ಕಂಪೆನಿ ಅಥವಾ ಇನ್ನಿತರ ವಹಿವಾಟು ಸಂಸ್ಥೆಗಳಲ್ಲಿ ಲಿಮಿಟೆಡ್‌ (ನಿಯಮಿತ) ಎಂಬ ಪದಕ್ಕೆ ಪಂಡಿತರು ತಾಂತ್ರಿಕವಾಗಿ ಏನೇ ವಿವರಣೆ ನೀಡಿದರೂ ಒಬ್ಬರಿಗಿಂತ ಹೆಚ್ಚು ಜನರು ಸಂಘಟಿತರಾದ ವ್ಯವಸ್ಥೆಯೆಂದು; ಯಾರೊಬ್ಬರಿಗೂ ಪೂರ್ತಿ ಹಕ್ಕು ಮತ್ತು ಜವಾಬ್ದಾರಿ ಇಲ್ಲದೆ ಬಿಡಿ ಬಿಡಿಯಾಗಿ ಒಡೆತನ ಸಾಧಿಸದವರಿಗೆ ನಿಯಮಿತವಾದ ಹಕ್ಕು ಮತ್ತು ಜವಾಬ್ದಾರಿ ಇದೆಯೆಂದೂ; ಒಬ್ಬರ ಬದಲು ಹಲವು ಜನ ಸಮಷ್ಟಿಯಿಂದ ಚಟುವಟಿಕೆ ನಡೆಸಿಕೊಂಡು ಹೋಗುವರೆಂದೂ ಅರ್ಥೈಸುವುದು ವಾಡಿಕೆ.

ಲಿಮಿಟೆಡ್‌ ಕಂಪೆನಿಯು ಪ್ರೈವೆಟ್‌ ಆಗಿದ್ದರೂ (ಅಂದರೆ ಖಾಸಗಿಯಾಗಿ ಸಾರ್ವಜನಿಕರಿಗೆ ಸಂಬಂಧ ಇಲ್ಲದಂತೆ ಸಂಘಟಿತವಾಗಿದ್ದರೂ); ಬದಲಿಗೆ ಪಬ್ಲಿಕ್‌ ಆಗಿದ್ದರೂ (ಅಂದರೆ ಸೀಮಿತ ವ್ಯಾಪ್ತಿಯ ಕುಟುಂಬ, ಗುಂಪು ಮತ್ತಿತರ ಸ್ವರೂಪಕ್ಕೆ ಹೊರತಾದ ವ್ಯಾಪ್ತಿಯ ಸಾರ್ವಜನಿಕ ಆಗಿದ್ದರೂ); ಬಿಡಿ ಬಿಡಿ ಒಡೆತನ ಹೊಂದಿರುವವರು ಷೇರುದಾರರೇ ಆಗಿರುತ್ತಾರೆ. ಷೇರು ಎಂಬುದು ಒಟ್ಟಾರೆ ಬಂಡವಾಳದ ಒಂದು ತುಣುಕು. ಷೇರುದಾರರು ಹೂಡಿದ ಹಣದಿಂದ ಅಸ್ತಿತ್ವಕ್ಕೆ ಬಂದ ಸಂಸ್ಥೆಯು ಕಾಲಾಂತರದಲ್ಲಿ ದೊಡ್ಡದಾಗಿ ಬೆಳೆದು ಆಸ್ತಿ ಪಾಸ್ತಿ ಜಮಾಯಿಸಿಕೊಂಡರೆ ತುಣುಕು ಷೇರಿನ ವಾಸ್ತವ ಮೌಲ್ಯ ಹಲವು ಪಟ್ಟು ಏರಿರುತ್ತದೆ.

ವಾಸ್ತವಾಂಶವೆಂದರೆ ವರ್ಷಗಳು ಉರುಳಿದ ಮೇಲೆ ಷೇರುಧನ ಚಿಕ್ಕ ಮೊತ್ತವಾಗಿ ಉಳಿದಿದ್ದರೂ, ಅದಕ್ಕಿರುವ ಮಹತ್ವವು ಅಧಿಕವಾಗಿರುತ್ತದೆ. ಏಕೆಂದರೆ ಷೇರುಗಳು ಕೈ ಬದಲಾಯಿಸಿದರೆ ಒಡೆತನ ಬದಲಾವಣೆಯೇ ಸರಿ. ಬಹುಪಾಲು ಷೇರುಗಳನ್ನು ವಶಮಾಡಿಕೊಂಡ ಜನ ನಿಜವಾದ ಒಡೆಯರಾಗಿ ಮಾರ್ಪಟ್ಟು ನಿರ್ಣಾಯಕರಾಗಿ ಬಿಡುತ್ತಾರೆ. ಸರ್ಕಾರಿ ವಲಯ ಕಂಪೆನಿಗಳಲ್ಲಿ ಷೇರುಗಳ ಒಡೆತನ ಸರ್ಕಾರದ ಬಿಗಿಮುಷ್ಟಿಯಲ್ಲಿ ಇರುತ್ತದೆ. ಖಾಸಗೀಕರಣ ನೀತಿಯನ್ನು ಅಂಗೀಕರಿಸಿದ ಕಾರಣ ಯಾವುದೇ ಸರ್ಕಾರವು ತನ್ನ ವ್ಯಾಪ್ತಿಯ ಸರ್ಕಾರಿ ವಲಯ ಕಂಪೆನಿಯ ಷೇರುಗಳನ್ನು ಬೇರೆಯವರಿಗೆ, ಮುಖ್ಯವಾಗಿ ಖಾಸಗಿಯವರಿಗೆ, ಮಾರಿದರೆ ಒಡೆತನ ವರ್ಗಾವಣೆಯಾಗುತ್ತದೆ. ಷೇರು ವಿಕ್ರಯದ ಉದ್ದೇಶ ಅದೇ. ಸರ್ಕಾರಿ ವಲಯ ಕಂಪೆನಿಗಳು ಬಹುಪಾಲು ಪ್ರಸಂಗಗಳಲ್ಲಿ ಜಡ್ಡುಗಟ್ಟಿ ಹೋಗಿರುತ್ತವೆ. ಲಾಭಕಾರಿಯಾಗಿ ಕೆಲಸ ನಿರ್ವಹಿಸುತ್ತಿರುವುದಿಲ್ಲ. ಹೂಡಿದ ಬಂಟವಾಳ, ತೊಡಗಿಸಿಕೊಂಡ ಮಾನವ ಸಂಪನ್ಮೂಲ ಉಪಯೋಗಕ್ಕೆ ಬಾರದಂತೆ ಆಗಿರುತ್ತದೆ. ಯಂತ್ರೋಪಕರಣ ಮತ್ತು ಜಮೀನು ಮಾತ್ರ ಒಂದಿಷ್ಟು ಬೆಲೆ ತರುವಂತೆ ಇರುತ್ತದೆ. ಆಗೆಲ್ಲ ಸರ್ಕಾರವು ಷೇರುವಿಕ್ರಯ ಮಾಡಿ ಕೈತೊಳೆದುಕೊಳ್ಳುತ್ತದೆ. ಖಾಸಗಿ ವಲಯದಲ್ಲೂ ಷೇರುವಿಕ್ರಯ ನಡೆಯುತ್ತದೆ. ಅದು ವಿವಾದಿತ ಆಗುವುದು ಕಡಿಮೆ. ನಷ್ಟವಾದರೂ ಲಾಭವಾದರೂ ಖಾಸಗಿಯವರದು. ಸರ್ಕಾರಿ ವಲಯದ ಉದ್ಯಮದ ಷೇರು ವಿಕ್ರಯ ಹಾಗಲ್ಲ. ತೆರಿಗೆದಾರನ ಹಣದಿಂದ ಸೃಜಿಸಲಾದ ಆಸ್ತಿಯ ವರ್ಗಾವಣೆ ಆಗಿರುತ್ತದೆ. ಈ ಕಾರಣದಿಂದ ವಿವಾದ ಏಳುತ್ತದೆ. ಪ್ರತಿ ಪ್ರಸಂಗದಲ್ಲೂ ಶಂಕೆ ಅನುಮಾನ. ಏಕೆಂದರೆ ವ್ಯವಹಾರದಲ್ಲಿ ಅಕ್ರಮ ನಡೆದರೆ ಲಾಭವಾಗುವುದು ಇನ್ನಾರಿಗೋ; ಅದೇ ತೊಂದರೆ.

ಈ ವರ್ಷ ಷೇರು ವಿಕ್ರಯದಿಂದ ೧೨೦೦೦ ಕೋಟಿ ರೂಪಾಯಿ ಹಣ ಸಂಗ್ರಹಿಸಬೇಕೆಂಬುದು ಸರ್ಕಾರದ ಗುರಿ ಆಗಿತ್ತು. ಸಾಧ್ಯವಾಗಿದ್ದು ಕೇವಲ ೪೬೨ ಕೋಟಿ ರೂಪಾಯಿನಷ್ಟು ವಿಕ್ರಯ ಮಾತ್ರ.

ತಕರಾರಿಗೆ ಬಿದ್ದ ಭಾರತ ಅಲ್ಯುಮಿನಿಯಂ ಕಂಪೆನಿ (ಬಾಲ್ಕೋ)ಷೇರು ವಿಕ್ರಯ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ಈಚೆಗೆ ಒಂದು ಚಾರಿತ್ರಾರ್ಹ ತೀರ್ಪು ನೀಡಿತು. ಇನ್ನು ಮುಂದೆ ಷೇರು ವಿಕ್ರಯ ಪ್ರಕರಣಗಳಲ್ಲಿ ತಕರಾರು ಕಡಿಮೆ ಆಗಲಿಕ್ಕೆ ಈ ತೀರ್ಪು ದಾರಿ ಮಾಡಿಕೊಡುತ್ತದೆ ಎಂಬ ನಿರೀಕ್ಷೆ ಇದೆ.

ಷೇರು ವಿಕ್ರಯ ಸಂಬಂಧ ಸರ್ಕಾರ ರೂಪಿಸುವ ನೀತಿ ಏನಿರುವುದೋ ಅದರ ಗುಣಾವಗುಣ ವಿಮರ್ಶೆ ಮಾಡುವುದು ಕೋರ್ಟಿಗೆ ಸೇರಿದ್ದಲ್ಲ; ಅದು ಏನಿದ್ದರೂ ಸಂಸತ್ತಿಗೆ ಸೇರಿದ್ದು. ಈ ಅಂಶವನ್ನು ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ.

ಸಾರ್ವಜನಿಕ ಹಿತಾಸಕ್ತಿ ಎಂಬುದು, ಉದ್ಯಮದ ಕಾರ್ಮಿಕ ವರ್ಗದ ಹಿತಕ್ಕೆ ವಿರುದ್ಧವಾಗಿದ್ದರೂ ಅದಕ್ಕೆ ಮನ್ನಣೆ ಸಿಗಬೇಕಾದ್ದೇ ಸರಿ ಎಂಬುದು ಸಹಾ ಸುಪ್ರೀಂಕೋರ್ಟ್‌ನ ಅಂಬೋಣ.

ಸುಪ್ರೀಂಕೋರ್ಟ್‌ನ ಮೂವರು ನ್ಯಾಯಮೂರ್ತಿಗಳ ನ್ಯಾಯಪೀಠವೊಂದು ಪಾಸು ಮಾಡಿದ ತೀರ್ಪು ಒಂದು ಮುಖ್ಯವಾದ ಪ್ರಶ್ನೆಗೆ ಉತ್ತರ ನೀಡಿದೆ. ಆರ್ಥಿಕ ನೀತಿ ಎಂಬುದನ್ನು ನಿರ್ಣಯಿಸುವುದು ಶಾಸಕಾಗದ ಹಕ್ಕೋ ಅಥವಾ ಅದು ನ್ಯಾಯಾಂಗದ ತೀರ್ಮಾನಕ್ಕೆ ಒಳಪಟ್ಟುದೋ? ಅದು ಪೂರ್ಣವಾಗಿ ಶಾಸಕಾಂಗದ್ದೆಂದೇ ಕೋರ್ಟು ಸ್ಪಷ್ಟ ಮಾತುಗಳಲ್ಲಿ ಹೇಳಿದೆ.

ಇದರ ಪರಿಣಾಮವೆಂದರೆ ಮುಂದೆ ಷೇರು ವಿಕ್ರಯ ಪ್ರಸಂಗಗಳನ್ನು ತೀರ್ಮಾನ ಮಾಡಲು ಕೋರ್ಟು ಇಷ್ಟಪಡುವುದಿಲ್ಲ. ಕಾನೂನು ಉಲ್ಲಂಘನೆಯಾಗಿದ್ದರೆ ಅಥವಾ ಸಂವಿಧಾನ ವಿರೋಧಿ ಆಗಿದ್ದರೆ ಮಾತ್ರ ಕೋರ್ಟ್‌ ತೀರ್ಪಿನ ಅಗತ್ಯ ಬೀಳಬಹುದು ಮಾತ್ರ. ಅಂದರೆ ಕ್ಷುಲ್ಲಕ ಕಾರಣಗಳಿಗಾಗಿ ಕೋರ್ಟುಗಳನ್ನು ಎಳೆದು ತರಬಾರದು ಎಂದೇ ಅರ್ಥ.

ತೀರ್ಪಿನ ಅತ್ಯಂತ ಗಮನಾರ್ಹ ಅಂಶ ಎಂದರೆ ಕಾರ್ಮಿಕರ ಪಾತ್ರ ಕುರಿತಂತೆ ಹೇಳಿರುವುದು. ಯಾವುದೇ ಸರ್ಕಾರಿ ವಲಯ ಉದ್ಯಮವನ್ನು ಖಾಸಗೀಕರಣಗೊಳಿಸುವಾಗ ಸರ್ಕಾರವು ಅದರಲ್ಲಿರುವ ನೌಕರ ವರ್ಗವನ್ನು ಕೇಳುವ ಅಗತ್ಯವಿಲ್ಲವೆಂದು ತೀರ್ಪಿನಲ್ಲಿ ಕೋರ್ಟು ಸ್ಪಷ್ಟವಾಗಿ ತಿಳಿಸಿದೆ. ಅಂದರೆ ಹೊಸ ಮಾಲೀಕರು ಯಾರು ಆಗಬೇಕೆಂದು ನಿರ್ಣಯಿಸುವ ಹಕ್ಕು ಕೆಲಸಗಾರರಿಗೆ ಇರುವುದಿಲ್ಲ. ಷೇರುವಿಕ್ರಯ ಕುರಿತಂತೆ ಸರ್ಕಾರ ಕೈಗೊಳ್ಳುವ ಯಾವುದೇ ನಿರ್ಣಯವು ಅದರ ಕರ್ತವ್ಯ ಪಾಲನೆಯ ಅಂಶವಾಗಿರುತ್ತದೆ. ಈ ಬಗೆಯ ತೀರ್ಪು ವಾಸ್ತವವಾಗಿ ಕೆಲಸಗಾರರ ಮುಖಕ್ಕೆ ಮಾಡಿದ ಮಂಗಳಾರತಿಯಷ್ಟಲ್ಲದೆ ಬೇರೇನಲ್ಲ. ಏಕೆಂದರೆ ಕೆಲಸಗಾರರು ತಮ್ಮ ಹಿತಕ್ಕೆ ಭಂಗ ಬಂದಿದೆ ಎಂಬ ಕಾರಣವೊಡ್ಡಿ ಖಾಸಗೀಕರಣ ಕುರಿತ ಹಲವು ಯತ್ನಗಳಿಗೆ ಈವರೆಗೆ ಅಡ್ಡಗಾಲು ಹಾಕಿದ್ದಾರೆ.

ಭಾಲ್ಕೊ ಪ್ರಕರಣದಲ್ಲಿ ಶೇ. ೫೧ರಷ್ಟು ಷೇರುಗಳನ್ನು ವರ್ಗಾಯಿಸುವ ಪ್ರಸ್ತಾವಕ್ಕೆ ಅಡ್ಡಿ ಉಂಟುಮಾಡುವ ತಕರಾರು ಅರ್ಜಿಯಲ್ಲಿ ಕೆಲಸಗಾರರು ಈ ವ್ಯವಹಾರದಲ್ಲಿ ತಮ್ಮನ್ನು ಕೇಳಲಿಲ್ಲ ಎಂಬ ಅಂಶವನ್ನೇ ಆಕ್ಷೇಪಣೆಗೆ ಇರುವ ಕಾರಣಗಳಲ್ಲಿ ಒಂದು ಎಂಬುದಾಗಿ ನಮೂದಿಸಿದ್ದರು. ಆದರೆ ಪ್ರಸಕ್ತ ತೀರ್ಪಿನಿಂದಾಗಿ, ಷೇರುಗಳ ಸಂಬಂಧ ಕಂಪೆನಿಯ ಡೈರಕ್ಟರರು ಮತ್ತು ಷೇರುದಾರರು ತಮಗೆ ಬೇಕಾದ ಹಾಗೆ ನಿರ್ಣಯ ಕೈಗೊಳ್ಳಬಹುದು ಎಂದಾಗಿದೆ.

ಮಾತೆತ್ತಿದರೆ ಸರ್ಕಾರಿ ನೀತಿ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಪ್ರಕರಣವನ್ನು ಕೋರ್ಟಿನಲ್ಲಿ ದಾಖಲೆ ಮಾಡುವ ಜನರ ಪ್ರವೃತ್ತಿಗೂ ತೀರ್ಪು ಛೀಮಾರಿ ಹಾಕಿದೆ. ಸಾರ್ವಜನಿಕ ಹಿತಾಸಕ್ತಿಯ ಪ್ರತಿಯೊಂದು ಅಂಶವೂ ತಕರಾರು ಅರ್ಜಿಗೆ ವಸ್ತುವಾಗಬೇಕಿಲ್ಲ ಎಂದು ಹೇಳಿದೆ.

ಚರಿತ್ರಾರ್ಹ ತೀರ್ಪಿನ ತಾತ್ವಿಕ ಪರಿಣಾಮಗಳು ಹೀಗಿರುವುದರ ಜೊತೆಗೆ ವಾಸ್ತವವಾಗಿ ಕೆಲವರಿಗೆ ಸಂತೋಷವಾಗಿರುವುದು ನಿಜ. ಪ್ರತಿ ಖಾಸಗೀಕರಣ ಪ್ರಕರಣದಲ್ಲೂ ಅಡೆತಡೆ ಎದುರಿಸಿದ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ಅವರಿಗೂ, ಷೇರು ವಿಕ್ರಯ ಖಾತೆ ಹೊಂದಿರುವ ಮಾಜಿ ಪತ್ರಕರ್ತ ಅರುಣಶೌರಿ ಅವರಿಗೂ ಸಹಜವಾಗಿ ಸಂತೋಷವಾಗಿದೆ. ಬಹಳ ದುಃಖವಾಗಿರುವುದೆಂದರೆ ಛತ್ತೀಸ್‌ಗಢ ಮುಖ್ಯಮಂತ್ರಿ ಅಜಿತ್‌ ಜೋಗಿ ಅವರಿಗೆ, ಏಕೆಂದರೆ ಭಾಲ್ಕೋ ಪ್ರಕರಣದಲ್ಲಿ ಭಾರೀ ಧೂಳು ಎಬ್ಬಿಸಿದ್ದು ಅವರೇ. ಈಗ ಆರ್ಥಿಕ ನೀತಿ ವಿರೋಧಿಸುವ ಮೂಲಕ ರಾಜಕೀಯ ಲಾಭ ಮಾಡಿಕೊಳ್ಳುವಂತಿಲ್ಲ ಎಂಬುದು ನೀತಿ ಪಾಠವಾಗಿದೆ.

ಇಷ್ಟೆಲ್ಲ ಆಗಿ ಷೇರುವಿಕ್ರಯ ಕುರಿತಂತೆ ಎಲ್ಲ ಆತಂಕ ದೂರವಾಗಿ ನೆನೆಗುದಿಗೆ ಬಿದ್ಧ ವ್ಯವಹಾಗಳೆಲ್ಲ ಕುದುರಿಬಿಡುವುದೆ? ವಾಸ್ತವವಾಗಿ ಷೇರು ವಿಕ್ರಯಕ್ಕೆ ಅಷ್ಟೊಂದು ಪ್ರಶಸ್ತ ಸನ್ನಿವೇಶ ಸದ್ಯ ಇಲ್ಲವೇ ಇಲ್ಲ. ಆರ್ಥಿಕ ಚಟುವಟಿಕೆ ಮಂದ ಸ್ಥಾಯಿಯಲ್ಲಿದ್ದು ಮಾಮೂಲು ಚಟುವಟಿಕೆ ಸಹಾ ಸಹಜವಾಗಿ ನಡಯುತ್ತಿಲ್ಲ. ನಿರುದ್ಯೋಗವು ತಳಮಳ ಹುಟ್ಟಿಸಿದ್ದರೂ ಕ್ಷೋಭೆಗೆ ಕರಣವಾಗುವುದಿಲ್ಲ. ಷೇರು ವಿಕ್ರಯವೇನಾದರೂ ಜೋರಾಗಿ ನಡೆದರೆ ತಕ್ಷಣ ಹಾನಿಯಾಗುವುದು ಕಾರ್ಮಿಕ ವರ್ಗಕ್ಕೇ ಸರಿ. ಕಾರ್ಮಿಕ ಹಿತವನ್ನು ಮುಂದಿಟ್ಟುಕೊಂಡು ಉದ್ಯಮ ವರ್ಗಾವಣೆಗೆ ವಿರೋಧಿಸುವಂತಿಲ್ಲ ಎಂಬುದು ನಿಜವಾದರೂ, ಕಾರ್ಮಿಕವ ವರ್ಗಕ್ಕಾಗುವ ಹಾನಿಯನ್ನು ಹಾಗೂ ಅದರ ಪರಿಣಾಮಗಳನ್ನು ಎದುರಿಸುವುದು ಹೇಗೆ ಎಂಬುದು ನಿಜವಾಗಿ ಒಂದು ಸವಾಲಾಗಿ ಪರಿಣಮಿಸುತ್ತದೆ.