ಸ್ವಾತಂತ್ರ್ಯ ಬಂದ ಮೇಲೆ ಸಹಕಾರ ‘ಚಳವಳಿ’ ಆರಂಭವಾದಾಗ ಪರಸ್ಪರ ಸಹಾಯೋದ್ದೇಶ ಸಹಕಾರ ಸಂಘ ಎಂದು ಹೆಸರಿಡುತ್ತಿದ್ದುದು ಉಂಟು. ಇವತ್ತು ಸಹಕಾರ ಬ್ಯಾಂಕುಗಳು ವಾಣಿಜ್ಯ (ಷೆಡ್ಯೂಲ್ಡ್‌) ಬ್ಯಾಂಕ್‌ಗಳಾಗಿ ಸಹ ಕೆಲಸ ಮಾಡುತ್ತಿದೆ. ನಿರ್ದಿಷ್ಟ ಭೂಪ್ರದೇಶ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಪಟ್ಟಣ ಸಹಕಾರ ಬ್ಯಾಂಕುಗಳು ಈ ದಿನಗಳಲ್ಲಿ ಕೈತುಂಬ ವ್ಯವಹಾರ ನಡೆಸುತ್ತಿವೆ.

ಇಲ್ಲಿನ ‘ಪರಸ್ಪರ ಸಹಾಯೋದ್ದೇಶ’ ಮಾದರಿಯಲ್ಲಿ ಕೆಲಸ ಮಾಡಲು ಆರಂಭಿಸಿ ಈಚಿನ ಕೆಲವು ವರ್ಷಗಳಲ್ಲಷ್ಟೆ ಒಂದಿಷ್ಟು ಹೆಚ್ಚಿಗೆ ಬೆಳಕು ಕಂಡಿರುವ ಬಂಡವಾಳಪೇಟೆ ವ್ಯವಸ್ಥೆ ಮ್ಯೂಚುವಲ್‌ ಫಂಡ್‌ಗಳದ್ದು. ನೆಹರೂ ಸಂಪುಟದಲ್ಲಿ ಅರ್ಥಸಚಿವರಾಗಿದ್ದ ಟಿ. ಟಿ. ಕೃಷ್ಣಮಾಚಾರಿ ಅವರು ಈ ವ್ಯವಸ್ಥೆಯನ್ನು ಹುಟ್ಟುಹಾಕಿದರು. ಆದರೆ ಮ್ಯೂಚುವಲ್‌ ಫಂಡ್‌ಗಳು ಪ್ರಚಲಿತಗೊಳ್ಳಲು ಮೂರು ಮೂರುವರೆ ದಶಕವೇ ಹಿಡಿಯಿತು. ಯೂನಿಟ್‌ ಟ್ರಸ್ಟ್‌ ಆಫ್‌ ಇಂಡಿಯಾ (ಯುಟಿಐ) ವಾಸ್ತವವಾಗಿ ೧೯೬೪ರಲ್ಲಿ ಅಸ್ತಿತ್ವಕ್ಕೆ ತಂದ ಯೂನಿಟ್‌ ಸ್ಕೀಂ ‘ಯುಎಸ್‌-೬೪’ ಅತ್ಯಂತ ಹಳೆಯ ಮ್ಯೂಚುವಲ್‌ ಫಂಡ್‌ ಯೋಜನೆಗಳಲ್ಲಿ ಒಂದು. ಇದೀಗ ಅದರ ವ್ಯವಹಾರ ಭಾರೀ ಸುದ್ದಿಗೆ ಬಿದ್ದಿದೆ.

ಭಾರತೀಯರಲ್ಲಿ ಉಳಿತಾಯ ಪ್ರವೃತ್ತಿ ದೃಢ. ಅವರು ಎಲ್ಲಿಯೇ ಇರಲಿ, ಹಣ ಉಳಿಸುತ್ತಾರೆ. ಅನ್ಯ ದೇಶಗಳಲ್ಲಿ ಇರುವಾಗಲೂ ಅಲ್ಲಿನವರಂತೆ ದುಡಿದ್ದನ್ನೆಲ್ಲ ಖರ್ಚು ಮಾಡುವುದಿಲ್ಲ. ಹೀಗೆ ಭಾರತೀಯರು ಹಣ ಉಳಿಸುವವರಾಗಿದ್ದರೂ, ಉಳಿಸಿದ ಹಣವನ್ನು ಒಳ್ಳೆಯ ಹುಟ್ಟುವಳಿ ಬಾಬಿಗೆ ತೊಡಗಿಸುವಲ್ಲಿ ಸಾಮಾನ್ಯ ಹಿಂದೆ ಬೀಳುತ್ತಾರೆ. ಒಳ್ಳೆಯ ಉಳಿತಾಯದಾರರಾಗುತ್ತಾರೆ. ಒಳ್ಳೆಯ ಹೂಡಿಕೆದಾರರಾಗುವುದಿಲ್ಲ. ಉಳಿತಾಯ ಹಣವನ್ನು ಬಡ್ಡಿಗೆ ಹಾಕುವುದು, ಇಲ್ಲವೇ ಸ್ಥಿರಾಸ್ತಿ ಮೇಲೆ ಹಾಕುವುದು, ತಪ್ಪಿದರೆ ಆಪತ್ಕಾಲಕ್ಕೆ ಆಗುವುದೆಂಬ ದೂರಾಲೋಚನೆಯಿಂದ ಚಿನ್ನ ಬೆಳ್ಳಿ ಖರೀದಿಸುವುದು, ಕೃಷಿ ಪ್ರಧಾನ ದೇಶದಲ್ಲಿ ಹೀಗೆ ಆಗುವುದು ಸಹಜ. ಉದ್ಯಮಕ್ಕೆ ಬೇಕಾಗುವ ಹಣ ಒದಗಿಸುವ ಬಂಡವಾಳ ಪೇಟೆಯಲ್ಲಿ ತೊಡಗಿಸುವ ಪ್ರವೃತ್ತಿ ಕಡಿಮೆ. ಸಣ್ಣ ಸಣ್ಣ ಪ್ರಮಾಣದಲ್ಲಿ ಕೂಡಿಸಿಟ್ಟ ಹಣವನ್ನು ಬಂಡವಾಳ ಪೇಟೆಗೆ ಹಚ್ಚುವ ಪ್ರವೃತ್ತಿ ಗುಜರಾತಿನಲ್ಲಿ ಮಾತ್ರವೇ ಹೆಚ್ಚಾಗಿರುವುದು.

ಷೇರುಗಳಲ್ಲಿ ಹಣ ತೊಡಗಿಸಲು ಹೋಗಿ ಕೈಸುಟ್ಟುಕೊಂಡಿರುವ ಸಣ್ಣ ಹೂಡಿಕೆದಾರರೇ ಅಧಿಕ. ಷೇರು ಬಿಡುಗಡೆ ಮಾಡುವ ಮೂಲಕ ಹಣ ಸಂಗ್ರಹಿಸಿದ ಅನೇಕ ಕಂಪೆನಿಗಳು ಮೋಸ ಮಾಡಿವೆ. ಈ ಕಟು ಅನುಭವ ಇರುವವರಿಗೆ ಮ್ಯೂಚುವಲ್‌ ಫಂಡ್‌ಗಳು ಒಳ್ಳೆಯ ಮಾರ್ಗೋಪಾಯ ಆಗಬಲ್ಲದು. ಅಂಥ ಸನ್ನಿವೇಶ ಸ್ಫೋಟಕಗೊಳ್ಳುವುದಕ್ಕೆ ಕಾಲ ಇನ್ನೂ ಸಾಕಷ್ಟಿದೆ ಎಂಬುದೂ ನಿಜ.

ಮ್ಯೂಚುವಲ್‌ ಫಂಡ್‌ ನಡೆಸುವ ಕಂಪೆನಿಗಳವರು ಸ್ಕೀಂಗಳನ್ನು, ಅಂದರೆ ನಿರ್ದಿಷ್ಟ ಗುರಿಸಾಧನೆಯ ಯೋಜನೆಗಳನ್ನು ರೂಪಿಸುತ್ತಾರೆ. ಅದರಲ್ಲಿ ಹಣ ತೊಡಗಿಸುವವರು ಯೂನಿಟ್‌ಗಳನ್ನು ಖರೀದಿಸಬೇಕು. ಹಾಗೆ ಆ ಯೋಜನೆಯ ಯುನಿಟ್‌ಗಳನ್ನು ಮಾರಿದ ಹಣದಿಂದ ಹಲವಾರು ಕಂಪೆನಿಗಳ ಷೇರುಗಳನ್ನು ಖರೀದಿಸಿ ಇಡುತ್ತಾರೆ. ಆ ಷೇರುಗಳ ಬೆಲೆ ಏರಿದಾಗ, ಏರಿದಷ್ಟು ಭಾಗ ಏನಿದೆಯೋ ಅದೇ ಹುಟ್ಟುವಳಿ. ಯೂನಿಟ್‌ವೊಂದು ಎಷ್ಟು ಗಳಿಸಿದೆಯೋ ಅದರ ಆಧಾರದ ಮೇಲೆ ತಮ್ಮ ಗಳಿಕೆ ಇಷ್ಟೆಂದು ಹೂಡಿಕೆದಾರರು ಭಾವಿಸಬಹುದು. ಏರಿದ ಬೆಲೆಗೆ, ಬೇಕೆಂದಾಗ, ಯೂನಿಟ್‌ಗಳನ್ನು ಮಾರಬಹುದು.

ಹೂಡಿಕೆದಾರರು ಸ್ವತಃ ತಾವೇ ಷೇರುಗಳನ್ನು ಖರೀದಿಸಿ, ಬ್ರೋಕರುಗಳ ಮೂಲಕ ಮಾರಿ ವ್ಯವಹಾರ ನಡೆಸಬಹುದು. ಆದರೆ ಯಾವ ಷೇರುಗಳನ್ನು ಖರೀದಿಸಿದರೆ ಅದರ ಬೆಲೆ ಭವಿಷ್ಯದಲ್ಲಿ ಏರುತ್ತದೆ ಎಂಬುದನ್ನು ನಿರ್ಧರಿಸುವುದು ಕಷ್ಟ ಆಗುತ್ತದೆ. ಬೆಲೆ ಏರದ ಷೇರುಗಳಲ್ಲಿ ಹಣ ತೊಡಗಿಸುವ ಅಪಾಯ ಇದ್ದೇ ಇರುತ್ತದೆ. ಹಾಗೆ ನಿರ್ಧಾರ ಮಾಡುವ ಹೊಣೆಯನ್ನು ಮ್ಯೂಚುವಲ್‌ ಫಂಡ್‌ನವರೇ ತೆಗೆದುಕೊಳ್ಳುತ್ತಾರೆ. ನಿರ್ದಿಷ್ಟ ಸ್ಕೀಂಗೆ ಅನ್ವಯಿಸುವಂತೆ ಕೊಳ್ಳುವ ಮಾರುವ ಕೆಲಸ ಇದ್ದೇ ಇರುತ್ತದೆ. ಅಂದರೆ ಒಂದು ಹೆಸರಿನ ಸ್ಕೀಂನಲ್ಲಿ ಬಂದ ಹಣದಲ್ಲಿ ಷೇರುಗಳನ್ನು ಖರೀದಿಸುತ್ತಿರುತ್ತಾರೆ; ಮಾರುತ್ತಿರುತ್ತಾರೆ. ಅಷ್ಟನ್ನೂ ಹೂಡಿಕೆದಾರನಿಗಾಗಿ ಫಂಡ್‌ನವರು ಮಾಡುತ್ತಿರುತ್ತಾರೆ. ಇಲ್ಲದಿದ್ದರೆ ಸ್ವಂತ ಹಣದಲ್ಲಿ ಷೇರು ವ್ಯವಹಾರ ಮಾಡುವವರು ಸ್ವತಃ ಇದನ್ನೆಲ್ಲ ಮಾಡಿಕೊಳ್ಳಬೇಕಾಗುತ್ತದೆ. ಮ್ಯೂಚುವಲ್‌ ಫಂಡ್‌ನವರು ಲಾಭ ನಷ್ಟದ ಲೆಕ್ಕ ಕೂಡಾ ಇಡುತ್ತಾರೆ.

ಎಷ್ಟೋ ಬಾರಿ ಮ್ಯೂಚುವಲ್‌ ಫಂಡ್‌ ನಡೆಸುತ್ತಿರುವ ಕಂಪೆನಿಯವರು ತಮ್ಮ ಯೂನಿ ಗ್ರಾಹಕರ ಪರವಾಗಿ ಸ್ಕೀಂಗಳನ್ನು ನಡೆಸಿಕೊಂಡು ಬರಲು ಬಿಡಿ ಬಿಡಿಯಾಗಿ  ಅನ್ಯರನ್ನು ನೇಮಿಸುತ್ತಾರೆ. ಅಂಥ ಹೊಣೆ ಹೊರುವ ಪರಿಣಿತ ಕಂಪೆನಿಗಳೇ ಇರುತ್ತವೆ. ಅವನ್ನು ಅಸೆಟ್‌ ಮ್ಯಾನೇಜ್‌ಮೆಂಟ್‌ ಕಂಪೆನಿ ಎಂದೇ ಕರೆಯುತ್ತಾರೆ. ಯಾವ ಯಾವ ಕಂಪೆನಿಗಳ ಷೇರುಗಳನ್ನು ಖರೀದಿಸಿ ಗುಡ್ಡೆ ಹಾಕಬೇಕು; ಯಾವುದನ್ನು ಯಾವಾಗ ಮಾರಿ ನಷ್ಟದಿಂದ ಪಾರಾಗಬೇಕು ಎಂದು ನಿರ್ಧರಿಸುವಲ್ಲಿ ಇವರು ನಿಷ್ಣಾತರು.

‘ಯಾವುದೇ ಸ್ಕೀಂನಲ್ಲಿ ಸಂಗ್ರಹಿಸಿಟ್ಟ ಷೇರುಗಳ ಒಟ್ಟು ರ್ಮಲ್ಯ ಏರಿದರೇನೇ ಲಾಭ. ಗುಡ್ಡೆ ಹಾಕಿದ ಷೇರುಗಳಲ್ಲಿ ಕೆಲವಾದರೂ ಬೆಲೆ ಕಳೆದುಕೊಂಡರೆ ನಷ್ಟ. ಕೆಲವು ಲಾಭ ಕೆಲವು ನಷ್ಟ ಎಂದು ಆದಾಗ ಒಟ್ಟಾರೆ ಲಾಭ ಇರಬೇಕು. ಆಗ ಮಾತ್ರ ಯೂನಿಟ್‌ದಾರರ ಉಳಿತಾಯ ಹಣಕ್ಕೆ ಹುಟ್ಟುವಳಿ ಬಂದಂತೆ ಆಗುತ್ತದೆ. ಹೂಡಿದ ಹಣದಲ್ಲಿ ಷೇರುಗಳ ರೂಪದಲ್ಲಿ ಗುಡ್ಡೆ ಹಾಕಿದ ಆಸ್ತಿ ಎಷ್ಟು ಎಂಬುದು ಮುಖ್ಯವಾಗುತ್ತದೆ. ಇದರ ಮೊತ್ತವನ್ನು ‘ಪ್ರತಿ ಯೂನಿಟ್‌ಗೆ ಸಂದ ಲಾಭ-ನಷ್ಟ ಸಹಿತ’ ಎಂದು ಲೆಕ್ಕ ಹಾಕುತ್ತಾರೆ. ಅದೇ ನೆಟ್‌ ಅಸೆಟ್‌ ವ್ಯಾಲ್ಯೂ –ಎನ್‌.ಎ.ವಿ. ಒಳ್ಳೆಯ ಮ್ಯೂಚುವಲ್‌ ಫಂಡ್‌ ಸ್ಕೀಂಗಳಲ್ಲಿ ಮಾತ್ರ ಇದು ಏರುತ್ತಿರುತ್ತದೆ. ಇದು ಇಳಿದರೆ ಯೂನಿಟ್‌ ನಿಷ್ಪ್ರಯೋಜಕ. ಮೋಸ ನಡೆಯುವುದು ಎಲ್ಲೆಂದರೆ ಷೇರು ಖರೀದಿ ಮಾರಾಟ ವೇಳೆ ಮ್ಯೂಚುವಲ್‌ ಫಂಡ್‌ ವ್ಯವಹಾರದಲ್ಲಿ ಒಳಗೊಳಗೇ ಅಕ್ರಮವಾಗಿ ಲಾಭ ಮಾಡಿಕೊಂಡು ಬಿಡುತ್ತಾರೆ. ಲೆಕ್ಕ ದಾಖಲು ಮಾಡುವುದು ಒಂದು; ವಹಿವಾಟು ಇನ್ನೊಂದು. ನಡೆಸುವವರಿಗೆ ಲಾಭ, ಹಣ ತೊಡಗಿಸುವವರಿಗೆ ನಷ್ಟ. ಏಕೆಂದರೆ ಇವರ ಹಣದ ಮೇಲೆ ವ್ಯವಹಾರ ನಡೆದರೂ ಅದರ ಮೇಲೆ ಇವರಿಗೆ ನಿಯಂತ್ರಣವಿರದು. ಅದೇ ದೊಡ್ಡ ಲೋಪ.

ಎಲ್ಲಕ್ಕಿಂತ ಹೆಚ್ಚಾಗಿ ಯೂನಿಟ್‌ಗಳನ್ನು ಬೇಕೆಂದಾಗ ಮಾರಲು ಮುಕ್ತ ಅವಕಾಶವಿದೆ. ಅದನ್ನು ತಪ್ಪಿಸಲು ಯು.ಎಸ್‌. ೬೪ನವರು ಯತ್ನಿಸಿದ್ದು ಮಾತ್ರ ಮಹಾಪರಾಧ. ೧೧.೦೭.೨೦೦೧.