ಷೇರುಪೇಟೆಗಳಲ್ಲಿ ಜುಲೈ ೨ ರಿಂದ ಬದ್ಲಾ ವಹಿವಾಟು ಪದ್ಧತಿ ಮಾಯವಾಗಲಿದೆ. ಮಾರ್ಜಿನ್‌ ಹಣ ಮತ್ತು ಬದ್ಲಾ ಪಾವತಿ ಮಾಡುತ್ತಾ ಲೆಕ್ಕ ಚುಕ್ತಾವನ್ನು ವಾರದಿಂದ ವಾರಕ್ಕೆ ಮುಂದೆ ಹಾಕುತ್ತಾ ಹೋಗುವ ಕ್ರಮ ನಿಂತು ಹೋಗುತ್ತದೆ. ಖರೀದಿಸಿದ ಷೇರುಗಳ ಬಾಬ್ತು ನಗದು ಸಲ್ಲಿಸಿ ವಾರದ ಅಂತ್ಯದಲ್ಲೇ ಲೆಕ್ಕ ಚುಕ್ತಾ ಮಡಬೇಕು.

ವಿವಿಧ ಸೂಚ್ಯಂಕ ಲೆಕ್ಕಾಚಾರಕ್ಕೆ ಒಳಪಟ್ಟು ನಿರ್ದಿಷ್ಟ ಷೇರುಗಳನ್ನು ಮುಂದೆ ಇರುವ ವಿವಿಧ ದಿನಾಂಕಗಳಿಗೆ ನಿರ್ದಿಷ್ಟವಾಗಿ ನಿಗದಿಪಡಿಸಿದಂತೆ ವಾಯಿದಾ ಖರೀದಿ ನಡೆಸಲು ಅವಕಾಶವಿರುತ್ತದೆ. ಕೆಲವು ನಿರ್ದಿಷ್ಟ ಬಿಡಿ ಷೇರುಗಳಿಗಾಗಿ ವಾಯಿದಾ ವ್ಯಾಪಾರ ಸೌಲಭ್ಯವಿರುತ್ತದೆ. ಅದಕ್ಕ ಹೊರತಾಗಿ ಮಿಕ್ಕ ಎಲ್ಲ ಷೇರುಗಳ ತತ್ಕಾಲ ವ್ಯವಹಾರ ವಾರಾಂತ್ಯದಲ್ಲಿ ಮುಗಿದು ಹೋಗಬೇಕು. ಇದು ಸೆಬಿ ತರುತ್ತಿರುವ ಹೊಸ ನಿಯಮ.

ವಾರಾಂತ್ಯದಲ್ಲೇ ಲೆಕ್ಕ ಚುಕ್ತಾ ಮಾಡಬೇಕೆನ್ನುವುದು ಮುಂದುವರೆದ ರಾಷ್ಟ್ರಗಳ ಷೇರುಪೇಟೆಗಳಲ್ಲಿ ಚಾಲ್ತಿಯಲ್ಲಿರುವ ನಿಯಮವೇ ಆಗಿದೆ. ಈಚಿನ ಬಜೆಟ್‌ ನಂತರ ಷೇರು ಬೆಲೆಗಳು ಕುಸಿದಿದ್ದು, ಕೇತನ್‌ ಪಾರೀಖ್‌ ಹಗರಣ ಬೆಳಕಿದೆ ಬಂದಿದ್ದು ಇವು ಬದ್ಲಾ ಪದ್ಧತಿ ಅಂತ್ಯಕ್ಕೆ ಕುಮ್ಮಕ್ಕು ನೀಡಿದವು. ಈ ಹಿಂದೆ ಕೇತನ್ ಪಾರೀಖ್ ಹಗರಣದಂತೆಯೇ ಹರ್ಷದ್‌ ಮೆಹ್ತಾ ವಿದ್ಯಮಾನ ನಡೆದಾಗಲೂ ಸರ್ಕಾರವು ಏನು ಮಾಡಬೇಕೆಂದು ಯೋಚಿಸಿತ್ತು. ಅದರ ಪರಿಣಾಮವಾಗಿ ಬ್ರೋಕರ್‌ಗಳ ಮೇಲುಗೈ ಇಲ್ಲವಾದಂಥ ನ್ಯಾಷನಲ್‌ ಸ್ಟಾಕ್‌ ಎಕ್ಸ್‌ಚೇಂಜ್ (ಎನ್‌ಎಸ್‌ಇ) ಅಸ್ತಿತ್ವಕ್ಕೆ ಬಂದಿತು.

ಬದ್ಲಾ ಪದ್ಧತಿ ಅಂತ್ಯಗೊಂಡು ನಗದು ವಹಿವಾಟಿನ ಪದ್ಧತಿ ಜಾರಿಗೆ ಬಂದನಂತರ ಊಹಾಪೋಹ ವ್ಯಾಪಾರದ ವಹಿವಾಟುದಾರರ ಕೈ ಕಟ್ಟಿದಂತೆ ಆಗುತ್ತದೆ. ಈ ವಹಿವಾಟುದಾರರು ಎಷ್ಟೋ ವೇಳೆ ತಮಗೆ ಅನುಕೂಲವಾಗುವಂತೆ ಷೇರುಗಳ ಬೆಲೆ ಏರಿಸಲು ನಾನಾ ತಂತ್ರಗಳನ್ನು ಅನುಸರಿಸುತ್ತಿದ್ದರು. ಲೆಕ್ಕ ಚುಕ್ತಾ ಮುಂದಕ್ಕೆ ಹಾಕುವ ಅವಕಾಶವನ್ನು ದುರುಪಯೋಗ ಮಾಡಿಕೊಂಡು ಅಲ್ಪಬದ್ಲಾ ಮತ್ತು ಮಾರ್ಜಿನ್‌ ಪಾವತಿ ಮಾಡುತ್ತಾ ತಮ್ಮ ತಮ್ಮಲ್ಲಿಯೇ ವಿಪರೀತ ಸಂಖ್ಯೆಯಲ್ಲಿ ಷೇರುಗಳನ್ನು ಕೊಂಡು ಮಾರಿದಂತೆ ಮಾಡುತ್ತಿದ್ದರು. ಹೀಗೆ ವಾಸ್ತವವಾಗಿ ಮಾರುಕಟ್ಟೆಯಲ್ಲಿ ನಿರ್ದಿಷ್ಟ ಷೇರುಗಳು ಕೆಲವೇ ಸಂಖ್ಯೆಯಲ್ಲಿದ್ದರೂ ಮತ್ತೆ ಮತ್ತೆ ಕೈ ಬದಲಾಗಿ ಎಷ್ಟೊ ದೊಡ್ಡ ಸಂಖ್ಯೆಯಲ್ಲಿ ಮಾರಾಟವಾದಂತೆ ದಾಖಲೆ ಸೃಷ್ಟಿಯಾಗುತ್ತದೆ. ನಿರ್ದಿಷ್ಟ ಷೇರಿಗೆ ಭಾರೀ ಬೇಡಿಕೆ ಇರುವಂತೆ ಆಗ ಭಾವಿಸುವ ಸಣ್ಣ ಹೂಡಿಕೆದಾರರು ಖರೀದಿಗೆ ಮೊದಲು ಮಾಡುತ್ತಾರೆ. ಏರು ಬೆಲೆ ಕಾಣಿಸಿಕೊಳ್ಳುತ್ತದೆ. ಹೆಚ್ಚು ಹೆಚ್ಚು ಹಣ ಹೂಡಿಕೆದಾರರಿಂದ ವಹಿವಾಟುದಾರರ ಕೈ ಸೇರುತ್ತದೆ. ಬೆಲೆ ಏರುತ್ತಲೇ ಹೋದಂತೆ ಹೂಡಿಕೆದಾರರಿಗೆ ಕೂಡಾ ಲಾಭವಾಗುತ್ತಾ ಹೋಗುತ್ತದೆ. ದಿಢೀರನೆ ವಹಿವಾಟುದಾರರು, ತಾವು ಸಾಕಷ್ಟು ಲಾಭ ಮಾಡಿಕೊಂಡಿರುವುದು ಮನವರಿಕೆ ಮಾಡಿಕೊಂಡಾದ ಮೇಲೆ, ಷೇರು ಬೆಲೆಗಳು ಇಳಿಯುವಂತೆ ಮಾಡುತ್ತಾರೆ. ಹೂಡಿಕೆದಾರರು ನಷ್ಟಕ್ಕೆ ಗುರಿ ಆಗುತ್ತಾರೆ. ಹರ್ಷದ ಮೆಹ್ತಾ ಮತ್ತು ಕೇತನ್‌ ಪಾರೀಖ್‌ ಎರಡೂ ಪ್ರಕರಣಗಳಲ್ಲಿ ಹೂಡಿಕೆದಾರರು ಹಣ ಕಳೆದುಕೊಂಡಿದ್ದು ಹೀಗೆಯೇ.

ಇನ್ನು ಮುಂದೆ ವಹಿವಾಟುದಾರರು ಆಯಾ ವಾರವೇ ನಗದು ಸಲ್ಲಿಸಿ ಖರೀದಿಸಿದ ಷೇರುಪತ್ರಗಳನ್ನು ಸುಪರ್ದಿಗೆ ತೆಗೆದುಕೊಳ್ಳಬೇಕೆಂದು ಆಗುತ್ತದೆ. ಅದರಿಂದ ಅವರು ನಡೆಸುವ ವಹಿವಾಟಿಗೆ ಮಿತಿ ಎರ್ಪಡುತ್ತದೆ. ಊಹಾಪೋಹ ವ್ಯಾಪಾರಕ್ಕೆ ತಡೆಯುಂಟಾಗಿ ನಿಜವಾದ ಅರ್ಥದಲ್ಲಿ ಹಣ ಹೂಡಲು ಬಯಸುವ ಹೂಡಿಕೆದಾರರಿಗೆ ಅವಕಾಶ ಹೆಚ್ಚುತ್ತದೆ. ಇದೊಂದು ಆರೋಗ್ಯಕರ ಬೆಳವಣಿಗೆ.

ವಹಿವಾಟುದಾರರು ಈತನಕ ಆಯ್ದ ಕೆಲವು ಕಂಪೆನಿಗಳ ಷೇರುಗಳನ್ನು ಗುಡ್ಡೆ ಹಾಕಿಕೊಂಡು ತೇಜಿ (ಏರು ಬೆಲೆ-ಭಾರೀ ಬೇಡಿಕೆ) ಬಗೆಯ ಇಲ್ಲವೇ ಮಂದಿ (ಇಳಿಯುತ್ತಿರುವ ಬೆಲೆ-ಕೊಳ್ಳುವವರು ಕಡಿಮೆ) ಬಗೆಯ ವಹಿವಾಟು ನಡೆಸುತ್ತಿದ್ದರು. ಆ ಬಗೆಯಲ್ಲಿ ಇವರ ಕೈಗೆ ಸಿಕ್ಕಿದ ಷೇರುಗಳ ಮಾಲಿಕತ್ವದ ಕಂಪೆನಿಗಳ ಗಳಿಕೆ, ಸ್ಥಿತಿಗತಿ ಇವು ಗೌಣವಾಗಿರುತ್ತಿದ್ದವು. ವಹಿವಾಟುದಾರರ ಕೈವಾಡದ ಪರಿಣಾಮವಾಗಿ ಆ ಷೇರುಗಳಿಗೆ ಪ್ರಾಮುಖ್ಯ ಹಾಗೂ ಮಿತಿಮೀರಿದ ಬೆಲೆ ಸಂದಾಯವಾಗುತ್ತಿತ್ತು. ಇನ್ನು ಮುಂದೆ ಅವುಗಳ ಪ್ರಾಮುಖ್ಯ ಕಡಿಮೆಯಾಗಿ ನಿಜವಾದ ಮೌಲ್ಯದ ಅನ್ವಯ ಬೆಲೆ ಬಾಳುವ ಷೇರುಗಳ ವಹಿವಾಟು ಹೆಚ್ಚುತ್ತದೆ. ಹೂಡಿಕೆದಾರರು ದೀರ್ಘ ಅವಧಿಯಲ್ಲಿ ಕೈವಾಡಗಳಿಗೆ ಹೊರತಾದ ರೀತಿಯಲ್ಲಿ ಲಾಭ ಪಡೆಯುವಂತಾಗುತ್ತದೆ.

ವಹಿವಾಟುದಾರರು ಸುಮಾರು ೧೦೦ ವರ್ಷ ಕಾಲದಿಂದ ಊಹಾಪೋಹ ವ್ಯಾಪಾರ ಮಾಡಿ ಷೇರುಪೇಟೆ ಮೇಲೆ ಹಿಡಿತ ಸಾಧಿಸಿದ್ದರು. ಜುಲೈ ೨ರ ನಂತರ ಆದಷ್ಟೂ ದಾಂಧಲೆ ನಡೆಸಲು ಸಹಜವಾಗಿ ಸಿದ್ಧರಾಗುತ್ತಾರೆ. ಯಾವುದೇ ಸುಧಾರಣೆ ವೇಳೆ ಇಂಥ ಪ್ರತಿಕ್ರಿಯೆಯನ್ನು ನಿರೀಕ್ಷಿಸಬಹುದು. ಆದರೆ ಸೆಬಿ ಮತ್ತಿತರ ನಿಯಂತ್ರಕ ಸಂಸ್ಥೆಗಳು ಬಿಗಿಯಾಗಿದ್ದರೆ ಹಾಗೂ ಅವಕ್ಕೆ ಸರ್ಕಾರ ಒತ್ತಾಸೆ ನೀಡಿದರೆ ಸುಧಾರಿತ ವ್ಯವಸ್ಥೆ ಕೆಲವು ವಾರಗಳಲ್ಲಿ ಸ್ಥಿರಗೊಳ್ಳುತ್ತದೆ. ಹೊಸ ವ್ಯವಸ್ಥೆಯಲ್ಲಿ ಇದೇ ವಹಿವಾಟುದಾರರು ವಾರದ ಐದು ದಿನಗಳ ವಹಿವಾಟಿನಲ್ಲೇ ದೈನಿಕ ಬದ್ಲಾ ಪದ್ಧತಿ ಜಾರಿ ಮಾಡಿಕೊಳ್ಳಲೂ ಸಾಕು!

ವಾಸ್ತವವಾಗಿ ಸೆಬಿಯು ಒಂದು ರೀತಿಯಲ್ಲಿ ಬಲಪ್ರಯೋಗ ಮಾಡಿ ಹೊಸ ಕಾರ್ಯಪದ್ಧತಿ ಜಾರಿಗೆ ತರುತ್ತಿರುವ ಬಗೆಗೆ ಆಕ್ಷೇಪಿಸುವವರು ಗಂಭೀರ ಪರಿಣಾಮಗಳು ಆಗುತ್ತವೆ ಎನ್ನುತ್ತಾರೆ. ಬ್ರೋಕರ್‌ ಪ್ರಧಾನ ವ್ಯವಸ್ಥೆಯಲ್ಲಿ ವಿಜೃಂಭಿಸಿದ ವಹಿವಾಟುದಾರರು ದುರ್ಬಲಗೊಂಡಂತೆ ವಿದೇಶಿ ಬಂಡವಾಳ ತಂದಿರುವ ಹಣಕಾಸು ಸಂಸ್ಥೆಗಳು (ಎಫ್‌ಐಐಗಳ) ಪ್ರಾಬಲ್ಯ ಹೆಚ್ಚಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಹಾಗೆ ಆದರೆ ಸಣ್ಣ ದೇಶೀಯ ಹೂಡಿಕೆದಾರರಿಗೆ ಪುನಃ ಅವಕಾಶ ಖೋತಾ. ಅವರ ವಿರುದ್ಧ ಸೆಬಿ ಎಚ್ಚರ ವಹಿಸಬೇಕು. ಎಫ್‌ಐಐಗಳಿಗೆ ಅವಕಾಶ ಅಧಿಕಗೊಂಡು ವಿದೇಶ ಬಂಡವಾಳ ಅಧಿಕ ಪ್ರಮಾಣದಲ್ಲಿ ಹರಿದುಬಂದರೆ ಆರ್ಥಿಕತೆಗೆ ಲಾಭ.

ಷೇರುಪೇಟೆ ವಿದ್ಯಮಾನ ಈತನಕ ದೇಶದ ಆರ್ಥಿಕತೆಗೆ ನಿರೀಕ್ಷಿಸಿದಷ್ಟು ಸಹಾಯವನ್ನೇನೂ ಮಾಡಿಲ್ಲ ಎಂಬುದು ನಿಜ. ೩೦.೦೫.೨೦೦೧.