ಒಳ್ಳೆಯ ಹೆಸರು ಪಡೆದ ಒಂದು ಬ್ಯಾಂಕಿನ ಕೌಂಟರಿನಲ್ಲಿದ್ದ ಅಧಿಕಾರಿಯೊಬ್ಬರು ಮೊನ್ನೆ ಯಾರ ಜೊತೆಗೋ ಮಾತನಾಡುತ್ತಾ ಉದ್ಗರಿಸಿದರು; ‘ಯಾರು ಬ್ಯಾಂಕಿಗೆ ಬಂದರೂ ಡಿಪಾಸಿಟ್‌ ಇಡಬೇಕು ಅನ್ನುತ್ತಾರೆಯೇ ಹೊರತು ಸಾಲ ಕೊಡಿ ಅನ್ನುವುದಿಲ್ಲ!’ ಇದು ಇವತ್ತಿನ ವಸ್ತುಸ್ಥಿತಿ. ಸಾಲ ತೀರಿಸುತ್ತಾರೆನ್ನುವ ಭರವಸೆ ಮೂಡಿಸಬಲ್ಲ ಯಾರೂ ಈಗ ಸಾಲ ಎತ್ತುತ್ತಿಲ್ಲ.

ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರಿನವರು ಪತ್ರಿಕೆಯಲ್ಲಿ ಸಣ್ಣ ಸಣ್ಣ ಜಾಹೀರಾತು ಪ್ರಕಟಿಸುತ್ತಾರೆ. ಬನ್ನಿ ಸಾಲ ಕೊಡುತ್ತೇವೆ ಎಂದು.

ಹತ್ತಾರು ಸಾವಿರ ಅಥವಾ ಕೆಲವು ಲಕ್ಷ ರೂಪಾಯಿ ಮೊತ್ತದ ವಾಹನ ಕೊಳ್ಳುವವರಿಗೆ ‘೦’ ಪರ್ಸೆಂಟ್‌ ಬಡ್ಡಿಯ ಸಾಲ ಕೊಡುತ್ತೇವೆಂದು ಬೀದಿ ಬೀದಿಗಳಲ್ಲಿ ಬಟ್ಟೆ ಬೋಡುಗಳನ್ನು ಮಾರಾಟಗಾರರು ಹಾಕುತ್ತಾರೆ.

ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಇಂಥ ಪರಿಸ್ಥಿತಿ ಎಂದೂ ಮೂಡಿದ್ದುದಿಲ್ಲ. ಐದು ವರ್ಷದ ಹಿಂದಿನವರೆಗೂ ನಾನಾ ಉದ್ದೇಶಕ್ಕಾಗಿ ಸಾಲ ಪಡೆಯಬೇಕೆನ್ನುವವರು ಪರಿಪಾಟಲು ಪಟ್ಟಿದ್ದೇ ಬಂತು. ಅವರ ಕಹಿ ನೆನಪು ಮಾಸಿಲ್ಲ ಎನ್ನುವಾಗ ಈ ಪರಿಸ್ಥಿತಿ. ಸಾಲ ಪಡೆಯುವವರು ಸಾಕಷ್ಟಿರಬಹುದು. ಹಣವನ್ನು ಲಾಭದಾಯಕವಾಗಿ ಬಳಸಿ ಸಂಪಾದಿಸಿದ್ದರಲ್ಲಿ ಅಸಲು ಬಡ್ಡಿ ಕಂತುಗಳನ್ನು ಕಟ್ಟಲು ಸಾಧ್ಯವೇ ಎಂದು ಯೋಚಿಸಿದಾಗ ಸಾಲ ಪಡೆಯುವುದೇ ಬೇಡ ಎನಿಸುತ್ತದೆ. ಇನ್ನು ಹಣ ಉಳಿತಾಯ ಮಾಡುವ ಸಂಬಳಗಾರರ, ಮುಂತಾದವರ ವಿಚಾರ. ಹಣವನ್ನು ಎಲ್ಲಿ ಇಡಬೇಕು? ಬ್ಯಾಂಕು ಬಡ್ಡಿ ದರಗಳನ್ನು ಇಳಿಸಿರುವುದರಿಂದ ಆಕರ್ಷಣೆಯೇನೂ ಇಲ್ಲ. ಆದರೂ ವಿಧಿ ಇಲ್ಲದೆ ಠೇವಣಿ ಇಡಲು ಬ್ಯಾಂಕಿಗೇ ಬರುತ್ತಾರೆ. ಈ ಪರಿಸ್ಥಿತಿಯಲ್ಲೇ ಬ್ಯಾಂಕ್‌ ಅಧಿಕಾರಿ ಉದ್ಗಾರ ಬಂದಿದ್ದರು.

ಗಳಿಸಿದ್ದರಲ್ಲಿ ಒಂದಿಷ್ಟು ಹಣವನ್ನು ಕಷ್ಟಕಾಲಕ್ಕೆಂದು ಉಳಿಸುವುದು ಭಾರತೀಯರ ಜಾಯಮಾನ. ಬಂದಿದ್ದನ್ನೆಲ್ಲ ಮುಕ್ಕಿ ‘ಜೀವನ ಅನುಭವಿಸುವ’ ಬಳಕೆಬಾಕ ಸಂಸ್ಕೃತಿಯ ತವರೂರಾದ ಅಮೆರಿಕಕ್ಕೆ ಹೋದರೂ ಭಾರತೀಯರು ಒಂದಿಷ್ಟು ಹಣ ಉಳಿಸುವವರೇ ಸರಿ! ಆದರೆ ಭಾರತದೊಳಗೆ ಉಳಿಸಿದ ಹಣವನ್ನು ಲಾಭಧಾಯಕವಾಗಿ ತೊಡಗಿಸಿ ಆ ಹಣ ಚೆನ್ನಾಗಿ ಬೆಳೆಯುವಂತೆ ಮಾಡುವ ಮಾರ್ಗೋಪಾಯಗಳು ಕಡಿಮೆ. ಸಾಮಾನ್ಯ ಜನರು ಬಂಗಾರ ಕೊಳ್ಳುತ್ತಾರೆ; ಇಲ್ಲವೇ ಮನೆ ಕಟ್ಟಲು ಯೋಜನೆ ಹಾಕುತ್ತಾರೆ. ಕಟ್ಟಿದ ಮನೆಯನ್ನು ಬಡಾಯಿಸಿ ಬಾಡಿಗೆ ದುಡಿಯುವತ್ತ ಯೋಚಿಸುತ್ತಾರೆ. ಇವೆರಡೂ ಈಗ ಆಕರ್ಷಕವಾಗಿ ಉಳದಿಲ್ಲ. ಏಕೆಂದರೆ ಬಂಗಾರ ಮತ್ತು ಸ್ಥಿರಾಸ್ತಿ ಬೆಲೆಗಳು ಏರುತ್ತಿಲ್ಲ ಬಂಗಾರವಂತೂ ಕಳೆದ ಆರು ವರ್ಷಗಳಲ್ಲಿ ಹೆಚ್ಚು ಕಡಿಮೆ ಒಂದೇ ಮಟ್ಟದಲ್ಲಿ ಉಳದಿದಿದೆ. ಕಳೆದ ಮೂರು ವರ್ಷಗಳಿಂದ ಸ್ಥಿರಾಸ್ತಿ ಬೆಲೆಗಳು ಇಳಿದುಹೋಗಿವೆ.

ಏಳೆಂಟು ವರ್ಷದ ಹಿಂದೆ ಬಿಡಿ ಉಳಿತಾಯದಾರರ ಪಾಲಿಗೆ ಷೇರುಗಳಲ್ಲಿ ಹಣ ತೊಡಗಿಸುವ ಮಾರ್ಗೋಪಾಯವಿತ್ತು. ಐದು ವರ್ಷದ ಹಿಂದೆ ಐಟಿ ಷೇರುಗಳು ಹೂಡಿಕೆದಾರರನ್ನು ಹುಚ್ಚೆಬ್ಬಿಸಿದ್ದವು. ಈಗ ಹಳೆಯ ಆರ್ಥಿಕತೆಯ ಷೇರುಗಳಂತೆಯೇ ಐಟಿಯೇ ಮುಂತಾದ ಹೊಸ ಆರ್ಥಿಕತೆಯ ಷೇರುಗಳ ಬೆಲೆ ಕೂಡಾ ಪೂರ್ತಿ ತಳ ಕಚ್ಚಿದೆ. ಹತ್ತರಿಂದ ಹನ್ನೆರಡು ಸಾವಿರ ರೂಪಾಯಿಯವರೆಗೆ ಹೋಗಿದ್ದ ಇನ್ಫೋಸಿಸ್‌ ಷೇರು ಬೆಲೆ ಈಗ ಎರಡೂವರೆ ಸಾವಿರವೂ ಮುಟ್ಟುತ್ತಿಲ್ಲ. ವಾಸ್ತವವಾಗಿ ಹೆಚ್ಚುವರಿ ಹಣ ಇರುವವರು ಒಳ್ಳೆಯ ಷೇರುಗಳನ್ನು ಖರೀದಿ ಮಾಡಿಟ್ಟುಕೊಳ್ಳಬಹುದು. ಆದರೆ ದೇಶದ ಪಕ್ಕದಲ್ಲೇ ಯುದ್ಧ ಆರಂಭವಾಗಿರುವುದರಿಂದ ‘ನಾಳೆ ಏನೂ ಆಗಬಹುದು’ ಎಂಬ ಚಿಂತೆ ಎಲ್ಲರನ್ನೂ ಕಾಡುತ್ತಿದೆ.

ಷೇರುಗಳನ್ನು ಖರೀದಿಸಿ ಇಟ್ಟುಕೊಂಡಿರುವ ಜನರಿಂದ ಅವನ್ನು ಕೊಳ್ಳಲು ಸಣ್ಣ ಉಳಿತಾಯದಾರರು ಬಯಸುವುದಿಲ್ಲ. ಬೆಲೆ ಏರುವ ಬದಲು ಇಳಿಯತೊಡಗಿದರೆ ಹೇಗೆಂಬ ಚಿಂತೆ ಅವರನ್ನು ಕಾಡುತ್ತದೆ. ಅವರ ದೃಷ್ಟಿ ಕಂಪನಿಗಳು ಹೊಸದಾಗಿ ಬಿಡುಗಡೆ ಮಾಡುವ ಷೇರುಗಳ ಮೇಲೆಯೇ ಇರುವುದು. ಹೊಸ ಷೇರುಗಳನ್ನು ಬಿಡುಗಡೆ ಮಾಡುವುದು ಬಹುಪಾಲು ನಿಂತೇ ಹೋಗಿದೆ.

ಕಂಪನಿಗಳ ಪಾಲಿಗೆ ಷೇರುಗಳನ್ನು ಬಿಡುಗಡೆ ಮಾಡಿ ಹಣ ಎತ್ತುವುದು ಭಾರೀ ಅನುಕೂಲಕರ. ಷೇರು ಧನ ಸಂಗ್ರಹಿಸಿದರೆ ಆ ಹಣಕ್ಕೆ ಬಡ್ಡಿ ಕಟ್ಟುವ ಅಗತ್ಯ ಇರುವುದಿಲ್ಲ. ಲಾಭ ಬಂದಾಗ ಡಿವಿಡೆಂಟ್‌ ಕೊಟ್ಟರೆ ಆಯಿತು. ಲಾಭವಾಗಿ ಆಸಕ್ತಿ ಬೆಳೆದಾಗ ಮಾರುಕಟ್ಟೆಯಲ್ಲಿ ಬೆಲೆ ಏರುತ್ತದೆ. ಆಗ ಮಾತ್ರ ಷೇರುದಾರರಿಗೆ ಲಾಭ. ಒಳ್ಳೆಯ ಕಂಪನಿಗಳು ಷೇರು ಬಿಡುಗಡೆ ಮಾಡುವಾಗ ಪ್ರೀಮಿಯಂ ನಿಗದಿ ಮಾಡಿದರೆ, ಪ್ರೀಮಿಯಂ ಭಾಗದ ಹಣ ಸುಮ್ಮನೆ ಬಂದಂತೆಯೇ ಸರಿ. ಇಷ್ಟೊಂದು ಅನುಕೂಲ ಇರುವಾಗ ಆ ಮಾರ್ಗವನ್ನು ಉತ್ಪಾದಕರು ಬಿಡುತ್ತಾರೆಯೇ? ಎಂಟು ವರ್ಷದ ಹಿಂದೆ ಕಂಪನಿ ವಲಯ ಎತ್ತಿದ ಒಟ್ಟು ಬಂಡವಾಳದಲ್ಲಿ ಶೇ. ೪೦ ಭಾಗ ಹೀಗೆ ಎತ್ತಿದ್ದೇ ಆಗಿತ್ತು. ಎರಡು ವರ್ಷದ ಹಿಂದೆ ಅದು ಶೇ. ೧೩ಕ್ಕೆ ಇಳಿಯಿತು. ಸುಲಭವಾಗಿ ಸಿಗುವ ಬಂಡವಾಳವನ್ನು ಕಂಪನಿಗಳವರು ಬಿಡುವುದಾದರೂ ಏಕೆ? ವಾಸ್ತವವಾಗಿ ಹೊಸ ಯೋಜನೆಗಳೇ ಬರುತ್ತಿಲ್ಲ. ಉದ್ಯಮವನ್ನು ಬಡಾಯಿಸಲೂ ಸಾಧ್ಯವಾಗುತ್ತಿಲ್ಲ. ಹಣ ತಾನೇ ಈಗ ಏಕೆ ಬೇಕು? ನಡೆದುಕೊಂಡು ಹೋಗುವ ವ್ಯವಹಾರ ಅದೇ ಮಟ್ಟದಲ್ಲಿ ಮುಂದುವರೆದರೆ ಸಾಕಾಗಿದೆ.

ಉದ್ಯಮದವರಿಗೆ ಬಂಡವಾಳ ಬೇಕಾದರೆ ಈಗ ಬ್ಯಾಂಕುಗಳಿಂದ ಸಾಲ ಎತ್ತುವ ಅನಿವಾರ್ಯತೆಯೂ ಇಲ್ಲ. ವಿದೇಶಿ ಮೂಲದ ನೇರ ಬಂಡವಾಳ ಸಿಗುತ್ತದೆ. ವಿದೇಶಿ ಬಂಡವಾಳ ಸಿಕ್ಕಿದ ಮೇಲೆ ದೇಶೀಯ ಮೂಲದಿಂದ ಷೇರು ಬಿಡುಗಡೆ ಮಾಡಿ ಹಣ ಎತ್ತುವ ಅಗತ್ಯವೂ ಪೂರ್ತಿ ಕಡಿಮೆಯಾಗಿದೆ. ವಿದೇಶಿ ಮೂಲದ ಬಂಡವಾಳ ಸಂಗ್ರಹಿಸಿದರೆ ಯಂತ್ರೋಪಕರಣಗಳೋ, ಅದರ ಜೊತೆಗೆ ತಂತ್ರಜ್ಞಾನವೋ, ಒದಗಿಬರುತ್ತದೆ. ದೇಶೀಯ ಮೂಲದ ಬಂಡವಾಳದ ಮೇಲೆ ಆಧಾರಪಟ್ಟರೆ ಅವಕ್ಕೆಲ್ಲ ವಿದೇಶಿ ಮೂಲದ ಬಂಡವಾಳವನ್ನೂ, ವಿದೇಶಿ ಮೂಲದ ಕಂಪನಿಗಳ ಜೊತೆ ಸಹಭಾಗಿತ್ವವನ್ನೂ ಹಂಚಿಕೊಂಡರೆ ವಿದೇಶ ಮಾರುಕಟ್ಟೆ ಪ್ರವೇಶಕ್ಕೆ ದಾರಿಯಾಗಬಹುದೆಂಬ ಆಸೆ ಸಹಾ ತಯಾರಕರಿಗೆ ಇರುತ್ತದೆ. ಈ ಕಾರಣದಿಂದ ದೇಶದೊಳಗೇ ಹೂಡಿಕೆದಾರರಿಂದ ಬಂಡವಾಳ ಸಂಗ್ರಹಿಸುವ ಗೋಜಿಗೆ ಹೋಗುತ್ತಿಲ್ಲ.

ಹಿನ್ನಡೆಗೆ ಇನ್ನೊಂದು ಕಾರಣವೂ ಉಂಟು. ಷೇರುಪೇಟೆಗಳಲ್ಲಿ ಕರ್ಮಕಾಂಡಗಳು ಕಾಡುತ್ತವೆ. ಹರ್ಷದ್‌ ಮೆಹ್ತಾ ತಪ್ಪಿದರೆ, ಕೇತನ್‌ ಪಾರೀಖ್‌ ಅವತರಿಸುತ್ತಾರೆ. ಷೇರು ಬಿಡುಗಡೆ ಮಾಡಿ ಹಣ ಸಂಗ್ರಹಿಸಿ ಕಣ್ಮರೆಯಾದ ಕಂಪನಿಗಳಿಗೆ ಲೆಕ್ಕವಿಲ್ಲ. ಸುಸ್ಥಿತಿಯಲ್ಲಿರುವ ಕಂಪನಿಗಳ ನಾನಾ ಕಾರಣಗಳಿಗೆ ಹಣ ಬಳಸಿ, ಏನೂ ಲಾಭ ತೋರಿಸದೆ, ಷೇರು ಬೆಲೆ ನಾಮಮಾತ್ರ ಪ್ರಮಾಣಕ್ಕೆ ಕುಸಿದು ಹಣ ಹಾಕಿದವನಿಗೆ ಪಂಗನಾಮ ಆದರೂ ಯಾರೂ ಎಲ್ಲೂ ಸೊಲ್ಲೆತ್ತುವಂತಿಲ್ಲ. ಬಿಡಿ ಹೂಡಿಕೆದಾರರ ಪಾಲಿಗೆ ವರದಾನ ಎನಿಸಬಹುದಾಗಿದ್ದ ಮ್ಯುಚುವಲ್ ಫಂಡ್‌ಗಳಲ್ಲೂ ಮೋಸ. ಎಲ್ಲೂ ಹಣ ಹಾಕುವುದೇ ಬೇಡ ಎನ್ನುವಷ್ಟು ರೋಸಿ ಹೋಗಿದ್ದಾನೆ ಉಳಿತಾಯದಾರ.

ಉದ್ಯಮರಂಗದಲ್ಲಿ ಚಟುವಟಿಕೆಯೂ ಇಲ್ಲ. ಹಣ ಬೇಕಾಗಿಯೂ ಇಲ್ಲ. ಈ ಪರಿಸ್ಥಿತಿಯಲ್ಲಿ ಕೆಲವು ದೊಡ್ಡ ಬ್ಯಾಂಕುಗಳು ಒಂದಿಷ್ಟು ಅಧಿಕ ಬಡ್ಡಿ ದರ ನಮೂದಿಸಿ, ತೆರಿಗೆ ರಿಯಾಯ್ತಿ ಕಾನೂನಿನ ಅನುಕೂಲ ಸೃಷ್ಟಿಸಿ, ಯೋಜನೆ ರೂಪಿಸುವ ಸಾಲಪತ್ರಗಳಿಗೆ ಬೇಡಿಕೆ ಬಂದುಬಿಟ್ಟಿದೆ. ಹಣ ಭದ್ರವಾಗಿತ್ತು ಒಂದಿಷ್ಟು ಬಡ್ಡಿ ಖಚಿತವಾಗಿ ಬಂದರೆ ಸಾಕಾಗಿಬಿಟ್ಟಿದೆ.

ಹೊಸದಾಗಿ ಷೇರು ಬಿಡುಗಡೆ ಮಾಡಿದ ಕಂಪನಿಗೆ ಓಗೊಟ್ಟು ಹೂಡಿಕೆದಾರರು ಮುಂದೆ ಬಂದಿದ್ದರೆ ಯೋಜನೆಯನ್ನು ಹಿಂದಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಕನಿಷ್ಟ ಮಟ್ಟದ ಹಣ ಸಂಗ್ರಹಿಸಲು ಸಾಧ್ಯವಾಗದಿದ್ದರೆ ಅರ್ಜಿ ಸಲ್ಲಿಕೆ ವೇಳೆ ಕೊಟ್ಟ ಹಣವನ್ನು ಕಂಪನಿಯು ವಾಪಸ್‌ ಮಾಡಿಬಿಡಬೇಕು. ಹಾಗೆ ಆಗುವುದು ಕಂಪನಿ ಪಾಲಿಗೆ ಅವಮಾನ. ಈಚೆಗೆ ಒಂದೆರಡು ಒಳ್ಳೆಯ ಕಂಪೆನಿಗಳ ಪಾಲಿಗೆ ಆ ಗತಿ ಬಂತು.

ವಾಸ್ತವವಾಗಿ ಭಾರತದಲ್ಲಿ ಮಾತ್ರ ಹೀಗೆ ಆಗಿರುವುದು ಎಂದೇನಿಲ್ಲ. ವಿಶ್ವಾದ್ಯಂತ ಹೀಗೆಯೇ ಆಗಿದೆ.

ಇನ್ನು ಉಳಿಯುವುದು ಒಂದೇ ಪ್ರಶ್ನೆ: ಮುಂದೆ ಹೇಗೆ? ಷೇರು ಪೇಟೆ ಚಿಗುರುಉದೇ ಇಲ್ಲವೆ? ಕಾಯಬಹುದೆ? ಈ ಪ್ರಶ್ನೆಗಳಿಗೆ ಖಚಿತ ಉತ್ತರ ಸಿಗುವುದಿಲ್ಲ. ಒಳ್ಳೆಯ ದಿನಗಳಿಗೆಂದು ಕಾಯುತ್ತಾ ಎಷ್ಟು ಕಾಲ ತಾಳ್ಮೆ ವಹಿಸಬೇಕಾಗುತ್ತದೆ ಎಂಬುದು ಮನದಟ್ಟಾಗುವುದೇ ಇಲ್ಲ.

ವಿಶ್ವಾದ್ಯಂತ ಅನಿಶ್ಚಿತತೆಯ ಕಾರ್ಮೋಡ ಕವಿದಿರುವಾಗ ಭರವಸೆ ಯಾವ ಕಡೆಯಿಂದ ಬರಬಲ್ಲದು ಎಂಬ ಅಂದಾಜು ಸಿಗುವುದಿಲ್ಲ. ಒಳ್ಳೆಯ ದಿನಗಳಿಗೆಂದು ಕಾಯುತ್ತಾ ಎಷ್ಟು ಕಾಲ ತಾಳ್ಮೆ ವಹಿಸಬೇಕಾಗುತ್ತದೆ ಎಂಬುದು ಮನದಟ್ಟಾಗುವುದೇ ಇಲ್ಲ.

ವಿಶ್ವಾದ್ಯಂತ ಅನಿಶ್ಚಿತತೆಯ ಕಾರ್ಮೋಡ ಕವಿದಿರುವಾಗ ಭರವಸೆ ಯಾವ ಕಡೆಯಿಂದ ಬರಬಲ್ಲದು ಎಂಬ ಅಂದಾಜು ಸಿಗುವುದಿಲ್ಲ. ಯುದ್ಧ ಮನೆ ಬಾಗಿಲಿಗೆ ಬಂದಿದೆ. ಮಧ್ಯ ಪ್ರಾಚ್ಯ, ದೂರ ಪ್ರಾಚ್ಯಗಳ ಹಲವು ದೇಶಗಳು ದಶಕಗಟ್ಟಲೆ ಯುದ್ಧ ಪರಿಣಾಮಗಳಿಂದ ಜರ್ಜಿತವಾಗಿರುವುದುಂಟು. ಭೌಗೋಳಿಕವಾಗಿ ಕ್ಷೇಮಕರ ತಾಣದಲ್ಲಿ ಇರುವ ಭಾರತಕ್ಕೆ ಯುದ್ಧ ಪರಿಣಾಮ ಇಷ್ಟು ದಿನ ಅಷ್ಟಾಗಿ ತಟ್ಟಿರಲಿಲ್ಲ.

‘ವಿದ್ಯೆಯೂ ಇಲ್ಲ ವರ್ಗವೂ ಇಲ್ಲ’ ಎನ್ನುವಂತೆ ಭಾರತ ತನ್ನ ಪಾಡಿಗೆ ತಾನಿತ್ತು. ಭಯೋತ್ಪಾದನೆ ಎಂಬ ರೂಪದ ಮಗ್ಗುಲಮುಳ್ಳು ಈಚೆಗೆ ಚುಚ್ಚತೊಡಗಿತ್ತು. ಆದರೆ ಉಸಿರು ಕಟ್ಟಿಸುವ ಪರಿಸ್ಥಿತಿ ಬಂದಿದೆ. ಈ ಬಾಧಗೆ ‘ಕಾಲ’ ಎಂಬುದೊಂದೇ ಮದ್ದು.

೧೭.೧೦.೨೦೦೧