ಬಂಗಾರದ ಬೆಲೆ ಗಗನಕ್ಕೆ. ಹತ್ತು ಗ್ರಾಂ ಅಪರಂಜಿ ಬಂಗಾರಕ್ಕೆ ೬೧೫೦ ಸರ್ವಕಾಲಿಕ ದಾಖಲೆ ಇದೆ.

ಗುರುವಾರದ ಈ ಸುದ್ದಿ ಒಂದು ದಿನ ಮಾತ್ರ ದಾಖಲೆ ಮಟ್ಟದಿಂದ ಕೆಳಕ್ಕೆ ಬಂತು. ಆದರೆ ರೂ. ೬೦೦೦ ಮಟ್ಟದ ಮೇಲೆ ಇತ್ತು.

ವಾಸ್ತವವಾಗಿ ಕಳೆದ ಆರು ವರ್ಷಗಳಿಂದ ಬಂಗಾರ, ಬೆಲೆ ದೃಷ್ಟಿಯಿಂದ ಕಾಂತಿಹೀನನಾಗಿತ್ತು. ಬೆಲೆ ಏರಿಸಿಕೊಂಡಿದ್ದರಿಂದ ಲೋಹದ ಮೇಲೆ ಕುಳಿತಿದ್ದ ದೂಳನ್ನು ಕೊಡವಿದಂತೆ ಆಗಿದೆ.

ಬಂಗಾರದ ಬೆಲೆ ಏರಿತೆಂದರೆ, ಭಾರತದಲ್ಲಿ ಮಹಿಳೆಯರ ಮನ ಮಿಡುಕುತ್ತದೆ. ಮಂಪರಿನಲ್ಲಿ ಕುಳಿತವರು ಸಹಾ ಎದ್ದು ಸರಿಯಾಗಿ ಕುಳಿತುಕೊಳ್ಳುತ್ತಾರೆ.

ಹೆಣ್ಣೆಂದ ಮೇಲೆ ಕಿಂಚಿತ್ತು ಬಂಗಾರ ಇರಲೇಬೇಕು ಎನ್ನುವುದು ಭಾರತೀಯರ ನಂಬಿಕೆ. ಮುಖ್ಯವಾಗಿ ಬಂಗಾರದ ಒಡವೆ ಹಾಕದೆ ಎಂಥವರ ಮನೆಯ ಮದುವೆಯೂ ಅಪೂರ್ಣ. ಅದು ಒಂದು ರೀತಿಯಲ್ಲಿ ಅಪದ್ಧನ. ಕಷ್ಟಕಾಲ ಬಂದಾಗ ಬಂಗಾರದ ಒಡವೆ ಅಡವಿಟ್ಟು ಅಥವಾ ಮಾರಾಟ ಮಾಡಿ ಬವಣೆ ತೀರಿಸಿಕೊಳ್ಳುತ್ತಾರೆ. ಅದಕ್ಕಾಗಿಯೇ ಮನೆಯ ಜೀವಂತ ಲಕ್ಷ್ಮೀಯನ್ನು ಬಂಗಾರದ ಒಡವೆಗಳಿಂದ ಶ್ರೀಮಂತಗೊಳಿಸುವುದು.

ವಿದೇಶಗಳಲ್ಲಿ ಬಂಗಾರಕ್ಕಿಂತ ತುಟ್ಟಿ ಎನಿಸಿದ ಪ್ಲಾಟಿಸಂ ಲೋಹದಿಂದ ಒಡವೆ ಮಾಡಿಸುವುದುಂಟು. ಭಾರತದಲ್ಲೂ ಬಂಗಾರದ ಮೋಜಿಗಿಂತ ವಜ್ರ (ಡೈಮಂಡ್‌) ಮೋಹ ಶ್ರೀಮಂತರಲ್ಲಿ ಹೆಚ್ಚಿರುವುದುಂಟು. ಆದರೆ ಬಂಗಾರಕ್ಕೆ ಇರುವ ಮರು ಮಾರಾಟ ಅವಕಾಶ ಇವಕ್ಕಿಲ್ಲ. ಬಂಗಾರದ ಒಡವೆಗಳನ್ನು ಖರೀದಿಸಲೂ ಹಣ. ಕರಗಿಸಿ ಮಾರಿದರೂ ಹಣ.

ವ್ಯಾಪಾರಸ್ಥರಲ್ಲಿ ಒಂದು ನಂಬಿಕೆ ಇದೆ. ಹೆಂಡತಿಯ ಮೈಮೇಲಿನ ಒಡವೆಗಳನ್ನು ವಾಪಸು ಪಡೆಯಬಾರದು; ವ್ಯಾಪಾರದಲ್ಲಿ ನಷ್ಟವಾದರೆ ಬಂಡವಾಳದ ಕೊರತೆ ಬಂದರೆ ಮಾತ್ರ ಹೆಂಡತಿ ಬಂಗಾರ ವಾಪಸ್‌ ಪಡೆಯಬಹುದು. ನಂತರ ಸಹಾ ಅಡವಿಟ್ಟ ಒಡವೆ ವಾಪಸ್‌ ಬೇಗ ಪಡೆಯಬೇಕು. ಕರಗಿಸಿದ್ದರೆ ಹೊಸ ಒಡವೆ ಮಾಡಿಸಬೇಕು. ಇದಕ್ಕೆ ತಪ್ಪಿದರೆ ಅವಮಾನ. ಇದರ ಹೊರತಾಗಿ ಪೋಲಾಗುವಂಥ ಖರ್ಚು ಬಾಬಿಗಾಗಿ ಹೆಂಡತಿ ಒವಡೆ ಮಾರುವವರು ನಾಲಾಯಖ್‌, ಮನೆ ಕಟ್ಟುವುದು, ಮದುವೆ ಮಾಡುವುದು ಮುಂತಾದ ಬಾಬಿಗಾಗಿ ಗೃಹಿಣಿಯರು ತಾವಾಗಿ ಒಡವೆ ಬಿಚ್ಚಿಕೊಡುತ್ತಾರೆ. ಹೀಗಾಗಿ ಬಂಗಾರ ವಾಸ್ತವವಾಗಿ ಅಪದ್ಧನ.

ಭಾರತವೇ ಅತಿ ಹೆಚ್ಚು ಬಂಗಾರ ಬಳಸುವ ರಾಷ್ಟ್ರ. ಬಂಗಾರದ ಗಣಿಗಳು ಖಾಲಿ ಆಗಿವೆ ಎಂದರೆ ಯೋಚಿಸುವುದಿಲ್ಲ. ದೇಶವು ಬಂಗಾರವನ್ನು ಆಮದು ಮಾಡಿಕೊಳ್ಳುತ್ತದೆ. ಭಾರತೀಯರ ಮನೆಗಳಲ್ಲಿ ಸಂಗ್ರಹ ಆಗಿರುವ ಒಟ್ಟು ಬಂಗಾರ ೧೨,೦೦೦ದಿಂದ ೧೫,೦೦೦ ಟನ್‌ ಇರಬಹುದೆಂಬ ಅಂದಾಜಿದೆ.

ಬಂಗಾರ ಮನೆಗಳ ಒಳಗೆ ನಿರುಪಯುಕ್ತವಾಗಿ ಬಿದ್ದಿರುತ್ತದೆ. ಅಂದರೆ ಹಣವು ಬಂಗಾರದ ರೂಪದಲ್ಲಿ ಅನುಪಯುಕ್ತವಾಗಿರುತ್ತದೆ ಎಂದು ಅರ್ಥಶಾಸ್ತ್ರಜ್ಞರು ಹೇಳುವುದುಂಟು. ಒಂದು ಅರ್ಥದಲ್ಲಿ ಅದು ನಿಜ ಇರಬಹುದು. ಈ ವ್ಯಾಖ್ಯಾನಕ್ಕೆ ಹೊರತಾದ ಇನ್ನೊಂದು ಮುಖವೂ ಬಂಗಾರಕ್ಕಿದೆ.

ಬಂಗಾರದೊಡವೆ ಬೇಕೆನ್ನುವ ನೀರೆ ಎಷ್ಟೇ ಸಣ್ಣವಳಿರಲಿ, ಶ್ರೀಮಂತಳಿರಲಿ; ಅವಳಿಗೆ ಅದು ದೊರಕಿದಾಗ ಆಗುವ ಆನಂದಕ್ಕೆ ಬೆಲೆ ಕಟ್ಟುವುದುಂಟೆ? ಮನೆಯಲ್ಲಿ ಬಂಗಾರ ಸ್ವಲ್ಪ ಕೂಡಾ ಇಲ್ಲದಿದ್ದರೆ ಕಷ್ಟಕಾಲದಲ್ಲಿ ಹೇಗಪ್ಪಾ ಎಂಬ ಅಭದ್ರತೆ ಏನು ಉಂಟಾಗುತ್ತದೋ, ಅದನ್ನು ಅಳೆಯಲುಂಟೇ? ಮೊದಲಿನಿಂದಲೂ ಬಂಗಾರವನ್ನು ಉಳಿತಾಯದ ರೂಪದಲ್ಲಿ ಸಂಗ್ರಹಿಸಿ ಇಡುವುದೇ ವಾಡಿಕೆ. ಬಂಗಾರದ ಬೆಲೆ ಸತತವಾಗಿ ಏರುತ್ತಲೇ ಇರುತ್ತದೆ ಎನ್ನುವ ಕಾರಣಕ್ಕೆ ಬ್ಯಾಂಕಿನಲ್ಲಿ ಠೇವಣಿ ಇಡುವ ಬದಲು ಬಂಗಾರ ಕೊಳ್ಳುವುದರಲ್ಲೇ ಜನರು ಆಸಕ್ತರಾಗುತ್ತಿದ್ದರು. ಆದರೆ ಏಳೆಂಟು ವರ್ಷದಿಂದ ಬೆಲೆ ಏರಲೇ ಇಲ್ಲ. ಆಗೆಲ್ಲ ಬಂಗಾರ ಕಾಂತಿಹೀನವಾಯಿತು ಎನ್ನತೊಡಗಿದ್ದರು.

ವಾಸ್ತವವಾಗಿ ಬಂಗಾರಕ್ಕೂ ಹಣದುಬ್ಬರಕ್ಕೂ ಒಂದು ರೀತಿಯ ನಂಟು. ಹಣದುಬ್ಬರ ವಿಜೃಂಭಿಸಿದಂತೆಲ್ಲ ಬೆಲೆಗಳು ಸತತ ಏರುತ್ತಾ ಇರುತ್ತದೆ. ಅದು ನಿಯಂತ್ರಣಕ್ಕೆ ಬಂದಂತೆಲ್ಲ ಬಂಗಾರದ ಬೆಲೆ ಏರಿಕೆಗೆ ತಡ.

ಭಾರತದಲ್ಲಿ ಉದಾರೀಕರಣ ನೀತಿ ಜಾರಿಗೆ ಬಂದಂತೆ ೯೦ರ ದಶಕದಿಂದ ಈಚೆಗೆ ಹಣದುಬ್ಬರ ನಿಯಂತ್ರಣ ಸಾಧ್ಯವಾಯಿತು. ಬಂಗಾರದ ಬೆಲೆ ಏರಲು ಅವಕಾ ಆಗಲೇ ಇಲ್ಲ. ಆರ್ಥಿಕ ಹಿಂಜರಿತದ ವೇಳೆ ಎಲ್ಲ ದೇಶಗಳಲ್ಲಿ ಜನರ ಜೀವನೋಪಾಯಕ್ಕೆ ಕಷ್ಟ. ಇನ್ನು ಒಡವೆ ಮಾಡಿಸುವುದು ಆದ್ಯತೆ ಇಲ್ಲದ ಬಾಬು.

ಅಂಥ ಪರಿಸ್ಥಿತಿಯಲ್ಲೂ ಭಾರತದಲ್ಲಿ ಪ್ರತಿವರ್ಷ ೫೫೦ ರಿಂದ ೬೦೦ ಟನ್‌ನಷ್ಟು ಬಂಗಾರವನ್ನು ವಿದೇಶಗಳಿಂದ ಕೊಳ್ಳುವುದು, ಮಾರುವುದು ಕರಗಿಸುವುದು ಒಡವೆ ಮಾಡಿಸುವುದು ನಡೆದೇ ಇರುತ್ತದೆ. ಮಳೆ ಬರದೆ ಕ್ಷಾಮ ಕಾಲಿಟ್ಟರೆ ಒಡವೆಗಳಲ್ಲೆ ಮನೆಗಳಿಂದ ಕಾಣೆ ಆಗುತ್ತವೆ. ಮಳೆ ಸರಿಯಾಗಿ ಬಂದು ನಾಲ್ಕು ಕಾಸು ಕೈಗೆ ಹತ್ತಿದರೆ ಒಡವೆ ಕಡೆ ಗಮನ ಹೋಗುತ್ತದೆ.

ಉದಾರೀಕರಣ ಜಾರಿಗೆ ಬಂದ ಹೊಸತರದಲ್ಲಿ ಷೇರು ಮಾರುಕಟ್ಟೆ ಚಿಗುರಿಕೊಂಡಿತು. ಆಗೆಲ್ಲ ಮಧ್ಯಮ ವರ್ಗದವರು, ಕೆಳಮಧ್ಯಮ ವರ್ಗದವರು ಕೂಡಾ, ಬಂಗಾರದ ಬದಲು ಷೇರುಗಳನ್ನು ಖರೀದಿಸುತ್ತಾ ಹೋದರು. ಹುಚ್ಚೇರಿದಾಗ ಬಂಗಾರ ಮಾರಿ ಷೇರುಗಳಲ್ಲಿ ಹಣ ಹಾಕಿ ಕೈಸುಟ್ಟುಕೊಂಡರು. ಒಟ್ಟಿನಲ್ಲಿ ಬಂಗಾರ ಮುಂಚಿನಷ್ಟು ಆಕರ್ಷಕವಾಗಿ ಉಳಿದಿರಲಿಲ್ಲ.

ಸಾಮಾನ್ಯವಾಗಿ ನಾಗರಿಕ ಹೇಗೋ ದೇಶ ಕೂಡಾ. ಬೊಕ್ಕಸದಲ್ಲಿ ಮೀಸಲು ಧನವನ್ನು ಬಂಗಾರದ ರೂಪದಲ್ಲಿ ಸಂಗ್ರಹಿಸಿ ಇಡುವುದು ವಾಡಿಕೆ. ಅದು ಈಗಲೂ ಮುಂದುವರಿದಿದೆ. ವಿದೇಶಿ ವಿನಿಮಯವನ್ನು ದಾಸ್ತಾನು ಮಾಡುವುದು ಬಂಗಾರದ ರೂಪದಲ್ಲೇ. ಸಂಗ್ರಹ ಶೇಕಡಾ ಎಷ್ಟು ಭಾಗ ಬಂಗಾರದ ರೂಪದಲ್ಲಿ ಇರುತ್ತದೆ ಎನ್ನುವುದು ಕುತೂಹಲಕಾರಿ; ಅಮೆರಿಕ ಶೇ. ೫೭, ಇಟಲಿ ಶೇ. ೪೫, ಜರ್ಮನಿ ಶೇ. ೩೯, ಸ್ವಿಟ್ಜರ್ಲೆಂಡ್‌ ಶೇ. ೩೫, ಐರೋಪ್ಯ ಕೆಂದ್ರ ಬ್ಯಾಂಕ್‌ ಶೇ. ೧೫, ಭಾರತ ಶೇ. ೬, ಚೀನಾ ಶೇ. ೨.

ಬಂಗಾರಕ್ಕೂ ಅಮೆರಿಕನ್‌ ಡಾಲರ್‌ಗೂ ಒಂದು ರೀತಿಯ ಸಾಮ್ಯ. ಅಮೆರಿಕಕ್ಕೆ ನಾನಾ ತಾಪತ್ರಯ ಆಗಿ ಡಾಲರ್‌ ಮೌಲ್ಯ ಕುಸಿದಾಗ, ಬಂಗಾರದ ಬೆಲೆ ನಿಗದಿ ವೇಳೆ ಗೊಂದಲ ಸಾಮಾನ್ಯವಾಗಿ ಏರುಬೆಲೆ ಡಾಲರ್‌ಗಿಂತ ಯೂರೋಪ ಆಕರ್ಷಕವಾದಾಗ, ಸ್ವಲ್ಪ ದೃಢತೆ. ತನ್ನ ಕರೆನ್ಸಿ ದೃಢವಾಗಿದ್ದಾಗ ಜಪಾನ್ ಬಂಗಾರವನ್ನು ಲೆಕ್ಕಿಸುತ್ತಿರಲಿಲ್ಲ. ಚೀನಾ ದೂರವೇ ಉಳಿದಿರುತ್ತಿತ್ತು. ಆದರೆ ಈಗ ಅವು ಸಹಾ ಬೊಕ್ಕಸದಲ್ಲಿ ಮುಂಚಿಗಿಂತ ಸ್ವಲ್ಪ ಹೆಚ್ಚಿಗೆ ಬಂಗಾರ ಇರಲಿ ಎನ್ನತೊಡಗಿವೆ.

ಈ ಮಧ್ಯೆ ೯೦ರ ದಶಕದ ಮಧ್ಯಭಾಗದಿಂದ ಈಚೆಗೆ ವಿಶ್ವದಲ್ಲಿ ಉತ್ಪಾದನೆ ಹೆಚ್ಚಿದ್ದೇ ಅಲ್ಲದೆ ಬೇಡಿಕೆ ಕಡಿಮೆ. ಆದುದರಿಂದ ಬೆಲೆ ಇಳಿಯತೊಡಗಿತು. ಆರ್ಥಿಕ ಹಿಂಜರಿತದ ಪರಿಣಾಮವಿದು. ೯೮-೯೯ರಲ್ಲಿ ಬ್ಯಾಂಕ್‌ ಆಫ್‌ ಇಂಗ್ಲೆಂಡ್‌ ನೇತೃತ್ವದಲ್ಲಿ ಯುರೋಪಿನ ವಿವಿಧ ಕೇಂದ್ರ ಬ್ಯಾಂಕುಗಳು ತಮ್ಮ ಮೀಸಲು ಧನರೂಪದ ಬಂಗಾರವನ್ನು ಮಾರತೊಡಗಿದವು. ಬಂಗಾರಪೇಟೆ ತತ್ತರಿಸಿ ಹೋಯಿತು. ಬೆಲೆ ಸರ್ರನೆ ಇಳಿಯತೊಡಗಿತು. ಕೈಲಿರುವ ಬಂಗಾರಕ್ಕೆ ಬೆಲೆ ಇಲ್ಲ ಎಂದಾದರೆ ಯಾರಿಗೆ ತಾನೇ ಗಾಬರಿ ಆಗುವುದಿಲ್ಲ. ಐರೋಪ್ಯ ಕೇಂದ್ರ ಬ್ಯಾಂಕುಗಳ ಮೇಲೆ ಒತ್ತಡ ಬಂದಿತು. ೧೫ ಕೇಂದ್ರ ಬ್ಯಾಂಕುಗಳು ಒಂದುಗೂಡಿ ಬಂಗಾರ ಮಾರಾಟಕ್ಕೆ ತಡೆ ಒಡ್ಡುವ ಒಪ್ಪಂದವನ್ನು ೯೯ ಸೆಪ್ಟೆಂಬರ್‌ನಲ್ಲಿ ಮಾಡಿಕೊಂಡವು. ಯಾವುದೇ ವರ್ಷದಲ್ಲಿ ೪೦೦ ಟನ್‌ಗಿಂತ ಅಧಿಕ ಬಂಗಾರ ಮಾರಬಾರದು. ಇದು ೨೦೦೪ರವರೆಗೆ ಜಾರಿಯಲ್ಲಿ ಇರುತ್ತದೆ. ಈ ಸ್ವಯಂ ನಿರ್ಬಂಧಕ್ಕೆ ಇನ್ನು ೧೫ ದೇಶಗಳ ಕೇಂದ್ರ ಬ್ಯಾಂಕುಗಳೂ ಸೇರಿದವು. ಬೆಲೆ ಕುಸಿತ ತಪ್ಪಿತು.

ಬೆಲೆ ಎನ್ನುವುದು ನದಿ ಅಥವಾ ಸಮುದ್ರದ ನೀರಿನ ಭರತ ಇಳಿತ ಇದ್ದ ಹಾಗೆ. ಇಳಿದ ಬೆಲೆ ಏರಬೇಕು; ಅದು ನಂತರ ಇಳಿಯಬೇಕು ಎಂಬುದೇ ಮಾರುಕಟ್ಟೆ ನಿಯಮ.

ಭಾರತದಲ್ಲೇ ನಾಲ್ಕು ವರ್ಷದ ಹಿಂದೆ ಬಡ್ಡಿ ದರಗಳನ್ನು ಇಳಿಸುವ ಸರ್ಕಾರದ ಉಮೇದು ಆರಂಭವಾಯಿತು. ಹಂತ ಹಂತಗಳಲ್ಲಿ ಇಳಿತ, ಠೇವಣಿಗಳನ್ನು ಇಟ್ಟು ಬಡ್ಡಿಯಿಂದ ಜೀವಿಸುವವರಿಗೆ ಬವಣೆ, ಮತ್ತೆ ಉಳಿತಾಯದಾರರು ಬಂಗಾರದತ್ತ ಕಣ್ಣು ಹಾಯಿಸಿದರೇನು? ಇಲ್ಲ. ಏಕೆಂದರೆ ಅದರ ಬೆಲೆ ಏರುತ್ತಿಲ್ಲ! ಜೊತೆಗೆ ಬರ ಪರಿಸ್ಥಿತಿ. ಆದರೆ ಅಮೆರಿಕವು ಇರಾಕ್ ದಾಳಿ ಆರಂಭಿಸಿದಾಗ ಬಂಗಾರದ ಬೆಲೆ ಏರಿದಂತೆ ಭಾಸವಾಯಿತು. ಸ್ವಲ್ಪ ಏರಿತು. ಆದರೆ ಯುದ್ಧ ಬಹಳ ದಿನ ಮುಂದುವರೆಯಲಿಲ್ಲ. ಮತ್ತೆ ಇಳಿಯಿತು.

ವಾಸ್ತವವಾಗಿ ಬಂಗಾರದ ಬೆಲೆ ವಿಪರೀತ ಇಳಿಯುವುದಕ್ಕೆ ವಿವಿಧ ದೇಶಗಳ ಕೇಂದ್ರ ಬ್ಯಾಂಕುಗಳ ಸಮೂಹ ಅವಕಾಶ ಕೊಡುವುದಿಲ್ಲ. ಅವುಗಳಲ್ಲಿ ಒಟ್ಟು ೩೨ ರಿಂದ ೩೫ ಸಾವಿರ ಟನ್‌ ಬಂಗಾರದ ಸಂಗ್ರಹವಿದೆ.

ಬಂಗಾರದ ಅಂತಾರಾಷ್ಟ್ರೀಯ ಬೆಲೆ ೧೯೮೦ರಲ್ಲಿ ಔನ್ಸಿಗೆ ೮೮೭ ಡಾಲರ್‌ ಇದ್ದದ್ದು ೯೮ರಲ್ಲಿ ೨೫೦ ಡಾಲರ್‌ಗೆ ಬಂದಿತು. ಮತ್ತೆ ಏರತೊಡಗಿ ಸದ್ಯ ೪೦೦ ರಿಂದ ೪೧೦ ಡಾಲರ್‌ ಮಟ್ಟದಲ್ಲಿದೆ. ಬಲ್ಲವರ ಅಂದಾಜಿನ ಪ್ರಕಾರ ೨೦೧೦ರ ವೇಳೆಗೆ ಅದು ೬೦೦ ಡಾಲರ್‌ ಮಟ್ಟಕ್ಕೇರಬಹುದು.

ಭಾರತದಲ್ಲಿ ಬಂಗಾರಕ್ಕೆ ಬೇಡಿಕೆ ತೀವ್ರವಾಗಿ ಏರಬಹುದು ಎನ್ನುವ ಭಾವನೆಯೇ ಇದೆ. ಜನರ ಕೈಲಿ ಹಣ ಆಡುವುದು ಸ್ವಲ್ಪ ಹೆಚ್ಚಾದರೂ ಸಾಕು ಜನರು ಸ್ಥಿರಾಸ್ತಿಯತ್ತ ಅಧಿಕ ಗಮನವನ್ನು ಕೊಟ್ಟಂತೆ ಬಂಗಾರದತ್ತ ಸಹಾ ಕೊಡುತ್ತಾರೆ. ಏಕೆಂದರೆ ಬಡ್ಡಿ ದರಗಳನ್ನು ಸರ್ಕಾರ (ರಿಸರ್ವ್‌ ಬ್ಯಾಂಕ್‌ ಮೂಲಕ) ಏರಿಸುವ ಸಾಧ್ಯತೆಗಳು ಕಾಣಿಸುತ್ತಿಲ್ಲ. ಬಂಡವಾಳ ಪೇಟೆಗಳು ಮತ್ತೆ ವಿಪರೀತ ತೇಜಿ ಆಗುವಂತೆಯೂ ಕಾಣಿಸದು.

ಆದರೆ, ಪ್ರಸ್ತುತ ಎನ್‌ಡಿಎ ಸರ್ಕಾರವು ಬಂಗಾರದ ವಹಿವಾಟನ್ನು ಅಧಿಕಗೊಳಿಸುವ ನೀತಿ ಅನುಸರಿಸುತ್ತಿದೆ. ೨೦೦೩ರ ಆರಂಭದಲ್ಲೇ, ಅಂದರೆ ಬಜೆಟ್‌ ಪ್ರಸ್ತಾವಗಳು ಹೊರಬಿದ್ದಾಗಲೇ ಅದು ವ್ಯಕ್ತವಾಯಿತು. ಬಂಗಾರದ ಆಭರಣ ತಯಾರಿಕೆ ಮತ್ತು ರಫ್ತು ಚೆನ್ನಾಗಿ ನಡೆದಿದೆ. ಭಾರತದಲ್ಲಿ ಗ್ರಾಹಕರಿಗೂ ಕೊರತೆ ಇಲ್ಲ. ಅವರು ಮುಂಚಿನಂತೆ ಷರಾಫರ ಮೂಲಕ ಚಿನಿವಾರದಲ್ಲಿ ಆಭರಣ ಮಾಡಿಸಿಕೊಳ್ಳುವ ವಾಡಿಕೆ ಕೈಬಿಡುತ್ತಿದ್ದಾರೆ. ಬಂಗಾರದ ಫ್ಯಾನ್ಸಿ ಒಡವೆಗಳ ಮಾರಾಟ ಷೋರೂಂ ಮೂಲಕ ಅಧಿಕಗೊಂಡಿದೆ. ಮಾಡಿಸಿದ ಒಡವೆಯನ್ನು ಕರಗಿಸಿದರೆ ಎಷ್ಟು ಹಣ ವಾಪಸ್‌ ಬರುತ್ತದೆ ಎಂದು ಯೋಚಿಸುವುದನ್ನು ನಗರಗಳ ಗ್ರಾಹಕರು ಕಡಿಮೆ ಮಾಡಿದ್ದಾರೆ. ಆಭರಣ ವ್ಯಾಪಾರಕ್ಕಿಳಿಯಲು ವಿವಿಧ ರಾಷ್ಟ್ರಗಳು ಬಹುರಾಷ್ಟ್ರೀಯ ಕಂಪನಿಗಳೂ ಆಸಕ್ತಿ ತೋರಿಸಿವೆ. ಈ ಹಿನ್ನೆಲೆಯಲ್ಲಿ ೨೦೦೩ರ ಬಜೆಟ್‌ನಲ್ಲಿ ಕೇಂದ್ರ ಅರ್ಥ ಸಚಿವ ಸಜ್ವಂತ್‌ಸಿಂಗ್‌ ಅವರು ಆಮದು ಬಂಗಾರದ ಹತ್ತು ಗ್ರಾಂ ಮೇಲಿನ ಸುಂಕ. ೨೫೦ ಇದ್ದುದನ್ನು ರೂ. ೧೦೦ಕ್ಕೆ ಇಳಿಸಿದರು. ಅನಿವಾಸಿಗಳು ಭಾರತಕ್ಕೆ ಬರುವಾಗ ಒಮ್ಮೆಗೆ ೫ ಕೆ. ಜಿ. ಬಂಗಾರವನ್ನು ಮುಕ್ತವಾಗಿ ತರಬಹುದು ಎಂದು ಮಾಡಿದಾಗ ಕಳ್ಳಸಾಗಾಣಿಕೆ ಬಹುಪಾಲು ನಿಂತುಹೋಯಿತು. ಅಧಿಕೃತ ಆಮದೇ ಈಗ ಲಾಭಕರವಾಗಿದೆ.

ಬಜೆಟ್‌ ಕ್ರಮಕ್ಕೆ ಮುನ್ನ ಹತ್ತು ತೊಲಗಳ ಬಿಸ್ಕತ್‌ ರೂಪದ ಬಂಗಾರ ಭಾರತಕ್ಕೆ ಬರುತ್ತಿತ್ತು. ವಿದೇಶಿ ಮೂಲದ ಬಂಗಾರ ಎಷ್ಟು ಅಧಿಕೃತ, ಎಷ್ಟು ಕಳ್ಳಸಾಗಾಣಿಕೆಯದು ಎಂಬುದೇ ನಿಖರ ಲೆಕ್ಕ ಸಿಗುತ್ತಿರಲಿಲ್ಲ. ಕ್ರಮಾಂಕ ಸಂಖ್ಯೆ ಮುದ್ರೆ ಮಾಡಿದ ಕೆ. ಜಿ. ಗಟ್ಟಿ ಚಿನ್ನ ಮಾತ್ರ ಪೇಟೆಯಲ್ಲಿ ಸಿಗುವಂತೆ ಮಾಡಿದ್ದರಿಂದ, ಅದರ ಮೇಲೆ ಆಮದು ಸುಂಕ ವಿಧಿಸುವುದು ಸುಲಭ. ಆದುದರಿಂದ ಪೇಟೆ ಹದ್ದುಬಸ್ತಿನಲ್ಲಿದೆ.

ಭಾರತವನ್ನು ಪ್ರಮುಖ ಬಂಗಾರ ಮತ್ತು ವಜ್ರದ ವ್ಯಾಪಾರ ಕೇಂದ್ರವಾಗಿ ಅಭಿವೃದ್ಧಿಪಡಿಸಬೇಕೆನ್ನುವುದು ತಮ್ಮ ಆಶೆ ಎಂದು ಕೇಂದ್ರ ಸಚಿವರು ಬಜೆಟ್‌ ಭಾಷಣದಲ್ಲಿ ಹೇಳಿದ್ದರು. ಬಹುಶಃ ಅದು ನಿಜವಾಗಬಹುದು. ೨೪. ೧೨. ೨೦೦೩