿದಂತೆ ಮೋರ್ಗನ್‌ ಸ್ಟಾನ್ಸಿ ಎಂಬ ಹಣ ಹೂಡಿಕೆ ವಯವಹಾರ ನಿರತ ಸಂಸ್ಥೆಯು ೨೦೦೩-೦೪ ಸಾಲಿನ ಜಿ.ಡಿ.ಪಿ. ವೃದ್ಧಿ ಶೇ. ೬.೨ ಇರುತ್ತದೆ ಎಂದು ಅಂದಾಜು ಮಾಡಿತು. ಮಳೆ ಬರುವುದು ಅನಿಶ್ಚಿತ ‌ಇದ್ದಾಗ ಅದು ೫.೩ ಇರುವುದೆಂದು ಅಂದಾಜು ಮಾಡಿತ್ತು.

೨೦೦೪-೦೫ರಲ್ಲಿ ಇದು, ಅಂದರೆ ಜೆಡಿಪಿ ಶೇಕಡಾ ವೃದ್ಧಿ ೫.೫ ಎಂದು ಅಂದಾಜು ಮಾಡಿದ್ದುದನ್ನು ೫.೯ ಎಂದು ಪರಿಷ್ಕರಿಸಿತು.

ಇದು ಆದ ಒಂದು ತಿಂಗಳ ನಂತರ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಎಎಂಎಫ್‌)ಯ ಅಂದಾಜು ಹೊರಬಿತ್ತು. ಎರಡು ಸಾಲಿನಲ್ಲಿ ಭಾರತದ ಜಿಡಿಪಿ ವೃದ್ಧಿ ಶೇ. ೫.೬ ಮತ್ತು ಶೇ. ೫.೯ ಇರುತ್ತದೆ ಎಂಬುದು ಅದರ ಲೆಕ್ಕಾಚಾರ.

ಜಿಡಿಪಿ ಎಂದರೆ ದೇಶದಲ್ಲಿರುವ ಜನರು ಒಂದು ವರ್ಷದಲ್ಲಿ ಉತ್ಪಾದಿಸುವ ವಸ್ತುಗಳು ಮತ್ತು ಸೇವೆಗಳ ಒಟ್ಟಾರೆ ಮೊತ್ತ. ಅದು ಬೆಳೆದಷ್ಟೂ ದೇಶವು ಹೆಚ್ಚು ಹೆಚ್ಚು ಸಂಪನ್ನವಾಗುತ್ತಿದೆ ಎಂದು ಅರ್ಥ. ಅದರ ವೃದ್ಧಿ ಎಂಬ ಲೆಕ್ಕಾಚಾರವು ದೇಶವು ವರ್ಷದಿಂದ ವರ್ಷಕ್ಕೆ ಎಷ್ಟು ವೇಗವಾಗಿ ಶ್ರೀಮಂತವಾಗುತ್ತಿದೆ ಎಂಬುದನ್ನು ನಿರೂಪಿಸುತ್ತದೆ.

ದೇಶದ ಒಟ್ಟಾರೆ ಜನಸಂಖ್ಯೆಯ ಎಲ್ಲರೂ ಉತ್ಪಾದಕ ಚಟುವಟಿಕೆಯಲ್ಲಿ ಭಾಗವಹಿಸಿದ್ದಾರೆ ಎಂದು ಭಾವಿಸಿ ಲೆಕ್ಕ ಹಾಕುವುದುಂಟು. ಜಿಡಿಪಿಯನ್ನು ಜನಸಂಖ್ಯೆಯಿಂದ ಭಾಗಿಸಿದರೆ ತಲಾ ಜಿಡಿಪಿಯೂ ಅದರ ತಲಾ ವೃದ್ಧಿಯೂ ಸಿಗುತ್ತದೆ.

ಐಎಂಎಫ್‌ ವರದಿ ಪರಕಾರ ಇಡೀ ಏಷ್ಯದಲ್ಲಿ ಚೇತೋಹಾರಿ ಎನಿಸಿದ ಅಂಶ ಎಂದರೆ ಚೀನಾ ಮತ್ತು ಭಾರತಗಳೆರಡರ ತಲಾ ಜಿಡಿಪಿ ಬಹಳ ಆರೋಗ್ಯಕರ ಎನ್ನುವ ರೀತಿಯಲ್ಲಿ ವೃದ್ಧಿಗೊಳ್ಳುತ್ತಿದೆ. ಜಾಗತಿಕ ಆರ್ಥಿಕತೆ ದುರ್ಬಲವಾಗಿದ್ದಾಗಲೂ ಈ ಎರಡೂ ದೇಶಗಳ ತಲಾ ಜಿಡಿಪಿ ಸ್ವತಃ ದುರ್ಬಲಗೊಳ್ಳದೆ ದೃಢವಾಗಿ ಉಳಿದಿತ್ತು!

ಕೃಷಿ, ಉದ್ಯಮ, ಸೇವಾ ಸೌಲಭ್ಯ ಸೃಷ್ಟಿ, ವಾಣಿಜ್ಯೋದ್ಯಮ ಮುಂತಾದ ನಿರ್ದಿಷ್ಟ ಕ್ಷೇತ್ರಗಳ ವಹಿವಾಟನ್ನು ಭಾರತದ ಅಂಕಿಸಂಖ್ಯೆ ಇಲಾಖೆ ಮಾತ್ರವಲ್ಲದೆ ಖಾಸಗಿ ಸಂಸ್ಥೆಗಳವರು ಸಹಾ ಅಧಿಕೃತ ಹಾಗೂ ಇತರ ಬಗೆಯ ಅಂಕಿಸಂಖ್ಯೆ ಆಧಾರದ ಮೇಲೆ ಅಳೆದಿರುತ್ತಾರೆ. ಆರ್ಥಿಕ ವಿಷಯಗಳಿಗೆ ಮೀಸಲಾದ ಪತ್ರಿಕೆ ನಿಯತಕಾಲಿಕಗಳು ಸಹಾ ಆ ಕೆಲಸ ಮಾಡುತುವುದುಂಟು. ಪ್ರತಿವರ್ಷ ಮಾತ್ರವಲ್ಲ; ಪ್ರತಿ ಮೂರು ತಿಂಗಳ ಅಂಕಿಸಂಖ್ಯೆ ವಿಶ್ಲೇಷಿಸಿ ಇಡುವುದೂ ಉಂಟು. ಒಂದು ಪತ್ರಿಕೆಯಂತೂ ಬೆಳೆಯುವ ಸಾಧ್ಯತೆ ಹೆಚ್ಚಿದ್ದರಿಂದ ೨೦೦೩-೦೪ರ ಸಾಲಿನ ಜಿಡಿಪಿ ಶೇ. ೭ ಅಥವಾ ೮ ಪ್ರಮಾಣದಲ್ಲಿ ವೃದ್ಧಿಯಾಗುತ್ತದೆ ಎಂದು ಹೇಳಿದ್ದುಂಟು.

ಜನಸಂಖ್ಯೆ ಏರುತ್ತಾ ಹೋದರೆ, ಜಿಡಿಪಿ ಯಾವ ವೇಗದಲ್ಲಿ ಏರುತ್ತಿದೆಯೋ ಅದಕ್ಕಿಂತ ಹೆಚ್ಚಿನ ವೇಗದಲ್ಲಿ ಏರದಿದ್ದರೆ ದುಡಿಯುವವರಿಗಿಂತ ತಿನ್ನುವ ಕೈಗಳು ಅಧಿಕವಾದಂತೆ ಎಂದೇ ಅರ್ಥ. ಏಕೆಂದರೆ ಇದ್ದುದನ್ನು ಮಾತ್ರವೇ ಎಲ್ಲರೂ ಹಂಚಿಕೊಳ್ಳಬೇಕು. ಜನಸಂಖ್ಯೆ ಕಡಿಮೆ ಕಡಿಮೆ ಏರುವಂತಾದರೆ ಜಿಡಿಪಿ ದೊಡ್ಡದಾಗಿ ಕಾಣುತ್ತದೆ. ಭಾರತದ ವಿಷಯದಲ್ಲಿ ಹೀಗೆ ಆಗಿದೆ.

ಉತ್ಪನ್ನ ಮತ್ತು ಸೇವಾ ಸೌಲಭ್ಯಗಳ ಮೌಲ್ಯ ನಿರ್ಧರಿಸಿ ತಾನೇ ಜಿಡಿಪಿ ಎಷ್ಟೆಂದು ನಿರ್ಧರಿಸುವುದು? ದೀರ್ಘ ಕಾಲದಲ್ಲಿ ರೂಪಾಯಿನ ಮೌಲ್ಯವೇ ಕುಸಿಯುತ್ತದೆ! ೧೯೮೦ರಲ್ಲಿ ಡಾಲರ್‌ಗೆ ಎಂಟು ರೂಪಾಯಿ ಸಮ. ಈಗ ೪೫ ರೂಪಾಯಿ. ಹಣದುಬ್ಬರ ಹೆಚ್ಚುತ್ತಾ ಹೋದಂತೆಲ್ಲ ಜಿಡಿಪಿ ಹಾಗೂ ತಲಾ ಜಿಡಿಪಿ ಏರುತ್ತಾ ಹೋಗುತ್ತದೆ. ಅಂಥ ವೇಳೆ ಈ ಅಂಕಿಸಂಖ್ಯೆಯನ್ನು ಹೋಲಿಕೆಗೆ ಬಳಸುವುದು ಎಷ್ಟು ಯುಕ್ತ? ಅದರಲ್ಲೂ ಹತ್ತಾರು ವರ್ಷಗಳ ಅಂತರದ ಅಂಕಿಸಂಖ್ಯೆಯನ್ನು! ಆದ್ದರಿಂದಲೇ ಯಾವ ವರ್ಷದ ಬೆಲೆಗಳ ಆಧಾರದ ಮೇಲೆ ಜಿಡಿಪಿ ವೃದ್ಧಿ ನಿರ್ಧಾರ ಮಾಡಲಾಗಿದೆ ಎಂದು ನಮೂದಿಸುತ್ತಾರೆ. ಉದಾ: (ಆಧಾರ ೧೯೯೩ = ೧೦೦).

ಹಣದುಬ್ಬರ ಹತೋಟಿಯಲ್ಲಿದ್ದರೆ (ಪ್ರಸ್ತುತದಂತೆ) ಅದು ಹಾಗಿದ್ದಷ್ಟು ಕಾಲವೂ ಜಿಡಿಪಿ ನಿಜವಾದ ಮೌಲ್ಯಾಧಾರಿತವೇ ಆಗಿರುತ್ತದೆ. ಜನಸಂಖ್ಯೆ ಹಣದುಬ್ಬರ ಇತ್ಯಾದಿ ಹಲವು ರೀತಿ ವ್ಯತ್ಯಾಸಕ್ಕೊಳಗಾವುದಿದ್ದರೂ ಜಿಡಿಪಿ ನಿರ್ಣಯ ಮಾಡುವ ವಿಧಾನ ಹೆಚ್ಚು ಹೆಚ್ಚು ವೈಜ್ಞಾನಿಕ ಆಗಿರುವಂತೆ ಮಾಡಲು ಅರ್ಥಶಾಸ್ತ್ರಜ್ಞರು ಹೋಗುತ್ತಾರೆ.

ಕೃಷಿ ಉತ್ಪನ್ನ ಲೆಕ್ಕ ಹಾಕುವಾಗ ಅದರ ಜೊತೆಗೆ ಅರಣ್ಯ ಉತ್ಪನ್ನ ಮತ್ತು ಮೀನುಗಾರಿಕೆ ಸೇರಿಸಿ ಒಂದಾಗಿ ಪರಿಗಣಿಸುತ್ತಾರೆ.

ಗಣಿಗಾರಿಕೆ ಮತ್ತು ಕೈಗಾರಿಕೋತ್ಪಾದನೆ ಇನ್ನೊಂದು ಸಮೂಹ. ವಿದ್ಯುತ್‌, ತೈಲೋತ್ಪಾದನೆ, ನಿರ್ಮಾಣ ಉದ್ಯಮ ಇವೆಲ್ಲ ಸೇರುತ್ತವೆ. ಈ ಎರಡೂ ಸೇರಿದಂತೆ ಉತ್ಪಾದನಾ ವಲಯ ಎನಿಸಿಕೊಳ್ಳುತ್ತವೆ.

ಸೇವಾಸೌಲಭ್ಯ ವಲಯದಲ್ಲಿ ಸಾರಿಗೆ, ದೂರಸಂಪರ್ಕ, ವಾಣಿಜ್ಯೋದ್ಯಮಗಳು ಒಂದು ಸಮೂಹವಾದರೆ, ಹಣಕಾಸು ಮತ್ತು ಸ್ಥಿರಾಸ್ಥಿ ವ್ಯವಹಾರ ಇನ್ನೊಂದು ಸಮೂಹ, ಸಮುದಾಯ ಕಲ್ಯಾಣ (ಶಿಕ್ಷಣ, ಆರೋಗ್ಯ ಮುಂತಾದವು) ಇನ್ನೊಂದು ಸಮೂಹವಾಗಿ ಪರಿಣಮಿಸುತ್ತದೆ.

ಕೃಷಿ ಮತ್ತು ಇತರ ಬಾಬುಗಳನ್ನು ಪ್ರಾಥಮಿಕ ವಲಯ ಎಂದೇ ಕರೆಯುತ್ತಾರೆ. ಇದರಲ್ಲಿ ಕೃಷಿಯೇ ಮುಖ್ಯ ಬಾಬು. ೫೦ ವರ್ಷದ ಹಿಂದೆ ಜಿಡಿಪಿಗೆ ಕೃಷಿಯ ಕೊಡುಗೆ ಶೇಕಡಾ ೫೭.೭ ಇದ್ದುದು ಈಗ ಶೇಕಡಾ ೨೫ಕ್ಕೆ ಇಳಿದಿದೆ.

ಸೆಕೆಂಡರಿ ವಲಯ ಎನಿಸಿಕೊಂಡ ಉದ್ಯಮ ಉತ್ಪಾದನಾ ವಲಯದ ಕೊಡುಗೆ ಶೇಕಡಾ ೧೬ ಇದ್ದುದು ಶೇಕಡಾ ೨೭ಕ್ಕೆ ಏರಿದೆ. ವಾಣಿಜ್ಯ, ಸಾರಿಗೆ, ದೂರ ಸಂಪರ್ಕ, ಬ್ಯಾಂಕಿಂಗ್‌, ವಿಮೆ, ಸ್ಥಿರಾಸ್ತಿ, ಸಮುದಾಯ ಕಲ್ಯಾಣ ಇಲ್ಲೆಲ್ಲ ಸೇವೆ ಸಂದಾಯವಾಗುವುದೇ ಅಧಿಕ. ಜನರ ಸ್ವಯಂ ವೃತ್ತಿಯೂ ಇದರಲ್ಲಿ ಸೇರುತ್ತದೆ. ಇದರ ಪಾಲು ಶೇ. ೨೮ ಇದ್ದುದು ಶೇ ೫೧ಕ್ಕೆ ಏರಿದೆ.

ತಾತ್ಪರ್ಯ ಇಷ್ಟೇ: ದಿನೇ ದಿನೇ ಜಿಡಿಪಿಯಲ್ಲಿ; ಅಂದರೆ ದುಡಿಮೆ ಮಾಡಿ ಸಂಪತ್ತು ಸೃಷ್ಟಿಸುವಲ್ಲಿ ಕೃಷಿ ಕಡಿಮೆ ಆಗುತ್ತಿದೆ. ಕೃಷಿಯೇತರ ಬಾಬುಗಳು ಹೆಚ್ಚಾಗುತ್ತಿವೆ. ಅಂದರೆ ಜನಜೀವನ ಶೈಲಿಯು ಮುಂದುವರಿದ ರಾಷ್ಟ್ರಗಳ ಧಾಟಿಗೆ ಬಂದಿದೆ.

ಭಾರತದಲ್ಲಿ ವೈವಿಧ್ಯತೆಯಿಂದಾಗಿ ಮಾಹಿತಿ ಕಲೆಹಾಕುವುದೇ ಪ್ರಯಾಸದ ಕೆಲಸ. ಮುಖ್ಯವಾದ ಉದಾಹರಣೆಯಾಗಿ ಕೃಷಿಯನ್ನೇ ತೆಗೆದುಕೊಳ್ಳಬಹುದು. ಕೃಷಿ ಒಂದು ಜೀವನೋಪಾಯ. ಬಳಸಿ ಮಿಕ್ಕಿದ್ದು ಮಾತ್ರ ವ್ಯಾಪಾರಕ್ಕೆ ಬರುವುದು. ಆಹಾರ ಧಾನ್ಯ ಮುಂತಾದವನ್ನು ಮಾರದೆ ಸೇವೆ ಮತ್ತಿತರ ಸೌಲಭ್ಯಗಳ ಸಂದಾಯಕ್ಕೆ ವಿನಿಮಯ ಮಾಡಿಕೊಂಡರೆ ಅದು ಲೆಕ್ಕಕ್ಕೆ ಬರುವುದು. ಕೃಷಿಕ ಕುಟುಂಬವು ಹಲವಾರು ಜನರನ್ನು ನಿಯೋಜಿಸಿಕೊಂಡು ಕೃಷಿ ಉತ್ಪನ್ನ ಮೂಲಕವೇ ಪ್ರತಿಫಲ ನೀಡುವುದುಂಟು. ಅವೆಲ್ಲ ಲೆಕ್ಕಕ್ಕೇ ಬರುವುದಿಲ್ಲ.

ವಾಸ್ತವ ಬೆಳೆ ಎಷ್ಟೆಂದು ಲೆಕ್ಕ ಹಾಕಲು ಶೇ. ೮೦ ರಷ್ಟು ಭೂಭಾಗದಲ್ಲಿ ವೈಜ್ಞಾನಿಕ ಕ್ರಮಗಳನ್ನು ಅನುಸರಿಸುವುದುಂಟು. ೬೩ ಬಗೆಯ ಬೆಳೆಗಳ ಸಂಬಂಧ ಮಾದರಿಗಾಗಿ ಪೈರಿನ ಮಾದರಿಗಳನ್ನು ಕತ್ತರಿಸಿ ತೆಗೆದುಕೊಂಡು ಐದು ಲಕ್ಷಕ್ಕೂ ಹೆಚ್ಚು ತಾಕುಗಳಲ್ಲಿ ಪ್ರಯೋಗ ನಡೆಸಿ ವಿಶ್ಲೇಷಿಸುತ್ತಾರೆ. ಆದರೂ ಲೆಕ್ಕಕ್ಕೆ ಸಿಗದೆ ಹೋಗುವುದು ಬಹಳ. ಹಣ್ಣು ತರಕಾರಿ ಬೆಳೆ ಬಗೆಗೆ ವೈಜ್ಞಾನಿಕ ಮಾಪನವೇ ಇನ್ನೂ ಸಾಧ್ಯವಾಗಿಲ್ಲ. ಆದರೂ ಸಿದ್ಧಪಡಿಸುವ ಕಾರ್ಯ ತಪ್ಪಿಲ್ಲ. ಈಚೆಗೆ ಭಾರೀ ರಫ್ತು ಸಾಧಿಸಿರುವ ಪುಷ್ಪೋತ್ಪನ್ನ ಸಹಾ ಲೆಕ್ಕಕ್ಕೆ (ಸ್ಥೂಲವಾಗಿ) ಒಳಪಡುತ್ತಿದೆ. ಅದೇ ರೀತಿ ಭಾರೀ ವಿದೇಶಿ ವಿನಿಮಯ ಗಳಿಕೆಗೆ ಕಾರಣವಾದ ಸಾಫ್ಟ್‌ವೇರ್‌ ಉತ್ಪನ್ನದ ಕೊಡುಗೆಯನ್ನು ಕೈಗಾರಿಕಾ ವಲಯದಲ್ಲಿ ಲೆಕ್ಕ ಹಾಕಲು ಹಿಂದೆ ಉಳಿದಿಲ್ಲ.

ಸೇವಾ ಸೌಲಭ್ಯ ಎಷ್ಟೊಂದು ಸೃಷ್ಟಿ ಆಗುವುದೋ ಅಷ್ಟೂ ಲೆಕ್ಕಾಚಾರಕ್ಕೆ ಸಿಲುಕುತ್ತಿಲ್ಲ. ಶಿಕ್ಷಕರು, ವಕೀಲರು, ವೈದ್ಯರು, ಲೆಕ್ಕಿಗರು, ವಿವಿಧ ಬಗೆಯ ಸಮಾಲೋಚನೆ ನೀಡುವ ತಜ್ಞರು ಇವರೆಲ್ಲ ತಮ್ಮ ಸಂಪಾದನೆ ಎಷ್ಟೆಂಬುದನ್ನು ಮರೆಮಾಚುತ್ತಾರೆ. ಕಪ್ಪು ಹಣದ ವ್ಯವಹಾರ ಮತ್ತು ಚಲಾವಣೆಯು ಸಂಪತ್ತಿನ ಸೃಷ್ಟಿಗೆ ನೆರವಾಗುವ ಬಾಬಿಗೆ ಸೇರಿದ್ದರೂ ಜಿಡಿಪಿ ಲೆಕ್ಕಾಚಾರದ ವ್ಯಾಪ್ತಿಯ ಹೊರಗೇ ಉಳಿಯುತ್ತದೆ.

ಹೀಗಾಗಿ ವಾಸ್ತವ ಜಿಡಿಪಿ ಬಹಳ ಹೆಚ್ಚೇ ಇದ್ದರೂ ನಾವು ಬಡವರೆಂದೇ ಚಿತ್ರಿತರಾಗುತ್ತೇವೆ.

ವೇತನದ ಕೊರತೆ ತುಂಬಿಕೊಡಲು ಸಂಘಟಿತ ವಲಯ ಶ್ರಮಿಕರಿಗೆಂದೇ ಕೈಗಾರಿಕಾ ಉತ್ಪಾದನೆ ಸೂಚ್ಯಂಕ (ಐಐಪಿ), ಸಗಟು ಬೆಲೆ ಸೂಚ್ಯಂಕ ಮುಂತಾದವನ್ನು ಅನ್ವಯಿಸುವುದುಂಟು. ತುಟ್ಟಿಭತ್ಯ ನಿರ್ಣಯಕ್ಕೆ ಇವು ಸಹಾಯಕ. ಜೀವನ ಎಷ್ಟು ತುಟ್ಟಿಯಾಗುತ್ತಿದೆಯೋ ಅದಕ್ಕಿಂತ ಬಹಳ ಕಡಿಮೆ ಪ್ರಮಾಣದ ತುಟ್ಟಿಭತ್ಯ ತಮಗೆ ಸಿಗುತ್ತದೆ ಎಂದು ಶ್ರಮಿಕರು ದೂರುತ್ತಾರೆ. ಹಲವಾರು ಬಾಬುಗಳಲ್ಲಿ ಲೆಕ್ಕಕ್ಕೇ ಸಿಗದೇ ಹೊರಗೆ ಉಳಿಯುವ ಅಂಶಗಳಿರುವುದೇ ಅದಕ್ಕೆ ಕಾರಣ.

ಅಂಕಿಸಂಖ್ಯೆಗಳನ್ನು, ಮಾಹಿತಿಯನ್ನು ಕಲೆ ಹಾಕುವಲ್ಲಿ ಕೇಂದ್ರ ಸರ್ಕಾರಕ್ಕೆ ಸೇರಿದ ಸಂಸ್ಥೆಗಳು ಸಾಕಷ್ಟು ಶ್ರಮಿಸುತ್ತಿದ್ದರೂ ರಾಜ್ಯ ಸರ್ಕಾರಗಳು ನಿರಾಸ್ಥೆ ವಹಿಸುವುದು ಅಧಿಕ. ಈ ಲೋಪಕ್ಕೆ ಅದೇ ಮುಖ್ಯ ಕಾರಣ.

ಎಷ್ಟೆಲ್ಲ ಕಸರತ್ತು ಮಾಡಿ ಜಿಡಿಪಿ ಮತ್ತಿತರ ಬಗೆಯ ಲೆಕ್ಕಾಚಾರಗಳನ್ನು ಮಾಡಿ ಇಟ್ಟರೂ, ವಿದೇಶಗಳ ಇಂಥದೇ ಚಟುವಟಿಕೆ ಜೊತೆ ಹೋಲಿಸಿದಾಗ, ಭಾರತದ ಕಸರತ್ತು ಶಭಾಷ್‌ ಎನಿಸಿಕೊಂಡರೂ ಇಡೀ ಮಾಹಿತಿ ನಿರ್ವಹಣೆ ಟೀಕೆಗೆ ತುತ್ತಾಗಿಯೇ ಉಳಿದಿದೆ. ಸಂಪತ್ತಿನ ಸಮಾನ ಹಂಚಿಕೆಗೆ, ಬಡತನ ನಿವಾರಣೆಗೆ ಈ ಮಾಹಿತಿ ನಿರ್ವಹಣೆ ನೆರವಾಗಿಲ್ಲ ಎಂದು ಅರ್ಥಶಾಸ್ತ್ರಜ್ಞರು ದೂರುತ್ತಾರೆ. ವೃದ್ಧಿ, ವೃದ್ಧಿ ದರ, ತಲಾ ಲೆಕ್ಕಾಚಾರ ಮುಂತಾದವೆಲ್ಲ ವಾಸ್ತವಕ್ಕಿಂತ ದೂರವಾದುದು ಎಂಬುದು ಅವರ ಟೀಕೆ. ಅದು ವ್ಯವಸ್ಥೆಯ ದೋಷ ಎನಿಸಿಕೊಳ್ಳುವುದೇ ಹೊರತು ಅನ್ಯಥಾ ಅಲ್ಲ. ಮಾಹಿತಿ ನಿರ್ವಹಣೆಯನ್ನು ಸದಾ ಕಾಲ ಸುಧಾರಣೆಗೆ ಒಳಪಡಿಸಲಾಗುತ್ತಿದೆ ಎಂಬುದು ಮಾತ್ರ ನಿಜ. ಕಂಪ್ಯೂಟರೀಕರಣದ ಬಳಕೆ ಈ ದಿಸೆಯಲ್ಲಿ ಇದು ಇನ್ನೂ ಹೆಚ್ಚಬೇಕಿದೆ.

ಇತ್ತೀಚೆಗೆ ಗೋಲ್ಡನ್‌ ಸ್ಯಾಕ್ಸ್‌ ಎಂಬ ಬಂಡವಾಳ ಪೇಟೆ ವಹಿವಾಟು ಸಂಸ್ಥೆಯೊಂದು ಜಿಡಿಪಿ ಆಧಾರದ ಮೇಲೆ ಲೆಕ್ಕ ಹಾಕಿ ವಿಶ್ವದಲ್ಲಿ ಆರ್ಥಿಕ ಭವಿಷ್ಯವನ್ನು ನಿರ್ಣಯಿಸುವ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಲಿದೆ ಎಂದು ಹೇಳಿದೆ. ೨೦೫೦ರ ವೇಳೆಗೆ ಭಾರತವು ಅತಿ ವೇಗದಲ್ಲಿ ವೃದ್ಧಿ ಕಾಣುವ ಹಾಗೂ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಪರಿಣಮಿಸುತ್ತದೆ ಎಂಬುದು ಅದರ ಭವಿಷ್ಯವಾಣಿ.

ಬ್ರೆಜಿಲ್‌, ರಷ್ಯಾ, ಭಾರತ ಮತ್ತು ಚೀನಾ ಇವು ಇಂಗ್ಲಿಷಿನ ಮೊದಲ ಅಕ್ಷರಗಳು ಸೇರಿದಾಗ ‘ಬ್ರಿಕ್‌’ ಎಂದಾಗುತ್ತದೆ. ಈ ಬ್ರಿಕ್‌ ರಾಷ್ಟ್ರಗಳು ಸದ್ಯದ ಶ್ರೀಮಂತ ರಾಷ್ಟ್ರಗಳಾದ ಅಮೆರಿಕ, ಜಪಾನ್‌, ಜರ್ಮನಿ, ಫ್ರಾನ್ಸ್‌, ಇಟಲಿ ಮತ್ತು ಬ್ರಿಟನ್‌ (ಜಿ-೬ ರಾಷ್ಟ್ರಗಳ ಕೂಟ) ಇವನ್ನು ಹಿಂದಕ್ಕೆ ಹಾಕುತ್ತವೆ.

ಬ್ರಿಕ್‌ ರಾಷ್ಟ್ರಗಳು ಮುಖ್ಯವಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿ ದುಡಿಮೆ ಹಾಗೂ ಅದರ ಪ್ರತಿಫಲ ಹಂಚಿಕೆಯಲ್ಲಿ ಸುಧಾರಣೆ ತರಬೇಕು ಮಾತ್ರ. ಆಗ ಮಾತ್ರ ಈ ಭವಿಷ್ಯವಾಣಿ ನಿಜವಾಗುತ್ತದೆ.

ಭಾರತದ ಮಟ್ಟಿಗೆ ಮಾಡಿದ ವಿಶ್ಲೇಷಣೆಯಲ್ಲಿ ಅಸಂಖ್ಯಾತ ಅಶಿಕ್ಷಿತರ ಶ್ರಮಿಕ ವರ್ಗಕ್ಕೆ (ಕೃಷಿಕರು ಸಹಾ ಸೇರಿದಂತೆ) ಅಧಿಕ ಕೆಲಸ ಒದಗಿಸಬೇಕು. ಅವರ ಪಾಲಿಗೆ ದುಡಿಮೆ ಪ್ರತಿಫಲಕಾರಿ ಆಗಬೇಕು. ಅವರು ತಮ್ಮ ಸೌಖ್ಯಕ್ಕಾಗಿ ಹಣ ಖರ್ಚು ಮಾಡುವುದು ಹೆಚ್ಚಬೇಕು. ಆಗ ಮಾತ್ರ ಭವಿಷ್ಯವಾಣಿ ನಿಜವಾಗುತ್ತದೆ.

ಉತ್ಪಾದನಾ ರಂಗದಲ್ಲಿ ಸದ್ಯ ಕಾಲ ಮತ್ತು ಶ್ರಮ ಪೋಲಾಗುವುದೇ ಅಧಿಕ. ಕಾರ್ಮಿಕ ವಿಷಯಗಳ ಸುಧಾರಣಾ ಕ್ರಮಗಳ ಜಾರಿಯು ವ್ಯಾಪಕ ನಿರುದ್ಯೋಗಕ್ಕೆ ದಾರಿ ಮಾಡಿಕೊಡುತ್ತದೆ.

ಅಂಥ ಪರಿಸ್ಥಿತಿ ಒದಗದಂಥ ಸುಧಾರಣಾ ಕ್ರಮಗಳನ್ನು ರೂಪಿಸುವುದೇ ಈಗಿನ ದೊಡ್ಡ ಸವಾಲು.

೧೨.೧೧.೨೦೦೩