ವಾಸ್ತವದ ಸಂಗತಿಯು ಮೇಲೆ ಕಾಣಿಸುವುದಕ್ಕಿಂತ ಆಂತರ್ಯದಲ್ಲಿ ಬೇರೆಯೇ ಆಗಿರುತ್ತದೆ. ರಾಜಕೀಯದಲ್ಲಂತೂ ಈ ಮಾತು ಪೂರ್ತಿ ಅನ್ವಯ. ಭಾರತದಲ್ಲಿ ನಿಸ್ಸಂಶಯವಾಗಿ ಒಪ್ಪುವ ಮಾತು.

ಷೇರು ವಿಷಯದಲ್ಲೂ ಹಾಗೆಯೇ ಆಗಿದೆ. ವಾಸ್ತವವಾಗಿ ಷೇರು ವಿಕ್ರಯವು ಬಂಡವಾಳವನ್ನು ಮಾರಿಕೊಳ್ಳುವ ಒಂದು ದಂಧೆ. ಹಿರಿಯರು ಮಾಡಿಟ್ಟ ಆಸ್ತಿಯನ್ನು ಹೊಸ ಪೀಳಿಗೆಯವರು ತಂತಮ್ಮ ಅಗತ್ಯಾನುಸಾರ ಮಾರಿಕೊಳ್ಳುವುದು ಸಹಜವಾದರೂ ಹೇಗೆ ಆಪೇಕ್ಷಕ್ಕೆ ಗುರಿ ಆಗುವುದೋ ಷೇರು ವಿಕ್ರಯ ಕೂಡಾ. ಇಲ್ಲಿ ಆಕ್ಷೇಪಕ್ಕೆ ಗುರಿ ಆಗುವುದು ಏಕೆಂದರೆ, ಈ ವಿದ್ಯಮಾನದ ಲಾಭವು ಖಾಸಗಿ ವಲಯಕ್ಕೆ ಸೇರುತ್ತದೆ. ಉದ್ಯಮ ಘಟಕದ ಆಸ್ತಿಪಾಸ್ತಿ, ಹೆಸರು, ಬಲ ಎಲ್ಲವೂ ಖಾಸಗೀಯವರ ಸೊತ್ತಾಗುತ್ತದೆ. ಆದ್ದರಿಂದ ಷೇರು ವಿಕ್ರಯಕ್ಕೆ ಸಲ್ಲುವ ಹೆಸರು ಖಾಸಗೀಕರಣ.

ಸತ್ತು ಸುಣ್ಣವಾಗುತ್ತಿರುವ ಉದ್ಯಮ ಘಟಕ ಯಾರ ಕೈಗೋ ಸೇರಿದರೆ ಅಷ್ಟೊಂದು ಗದ್ದಲವಾಗುವುದಿಲ್ಲ. ಆದರೆ ಆರೋಗ್ಯಕರವಾಗಿ ಬೆಳೆದಿರುವ ಹಾಗೂ ಭವಿಷ್ಯದಲ್ಲಿ ಸುಪುಷ್ಟವಾಗಿ ಬೆಳೆಯುವ ಸಾಧ್ಯತೆಗಳಿರುವ ಘಟಕ ವಿಲೇವಾರಿಗೆ ಬಂದಾಗ ಸಮಸ್ಯೆಗಳು ಏಳುತ್ತವೆ.

ಸರ್ಕಾರಿ ವಲಯದ ‘ನಾಲ್ದೊ’ವನ್ನು ಯಾರಿಗಾದರೂ ವಿಲೇವಾರಿ ಮಾಡಿದರೆ ಈಗಲೇ ಉದ್ಯಮ ರಂಗದಲ್ಲಿ ಬಲ ಕೂಡಿಸಿಕೊಂಡಿರುವ ಖಾಸಗಿ ಅಲ್ಯುಮಿನಿಯಂ ಕಂಪನಿಗಳಿಗೆ ಒಂದಿಲ್ಲೊಂದು ರೀತಿ ತೊಂದರೆ ಆಗಲಿಕ್ಕೆ ಸಾಕು. ಆ ಕಂಪೆನಿಗಳವರು, ಸರ್ಕಾರಿ ಕಂಪೆನಿಯ ಷೇರುಗಳು ವಿಲೇ ಆಗುವ ಪ್ರತಿಕ್ರಿಯೆಗೆ ಅಡ್ಡಗಾಲು ಹಾಕುತ್ತಾರೆ. ತಾವು ಸ್ವತಃ ಷೇರು ಖರೀದಿಸುವ ಗೋಜಿಗೂ ಹೋಗುವುದಿಲ್ಲ. ಅನ್ಯರು ಖರೀದಿಸಿದರೆ ತಮಗೆ ತೊಂದರೆ ಆಗಬಹುದು ಎಂದು ಭಾವಿಸುತ್ತಾರೆ. ಸರ್ಕಾರಿ ವಲಯದ ಉದ್ದೇಶಿತ ಘಟಕ ಸತ್ತ ಸ್ಥಿತಿಯನ್ನು ಅಥವಾ ಕುಂಟಿಕೊಂಡು ನಡೆಯುತ್ತಿದ್ದರೂ ಚಿಂತೆಯಿಲ್ಲ. ಸರ್ಕಾರದ ಮಟ್ಟಿಗಿನ ಪರಭಾರೆ ತಮಗೆ ಯಾವ ರೀತಿಯಲ್ಲೂ ಬಾಧಕವಾಗಬಾರದು ಎಂದು ಹೊರಗಿನ ಬಲಶಾಲಿ ಖಾಸಗಿಯ ಮರು ಸಮಸ್ಯೆಗಳನ್ನು ಒಡ್ಡುತ್ತಾರೆ.

ಇದೇ ಕಾರ್ಯತಂತ್ರವೇ ಎಚ್‌.ಪಿ.ಸಿ.ಎಲ್‌. ಮತ್ತು ಬಿ.ಪಿ.ಸಿ.ಎಲ್‌. ತೈಲ ಕಂಪನಿಗಳ ಷೇರು ವಿಕ್ರಯ ಯತ್ನದ ಸಂಬಂಧದಲ್ಲೂ ಕಾಣಬಹುದು. ಸರ್ಕಾರಿ ವಲಯದಲ್ಲಿ ಈ ಎರಡು ತೈಲ ಕಂಪೆನಿಗಳಲ್ಲದೆ ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್ (ಐಓಸಿ) ಸಹಾ ಇದೆ. ಖಾಸಗಿ ವಲಯದಲ್ಲಿ ಅಂಬಾನಿಗಳ ರಿಲಯನ್ಸ್‌ ಇಂಡಸ್ಟ್ರೀಸ್‌ (ಆರ್‌ಐಎಲ್‌) ಸಹಾ ಶಕ್ತಿಶಾಲಿ. ಇವೆಲ್ಲವೂ ತೈಲ ಸಂಸ್ಕರಣಾಗಾರಗಳನ್ನು ಹೊಂದಿವೆ.

ಕ್ರಮವಾಗಿ ಇವುಗಳ ನಡುವೆ ಒಟ್ಟು ಬಲ ಹೇಗೆ ಹಂಚಿ ಹೋಗಿವೆ ಎಂಬುದನ್ನಿಷ್ಟು ನೋಡಬಹುದು. ಐಓಸಿ ಶೇ. ೪೧.೪, ಆರ್‌ಐಎಲ್‌ ಶೇ. ೨೩.೫ ಎಚ್‌.ಪಿ.ಸಿ.ಎಲ್‌. ಶೇ. ೧೬.೮ ಮತ್ತು ಬಿ.ಪಿ.ಸಿ.ಎಲ್‌. ಶೇ. ೧೫.೨.

ಈ ತೈಲ ಕಂಪನಿಗಳ ಖಾಸಗೀಕರಣ ಯತ್ನವು ವಿವಾದಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ ಒಂದು ಸಾಧ್ಯತೆಯನ್ನು ಪರಾಮರ್ಶೆ ಮಾಡಬಹುದು. ಈಗ ಸರ್ಕಾರಿ ವಲಯದಲ್ಲಿರುವ ಹಾಗೂ ನಂಬರ್‌ ಒನ್‌ ಆಗಿರುವ ಐ.ಓ.ಸಿ. ಅತ್ಯಧಿಕ ಬಲಶಾಲಿ. ಖಾಸಗಿ ವಲಯದ ಆರ್‌. ಐ.ಎಲ್‌. ಎರಡನೇ ಸ್ಥಾನದಲ್ಲಿದೆ. ಈ ಖಾಸಗಿ ಕಂಪೆನಿ ಯಾವುದೇ ಒಂದು ಸರ್ಕಾರಿ ವಲಯದ ಕಂಪೆನಿಯನ್ನು (ಅಂದರೆ ಎಚ್‌ಪಿಸಿಎಲ್‌ ಅಥವಾ ಬಿಪಿಸಿಎಲ್‌ ಅನ್ನು) ವಶಪಡಿಸಿಕೊಂಡರೆ ಅಗ್ರ ಸ್ಥಾನದಲ್ಲಿರುವ ಐ.ಓ.ಸಿ.ಗೆ ಸರಿಸಮವಾಗುತ್ತದೆ. ಖಾಸಗಿ ಕಂಪೆನಿಯವರು ಈಗಾಗಲೇ ನಿರ್ಣಾಯಕ ಸ್ಥಾನಗಳಲ್ಲಿರುವ ಆಳುವ ಕೂಟದ ಪಕ್ಷ ನಾಯಕರನ್ನು ಭೇಟಿ ಮಾಡಿ ತಾವು ಷೇರುಗಳನ್ನು ಕೊಳ್ಳಲು ಯತ್ನಿಸಿದರೆ ಅಡ್ಡಿಯಿಲ್ಲವಷ್ಟೇ? ಎಂದು ಕೇಳಿದ್ದಾರೆ ಎಂಬುದು ಸುದ್ದಿ. ಈ ಖಾಸಗಿಯವರು ತಮಗೆ ಸಿಕ್ಕಿದರೆ ಸರಿ. ತಪ್ಪಿದರೆ ಇನ್ನಾರ ಕೈಗೂ ದಕ್ಕಬಾರದು ಎಂದು ಭಾವಿಸಿದರೆ ಅಸಹಜವಾದರೇನೂ ಇಲ್ಲ. ಅದೇ ಅವರ ನಿಲುವು.

ಇಡಿ ವ್ಯವಹಾರದಲ್ಲಿ ಇನ್ನೊಂದು ಸ್ವಾರಸ್ಯವೂ ಉಂಟು. ಸರ್ಕಾರಿ ವಲಯದ ಮೂರು ಕಂಪನಿಗಳು ಸ್ವಂತ ವಿತರಣಾ ಜಾಲ ಹೊಂದಿವೆ. ಪೆಟ್ರೋಲ್, ಡಿಸೇಲ್‌, ಅಡಿಗೆ ಅನಿಲ ಮುಂತಾದ ತೈಲೋತ್ಪನ್ನಗಳನ್ನು ಮಾರಾಟ ಮಾಡುವ ವ್ಯವಸ್ಥಿತ ಜಾಲಗಳನ್ನು ನಡೆಸುತ್ತಿವೆ. ಯಾವುದೇ ಉತ್ಪನ್ನ ವಿತರಣೆಯಲ್ಲಿ ಕಿಂಚಿತ್‌ ವ್ಯತ್ಯಾಸವಾದರೂ ಎಂಥ ಹಾಹಾಕಾರ ಏಳುತ್ತದೆ ಎಂಬುದು ಜನಜನಿತ ಅಂಶ. ಆದ್ದರಿಂದಲೇ ಎರಡು ಸಣ್ಣ ಸರ್ಕಾರಿ ತೈಲ ಕಂಪೆನಿಗಳ ಷೇರು ವಿಕ್ರಯಕ್ಕೆ ಮಹತ್ವ.

ಜವಹರಲಾಲ್ ನೆಹರೂ ಅವರ ಕಾಲದಲ್ಲಿ ವಿದೇಶಿ ವಿನಿಮಯಕ್ಕೆ ಬಹಳ ಕೊರತೆ ಇತ್ತು. ಆದರೆ ಸೋವಿಯತ್‌ ರಷ್ಯವು ರೂಪಾಯಿ ವ್ಯವಹಾರದ ಆಧಾರದ ಮೇಲೆ ಕಚ್ಚಾತೈಲ ಪೂರೈಸುವ ಸಾಧ್ಯತೆ ಇತ್ತು. ಸ್ವಾತಂತ್ರ್ಯ ಬಂದಿದ್ದರ ಹೊಸತು. ಎರಡು ತೈಲ ಸಂಸ್ಕರಣಾಗಾರಗಳು ಖಾಸಗಿ ವಶದಲ್ಲಿದ್ದವು. ತೈಲೋತ್ಪನ್ನಗಳು ಬರ್ಮಾ ಷೆಲ್‌ ಮತ್ತು ಕಾಲ್ಟೆಕ್ಸ್‌ ಹೆಸರಿನಲ್ಲಿ ವಿತರಣೆ ಆಗುತ್ತಿತ್ತು. ಮುಂದೆ ಅವೆರಡೂ ರಾಷ್ಟ್ರೀಕರಣಗೊಂಡವು. ಆ ಮಾತು ಬೇರೆ. ಬಿ.ಪಿ.ಸಿ.ಎಲ್‌. ಮತ್ತು ಎಚ್‌.ಪಿ.ಸಿ.ಎಲ್‌ ಇವೆರಡರ ಮೂಲ ರೂಪ ಅದೇ. ರಷ್ಯ ಮೂಲದ ಕಚ್ಚಾ ತೈಲವನ್ನು ಭಾರತದಲ್ಲಿ ಸಂಸ್ಕರಿಬಾರದೇಕೆ ಎಂಬ ಸಲಹೆಯನ್ನು ಪ್ರದಾನಿ ನೆಹರೂ ಮುಂದಿಟ್ಟಾಗ ಪಾಶ್ಚಿಮಾತ್ಯ ಮೂಲದ ಆಗಿನ ಆ ಎರಡೂ ತೈಲಾಗಾರ ಕಂಪೆನಿಗಳು ಆಗದು ಎಂದೇ ಹೇಳಿದವು. ನೆಹರೂ ಸುಮ್ಮನಾಗಬೇಕಾಯಿತು. ಇಂಥ ಅಸಹಾಯಕ ಸ್ಥಿತಿಯನ್ನು ತಪ್ಪಿಸಲೆಂದೇ ಅನಂತರ ಐ.ಓ.ಸಿ.ಯನ್ನು ಸ್ಥಾಪಿಸಲಾಯಿತು. ಅಷ್ಟೆ ಅಲ್ಲ, ಬೃಹತ್ತಾಗಿ ತೈಲ ನಿಕಷೇಪ ಅನ್ವೇಷಣೆ ಮತ್ತು ಕಚ್ಚಾ ತೈಲ ತೋಡುವ ಉದ್ದೇಶದಿಂದ ತೈಲ ಮತ್ತು ನೈಸರ್ಗಿಕ ಅನಿಲ ಕಾರ್ಪೋರೇಷನ್‌(ಒ.ಎನ್‌.ಜಿ.ಸಿ.)ಸಹಾ ಸ್ಥಾಪಿಸಲಾಯಿತು. ಇದೀಗ ವರ್ತುಲವನ್ನು ಒಂದು ಸುತ್ತು ಪೂರೈಸಿ ಹಿಂದಿನ ದಿನಗಳಿಗೇ ಮರುಳುವ ಕಾರ್ಯ ನಡೆದಿದೆ. ರಾಷ್ಟ್ರೀಕರಣದ ನಂತರ ಖಾಸಗೀಕರಣ ನಡೆದಿದೆ.

ಹೀಗೆ ಆಗಲು ವ್ಯವಸ್ಥೆಯ ಶೈಥಿಲ್ಯವೇ ಕಾರಣ. ಜನೋಪಯೋಗಿ ಕ್ಷೇತ್ರಗಳಿಗೆ ಮೀಸಲಾಗಿ ಕಟ್ಟಿ ಬೆಳೆಸಿದ ಸರ್ಕಾರಿ ವಲಯವೆಂಬ ಸಾಮ್ರಾಜ್ಯವನ್ನು ನಾಮಾವಶೇಷ ಮಾಡಿ ಮತ್ತೆ ಖಾಸಗಿ ಅಧಿಪತ್ಯಕ್ಕೆ ವಹಿಸುವ ಕೆಲಸ ನಡೆದಿದೆ. ಒಂದೇ ವ್ಯತ್ಯಾಸ; ವ್ಯಾಪಾರಕ್ಕಾಗಿ ಬಂದವರು ರಾಜ್ಯ ಆಳಿದರು. ವ್ಯಾಪಾರವನ್ನೂ ತಮ್ಮ ಕೈಲಿರಿಸಿಕೊಂಡಿದ್ದರು. ಪ್ರಭುಗಳಾಗಿದ್ದರು. ಅವರ ನಂತರ ಆಳುವವರು ನಮ್ಮವರೇ ಆದರು. ಸ್ವತಃ ವ್ಯಾಪಾರಗಾರರಲ್ಲದಿದ್ದರೂ ಅದರ ಲಾಭ ಏನಿದೆಯೋ ತಮ್ಮದಾಗಬೇಕೆಂದರು. ಆಡಳಿತ ನಡೆಸುವ ಸಂಬಳಗಾರ ಅಧಿಕಾರಿಗಳು ಕೈ ಜೋಡಿಸಿದರು. ಜೇನಿಗೆ ಕೈಯಿಕ್ಕುವಾಗ, ಕೈಗಂಟಿನ ಜೇನನ್ನು ನೆಕ್ಕುವಾಗ ಈ ಎರಡೂ ವರ್ಗದ ಆಳುವವರ ಪಾತ್ರ ಒಂದೇ ಸರಿಸಮ.

ಸರ್ಕಾರಿ ವಲಯ ಇವತ್ತಿನ ದುಸ್ಥಿತಿ ತಲುಪಲು ದುರಾಡಳಿತವೇ ಕಾರಣ. ರಾಜಕಾರಣಿಗಳು ಮತ್ತು ಅಧಿಕಾರಿಗಳು ಸೇರಿಕೊಂಡು ಹಿಂಡುವ ಹಸುವನ್ನು ಬರಡು ಮಾಡಿದರು. ಆ ಬರಡು ಹಸುವನ್ನು ಕಸಾಯಿಖಾನೆಗೆಂಬಂತೆ ಮಾರುವಾಗಲೂ ಇವರಿಗೆ ಲಾಭ ಬೇಕು.

ಷೇರು ವಿಕ್ರಯ ಮಾಡುವಾಗ ಅಧಿಕಾರಿಗಳು ಸಂಚು ಮಾಡಿ ಮಾರಾಟ ಬೆಲೆಯನ್ನು ಏರುಪೇರು ಮಾಡುತ್ತಾರೆ. ಕೆಲವೊಮ್ಮೆ ಆ ಕಾರ್ಯಕ್ಕಾಗಿ ಷೇರುಪೇಟೆಯನ್ನು ಬಳಸಿಕೊಳ್ಳುತ್ತಾರೆ. ಸಹಾ. ಬಹಳ ನಾಜೂಕಾಗಿ ಕೋಟ್ಯಂತರ ಪ್ರಮಾಣದ ಭ್ರಷ್ಟ ಹಣ ಕೈಬದಲಾಗುತ್ತದೆ. ಬಂಡವಾಳ ಹಾಕಿ ಉದ್ಯಮ ನಡೆಸಿ, ಕೈ ಸುಟ್ಟುಕೊಳ್ಳುವ ಅಪಾಯ ಎದುರಿಸಿ, ಸಾಹಸವಂತರೆಸಿಕೊಂಡವರೂ ಹಣ ಮಾಡುತ್ತಾರೆ. ಬರಿದೆ ಹಣ ಮಾಡಿಕೊಳ್ಳುವುದಕ್ಕಾಗಿ ಆಡಳಿತ ಸ್ಥಾನಗಳನ್ನು ಹಿಡಿದಿರುವವರನ್ನು ಇವರು ಬಳಸಿಕೊಳ್ಳುತ್ತಾರೆ.

ಈಗ ತೈಲ ಕಂಪೆನಿಗಳ ಷೇರು ವಿಕ್ರಯ ಪ್ರಕ್ರಿಯೆಯಲ್ಲಿ ಆಗಿರುವುದು ಹೀಗೆಯೇ. ಉದ್ಯಮ ರಂಗದ ಆಸಕ್ತ ಹಿತಗಳು ಕೇಂದ್ರ ಸಂಪುಟವನ್ನೇ ಎರಡಾಗಿ, ಮೂರಾಗಿ, ನಾಲ್ಕಾಗಿ…. ಹಲವು ತುಂಡುಗಳಾಗಿ ಒಡೆಯುವುದರಲ್ಲಿ ಸಫಲವಾಗಿವೆ. ಈ ವ್ಯವಹಾರಗಳ ಬಗೆಗೆ ವಿರೋಧಿ ನಾಯಕತ್ವ ವಹಿಸಿರುವ ಕಾಂಗ್ರೆಸ್‌ ಕೂಡಾ ಆಗಾಗ ಬಾಯಿ ಮಾಡುತ್ತಾ ಇರುತ್ತದೆ. ಆಸಕ್ತ ಹಿತಗಳು ಆಳಿತಾರೂಢರನ್ನು ಮಾತ್ರವಲ್ಲದೆ ಗದ್ದಲ ಎಬ್ಬಿಸುವವರು ಯಾರೇ ಇದ್ದರೂ ಅವರನ್ನು ಕೂಡಾ ‘ನೋಡಿಕೊಳ್ಳಬೇಕು’. ಆಡಳಿತಾರೂಢರು ಮತ್ತು ವಿರೋಧ ಪಕ್ಷಗಳವರು ಬೇರೆ ಬೇರೆ ಅಧಿಕಾರಾವಧಿಯಲ್ಲಿ ಪಾತ್ರ ಅದಲು ಬದಲು ಮಾಡಿಕೊಂಡರೂ ವ್ಯವಹಾರ ಅನಿರ್ಬಾಧಿತವಾಗುತ್ತಿರುತ್ತದೆ. ಹೊಸ ವ್ಯವಸ್ಥೆಯಲ್ಲಿ ಖಾಸಗಿ ಉದ್ಯಮಿಗಳು ಬಲವಂತರಾಗುತ್ತಾರೆ. ಆಳುವವರನ್ನು ಒಡೆದಿಡುವಲ್ಲಿ ಹೆಚ್ಚು ಹೆಚ್ಚು ಶಕ್ತರಾಗುತ್ತಾರೆ. ಲಾಬಿಗಳ ಸಂಖ್ಯೆ ಬೆಳೆಯುತ್ತದೆ. ರಾಜಕೀಯ ಮಾಡುವ ಬೊಂಬೆಗಳು ಹೆಚ್ಚು ಹೆಚ್ಚು ಸಂಖ್ಯೆಯ ಸೂತ್ರದ ದಾರಗಳ ಹಿಡಿತಕ್ಕೆ ಒಳಗಾಗುತ್ತವೆ.

ತೈಲ ಕಂಪೆನಿಗಳ ಖಾಸಗೀಕರಣ ಯತ್ರದಲ್ಲಿ ಷೇರು ವಿಕ್ರಯ ಖಾತೆಯನ್ನು ನಡೆಸುತ್ತಿರುವ ಅರುಣ್‌ ಶೌರಿ ಈಗ ಒಂಟಿಯಾಗಿದ್ದಾರೆ. ಅವರ ನೆರವಿಗೆ ಬರುತ್ತಿದ್ದ ಆಗಿನ ಕಾನೂನು ಸಚಿವ ಅರುಣ್‌ ಜೆಟ್ಲಿ ಅಥವಾ ಆಗಿನ ವಿದ್ಯುತ್‌ ಸಚಿವ ಸುರೇಶ್‌ ಪ್ರಭು ಈಗ ಸಂಪುಟದಲ್ಲಿ ಜೊತೆಗಿಲ್ಲ. ವಿವಿಧ ಖಾತೆಗಳ ಸಚಿವರು, ಮುಖ್ಯವಾಗಿ ಈಗಿನ ಪೆಟ್ರೋಲಿಯಂ ಖಾತೆ ಸಚಿವ ರಾಂ ನಾಯಕ್‌ ಅವರು, ಅಡ್ಡಗಾಲು ಹಾಕುವವರೇ.

ರಕ್ಷಣಾ ಸಚಿವರೂ ಆಗಿರುವ ಆಡಳಿತಾರೂಢ ಕೂಟ ಎನ್‌ಡಿಎ ಸಂಚಾಲಕರಾದ ಜಾರ್ಜ್ ಫರ್ನಾಂಡೀಸ್‌ ಅವರು ಈ ಹಗರಣದಲ್ಲಿ ಮೇಲುಗೈ ಸಾಧಿಸಿದ್ದರಿಂದ ಇಡೀ ವ್ಯವಹಾರ ಹೊಸ ತಿರುವು ಕಾಣುವಂತಾಯಿತು. ಸಮಾಜವಾದಿಯೆನಿಸಿ ತಮ್ಮತನ ಕಾಪಾಡಿಕೊಂಡಿದ್ದ ಜಾರ್ಜ್‌ ಫರ್ನಾಂಡಿಸ್‌, ತತ್ವ ಆದರ್ಶಗಳನ್ನು ಗಾಳಿಗೆ ತೂರಿ ಕೊನೆಗೆ ಪೂರ್ಣ ಬಲಪಂಥೀಯ ಎನ್‌. ಡಿ.ಎ. ಸರ್ಕಾರದ ಪ್ರಮುಖ ಪಾತ್ರಧಾರಿಯಾದರು. ಆದರೂ ಆಗಾಗ ಸಮಾಜವಾದಿ ಪ್ರವೃತ್ತಿ ಅವರನ್ನು ಒಳಗಿನಿಂದ ಕುಟುಕುತ್ತದೆ. ಇದು ಷೇರು ವಿಕ್ರಯ ಪ್ರಕರಣದಲ್ಲೂ ವ್ಯಕ್ತವಾಗಿದೆ.

ಸರ್ಕಾರಿ ವಲಯದ ಕಂಪೆನಿಗಳ ಷೇರುಗಳನ್ನು ವಿಕ್ರಯಿಸುವಾಗ ಎರಡು ಮಾರ್ಗ ಅನುಸರಿಸುವುದುಂಟು. ಖಾಸಗೀಯವರಿಗೆ ಇಡಿಯಾಗಿ ವಹಿಸಿಬಿಡುವುದು. ಇಲ್ಲವೇ ಸಾಕಷ್ಟು ದೊಡ್ಡ ಭಾಗವನ್ನು ಷೇರು ಪೇಟೆಗೆ ಬರುವಂತೆ ವಿಲೇ ಮಾಡುವುದು. ಇಲ್ಲವೇ ಸಾಕಷ್ಟು ದೊಡ್ಡ ಭಾಗವನ್ನು ಷೇರು ಪೇಟೆಗೆ ಬರುವಂತೆ ವಿಲೇ ಮಾಡುವುದು. ಈ ಎರಡನೇ ಮಾರ್ಗವನ್ನು ಅನುಸರಿಸಬೇಕೆಂದು ಜಾರ್ಜ್‌ ಪ್ರತಿಪಾದಿಸುತ್ತಿದ್ದಾರೆ. ತೈಲವು ನೈಸರ್ಗಿಕ ಸಂಪತ್ತಾದ್ದರಿಂದ ಬೇರೆ ಕ್ಷೇತ್ರದ ಷೇರು ವಿಕ್ರಯದ ಹಾಗಲ್ಲ ಎನ್ನುತ್ತಾರೆ.

ಇದೇನೇ ಇರಲಿ; ಆರ್‌.ಐ.ಎಲ್‌.ಗೇ ಏಕೆ ಬಾಗಿನವಾಗಿ ಕೊಡಬೇಕು? ಒ.ಎನ್.ಜಿ.ಸಿ. ಯಂಥ ಸರ್ಕಾರಿ ಕಂಪೆನಿಗಳಿಗೂ ಪಾಲುದಾರಿಕೆ ನೀಡಬಾರದೇಕೆ?

ಸದ್ಯಕ್ಕೆ ನಿರ್ಧಾರವನ್ನು ಮುಂದಕ್ಕೆ ಹಾಕಲಾಗಿದೆ. ರಾಜ್ಯಗಳಲ್ಲಿ ಚುನಾವಣೆ ಬರಲಿದೆ ಯಾವುದಕ್ಕೂ ಕಾಯಬೇಕು. ೨೫.೦೯.೨೦೦೨