ಒಂದೂವರೆ ದಶಕದ ಹಿಂದೆ ಮುಚ್ಯುಯಲ್‌ ಫಂಡ್‌ಗಳನ್ನು ಪ್ರೋತ್ಸಾಹಿಸುವ ಪ್ರಮುಖ ನೀತಿಯನ್ನು ಸರ್ಕಾರ ಅಂಗೀಕರಿಸಿದಾಗ ಆ ವ್ಯವಸ್ಥೆಯ ಬಗೆಗೆ ಮೂರು ಮುರಿದವರು ಕಡಿಮೆ. ಹಾ ಹಾ ಹೋ ಹೋ ಎಂದು ಹೇಳಿಕೊಂಡು ನಾನಾ ಕಂಪೆನಿಗಳ ಮ್ಯೂಚುವಲ್‌ ಫಂಡ್‌ ಯೋಜನೆಗಳನ್ನು ಸ್ವಾಗತಿಸಿದವರೇ ಅಧಿಕ. ಅಂಥವರು ಮುಖ್ಯವಾಗಿ ಪ್ರತಿಪಾದಿಸಿದ ಅಂಶ ಎಂದರೆ ಸಣ್ಣ ಹೂಡಿಕೆದಾರರು ಷೇರುಪೇಟೆಯ ಬಲೆಗೆ ಸಿಕ್ಕಿ ಹಾಕಿಕೊಂಡು ನರಳುವ ಬದಲು ಇವುಗಳಲ್ಲಿ ಕ್ಷೇಮವಾಗಿರುತ್ತದೆ. ಯಾವುದೇ ಫಂಡ್‌ ಯೋಜನೆಯಲ್ಲಿ ಹೂಡಿಕೆದಾರರ ಹಣವನ್ನು ಬಳಸಿ ಹಲವು ಕಂಪೆನಿಗಳ ಷೇರುಗಳನ್ನು ಗುಡ್ಡೆ ಹಾಕಿರುವ ಕಾರಣ ಕೆಲವು ಕಂಪೆನಿ ಷೇರುಗಳ ಬೆಲೆ ಕುಸಿದರೂ, ಬೆಲೆ ಏರಿಸಿಕೊಂಡ ಇನ್ನು ಕೆಲವು ಷೇರುಗಳ ಒಟ್ಟಾರೆ ನಿಧಿಯ ಸಮತೋಲ ಕಾಪಾಡಿ ಲಾಭ ಸಾಧನೆಗೆ ದಾರಿ ಮಾಡಿಕೊಡುತ್ತದೆ. ಇದು ಚಿಂತನೆ.

ಆದರೆ ಆಗ ಮೂಗು ಮುರಿದವರು ವ್ಯಕ್ತಪಡಿಸಿದ್ದ ಅಭಿಪ್ರಾಯವೇ ಸರಿ ಎಂದು ಇದೀಗ ನಿಸ್ಸಂಶಯವಾಗಿ ರುಜುವಾತು ಆಗಿದೆ. ಯುಎಸ್‌ ೬೪ ನಿಧಿಯ ಮೌಲ್ಯ ಕೊಚ್ಚಿಕೊಂಡು ಹೋಗಿದೆ. ಷೇರುಗಳನ್ನು ಖರೀದಿ ಮಾಡಿ ನಿಶ್ಚಿತ ಯೋಜನೆಯಲ್ಲಿ ಗುಡ್ಡೆ ಹಾಕುವಾಗ ಎಷ್ಟೊಂದು ಆಕ್ರಮಗಳು ನಡೆಯುತ್ತವೆ ಎಂಬುದು ಜಗಜ್ಜಾಹೀರಾಗಿದೆ. ಯುಟಿಐ ಯೋಜನೆಯೇ ಹೀಗಾದ ಮೇಲೆ ಅನ್ಯ ನಿಧಿಗಳ ಪಾಡೇನು? ಇದು ಹೂಡಿಕೆದಾನ ಚಿಂತೆ.

ಸರ್ಕಾರ ತನ್ನ ಅಂಗೀಕೃತ ನೀತಿ ಅನ್ವಯ ಬಡ್ಡಿ ದರಗಳನ್ನು ಇಳಿಸುತ್ತಲೇ ಇದೆ. ಇನ್ನು ಠೇವಣಿ ಇಟ್ಟಾಗ ಬರುವ ಬಡ್ಡಿಯಿಂದ ಬದುಕುವವರ ಗತಿ ಏನು? ಮ್ಯುಚುವಲ್‌ ಫಂಡ್‌ಗಳು ವಿಶ್ವಾಸ ಕಳೆದುಕೊಂಡವು. ಹೂಡಿಕೆದಾರರು ಮತ್ತೆ ಷೇರುಪೇಟೆಯತ್ತಲೇ ಕಣ್ಣು ಹಾಯಿಸುತ್ತಿದ್ದಾರೆ.

ಜುಲೈ ೨ ರಿಂದ ಷೇರುಪೇಟೆಗಳಲ್ಲಿ ಸುಧಾರಣಾ ಕ್ರಮಗಳನ್ನು ಜಾರಿಗೆ ತರಲಾಗಿದೆ. ಬರಿಕೈಲಿ ಬುಗುರಿ ಆಡಿಸುವ ಬ್ರೋಕರುಗಳ ವಹಿವಾಟಿಗೆ ಲಗಾಮು ಹಾಕಿದ್ದಾರೆ. ಖರೀದಿ ಮಾಡಿದ ಷೇರುಗಳ ಸಂಬಂಧ ಲೆಕ್ಕ ಚುಕ್ತಾ ಮಾಡಿ ಷೇರು ಪತ್ರಗಳನ್ನು ಪಡೆಯುವ ಗೋಜಿಗೇ ಹೋಗದೆ ಒಂದಿಷ್ಟು ‘ಬದಲಾ’ ಹಣವನ್ನು ಪೊಗದಿಯಾಗಿ ಸಲ್ಲಿಸಿ ವ್ಯವಹಾರವನ್ನು ಅಮಾನತ್ತಿನಲ್ಲಿ ಇಡುವ ಪದ್ಧತಿ ಜಾರಿಗೆ ಬಂದಿದೆ. ಬ್ರೋಕರುಗಳ ಕೈವಾಡಕ್ಕೆ ಅವಕಾಶ ಇದರಿಂದ ಕಡಿಮೆ. ಷೇರುಪೇಟೆಯನ್ನು ತಮ್ಮ ಮುಷ್ಟಿಯಲ್ಲಿ ಇರಿಸಿಕೊಂಡು ಹರ್ಷದ್‌ ಮೆಹ್ತಾ, ಕೇತನ್‌ ಪಾರೇಖ್‌ಗಳಂಥವರು ಹೂಡಿಕೆದಾರರ ಹಣದ ಚೆಲ್ಲಾಟವಾಡುವುದಕ್ಕೆ ತಡೆ ಒಡ್ಡುವುದು ಸುಧಾರಣಾ ಕ್ರಮಗಳ ಉದ್ದೇಶ.

ಸಹಜವಾಗಿ ಷೇರು ಬ್ರೋಕರುಗಳಿಗೆ ಇದರಿಂದ ಅಸಂತೋಷವಾಗಿದೆ. ಆಡಿದ್ದೇ ಆಟ ಎನ್ನುವುದಕ್ಕೆ ಇನ್ನು ಅವಕಾಶ ಇರುವುದಿಲ್ಲ ಎನ್ನುವುದು ಸುಧಾರಣಾ ಕ್ರಮಗಳನ್ನು ಜಾರಿ ಮಾಡುವವರ ಅಂಬೋಣ. ಆ ಕೈಯಿಂದ ಈ ಕೈಗೆ ಅದೇ ಷೇರುಗಳನ್ನು ಮಾರುತ್ತಾ, ಮಾರಿದ ಹಾಗೆ ದಾಖಲೆ ಸೃಷ್ಟಿಯಾಗುವಂತೆ ಮಾಡುತ್ತಾ, ನಿರ್ದಿಷ್ಟ ಷೇರುಗಳಿಗೆ ಭಾರೀ ಬೇಡಿಕೆ ಇದೆ ಎಂದು ತೋರಿಸುವುದು ಒಂದು ಆಟ. ಕಡಿಮೆ ಬೆಲೆ ಇರುವಾಗ ನಿರ್ದಿಷ್ಟ ಷೇರುಗಳನ್ನು ಖರೀದಿಸಿ ಗುಡ್ಡೆ ಹಾಕಿಕೊಂಡು ಮೇಲೆ ಹೇಳಿದ ಆಟವಾಡಿ ಬೆಲೆ ಏರುವಂತೆ ಮಾಡುವುದು ಇನ್ನೊಂದು ಆಟ. ದಿಢೀರನೆ ಷೇರು ಬೆಲೆಗಳು ಏರಿದಾಗ ಸಣ್ಣ ಪುಟ್ಟ ಹೂಡಿಕೆದಾರರೆಲ್ಲ ಷೇರುಗಳನ್ನು ಮಾರುತ್ತಾರೆ. ಬೆಲೆ ಇನ್ನೂ ಏರುತ್ತದೆ ಎಂದು ಖಚಿತವಾದಾಗ ಸಣ್ಣ  ಹೂಡಿಕೆದಾರರೆಲ್ಲ ಮಾರುಕಟ್ಟೆಗೆ ನುಗ್ಗಿ ಖರೀದಿ ಆರಂಭಿಸುತ್ತಾರೆ. ಯಾರೇ ಷೇರು ಖರೀದಿಸಲಿ, ಮಾರಲಿ, ಬ್ರೋಕರುಗಳಿಗೆ ವ್ಯಾಪಾರ. ಹೂಡಿಕೆದಾರರಿಗೂ, ವಹಿವಾಟುದಾರರಿಗೂ ಮಧ್ಯೆ ಇವರದೇ ಹುನ್ನಾರ. ಬೆಲೆ ಏರಿದ್ದು, ಏರುತ್ತಿದ್ದು ಜನರ ವಹಿವಾಟು ಪ್ರವೃತ್ತಿ ಜೋರಾಗಿದ್ದಾಗ ವಹಿವಾಟುದಾರರು ತಾವು ಗುಡ್ಡೆ ಹಾಕಿಕೊಂಡಿದ್ದ ಷೇರುಗಳನ್ನೆಲ್ಲ ಮಾರಿ ಲಾಭ ಮಾಡಿಕೊಳ್ಳುತ್ತಾರೆ. ಅವರ ಪಾಲಿಗೆ ಇದೇ ಮುಖ್ಯವಾದ ಆಟ. ಅವರ ಮುಂದಿನ ಹಂತದ ಆಟವೆಂದರೆ ಷೇರುಗಳಿಗೆ ಬೇಡಿಕೆ ಕಡಿಮೆಯಾಗದಂತೆ ಬಿಂಬಿಸಿ, ಬೆಲೆ ಇಳಿಸಿ ಕೈತೊಳೆದುಕೊಳ್ಳುವುದು. ಈ ಆಟದಲ್ಲಿ ಹಲವರ ಕೈ ಬರಿದಾಗುತ್ತದೆ. ಇನ್ನು ಹಲವರ ಜೇಬು ಚೆನ್ನಾಗಿ ತುಂಬಿಕೊಳ್ಳುತ್ತದೆ.

ಈ ದಂಧೆಗೆ ಕಡಿವಾಣ ಬೀಳುವುದನ್ನು ವಹಿವಾಟುದಾರರು ಮತ್ತು ಬ್ರೋಕರುಗಳು ಸಹಿಸಿಯಾರೆ? ಇದೀಗ ಯುಎಸ್‌-೬೪ ಹಗರಣದಿಂದ ಅವರಿಗೆ ಉಮೇದು ಬಂದಿದೆ. ಬಡ್ಡಿದರ ಇಳಿದಿರುವುದರಿಂದ, ಮ್ಯೂಚುವಲ್‌ ಫಂಡ್‌ಗಳು ಸಹಾ ಹಗರಣಕ್ಕೆ ಸಿಲುಕಿರುವುದರಿಂದ ಸಣ್ಣ ಹೂಡಿಕೆದಾರರಿಗೆ ಷೇರುಪೇಟೆಯೊಂದೇ ಸೂಕ್ತ ಗಳಿಕೆ ಮಾರ್ಗವೆಂದು ಹೇಳತೊಡಗಿದ್ದಾರೆ. ಜುಲೈ ೨ಕ್ಕೆ ಮುಂಚಿನ ‘ಬದಲಾ’ ಪದ್ಧತಿಯನ್ನು ಪುನಃ ಜಾರಿಗೆ ತರಬೇಕೆಂದು ಒತ್ತಾಯಿಸತೊಡಗಿದ್ದಾರೆ. ಇದನ್ನೆಲ್ಲ ಮಾತನಾಡುವವರು ಮುಂದೆ ಮತ್ತೆ ಹರ್ಷದ್ ಮೆಹ್ತಾ ಮತ್ತು ಕೇತನ್‌ಪಾರೇಖ್‌ ವಿದ್ಯಮಾನ ಮರುಕಳಿಸುವುದಿಲ್ಲ ಎಂಬ ಭರವಸೆಯನ್ನೇನೂ ಕೊಡಲಾರರು. ಏಕೆಂದರೆ ಈ ಮಂದಿಗೆ ಹಲವು ವರ್ಷಗಳ ಅಂತರದಲ್ಲಿ ಮತ್ತೆ ಮತ್ತೆ ಚಿನ್ನದಗಣಿ ನಿಕ್ಷೇಪಗಳು ಕಾಣಿಸುವುದು ಈ ಬಗೆಯ ವಿದ್ಯಮಾನಗಳಿಂದಲೇ.

ಷೇರುಪೇಟೆ ಎನ್ನುವುದು ಹೇಳಿ ಕೇಳಿ ಸಟ್ಟಾ ಪ್ರವೃತ್ತಿಯ ನೆಲೆವೀಡು. ಭಾರತದಲ್ಲಂತೂ ಮುಂಬೈ ಷೇರುಪೇಟೆ (ಬಿಎಸ್‌ಇ) ಮತ್ತು ನ್ಯಾಷನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌ (ಎನ್‌ಎಸ್‌ಇ) ಇವೆರಡರಲ್ಲೂ ಶೇ ೮೦ರಷ್ಟು ಉಹಾಪೋಹ ವ್ಯಾಪಾರವೇ ನಡೆಯುವುದು. ಮಿಕ್ಕದ್ದು ಮಾತ್ರವೇ ಆಯಾ ಷೇರುಗಳ ನಿಜವಾದ ದಾರ್ಢ್ಯದ ಅನ್ವಯ ಹೂಡಿಕೆದಾರರು ವ್ಯವಹಾರ ನಡೆಸುವುದು. ಈ ಪರಿಸ್ಥಿತಿಯಲ್ಲಿ ಬ್ರೋಕರುಗಳ ಬಲ ಕುಗ್ಗುವುದಕ್ಕೆ ಅವಕಾಶವಿಲ್ಲ. ಆದರೆ ಆವರ್ತ ಪದ್ಧತಿಯನ್ನು ನಿಭಾಯಿಸಬೇಕಾಗುತ್ತದೆ. ವಾಸ್ತವವಾಗಿ ಸೇ. ೨೦ ಇರುವುದು ಶೇ. ೬೦ ಆಗಿ, ಶೇ. ೨೦ ಇರುವುದು ಶೇ. ೪೦ ಆಗುವುದಕ್ಕೆ ಇದೇ ಸಕಾಲ. ಹೂಡಿಕೆದಾರರು ಷೇರುಪೇಟೆಗೆ ಧಾವಿಸುವುದಕ್ಕೆ ಇದೇ ಪ್ರಶಸ್ತ ಸಮಯ. ಷೇರು ಬೆಲೆಗಳೂ ಕಡಿಮೆ ಇವೆ. ಕೈವಾಡದಾರರಿಗೂ ಕೈಕಟ್ಟಿದಂತೆ ಆಗಿದೆ. ಬೇರೆ ಬಾಬುಗಳ ಹೂಡಿಕೆ ಆಕರ್ಷಣೀಯ ಎನಿಸುವಂತಿಲ್ಲ.

ಆದರೆ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆಯೇ? ಇಲ್ಲವೆ ಇಲ್ಲ. ಒಂದೈದು ವರ್ಷ ಷೇರುಪೇಟೆಗಳಲ್ಲಿ ವಿಜೃಂಭಿಸಿದ ಐಟಿ ಕ್ಷೇತ್ರಕ್ಕೆ ಸಹಾ ಸದ್ಯಕ್ಕೆ ಸುಸ್ತಾಗಿದೆ. ಷೇರು ಬೆಲೆಗಳು ಕೈವಾಡದಾರರಿಗೆ ಹೊರತಾಗಿ ಸಹಜವಾಗಿ ತಾವೇ ತಾವಾಗಿ ಸದ್ಯದ ಭವಿಷ್ಯತ್ತಿನಲ್ಲಿ ಏರುತ್ತವೆ ಎನ್ನುವುದಕ್ಕೆ ಖಾತರಿ ಇಲ್ಲ. ಒಮ್ಮೆ ಹಾಕಿದ ಹಣವನ್ನು ಹಲವಾರು ವರ್ಷ ಪ್ರತಿಫಲ ಅಪೇಕ್ಷಿಸದೆ ಬಿಟ್ಟಿರುವದಕ್ಕೆ ಸಿದ್ಧರಾಗಿರುವ ವಹಿವಾಟುದಾರರು ಮಾತ್ರ ಮುಂದಾಗಬಹುದು. ೦೮. ೦೮. ೨೦೦೧