‘ಬಂಡವಾಳ ತಿಂದು ಹಾಕುವವನು ಮಹಾಪರಾಧಿ’. ಇದು ಯಾವುದೇ ಬಗೆಯ ವ್ಯವಹಾರಸ್ಥ ಆಡುವ ಮಾತು.

ತಿನ್ನಬೇಕಾದದ್ದು ಏನಾದರೂ ಇದ್ದರೆ ಹುಟ್ಟುವಳಿಯನ್ನು ಮಾತ್ರ, ಲಾಭವನ್ನು ಮಾತ್ರ ನಷ್ಟ ಆದಾಗಲೂ ಬಂಡವಾಳ ಕರಗಿಸುವುದಕ್ಕೆ ಅವಕಾಶ ಇರಬಾರದು. ಸಾಲ ಪಡೆದಾದರೂ ವ್ಯವಹಾರ ಮುಂದುವರೆಸಿ, ಲಾಭ ಮಾಡಿ, ಆ ಹಣದಿಂದ ನಷ್ಟ ಸರಿತೂಗಿಸಬೇಕು. ಲಾಭ ಗಳಿಸಲು ದಾರಿ ಮಾಡಿಕೊಡುವ ಬಂಡವಾಳವನ್ನು  ನುಂಗಿ ನೀರು ಕುಡಿಯಬಾರದು.

ಅದು ಸಾಧ್ಯವಾಗದೆ ಹೋದರೆ? ಲಾಭ ಗಳಿಸಲು ಆಗುವುದೇ ಇಲ್ಲ. ಏನಿದ್ದರೂ ನಷ್ಟವೇ ಹೌದು. ಹಾಗೆ ಆದಾಗ ಏನು ಮಾಡಬೇಕು? ವ್ಯವಹಾರ ನಿಲ್ಲಿಸಬೇಕು. ಅಂಗಡಿ, ಕಾರ್ಖಾನೆ, ಸೇವಾ ಸೌಲಭ್ಯ ವಹಿವಾಟು ಏನೇ ಇದ್ದರೂ ಕೊನೆಗೊಳಿಸಿ ನಷ್ಟವು ಇನ್ನಷ್ಟು ಮತ್ತಷ್ಟು ಹೆಚ್ಚದಂತೆ ನೋಡಿಕೊಳ್ಳಬೇಕು.

ವ್ಯವಹಾರಸ್ಥರು, ಯಶಸ್ವಿ ವ್ಯವಹಾರಸ್ಥರು, ಅನುಸರಿಸುವ ಸರಳ ಸೂತ್ರ ಇದು.

ಸರ್ಕಾರದ ಷೇರು ವಿಕ್ರಯ ನೀತಿಯ ತಿರುಳು ಸಹಾ ಇದೇ ಆಗಿದೆ. ನಷ್ಟ ಪೀಡೆಯಿಂದ ಮುಕ್ತಗೊಳಿಸುವುದಕ್ಕೆ ಇದೊಂದೇ ದಾರಿ, ಈಗ ಕಾಣಿಸುತ್ತಿರುವುದು.

ಐವತ್ತು ವರ್ಷದ ಹಿಂದೆ ಸರ್ಕಾರಿ ವಲಯವೆಂಬುದು ಬಹಳ ಹುರುಪಿನಿಂದ ಆರಂಭಗೊಂಡಿತ್ತು. ಎಡಪಂಥ ಮತ್ತು ಬಲಪಂಥ ಇವುಗಳ ಎರಡರ ನಡುವಣ ಛಾಯೆಯ ಸಮಾಜವಾದದ ನೆರಳಿನಲ್ಲಿ ಸರ್ಕಾರಿ ಅಂಕೆ ಮತ್ತು ಒಡೆತನಗಳಲ್ಲಿ ಬೃಹತ್ ಉದ್ಯಮ ಸಂಸ್ಥೆಗಳು ಹಾಗೂ ಅವುಗಳಿಂದ ನಡೆಯತೊಡಗಿದ್ದ ಘಟಕಗಳು ಕಂಗೊಳಿಸತೊಡಗಿದ್ದವು. ಪ್ರಧಾನಿ ಜವಹರಲಾಲ್‌ ನೆಹರೂ ಅವರು ಸರ್ಕಾರಿ ವಲಯ ಕಾರ್ಖಾನೆಗಳನ್ನು ‘ಆಧುನಿಕ ಭಾರತದ ದೇವಾಲಯ’ಗಳು ಎಂದು ಕರೆದರು. ಒಂದೊಂದು ಯಶಸ್ವಿ ಕಾರ್ಖಾನೆಯನ್ನೂ ‘ಆಭರಣ’, ‘ರತ್ನ’ ಎಂದು ಕರೆಯುವ ವಾಡಿಕೆ ಇತ್ತು. ಆದರೆ ಏನಾಗಿ ಹೋಯಿತು?

ಸಮಾಜವಾದ ಕುಸಿಯಿತು. ಇದಕ್ಕೆ ಸಂಬಂಧ ಇದ್ದಂತೆಯೋ, ಇಲ್ಲದಂತೆಯೋ ಸರ್ಕಾರಿ ಉದ್ಯಮಗಳು ನಷ್ಟ ಪೀಡೆ ಹತ್ತಿಸಿಕೊಂಡವು. ಜರ್ಝರಿತವಾದವು. ಸರ್ಕಾರಿ ಉದ್ಯಮ ಎಂದರೆ ಜನರಿಗೆ ಉದ್ಯೋಗ ಕೊಡುವುದಕ್ಕೆ ಮಾಡಿಕೊಂಡ ವ್ಯವಸ್ಥೆ ಎನಿಸಿಕೊಂಡಿತು. ನಷ್ಟ ಮಾಡಿಕೊಂಡರೂ ಪರವಾಗಿಲ್ಲ ಎನ್ನುವಂತೆ ಆಯಿತು. ‘ಲಾಭ ಮಾಡುತ್ತಿಲ್ಲವೇಕೆ?’ ಎಂದು ನಷ್ಟಗೊಂಡ ಸರ್ಕಾರಿ ವಲಯ ಉದ್ಯಮ ಸಂಸ್ಥೆಗಳನ್ನು ಯಾವುದೇ ಸರ್ಕಾರ ಪ್ರಶ್ನಿಸಲಿಲ್ಲ. ಅಲ್ಲಿಯೇ ತಪ್ಪು ಆಗಿದ್ದು. ಹಸು ಬರಡಾಗುವತನಕ ರಾಜಕಾರಣಿಗಳು ಮತ್ತು ಅಧಿಕಾರಶಾಹಿಗೆ ಸೇರಿದವರು ಹಾಲು ಹಿಂಡಿಕೊಂಡರು, ಸ್ವಂತ ಲಾಭಕ್ಕೆ. ಸಂಪನ್ಮೂಲ ಸೋರಿಹೋಯಿತು. ವರ್ಷೇ ವರ್ಷೆ ದಶಕಗಳ ಪರ್ಯಂತ, ಬಹುತೇಕ ಸರ್ಕಾರಿ ವಲಯ ಘಟಕಗಳ ಹಣೆಯ ಬರಹ ಇದೇ ಆಯಿತು.

ಆದರೆ ೧೯೯೦ರ ದಶಕದ ಆರಂಭದೊಂದಿಗೆ ಪರಿಸ್ಥಿತಿ ಬದಲಾಯಿತು. ದುಡಿಯುವ ವಯಸ್ಸಿದ್ದರೂ, ಮನಸ್ಸಿಲ್ಲದ ಉಡಾಳನನ್ನು ತಂದೆತಾಯಿ ದಂಡಿಸುವ ರೀತಿ, ಲಾಭ ಮಾಡದ ಉದ್ಯಮ ಉಳಿಯಕೂಡದು ಎನ್ನುವುದೇ ನೀತಿ. ಲಾಭ ಮಾಡುತ್ತಿರುವ ಉದ್ಯಮದ ಒಡೆತನವನ್ನೂ ಆಂಶಿಕವಾಗಿ ಜನರಿಗೆ, ಖಾಸಗಿ ವಲಯಗದವರಿಗೆ ಬಿಟ್ಟು ಕೊಡುವುದೇ ನೀತಿ. ಬಂಡವಾಳದ ಪಾಲನ್ನು ಹಂಚಿದಾಗ ಲಾಭ ಸಾಧ್ಯತೆಯನ್ನು ಮಾತ್ರವಲ್ಲದೆ ನಷ್ಟ ಸಾಧ್ಯತೆಯನ್ನು ಸಹಾ ಹಂಚಿದಂತೆಯೇ ಸರಿ. ಸರ್ಕಾರದ ಅಂಕೆ ಆರೈಕೆಯಲ್ಲಿ ಬೆಳೆಯಲು ಸಾಧ್ಯವಿಲ್ಲದಾಗ ಕೂಸು ಕಂಡವರ ಮಡಿಲು ಸೇರಿಯಾದರೂ ಬೆಳೆಯಬೇಕು. ಷೇರು ವಿಕ್ರಯದ ಗುರಿ ಅದೇ.

ನಷ್ಟ, ಸಂಪನ್ಮೂಲ ಪೋಲು ಮುಂತಾದವೆಲ್ಲ ಮಾರುಕಟ್ಟೆ ಆರ್ಥಿಕತೆಯಲ್ಲಿ ಸಲ್ಲುವ ಮಾತಲ್ಲ. ಉದಾರೀಕರಣದ ಗುರಿ ಜಡತ್ವವನ್ನು ಚೆಲ್ಲಿಕೊಳ್ಳುವುದೇ ಸರಿ.

ಈ ತನಕ ಕೇಂದ್ರ ಸರ್ಕಾರ ೫೦೦೦ ಕೋಟಿ ಡಾಲರ್‌ನಷ್ಟು (೨,೫೦,೦೦೦ ಕೋಟಿ ರೂಪಾಯಿನಷ್ಟು) ಹಣವನ್ನು ೩೨೬ ಸರ್ಕಾರಿ ವಲಯ ಘಟಕದಲ್ಲಿ, ೨೭ ಬ್ಯಾಂಕುಗಳಲ್ಲಿ ಮತ್ತು ಎರಡು ವಿಮಾ ಕಂಪೆನಿಗಳಲ್ಲಿ ಬಂಡವಾಳವಾಗಿ ತೊಡಗಿಸಿದೆ. ರಾಜ್ಯ ಸರ್ಕಾರಗಳು ಸಹಾ ೧೦೦೦ಕ್ಕೂ ಅಧಿಕ ಸಂಖ್ಯೆ ಸರ್ಕಾರಿ ನಷ್ಟ ಸಾಧ್ಯತೆಗಳೇ ವಿಜೃಂಭಿಸಿರುವಾಗ ಷೇರುಗಳನ್ನು ಕೊಳ್ಳುವವರಾರು?

ಉದ್ಯಮ ಘಟಕಗಳು ನಷ್ಟಕ್ಕೆ ಹೆಸರಾಗಿದ್ದರೂ ಷೇರು ಕೊಳ್ಳುವವರು ಏಕೆ ಮುಂದೆ ಬರಬೇಕು? ಸರ್ಕಾರಿ ವಲಯ ಉದ್ಯಮಗಳಿಗೆ ಕಾಯಕಲ್ಪ ಮಾಡುವುದರಿಂದ ಲಾಭವೇನು? ಹೂಡಿಕೆದಾರ ಈ ಪ್ರಶ್ನೆಗಳನ್ನು ಸಹಜವಾಗಿ ಎತ್ತುತ್ತಾನೆ.

ಈ ವಲಯದ ಘಟಕಗಳು ಕೆಟ್ಟ ನಿಭಾವಣೆಯಿಂದ, ತಂತ್ರಜ್ಞಾನ ಹಳತಾದ್ದರಿಂದ, ಉತ್ಪನ್ನಗಳ ವೈಖರಿ ಬದಲಾದ್ದರಿಂದ ನಿರುಪಯುಕ್ತ ಆಗಿರುತ್ತವೆ ನಿಜ. ಆದರೆ ಈ ಘಟಕಗಳ ಬಳಿ ಆಸ್ತಿ ಎಂಬುದಿರುತ್ತದೆ. ಮುಖ್ಯವಾಗಿ ಜಮೀನು. ಯಂತ್ರೋಪಕರಣಗಳೂ ಉಪಯೋಗಕ್ಕೆ ಬರಲಿಕ್ಕೆ ಸಾಕು. ಕುಶಲ ಕೆಸಲಗಾರರು, ತಜ್ಞರು ಒಳ್ಳೆಯ ಸಂಪನ್ಮೂಲವೇ ಸರಿ. ಎಲ್ಲಕ್ಕಿಂತ ಹೆಚ್ಚಾಗಿ ಘಟಕಗಳು ತಮ್ಮ ಉತ್ಪನ್ನದಿಂದ ಒಳ್ಳೆಯ ಹೆಸರು ಮಾಡಿರುತ್ತವೆ. ಅವುಗಳ ಬ್ರ್ಯಾಂಡ್‌ ಸ್ವಂತಃ ಬೆಲೆ ಬಾಳುವಂಥದು. ಚೆನ್ನಾಗಿ ವ್ಯವಹಾರ ನಡೆಸುವವರ ಕೈಗೆ ಉದ್ಯಮ ಘಟಕ ಚೆನ್ನಾಗಿ ಸಿಗುವಂತಾದರೆ ಅದರ ಆರೋಗ್ಯ ಕುದುರುವುದು ಖಚಿತ.

ಹಾಗೆ ಕುದುರಿಸಬಲ್ಲವರು ಸರ್ಕಾರ ಕೊಡಮಾಡುವ ಷೇರುಗಳನ್ನು ಖರೀದಿಸುತ್ತಾರೆ. ಆಡಳಿತವನ್ನು ಕೈಗೆತ್ತಿಕೊಳ್ಳುತ್ತಾರೆ. ಕೆಂಪು ಪಟ್ಟಿಯಿಂದ ಹಸಿರು ವಲಯಕ್ಕೆ ಅವನ್ನು ಮಾರ್ಪಡಿಸುತ್ತಾರೆ. ಇಂಥವರೇ ಷೇರು ವಿಕ್ರಯದಲ್ಲಿ ಆಸಕ್ತಿ ಉಳ್ಳವರು. ಈ ತನಕ ಷೇರು ಪೇಟೆಗೆ ಬರದೇ ಇದ್ದ ಸರ್ಕಾರಿ ವಲಯ ಕಂಪೆನಿಗಳ ಷೇರುಗಳು ಮಾರಾಟಕ್ಕೆ ಬರುತ್ತಿವೆ. ಲಾಭ ಮಾಡುವ ಸಾಧ್ಯತೆಗಳು ಇರುವುದರಿಂದ ಸಾರ್ವಜನಿಕರು ಸಹ ಖರೀದಿಸಲು ಮುಂದಾಗುತ್ತಾರೆ.

ಉದ್ಯಮಶೀಲ ಜನ, ಮುಖ್ಯವಾಗಿ ಖಾಸಗಿ ವಲಯದವರು ಷೇರು ಖರೀದಿ ಮಾಡಿ ಮೊಟ್ಟಮೊದಲು ಹೆಚ್ಚುವರಿ ಇರುವ ಜನರನ್ನು ತೊಲಗಿಸಿಕೊಳ್ಳಲು ತೊಡಗುತ್ತಾರೆ. ನಾನಾ ಆಮಿಷ ಒಡ್ಡಿ ಸ್ವಯಂ ನಿವೃತ್ತಿಗೆ ಒಳಪಡಿಸುತ್ತಾರೆ. ಕಾರ್ಮಿಕರಿಂದ ತೊಂದರೆ ಖಚಿತ ಎನ್ನುಂಥ ಕಡೆ ಕೈ ಹಾಕುವುದೇ ಇಲ್ಲ. ತೊಡಗಿಸುವ ಜನ, ಯಂತ್ರ, ಹಣ ಮುಂತಾದವು ದುಬಾರಿ ಆಗದಂತೆ ನೋಡಿಕೊಳ್ಳುತ್ತಾರೆ, ಜಯಶಾಲಿಗಳಾಗುತ್ತಾರೆ.

ಮೇಲ್ನೋಟಕ್ಕೆ ಇದೆಲ್ಲವೂ ಸರಳವಾಗಿ ಕಂಡರೂ ಗೋಲ್‌ಮಾಲ್‌ಗಳಿಂದಾಗಿಯೇ ಷೇರುವಿಕ್ರಮ ವಿದ್ಯಮಾನ ಹೆಸರು ಪಡೆದಿದೆ.

ಯಾವುದೇ ಸರಕಿನ ಬೆಲೆ ಒಂದು ರೂಪಾಯಿ ಇದ್ದರೂ, ಮಾರುವ ಅಧಿಕಾರವುಳ್ಳವನು ಹಾಗೂ ಖರೀದಿಸಲು ಆಸಕ್ತನಾದವನೂ ಪರಸ್ಪರ ಷಾಮೀಲಾಗಿ ಆ ಸರಕನ್ನು ೨೫ ಪೈಸೆಗೋ ೩೫ ಪೈಸೆಗೋ ವಿಕ್ರಯಿಸಿದಂತೆ ಹಾಗೂ ಖರೀದಿಸಿದಂತೆ ನಾಟಕವಾಡಿದರೆ? ಸರಕಿನ ಮಾಲೀಕ ಮಾರಾಟ ಅಧಿಕಾರವನ್ನು ಯಾರಿಗೋ ಕೊಟ್ಟಾಗ ಇದು ನಿಜವಾಗಿ ಸಾಧ್ಯ. ಇಲ್ಲಿ ಆಗಿರುವುದು ಹೀಗೆಯೇ. ಆಸ್ತಿಯ ಮಾಲೀಕರಾದ ಜನರು ಷೇರು ವಿಕ್ರಯದ ಅಧಿಕಾರವನ್ನು ಸರ್ಕಾರಕ್ಕೆ, ಸಚಿವರಿಗೆ ಕೊಟ್ಟು ಆಗಿದೆ; ಅಥವಾ ಆ ಅಧಿಕಾರವನ್ನು ಅವರು ತಂದುಕೊಂಡುಬಿಟ್ಟಿದ್ದಾರೆ. ಈ ಸಂದರ್ಭದಲ್ಲೇ ನಾನಾ ಬಗೆಯ ವ್ಯವಹಾರ ನಡೆಯುವುದು. ರೂಪಾಯಿ ಸರಕು ಅದರ ಒಂದು ಪಾಲಿನ ಬೆಲೆಗೆ ಮಾರಾಟ ಆಗುವುದು.

ಕೇಂದ್ರ ಸರ್ಕಾರಕ್ಕಾದರೋ ಆಸ್ತಿಯನ್ನೆಲ್ಲ ಮಾರಿಕೊಳ್ಳಲು ಸಾಧ್ಯವಿಲ್ಲ. ೨೫೦ ಸಾವಿರ ಕೋಟಿ ರೂಪಾಯಿನಷ್ಟು ಇದ್ದರೂ ತೇಜಿ ವ್ಯಾಪಾರ ನಡೆಯುತ್ತಿಲ್ಲ. ಷೇರುವಿಕ್ರಯ ಮೊದಲಿಟ್ಟ ೯೧ ರಿಂದ ಕಳೆದ ವರ್ಷದವರೆಗೆ, ಅಂದರೆ ಹತ್ತು ವರ್ಷಗಳಲ್ಲಿ ೪೨ ಸರ್ಕಾರಿ ವಲಯ ಘಟಕಗಳು ಷೇರನ್ನು ಮಾರಿ ಕೇಂದ್ರ ಸರ್ಕಾರ ಸಂಗ್ರಹಿಸಿದ್ದು ಕೇವಲ ೪೮೦ ಕೋಟಿ ಡಾಲರ್‌ನಷ್ಟು (ಅಂದರೆ ೨೪೦೦೦ ಕೋಟಿ ರೂಪಾಯಿ ನಷ್ಟು) ಮಾತ್ರ. ಶೇ.೧೦ಕ್ಕಿಂತ ಕಡಿಮೆ ಮಾರಾಟ ಸಾಧನೆ!

ಏಕೆ ಹೀಗೆ? ಕಾರಣಗಳು ಎರಡು ಮಾತ್ರ. ಸರಕಿನ ಕಳಪೆತನ, ಉದ್ಯಮ ನಡೆಸಿ ಲಾಭ ಮಾಡಿಕೊಳ್ಳಬಲ್ಲವರ ಹಿಂಜರಿಕೆ. ಸದ್ಯ ದೇಶದಲ್ಲಿ ಹಿಂಜರಿತ ಪರಿಸ್ಥಿತಿ ಇದೆ. ಯಾವುದೇ ವ್ಯವಹಾರಕ್ಕೆ ಮುಂದೆ ಬರಬಲ್ಲವರು ಒಂದು ಬಾರಿಯಲ್ಲ, ನೂರು ಬಾರಿ ಯೋಚಿಸುವಂಥ ಪರಿಸ್ಥಿತಿ ಸದ್ಯ ಇದೆ. ಹಿಂಜರಿಕೆಗೆ ಅದೇ ಕಾರಣ.

ಆದರೆ ಕಳಪೆಯಲ್ಲದ ಸರಕಿನ ವಿಚಾರ ಬಂದಾಗ ಕಥೆ ಬೇರೆ. ಎರಡು ಉದಾಹರಣೆ ಈಚಿನ ತಿಂಗಳಲ್ಲಿನ ನಮ್ಮ ಮುಂದೆ ಧುತ್ತೆಂದು ಬಂದು ನಿಂತವು. ಭಾರತದ ಖಾಸಗಿ ವಲಯದಲ್ಲಿ ಭಾರಿಯಾಗಿ ಬೆಳೆದಿರುವುದು ಅಲ್ಯುಮಿನಿಯಂ ಉದ್ಯಮ. ಸರ್ಕಾರಿ ವಲಯದ ನಾಲ್ಕೊ ನ್ಯಾಷನಲ್‌, ಅಲ್ಯುಮಿನಿಯಂ ಕಂಪೆನಿ, ಷೇರುಗಳ ವಿಕ್ರಯಕ್ಕೆ ಯತ್ನಿಸಿದಾಗ ಅಡ್ಡಗಾಲು ಹಾಕುವವರ ಸಂಖ್ಯೆ ಬಹಳ. ರಂಪರಾದ್ಧಾಂತವಾಗಿ ನಾಲ್ಕೊ ಯಾರೊಬ್ಬರ ಕೈ ಸೇರದಂತೆ ಆಯಿತು.

ಇನ್ನೊಂದು ಉದಾಹರಣೆ ಎಂದರೆ ಭಾರತ್‌ ಪೆಟರೋಲಿಯಂ (ಬಿಪಿಸಿಎಲ್‌) ಮತ್ತು ಹಿಂದೂಸ್ತಾನ್‌ ಪೆಟ್ರೋಲಿಯಂ (ಎಚ್‌ಪಿಸಿಎಲ್‌) ಕಂಪೆನಿಗಳ ಷೇರುಗಳ ವಿಕ್ರಯಕ್ಕೆ ಹೋದಾಗ ಅಲ್ಲೋಲ-ಕಲ್ಲೋಲವಾಗುತ್ತಿದೆ. ಕೇಂದ್ರ ಸರ್ಕಾರದ ಭಾಗೀದಾರರಂತಿರುವ ಸಚಿವ ಸಮೂಹ ಎರಡಾಗಿ ಒಡೆದಿದೆ. ಷೇರು ವಿಕ್ರಯ ಸಲ್ಲದೆಂಬ ನಿಲುವಿಗೆ, ಹಾಗೆನ್ನುವವರ ಬೆಂಬಲಕ್ಕೆ, ಸಂಘ ಪರಿವಾರದ ನಿಯಂತ್ರಣ ಹೊಂದಿರುವ ಅರಸ್ಸೆಸ್‌ ನಿಂತಿದೆ ಎಂಬ ವರದಿಗಳು ಪ್ರಕಟವಾಗುವ ಮಟ್ಟಿಗೆ ವಿವಾದ ಪ್ರಕೋಪಿಸಿದೆ.

ಸುದ್ದಿ ಕಾಲಂಗಳನ್ನಷ್ಟೇ ಬೆದಕಿ ನೋಡಿದರೂ ಹಣ ಮಾಡುವ ದಿಕ್ಕಿನಲ್ಲಿ ಕೈಕಾಲು ಆಡಿಸುತ್ತಿರುವವರು ಯಾವ ರಾಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂಬುದು ಅರ್ಥವಾಗುತ್ತದೆ. ೧೮.೦೯. ೨೦೦೨.