ಹರಿಕಥೆ ಭಾಗವತರಿಗೆ ಹಿಂದೆ ಮತ್ತು ಇಂದು ಬಹಳ ಪ್ರಿಯವಾದ ಒಂದು ದಾಸರ ಪದವೆಂದರೆ ‘ಎಲ್ಲಿರುವ ತಂದೆ ಬಾರೋ ಮಾರುತಿ; ಎಲ್ಲೆಲ್ಲಿ ನೋಡಲು ಅಲ್ಲಿ ನಿನ್ನ ಕೀರುತು’.

ಈಗ ಮಾರುತಿಯ ಭಜನ ಕೇಳಿ ಬರಲು ಕಾರಣವೆಂದರೆ ಆ ಹೆಸರಿನ ಕಾರು ಮಾತ್ರವಲ್ಲ. ಅದರ ಕಂಪೆನಿಯ ಷೇರು!

ಕಳೆದ ಎರಡು ವರ್ಷಗಳಿಂದ ಷೇರುಪೇಟೆ ಬಹುಪಾಲು ಸತ್ತೇ ಹೋಗಿತ್ತು. ಇದಕ್ಕಿದ್ದಂತೆ ಚೇತರಿಕೆ ಕಾಣಿಸಿಕೊಂಡಿದ್ದೇ ಮಾರುತಿ ಕಾರಿನ ಷೇರು ಪೇಟೆಗೆ ಬರುವುದರ ಮೂಲಕ.

ಮಾರುತಿ ಕಾರು ಸಂಸ್ಥೆ ಹೂಡಿಕೆದಾರರಿಗೆ ತನ್ನ ಷೇರುಗಳನ್ನು ಬಿಡುತ್ತಿರುವುದು ಇದೇ ಮೊದಲು. ಕಾರು ಮತ್ತು ಕಾರು ಕಂಪೆನಿ ಪ್ರಖ್ಯಾತವಾಗಿದ್ದರಿಂದ ಷೇರು ಬಿಡುಗಡೆ ನಿಜವಾಗಿ ಸುದ್ದಿ ಎನಿಸಿಕೊಂಡಿತ್ತು. ಅದಕ್ಕಿಂತ ಹೆಚ್ಚಾಗಿ ಹಣಕಾಸು ಸಂಸ್ಥೆಗಳ ಬದಲಿಗೆ ಜನರಿಗೆ, ಅದರಲ್ಲೂ ಸಣ್ಣ ಪ್ರಮಾಣದ ಹೂಡಿಕೆದಾರರಿಗೆ, ಅಧಿಕ ಷೇರುಗಳನ್ನು ಹಂಚಲು ಸರ್ಕಾರ ಅವಕಾಶ ಮಾಡಿಕೊಟ್ಟಿತು. ವಾಸ್ತವವಾಗಿ ಶೇ. ೪೫ರಷ್ಟು ಅಧಿಕ ಪ್ರಮಾಣದಲ್ಲಿ ಇದರ ಷೇರುಗಳು ಸಣ್ಣವರ ಕೈ ಸೇರಲಿವೆ. ಒಂದು ಸಾವಿರ ಷೇರು ಮತ್ತು ಅದಕ್ಕಿಂತ ಕಡಿಮೆ ಸಂಖ್ಯೆ ಷೇರುಗಳಿಗೆ ಅರ್ಜಿ ಹಾಕಿದವರಿಗೆಲ್ಲ ಷೇರು ಸಿಗುವುದು ಖಚಿತ.

ಮಾರುತಿ ಷೇರು ಬಿಡುಗಡೆಯು ಷೇರುಪೇಟೆ ಪಾಲಿಗೆ ಒಂದು ಶುಭ ಸೂಚನೆ, ಸರಿ. ವಾಸ್ತವವಾಗಿ ಮಳೆ ಈ ಬಾರಿ ಚೆನ್ನಾಗಿ ಆಗುತ್ತದೆ ಎನ್ನುವ ವರದಿಗಳಲ್ಲಿ ನಂಬಿಕೆ ಹುಟ್ಟಿದ್ದರಿಂದ ಷೇರುಪೇಟೆ ಚಿಗುರಿಕೊಂಡಿದೆ. ಭಾರತದ ಆರ್ಥಿಕತೆ ನಿಂತಿರುವುದೇ ಹಿಂಗಾರು ಮುಂಗಾರು ಮಾರುತಗಳ ಆಧಾರದ ಮೇಲೆ. ಇನ್ನು ಇಷ್ಟೇ ಅಭಿವೃದ್ಧಿ ಸಾಧ್ಯವಾದರೂ ದಾರ್ಢ್ಯವು ಮೂಲತಃ ಬರುವುದೇ ಮಳೆ ಬೀಳುವುದೆಂಬ ಖಾತರಿಯಿಂದ. ಈ ಬಾರಿ ಅಂಥ ಖಾತರಿ ಲಭಿಸಿದ್ದರಿಂದ ಷೇರುಪೇಟೆಯಲ್ಲಿ ತಂಗಾಳಿ ಬೀಸಿತು.

ಇದರ ಜೊತೆಗೆ ಬಂಡವಾಳ ತರುವ ವಿದೇಶಿ ಹಣಕಾಸು ಸಂಸ್ಥೆಗಳು ಮತ್ತೆ ಭಾರತದಲ್ಲಿ ಕಾರ್ಯಾಚರಣೆ ಆರಂಭಿಸಿವೆ. ಎಫ್‌ಐಐ (ಫಾರಿನ್‌ ಇನ್‌ವೆಸ್ಟ್‌ಮೆಂಟ್‌ ಇನ್ಸ್‌ಟೀಟ್ಯೂಷನ್‌) ಎಂಬ ಹೆಸರಿನ ಈ ಸಂಸ್ಥೆಗಳು ತಮ್ಮ ಪಾಲಿಗೆ ಎಲ್ಲಿ ಲಾಭಕರವೋ ಅಂಥ ದೇಶಗಳಲ್ಲಿ ಹಣ ತೊಡಗಲು ಮುಂದಾಗುತ್ತವೆ. ಬೇರೆ ಕಡೆ ಅನುಕೂಲ ಕಂಡರೆ ಅಲ್ಲಿಗೆ ದಾಳಿ ಇಡಲು ಕಾಲು ಕೀಳುತ್ತವೆ. ಹೀಗೆ ಬೇಕೆಂದ ಕಡೆಗೆ ಹೋಗಲು ಸಿದ್ಧ ಇರುವ ಇವು ಷೇರು ಮತ್ತು ಸಾಲಪತ್ರಗಳಲ್ಲಿ ಹಣ ತೊಡಗಿಸಲು ಬಯಸುವುದೇ ಹೆಚ್ಚು. ನೇರವಾಗಿ ಸಾಲ ಕೊಡುವುದು ಕಡಿಮೆ. ಏಕೆಂದರೆ ತಮ್ಮ ಬಂಡವಾಳ ವಾಪಸ್‌ ಪಡೆಯಲು ಷೇರುಪತ್ರ ಮತ್ತು ಸಾಲಪತ್ರಗಳನ್ನು ಸುಲಭವಾಗಿ ಮಾರಿಬಿಡಬಹುದು.

ಷೇರುಪೇಟೆ ವ್ಯವಹಾರಸ್ಥರು (ದಲ್ಲಾಳಿಗಳು ಮುಂತಾದವರು)ಸಿಕ್ಕಾಪಟ್ಟೆ ಬೆಲೆಗಳನ್ನು ಏರಿಸಿ ಹೂಡಿಕೆದಾರರಿಗೆ ಹುಚ್ಚು ಹಿಡಿಸುತ್ತಾರೆ. ಹುಡಿಕೆದಾರರು ಪೈಪೋಟಿ ಮೇಲೆ ಕೈಗೆ ಸಿಕ್ಕಿದ ಷೇರುಗಳನ್ನೆಲ್ಲ ಬಾಚಿಕೊಳ್ಳುತ್ತಾರೆ. ದಿಡೀರನೇ ಅನಂತರ ಬೆಲೆಗಳು ಕುಸಿಯುತ್ತವೆ. ಏರುತ್ತಲೇ ಹೋದ ಬೆಲೆಗನ್ನು ಕಂಡು ಕಂಡು ಲಾಭ ಮಾಡಲೆಂದು ಖರೀದಿಸುತ್ತಲೇ ಹೋದ ಹೂಡಿಕೆದಾರರು ಇದ್ದಕ್ಕಿಂತೆ ಬೆಲೆ ಕುಸಿದಾಗ ಪೆಟ್ಟು ತಿನ್ನುತ್ತಾರೆ. ಕೈಸುಟ್ಟುಕೊಳ್ಳುತ್ತಾರೆ. ಷೇರುಪೇಟೆ ಭಾಷೆಯಲ್ಲಿ ಬೆಲೆ ಏರುವುದುನ್ನು ‘ಗೂಳಿ’ ವಿದ್ಯಮಾನವೆಂದೂ, ಬೆಲೆ ಇಳಿಯುತ್ತಲೇ ಹೋಗುವುದನ್ನು ‘ಕರಡಿ’ ವಿದ್ಯಮಾನವೆಂದೂ ಕರೆಯುತ್ತಾರೆ. ಮಾಮೂಲಿ ಪೇಟೆ ಭಾಷೆಯ್ಲಲಿ ಇದನ್ನು ‘ತೇಜೀ’ ಮತ್ತು ‘ಮಂದಿ’ ಎನ್ನುತ್ತಾರೆ. ಈ ವಿದ್ಯಮಾನಗಳು ವಿಪರೀತ ಆಗುವುದರಿಂದ ವಿದೇಶಿ ಹಣ ಹೂಡಿಕೆದಾರರು ಹೆಚ್ಚು ಗಾಬರಿಗೊಳ್ಳುತ್ತಾರೆ.

ಸದ್ಯ ಬಂಡವಾಳ ಪೇಟೆಯಲ್ಲಿ ಬಿಗಿ ಕ್ರಮಗಳು ಫಲ ನೀಡಿ ಶಿಸ್ತು ಕಾಣಿಸಿಕೊಂಡಿರುವ ಕಾರಣ ಹಾಗೂ ಅನಾವೃಷ್ಟಿ ನಡುವೆಯೂ ದೇಶದ ಆರ್ಥಿಕ ಸ್ಥಿರವಾಗಿ ಇರುವುದರಿಂದ ಎಫ್‌. ಐ.ಐ.ಗಳು ಭಾರತದಲ್ಲಿ ಬಂಡವಾಳ ತೊಡಗಿಸಲು ಮತ್ತೆ ಮುಂದಾಗಿವೆ. ಜನವರಿಯಿಂದ ಈಚೆಗೆ ಅವು ೬೦೦೦ ಕೋಟಿ ರೂಪಾಯಿನಷ್ಟು ಅಧಿಕ ಬಂಡವಾಳವನ್ನು ಬಿಡುಗಡೆ ಮಾಡಿವೆ. ಕಳೆದ ಇಡೀ ವರ್ಷ ಇವು ಹೊಸದಾಗಿ ತಂದು ಹಾಕಿದ ಹಣ ೪೦೦೦ ಕೋಟಿ ರೂಪಾಯಿ ಮೀರಿರಲಿಲ್ಲ. ಅದರಲ್ಲೂ ಕಳೆದ ಎರಡು ತಿಂಗಳಲ್ಲಿ ವರ್ಷಾರಂಭದ ತಿಂಗಳುಗಳಲ್ಲಿ ಬಿಡುಗಡೆ ಮಾಡಿದ್ದು ಅಧಿಕ.

ಮಾರುತಿಯಂಥ ಕಂಪೆನಿಗಳು (ಈಚೆಗೆ ಷೇರು ಬಿಡುಗಡೆ ಮಾಡಿದ ಬ್ಯಾಂಕುಗಳು) ಹೂಡಿಕೆದಾರರ ಹಸಿವನ್ನು ನೀಗುಸುವುದು ಒಂದು ರೀತಿ. ಅಲಾಟ್‌ ಆದ ಷೇರುಗಳಲ್ಲಿ ಹಣ ತೊಡಗಿಸಿ ಸ್ವಲ್ಪ ಬೆಲೆ ಏರಿದಾಗಲೂ ಮಾರಿಕೊಳ್ಳುವವರು ಇರುತ್ತಾರೆ. ಮಾರುವುದಕ್ಕೆ ಹಲವು ವರ್ಷ ಕಾಯುವವರು ಇರುತ್ತಾರೆ. ಷೇರು ಬಿಡುಗಡೆಯಿಂದ ಮೂಡುವುದು ಪ್ರಾಥಮಿಕ ಮಾರುಕಟ್ಟೆ; ಈಗಾಗಲೇ ಕೈಲಿರುವ ಹೊಸ ಹಾಗೂ ಹಳೆಯ ಷೇರುಗಳನ್ನು ಮಾರುವುದರಿಂದ ಹುಟ್ಟುವ ಮಾರುಕಟ್ಟೆ ಸೆಕೆಂಡರಿ ಮಾರುಕಟ್ಟೆ, ಸದ್ಯ ಪ್ರಾಥಮಿಕ ಹಾಗೂ ಸೆಕೆಂಡರಿ ಮಾರುಕಟ್ಟೆಗಳೆರಡೂ ಇದೀಗ ಜೀವಕಳೆ ಪಡೆದವು. ಕೇಂದ್ರ ಸರ್ಕಾರ ಸಹಾ ಲಾಭಕಾರಿ ವಲಯ ಕಂಪೆನಿಗಳ ಷೇರುಗಳನ್ನು ವಿಕ್ರಯಿಸಿ ಬೊಕ್ಕಸಕ್ಕೆ ಹಣ ತುಂಬಿಕೊಳ್ಳುವ ಚಟುವಟಿಕೆಯನ್ನು ಈ ಹಣಕಾಸು ವರ್ಷದಲ್ಲಿ ಚುರುಕುಗೊಳಿಸಲು ನಿರ್ಧರಿಸಿರುವ ಸುದ್ದಿ ಹೂಡಿಕೆದಾರರಲ್ಲಿ ಹೊಸ ಆಸೆಯನ್ನು ಮೂಡಿಸಿದೆ. ಜೊತೆಗೆ ವಾಹನ ತಯಾರಿಕಾ ಘಟಕಗಳಿಗೆ ಬೇಕಾಗುವ ಬಿಡಿ ಭಾಗಗಳನ್ನು ತಯಾರಿಸಿಕೊಡಲು ವಿದೇಶಿ ಕಂಪನಿಗಳು ಭಾರತದ ಕಂಪೆನಿಗಳಿಗೆ ಭಾರೀ ಆರ್ಡರುಗಳನ್ನು ಕೊಡತೊಡಗಿವೆ. ಈ ಬಾಬಿನ ರಫ್ತು ವ್ಯಾಪಾರ ಏರುವಂತಾಯಿತು.

ಸರ್ಕಾರಿ ವಲಯ ಕಂಪೆನಿಗಳ ಷೇರುಗಳು ಲಭ್ಯವಾಗುತ್ತವೆ ಎಂಬ ಅಂಶವಂತೂ ಪೇಟೆಯಲ್ಲಿ ವಿಶೇಷ ಉತ್ಸಾಹಕ್ಕೆ ಕಾರಣವಾಗಿದೆ. ವಿ.ಎಸ್‌.ಎನ್‌.ಎಲ್‌., ಸಿ.ಎಂ.ಸಿ., ಬಾಲ್ಕೊ, ಎಲ್‌.ಐ.ಪಿ.ಸಿ.ಎಲ್‌. ಮತ್ತು ಐ.ಬಿ.ಪಿ. ಕಂಪೆನಿಗಳಲ್ಲಿರುವ ತನ್ನ ಪಾಲಿನ ಅಳಿದುಳಿದ ಷೇರುಗಳನ್ನು ಈಗ ಮಾರುವುದು ಸೂಕ್ತ ಎಂದು ಸರ್ಕಾರ ಭಾವಿಸಿರುವುದು ಒಂದು ಜಾಣತನ ಎಂದೇ ವಿಶ್ಲೇಷಕರು ಭಾವಿಸಿದ್ದಾರೆ. ಮಾರುತಿ ಷೇರುಗಳಿಗೆ ಸಿಕ್ಕಿದ ಸ್ವಾಗತ ಸಹಾ ಸರ್ಕಾರದ ಸಕಾಲಿಕ ನಿರ್ಧಾರಕ್ಕೆ ಕಾರಣ.

ಕಾರಣಗಳು ಹೀಗೆ ಏನೇ ಇದ್ದರೂ ಷೇರುಪೇಟೆಗೆ ಜೀವ ಬಂದಿದೆ ಎಂಬುದಷ್ಟೇ ಮುಖ್ಯ. ಷೇರು ಬೆಲೆಯ ಮಟ್ಟವನ್ನು ಒಟ್ಟಾರೆಯಾಗಿ ಅಳೆಯುವ ವಿಧಾನವುಂಟು. ನಾನಾ ಸೂಚ್ಯಂಕಗಳು ಸದ್ಯ ಲಭ್ಯವಿದೆ. ಅತ್ಯಂತ ಹಳೆಯ ಹಾಗೂ ಸಾಮಾನ್ಯ ಜನ ಕೂಡಾ ಸುಲಭವಾಗಿ ಗ್ರಹಿಸುವ ಸೂಚ್ಯಂಕವೆಂದರೆ ಮುಖ್ಯ ಷೇರುಪೇಟೆಯ ಸೂಕ್ಷ್ಮ ಸಂವೇದಿ ಷೇರುಗಳ ಬೆಲೆಗಳ ಆಧಾರದ ಮೇಲೆ ಸಿದ್ಧಪಡಿಸುವ ‘ಬಿ.ಎಸ್‌.ಇ. ಸೆನ್ಸೆಕ್ಸ್‌’ ಸೂಚ್ಯಂಕ. ಕಳೆದ ಗುರುವಾರದಂದು ಅದು ೩೬೮೦ ತಲುಪಿದಾಗ ೧೬ ತಿಂಗಳ ಹಿಂದೆ ಇದ್ದ ಮಟ್ಟವನ್ನು ಮುಟ್ಟಿದಂತೆ ಆಯಿತು. ಮರುದಿನ ವಹಿವಾಟು ಮುಗಿದಾಗ ಅದು ೩೬೯೭ ಸಹಾ ಆಗಿತ್ತು. ವಾಸ್ತವವಾಗಿ ಕಳೆದ ಒಂದೇ ತಿಂಗಳಲ್ಲಿ ೪೦೦ ಪಾಯಿಂಟ್‌ಗಳಷ್ಟು ಏರಿ ಸುಸ್ಥಿತಿ ತಲುಪಿತ್ತು.

ಹೂಡಿಕೆದಾರರಿಗೆ ಅದರಲ್ಲೂ ಸಣ್ಣ ಹೂಡಿಕೆದಾರರಿಗೆ ಎದುರಾಗಿರುವ ಪ್ರಶ್ನೆ ಎಂದರೆ ಇನ್ನೆಷ್ಟು ದಿನ ಈ ಲವಲವಿಕೆ ಇದ್ದೀತು? ಎಂಬುದೇ ಆಗಿದೆ.

ನೀರಿನ ಗುಳ್ಳೆಯಂತೆ ಇದು ಒಡೆದು ಹೋದರೇ?

ಐಟಿ, ಜವಳಿ, ವಾಹಣ ತಯಾರಿಕೆ, ಕಟ್ಟಡ ನಿರ್ಮಾಣ, ಜವಳಿ ಬ್ಯಾಂಕಿಂಗ್‌, ಉಕ್ಕು, ಮೂಲ ಸೌಲಭ್ಯ, ಔಷಧ ಹೀಗೆ ನಾನಾ ಕ್ಷೇತ್ರಗಳ ಚಟುವಟಿಕೆ ಗುರುತಿಸಿ ಷೇರುಗಳನ್ನು ಕೊಳ್ಳುತ್ತಾ ಹೋದರೆ ಪೇಟೆಯು ದಿಢೀರನೇ ಕುಸಿಯುವ ಸಂಭವ ಇಲ್ಲದಿಲ್ಲ. ಆದ್ದರಿಂದ ಹೂಡಿಕದಾರರು ತಾವು ಇರಬೇಕಾದ ಹುಷಾರಿತನದಲ್ಲಿ ತಾವು ಇರಬೇಕು. ಸಣ್ಣ ಮತ್ತು ಅತಿಸಣ್ಣ ಹೂಡಿಕೆದಾರರು ಹಿಂದೆ ಷೇರುಗಳನ್ನು ಕೊಳ್ಳಲು ಮನೆ ಇನ್ನಿತರ ಆಸ್ತಿ ಮಾರಿದ್ದುಂಟು. ಬೆಲೆಗಳು ಕುಸಿದಾಗ ಅವನ್ನು ಕಳೆದುಕೊಂಡಿದ್ದೂ ಉಂಟು. ಆ ಕಹಿ ನೆನಪು ಇನ್ನೂ ಮಾಸಿಲ್ಲ. ಬಿಡಿ ಬಿಡಿಯಾಗಿ ಕಂಪೆನಿಗಳ ಆರೋಗ್ಯ ಸ್ಥಿತಿ ಮತ್ತು ಅದು ಯಾವ ಕ್ಷೇತ್ರಕ್ಕೆ ಸೇರಿದೆಯೋ ಅದರ ಭವಿಷ್ಯ ಹೇಗಿದೆ ಎಂಬುದನ್ನು ಅಳೆದು ಷೇರು ಖರೀದಿಸಬೇಕು.

ಕೊಂಡ ಷೇರುಗಳನ್ನು ಬೆಲೆ ನೋಡಿಕೊಂಡು ತಕ್ಷಣ ಮಾರುವವರದು ಒಂದು ಬಗೆ. ಉಳಿತಾಯ ಹಣವನ್ನು ನಿರ್ದಿಷ್ಟ ಕಂಪೆನಿಗಳ ಷೇರುಗಳಲ್ಲಿ ತೊಡಗಿಸಿ, ಆ ಕಂಪೆನಿಗಳು ಲಾಭ ಮಾಡಿದಂತೆಲ್ಲ ಅದರ ಆಸ್ತಿ ಮೌಲ್ಯ ಬೆಳೆದಂತೆಲ್ಲ ಷೇರಿನ ನಿಜ ಮೌಲ್ಯ ಬೆಳೆಯಲು ಕಾದು, ಅನಂತರ ಮಾರುವುದು ಆರೋಗ್ಯಕರ ವಹಿವಾಟು.

ಭಾರತದಲ್ಲಿ ಸಾರ್ವತ್ರಿಕವಾಗಿ ಬಡ್ಡಿ ದರಗಳನ್ನು ರಿಸರ್ವ್‌ ಬ್ಯಾಂಕು ಇಳಿಸಿದೆ. ಠೇವಣಿಗಳಿಗೆ ನೀಡುವ ಬಡ್ಡಿದರ ಜನಸಾಮಾನ್ಯರ ಪಾಲಿಗೂ ಆಕರ್ಷಕವಾಗಿ ಉಳಿದಿಲ್ಲ. ಅಲ್ಪಸ್ವಲ್ಪ ಉಳಿತಾಯ ಹಣವನ್ನು ಜೋಪಾನ ಮಾಡಿಕೊಂಡು ಇರುವವರು ಸಹ ಬಡ್ಡಿದರಕ್ಕಿಂತ ಅಧಿಕ ಹುಟ್ಟುವಳಿ ನೀಡುವ ಮಾರ್ಗೋಪಾಯಗಳು ಏನಾದರೂ ಲಭ್ಯವಿರುವವೇನೋ ಎಂದು ತಡಕಾಡುತ್ತಿದ್ದಾರೆ. ಇಂಥವರು ಷೇರುಗಳಲ್ಲಿ ಲಾಭಕರವಾಗಿ ತೊಡಗಿಸಲು ಅವಕಾಶ ಸಿಕ್ಕಿತೆಂದು ಆತುರದಲ್ಲಿ ಖರೀದಿಗೆ ತೊಡಗಬಹುದು. ಆಗ ಪೆಟ್ಟು ತಿನ್ನುವ ಅವಕಾಶ ಇದ್ದೇ ಇದೆ.

ಸಾಮಾನ್ಯವಾಗಿ ಎಲ್ಲ ಬಗೆಯ ಹೂಡಿಕೆದಾರರು, ಷೇರು ಬ್ರೋಕರುಗಳು ನೀಡುವ ಮಾಹಿತಿಯನ್ನು ನಂಬುತ್ತಾರೆ. ಅತ್ಯಲ್ಪ ಜನಕ್ಕೆ ಮಾತ್ರ ಕಂಪೆನಿಳ ‘ಒಳ ವರ್ತಮಾನ’ ಲಭಿಸುವುದು. ಅಂಥವರು ಮಾತ್ರವೇ ಲೆಕ್ಕಾಚಾರದಿಂದ ಹಣ ಮಾಡುತ್ತಾರೆ. ಆದ್ದರಿಂದ ಆಕಾಶಕ್ಕೆ ಏಣಿ ಹಾಕದೆ ಸೂಕ್ಷ್ಮವಾಗಿ ಲೆಕ್ಕ ಹಾಕಿ ಜಾಗರೂಕತೆಯಿಂದ ಹಣ ತೊಡಗಿಸಬೇಕು.

ಕಂಪೆನಿಗಳು ಉದ್ಯಮ ನಡೆಸಿ ಕಷ್ಟಪಟ್ಟು ಲಾಭ ಸಂಪಾದನೆ ಮಾಡುತ್ತವೆ. ಷೇರುದಾರರು ಆ ಲಾಭದ ಪಾಲುದಾರರು ನಿಜ. ಆದರೆ ವಾಸ್ತವವಾಗಿ ಷೇರುದಾರರಿಗೆ ಕಂಪೆನಿಗಳನ್ನು ನಡೆಸುವವರು ಲಾಭವನ್ನು ಹಂಚಿಕೊಟ್ಟರೆ ಉಂಟು, ಇಲ್ಲವಾದರೆ ಇಲ್ಲ. ಡಿವಿಡೆಂಡ್‌ ವಿನಾ ಬೆಲೆ ಏರಿಕೆ ಬಿಟ್ಟರೆ ಷೇರಿನಿಂದ ಹೂಡಿಕೆದಾರನಿಗೆ ಬೇರೆ ಲಾಭವಿಲ್ಲ. ಇದೆಲ್ಲ ಸರಿಯೇ. ಕಂಪೆನಿಗಳು ಲಾಭವನ್ನು ಘೋಷಿಸುತ್ತಿರುವಂತಿರಬೇಕು. ಆಗ ಮಾತ್ರ ಆಸ್ತಿ ಬೆಳೆದು, ಕಂಪೆನಿಯ ಮೌಲ್ಯ ಹೆಚ್ಚಿ, ಅದು ಷೇರು ಬೆಲೆಗಳಲ್ಲಿ ಪ್ರತಿಫಲನಗೊಳ್ಳುತ್ತದೆ. ಕಂಪೆನಿಗಳನ್ನು ನಡೆಸುವವರು ಸವತಃ ದುಡಿದದ್ದನ್ನು ಹೊರಕ್ಕೆ ಸೋರಿ ಹೋಗುವಂತೆ ಮಾಡಿದರೆ ಷೇರುದಾರ ಏನೂ ಮಾಡುವಂತಿಲ್ಲ. ಕಂಪೆನಿಯಲ್ಲಿ ಆತ ಪಾಲುದಾರನೆಂಬುದು ಹೆಸರಿಗೆ ಮಾತ್ರ. ಎಷ್ಟೋ ಕಂಪೆನಿಯ ಷೇರುಗಳಿಗೆ, ಷೇರುಪತ್ರ ಅಚ್ಚು ಮಾಡಿರುವ ಕಾಗದದಷ್ಟು ಬೆಲೆ ಇರುವುದಿಲ್ಲ. ಯಾವುದೇ ಕಂಪೆನಿಯ ವಿವರಗಳನ್ನು ಪರಿಶೀಲಿಸುವಾಗ ಅದು ಲಾಭ ಮಾಡುತ್ತಿದೆಯೇ ಎಂಬುದು ಮುಖ್ಯವಾಗಿರುತ್ತದೆ. ನಷ್ಟದ ಕಂಪೆನಿಯ ಷೇರು ಕೊಂಡರೆ ನಷ್ಟವೇ ಗಂಟು ಬೀಳುವುದು.

ಕಂಪೆನಿಯ ಮೀಸಲು ನಿಧಿ ತುಂಬಿ ತುಳುಕುತಿದೆಯೇ? ಕಂಪೆನಿಯು ತನಗೆ ಅಗತ್ಯವಾಗುವ ನಗದಿಗೆ ಸದಾ ಕಾಲ ಸುರಕ್ಷಿತವಾಗಿ ವ್ಯವಸ್ಥೆ ಮಾಡಿಕೊಳ್ಳುತ್ತಿದೆಯೇ? ಸಕಾðರದ ಸದ್ಯದ ನೀತಿಯು ಅದರ ಕಾರ್ಯ ನಿರ್ವಹಣೆಗೆ ಬಾಧಕ ಆಗಿಲ್ಲ ತಾನೆ? ಸದ್ಯದ ಮಾರುಕಟ್ಟೆ ಮತ್ತಿರ ಪರಿಸ್ಥಿತಿಗಳಲ್ಲಿ ಕಂಪೆನಿಯು ಅನಿರ್ಭಾಧಿತವಾಗಿ ವ್ಯವಹಾರ ನಡೆಸಿ ಲಾಭ ಗಳಿಸುವ ಸ್ಥಿತಿಯಲ್ಲಿ ಇದೆಯೇ? ಕಂಪೆನಿ ನಡೆಸುವ ಜನರ ನಡುವೆ ಜಗಳ ಇಲ್ಲ ತಾನೇ? ಕೋರ್ಟ್‌ ಕೇಸು ಮುಂತಾದವು ಕಾಡುತ್ತಿವೆಯೇ? ಇಂಥ ಹಲವಾರು ಅಂಶಗಳನ್ನು ತುಲನೆ ಮಾಡಬೇಕು.

ಷೇರು ಬೆಲೆ ಪ್ರಕಟಿಸುವಾಗ ಪತ್ರಿಕೆಗಳು ನಿರ್ದಿಷ್ಟ ಷೇರು ಅತಿ ಹೆಚ್ಚು ಎಷ್ಟಕ್ಕೆ ಹೋಗಿತ್ತು ಅಥವಾ ೫೨ ವಾರಗಳಲ್ಲಿ ಅತಿ ಕಡಿಮೆ ಆಗಿದ್ದು ಎಷ್ಟು ಎಂದೆಲ್ಲ ವಿವರ ನೀಡುತ್ತಾರೆ. ಯಾವುದೇ ರೀತಿಯಲ್ಲಿ ನೋಡಿದರೂ ಇಷ್ಟು ಅಗ್ಗಕ್ಕೆ ಈ ಷೇರು ಇನ್ನೆಂದೂ ಸಿಗದು ಎಂದು ಭಾವಿಸಿದರೆ ಆತುರಪಟ್ಟಂತೆಯೇ ಸರಿ. ಏಕೆಂದರೆ ಷೇರು ವಿಪರೀತ ಅಗ್ಗ ಆಗಿರುವುದೇ ಅದೇ ಕೆಟ್ಟ ಲಕ್ಷಣ. ಕೆಳಕ್ಕೆ ಬೀಳುತ್ತಿರುವ ಚಾಕುವನ್ನು ಅಡ್ಡ ಕೈಹಾಕಿ ಹಿಡಿಯಲು ಹೋದವರಿಗೆ ಅಪಾಯ ತಪ್ಪಿದ್ದಲ್ಲ.

ಯಾವುದೇ ಷೇರು ಹೋದ ರ್ಷ ೧೦೦ ರೂಪಾಯಿ ಇದ್ದುದು ೨೫ ರೂಪಾಯಿಗೆ ಬಂದಿದ್ದರೆ, ಅದಕ್ಕಿಂತ ಐದು ರೂಪಾಯಿಯಿಂದ ೨೦ ರೂಪಾಯಿಗೆ ಬಂದಿರುವ ಷೇರು ಉತ್ತಮ. ಬೆಲೆಗಿಂತ ಮುಖ್ಯವಾಗಿ ಉತ್ತಮವಾದ ಕಂಪೆನಿ ಷೇರು ಕೊಳ್ಳಬೇಕು ಎನ್ನುವುದು ಅಪೇಕ್ಷಣೀಯ.

ಬೆಲೆ ಮೇಲಕ್ಕೆ ಹೋಗಿದ್ದು ಕೆಳಕ್ಕೆ ಬರಲೇಬೇಕು ಎಂದು ನಿರೀಕ್ಷಿಸುವುದೂ ತಪ್ಪು. ಕಂಪೆನಿ ಸತತವಾಗಿ ಲಾಭಕಾರಿಯಾಗಿ ನಡೆಯುತ್ತಿದ್ದರೆ ಮಾರುಕಟ್ಟೆ ಪರಿಸ್ಥಿತಿ ಏನೇ ಇದ್ದರೂ ಷೇರು ಬೆಲೆ ಏರುತ್ತಲೇ ಹೋಗುತ್ತದೆ. ಮಧ್ಯಂತರ ಬೆಲೆಯಲ್ಲಿ ಖರೀದಿಸಿ ಬಿಡಬೇಕಿತ್ತು ಎಂದು ವರ್ಷಗಳ ನಂತರ ಪರಿತಪಿಸುವಂತಾಗಬಾರದು.

ಷೇರು ಮತ್ತು ಕಂಪೆನಿ ಕುರಿತ ವಿವರ ಸಾಕಷ್ಟು ಲಭ್ಯ ಇಲ್ಲಿದಿರುವಾಗಲೂ ಸಾಧ್ಯವಾದಷ್ಟು ಲೆಕ್ಕಾಚಾರ ಹಾಕಿಯೇ ಮುಂದುವರೆಯಬಾರದು. ಷೇರುಗಳ ಬಗೆಗೆ ವಿಶ್ಲೇಷಣೆ ನಡೆಸಿ ಸಮಾಲೋಚನಾ ಸೇವೆ ಒದಗಿಸುವ ತಜ್ಞರೇ ಇರುತ್ತಾರೆ. ಅಂಥವರನ್ನು ಬಳಸಿಕೊಳ್ಳಬೇಕು. ಷೇರು ಬ್ರೋಕರುಗಳನ್ನು ನಂಬುವುದಕ್ಕಿಂತ ಇಂಥವರ ಸಲಹೆಯನ್ನು ಆಧರಿಸುವುದು ಯುಕ್ತ.

ಇದೆಲ್ಲ ಏನೇ ಇದ್ದರೂ ಹೂಡಿಕೆದಾರನು ಹಣ ನಷ್ಟವಾದರೆ ಅದು ತನ್ನದು ಮಾತ್ರವೇ ಎಂಬುದನ್ನು ಸದಾ ಜ್ಞಾಪಕದಲ್ಲಿ ಇರಿಸಿಕೊಳ್ಳಬೇಕು. ಷೇರು ವಹಿವಾಟು ನಡೆಸುವವರು ಸದಾ ಅನಿಶ್ಚಿತ ಅಂಶಗಳನ್ನು ಎದುರಿಸುವವರೇ. ಆದ್ದರಿಂದ ಅದೃಷ್ಟ ಎನ್ನುವ ಕಾಣದ ಕೈನ ನೆರವು ಏನಿರುವುದೋ ಅದನ್ನು ನೆಚ್ಚಿಕೊಳ್ಳದೇ ವಿಧಿ ಇಲ್ಲ. ೧೬.೦೬.೨೦೦೩