‘ತಲೆಯ ಮೇಲೊಂದು ಸೂರು, ಸ್ವಂತದ್ದು’ ಇದು ಎಲ್ಲ ಮಧ್ಯಮ ವರ್ಗದವರ ಹಾಗೂ ಬಡವರ ಸಮಸ್ಯೆ. ಉದ್ಯೋಗದಲ್ಲಿರುವವರ ಪಾಲಿಗಂತೂ ಜೀವಮಾನ ಕಾಲದಲ್ಲಿ ಸ್ವಂತದ್ದೆಂಬ ಒಂದು ಮನೆ ಮಾಡಿಕೊಂಡರೆ ಜೀವನ ಸಾರ್ಥಕವಾದಂತೆ. ಮಾಡಿಕೊಂಡ ಮನೆ ಸ್ಥಿರಾಸ್ತಿ. ಉಳಿಸಿದ ಹಣವನ್ನೆಲ್ಲ ಕೂಡಿದರೆ, ‘ಹೊಟ್ಟೆ ಬಟ್ಟೆ ಕಟ್ಟಿ’ ಎಂದರೆ; ಉಂಡುಟ್ಟು ಸಂತೋಷಪಡುವುದನ್ನು ಸಹಾ ತ್ಯಜಿಸಿ ಒಂದು ಗೂಡು ಕಟ್ಟಿಕೊಂಡರೆ ಈಗಿನ ಕಾಲದ ಸಂದರ್ಭದಲ್ಲಿ ಒಂದು ಫ್ಲ್ಯಾಟನ್ನಾದರೂ ಕೊಂಡರೆ ಅಲ್ಲಿಗೆ ಮುಗಿಯಿತು; ಇನ್ನೇನೂ ಮಾಡಿಕೊಳ್ಳಲಾಗದು.

ಭಾರತೀಯರಲ್ಲಿ ಮದುವೆಯೇ ಮುಂತಾದ ದುಂದುವೆಚ್ಚಕ್ಕೆ ಆಗಿ ಮಿಕ್ಕ ಉಳಿತಾಯದ ಹವನ್ನು ಕೂಡಿ ಹಾಕಿ; ಇಲ್ಲವೇ ಸಾಲ ಮಾಡಿ ಕಂತು ಕಟ್ಟಿ; ಆನಂದಪಡುವುದು ಸ್ವಂತ ಮನೆ ಮಾಡಿಕೊಳ್ಳುವ ಮೂಲಕ ಹಾಗೂ ಚಿನ್ನ ಖರೀದಿಸುವ ಮೂಲಕ. ಮನೆ ಮಾಡಿಕೊಳ್ಳುವುದು ಮತ್ತು ಚಿನ್ನ ಸಂಗ್ರಹಿಸಿ ಇಡುವುದು ಇವೆರಡೂ ಒಂದು ರೀತಿಯಲ್ಲಿ ಮೂಪ್ರವೃತ್ತಿ.

ಇವೆರಡೂ ಬಾಬುಗಳಲ್ಲಿ ತೊಡಗಿಸುವ ವೇಳೆ ಇರುವ ಪ್ರಲೋಭನೆ ಎಂದರೆ, ಕಾಲ ಕಳೆದಂತೆ ಇವುಗಳ ಬೆಲೆ ಏರುತ್ತದೆ; ಯಾವಾಗ ಮಾರಿದರೂ ಅಸಲಿಗೆ ಬಡ್ಡಿ ಸಮೇತ ಪ್ರತಿಫಲ ಕೈಸೇರುತ್ತದೆ ಎಂಬುದೇ ಆಗಿರುತ್ತದೆ. ಇತ್ತೀಚಿನವರೆಗೂ ಇದು ಒಳ್ಳೆಯ ಪ್ರಲೋಭನೆಯೇ ಆಗಿತ್ತು. ಇವುಗಳಲ್ಲಿ ಹಣ ತೊಡಗಿಸುವುದು ವಿವೇಕ ಎಂದೇ ಎನಿಸಿತ್ತು. ಈಗ ಹೊಸದಾಗಿ ಹುಟ್ಟಿಕೊಂಡ ಹೂಡಿಕೆ ಬಾಬೆಂದರೆ ಷೇರು ಮತ್ತಿತರ ಬಂಡವಾಳ ಪತ್ರಗಳು. ಆದರೆ ಇದರಲ್ಲಿ ಜೂಜಾಟದ ಅಂಶ ಸೇರಿಕೊಂಡಿರುತ್ತದೆ. ಬಂದರೆ ಭಾರೀ ಮೊತ್ತ ಬಂದೀತು; ಇಲ್ಲವಾದರೆ ಹಾಕಿ ಹಣ ಕೊಚ್ಚಿಕೊಂಡು ಹೋಯಿತು ಎಂಬಂತಾಗುತ್ತದೆ. ಆದ್ದರಿಂದ ‘ಕ್ಷೇಮ, ಸುರಕ್ಷಿತ’ ಎನ್ನುವ ಹಾಗಿಲ್ಲ.

ಸಮಾಧಾನದಿಂದ ಜನ ಹಣ ತೊಡಗಿಸುವುದೆಂದರೆ ಚಿನ್ನದ ಮೇಲೆ. ವಜ್ರಗಳ ಮೋಹ ಈಚೆಗೆ ಸ್ವಲ್ಪ ಅಧಿಕವಾಗಿದ್ದರೂ ಚಿನ್ನಕ್ಕೆ ಇರುವ ಪ್ರಾಶಸ್ತ್ಯ ಕಡಿಮೆಯಾಗಿಲ್ಲ. ಆದರೂ ಆಭರಣಗಳ ಮೇಲಿನ ವ್ಯಾಮೋಹ ಇಳಿಮುಖವಾಗಿರುವುದು ನಿಜ. ಮುಖ್ಯ ಕಾರಣವೆಂದರೆ ಅವನ್ನು ಕಾಪಾಡುವುದು ಈಗಿನ ದಿನಗಳಲ್ಲಿ ಕಷ್ಟವಾಗುತ್ತಿದೆ.

ಚಿನ್ನದ ಬೆಲೆ ಕಳೆದ ಐದು ವರ್ಷಗಳಲ್ಲಿ ಸ್ಥಿರವಾಗಿದೆ. ಚಿನ್ನಾಭರಣವು ಧರಿಸುವಾಗ ಖುಷಿಕೊಡುತ್ತದೆ. ಕಷ್ಟಕಾಲದಲ್ಲಿ ಸುಲಭವಾಗಿ ಮಾರಬಹುದು. ಎಲ್ಲ ಸರಿಯೇ. ವರ್ಷಗಟ್ಟಲೆ ಸಮಯ ಕಳೆದರೂ ಅದರ ಕಿಮ್ಮತ್ತು ಹೆಚ್ಚದು ಎಂದರೆ ಹೇಗೆ? ಈ ಬಗೆಯ ವಿಚಾರದಿಂದ ಚಿನ್ನದ ಕಾಂತಿ ಕಡಿಮೆಯಾಗಿರುವುದುಂಟು. ಆದರೆ ಸ್ಥಿರಾಸ್ತಿ ಮೇಲೆ, ಅಂದರೆ ಮನೆ, ಅಂಗಡಿ, ಸೈಟು, ಹೊಲಗದ್ದೆ ಇವುಗಳ ಮೇಲೆ ಹಣ ತೊಡಗಿಸುವುದು ಉಳಿತಾಯದಾರರ ಪಾಲಿಗೆ ಆಕರ್ಷಕವಾಗಿಯೇ ಉಳಿದಿದೆ.

ಹಣವನ್ನು ಬಡ್ಡಿ ದುಡಿಯಲು ಹಚ್ಚಿದರೆ ಬರುವ ಲಾಭವೆಷ್ಟು; ಹಾಗೂ ಇವುಗಳ ಮೌಲ್ಯವೃದ್ಧಿಯಿಂದ ದೀರ್ಘಾವಧಿಯಲ್ಲಿ ಆಗುವ ಅನುಕೂಲವೆಷ್ಟು ಎಂದು ಯಾವುದೇ ಬಾಬಿನಲ್ಲಿ ಹಣ ತೊಡಗಿಸುವಾಗ ಕರಾರುವಕ್ಕಾಗಿ ಲೆಕ್ಕ ಹಾಕುವ ಮಂದಿ ಸದಾಕಾಲ ಸಿಗುತ್ತಾರೆ. ಷೇರುಗಳಲ್ಲಿ ಹಾಗೂ ಇತರ ಬಂಡವಾಳ ಪತ್ರಗಳಲ್ಲಿ ಹಣ ತೊಡಗಿಸಿ ‘ಲಾಟರಿ ಹೊಡೆ’ಯುವುದಕ್ಕಾಗಿ ಕಾಯುತ್ತಾ ಕೂರುವವರ ಮಾತು ಬೇರೆ. ಅಂಥವರಲ್ಲೂ ಬ್ಯಾಂಕ್‌ ಬಡ್ಡಿ ದರಗಳಿಗಿಂತ ಸ್ವಲ್ಪ ಹೆಚ್ಚು ದುಡಿದರೆ ಸಾಕೆಂದು ಭಾವಿಸುವವರು ಕ್ಷೇಮವಾಗಿ ವ್ಯವಹರಿಸುತ್ತಾರೆ.

ದುರಾಶೆಪಟ್ಟು ಎಲ್ಲೆಲ್ಲೋ ತೊಡಗಿಸುವವರು ಅಪಾಯಕ್ಕೆ ಗುರಿಯಾಗುವುದೇ ಹೆಚ್ಚು. ಚಿನ್ನದ ಮೇಲೆ ತೊಡಗಿಸಿದಾಗ ಮೌಲ್ಯವೃದ್ಧಿಯಾಗುತ್ತಿದ್ದಷ್ಟು ಕಾಲ ಚೆನ್ನಾಗಿತ್ತು. ಕಳೆದ ಐದು ವರ್ಷಗಳಿಂದ ಹಾಗಿಲ್ಲ. ವರ್ಷ ವರ್ಷಕ್ಕೆ ಅದರ ಬೆಲೆ ಏರುತ್ತಿಲ್ಲ. ಇನ್ನು ಸ್ಥಿರಾಸ್ತಿ ಮೇಲಿನ ಹೂಡಿಕೆ. ಎಂದೂ ಬ್ಯಾಂಕ್‌ ಬಡ್ಡಿ ದರಕ್ಕೆ ಸಮನಾದ ಪ್ರತಿಫಲವನ್ನು ಸ್ಥಿರಾಸ್ತಿ ತರುವುದೇ ಇಲ್ಲ. ವಾಣಿಜ್ಯೋದ್ದೇಶ ಕಟ್ಟಡಗಳಲ್ಲಿ ಮಾತ್ರ ಪ್ರತಿಫಲ ಸ್ವಲ್ಪ ಪರವಾಗಿಲ್ಲ. ಅದನ್ನು ಬಿಟ್ಟರೆ ಸ್ಥಿರಾಸ್ತಿಗಳು ಅವನ್ನು ಲಾಭಕರವಾಗಿ ರೂಢಿಸಿದ್ದರೆ ವಾರ್ಷಿಕ ಶೇಕಡಾ ೬-೮-೧೦ ಪ್ರಮಾಣದಲ್ಲಿ ದುಡಿದರೆ ಅದೇ ಹೆಚ್ಚು.

ವಾಸ್ತವವಾಗಿ ನಗದು ಅಥವಾ ಬಡ್ಡಿಗೆ ಕೊಟ್ಟ ಹಣ ಸಾಕಷ್ಟಿದ್ದು ಅದನ್ನು ನಿಭಾಯಿಸುವುದು ಕಷ್ಟ ಎನಿಸಿದಾಗ ಸ್ಥಿರಾಸ್ತಿ ಮೇಲೆ ತೊಡಗಿಸಲು ಜನ ಮುಂದಾಗುತ್ತಾರೆ. ಪ್ರತಿಫಲ ಕಡಿಮೆ ಆದರೆ ಒಟ್ಟುಗೂಡಿಸಿದ ಹಣ ಚೆಲ್ಲಾಪಿಲ್ಲಿ ಆಗುತ್ತದೆ ಎನ್ನುವ ಆತಂಕದಿಂದ ಸ್ಥಿರಾಸ್ತಿಗೆ ಹಾಕುತ್ತಾರೆ. ಮಕ್ಕಳು ಹಣ ಸಂಬಂಧ ಶಿಸ್ತಿನಲ್ಲಿ ಇಲ್ಲ ಎನ್ನುವಾಗ ಸಂಪತ್ತನ್ನು ಕಟ್ಟಡಗಳಲ್ಲಿ ತೊಡಗಿಸಿ ಇಟ್ಟುಬಿಡಲು ಶ್ರೀಮಂತರು ನಿರ್ಧರಿಸುತ್ತಾರೆ.

ಹಿಂದಿನ ದಶಕದ ಮಧ್ಯಭಾಗದ ತನಕ ಸ್ಥಿರಾಸ್ತಿ ಬೆಲೆಗಳು ಭಾರೀ ಏರಿದ ಮಟ್ಟದಲ್ಲಿ ವಿಜೃಂಭಿಸಿದ್ದವು. ಒಂದು ದಶಕ ಕಾಲ ಸ್ಥಿರಾಸ್ತಿಗಳಿಗೆ ಬೇಡಿಕೆಯೋ ಬೇಡಿಕೆ. ಐದು ವರ್ಷದಿಂದ ಈಚೆಗೆ ಅಷ್ಟೊಂದು ಬೇಡಿಕೆ ಇಲ್ಲ. ವಾಸ್ತವವಾಗಿ ಬೆಲೆ ಹೇಳುವಾಗ, ಮಾರುವವರು ಕಡಿಮೆ ಮೊತ್ತ ನನೂದಿಸುವುದೇ ಇಲ್ಲ. ಆದರೆ ಈ ಬೆಲೆಗಳಿಗೆ ಖರೀದಿಸುವವರಿಲ್ಲ. ಸ್ಥಿರಾಸ್ತಿ ಬೆಲೆಗಳು ಮತ್ತೆ ಯಾವಾಗ ಏರುತ್ತದೋ ಎಂಬುದನ್ನು ಎಲ್ಲರೂ, ಅಂದರೆ ಮುಖ್ಯವಾಗಿ ಮಾರಬಯಸುವವರು, ನಿರೀಕ್ಷಿಸುತ್ತಿದ್ದಾರೆ. ಸ್ಥಿರಾಸ್ತಿ ಬೆಲೆಗಳು ಏರಿದರೆ ಬಾಡಿಗೆ, ಮುಂಗಡ ಠೇವಣಿ, ಭೋಗ್ಯದ ಹಣ ಹೆಚ್ಚಾಗಿ ಸಿಗುತ್ತದೆ ಎಂದು ಕಟ್ಟಡ ಮಾಲೀಕರು ಎದುರು ನೋಡುತ್ತಾರೆ.

ಸ್ಥಿರಾಸ್ತಿ ಬೆಲೆ ಮತ್ತು ಅದರ ಪ್ರತಿಫಲ ಮಾತ್ರ ಕಡಿಮೆಯಾಗುವುದಕ್ಕೆ ಇರುವ ಕಾರಣವೆಂದರೆ, ಕುಸಿದ ಖರೀದಿ ಸಾಮರ್ಥ್ಯ. ಆರ್ಥಿಕ ಹಿಂಜರಿತದ ಪರಿಣಾಮವಿದು. ಪರಿಸ್ಥಿತಿ ಸುಧಾರಿಸಲು ಕಾಯಬೇಕು ಮಾತ್ರ.

ಸ್ಥಿರಾಸ್ತಿ ಬೆಲೆ ಮತ್ತು ಅದರು ತರುವ ಪ್ರತಿಫಲ ಎಷ್ಟು ಲಾಭಕಾರಿ ಎಂದು ಲೆಕ್ಕ ಹಾಕುವಾಗ ಸಾಮಾನ್ಯವಾಗಿ ಎಲ್ಲರೂ ಹಣದುಬ್ಬರ ದರ ಏನಿದೆ ಎಂದು ಪರಿಶೀಲಿಸುತ್ತಾರೆ. ಹಣದುಬ್ಬರ ಹೆಚ್ಚಿಗೆ ಇದ್ದಾಗ ಸ್ಥಿರಾಸ್ತಿ ವ್ಯವಹಾರ ತೇಜಿಯಾಗಿ ನಡೆಯುತ್ತದೆ. ಸದ್ಯ ಹಣದುಬ್ಬರವು ಭಾರೀ ನಿಯಂತ್ರಣದಲ್ಲಿದೆ.

ನಗರಗಳಲ್ಲಿ ಸ್ಥಿರಾಸ್ತಿ ವ್ಯವಹಾರ ತೇಜಿಯಾಗಿದೆ ಎಂಬ ವರದಿಗಳು ಆಗಾಗ ಬರುತ್ತಿರುತ್ತವೆ. ವಾಸ್ತವ ಏನು ಎನ್ನುವುದಕ್ಕಿಂತ ವ್ಯವಹಾರ ಕುದುರಲಿ ಎಂದು ವದಂತಿ ಹಬ್ಬಿಸುವವರ ಕೈವಾಡವೇ ಇಲ್ಲೆಲ್ಲ ಅಧಿಕವಾಗಿರುತ್ತದೆ.

ಕಟ್ಟಡ ನಿರ್ಮಾಣಕ್ಕೆ ಪ್ರೋತ್ಸಾಹ ಕೊಡುವ ನೀತಿಯನ್ನು ಸರ್ಕಾರ ಜಾರಿಗೆ ಕೊಡಬೇಕು ಎಂದು ಸ್ಥಿರಾಸ್ತಿ ವಹಿವಾಟುದಾರರು ಅಪೇಕ್ಷಿಸುತ್ತಾರೆ. ಅದು ಕೈಗೂಡಿಲ್ಲ. ಮನೆಯೇ ಆಗಲಿ, ವಾಣಿಜ್ಯ ಉದ್ದೇಶದ ಕಟ್ಟಡವೇ ಆಗಲಿ; ಸಾಲ ಬೇಕೆಂದರೆ ಹಣಕಾಸು ಸಂಸ್ಥೆಗಳವರು ಕರೆದು ಕರೆದು ಕೊಡುತ್ತಿದ್ದಾರೆ. ಆದರೆ ನಿರ್ಮಾಣ ವೆಚ್ಚ ವಿಪರೀತ ದುಬಾರಿ ಆಗಿದೆ. ಪ್ರತಿಫಲ ಕಡಿಮೆ ಆಗಿಯೇ ಉಳಿದಿದೆ. ಆದ್ದರಿಂದ ಅನಾಕರ್ಷಣೆ. ೦೧.೦೮.೨೦೦೧