ಯಾವುದೇ ವ್ಯಾಪಾರ ಆದರೂ ತುಂಬಾ ಗಡುಸಾದ ನಿಯಮಗಳಿಗೆ ಒಳಪಟ್ಟಿರುತ್ತದೆ. ಆ ಬಗೆಯ ಬಹುತೇಕ ನಿಯಮಗಳು ಅಲಿಖಿತ. ಬರಿದೆ ರೂಢಿಜನ್ಯ. ಇವನ್ನು ಪಾಲಿಸುವವರು ನಷ್ಟದಿಂದ ಪಾರಾಗುತ್ತಾರೆ. ವ್ಯಾಪಾರದಲ್ಲಿ ಊಹಾಪೋಹಕ್ಕೆ, ನಿರಾಧಾರ ನಿರ್ದಾರಗಳಿಗೆ ಅವಕಾಶವಿಲ್ಲ. ಆದರೆ ಊಹಾಪೋಹವನ್ನೇ ಆಧರಿಸಿದ  ಸಟ್ಟಾ ಸ್ವರೂಪದ ವ್ಯಾಪಾರವೊಂದಿದೆ. ಅದುವೇ ಷೇರು ವ್ಯಾಪಾರ. ಈ ಸಟ್ಟಾ ವ್ಯಾಪಾರವನ್ನು ನಿರ್ದಿಷ್ಟವಾದ ಕಟುವಾದ ನಿಷ್ಠುರ ಸ್ವರೂಪದ ನಿರ್ಬಂಧಗಳಿಗೆ ಒಳಪಡಿಸುವ ಯತ್ನವನ್ನು ಸೆಕ್ಯುರಟೀಸ್‌ ಬೋಡ್‌ ಆಫ್‌ ಇಂಡಿಯಾ ‘ಸೆಬಿ’ ನಡೆಸಿದೆ. ಜುಲೈ ಎರಡರಿಂದ ಷೇರು ವ್ಯಾಪಾರದಲ್ಲಿ ಜಾರಿಯಲ್ಲಿರುವ ‘ಬದ್ಲಾ’ ಪದ್ಧತಿಗೆ ಮಂಗಳ ಹಾಡಲಾಗುವುದು.

ಷೇರು ವಹಿವಾಟು ಮಾಡುವವರು ನಗದು ಕೈಲಿಟ್ಟುಕೊಂಡು ವ್ಯಾಪಾರ ಮಾಡುತ್ತಾರೆಯೇ? ಇಲ್ಲ. ವಾರದಲ್ಲಿ ಐದು ದಿನ ಷೇರುಪೇಟೆ ವ್ಯಾಪಾರ ನಡೆಯುತ್ತದೆ. ಯಾವುದೇ ವಹಿವಾಟುದಾರ ಷೇರುಗಳನ್ನು ಖರೀದಿಸುತ್ತಾನೆ, ಮಾರುತ್ತಾನೆ. ಷೇರು ಬ್ರೋಕರುಗಳು ವಾಸ್ತವ ಮಧ್ಯವರ್ತಿಗಳು, ವ್ಯವಹಾರಸ್ಥರು ಮತ್ತು ಬ್ರೋಕರುಗಳು ಷೇರುಪೇಟೆ ನಿಯಮಾವಳಿಗಳ ಪ್ರಕಾರ, ಅದರ ದಾಖಲೆಗಳೊಂದಿಗೆ ವ್ಯವಹಾರ ಮಾಡುತ್ತಾರೆ. ‘ಸೆಟ್ಲ್‌ಮೇಂಟ್‌’ ದಿನ ಕೊಂಡಿದ್ದು ಮಾರಿದ್ದರ ಪ್ರಕಾರ ವ್ಯವಹಾರ ಚಕ್ತಾ ಮಾಡಿಕೊಳ್ಳುತ್ತಾರೆ. ಯಾವುದೇ ವ್ಯವಹಾರಸ್ಥ ಹೀಗೆ ಲೆಕ್ಕ ಚುಕ್ತಾ ದಿನ ತನ್ನೆಲ್ಲ ಷೇರು ಖರೀದಿ ಬಾತು ನಗದು ಸಲ್ಲಿಸಬೇಕಷ್ಟೆ. ಷೇರುಪೇಟೆಯಲ್ಲಿ ಆ ಖರೀದಿ ಬಾಬಿನ ವ್ಯವಹಾರವನ್ನು ಮುಂದಕ್ಕೆ ಹಾಕಲು ಅವಕಾಶವಿದೆ. ಅಂದರೆ ತನ್ನ ಚುಕ್ತಾವನ್ನು ಮುಂದಿನ ಸೆಟ್ಲ್‌ಮೆಂಟ್‌ನಲ್ಲಿ ಮಾಡುವುದಾಗಿ ಆತ ಹೇಳುತ್ತಾನೆ. ನಗದು ಕೊಡದೇ ಇರುವುದಕ್ಕಾಗಿ ‘ಮಾರ್ಜಿನ್‌’ ಎಂಬ ಹೆಸರಿನಲ್ಲಿ ಸ್ವಲ್ಪ ಹಣ ಕೊಟ್ಟರಾಯಿತು. ಷೇರುಪೇಟೆಯಲ್ಲಿ ಶೇ. ೧೫ ಅಥವಾ ಅದರ ಆಸುಪಾಸಿನ ಪ್ರಮಾಣದಲ್ಲಿ ಮಾರ್ಜಿನ್‌ ನಿಗದಿಯಾಗಿರುತ್ತದೆ. ಇದು ಅನಧಿಕೃತವಾಗಿ ನಿಗದಿಯಾಗಿದ್ದು, ಪೂರ್ತಿಯಾಗಿ ನಗದು ಕೊಟ್ಟು ಖರೀದಿಯನ್ನು ಕಾಯಂ ಮಾಡದೆ ಮುಂದಿನ ಅವಧಿಗೆ ವ್ಯವಹಾರವನ್ನು ದೂಡಿದ್ದಕ್ಕೆ ಖರೀದಿಯ ಷೇರು ಮೌಲ್ಯದ, ಮಾರುಕಟ್ಟೆ ಬೆಲೆ ಆಧಾರದ ಒಟ್ಟು ಮೊಬಲಗಿನ ಶೇಕಡಾವಾರು ಶುಲ್ಕ ಇದು. ಈ ಮಾರ್ಜಿನ್‌ ಹಣ ತೆತ್ತರೆ ಮುಗಿಯಿತು. ಚುಕ್ತಾವನ್ನು ಮುಂದೂಡಬಹುದು. ಇದು ಈ ತನಕದ ವ್ಯವಸ್ಥೆ.

ಮಾರ್ಜಿನ್‌ ಹಣದ ಜೊತೆಗೆ ‘ಬದ್ಲಾ’ ಎಂಬುದನ್ನು ತೆರಬೇಕಾಗುತ್ತದೆ. ಖರೀದಿ ಮಾಡಿದವರು ನಗದು ಕೊಡದೆ ಚುಕ್ತಾ ಮಾಡದೇ ಇದ್ದುದರಿಂದ ಬಡ್ಡಿ ಕೊಡಬೇಕಾಗುತ್ತದೆ. ಇದೇ ಬದ್ಲಾ. ಇದರ ಲೆಕ್ಕಾಚಾರ ಸುಲಭ ಹಾಗೂ ಕುತೂಹಲಕಾರಿ. ಯಾವುದೇ ಒಂದು ವ್ಯವಹಾರದಲ್ಲಿ ವಾರ್ಷಿಕ ಬಡ್ಡಿದರ ಬದ್ಲಾಕ್ಕಾಗಿ ಎಷ್ಟೆಂಬುದನ್ನು ವಹಿವಾಟುದಾರರೇ, ಅಂದರೆ ಕೊಳ್ಳುವವರು ಮತ್ತು ಮಾರುವವರು ಮುಖ್ಯವಾಗಿ ಬ್ರೋಕರುಗಳು ನಿಗದಿ ಮಾಡಿಕೊಳ್ಳುತ್ತಾರೆ. ಉದಾಹರಣೆಗೆ ವಾರ್ಷಿಕ ಬಡ್ಡಿದರ ಶೇ. ೨೬ ಎಂದಿಟ್ಟುಕೊಳ್ಳೋಣ. ವರ್ಷದಲ್ಲಿ ೫೨ ವಾರದ ವಹಿವಾಟು ಇರುತ್ತದೆ. ಪ್ರತಿವಾರ ಐದು ದಿನ ವಹಿವಾಟು ನಡೆಯುತ್ತದೆ. ಪ್ರತಿ ಎರಡು ದಿನದ ವಹಿವಾಟಿಗೆ (ಒಂದು ವಾರಕ್ಕೆ) ಒಂದು ಸೆಟ್ಲ್‌ಮೆಂಟ್ ಶೇ. ೨೬ ವಾರ್ಷಿಕ ಬಡ್ಡಿ ಆದರೆ ಒಂದು ವಾರ ಅವಧಿಗೆ ಶೇ. ೦.೫ ಬೀಳುತ್ತದೆ. ಯಾವುದೇ ಒಂದು ಕಂಪೆನಿಯ ಷೇರಿನ ಮಾರುಕಟ್ಟೆ ಬೆಲೆ ೧೦೦೦ ರೂಪಾಯಿ ಇರುತ್ತದೆ ಎಂದಾದರೆ, ನೂರಕ್ಕೆ ೦.೫ ಲೆಕ್ಕಾಚಾರದಲ್ಲಿ ೧೦೦೦ ಮೊತ್ತಕ್ಕೆ ಅಂದರೆ ಒಂದು ಷೇರಿಗೆ ಬಡ್ಡಿ ಮೊತ್ತ ೫ ರೂಪಾಯಿ ಬೀಳುತ್ತದೆ.

ಹೀಗೆ ಮಾರ್ಜಿನ್‌ ಹಣ ಶೇ. ೧೫ ಮತ್ತು ಬದ್ಲಾ ಶೇ. ೨೬ ಇದ್ದರೆ, ೧೦೦೦ ರೂಪಾಯಿ ಬೆಲೆಯ ಷೇರು ಖರೀದಿ ಹಣ ಚುಕ್ತಾ ಮಾಡದೆ ಮುಂದಕ್ಕೆ ಹಾಕಿಕೊಂಡರೆ ಒಟ್ಟು ರೂ. ೧೫೫ ಕೊಟ್ಟರೆ ಮುಗಿಯಿತು. ಖರೀದಿ ಅವರ ಹೆಸರಿನಲ್ಲೇ ಉಳಿದಿರುತ್ತದೆ. ಎಲ್ಲ ೧೦೦೦ ರೂಪಾಯಿ ಬೆಲೆಯ ಷೇರು ಖರೀದಿ ಹಣ ಚುಕ್ತಾ ಮಾಡದೆ ಮುಂದಕ್ಕೆ ಹಾಕಿಕೊಂಡರೆ ಒಟ್ಟು ರೂ. ೧೫೫ ಕೊಟ್ಟರೆ ಮುಗಿಯಿತು. ಖರೀದಿ ಅವರ ಹೆಸರಿನಲ್ಲೇ ಉಳಿದಿರುತ್ತದೆ. ಎಲ್ಲ ೧೦೦೦ ರೂಪಾಯಿ ತೆರಬೇಕಿರುವುದಿಲ್ಲ. ಪ್ರತಿ ಬಾರಿ ರೂ. ೧೫೫ ಕೊಡುತ್ತ ಹೋದರೆ ವ್ಯವಹಾರ ಮುಂದೂಡುತ್ತಾ, ಹೋಗಬಹುದು. ಶೇ. ೨೬ ಎಂಬುದು ಲೆಕ್ಕಾಚಾರಕ್ಕೆ ನಿದರ್ಶನವಾಗಿ ತೆಗೆದುಕೊಂಡ ವಾರ್ಷಿಕ ಬಡ್ಡಿ ದರ. ಒಳ್ಳೆಯ ಕಂಪೆನಿಗಳ ಷೇರುಗಳ ಬೆಲೆ ವಿಪರೀತ ಏರುವ ನಿರೀಕ್ಷೆ ಇದ್ದರೆ ವಾರ್ಷಿಕ ಬಡ್ಡಿದರ ಶೇ. ೩೬ ಶೇ. ೪೪ ಹೀಗೆ ಇರುವುದು ಉಂಟು. ಆಗ ಬದ್ಲಾ ಏರುತ್ತಾ ಹೋಗುತ್ತದೆ. ಮಾರ್ಜಿನ್ ಶುಲ್ಕ ಸಹಾ ಶೇ. ೧೫ ರಿಂದ ೨೫ರ ತನಕ ಹೋಗಿರುವುದು ಉಂಟು.

ಒಟ್ಟಿನಲ್ಲಿ ಒಂದಿಷ್ಟು ಹಣ ಕೈಲಿಟ್ಟುಕೊಂಡು ಒಂದಿಷ್ಟು ದೊಡ್ಡ ಮೊತ್ತದ ವಹಿವಾಟು ನಡೆಸಬಹುದು. ಆ ವಹಿವಾಟಿಗೆಂದು ಹಣ ತೊಡಗಿಸುವವರೂ ಇದ್ದಾರೆ. ಇದೀಗ ಖಾಸಗಿ ಬ್ಯಾಂಕುಗಳಿಗೂ ಈ ಉದ್ದೇಶಕ್ಕೆಂದು ಸಾಲ ನೀಡುವ ಅವಕಾಶ ನೀಡಲಾಗಿದೆ.

ಬ್ರೋಕರುಗಳು ಮತ್ತು ವಹಿವಾಟುದಾರರು ಒಟ್ಟಾಗಿ ಬೆಲೆಗಳನ್ನು ಏರಿಸುವ ಇಳಿಸುವ ಆಟ ಆಡುತ್ತಾರೆ. ಕ್ಷುಲ್ಲಕ ಕಾರಣಗಳಿಗೆಲ್ಲ ಬೆಲೆ ಏರಿಸುತ್ತಾರೆ, ಇಳಿಸುತ್ತಾರೆ. ತಮ್ಮ ಕೈಗೆ ಬಂದ ಷೇರುಗಳನ್ನು ಕೊಂಡು ಮಾರಿ ದಂಧೆ ನಡೆಸುತ್ತಾರೆ. ಇದು ನಡೆದಷ್ಟೂ ಬ್ರೋಕರುಗಳಿಗೆ ದಳ್ಳಾಳಿ ಲಾಭ. ವಹಿವಾಟುದಾರರಿಗೆ ಮೌಲ್ಯ ಹೆಚ್ಚಿದ ಇಳಿದ ಪ್ರಕಾರ ಲಾಭ ಇಲ್ಲವೇ ನಷ್ಟ. ಇವರ ಸಟ್ಟಾ ವ್ಯವಹಾರದಲ್ಲಿ ಷೇರುಗಳಲ್ಲಿ ಹಣ ಹಾಕಿ ವರ್ಷಾನುಗಟ್ಟಲೆ ಕಾಯುವಂಥ ನಿಜವಾದ ಹೂಡಿಕೆದಾರರಿಗೆ ಬಹುಪಾಲು ಪ್ರಸಂಗಗಳಲ್ಲಿ ನಷ್ಟ. ಎಲ್ಲೋ ಒಂದಿಷ್ಟು ಒಳ್ಳೆಯ ಷೇರುಗಳನ್ನು ಇಟ್ಟುಕೊಂಡಿರುವವರಿಗೆ ಮಾತ್ರ ಲಾಭ. ಅದೊಂದು ಅದೃಷ್ಟದಾಟ.

ಕಂಪೆನಿಗಳಲ್ಲಿ ಗಳಿಕೆ ಹೆಚ್ಚಾಗುತ್ತದೆ. ಇಲ್ಲವೇ ನಷ್ಟವಾಗುತ್ತದೆ. ಕಂಪನಿಗಳೇ ಇಡಿಯಾಗಿ ಮಾರಾಟಗೊಂಡು ಬೇರೆ ಕಂಪೆನಿಗಳ ಜೊತೆ ವಿಲೀನವಾಗುತ್ತದೆ. ಇದ್ದಕ್ಕಿದ್ದಂತೆ ಯಾವುದೋ ಕೆಲ ಕಂಪೆನಿಗಳ ಆಡಳಿತ ಮಂಡಳಿ ಬದಲಾಗುತ್ತದೆ. ದೊಡ್ಡ ಕಂಪೆನಿಗಳು ಕೆಲವು ಕಂಪೆನಿಗಳನ್ನು ವಶಕ್ಕೆ ತೆಗೆದುಕೊಳ್ಳುತ್ತವೆ. ದೊಡ್ಡ ದೊಡ್ಡ ಕಂಪೆನಿಗಳೇ ನಷ್ಟದಿಂದ ಪಾರಾಗಲು ಇಲ್ಲವೆ ಅಧಿಕ ಲಾಭ ಗಳಿಸಲು ಪರಸ್ಪರ ವಿಲೀನಗೊಳ್ಳುತ್ತವೆ. ಆಗೆಲ್ಲ ಷೇರುಗಳ ಬೆಲೆ ಷೇರುಪೇಟೆಯಲ್ಲಿ ಏರುವಂತೆ ಮಾಡುತ್ತಾರೆ. ಅಲ್ಲಿನ ವಹಿವಾಟುದಾರರು ಅದರ ಲಾಭ ಪಡೆಯುತ್ತಾರೆ. ನಷ್ಟ ಆಗುವ ಸಾಧ್ಯತೆ ಇದ್ದರೆ ಷೇರುಗಳನ್ನು ಮಾರಿ ಬಿಡುತ್ತಾರೆ. ಒಳ ವರ್ತಮಾನ ಇಲ್ಲದ ಹೂಡಿಕೆದಾರರು ಅವನ್ನು ಖರೀದಿಸಿ ನಷ್ಟಗೊಳ್ಳುತ್ತಾರೆ.

‘ಸೆಬಿ’ಯು ವಿಪರೀತ ಬೆಲೆ ಏರಿಸುವುದಕ್ಕೂ ಕಡಿವಾಣ ಹಾಕಿದೆ. ಬೆಲೆ ಇಳಿಸುವುದಕ್ಕೂ ನಿರ್ಬಂಧ ಹಾಕಿದೆ. ಆದರೂ ಷೇರುಪೇಟೆಗಳು ತಹಬಂದಿಗೆ ಬಂದಿಲ್ಲ. ಇದೀಗ ಜುಲೈ ೨ ರಿಂದ ಬದ್ಲಾ, ಮಾರ್ಜಿನ್‌ ಶುಲ್ಕ ಮುಂತಾದವನ್ನೇ ನಿಷೇಧಿಸಿದೆ. ಅಂದರೆ ೫ ದಿನದ ವಹಿವಾಟು ಅವಧಿ ಮುಗಿದಂತೆ ನಗದು ಹಣ ತೆತ್ತು ವಹಿವಾಟು ಮಾಡಬೇಕು.

ಈಗ ಇರುವ ವ್ಯವಸ್ಥೆ ಪ್ರಕಾರ ಷೇರುಗಳ ಬೆಲೆ ಏರಿದಾಗ ವಹಿವಾಟುದಾರರಿಗೆ ಲಾಭ: ಇಳಿದಾಗ ಹೂಡಿಕೆದಾರನಿಗೆ ನಷ್ಟ ಎಂಬುದೇ ಸಾಮಾನ್ಯ ಪರಿಣಾಮ. ದೀರ್ಘಕಾಲ ಒಳ್ಳೆಯ ಷೇರುಗಳಲ್ಲಿ ಹಣ ಹೂಡಿದವರಿಗೆ ಅನುಕೂಲವುಂಟು. ಅಂಥವರ ಸಂಖ್ಯೆ ಬಹಳ ಕಡಿಮೆ. ೨೩.೦೫.೨೦೦೧.