ಮಾರುಕಟ್ಟೆ ಆಧಾರಿತ ಆರ್ಥಿಕತೆಗೆ ಭಾರತ ತೆರೆದುಕೊಳ್ಳುತ್ತಿದೆ. ಅಂದರೆ ಜಾಗತೀಕರಣ ಭರದಿಂದ ಸಾಗುತ್ತಿದೆ. ಅದರ ಪರಿಣಾಮ ಒಂದೊಂದಾಗಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದೆ.

ಒಂದು ತಾಜಾ ನಿದರ್ಶನವೆಂದರೆ ಜನರ ಉಳಿತಾಯ ಪ್ರವೃತ್ತಿಗೆ ಬಿದ್ದಿರುವ ಪೆಟ್ಟು. ಅಂತಾರಾಷ್ಟ್ರೀಯ ಮಟ್ಟಕ್ಕೆ ಬಡ್ಡಿ ದರಗಳನ್ನು ಇಳಿಸಿದಾಗ ಉಳಿತಾಯ ಪ್ರವೃತ್ತಿಗೆ ಪೆಟ್ಟು ಬಿತ್ತು. ವಿದೇಶಗಳ ಮಟ್ಟಕ್ಕೆ ಪೂರ್ತಿಯಾಗಿ ಬಡ್ಡಿ ದರಗಳನ್ನು ಇಳಿಸಿಲ್ಲ. ಆದರೂ ಅದರ ಪರಿಣಾಮ ನಿಶ್ಚಿತ. ಬಡ್ಡಿ ದರಗಳು ವಿಪರೀತವಾಗಿರಬಾರದು ಎಂಬ ನಿಲುವಿಗೆ ಅರ್ಥವಿಲ್ಲದೆ ಇಲ್ಲ. ವಿದೇಶಗಳಲ್ಲಿ ವಾಣಿಜ್ಯೋದ್ಯಮಿಗಳಿಗೆ ಶೇಕಡಾ ೭ರ ಅಥವಾ ಆಸುಪಾಸಿನ ದರದಲ್ಲಿ ಸಾಲ ಸಿಗುತ್ತದೆ ಎಂದಾದರೆ ಭಾರತದಲ್ಲೇ ಅದೇ ಜನ ಶೇಕಡಾ ೧೮ರ ಸುಮಾರಿನ ದರದಲ್ಲಿ ಬಡ್ಡಿ ತೆರಬೇಕೆ? ಈ ರೀತಿಯ ಬಡ್ಡಿ ದರದಿಂದಾಗಿ ಉತ್ಪಾದನಾ ವೆಚ್ಚ ಬಹಳವಾಗಿ ಏರುತ್ತದೆ. ಆಗ ರಫ್ತು ಬೆಲೆ ಸಹಾ ಹೆಚ್ಚಾಗುತ್ತದೆ. ದುಬಾರಿ ಎನಿಸುವ ದರದ ಭಾರತದ ಸರಕನ್ನು ಖರೀದಿಸಲು ಯಾವ ರಾಷ್ಟ್ರದವರು ಮುಂದೆ ಬರುತ್ತಾರೆ? ಅದೇ ಸಂದಿಗ್ಧ. ಏಕೆಂದರೆ ಇನ್ನು ಮುಂದೆ ರಫ್ತು ಸಾಧ್ಯವಾಗದೆ ಜೀವಿಸುದಕ್ಕೆ ಅಸಾಧ್ಯ. ಬಡ್ಡಿದರ ಇಳಿಸಿದ ತಕ್ಷಣ ರಫ್ತು ಹೆಚ್ಚಾಗಿ ಬಿಡುತ್ತದೆ ಎಂದು ಅರ್ಥವಲ್ಲ. ಜಾಗತೀಕರಣ ನೀತಿಯಲ್ಲಿ ಇದು ಒಂದು ಹೆಜ್ಜೆ.

ಆದರೆ ಬಡ್ಡಿದರ ಇಳಿಸಿದ್ದರ ಒಂದು ಅಡ್ಡ ಪರಿಣಾಮ ಮಾತ್ರ ಸಾಮಾನ್ಯ ಜನಕ್ಕೂ ಚುಕುರು ಮುಟ್ಟಿಸಿದೆ. ಬ್ಯಾಂಕಿನಲ್ಲಿ ಅಥವಾ ಇತರ ಹಣಕಾಸು ಸಂಸ್ಥೆಗಳಲ್ಲಿ ಜನರು ತಾವು ಉಳಿತಾಯ ಮಾಡಿದ ಹಣವನ್ನು ಬಿಟ್ಟರೆ ಒಳ್ಳೆಯ ಪ್ರತಿಫಲವೇ ಸಿಗುವುದಿಲ್ಲ. ಜೀವನಪೂರ್ತಿ ಶ್ರಮಿಸಿದ ವೇಳೆ ಕಷ್ಟಪಟ್ಟು ಉಳಿಸಿದ ಹಣಕ್ಕೆ ಇದೀಗ ಬೆಲೆಯೇ ಇಲ್ಲವಾಗಿದೆ. ಬಡ್ಡಿಯ ರೂಪದ ಹುಟ್ಟುವಳಿ ಕಳೆದ ಎರಡು ವರ್ಷಗಳಲ್ಲಿ ಕಡಿಮೆಯಾಗಿದೆ.

ಇಷ್ಟೊಂದು ಕಡಿಮೆ ಹುಟ್ಟುವಳಿ ಇದ್ದರೆ ಹಣವನ್ನು ಉಳಿಸಬೇಕೇ? ಖರ್ಚು ಮಾಡಿ ಆಯಾ ಕಾಲಕ್ಕೆ ಎಷ್ಟೆಷ್ಟು ಸಾಧ್ಯವೋ ಅಷ್ಟಷ್ಟು ಸುಖಿಸಿಬಿಡೋಣ. ನಾಳಿನ ಚಿಂತೆ ನಮಗ್ಯಾಕೆ ಹೀಗೆ ಅನಿಸಲಿಕ್ಕೂ ಸಾಕು. ಇದೇ ಪರಿಣಾಮವೇ ಜಾಗತೀಕರಣದ ಗುರಿ ಕೂಡಾ. ಬಳಕೆದಾರ ಪ್ರಧಾನ ಸಂಸ್ಕರತಿಯು ಬೇಕುಬೇಕಾದ ಸೌಕರ್ಯವನ್ನು ಆಗಿಂದಾಗ ಖರೀದಿಸಿಬಿಡು ಎಂದೇ ಹೇಳುತ್ತದೆ.

ಉಳಿತಾಯ ಪ್ರವೃತ್ತಿ ಹಿಂದಿನಿಂದ ಅಂಟಿಕೊಂಡು ಬಂದಿದ್ದು ಜನರು ಸಹಜವಾಗಿ ಠೇವಣಿ ಬಿಟ್ಟು ಇನ್ನು ಯಾವ ಬಾಬುಗಳ್ಲಲಿ ಹಣ ತೊಡಗಿಸಬಹುದು ಎಂದು ಹುಡುಕುತ್ತಲೇ ಇರುತ್ತಾರೆ. ಈಗೀಗ ಅವರ ಗಮನವನ್ನು ಹಚ್ಚಾಗಿ ಸೆಳೆಯುತ್ತಿರುವುದು ಮ್ಯೂಚುವಲ್‌ ಫಂಡ್‌. ಪರಸ್ಪರ ನೆರವಾಗುವ ನಿಧಿ.

ಈಗಿನ ಸಹಕಾರ ಬ್ಯಾಂಕುಗಳು ಏನಿವೆಯೋ ಅವನ್ನು ಮುಂಚೆ ಮೂಲರೂಪದಲ್ಲಿ ಪರಸ್ಪರ ಸಹಕಾರ ಸಂಘ ಎಂದೇ ಕರೆಯುತ್ತಿದ್ದರು. ಲೇವಾದೇವಿ ಮಾಡುತ್ತಿದ್ದ ಜನರನ್ನು ಆಶ್ರಯಿಸುವುದರಿಂದ ತಪ್ಪಿಸಿಕೊಳ್ಳಲು ಸದಸ್ಯರೆಲ್ಲ ಒಂದುಗೂಡಿ ತಮ್ಮ ಉಳಿತಾಯ ಹಣವೆಲ್ಲ ಒಂದುಗೂಡುವಂತೆ ಮಾಡಿ ಹಣದ ಅಗತ್ಯ ಇರುವವರು ಆ ಒಟ್ಟುಗೂಡಿದ ನಿಧಿಯಿಂದ ಸಾಲ ಪಡೆಯುವುದು ಅದರ ಹಿಂದಿನ ತತ್ವ. ಮ್ಯೂಚುವಲ್‌ ಫಂಡ್‌ಗಳ ವಿಷಯವೂ ಅಷ್ಟೆ. ಹೂಡಿಕೆದಾರರು ಸ್ವತಃ ಷೇರುಗಳನ್ನು ಖರೀದಿಸಿ ಅವುಗಳ ಬೆಲೆ ಏರಿದಾಗ ಮರಿ ಹಣ ಮಾಡಿಕೊಳ್ಳುವುದು ಉಳಿತಾಯದಾರರ ಹವಣಿಕೆ. ಕಂಪೆನಿಗಳ ಏಳು ಬೀಳುಗಳಲ್ಲಿ ಅನಿಶ್ಚಿತತೆ ಬಹಳ. ಲಾಭ ಆಗುವ ನಿರೀಕ್ಷೆ ತಪ್ಪಿ, ಷೇರು ಬೆಲೆ ಇಳಿದ ಕಾರಣ ನಷ್ಟ ಆಗುವ ಸಂಭವ ತಪ್ಪಿದ್ದಲ್ಲ. ಆದ್ದರಿಂದ ಹಾಕುವ ಹಣವನ್ನೆಲ್ಲ ಒಂದೇ ಕಡೆ ಹಾಕುವುದಿಲ್ಲ. ನಾನಾ ವರ್ಗದ ಬೇರೆ ಬೇರೆ ಕಂಪೆನಿಗಳ ಷೇರುಗಳಲ್ಲಿ ತೊಡಗಿಸಬೇಕು. ವ್ಯಕ್ತಿಗತ ಹಣ ಹೂಡಿಕೆಯಾದ ಕಾರಣ ಇತಿಮಿತಿ ಬಹಳ. ಒಬ್ಬರೇ ಎಷ್ಟೆಂದು ಷೇರುಗಳನ್ನು ಗುಡ್ಡೆ ಹಾಕಿಕೊಳ್ಳಲು ಸಾಧ್ಯ? ಕೈಲಿ ಹೆಚ್ಚಿಗೆ ಷೇರುಗಳು ಇದ್ದರೇನೇ ಕ್ಷೇಮ. ಕೆಲವು ಷೇರುಗಳು ಗಳಿಸುತ್ತಿರುತ್ತವೆ. ಒಟ್ಟಾರೆಯಾಗಿ ಲಾಭವಾದರೆ ಸಾಕು. ಆದರೆ ಒಬ್ಬರೇ ನಿಭಾಯಿಸುವುದು ಕಷ್ಟ.

ಅಂಥ ಸಂದರ್ಭದಲ್ಲಿ ನೆರವಿಗೆ ಬರುವುದು ಸಹಕಾರ ತತ್ವದ ಮ್ಯೂಚುವಲ್‌ ಫಂಡ್‌. ಹಲವು ಜನ, ಅದಕ್ಕೆ ಮಿತಿ ಇರದು, ಈ ನಿಧಿಗೆ ಹಣ ಹಾಕುತ್ತಾರೆ. ಈ ನಿಧಿಯನ್ನು ನಿಭಾಯಿಸುವವರು ಕೊಂಡು ಮಾರುವುದನ್ನು, ಲಾಭಕರವಾಗಿ ಹಣ ತೊಡಗಿಸುವುದನ್ನು ಮಾಡುತ್ತಾರೆ. ಆಗ ಒಟ್ಟಾರೆಯಾಗಿ ಲಾಭ ಇರುವಂತೆ ನೋಡಿಕೊಳ್ಳುವುದು ಸುಲಭ. ಯಾವುದೇ ಮ್ಯೂಚುವಲ್‌ ಫಂಡ್‌ ತಾನು ಗುಡ್ಡೆ ಹಾಕಿಕೊಂಡ ಷೇರುಗಳ ಮೌಲ್ಯವನ್ನು ಅವುಗಳ ಆಯಾ ದಿನದ ಮಾರುಕಟ್ಟೆ ಬೆಲೆ ಆಧರಿಸಿ ಲೆಕ್ಕ ಹಾಕುತ್ತಾ ಇರಬಹುದು. ಹತ್ತೂ ಜನರ ಹಣ. ನಿಧಿಯನ್ನು ನಡೆಸುವವರದು ಒಂದು ಕಂಪೆನಿ. ವ್ಯವಹಹಾರಕ್ಕೊಂದು ನೀತಿ ಸ್ವರೂಪ ಎಲ್ಲ ಇರುತ್ತದೆ. ನಿತ್ಯ ಅಥವಾ ಆಗಿಂದಾಗ ಕೊಳ್ಳುವುದು ಮಾರುವುದು ನಡೆಯುತ್ತದೆ. ಅದರ ಬಳಿ ಇರುವ ಷೇರುಗಳ ಒಟ್ಟು ಮೌಲ್ಯ ಆಸ್ತಿಯಾಗಿ ಪರಿಣಮಿಸುತ್ತದೆ. ಅದನ್ನು ನೆಟ್‌ ಅಸೆಟ್‌ ವ್ಯಾಲ್ಯೂ (ಎನ್‌ಎವಿ) ಎನ್ನುತ್ತಾರೆ. ಇದು ಬೆಳೆಯುತ್ತಾ ಹೋದರೆ ಲಾಭ. ಕರಗುತ್ತಾ ಹೋದರೆ ನಷ್ಟ. ನಿಧಿಯಲ್ಲಿ ತೊಡಗಿಸಿದ ಮೊತ್ತದ ಆಧಾರದ ಮೇಲೆ ಬಂಡವಾಳದ ಯೂನಿಟ್‌ಗಳನ್ನು ಹೂಡಿಕೆದಾರರಿಗೆ ಕೊಟ್ಟಂತೆ ಮಾಡಿರುತ್ತಾರೆ. ಅದು ಆ ನಿಧಿಯು ಕಂಪೆನಿಯ ಷೇರು ಇದ್ದಂತೆಯೇ ಸರಿ. ಹೂಡಿಕೆದಾರರು ಸಹಾ ಯೂನಿಟ್‌ಗಳನ್ನು ಕೊಳ್ಳುತ್ತಾ ಮಾರುತ್ತಾ ಇರಬಹುದು. ಈ ತತ್ವದ ಆಧಾರದ ಮೇಲೆ ಸರ್ಕಾರಿ ವಲಯದ ಕೃಪಾಶ್ರಯದಲ್ಲಿ ಹುಟ್ಟಿಕೊಂಡು ಬೆಳೆದಿದ್ದು ಯೂನಿಟ್‌ ಟ್ರಸ್ಟ್‌ ಆಫ್‌ ಇಂಡಿಯಾ.

ಈ ಸಂಸ್ಥೆಯ ದಶಕಗಳ ಪರ್ಯಂತ ವ್ಯವಹಾರ, ಅದರ ಯಶಸ್ಸಿನ ಅನುಭವದ ಮೇಲೆ ಖಾಸಗಿ ಮ್ಯೂಚುವಲ್‌ ಫಂಡ್‌ಗಳೂ ಕಾರ್ಯಾರಂಭ ಮಾಡಿದವು. ತೆರಿಗೆ ಬೀಳುವುದನ್ನು ಕಡಿಮೆ ಮಾಡಿಕೊಳ್ಳಲು ಇಂಥ ನಿಧಿಗಳಲ್ಲಿ ಹಣ ತೊಡಗಿಸಬಹುದು. ಅಂಥವರಿಗೆ ತೆರಿಗೆ ವಿನಾಯ್ತಿ ಸೌಲಭ್ಯಗಳಿರುತ್ತದೆ ಎಂಬ ವ್ಯವಸ್ಥೆ ಆದಾಗ ಇವುಗಳಿಗೆ ಹುರುಪು ಬಂದಿತು. ಯೂನಿಟ್‌ ಟ್ರಸ್ಟ್‌ ಆಫ್‌ ಇಂಡಿಯಾ (ಯುಟಿಐ) ಹಲವು ನಿಧಿಗಳನ್ನು ಸ್ಥಾಪಿಸಿದೆ. ಇತ್ತೀಚಿನ ಯುಸ್‌ ೬೪ ಅಂಥ ಒಂದು ನಿಧಿ. ಹಲವು ಬ್ಯಾಂಕುಗಳು, ಖಾಸಗಿ ಕಂಪೆನಿಗಳು, ವಿದೇಶಿ ಸಹಯೋಗ ಸಹಾ ಹೊಂದಿರುವ ಹಣಕಾಸು ಸಂಸ್ಥೆಗಳು ತಂತಮ್ಮ ಮ್ಯೂಚುವಲ್‌ ಫಂಡ್‌ಗಳನ್ನು ಹೊಂದಿವೆ. ಷೇರು ವಹಿವಾಟು ದುಸ್ತರವಾದಂತೆಲ್ಲ ಇವುಗಳ ಮಹತ್ವ ಹೆಚ್ಚಿದೆ.

ಇತ್ತೀಚೆಗೆ ಠೇವಣಿ ಮೇಲಿನ ಬಡ್ಡಿ ದರಗಳು ಇಳಿದ ಮೇಲೆ ಈ ನಿಧಿಗಳಲ್ಲಿ ಹಣ ತೊಡಗಿಸುವುದಲ್ಲಿ ಆಕರ್ಷಣೆ ಹೆಚ್ಚಿದೆ. ಬ್ಯಾಂಕ್‌ನಲ್ಲಿಟ್ಟರೆ ಬರುವುದಕ್ಕಿಂತ ಹೆಚ್ಚು ಪ್ರತಿಫಲ ಬಂದರೆ ಸಾಕೆಂದು ನಿಧಿಯಲ್ಲಿ ಹಣ ತೊಡಗಿಸುವವರು ಬಯಸುತ್ತಿದ್ದಾರೆ. ಹಲವಾರು ಪ್ರಸಂಗಗಳಲ್ಲಿ ಅವರ ಆಪೇಕ್ಷೆ ಫಲಿಸುತ್ತಿದೆ. ಕಳೆದ ಐದು ವರ್ಷಗಳಲ್ಲಿ ಮ್ಯೂಚುವಲ್‌ ಫಂಡ್‌ ಉದ್ಯಮ ಶೇ. ೨೦ರ ದರದಲ್ಲಿ ವೃದ್ಧಿಸಿದೆ. ಈ ವರ್ಷದ ಮಾರ್ಚ್ ೩೧ರವರೆಗಿನ ಪರಿಸ್ಥಿತಿ ಅನ್ವಯ ನಿಧಿಗಳವರು ೨೦೪೦ ಕೋಟಿ ಡಾಲರ್‌ಗೆ ಸಮವಾದ ೧೦೨೦೦ ಕೋಟಿ ರೂಪಾಯಿಯಷ್ಟು ಹೂಡಿಕೆಗಳನ್ನು ನಿಭಾಯಿಸುತ್ತಿದ್ದಾರೆ.

ಈ ಮೊತ್ತದಲ್ಲಿ ಅರ್ಧದಷ್‌ಉ ವಾಸ್ತವವಾಗಿ ಯುಟಿಐ ವಹಿವಾಟಿಗೆ ಸೇರಿದೆ. ವಾಸ್ತವವಾಗಿ ಶೇ. ೭೫-೮೦ರಷ್ಟು ವಹಿವಾಟು ಇದರದೇ ಆಗಿತ್ತು. ಆದರೆ ಅದರ ಪ್ರಖ್ಯಾತ ಯುಎಸ್‌ ೬೪ ನಿಧಿಯಿಂದ ಜನ ಕೆಲ ಕಾರಣಗಳಿಂದಾಗಿ ಹಣ ವಾಪಸ್‌ ತೆಗೆದಿದ್ದರಿಂದಾಗಿ ಶೇ. ೫೦ರ ಮಟ್ಟಕ್ಕೆ ಇಳಿದಂತಾಯಿತು.

ಯುಟಿಐ ನಂತರದ ಸ್ಥಾನದಲ್ಲಿರುವುವು ಖಾಸಗಿ ನಿಧಿಗಳೇ. ಪ್ರುಡೆನ್ಶಿಯಲ್‌ ಐಸಿಐಸಿಐ ಎಎಂಸಿ ಎಂಬುದೇ ಅತಿದೊಡ್ಡ ಖಾಸಗಿ ನಿಧಿ ಕಂಪೆನಿ. ಇದು ೭೪೦೦ ಕೋಟಿ ರೂಪಾಯಿ ಹಣ ನಿಭಾಯಿಸುತ್ತಿದೆ. ನಂತರದ ಸ್ಥಾನದಲ್ಲಿ ಎಚ್‌ಡಿಎಫ್‌ಸಿ ಎಎಂಸಿ ವಾಸ್ತವವಾಗಿ ೯೧.೮ ಕೋಟಿ ರೂಪಾಯಿ ನಿಭಾಯಿಸುತ್ತಿದೆ.

ಮ್ಯೂಚುವಲ್‌ ಫಂಡ್ ವಹಿವಾಟಿಗೆ ಏಪ್ರಿಲ್‌ ೧ ರಿಂದ ಸ್ವಲ್ಪ ಹಿನ್ನಡೆಯುಂಟಾಗಿದೆ. ಡಿವಿಡೆಂಡ್‌ ಮೇಲೆ ಕೇಂದ್ರ ಬಜೆಟ್‌ ಅನ್ವಯ ತೆರಿಗೆ ಬೀಳತೊಡಗಿದೆ. ಮೊದಲು ಡಿವಿಡೆಂಡ್‌ ಗಳಿಸುವ ಕಂಪೆನಿಗಳು ಶೇಕಡಾ ೧೦ ತೆರಿಗೆ ತೆರಬೇಕಿತ್ತು. ಈಗ ಶೇಕಡಾ ೩೫ ಬೀಳುತ್ತದೆ.

ವಾಸ್ತವವಾಗಿ ಷೇರುಗಳು ಮೌಲ್ಯವೃದ್ಧಿ ಕಾಣುವುದೇ ಹೆಚ್ಚು ಮುಖಬೆಲೆಯ ಹಲವು ಪಟ್ಟು; ಕೆಲವು ಷೇರುಗಳ ವಿಷಯದಲ್ಲಿ ನೂರಾರು ಸಾವಿರಾರುಪಟ್ಟು ಮೌಲ್ಯವೃದ್ಧಿ ಆಗಿರುತ್ತದೆ. ಹಾಗೆ ಆದ ಮೇಲೂ ಷೇರು ಬೆಲೆ ಏರಿಳಿಯುತ್ತಾ ಇರುತ್ತದೆ. ಅದಕ್ಕೆ ಲೆಕ್ಕ ಹಾಕಿದರೆ ಮುಖಬೆಲೆಯ ಶೇಕಡಾವಾರು ಆಧಾರದ ಮೇಲೆ ಬರುವ ಡಿವಿಡೆಂಡ್‌ ಪಾತ್ರ ಕಡಿಮೆಯೇ, ಆದರೆ ಮ್ಯೂಚುವಲ್‌ ಫಂಡ್‌ಗಳ ಆದಾಯವನ್ನು ಲೆಕ್ಕ ಹಾಕುವಾಗ ಡಿವಿಡೆಂಡ್‌ ಮುಖ್ಯವಾಗಿ ಗಣನೆಗೆ ಬರುತ್ತದೆ. ಈ ಬಾಬಿನ ಆದಾಯದಲ್ಲಿ ಶೇಕಡಾ ೩೫ ಕರಗಿಹೋದರೆ ಎನ್‌ಎವಿ ಮೌಲ್ಯದ ಬಾಬಿನಲ್ಲಿ ಖರ್ಚು ವೆಚ್ಚಕ್ಕೆ ಕಂಪೆನಿಯು ಹಣ ಪಡೆಯಬೇಕಾಗಬಹುದು.

ಆ ದೃಷ್ಟಿಯಿಂದ ಬಜೆಟ್‌ನಲ್ಲಿ ಕೈಗೊಂಡ ಕ್ರಮವು ಉಳಿತಾಯ ಪ್ರವೃತ್ತಿಗೆ ವಿರೋಧಿಯಾಗಿಯೇ ಪರಿಣಮಿಸುತ್ತದೆ. ೦೫.೦೬.೨೦೦೨.