‘ನಾವು ಎವರೆಸ್ಟ್‌ ಸಿಖರದ ಮೇಲೆ ನಿಂತಿದ್ದೇವೆ.’- ಇದು ಷೇರು ವ್ಯಾಪಾರ ಸಂಸ್ಥೆಯೊಂದರ ಮುಖ್ಯಸ್ಥ ಮಾಡಿದ ಉದ್ಘಾರ.

ಷೇರು ಬೆಲೆ ಏರುತ್ತಲೇ ಹೋಗುತ್ತಾ ಯಾವಾಗ ಹಿಂದಿನೆಲ್ಲ ದಾಖಲೆ ಮುರಿಯುತ್ತದೆ ಎಂದು ಎದುರು ನೋಡುತ್ತಿದ್ದಾಗ ಮುಂಬೈ ಷೇರುಪೇಟೆಯ ಸಂವೇದಿ ಬೆಲೆ ಸೂಚ್ಯಂಕವು ವಹಿವಾಟು ದಿನದ ಕೊನೆಯಲ್ಲಿ ೬೦೦೦ ದಾಟಿ ನಿಂತಾಗ; ಹೊಸ ವರ್ಷದ ಮೊದಲ ವಾರಾಂತ್ಯ ಶುಕ್ರವಾರದಂದು ಮುಹೂರ್ತ ನಿಗದಿ ಆಗಿತ್ತೆಂಬಂತೆ ವಹಿವಾಟು ಅಂತ್ಯದಲ್ಲಿ ೬೦೦೦ ಗೆರೆ ದಾಟಿ ೬೦೨೬ ಆಯಿತು. ವಹಿವಾಟು ದಿನದ ಮಧ್ಯದಲ್ಲಿ ೬೦೩೪ಕ್ಕೆ ಎರಿದದುದು ಉಂಟು.

೨೦೦೦ ಫೆಬ್ರವರಿ ೧೧ ರಂದು ವಹಿವಾಟು ದಿನದ ಮಧ್ಯದಲ್ಲಿ ಸೂಚ್ಯಂಕವು ೬೦೦೫ ಆಗಿದ್ದುದು ಉಂಟು. ಆದರೆ ವಹಿವಾಟು ಅಂತ್ಯಕ್ಕೆ ೫೯೩೩ಕ್ಕೆ ವಾಪಸಾಗಿತ್ತು.

ಷೇರುಪೇಟೆಯಲ್ಲಿ ಬೆಲೆಗಳ ಏರಿಳಿತವನ್ನು ಅರಹುವ ಹಲವಾರು ಸೂಚ್ಯಂಕಗಳಿಗವೆ. ಆದರೆ ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕವು ಪ್ರಮುಖ ೩೦ ಷೇರುಗಳಿಗೆ ಸೀಮಿತ. ಆದರೆ ಪ್ರಾತಿನಿಧಿಕ. ಈ ಸೂಚ್ಯಂಕ ದಾಖಲಾತಿಯು ಒಟ್ಟಾರೆ ವಹಿವಾಟು ಪ್ರವೃತ್ತಿಯ ದಿಕ್ಸೂಚಿ.

ಸೂಚ್ಯಂಕವು ೬೦೦೦ ದಾಟಿದ ಪ್ರಸಂಗವು ಸಾಮಹಿಕ, ಸಾರ್ವತ್ರಿಕ ಹರ್ಷೋದ್ಗಾರಕ್ಕೆ ಕಾರಣವಾಯಿತು. ಸ್ವತಃ ಅರ್ಥಸಚಿವ ಜಸವಂತ್‌ ಸಿಂಗ್‌ ಅವರು ಇದು ನಮ್ಮ ಆರ್ಥಿಕತೆ ಎಷ್ಟು ಸುಸ್ಥಿತಿಯಲ್ಲಿ ಹಾಗೂ ಸ್ಥಿರವಾಗಿ ಇದೆ ಎಂಬುದನ್ನು ಸೂಚಿಸುತ್ತದೆ ಎಂದೇ ಹೇಳಿದರು.

ನವೆಂಬರ್‌ ೩ ರಂದು ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಆಗಿ ಹೊಸದಾಗಿ ಬಂದಿದ್ದ ವೈ. ವಿ. ರೆಡ್ಡಿ ಅವರು ತಮ್ಮ ಅಧಿಕಾರಾವಧಿಯ ಮೊಟ್ಟ ಮೊದಲ ಉದ್ದರಿ ನೀತಿಯನ್ನು ಪ್ರಕಟಿಸುತ್ತಾ ಟಿ.ಡಿ.ಪಿ. (ಒಟ್ಟಾರೆ ಆಂತರಿಕ ಉತ್ಪನ್ನ) ವೃದ್ಧಿ ೬.೫ರಿಂದ ೭ ಮಟ್ಟಕ್ಕಿಂತ ಅಧಿಕವೇ ಇರುತ್ತದೆಂದು ಪ್ರಕಟಿಸಿದರು. ಆರ್ಥಿಕ ಸ್ಥಿತಿ ಕುರಿತಂತೆ ಸರ್ವತ್ರ ಒಂದು ಬಗೆಯ ನೀರಸ ಧೋರಣೆಯೇ ಇದ್ದ ಹಿನ್ನೆಲೆಯಲ್ಲಿ ಈ ಹೇಳಿಕೆ ಭಾರೀ ಉತ್ತೇಜಕವಾಗಿ ಪರಿಣಮಿಸಿತು, ಕೆಲವೇ ನಿಮಿಷಗಳಲ್ಲಿ. ಅಂದರೆ ಅಂದು ೧೦.೧೩ಕ್ಕೆ ಇದೇ ಸೂಚ್ಯಂಕವು ೫೦೦೦ ಗೆರೆ ದಾಟಿ ದಾಖಲೆ ಸೃಷ್ಟಿಸಿತು.

ಸ್ವತಃ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಅವರು “ವೃದ್ಧಿ ಸಾಧ್ಯತೆ ಚೆನ್ನಾಗಿದೆ. ಹಣದುಬ್ಬರವು ಕಾಟ ಕೊಡುವಂತೆ ಇಲ್ಲ. ಬಡ್ಡಿದರ ಮತ್ತು ವಿದೇಶಿ ವಿನಿಮಯ ಸಂಗ್ರಹ ಇವೆರಡೂ ಭಾರೀ ಆರಾಮ ಎನಿಸುವಂತಿದೆ. ಒಟ್ಟಾರೆ ವ್ಯವಸ್ಥೆಯಲ್ಲಿ ಹಣ ಲಭ್ಯತೆ ಅಬಾಧಿತ” ಎಂದರು. ಒಟ್ಟಾಗಿ ಇಷ್ಟೊಂದು ಕಾರಣಗಳನ್ನು ನೀಡಿದರೆ ಹಣಕಾಸು ವಿದ್ಯಮಾನಕ್ಕೂ ದೋಹದಕಾರಿಯೇ ಸರಿ!

ಇದಕ್ಕೂ ಮುಂಚೆ ದೀಪಾವಳಿ ವೇಳೆ ೪೫೦೦ ದಾಟಿದಾಗ ೫೦೦೦ ಯಾವಾಗ ಎಂಬ ಪ್ರತೀಕ್ಷೆ ನಡೆದಿತ್ತು. ಅನಂತರ ೬೦೦೦ ದಾಟುವುದು ಯಾವಾಗ ಎಂಬುದೇ ನಿರೀಕ್ಷೆ.

ಷೇರುಪೇಟೆ ಎನ್ನುವುದು ಹಿದಿಯಷ್ಟು ಜನರ ನಿಯಂತ್ರಣದಲ್ಲಿ ಮಾತ್ರ ಇರುವುದಿಲ್ಲ. ವ್ಯವಹಾರದಲ್ಲಿ ಸದಾ ಕಾಲ ಒಂದಿಷ್ಟು ಹಣ ದುಡಿಯುವ ಅನಿವಾರ್ಯತೆಯಿಂದ ಷೇರು ಬ್ರೋಕರುಗಳು ಸದಾ ಕಾಲ ಷೇರುಬೆಲೆಗಳು ಏರುತ್ತಾ, ಇಳಿಯುತ್ತಾ ಇರುವಂತೆ ನೋಡಿಕೊಳ್ಳುತ್ತಾರೆ. ಅದೊಂದು ನೈಮಿತ್ತಿಕ ಚಟುವಟಿಕೆ. ಆದರೆ ವಿಪರೀತ ಏರುವುದಕ್ಕೆ ಅಥವಾ ಇಳಿಯುವುದಕ್ಕೆ ನಿಜವಾದ ಕಾರಣಗಳೇ ಇರುತ್ತವೆ. ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಅವರು ಸುಳ್ಳನ್ನೇನೂ ಹೇಳಿರಲಿಲ್ಲ. ಆದರೆ ಈ ಬಾರಿ ಏರಿಕೆ ಕ್ಷಿಪ್ರವೇ ಹೌದು.

ಸೂಚ್ಯಂಕವು ೧೯೯೦ರಲ್ಲಿ ೧೦೦೦ ಆಗಿತ್ತು. ಎರಡೂವರೆ ವರ್ಷದ ನಂತರ ೪೪೦೦ಕ್ಕೆ ಏರಿತು.

ಮತ್ತೆ ಇಳಿದಿದ್ದ ಸೂಚ್ಯಂಕವು ೧೯೯೯ರಲ್ಲಿ ೩೦೦೦ ದಿಂದ ೫೦೦೦ ಕ್ಕೆ ಏರಲು ೧೧ ತಿಂಗಳು ತೆಗೆದುಕೊಂಡಿತು. ಪುನಃ ಇದೀಗ ೬೦೦೦ಕ್ಕೆ ಏರಿತು. ಈ ಬಾರಿಯ ಏರಿಕೆಗೆ ಎರಡು ತಿಂಗಳೂ ಹಿಡಿಯಲಿಲ್ಲ.

ಎರಡು ತಿಂಗಳಲ್ಲಿ ಏನಂಥ ಪವಾಡ ನಡೆಯಿತು? ನಿಜವಾಗಿ ಕುತೂಹಲಕಾರಿ.

ವಿದೇಶಿ ಮೂಲದ ಬಂಡವಾಳ ದೇಶದ ಒಳಕ್ಕೆ ಹರಿದು ಬಂದಿದ್ದೇ ಇದಕ್ಕೆ ಮೂಲ ಕಾರಣ. ಏಪ್ರಿಲ್‌ನಿಂದ ಅಕ್ಟೋಬರ್‌ವರೆಗಿನ ಅವಧಿಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ೨೯,೭೪೮ ಕೋಟಿ ರೂಪಾಯಿನಷ್ಟು ಹಣವನ್ನು ದೇಶದೊಳಕ್ಕೆ ತಂದರು. ಭಾರತದಲ್ಲಿರುವ ಲಾಭಕಾರಿ ಕಂಪನಿಗಳ ಷೇರುಗಳನ್ನು ಕೊಳ್ಳಲು ಅದನ್ನು ವಿನಿಯೋಗಿಸಿದರು. ನವೆಂಬರ್‌, ಡಿಸೆಂಬರ್‌ನಲ್ಲೂ ಸತತವಾಗಿ ಇವುಗಳ ಹಣ ಹೂಡಿಕೆ ಮುಂದುವರೆಯಿತು.

“ಕಂಪೆನಿಗಳು ಲಾಭ ದುಡಿಯುತ್ತಿವೆಯೇ ಎಂಬುದು ಈ ಹೂಡಿಕೆ ಸಂಸ್ಥೆಗಳವರ ಪಾಲಿಗೆ ಮುಖ್ಯ ಎಂದು ಅನಿಸಲೇ ಇಲ್ಲ. ಇವು ಉದ್ಯಮ ನಡೆಸುವ ಮೂಲಕ ಒಟ್ಟು ಎಷ್ಟು ಆಸ್ತಿ ಸೃಷ್ಟಿಸಿ ಇಟ್ಟಿವೆ (ಅಂದರೆ ನೆಟ್‌ ಅಸೆಟ್‌ ವ್ಯಾಲ್ಯೂ ಎನ್‌. ಎ. ವಿ. ಹೊಂದಿವೆ) ಎಂಬುದನ್ನು ನೋಡುತ್ತ ನೋಡುತ್ತ ಷೇರು ಖರೀದಿಸುತ್ತ ಹೋದರು’’ ಎಂದು ವಹಿವಾಟುದಾರರೊಬ್ಬರು ವಿಶ್ಲೇಷಿಸುತ್ತಾರೆ.

ಹೂಡಿಕೆ ಸಂಸ್ಥೆಗಳವರು ಈ ಎನ್‌.ಎ.ವಿ. ಕಳೆದ ಒಂದು ವರ್ಷದಲ್ಲಿ ಎಷ್ಟು ಬೆಳೆದಿವೆ ಎಂಬುದನ್ನೂ ನೋಡಿದರು ಎಂಬುದು ಮುಖ್ಯ. ಏಕೆಂದರೆ ಕಳೆದ ಒಂದು ವರ್ಷದ ಅವಧಿಯಲ್ಲಿ ಕಂಪೆನಿ ವಲಯ ಚೆನ್ನಾಗಿ ಲಾಭ ಮಾಡಿದೆ. ಹೊಸ ಹೊಸ ಉದ್ಯಮ ಸ್ಥಾಪಿಸುವುದನ್ನಾಗಲಿ, ಹಳೆಯ ಉದ್ಯಮವನ್ನು ಬದಲಾಯಿಸುವುದನ್ನಾಗಲಿ ಮಾಡಿಲ್ಲ. ಸುಲಭ ಬಡ್ಡಿದರದಲ್ಲಿ ಬಂಡವಾಳ ಸುಲಭವಾಗಿ ಸಿಗುತ್ತಿರುವಾಗ, ಆಂತರಿಕ ಪೇಟೆ ಅನಿರ್ಬಾಧಿತವಾಗಿ ಲಭ್ಯವಿರುವಾಗ ಕಂಪೆನಿ ವಲಯಕ್ಕೆ ಲಾಭಕರ ಪರಿಸ್ಥಿತಿಯೇ ಇದೆ. ಹಣ ಹೂಡುವವರಿಗೆ ಇನ್ನೇನು ಸುಸ್ಥಿತಿ ಬೇಕು?

ಷೇರುಪೇಟೆಗಳು ಚೇತರಿಕೆಯಿಂದ ಕೂಡಿವೆ. ಕಂಪೆನಿಗಳು ವಿಶ್ವದಲ್ಲಿ ಹರಡಿರುವ ಆರ್ಥಿಕ ಹಿಂಜರಿತ ಕರಗಿಲ್ಲ ಎನ್ನುವ ಕಾರಣದಿಂದ ಉದ್ಯಮ ಬೆಳೆಸಲು ಹಿಂಜರಿಯುತ್ತಿದ್ದರೂ ಅವುಗಳ ಲಾಭ ಗಳಿಕೆಗೆ ಅಡ್ಡಿ ಇಲ್ಲ. ಇಂಥ ವೇಳೆ ಷೇರುಪೇಟೆ ಕುಸಿತಕ್ಕೆ ಕಾರಣವೇ ಇಲ್ಲ.

ಜೊತೆಗೆ ಪ್ರಮುಖ ರಾಜ್ಯಗಳ ವಿಧಾನಸಭೆಗಳ ಚುನಾವಣಾ ಫಲಿತ ಏನಾದಿತೋ ಎಂಬ ಆತಂಕ ದೂರವಾಯಿತು. ಕೇಂದ್ರದ ಆಡಳಿತಾರೂಢ ಕೂಟಕ್ಕೆ ಅನುಕೂಲ ಎನಿಸುವಂಥ ಫಲಿತಾಂಶವೇ ಬಂದಿತು. ಹಾಗೆ ಆಗದೆ ಅನ್ಯಥಾ ಫಲಿತಾಂಶ ಬಂದಿದ್ದರೆ ಯೋಚನೆ ಮಾಡುವಂತೆ ಆಗುತ್ತಿತ್ತು. ಅಂಥ ಸಂದರ್ಭದಲ್ಲಿ ಮುಂಬರುವ ಲೋಕಸಭಾ ಚುನಾವಣೆಗೆ ಕಾದು ನೋಡಬೇಕೆನ್ನುವ ಪರಿಸ್ಥಿತಿ ಬರುತ್ತಿತ್ತು. ಈಗ ಹಾಗಿಲ್ಲ. ಲೋಕಸಭಾ ಚುನಾವಣೆ ನಡೆದರೂ ಇಂಥ ಫಲಿತಾಂಶವೇ ಬರುವುದೆನಿಸುತ್ತದೆ. ಅಲ್ಲಿಗೆ ಅಸ್ಥಿರತೆ ತಪ್ಪಿತು.

ಷೇರುಪೇಟೆ ದಿಢೀರ್‌ ಚೇತರಿಕೆಗೆ ಇದೂ ಒಂದು ಕಾರಣವಾಯಿತು. ಸೂಚ್ಯಂಕವು ೫೦೦೦ಕ್ಕೆ ನವೆಂಬರ್‌ನಲ್ಲಿ ಬರುವುದಕ್ಕೂ, ನಂತರ ಡಿಸೆಂಬರ್‌ ಮುಗಿಯುತ್ತಿದ್ದಂತೆ ೬೦೦೦ಕ್ಕೆ ಬರುವುದಕ್ಕೂ ಮುಖ್ಯ ಕಾರಣ ಎಂದರೆ ವಿದೇಶಿ ಮೂಲದ ಹಣ ಹೂಡಿಕೆ. ದೇಶೀಯ ಹೂಡಿಕೆದಾರರು ಮುಚ್ಯುವಲ್‌ ಫಂಡ್‌ಗಳ ಮೂಲಕ, ಮುಖ್ಯವಾಗಿ, ಹಣ ಹೂಡಿರುವುದುಂಟು. ಅದೇನಿದ್ದರೂ ಒಂದೆರಡು ಸಾವಿರ ಕೋಟಿ ರೂಪಾಯಿನಷ್ಟು ಮಾತ್ರ. ಅದರ ಹೊರತಾಗಿ ಬಿಡಿಬಿಡಿಯಾಗಿ ಬೇಕೆನಿಸಿದಂತೆ ಷೇರುಗಳನ್ನು ಹಕ್ಕಿಕೊಳ್ಳುವ ಚಿಲ್ಲರೆ ಪ್ರಮಾಣದ ಹೂಡಿಕೆದಾರರು ಷೇರುಗಳಲ್ಲಿ ಹಣ ತೊಡಗಿಸಲು ಮುಂದೆ ಬರಲಿಲ್ಲ.

ಈ ಹಿಂದೆ ಷೇರುಪೇಟೆ ವಿಪರೀತ ತೇಜಿಯಾಗಿದ್ದಾಗ ಏನಾಯಿತೆಂಬುದನ್ನು ನೆನೆಸಿಕೊಳ್ಳಬಹುದು. ೧೯೯೨ರ ಮಾರ್ಚ್‌ ೨೪ ರಂದು ಒಂದೇ ದಿನ ಸೂಚ್ಯಂಕವು ೪೨೬ ಅಂಶ ಏರಿತ್ತು. ಏಪ್ರಿಲ್‌ ೨೮ ರಂದು ಒಂದೇ ದಿನ ೫೭೦ ಅಂಶ ಕುಸಿದಿತ್ತು.

ಹರ್ಷದ್‌ ಮೆಹ್ತಾ ಕೈವಾಡದ ವಿದ್ಯಮಾನ ನಡೆದಿದ್ದು ಆಗಲೇ. ಷೇರು ಬೆಲೆಗಳನ್ನು ವಿಪರೀತ ಏರಿಸುವ, ಇಳಿಸುವ ಹುಚ್ಚಾಟದಲ್ಲಿ ಹಣ ತೊಡಗಿಸಿ ಬೆಪ್ಪಾದವರು ಸಾಮಾನ್ಯ ಜನರೇ. ಹಣ ಕಳೆದುಕೊಂಡವರು ಅವರೇ. ಪುನಃ ಕೇತನ್‌ ಪಾರೀಖ್‌ ವಿದ್ಯಮಾನದಲ್ಲೂ ಹೀಗೆಯೇ ಆಗಿದ್ದುದು ಚರಿತ್ರೆ.

ಆದರೆ ಜನ ಈ ಬಾರಿ ಹಣ ತೊಡಗಿಸಿ ಕೈಸುಟ್ಟುಕೊಳ್ಳಲಿಲ್ಲ. ಷೇರು ಬೆಲೆಗಳು ನಿಜವಾದ ಅರ್ಥದಲ್ಲಿ ಏರಿತು. ಕಂಪೆನಿ ವಲಯವು ಲಾಭ ಗಳಿಕೆಯಲ್ಲಿ ಹಿಂದೆ ಬೀಳದಿದ್ದರೆ ವಿದೇಶಿ ಮೂಲಗಳಿಂದ ಬಂದ ಬಂಡವಾಳ ಉಳಿದೇ ಉಳಿಯುತ್ತದೆ. ಇಲ್ಲವೇ ವಿದೇಶಿ ಹೂಡಿಕೆದಾರರಿಗೆ ಬೇರೆ ರಾಷ್ಟ್ರದಲ್ಲಿ ಇದಕ್ಕಿಂತ ಹೆಚ್ಚಿನ ಲಾಭಕಾರಿಯಾದ ಸಾಧ್ಯತೆಗಳು ಕಂಡುಬಂದರೆ ಮಾತ್ರ ಬಂಡವಾಳವು ಪರಾರಿ ಆಗುತ್ತದೆ. ಅಂದರೆ ಈಗ ಹಣ ಹೂಡಿದ ವಿದೇಶಿ ಮೂಲ ಸಾಂಸ್ಥಿಕ ಹೂಡಿಕೆದಾರರು ತಮ್ಮ ಹಣ ತಾವು ವಾಪಸ್‌ ಒಯ್ಯಲು ಇದೇ ಭಾರತೀಯ ಷೇರುಗಳನ್ನು ಮಾರಿ ಬೇರಡೆಗೆ ಒಯ್ಯುತ್ತಾರೆ.

ಸದ್ಯಕ್ಕೆ ಆ ಸಾಧ್ಯತೆ ಕಡಿಮೆ ಇದೆ. ಏಕೆಂದರೆ ಹಿಮದೆ ಇದೇ ಮೂಲಕ ಹೂಡಿಕೆದಾರರು ಭಾರತದಲ್ಲಿ ಹೂಡಿದ್ದ ಹಣವನ್ನು ಎತ್ತಂಗಡಿ ಮಾಡಿದ್ದರು. ಆಗ ಚೀನಾದತ್ತ ಅವರ ಗಮನ ಹರಿದಿತ್ತು. ಈಗ ಅಂಥ ಯಾವ ಸಾಧ್ಯತೆಯೂ ಕಾಣಿಸುತ್ತಿಲ್ಲ.

ಅವರದೇ ಲೆಕ್ಕಾಚಾರವೂ ಭಾರತದಲ್ಲಿ ಹಣ ಹೂಡಿಕೆಗೆ ಒತ್ತು ಕೊಡುಂಥದೇ ಆಗಿರುತ್ತದೆ. ಇದೇ ಬಂಡವಾಳವನ್ನು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಲ್ಲಿ ತೊಡಗಿಸಿದರೆ ಏನು ಹುಟ್ಟುವಳಿ ಆಗುವುದೋ ಅದಕ್ಕಿಂತ ಹೆಚ್ಚಿನ ಪ್ರತಿಫಲವು ಭಾರತದ ಷೇರುಗಳಲ್ಲಿ ಹೂಡಿದರೆ ಬರುವುದು ಎಂಬುದೇ ಅವರ ಲೆಕ್ಕಾಚಾರ ಆಯಿತು.

ವಿದೇಶಿ ಹೂಡಿಕೆದಾರರೂ ದೇಶದ ಒಳಕ್ಕೆ ವಿನಿಮಯ ಹಣ ತಂದು ಹೂಡಿದ್ದರಿಂದ ಭಂಡಾರದಲ್ಲಿರುವ ಹಣ ಒಂದು ಸಾವಿರ ಬಿಲಿಯನ್‌ ಆಯಿತು. ಕೈಲಿ ಹಣ ತುಂಬಿ ತುಳುಕುತ್ತದೆ. ಇನ್ನು ಕಂಪೆನಿಗಳು ಲಾಭ ಮಾಡಲಿ ಎಂದು ಕಾಯುತ್ತಾ ಕುಳಿತುಕೊಳ್ಳುವುದಷ್ಟೇ ಕೆಲಸವೇ? ದೇಶದೊಳಗಿನ ಷೇರುಗಳಲ್ಲಿ ಪುನಃ ನೀರಸ ಪ್ರವೃತ್ತಿ ಕಾಣಿಸುವುದೇನು?

ಸದ್ಯಕ್ಕೆ ಅಂಥ ಪ್ರಮೇಯವೇನೂ ಕಾಣಿಸುತ್ತಿಲ್ಲ. ಏಕೆಂದರೆ ಷೇರುಪೇಟೆಗಳಲ್ಲಿ ಸಾಂಸ್ಥಿಕ ಹೂಡಿಕೆದಾರರಿಂದಾಗಿ ಇಷ್ಟೊಂದು ವಹಿವಾಟು ನಡೆದಿರುವಾಗ ಬಿಡಿ ಬಿಡಿ ಷೇರು ಕೊಳ್ಳುವ ದೇಶೀಯ ಚಿಲ್ಲರೆ ಹೂಡಿಕೆದಾರರು ಸುಮ್ಮನೆ ಕೂರುತ್ತಾರೆಯೇ? ಅವರೂ ನೀರಿಗೆ ಇಳಿಯುತ್ತಾರೆ. ಇವರ ಹಸಿವನ್ನು ನೀಗಿಸುವ ಸನ್ನಿವೇಶವೂ ಕಾಣಸಿಗುತ್ತಿದೆ.

ಭಾರತೀಯ ಕಂಪೆನಿಗಳು ತಮ್ಮ ಉದ್ಯಮಕ್ಕೆ ಬೇಕಾದ ಹಣಕ್ಕಾಗಿ ಹೊಸದಾಗಿ ಷೇರುಗಳನ್ನು ಬಿಡುಗಡೆ ಮಾಡಲಿದ್ದಾರೆ. ಹೂಡಿಕೆದಾರರು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಷೇರು ಬೆಲೆಗಳನ್ನು ಮುಖಬೆಲೆಗಿಂತ ಹೆಚ್ಚಾದ ಮಾರುಕಟ್ಟೆ ಬೆಲೆಗೆ ಕೊಳ್ಳುವುದು ಒಂದು ರೀತಿ. ಇದು ಸೆಕೆಂಡರಿ ಮಾರುಕಟ್ಟೆ ಖರೀದಿ. ಉದ್ಯಮದವರು ಹೊಸದಾಗಿ ಷೇರುಗಳನ್ನು ರೂಪಿಸಿ ಹೂಡಿಕೆದಾರರಿಗೆ ನೇರವಾಗಿ ಬಿಡುಗಡೆ ಮಾಡಿದರೆ ಅದನ್ನು ಬಿಡಿ ಬಿಡಿ ಹೂಡಿಕೆದಾರರಾಗಲೀ ಮುಚ್ಯುವಲ್‌ ಫಂಡ್‌ಗಳವರಾಗಲೀ ಕೊಂಡರೆ ಅದು ಪ್ರಾಥಮಿಕ ಪೇಟೆ ಖರೀದಿ.

ಇನಿಷಿಯಲ್‌ ಪ್ರಮೋಟರ್ಸ್‌ ಆಫರ್‌ (ಐ.ಪಿ.ಓ.) ಎನಿಸಿದ ಬಿಡುಗಡೆಗಾಗಿ ಸುಮಾರು ೧೦೦ ಕಂಪೆನಿಗಳು ಕಾದು ನಿಂತಿವೆ. ವಿದೇಶಿ ಮೂಲ ಹೂಡಿಕೆದಾರರು ಈ ತನಕ ಮಾಡಿರುವ ಖರೀದಿಯು ಸುಮಾರು ೩೦ ಸಾವಿರ ಕೋಟಿ ರೂಪಾಯಿಯಷ್ಟು ಇದ್ದರೆ, ಈ ದೇಶೀಯ ಕಂಪೆನಿಗಳ ಐ.ಪಿ.ಓ. ಮೂಲಕ ಸುಮಾರು ೫೦ ಸಾವಿರ ಕೋಟಿ ರೂಪಾಯಿನಷ್ಟು ಷೇರುಗಳ ಮಾರಾಟ ನಡೆಯಲಿದೆ. ಆದರೆ ಇವುಗಳ ಮೂಲಕ ಹೂಡಿಕೆದಾರರಿಗೆ ದೀರ್ಘ ಕಾಲದ ಅವಧಿಯಲ್ಲಿ ಲಾಭ ಆಗುವ ಬದಲು ನಷ್ಟವೇ ಆಗುವುದೇನೋ ಎಂಬುದನ್ನು ಹೇಳಲಿಕ್ಕಾಗದು.

ಹಿಂದೆ ಷೇರು ಬೆಲೆಗಳು ವಿಪರೀತ ಏರಿಕೆಯಾಗಿದ್ದಕ್ಕೆ ಇದ್ದಂಥ ಹಗರಣ ಸ್ವರೂಪದ ಕಾರಣಗಳು ಸದ್ಯಕ್ಕೆ ಕಾಣಿಸುತ್ತಿಲ್ಲ ಎಂಬುದು ನಿಜ.

ಸರ್ಕಾರವು ತನ್ನ ಬಳಿ ಷೇರು ವಿಕ್ರಯಕ್ಕೆಂದೇ ನಿಗದಿಯಾದ ಸರ್ಕಾರಿ ವಲಯ ಘಟಕಗಳ ಷೇರುಗಳನ್ನು ಇರಿಸಿಕೊಂಡಿದೆ. ತೈಲ ಸಂಸ್ಥೆಗಳೇ ಮುಂತಾದ ಕಂಪೆನಿಗಳ ಷೇರುಗಳನ್ನು ಖಾಸಗಿಯಾಗಿ ಪರಭಾರೆ ಮಾಡುವ ಬದಲು ಐ.ಪಿ.ಓ. ಮಾರ್ಗದಲ್ಲಿ ವಿಲೇ ಮಾಡಬೇಕು ಎಂಬ ಒತ್ತಾಯವೂ ಇದೆ. ಸರ್ಕಾರ ಅದಕ್ಕೆ ಸ್ವಲ್ಪವಾದರೂ ಮಣಿದರೆ ಆ ಷೇರುಗಳು ಖಾಸಗಿ ಉದ್ಯಮಿಗಳ ಪಾಲಾಗುವುದರ ಜೊತೆಗೆ ಜನರ ಕೈಸೇರಿದಂತಾದರೂ ಆಗುತ್ತದೆ. ೦೭. ೦೧. ೨೦೦೪