ಈಚೆಗೆ ಯಾತ್ರಾ ಪ್ರವಾಸ ಏರ್ಪಡಿಸುವ ದಂಧೆಯಲ್ಲಿರುವ ಟ್ರಾವೆಲ್ಸ್‌ವೊಂದರ ಮುಖ್ಯಸ್ಥನನ್ನು ದೂರೊಂದರ ಆಧಾರದ ಮೇಲೆ ಪೊಲೀಸರು ಬಂಧಿಸಿದರು. ಸಾಮಾನ್ಯವಾಗಿ ಯಾತ್ರಾರ್ಥಿಗಳು ಪುಣ್ಯಾರ್ಜನೆಗಾಗಿ ಇಂಥವರಿಗೆ ಹಣ ತೆರುತ್ತಾರೆ. ಮೋಸಗೊಂಡಾಗ ಪೊಲೀಸರವರೆಗೆ ದೂರು ಒಯ್ಯುವುದಿಲ್ಲ. ಆದ್ದರಿಂದಲೇ ಇದು ಅಪರೂಪದ ಪ್ರಕರಣ. ಮೋಸ ಮಾಡಿ ಹಣ ಕಸಿಯುವವರಿಗೆ ನಾನಾ ಮಾರ್ಗ. ಉದ್ಯಮ ನಡೆಸಿ, ಹಣ ಕಸಿಯುವುದಕ್ಕಾಗಿಯೇ ವ್ಯಾಪಾರ ಉದ್ಯಮ ನಡೆಸಿ ಮೋಸ ಮಾಡುವವರ ಸಂಖ್ಯೆ ಕಡಿಮೆ ಏನೂ ಅಲ್ಲ. ತಿಮಿಂಗಲ, ದೊಡ್ಡ ಮೀನು, ಚಿಕ್ಕ ಮೀನು, ಹಾವು, ಏಡಿ, ಮುಂಗುಸಿ ಎಲ್ಲ ನಮೂನೆಯಲ್ಲಿ ಜನ ಕಾಣಿಸಿಕೊಳ್ಳುತ್ತಾರೆ. ನಂಬಿ ಕೈಗೆ ಹಣ ಹಾಕುವವರನ್ನು ಮೋಸಗೊಳಿಸುತ್ತಾರೆ.

ಟ್ರಾವೆಲ್ಸ್‌ನವರು ಯಾತ್ರೆ ವಿವರಗಳನ್ನು ಪ್ರಕಟಿಸುತ್ತಾರೆ. ಜಾಹೀರಾತು ಕೊಡುತ್ತಾರೆ. ಕಚೇರಿ ಇಟ್ಟುಕೊಳ್ಳುತ್ತಾರೆ. ಬೋರ್ಡು, ಫೋನು, ರಸೀತಿ ಪುಸ್ತಕ ಎಲ್ಲಾ ಇರುತ್ತದೆ. ಹಣ ಪಡೆದ ಮೇಲೆ ಪ್ರವಾಸಕ್ಕೆ ಒಯ್ಯುವುದೇ ಇಲ್ಲ. ಒಯ್ದರೂ ಮಾರ್ಗಮಧ್ಯೆ ಯಾತ್ರಾರ್ಥಿಗಳನ್ನು, ಅಂದರೆ ತಮ್ಮ ಗ್ರಾಹಕರನ್ನು, ಅಮಾನವೀಯವಾಗಿ ನಡೆಸಿಕೊಳ್ಳುತ್ತಾರೆ. ನಾನಾ ಕಾರಣಗಳನ್ನು ಬಡ್ಡಿ ಆ ಬಡಪಾಯಿಗಳ ಬಳಿ ಇರುವ ಪುಡಿಗಾಸನ್ನೆಲ್ಲ ಕಸಿಯುತ್ತಾರೆ. ದೂರದ ಊರಿನಲ್ಲಿ ನಡು ನೀರಿನಲ್ಲಿ ಕೈಬಿಟ್ಟು ಮಾಯವಾಗುತ್ತಾರೆ ಕೂಡಾ. ಗ್ರಾಹಕನಿಗೆ ಮೋಸ ಮಾಡುವುದನ್ನೇ ವ್ಯಾಪಾರ ಮಾಡಿಕೊಳ್ಳುವ ಕುತಂತ್ರಿಗಳು ಇಡೀ ಪ್ರವಾಸೋದ್ಯಮಕ್ಕೆ ಕೆಟ್ಟ ಹೆಸರು ತರುತ್ತಾರೆ.

ವಾಣಿಜ್ಯೋದ್ಯಮ ದೃಷ್ಟಿಯಿಂದಲೇ ಯಾತ್ರೆಗಳನ್ನು ಸಂಘಟಿಸುವ ಎಲ್ಲರೂ ಹೀಗೆ ಮಾಡುವುದಿಲ್ಲ. ಗಂಭೀರವಾಗಿ ವ್ಯವಹಾರ ನಡೆಸುವವರು ತಮ್ಮ ಸಂಸ್ಥೆ ಹೆಸರಿಗೆ ಧಕ್ಕೆ ಬರಬಾರದೆಂದು ಬಯಸುತ್ತಾರೆ. ಒಮ್ಮೆ ಕೆಟ್ಟ ಹೆಸರು ಬರುತ್ತದೆಂದರೆ, ಮತ್ತೆ ಯಾತ್ರಾರ್ಥಿಗಳು ತಮ್ಮ ಬಳಿಗೆ ನುಸುಳುವುದಿಲ್ಲ ಎಂದು ಹೆದರುತ್ತಾರೆ. ಎಷ್ಟೋ ಮಂದಿ ಯಾವ ಬೋರ್ಡು, ಕಚೇರಿಗಳು ಇಲ್ಲದಿದ್ದರೂ ಯಾವುದೋ ದೇವಾಲಯ, ಮಠ ಇತ್ಯಾದಿ ಜನರ ಒತ್ತಾಸೆ ಪಡೆದು ಬಹಳ ಚೆನ್ನಾಗಿ ಯಾತ್ರೆ ನಡೆಸಿಕೊಡುತ್ತಾರೆ. ಆದರೆ ಭಂಡರು ಮಾತ್ರ ಮೋಸ ಮಾಡಲೇ ಹುಟ್ಟಿಕೊಳ್ಳುತ್ತಾರೆ. ಹಣ ಕಸಿಯಲೇ ಹೋಗುತ್ತಾರೆ. ಬೋರ್ಡು ಬದಲಾಯಿಸುತ್ತಾರೆ. ಕಾಮಧೇನು ಕಲ್ಪವೃಕ್ಷ. ತಿರುಪತಿ ವೆಂಕಟೇಶ್ವರ, ಧರ್ಮಸ್ಥಳ ಮಂಜುನಾಥ, ಮಂತ್ರಾಲಯ ರಾಘವೇಂದ್ರ, ಕಟೀಲು ದುರ್ಗಾ ಪರಮೇಶ್ವರಿ, ಕಾಶಿ ವಿಶ್ವನಾಥ, ಬದರಿ ನಾರಾಯಣ ಎಂಬ ಇತ್ಯಾದಿ ಪವಿತ್ರ ಹೆಸರುಗಳನ್ನೇ ಇಟ್ಟುಕೊಂಡು ಅಪವಿತ್ರವೆನ್ನುವಂಥ ದಂಧೆ ನಡೆಸುತ್ತಾರೆ.

ಧಾರವಾಡದ ೭೫ ವರ್ಷ ವಯಸ್ಸಿನ ಹಿರಿಯ ನಾಗರಿಕರೊಬ್ಬರು ತಾವು ಮೋಸಗೊಂಡ ಬಗೆಯನ್ನು ಒಮ್ಮೆ ಹೀಗೆ ತೋಡಿಕೊಂಡರು; ‘ಆನೆಗುಡ್ಡ ಗಣಪತಿ ಹೆಸರಿನಲ್ಲಿ ಪ್ರಮಾಣ ಮಾಡಿ ೫-೬ ಸಾವಿರ ರೂಪಾಯಿ ಸೆಳೆದ. ಬೆಂಗಳೂರಿನಿಂದ ಕರೆದೊಯ್ದು ಕ್ಷೇಮವಾಗಿ ವಾಪಸ್ಸು ಕರೆತರದೆ ನಡುವೆ ದಿಲ್ಲಿಯಲ್ಲಿ ಇಳಿಸಿ ಕೈಕೊಟ್ಟ. ಕಷ್ಟಾರ್ಜಿತ ಹಣದಲ್ಲಿ ಸ್ವಲ್ಪ ಉಳಿಸಿ ಇಳಿ ವಯಸ್ಸಿನಲ್ಲಿ ತೀರ್ಥಯಾತ್ರೆ, ಪುಣ್ಯಸ್ನಾನ, ದೇವತಾ ಸಂರ್ದಶನದಿಂದ ಮನಶ್ಯಾಂತಿ ಪಡೆಯಬೇಕೆಂದು ಯಾತ್ರೆ ಕರೆದುಕೊಂಡು ಹೋದ ಪುಣ್ಯಾತ್ಮ (ಈಗ ಪಾಪಾತ್ಮ) ಕೊಟ್ಟಿದ್ದು ಯಾತನೆ ಮಾತ್ರ.

ಹಿರಿಯ ನಾಗರಿಕ ತಮಗೆ ಮೋಸ ಮಾಡಿದ ಟ್ರಾವೆಲ್ಸ್‌ ವಿರುದ್ಧ ಯಾರು ಯಾರಿಗೆ ಲಿಖಿತ ದೂರು ಕೊಟ್ಟಿದೆಯೆಂಬುದನ್ನು ಪಟ್ಟಿ ಮಾಡಿ ಹೇಳುತ್ತಾರೆ. ‘ಯಾರೂ ನೆರವಿಗೆ ಬರಲಿಲ್ಲ’ ಎಂದು ಅಲವತ್ತುಕೊಳ್ಳುತ್ತಾರೆ. ‘ಜನತಾ ದರ್ಶನದಲ್ಲಿ ಮುಖ್ಯಮಂತ್ರಿಗೆ ಅರ್ಜಿ ಸಲ್ಲಿಸಿದರೆ ಕೇವಲ ಫಾರ್ವರ್ಡ್‌ ಮಾಡುತ್ತಾರೆ. ಅರಣ್ಯರೋದನ ಮಾತ್ರ. ತೀರ್ಥಯಾತ್ರೆ ಪುಣ್ಯ ಕಟ್ಟಿಕೊಳ್ಳುವ ಕೋಡಂಗಿ, ಮೋಸ ಮಾಡಿದವರನ್ನು ಟಿವಿಯಲ್ಲಿ ತೋರಿಸಿ ಕಂಬಿ ಎಣಿಸುವಂತೆ ಮಾಡಿದರೆ ಇಳಿವಯಸ್ಸಿನ ಮೋಸ ಹೋದ ಯಾತ್ರಿಕರಿಗೆ ನೆಮ್ಮದಿ ಸಿಗುತ್ತದೆ.’

ಮೋಸ ಮಾಡಿದವರನ್ನು ೪೨೦ ಎಂದೇ ಕರೆಯುವ ಇವರು ಪೊಲಸ್‌ ಕಂಪ್ಲೇಂಟ್‌ ಕೊಟ್ಟರೇನು ಇಲ್ಲ. ಪೊಲೀಸರಿಗೆ ಕಂಪ್ಲೇಂಟ್‌ ಕೊಟ್ಟರೆ ಏನಾಗುತ್ತದೆ ಎಂದು ಊಹಿಸಲೂ ಆಗದು. ಬಹುಶಃ ಅದರಿಂದ ಹೊಸ ಬಗೆಯ ಉಪದ್ರವಗಳು ಹುಟ್ಟಿಕೊಳ್ಳುತ್ತವೆ ಎಂಬ ಭಯ!

ವಾಸ್ತವವಾಗಿ ಪೂರ್ವಾಪರ ಯೋಚಿಸದೇ, ಆಚೀಚಿನಿಂದ ಯಾವುದೇ ವಿವರ ಸಂಗ್ರಹಿಸದೆ, ಸ್ವತಃ ಮೋಸದ ಬಲೆಗೆ ತಾವಾಗಿ ಬೀಳುವ ಗ್ರಾಹಕರನ್ನೇ ದೂಷಿಸಬೇಕಾಗುತ್ತದೆ. ಯಾರನ್ನಾದರೂ ಸುಲಭವಾಗಿ ನಂಬಬೇಕೇಕೆ? ಬಹುಶಃ ಪುಣ್ಯಾರ್ಜನೆಯ ತವಕ ಹಾಗೂ ಆ ದಿಸೆಯಲ್ಲಿ ನೆರವಾಗುತ್ತೇವೆನ್ನುವ ಜನರನ್ನು ನಂಬಿ ಬಿಡುವ ಇಳಿ ವಯಸ್ಸು ಇದಕ್ಕೆ ಕಾರಣ ಇರಬಹುದು.

ಆದರೂ, ಯಾತ್ರೆ ಹೆಸರಿನಲ್ಲಿ ಮೋಸ ಮಾಡುವವರ ವಿರುದ್ಧ ಕೈಯೆತ್ತುವ ಅಧಿಕಾರಸ್ಥರೇ ಯಾರೂ ಇಲ್ಲ ಎನ್ನುವುದು ಮಾತ್ರ ವಿಪರ್ಯಾಸ.

ಎಲ್ಲರೂ ಅಲ್ಲವಾದರೂ ಸಾಕಷ್ಟು ಟ್ರಾವೆಲ್‌ ಏಜೆಂಟರು ಅಥವಾ ಪ್ರವಾಸ ಸಂಘಟಕರು ಎಸಗುವ ಮೋಸದ ಸಂಬಂಧ ಅಧಿಕೃತವಾಗಿ ದೂರುವವರು ಕಡಿಮೆ ಎನ್ನುವುದು ಒಂದು ತೊಡಕು. ದೂರಿನ ಜೊತೆಗೆ ಪುರಾವೆ ಸಾಕಷ್ಟು ಇರುವುದಿಲ್ಲ. ಯಾತ್ರಾರ್ಥಿಗಳಿಗೆ ತೊಂದರೆ ಆಗುವುದು ಹಲವು ಸಂದರ್ಭಗಳಲ್ಲಿ ದೂರದ ಊರಿನಲ್ಲೇ. ಇದು ಸಹಾ ಒಂದು ತೊಡಕು.

ಯಾತ್ರಾರ್ಥಿಗಳು ಧರ್ಮಭೀರುಗಳೂ ವೃದ್ಧರೂ ಆದುದರಿಂದ ‘ಕ್ಷಮಿಸಿಬಿಡು’ವುದು ಅಥವಾ ದೇವರ ತೀರ್ಮಾನಕ್ಕೆ ಬಿಡುವುದು ಅನೇಕ ಸಂದರ್ಭಗಳಲ್ಲಿ ಸಾಮಾನ್ಯ. ಮೋಸ ಮಾಡುವವರಿಗೆ ಇರುವ ರಕ್ಷಣೆಯೇ ಅದು.

ಯಾತ್ರಾ ಪ್ರವಾಸ ಏರ್ಪಡಿಸುವುದೆಂದರೆ ಸುಲಭವಲ್ಲ. ಒಳ್ಳೆಯ ಮ್ಯಾನೇಜ್‌ಮೆಂಟ್‌ ಕೌಶಲ ಇರಬೇಕು. ಇದು ಲಭ್ಯವಿದ್ದರೆ ಲಾಭಕರವಾಗಿಯೇ ಉದ್ಯಮ ನಡೆಸಬಹುದು. ಖ್ಯಾತಿವೆತ್ತ ಸಂಸ್ಥೆಗಳು ಹಲವು ಇಂದಿಗೂ ಚೆನ್ನಾಗಿ ನಡೆಸುತ್ತಿವೆ.

ರೈಲ್ವೆಯವರ ಒತ್ತಾಸೆ ಚೆನ್ನಾಗಿದ್ದಾಗ ೯೦ ದಿನಗಳಷ್ಟು ದೀರ್ಘಕಾಲದ ರೈಲ್ವೆ ಯಾತ್ರಾ ಪ್ರವಾಸಗಳು ಏರ್ಪಾಡಾಗುತ್ತಿದ್ದವು. ಬಸ್ಸುಗಳಲ್ಲಿ ಸಣ್ಣಪುಟ್ಟ ವ್ಯವಹಾರದ ಜನಯಾತ್ರೆ ಏರ್ಪಡಿಸುವುದು ಹೆಚ್ಚಾದಾಗ ಮೋಸವೂ ಹೆಚ್ಚಾಗಿದೆ. ಅಸೌಕರ್ಯದ ಅಂಶವೆಂದರೆ, ಪ್ರವಾಸೋದ್ಯಮ ಎನ್ನುವಾಗು ಪುಣ್ಯಕ್ಷೇತ್ರ ಯಾತ್ರೆಗೆ ಆದ್ಯತೆ ಇಲ್ಲ. ಅದೇ ದೊಡ್ಡ ಕೊರತೆ. ೦೯.೦೫.೨೦೦೧.