ಷೇರು ಖರೀದಿ ಎಂದರೆ ಸಣ್ಣ ಹೂಡಿಕೆದಾರರಿಗೆ ನಡುಕ. ಷೇರು ಬೆಲೆ ಏರುವುದೆಂದು ನಂಬಿ ಕೈಲಿದ್ದುದನ್ನು ಕಳೆದುಕೊಂಡ ಕಟು ಅನುಭವ ಅವರದು.

ಕುಖ್ಯಾತ ಹರ್ಷದ್‌ ಮೆಹ್ತಾ ವಿದ್ಯಮಾನದಲ್ಲಿ ಆತ ಮತ್ತು ಆತನ ಸಂಗಡಿಗರು ಹಲವು ಹತ್ತು ಸಹಸ್ರ ಕೋಟಿ ರೂಪಾಯಿ ಹಣವನ್ನು ಗುಡ್ಡೆ ಹಾಕಿ ಬಾಚಿಕೊಂಡರು. ಷೇರುಪೇಟೆಯನ್ನು ಈ ಜನ ಮುಷ್ಟಿಗೆ ತೆಗೆದುಕೊಂಡು ಏನೆನೆಲ್ಲ ಮಾಡಿದರು ಎಂಬುದು ಈಗ ಚರಿತ್ರೆ.

ಯಾರೋ ಒಬ್ಬರು ಹಣ ಮಾಡಿದ್ದರೆ, ಅದೇ ಹಣವನ್ನು ಕಳೆದುಕೊಂಡವರು ಇನ್ನಾರೋ ಇರಬೇಕಷ್ಟೇ. ಆ ಇನ್ಯಾರೋ ಈ ಸಣ್ಣ ಹೂಡಿಕೆದಾರರೇ. ಷೇರು ಬೆಲೆಗಳು ಏರುತ್ತಲೇ ಇರುವುದನ್ನು ಕಂಡು, ಮನೆ ಆಸ್ತಿ ಮಾರಿ ಹಾಗೂ ಸಾಲ ಮಾಡಿ ಷೇರು ಖರೀದಿಸಿ, ಅದರ ಬೆಲೆ ಇಳಿದಾಗ ನಷ್ಟಪಟ್ಟು ಪರಿತಪಿಸಿದವರು.

ಷೇರು ವಹಿವಾಟುದಾರರು, ಅಂದರೆ ಷೇರು ವ್ಯಾಪಾರ ಮಾಡುವವರು ಹಾಗೂ ಷೇರು ಬ್ರೋಕರರು, ಸದಾಕಾಲ ಷೇರು ಬೆಲೆ ಏರಿಸುವಲ್ಲಿ ಅಥವಾ ಇಳಿಸುವಲ್ಲಿ ನಿರತರಾಗಿರುತ್ತಾರೆ. ಅದೇ ಅವರ ದಂಧೆ. ಏರುತ್ತಾ ಇಳಿಯುತ್ತಾ ಇದ್ದರೆ ಮಾತ್ರವೇ ಮಾರುವವರು ಮತ್ತು ಕೊಳ್ಳುವವರು ಸಿದ್ಧರಾಗುತ್ತಾ ಇರುತ್ತಾರೆ. ಬೆಲೆ ಏರಿಕೆ ಮತ್ತು ಇಳಿತಗಳು ಷೇರುಪೇಟೆಯ ಉಚ್ಚ್ವಾಸ ನಿಶ್ವಾಸಗಳು. ಉಸಿರಾಟ ನಿಂತರೆ ಜೀವವೆಲ್ಲಿ? ಷೇರುಪೇಟೆಯದೂ ಅದೇ ಕತೆ.

ಆದರೆ ಅದರದು ಸಹಜ ಉಸಿರಾಟವಲ್ಲ, ಕೃತಕ ಉಸಿರಾಟ. ಗಾಳಿ ದೂಡುವ ಕೊಳವೆ ಮಾರ್ಗ ಕತ್ತರಿಸಿದರೆ ಮರಣವನ್ನು ಘೋಷಿಸಿದಂತೆಯೇ.

ಷೇರು ವಹಿವಾಟುದಾರರು ಅನೇಕ ಬಾರಿ ಪೇಟೆಯನ್ನು ಈ ಸ್ಥಿತಿಗೆ ತಂದಿದ್ದಾರೆ. ಹರ್ಷದ್‌ ಮೆಹ್ತಾ ಅಂಥವರು ಮತ್ತೆ ತಲೆ ಎತ್ತುವುದಿಲ್ಲ ಎಂದುಕೊಳ್ಳುತ್ತಿರುವಾಗಲೇ, ಸುಮಾರು ೧೦ ವರ್ಷಗಳ ನಂತರ ಕೇತನ್‌ ಪಾರೀಖ್‌ನಂಥವರು ಅವತರಿಸುತ್ತಾರೆ. ಷೇರುಪೇಟೆಯನ್ನೂ, ಜೊತೆಜೊತೆಗೆ ಅದನ್ನು ನಂಬಿದವರ ವಿಶ್ವಾಸವನ್ನೂ ಹಿಂಡುತ್ತಾರೆ.

ಇಂಥವರ ಕಾರ್ಯವಿಧಾನ ಸರಳ. ಆಯ್ದ ಕೆಲವು ಷೇರುಗಳನ್ನು ಹಿಡಿದುಕೊಳ್ಳುತ್ತಾರೆ. ಅವುಗಳನ್ನು ಖರೀದಿಸುವುದೇ ಅಲ್ಲದೆ ಮತ್ತೆ ಮತ್ತೆ ತಮ್ಮ ತಮ್ಮಲ್ಲೇ ಖರೀದಿ ಮಾರಾಟ ಮಾಡುತ್ತಾರೆ. ಇದರಿಂದ ಇದ್ದಕ್ಕಿದ್ದಂತೆ ಬೇಡಿಕೆ ಸೃಷ್ಟಿಯಾದಂತೆ ಭಾಸವಾಗುತ್ತದೆ. ಬೇರೆ ಇನ್ನಷ್ಟು ಮತ್ತಷ್ಟು ಖರೀದಿದಾರರು ಹುಟ್ಟಿಕೊಳ್ಳುತ್ತಾರೆ. ಆ ನಿರ್ದಿಷ್ಟ ಷೇರಿನ ಬೆಲೆ ಏರುತ್ತಾ ಹೋಗುತ್ತದೆ. ನಾಲ್ಕಾರು ಹಂತಗಳಲ್ಲಿ ಏರಿಕೆ ಮುಂದುವರೆಯುತ್ತದೆ. ಸಾಮಾನ್ಯ ಜನ ಸಹಾ ಹುಚ್ಚು ಹಿಡಿದವರಂತೆ ಖರೀದಿಸತೊಡಗುತ್ತಾರೆ. ಇಷ್ಟೆಲ್ಲ ಬೇಡಿಕೆ ಹುಟ್ಟು ಹಾಕಿದ ಈ ಮಂದಿ ತಾವು ಅಗ್ಗಕ್ಕೆ ಖರೀದಿಸಿದ ಷೇರುಗಳನ್ನು ಏರು ಬೆಲೆಗೆ ಮಾರಿ ಕೈತೊಳೆದುಕೊಳ್ಳುತ್ತಾರೆ. ಲಾಭ ಜೇಬಿಗೆ ತುಂಬಿಕೊಳ್ಳುತ್ತಾರೆ. ಈ ವೇಳೆಗೆ ಇವರ ಬಳಿ ಇದ್ದ ಷೇರುಗಳೇ ಅಲ್ಲದೆ ಹಿಂದೆ ಬೇಡಿಕೆ ಇಲ್ಲದಿದ್ದಾಗ ಎಲ್ಲೆಲ್ಲೋ ನೆಲೆ ಕಂಡಿದ್ದ ಮೂಲದ ಷೇರುಗಳೆಲ್ಲ ಚಲಾವಣೆಗೆ ಬಂದಿರುತ್ತದೆ. ಪಟ್ಟಭದ್ರಹಿತ ಎನಿಸಿದ ಈ ಷೇರು ವಹಿವಾಟುದಾರರು ಇದ್ದಕ್ಕಿದ್ದಂತೆ ತಮ್ಮ ಕಾರ್ಯಾಚರಣೆ ನಿಲ್ಲಿಸುತ್ತಾರೆ. ದಿಢೀರನೆ ಇಲ್ಲವೇ ನಿಧಾನವಾಗಿ ಷೇರು ಬೆಲೆ ಕುಸಿಯುತ್ತದೆ. ಮಧ್ಯದಲ್ಲಿ ಅಧಿಕ ಬೆಲೆಗೆ ತೇಜಿ ವಾತಾವರಣದಲ್ಲಿ ಷೇರು ಖರೀದಿಸಿದವರು ಕೈ ಕೈ ಹಿಸುಕಿಕೊಳ್ಳುತ್ತಾರೆ.

ಷೇರಿನ ಬೆಲೆ ಸಾಮಾನ್ಯವಾಗಿ ನಿರ್ಧಾರವಾಗಬೇಕಾದ್ದು ಆ ಷೇರಿನ ಒಡೆತನ ಹೊಂದಿರುವ ಕಂಪೆನಿಯ ಸೊತ್ತು. ಸಂಪನ್ಮೂಲ ಎಷ್ಟಿದೆ ಎಂಬುದರ ಆಧಾರದ ಮೇಲೆ. ಆದರೆ ಷೇರು ವಹಿವಾಟುದಾರರ ಕರಾಮತ್ತಿನಿಂದಾಗಿ ಕೃತಕವಾಗಿ ಅದರ ಬೆಲೆ ಏರುತ್ತದೆ. ಆದರೆ ಬೆಲೆ ಎತ್ತರದಲ್ಲಿ ನಿಲ್ಲುವುದಿಲ್ಲ. ಕುಸಿಯುತ್ತದೆ. ಸಾಮಾನ್ಯ ಜನ, ಸಣ್ಣ ಹೂಡಿಕೆದಾರರು ನಷ್ಟಕ್ಕೊಳಗಾಗುತ್ತಾರೆ.

ವ್ಯಾಪಾರವೆಲ್ಲ ಇಂಥ ಕರಾಮತ್ತಿನಿಂದಲೇ ನಡೆಯುತ್ತದೆ ಎಂದು ಅರ್ಥವಲ್ಲ. ಗಟ್ಟಿ ಕಂಪೆನಿಗಳ ಒಳ್ಳೆಯ ದಾರ್ಢ್ಯ ಇರುವ ಷೇರುಗಳ ಬೆಲೆ ನಾನಾ ಕಾರಣಗಳಿಂದ ಏರುತ್ತದೆ. ಇಳಿಯುತ್ತದೆ. ಉದಾಹರಣೆಗೆ ಪ್ರಖ್ಯಾತ ಇನ್ಫೋಸಿಸ್‌ ಷೇರು ಮೊದಲ ಬಾರಿಗೆ ಅಮೆರಿಕ ಷೇರುಪೇಟೆಯನ್ನು ಪ್ರವೇಶಿಸಿತು. ಅಲ್ಲಿ, ಇದು ಒಳ್ಳೆಯ ಐಟಿ ಕಂಪೆನಿ ಎಂಬ ಕಾರಣಕ್ಕೆ ಭಾರೀ ಖರೀದಿ ನಡೆಯಿತು. ಷೇರು ವಹಿವಾಟುದಾರರು ಅದರ ವಿಷಯದಲ್ಲೂ ಭಾರೀ ಅಸ್ಥೆ ವಹಿಸಿದರು. ಐದು ರೂಪಾಯಿ ಮುಖ ಬೆಲೆಯ, ಷೇರಿನ ಬೆಲೆ ರೂ. ೧೨ ಸಾವಿರಕ್ಕೆ ಹೋಯಿತು. ರೂ. ೧೦ ಸಾವಿರ ಬೆಲೆಯಲ್ಲಿ ಬಹಳ ದಿನ ನಡೆಯಿತು. ಮತ್ತೆ ಇಳಿಮುಖವಾಯಿತು. ಈಗ ಮೂರು ಸಾವಿರ ಚಿಲ್ಲರೆ ನಡೆಯುತ್ತಿದೆ.

ಇದು ಒಂದು ಅಲೆ. ಇನ್ನೊಂದು ಅಲೆ ಸಹಾ ಇದೆ. ಅಸಂಖ್ಯ ಷೇರುಗಳ ಬೆಲೆ ರೂ. ೧೦ ಇದ್ದುದು ರೂ. ೨ ಅಥವಾ ೩ ಮಟ್ಟಕ್ಕೆಲ್ಲ ಬಂದಿವೆ. ಕೇಳುವವರಿಲ್ಲ.

ಕಂಪೆನಿಯು ಲಾಭಕರವಾಗಿ ಇಲ್ಲದಿದ್ದರೆ, ಕಂಪೆನಿಯವರು ಲಾಭವನ್ನು ಸೊತ್ತಾಗಿ ಪರಿವರ್ತಿಸದೆ ಬೇರೆ ಕಡೆಗೆ ವರ್ಗಾವಣೆ ಮಾಡಿದರೆ, ಏನೇ ಆದರೂ ಷೇರು ಬೆಲೆ ಏರುವುದಿಲ್ಲ. ಅಂಥ ಸಂದರ್ಭದಲ್ಲೂ ಷೇರು ವಹಿವಾಟುದಾರರಿಂದಾಗಿ ಹಾವು ಏಣಿ ಆಟ ನಡೆಯುತ್ತದೆ.

ಎಷ್ಟೋ ವೇಳೆ ಕಂಪೆನಿಗಳವರು ಹಣಕಾಸು ಸಂಸ್ಥೆಗಳಿಗೆ ಸಾರಾಸಗಟಾಗಿ ಷೇರು ಅಲಾಟ್‌ ಮಾಡಿರುತ್ತಾರೆ. ಆ ಸಂಸ್ಥೆಗಳು ಕೆಲವು ಪ್ರಸಂಗಗಳಲ್ಲಿ ಅವನ್ನು ಪೇಟೆಗೆ ಹರಿಬಿಡುತ್ತಾರೆ. ಬೆಲೆ ಕುಸಿಯುತ್ತದೆ. ಯಾವುದಾದರೂ ಕಂಪೆನಿಯನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಯಾರಾದರೂ ಪೇಟೆಯಲ್ಲಿರುವ ಅದರ ಷೇರುಗಳನ್ನು ಖರೀದಿಸತೊಡಗಿದರೆ ಬೆಲೆ ಏರುತ್ತದೆ. ಯಾವುದಾದರೂ ಕಂಪನಿ ಬಗೆಗೆ ಆಸಕ್ತಿ ಕಡಿಮೆಯಾಗಿ ತಮ್ಮಲ್ಲಿರುವ ಅದರ ಷೇರುಗಳನ್ನು ಮಾರಾಟ ಮಾಡಿಬಿಡುವುದೂ ಉಂಟು. ಆಗ ಬೆಲೆ ಕುಸಿಯುತ್ತದೆ.

ಷೇರು ಬೆಲೆಗಳು ಏರುತ್ತಲೇ ಹೋದರೆ ‘ತೇಜಿ’ ಮಾರುಕಟ್ಟೆ ಎನಿಸಿಕೊಳ್ಳುತ್ತದೆ. ‘ಗೂಳಿ ಪ್ರವೃತ್ತಿ’ ಎಂದು ಹೆಸರಿಸುತ್ತಾರೆ. ಇಳಿಯುತ್ತಲೇ ಹೋದರೆ ‘ಮಂದಿ’ ಮಾರುಕಟ್ಟೆ ಎನಿಸಿಕೊಳ್ಳುತ್ತದೆ. ಆಗ ‘ಕರಡಿ ಪ್ರವೃತ್ತಿ’ ವಿಜೃಂಭಿಸಿದೆ ಎನ್ನುತ್ತಾರೆ. ಗೂಳಿ ಕಾಣಿಸಿಕೊಳ್ಳಲಿ, ಕರಡಿ ಕಾಣಿಸಿಕೊಳ್ಳಲಿ; ಅದರಡಿ ಸಿಕ್ಕಿ ನುಜ್ಜುಗುಜ್ಜಾಗುವವನು ರಕ್ಷಣೆಯೇ ಇಲ್ಲದ ಸಣ್ಣ ಹೂಡಿಕೆದಾರನೇ ಸರಿ.

ಈಚಿನವರೆಗೂ ಷೇರು ವಹಿವಾಟುದಾರರು ‘ಬದ್ಲಾ’ ಎಂಬ ಪದ್ಧತಿಯನ್ನು ಪಾಲಿಸುತ್ತಿದ್ದರು. ಅವರಲ್ಲಿ ಪ್ರತಿಯೊಬ್ಬನೂ ನಿತ್ಯ ಖರೀದಿಸುತ್ತಾ, ಮಾರುತ್ತಾ ಇರುತ್ತಾನೆ.

ಆದರೆ ಹಣ ಕೊಟ್ಟು, ಹಣ ಪಡೆದು ಮಾಡುವುದೇ ಇಲ್ಲ. ಬರಿದೆ ಪುಸ್ತಕ ಜಮಾ ಖರ್ಚು ವಾರಕ್ಕೆ, ೧೫ ದಿನಕ್ಕೆ, ಒಂದು ತಿಂಗಳಿಗೆ ಒಮ್ಮೆ ಲೆಕ್ಕ ತಾಳೆ. ಹಣ ಕೊಡಬೇಕೆ, ಹಣ ಪಡೆಯಬೇಕೆ ಎಂಬ ಲೆಕ್ಕಾಚಾರ, ಅಂದರೆ ಬಂಡವಾಳವಿಲ್ಲದ ವ್ಯಾಪಾರ. ಆದರೆ ವಾಸ್ತವವಾಗಿ ಹಣಕ್ಕೆ ಷೇರು ಮಾರಿದವನು ಅಥವಾ ಕೊಂಡವನು ಕಾಯುತ್ತಾ ಕೂತಿರುತ್ತಾನೆ, ವಾರಗಟ್ಟಲೆ!

ಜಮಾ ಖರ್ಚು ಲೆಕ್ಕ ಮಾಡಿದರೂ ಹಣ ಚುಕ್ತಾ ಮಾಡುವುದಿಲ್ಲ. ಬಾಕಿ ಬಿದ್ದ ಹಣ ತನ್ನ ಬಳಿ ಇಲ್ಲ. ಅದಕ್ಕೆ ಬಡ್ಡಿ ಕೊಡುತ್ತೇನೆ ಎಂದು ವಹಿವಾಟುದಾರ ಹೇಳುತ್ತಾನೆ. ಷೇರುಪೇಟೆ ಪೂರ್ತಿ ಇವರದೇ ಮಾತು, ಇವರದೇ ‘ಬದ್ಲಾ!’. ಈ ವ್ಯವಸ್ಥೆಗೆ ‘ಸೆಬಿ’ (ಷೇರುಪೇಟೆ ನಿಯಂತ್ರಕ ಮಂಡಲಿ) ನಿಷಧ ಹೇರಿದೆ. ಆದರೂ ಬೇರೆ ಬೇರೆ ರೂಪದಲ್ಲಿ ಕಸಬುದಾರ ವಹಿವಾಟುದಾರರ ಕರಾಮತ್ತು ನಡೆಯುತ್ತಲೇ ಇರುತ್ತದೆ.

ಯಾರಾದರೂ ವಹಿವಾಟುದಾರರು ನಿಯಮಗಳನ್ನು ಉಲ್ಲಂಘಿಸಿ ವಿಪರೀತ ಲಾಭ ಮಾಡಿದರೆ ಅದರ ಮೇಲೆ ದಂಡ ವಿಧಿಸಲು ‘ಸೆಬಿ’ಗೆ ಅಧಿಕಾರವಿದೆ. ವಿಧಿಸಬಹುದಾದ ದಂಡ ರೂ. ೫ ಲಕ್ಷ ಮೀರುವಂತಿಲ್ಲ! ಕೋಟ್ಯಂತರ ಲಾಭ ಮಾಡುವ ವಹಿವಾಟುದಾರರಿಗೆ ಇದಾವ ಲೆಕ್ಕ?! ಆ ಮೊತ್ತವನ್ನು ರೂ. ೨೫ ಕಕೋಟಿಗೆ ಏರಿಸಲು ಅಥವಾ ನಿಯಮ ಮೀರಿ ಮಾಡಿಕೊಂಡ ಲಾಭದ ಮೊತ್ತದ ಮೂರುಪಟ್ಟು ದಂಡ ವಿಧಿಸಲು ಆಲೋಚಿಸಿದ್ದಾರೆ. ಅಂಥ ಕ್ರಮ ತರುವುದು ಸುಲಭವಲ್ಲ.

ಜಾಗತೀಕರಣ ಜಾರಿಗೆ ಬಂದ ಮೇಲೆ ವಿದೇಶಿ ಬಂಡವಾಳ ಸ್ವಲ್ಪ ಹರಿದುಬರಲು ಆರಂಭವಾಗಿತ್ತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐನವರು) ಬಂಡವಾಳ ತಂದು ಆಸಕ್ತ ಕಂಪೆನಿಗಳ ಷೇರುಗಳನ್ನು ಕೊಳ್ಳುತ್ತಿದ್ದರು. ಆರ್ಥಿಕ ಹಿಂಜರಿತದ ನಡುವೆ ಸಹಾ ಷೇರುಪೇಟೆಗಳಲ್ಲಿ ಸ್ವಲ್ಪ ಒಳ್ಳೆಯದೆನ್ನುವ ಚಟುವಟಿಕೆ ನಡೆದಿತ್ತು. ಭಾರತದ ಪ್ರಖ್ಯಾತ ಕಂಪೆನಿಗಳು ಹೊಸದಾಗಿ ಷೇರುಗಳನ್ನು ಬಿಡುಗಡೆ ಮಾಡಿ ೩೦ ಸಾವಿರ ಕೋಟಿ ರೂಪಾಯಿ ಸಂಗ್ರಹಿಸುವರೆಂಬ ಅಂದಾಜು ಸಹಾ ಇತ್ತು. ಆದರೆ ಎಫ್‌ಐಐಗಳು ಬಂಡವಾಳ ವಾಪಸು ಪಡೆಯುವ, ಒಯ್ಯುವ ತರದೂದಿನಲ್ಲಿ ಇದ್ದಾರೆ. ಇದ್ದಕ್ಕಿದ್ದಂತೆ ವಿದೇಶಿ ನೇರ ಬಂಡವಾಳ ಎಫ್‌ಡಿಐ ಮನ್ನಣೆಗೆ ಪಾತ್ರವಾಗಿದೆ. ಷೇರುಪೇಟೆಗಳಿಗೆ ಅದರಿಂದ ಬಹಳ ಅನುಕೂಲವಾಗದು. ಷೇರು ಕೊಳ್ಳುವ ಮಾರುವ ಧಾಟಿಗೆ ನೇರ ಬಂಡವಾಳ ಸಹಕಾರಿಯಲ್ಲ.

ಹರ್ಷದ್‌ ಮೆಹ್ತಾ ವಿದ್ಯಮಾನದ ವೇಳೆ ಮುಂಬೈ ಪೇಟೆ ಸೂಚ್ಯಂಕ ೪೦೦೦ ಗಡಿ ದಾಟಿತ್ತು. ಮತ್ತೆ ಅಷ್ಟಕ್ಕೆ ಏರಿಲ್ಲ. ಈಚೆಗೆ ಅದು ೩೦೦೦ ಗಡಿ ದಾಟಿ ಕೆಳಕ್ಕಿಳಿಯಿತು.

ಜೊತೆಗೆ ಈ ಬಾರಿ ಮಳೆ ಕೈಕೊಟ್ಟಿದೆ. ಅದು ಸಹಾ ಒಳ್ಳೆಯ ಲಕ್ಷಣವಲ್ಲ. ೦೭. ೦೮. ೨೦೦೨